ಅಮ್ಮನ ಮುಂಗೈ ಮೇಲೆ ಗಾಯವಿತ್ತು..

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. 

ಸಾಮಾಜಿಕ ವಿಷಯಗಳ ಬಗ್ಗೆ ಆಳ ನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..

ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ.. 

ಅಮ್ಮನ ಬಲ ಮುಂಗೈ ಮೇಲೆ ಒಂದು ಹಳೆಯ ಗಾಯದ ಗುರುತಿತ್ತು. ನನಗೆ ಜ್ಞಾಪಕ ಇರುವಂತೆ ನಾನು ಹೈಸ್ಕೂಲ್‌ ಮೆಟ್ಟಿಲು ಹತ್ತುವವರೆಗೂ ಅದು ಕಾಣುತ್ತಿತ್ತು. ಅದನ್ನು ನೋಡಿದಾಗಲೆಲ್ಲಾ ನನ್ನ ಮತ್ತು ಅಮ್ಮನ ಮುಖದ ಮೇಲೊಂದು ನಗು ಮೂಡುತ್ತಿತ್ತು.

ಆಯಾ ದಿನದ ಹಿನ್ನೆಲೆ, ಪ್ರಸಂಗಕ್ಕೆ ತಕ್ಕಂತೆ ಅಮ್ಮ ನನ್ನ ಹಣೆಗೊಂದು ಮುತ್ತು ಕೊಡುವುದು ಅಥವಾ ನೋಡು ನಿನಗೋಸ್ಕರ ಆಗಿದ್ದು ಈ ಗಾಯ ಎಂದು ತಲೆಗೆ ಮೊಟಕುವುದು ಆಗುತ್ತಿತ್ತು.  ಆಗ ನನಗೆ ಪ್ರಾಯಶಃ ಆರೇಳು ವರ್ಷವಿರಬಹುದು (೧೯೭೧-೭೨). ಬೆಂಗಳೂರಿನಲ್ಲಿ ನವರಂಗ್‌ ಥಿಯೇಟರ್‌ ಹತ್ತಿರವಿರುವ ಶನಿ ದೇವರ ದೇವಸ್ಥಾನದ ಪಕ್ಕದ ರಸ್ತೆಯಲ್ಲಿ ಇಳಿದು ಬರುವ ಒಂದು ರಸ್ತೆಯಲ್ಲಿ ರಾಜಾಜಿನಗರದಲ್ಲಿ ನಮ್ಮ ವಾಸ.

ಒಂದು ದಿನ ಅಮ್ಮನೊಡನೆ ಹತ್ತಿರದ ಅಂಗಡಿಗೆ ಒಂದಷ್ಟು ದಿನಸಿ ತರಲು ಹೋಗಿದ್ದೆ. ಆಗಿನ ಕಾಲಕ್ಕೇ ಮಲಯಾಳಿಗಳ ದೊಡ್ಡ ಅಂಗಡಿ. ಒಂದು ಕಡೆಯಲ್ಲಿ ದೊಡ್ಡದಾಗಿ ಗಾಜಿನ ಶೋಕೇಸ್‌ ಇತ್ತು. ಅಲ್ಲಿನ ಸುತ್ತಮುತ್ತಲಿನ ಜನರೆಲ್ಲಾ ಅಲ್ಲಿಗೇ (ಪಡಿತರ ಅಂಗಡಿಯಲ್ಲಿ ಸಿಗದ) ವಿವಿಧ ದಿನಸಿಗಳೇ ಮೊದಲಾದವುಗಳನ್ನು ತರಲು ಹೋಗುತ್ತಿದ್ದುದು. 

ಅಮ್ಮ ಅಂಗಡಿಯೊಳಗೆ ಹೋದಳು. ನಾನು ಅಂಗಡಿಯ ಹೊರಗೆ ಕಟ್ಟೆಯ ಮೇಲೆ ನಿಂತಿದ್ದೆ. ಕೈಗೆ ಏನೋ ಕೊಟ್ಟಿದ್ದಳೆಂದು ಕಾಣುತ್ತದೆ ಅದನ್ನು ನಿಧಾನವಾಗಿ ತಿನ್ನುತ್ತಿದ್ದೆ. ಇದ್ದಕ್ಕಿದ್ದ ಹಾಗೆ ಏನೋ ಗಲಾಟೆಯಾಯಿತು. (ಈಗ ಸರಿಯಾಗಿ ನೆನಪಿಲ್ಲ. ಕನ್ನಡ ಕನ್ನಡ ಎಂದೇನೋ ಕೂಗಿದ್ದರೆಂದು ಕಾಣುತ್ತದೆ). ಒಂದಷ್ಟು ಜನ ಧಡಬಡ ಬಂದು ಕಲ್ಲು ಹೊಡೆಯ ತೊಡಗಿದರು. ಆಗಲೇ ಅಂಗಡಿಯೊಳಗಿನಿಂದ ಯಾರೋ ಚುರುಕಾಗಿ ಅಂಗಡಿಯ ಶಟರ್‌ ಎಳೆದು ಬಿಟ್ಟರು. ಅಂಗಡಿಯ ಹೊರಗಡೆ ಇಟ್ಟಿದ್ದ ಸೋಡಾ ಬಾಟಲಿಗಳು ಪುಡಿಯಾದವು. ಅಂಗಡಿಗಳ ಮುಂದೆ ನಿಲ್ಲಿಸಿದ್ದ ಸೈಕಲ್‌ಗಳು ನೆಲಕ್ಕೆ ಬಿದ್ದಿತು. ಅಂಗಡಿಯ ಬೋರ್ಡ್‌ ಮತ್ತು ಶಟರ್‌ ಮೇಲೆ ಕಲ್ಲುಗಳು ಪಟಪಟ ಬಿದ್ದವು.

ಏನೇನೋ ಘೋಷಣೆ ಕೂಗುತ್ತಾ ಗುಂಪು ಮುಂದೆ ಹೋಗುವುದರೊಳಗೆ ಲೈಟ್‌  ಕಂಬಗಳ ಬಲ್ಬ್‌ ಒಡೆಯಿತು. ಯಾವುದೋ ಅಂಗಡಿಯೊಳಗೆ ನಿಂತಿದ್ದ ಒಬ್ಬನಿಗೆ ಕಲ್ಲು ಬಿದ್ದು ರಕ್ತ ಸೋರುತ್ತಿತ್ತು. ಒಂದಷ್ಟು ಜನ ಓಡಿ ಹೋದರು.  ನನಗೆ ಗಾಬರಿ ಆಗಲಿಲ್ಲ ಎಂದು ಹೇಳುವುದಿಲ್ಲ. ಆದರೆ ಅಲ್ಲೇನಾಯಿತು ಎಂದು ತಿಳಿಯುವುದರೊಳಗೆ ಅಂಗಡಿಯ ಶಟರ್‌ ಸ್ವಲ್ಪ ತೆರೆದದ್ದೂ ಒಂದು ಕೈ ನನ್ನ ಧಡಕ್‌ ಅಂತ ಒಳಗೆಳೆದುಕೊಂಡದ್ದು ಮತ್ತು ಶಟರ್‌ ಮತ್ತೆ ಫಟ್‌ ಅಂತ ಮುಚ್ಚಿದ್ದು, ಒಳಗೆ ನಸುಕತ್ತಲಲ್ಲಿ ಏನಾಗುತ್ತಿದೆ ಎಂದು ಅರ್ಥವಾಗುವುದರೊಳಗೆ ಅಮ್ಮ ತನ್ನ ಸೀರೆ ಸೆರಗಿನಿಂದ ನನ್ನ ಮುಖವೊರೆಸಿ ಭಯ ಆಯ್ತಾ ಅಂತ ಕೇಳಿದ್ದು ಎಲ್ಲಾ ಆಯ್ತು.

ಅಮ್ಮನ ಕೈ ನಡುಗುತ್ತಿತ್ತು. ಕಣ್ಣಲ್ಲಿ ಸ್ವಲ್ಪ ನೀರಾಡಿತ್ತು. ಅಲ್ಲಿಯವರೆಗೂ ಅಷ್ಟೇನೂ ಭಯ ಎಂಬುದಾಗಿರದಿದ್ದರೂ ಏನೋ ತೊಂದರೆಯಾಗಿದೆ ಎಂದು ಅರ್ಥವಾಗುತ್ತಿತ್ತು. ನಾನೂ ನಡಗುತ್ತಿದ್ದೆನೇನೋ. ಒಂದಷ್ಟು ಹೊತ್ತು ಆದ ಮೇಲೆ ಹೊರಗಡೆ ಏನೂ ಗಲಾಟೆಯಿಲ್ಲ ಎಂದು ಖಾತರಿ ಮಾಡಿಕೊಂಡು ಶಟರ್‌ ತೆಗೆದು ಜನರನ್ನು ಹೊರಗೆ ಬಿಟ್ಟರು. ನಾವೂ ಸಾಮಾನು ತೆಗೆದುಕೊಂಡು ಮನೆಗೆ ಬಂದೆವು.

ನಾನು ಮಾಮೂಲಿಯಾಗಿ ನನ್ನ ಗೋಲಿಗಳನ್ನು ತೆಗೆದುಕೊಂಡು ಆಡಲು ಹೊರಗೆ ಹೋಗುವ ತವಕದಲ್ಲಿದ್ದೆ. ಅಮ್ಮನ ಕೈಗೆ ಗಾಯವಾಗಿರುವುದು ಗೊತ್ತಾಗಿದ್ದು ನನ್ನ ಅಕ್ಕಂದಿರು ಗುರುತಿಸಿದ ಮೇಲೆ. ದೊಡ್ಡಕ್ಕಂದಿರು ಅಮ್ಮನ ಕೈಗೆ ಅರಿಶಿಣ ಪುಡಿ ಹಚ್ಚಿ ಬಟ್ಟೆ ಕಟ್ಟಿದ್ದರು. ಹೇಗೆ ಆಯ್ತು ಅಂತ ಸ್ವಲ್ಪ ನಗು, ಸ್ವಲ್ಪ ಆತಂಕ, ಒಂದು ತರಹದ ಸಮಾಧಾನ ಹೀಗೆ ಏನೇನೋ ಭಾವನೆಗಳೊಂದಿಗೆ ಅಮ್ಮ ಪ್ರಕರಣ ವಿವರಿಸಿದಳು. ಹೊರಗೆ ಗಲಾಟೆ ಆಗುತ್ತಿದ್ದಂತೆ, ಅಂಗಡಿಯವ ಶಟರ್‌ ಎಳೆಸಿಸಿದ. ಅದೇ ಕ್ಷಣ ಅಮ್ಮನಿಗೆ ನಾನು ಹೊರಗಿರುವುದು ನೆನಪಿಗೆ ಬಂದು ಶಟರ್‌ ಎಳೆಯಬಾರದೆಂದೂ, ಎಳೆಯುವುದೇ ಆದರೆ ನನ್ನ ಒಳಗೆ ಕರೆದುಕೊಳ್ಳಬೇಕೆಂದು ಕೂಗಿದಳಂತೆ.

ಅಷ್ಟೇ ಅಲ್ಲ ಓಡಿ ಹೋಗಿ ಶಟರ್‌ಗೆ ಕೈ ಅಡ್ಡ ಹಾಕಿದ್ದಳಂತೆ. ಅಷ್ಟರೊಳಗೆ ಶಟರ್‌ ದಡಭಡ ಇಳಿದಾಗಿತ್ತು. ಅಮ್ಮನ ಕೈ ಬಳೆಗಳು ಒಡೆದು ತರಚಿದ ಗಾಯಗಳು ಸ್ವಲ್ಪ ದೊಡ್ಡದಾಗಿಯೇ ಆಗಿತ್ತು. ಒಳಗೆ ಕತ್ತಲು. ನಾನು ಹೊರಗಿದ್ದೇನೆ. ಕಲ್ಲುಗಳು ಬೀಳುತ್ತಿವೆ. ಅಮ್ಮನ ತಳಮಳ ಅಂಗಡಿಯೊಳಗಿದ್ದವರಿಗೆ ಅರ್ಥವಾಗುತ್ತಿದ್ದರೂ ಯಾರೂ ಏನೂ ಮಾಡುವಂತಿಲ್ಲ. ಅಮ್ಮನಿಗೆ ಏನೇನೋ ಕಲ್ಪನೆಗಳು. ನನಗೆ ಕಲ್ಲು ಬಿದ್ದರೆ, ನಾನು ಹೆದರಿ ಎಲ್ಲಿಯಾದರೂ ಓಡಿ ಹೋದರೆ… ಅಮ್ಮ ಸುಮ್ಮನಿರಲಿಲ್ಲ. ಗಲಾಟೆ ಮಾಡುತ್ತಲೇ ಇದ್ದಳಂತೆ. ಆಗ ಅಂಗಡಿಯ ಒಬ್ಬ ಹುಡುಗ ಧೈರ್ಯ ಮಾಡಿ ಶಟರ್‌ ಸ್ವಲ್ಪ ತೆಗೆದು, (ಅದು ಹೇಗೆ ನಾನು ಎಂದು ಗುರುತಿಸಿದನೋ ಗೊತ್ತಿಲ್ಲ) ನನ್ನನ್ನ ಒಳಗೆಳೆದುಕೊಂಡಿದ್ದನಂತೆ! 

ಹೊರಗೇನಾಯಿತು ಎಂದು ನಾನು ಹೀರೋ ರೀತಿ ವರ್ಣಿಸಿದೆ. ನಿನ್ನ ತಲೆ ಎಂದು ಒಬ್ಬ ಅಕ್ಕ ಮೊಟಕಿದ್ದಳು. ಎಲ್ಲವೂ ಸುಖಾಂತವಾಗಿದ್ದ ಕಾರಣ ನಾವೆಲ್ಲಾ ಸಂತೋಷದಿಂದ ನಕ್ಕಿದ್ದೆವು. ಇಡೀ ಪ್ರಸಂಗದ ರಿಪ್ಲೇ ಅಪ್ಪ ಸಂಜೆ ಬಂದ ಮೇಲೂ ನಡೆದಿತ್ತು. 

ನನ್ನೊಡನೆ ಮಕ್ಕಳ ಹಕ್ಕುಗಳು ಅಥವಾ ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯಿದೆ ಕುರಿತು ತರಬೇತಿಯಲ್ಲಿ ಭಾಗವಹಿಸಿದವರಿಗೆ ಈ ಕತೆ ಗೊತ್ತಿರುತ್ತಿದೆ. ಈ ಪ್ರಕರಣ ತೆಗೆದುಕೊಂಡು ಮಕ್ಕಳ ಆರೈಕೆ, ಪೋಷಣೆ ಕುರಿತು ಚರ್ಚೆ ಆರಂಭಿಸಿರುತ್ತೇನೆ.

ಇಂತಹ ಒಂದೋ ಎರಡೋ ಪ್ರಕರಣಗಳ ಅನುಭವ ಬೇರೆ ಬೇರೆ ರೀತಿಯಲ್ಲಿ ಅನೇಕರಿಗಾಗಿರುತ್ತದೆ. ಮಕ್ಕಳ ರಕ್ಷಣೆ, ಆರೈಕೆಗೆ ಎಲ್ಲ ಪ್ರಯತ್ನಗಳನ್ನು ಅಮ್ಮ ಅಪ್ಪಂದಿರು ತಮ್ಮ ಇತಿಮಿತಿ, ಸಾಧ್ಯತೆಯಲ್ಲಿ ಮಾಡುತ್ತಲೇ ಇರುತ್ತಾರೆ. ತಮ್ಮ ಮಕ್ಕಳ ಆರೋಗ್ಯ, ಆಹಾರ, ರಕ್ಷಣೆಗೆ ತಮ್ಮೆಲ್ಲಾ ಕಷ್ಟಗಳನ್ನು ಬಿಟ್ಟು ಮುಂದಾಗುತ್ತಾರೆ.

ಒಮ್ಮೊಮ್ಮೆ ತಮ್ಮ ದೇಹ, ಜೀವಕ್ಕೆ ಅಪಾಯವಾಗುವುದನ್ನೂ ಅವರು ಲೆಕ್ಕಿಸರು. ನೀರಿಗೆ ಬಿದ್ದ ಮಗುವನ್ನು ರಕ್ಷಿಸಲು ಹೋಗುವವರು, ವಿದ್ಯುತ್‌ ಅಪಘಾತವಾದಾಗ ಮಗುವನ್ನು ಹಿಂದೆಳೆಯಲು ಧಾವಿಸುವವರು, ಮಕ್ಕಳಿಗಾಗಿ ಎಷ್ಟೇ ದೂರವಾದರೂ ಸರಿ ನಡೆಯುತ್ತಲೋ, ವಾಹನದಲ್ಲೋ ಹೋಗಿ ಔಷಧಿ ಆಹಾರ ತರುವವರು, ತಮ್ಮ ಬಡತನದಲ್ಲೂ ಮಕ್ಕಳಿಗಾಗಿ ಆಹಾರ ಒದಗಿಸಲು, ಶಿಕ್ಷಣದಲ್ಲಿ ತೊಡಗಿಸಲು ಪ್ರಯತ್ನಿಸುವವರು. ಒಂದೇ ಎರಡೇ. 

ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಕುರಿತು ನಡೆಯುವ ಮಾತುಕತೆಗಳಲ್ಲಿ ನಾನು ತೊಡಗಿಕೊಂಡಾಗಲೆಲ್ಲಾ ನನಗೆ ಅದು ಕಾಣುವುದು, ವಯಸ್ಕರಿಗೆ ಉದ್ಯೋಗ ನೀಡಿ ಅವರ ಆದಾಯಕ್ಕೆ ನೆರವಾಗುವುದು ಬಹಳ ಮುಖ್ಯವಾಗಿ ಅವರವರು ಕುಟುಂಬದಲ್ಲಿರುವ ಮಕ್ಕಳ ಆಹಾರ, ಔಷಧಿ, ಶಿಕ್ಷಣಕ್ಕೆ, ರಕ್ಷಣೆಗೆ ಗಮನ ಕೊಡಲು ಅನುವಾಗಲಿ ಎಂದೇ ಎಂದು.

ಕನಿಷ್ಠ ವೇತನ ಖಾತರಿ ಎಂದಾಗಲೂ ನನ್ನ ಗಮನಕ್ಕೆ ಬರುವುದು ಕುಟುಂಬದಲ್ಲಿನ ಮಕ್ಕಳು. ಯೋಜನಾ ಆಯೋಗದ ಒಂದು ದಾಖಲೆಯಲ್ಲಿ ಇದೇ ರೀತಿಯ ಮಾತುಗಳನ್ನು ಓದಿದ ನೆನಪು. ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ ೧೯೮೯ರ ಪರಿಚ್ಛೇದ ೧೮ರಲ್ಲಿ ʼತಮ್ಮ ಮಕ್ಕಳ ಲಾಲನೆ ಪಾಲನೆಯ ಪ್ರಾಥಮಿಕ ಜವಾಬ್ದಾರಿ ಪೋಷಕರದ್ದಾಗಿದ್ದು, ಸರ್ಕಾರ ಇದನ್ನು ಬೆಂಬಲಿಸಬೇಕು. ಪೋಷಕರು ತಮ್ಮ ಮಕ್ಕಳ ಆರೈಕೆ, ಬೆಳಗವಣಿಗೆಗೆ ಸೂಕ್ತವಾದ ಸಹಾಯವನ್ನು ಸರ್ಕಾರ ಮಾಡಿಕೊಡಬೇಕುʼ ಎಂದಿದೆ.

ಕುಟುಂಬಗಳಿಗೆ ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಬೇಕಾದ ವಸ್ತುಗಳನ್ನು ಕೊಳ್ಳಲು ಆಗುವಂತೆ ಉದ್ಯೋಗ ಮತ್ತು ಅದಕ್ಕೆ ತಕ್ಕುದಾದ ಕನಿಷ್ಠ ವೇತನ ಸಿಗಬೇಕು ಮತ್ತು ಕುಟುಂಬಗಳಿಗೆ ಬೇಕಾದ ವಸ್ತುಗಳನ್ನು ಕೊಳ್ಳಲು ಮಾರಾಟ ವ್ಯವಸ್ಥೆ ಮತ್ತು ಬೆಲೆ ನಿಯಂತ್ರಣವನ್ನು ಸರ್ಕಾರ ಮಾಡಬೇಕು.

ಸಾಮಾನ್ಯವಾಗಿ ನಾವು ಎಲ್ಲರಿಂದಲೂ ಕೇಳಿರುವ ಪದಪುಂಜ, ‘ಮಕ್ಕಳನ್ನು ನಾವು ಹೊಟ್ಟೆ ಬಟ್ಟೆ ಕಟ್ಟಿ ಸಾಕಿದ್ದೀವಿ’ ಅಂತ. ಖಂಡಿತಾ ಅದು ಬಹುತೇಕ‌ ಮಕ್ಕಳು ಮತ್ತು ಅಪ್ಪ ಅಮ್ಮಂದಿರ ಬದುಕಿನಲ್ಲಿ ನಿಜ. ಎಲ್ಲೇ ಏನೇ ತೊಂದರೆಯಾದರೂ ಅದು ಕುಟುಂಬಗಳ ಮೇಲೆ ಮಹಿಳೆಯರು ಮತ್ತು ಮಕ್ಕಳ ಮೇಲೆ ಆಗುತ್ತದೆ ಎಂಬುದು ಸಾಕಷ್ಟು ಕಾಲದಿಂದಲೂ ನಾವು ಹೇಳುತ್ತಿರುವ ಮಾತು.

ಇಂದಿನ ಕಾಲಘಟ್ಟದಲ್ಲಿ ಆಗಿ ಬಂದಿರುವ ಕೋವಿಡ್‌-೧೯ರ ಸಮಯದಲ್ಲಿ ವಲಸೆ ಕಾರ್ಮಿಕರನ್ನು ನಿಮಗೆ ನಾವು ಜವಾಬುದಾರರಲ್ಲ ಎನ್ನುವಂತೆ ನಾವು ಹೊರಗಟ್ಟುತ್ತಿದ್ದೇವೆ. ಆದರೆ ಅವರಿಗೆ ಸೂಕ್ತವಾದ ಸಾರಿಗೆ ವ್ಯವಸ್ಥೆಯನ್ನು ಸರಿಯಾದ ಸಮಯಕ್ಕೆ ಮಾಡಿಕೊಡಲಿಲ್ಲ.

ಲಕ್ಷಾಂತರ ಕುಟುಂಬಗಳು ಮಕ್ಕಳನ್ನೂ ಎತ್ತಿಕೊಂಡು, ನಡೆಸಿಕೊಂಡು, ಎಳೆದುಕೊಂಡು ನಡೆಯುವಂತೆ ಮಾಡಿದೆವು. ಅನೇಕರು ಇದೆಂತಹ ಕರುಳು  ಹಿಂಡುವ ಪರಿಸ್ಥಿತಿ ಎಂದು ಬೇಸರಿಸಿಕೊಂಡರು. ಸರ್ಕಾರದ ಕೊರಡು ಮನಸಿಗೆ ನ್ಯಾಯಾಲಯ ಬಂದು ಚಾಟಿ ಬೀಸಬೇಕಾಯಿತು. ಜನ ತಮ್ಮ ಪುಟ್ಟ ಪುಟ್ಟ ಮಕ್ಕಳನ್ನು ರಸ್ತೆಯಲ್ಲಿ ಹೀಗೆ ಕರೆದೊಯ್ಯಬೇಕೆ, ತಕ್ಷಣ ಅವರ ಆಹಾರ, ಆರೋಗ್ಯ, ಪ್ರಯಾಣದ ವ್ಯವಸ್ಥೆ ಮಾಡಿ ಕಾಳಜಿ ವಹಿಸಿ ಎಂದು. 

ಅಮ್ಮನ ಮುಂಗೈ ಮೇಲಿನ ಗಾಯವನ್ನು ಈಗ ನಾನು ನೆನಪಿಸಿಕೊಳ್ಳುತ್ತಿದ್ದೇನೆ. ಜೊತೆಗೊಂದು ಪ್ರಶ್ನೆಯೂ ಮೂಡುತ್ತದೆ. ಎಲ್ಲ ಅಮ್ಮ ಅಪ್ಪಂದಿರಿಗೆ ಇರುವ ಸ್ವಾಭಾವಿಕ ಕಾಳಜಿಯಂತೆ, ಅಪಾಯಗಳೆದುರಾಗುತ್ತಿದ್ದಂತೆ ಸರ್ಕಾರದ ವ್ಯವಸ್ಥೆಯೇಕೆ ತಾನೇ ತಾನಾಗಿ ಮುಂದಾಗಿ ವಹಿಸುವುದಿಲ್ಲ ಎಂದು!

‍ಲೇಖಕರು ವಾಸುದೇವ ಶರ್ಮ

August 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Anjali Ramanna

    ಅಮ್ಮ ಮಕ್ಕಳನ್ನು ಹೆತ್ತಿರುತ್ತಾಳೆ, ಸಲಹಿರುತ್ತಾಳೆ. ಸರ್ಕಾರವೂ ಚುನಾವಣೆ ಸಂದರ್ಭದಲ್ಲಿ ಇಂತಹ ಹೆರಿಗೆ ನೋವು ಅನುಭವಿಸಿದರೆ ಮುಂದಾಗಿ ಕ್ರಮ ತೆಗೆದುಕೊಳ್ಳುವಷ್ಟು ಅಮ್ಮನಾಗಲು ಸಾಧ್ಯವೇನೋ! ಆದರೆ ಏನು ಮಾಡೋದು ಬೇಡುವವರಿಗೆ ಮುಂಗೈ ಇರೋಲ್ಲ ಅದಕ್ಕೇ ಗಾಯವೂ…
    ಅಂಜಲಿ ರಾಮಣ್ಣ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: