ಬರವಣಿಗೆಯೇ ನನ್ನ ಜೀವನ ಎಂದು ನಾನೇನೋ ನಿರ್ಧರಿಸಿಯಾಗಿತ್ತು..

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ..

ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು. 

‘ಸಂಯುಕ್ತ ಕರ್ನಾಟಕ’ ‘ವಾರ್ತಾ ಬಾರತಿ’ಯಲ್ಲಿ ಅಂಕಣ ಬರೆದ ರಂಗನಾಥರಾವ್ ಅವರು ‘ಅವಧಿ’ಯ ಆಹ್ವಾನವನ್ನು ಮನ್ನಿಸಿ ತಮ್ಮ ಮಾಧ್ಯಮ ಲೋಕದ ಪಯಣದ ಬಗ್ಗೆ ಬರೆಯಲಿದ್ದಾರೆ. 

ಪಿತೃವಾಕ್ಯ ಪರಿಪಾಲಕನಾದ ಶ್ರೀ ರಾಮಚಂದ್ರನ ವನವಾಸದಂತೆಯೇ ಆಯಿತು ನನ್ನ ಗತಿ. ಪಿತೃವಾಕ್ಯ ಪರಿಪಾಲನೆಗೆ ಬದ್ಧನಾದ ನಾನು ತಂದೆಯವರು ಹೇಳಿದಂಥ ನೀತಿ ನಿಯಮ ಶಿಸ್ತುಗಳ ಪಾಲನೆಗೆ ಅವಕಾಶವಿರುವಂಥ ಉದ್ಯೋಗವನ್ನು ಅರಸುತ್ತಾ ಬಳಲಿದೆ. ಹಲವಾರು ಕಡೆಗಳಲ್ಲಿ ಕೆಲಸಕ್ಕೆ ಸೇರಿದೆ. ಆದರೆ ಅಲ್ಲೆಲ್ಲೂ ತಂದೆಯವರು ಹೇಳಿದಂಥ, ನಾನು ಬಯಸಿದಂಥ ಭ್ರಷ್ಟಮುಕ್ತ ವಾತಾವರಣ ಕಾಣಿಸಲಿಲ್ಲ. ಒಂದೊಂದು ಕಡೆಯೂ ಮೂರು ನಾಲ್ಕು ತಿಂಗಳು ಇದ್ದು ರಾಜೀನಾಮೆ ಗೀಚುತ್ತಿದ್ದೆ.

ಕೊನೆಗೆ ಮೇಷ್ಟರಾಗುವ ಮನಸ್ಸಾಯಿತು. ಅಲ್ಲಿ ಭ್ರಷ್ಟಮುಕ್ತ ವಾತಾವರಣವಿರುತ್ತೆ, ಪಿತೃವಾಕ್ಯ ಪರಿಪಾಲನೆಯೂ ಆಯಿತು, ನನ್ನ ಓದುಬರಹಗಳ ಹಸಿವಿಗೂ ಒಂದಷ್ಟು ಆಹಾರ ದೊರಕೀತು ಎನ್ನುವ ಆಲೋಚನೆಯಿಂದ. ಆದರೆ ನನಗೆ ಶಿಕ್ಷಕ ಹುದ್ದೆಗೆ ಬೇಕಾದ ಟಿಸಿಎಚ್ ನಂಥ ಅರ್ಹತೆಗಳಿರಲಿಲ್ಲ. ಹೀಗೆ ಗೊತ್ತು ಗುರಿಯಿಲ್ಲದ ಸ್ಥಿತಿಯಲ್ಲಿ ನನ್ನ ನೆರವಿಗೆ ಬಂದದ್ದು ನನ್ನ ಬರವಣಿಗೆ. ಬರವಣಿಗೆಯೆಂದಾಗ ನನಗೆ ಮೊದಲು ನೆನಪಿಗೆ ಬರುವವರು ಹೊಸಕೋಟೆ ಹೈಸ್ಕೂಲಿನ ಕನ್ನಡ ಪಂಡಿತರು ಶ್ರೀಕನಕ ಸಭಾಪತಿಗಳು.

ಕನಕ ಸಭಾಪತಿಗಳು ಹರಿಹರ, ರಾಘವಾಂಕ ಮೊದಲಾದ ಕವಿಗಳ ಪದ್ಯಗಳನ್ನು ರಾಗವಾಗಿ, ಸಾಭಿನಯವಾಗಿ ಹಾಡುತ್ತ ನಮಗೆ ಕನ್ನಡ ಕಲಿಸುತ್ತಿದ್ದರು. ಸರಿಸುಮಾರ ಆರಡಿ ಎತ್ತರದ ಸಪೂರ ದೇಹಿ, ಸಾದುಗಪ್ಪಿನ ವರ್ಣ. ಶುಭ್ರ ದಂತಾವಳಿ, ಖಾದಿ ಧೋತರ, ಜುಬ್ಬ, ವೇಸ್ಟ್ ಕೋಟು. ಪಾಠ ಮಾಡಲಿಕ್ಕೆ ಶುರು ಮಾಡಿದರೆ ಕನ್ನಡ ಮೈಮೇಲೆ ಬಂದಂತೆ ಆವೇಶ ಭರಿತರಾಗಿ ಪಾಠ ಮಾಡುತ್ತಿದ್ದರು.

ವಿದ್ಯಾರ್ಥಿಗಳ ಬಗ್ಗೆ ಅತೀವ ಮಮಕಾರ. ಕುವೆಂಪು ‘ನೇಗಿಲಯೋಗಿ’ ಗೊತ್ತೇನೋ, ‘ಸಂಧ್ಯಾರಾಗ’ ಓದಿದೀಯ? ಎಂದೆಲ್ಲ ನಮ್ಮ ಕನ್ನಡ ಪ್ರೀತಿಯನ್ನು ಕೆಣಕುತ್ತಾ, ಮಮಕಾರ ಹೆಚ್ಚಾದಾಗ ‘ಮಂಕ, ಮಡೆಯಾ, ಮುಟ್ಠಾಳ. ನಿನ್ನ ಮುಂಡಾಮೋಚ್ತು’ ಎಂದು ಪ್ರೀತಿಯನ್ನು ಧಾರಾಳವಾಗಿ ಪ್ರದರ್ಶಿಸುತ್ತಾ ಕನ್ನಡ ಕಲಿಸುತ್ತಿದ್ದರು.

ಗೊರೂರರ ‘ನಮ್ಮ ಊರಿನ ರಸಿಕರು’ ಕಲಿಸುತ್ತಲೇ ನಮ್ಮಲ್ಲಿ ಕನ್ನಡದ ಅಭಿರುಚಿಯನ್ನು ಬೆಳೆಸಿದರು. ಮಾಸ್ತಿ, ಕುವೆಂಪು, ಅನಕೃ, ತರಾಸು ಇವರುಗಳ ಬಗ್ಗೆ ಹೇಳಿ ನಮ್ಮಲ್ಲಿ ಕನ್ನಡ ಕಥೆ ಕಾದಂಬರಿಗಳನ್ನು ಓದುವ ಆಸಕ್ತಿ ಬಿತ್ತಿದವರು ಕನಕ ಸಭಾಪತಿಗಳು.

ಎಸ್ ಎಸ್ ಎಲ್ ಸಿಗೆ ಬರುವ ವೇಳಗೆ ಕನ್ನಡ ಕಥೆ ಕಾದಂಬರಿಗಳಲ್ಲಿ ಗಾಢ ಅನುರಕ್ತಿ ಬೆಳೆಸಿಕೊಳಡಿದ್ದ ನಾನು, ಎಸ್ ಎಸ್ ಎಲ್ ಸಿಯ ನಂತರ ಮುಂದಿನ ದಾರಿ ಕಾಣದ ದಿನಗಳಲ್ಲಿ ಬರವಣಿಗೆಯಲ್ಲಿ ಒಂದು ಕೈ ನೋಡೋಣ ಎಂದು ಕಥೆಗಳನ್ನು ಬರೆಯುವ ಪ್ರಯತ್ನ ಮಾಡಿದೆ.

ಬರವಣಿಗೆಯೇ ನನ್ನ ಬದುಕಿನ ಬಟ್ಟೆಯಾದೀತು ಎಂಬ ಕಲ್ಪನೆಯೂ ಆಗ ನನ್ನಲ್ಲಿರಲಿಲ್ಲ. ಆದರೆ ತಂದೆಯವರ ಆದರ್ಶ, ಶಿಸ್ತುಗಳ ಪಾಲನೆಗೆ ಬದ್ಧನಾಗಿದ್ದ ನನಗೆ ಅದೇ ಸರಿಯಾದ ಬದುಕಿನ ಮಾರ್ಗವೆಂದು ಮುಂದೊಂದು ದಿನ ಗಟ್ಟಿಯಾದ್ದು ಮಾತ್ರ ಆಶ್ಚರ್ಯಕರ ಬೆಳವಣಿಗೆಯೊಂದರ ಮೂಲಕ.

ಎಸ್ ಎಸ್ ಎಲ್ ಸಿ ನಂತರ ಕಾಲೇಜಿಗೆ ಕಳುಹಿಸುವ ಶಕ್ತಿ ಇಲ್ಲದ ನನ್ನ ತಂದೆಯವರು ಮಿನಿಸ್ಟೀರಿಯರಲ್ ಟ್ರೈನಿಂಗ್ ಮತ್ತು ಟೈಪಿಂಗ್‍ಗೆ ಕಳುಹಿಸಿ “ನಿನ್ನ ಜೀವನ ಮಾರ್ಗ ಕಂಡುಕೋ” ಎಂದಿದ್ದರು. ನನ್ನೀ ಅರ್ಹತೆಗೆ ಗುಮಾಸ್ತೆ/ಟೈಪಿಸ್ಟ್ ಕೆಲಸವಷ್ಟೇ ಹಣೆಯಲ್ಲಿ ಬರದಂತಾಗಿತ್ತು.

ಸಬ್ ರಿಜಿಸ್ಟ್ರಾರ್ ಆಫೀಸು, ಸ್ಟೇಟ್ ಅಕೌಂಟ್ಸ್ ಡಿಪಾರ್ಟ್‍ಮೆಂಟು, ಎನ್ ಸಿ ಸಿ ಆಫೀಸು, ಐಟಿಐ, ಎಚ್ ಎ ಎಲ್ ಹೀಗೆ ಹಲವಾರು ಕಡೆ ಕೆಲಸ ಸಿಕ್ಕಿತಾದರೂ ಅಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳುವುದು ನನ್ನಿಂದ ಸಾಧ್ಯವಾಗಲಿಲ್ಲ. ಹೀಗೆ ಹೋದಲ್ಲೆಲ್ಲ ಕೆಲಸದ ವೇಳೆಯಲ್ಲಿ ಕಾದಂಬರಿಗಳನ್ನು ಓದುತ್ತಾ ಬಾಸುಗಳ ಕೈಯ್ಯಲ್ಲಿ ಛೀಮಾರಿ ಹಾಕಿಸಿಕೊಳ್ಳುತ್ತಿದ್ದೆ.

ಕೊನೆಗೊಂದು ದಿನ ಎಚ್ ಎ ಎಲ್ ಹುದ್ದೆಗೆ ರಾಜೀನಾಮೆ ನೀಡಿ ನಿರುದ್ಯೋಗಿಯಾದೆ. ಈ ಸಮಯದಲ್ಲಿ ಬರವಣಿಗೆ ನನ್ನ ಕೈ ಹಿಡಿಯಿತು. ನಮ್ಮ ಕುಟುಂಬದ ಸ್ನೇಹಿತರೊಬ್ಬರ ಮನೆಯಲ್ಲಿ ನಡೆದ ಮದುವೆಯಲ್ಲಿ ನಾನು ಕಂಡದ್ದನ್ನು ಆಧರಿಸಿ ಒಂದು ಲೇಖನ ಬರೆದೆ.

ವ್ಯಂಗ್ಯ, ಗೇಲಿಗಳು ಇದ್ದ ಲಘು ಬರಹ. ಇದನ್ನು ‘ವಿನೋದ’ ಪತ್ರಿಕೆಗೆ ಕಳಹಿಸಿದೆ. ಕಳುಹಿಸಿ ಮರೆತಿದ್ದೆ. ಒಂದೆರಡು ತಿಂಗಳ ನಂತರ ಪೋಸ್ಟಿನಲ್ಲಿ ‘ವಿನೋದ.’ ಪರಮಾಶ್ಚರ್ಯ ಆ ಸಂಚಿಕೆಯಲ್ಲಿ ನನ್ನ ಲೇಖನ ಪ್ರಕಟವಾಗಿತ್ತು. ನನ್ನ ಉತ್ಸಾಹ ಇಮ್ಮಡಿಸಿತ್ತು.

ಇದೇ ಮಾದರಿಯ ಲಘು ಹಾಸ್ಯದ ಧಾಟಿಯ ಲೇಖನಗಳನ್ನು ಬರೆದು ‘ವಿನೋದ’ ಮತ್ತು ‘ನಗುವ ನಂದ’ ಪತ್ರಿಕೆಗಳಿಗೆ ಕಳುಹಿಸಿದೆ. ‘ವಿನೋದ’ದಲ್ಲಿ ಒಂದೆರಡು ಲೇಖನಗಳು ಪ್ರಕಟವಾದದ್ದೇ ಸಂಪಾದಕ ದೇಶಹಳ್ಳಿ ಜಿ ನಾರಾಯಣ ಅವರನ್ನು ಭೇಟಿಯಾದೆ.

ನಾರಾಯಣ ಅವರು ಏನು, ಎತ್ತ ಎಂದು ನನ್ನ ಬಗ್ಗೆ ವಿಚಾರಿಸಿದರು. ಪ್ರವರ ಹೇಳಿಕೊಂಡೆ. ಎರಡು ರೂಪಾಯಿ ಕೈಯ್ಯಲ್ಲಿ ಇಟ್ಟು, ನಿನ್ನ ಲೇಖನಕ್ಕೆ ಸಂಭಾವನೆ ಎಂದರು. ಈ ಸಂಭಾವನೆಯನ್ನು ಮುಂದೆ ಐದು ರೂಪಾಯಿಗೆ ಏರಿಸಿದರು. ಸಂಭಾವನೆಯೂ ಬಂದು ಬರವಣಿಗೆಯೇ ನನ್ನ ಜೀವನ ಮಾರ್ಗ ಎಂಬುದನ್ನು ಖಚಿತಮಾಡಿಕೊಂಡೆ.

‘ವಿನೋದ’ಕ್ಕೆ ನಿಯತವಾಗಿ ಲೇಖನಗಳನ್ನು ಕಳುಹಿಸುತ್ತಿದ್ದೆ. ಎರಡು ಮೂರು ತಿಂಗಳುಗಳ ನಂತರ ಚಾಮರಾಜಪೇಟೆಯಲ್ಲಿನ ‘ವಿನೋದ’ ಕಚೇರಿಗೆ ತೆರಳಿ ದೇಶಹಳ್ಳಿ ನಾರಾಯಣರನ್ನು ಕಂಡು ಹತ್ತಿಪ್ಪತ್ತು ರೂಪಾಯಿ ಸಂಭಾವನೆ ಇಸ್ಕೊಂಡು ಬರುತ್ತಿದ್ದೆ.

ಆ ದಿನಗಳಲ್ಲಿ ಹತ್ತಿಪ್ಪತ್ತು ರೂಪಾಯಿ ಎಂದರೆ ಎರಡು ವಾರಗಳ ಹೊಟ್ಟೆ ಪಾಡಿಗೆ ಆಗುತ್ತಿತ್ತು. ನನ್ನ ನಿರುದ್ಯೋಗದ ದಿನಗಳಲ್ಲಿ ನನ್ನನ್ನು ಬೆಳೆಸಿದ ‘ವಿನೋದ’ ಸಂಪಾದಕ ದೇಶಹಳ್ಳಿ ಜಿ ನಾರಾಯಣ ಮತ್ತು ‘ನಗುವನಂದ’ ಸಂಪಾದಕ ಬಿ ರಂಗನಾಥರಾವ್ ಇಂದಿಗೂ ನನಗೆ ಪ್ರಾತಃಸ್ಮರಣೀಯರು.

ಬರವಣಿಗೆಯೇ ನನ್ನ ಜೀವನ ಎಂದು ನಾನೇನೋ ನಿರ್ಧರಿಸಿಯಾಗಿತ್ತು. ಆದರೆ ದಾರಿ ಕಾಣಿಸುತ್ತಿರಲಿಲ್ಲ. ‘ಬಂಗಾರದ ಕನಸು’ ‘ನಂಬಿ ಕೆಟ್ಟವರು’ ಕಾದಂಬರಿಗಳ ಹಸ್ತ ಪ್ರತಿಗಳು ಪ್ರಕಾಶಕರ ಕೈ ಸೇರಿ, ಪ್ರಕಟಿಸುವ ವಚನವಿತ್ತು ತಿಂಗಳುಗಳಾದರೂ ಅವು ಬೆಳಕು ಕಂಡಿರಲಿಲ್ಲ. ಪ್ರಕಟಣೆಗೆ ಪೂರ್ವಭಾವಿಯಾಗಿ ಸಂಭಾವನೆ ಕೇಳುವಷ್ಟು ದೊಡ್ಡ ಸಾಹಿತಿ ನಾನಾಗಿರಲಿಲ್ಲ.

ಹತಾಶೆ ಇಣುಕು ಹಾಕುತ್ತಿತ್ತು. ಹೀಗಿರುವಾಗ ನನ್ನ ಮೂರನೆಯ ಕಾದಂಬರಿ ‘ಸುಮಂಗಲಿ’ ‘ನಗುವ ನಂದ’ದಲ್ಲಿ ಧಾರಾವಾಹಿಯಾಗಿ ಪ್ರಕಟಣೆಗೆ ಸ್ವೀಕೃತವಾಗಿ ಐವತ್ತು ರೂಪಾಯಿ ಮುಂಗಡ ಸಂಭಾವನೆಯೂ ದೊರೆತದ್ದು ನನ್ನ ಭರವಸೆಯನ್ನ ಮತ್ತೆ ಚಿಗುರಿಸಿತ್ತು. ಈ ಕಾಲಘಟ್ಟದಲ್ಲೇ ‘ಇಂದಿರಾತನಯ’ ಎಂಬ ಒಂದು ಶಕ್ತಿ ನನ್ನ ಬದುಕನ್ನು ಪ್ರವೇಶಿಸಿದ್ದು.

‘ಇಂದಿರಾತನಯ’ ಕಾವ್ಯನಾಮ. ಅವರ ನಿಜನಾಮ ವಿ ಆರ್ ಶ್ಯಾಮ್ ಎಂದು. ಅವರು ಮಾಗಡಿ ತಾಲೂಕಿನ ವಾಗಟ ಗ್ರಾಮದವರು. ವಾಗಟದ ಕೂಗಳತೆಯಲ್ಲೇ ಕನ್ನಡ ಸಣ್ಣ ಕಥೆಯ ತೌರುಮನೆ ಮಾಸ್ತಿ ಗ್ರಾಮ.

ಹದಿಹರೆಯದಲ್ಲೇ ಶಾಕ್ತ್ಯ ಪಂಥದ ಹುಚ್ಚು ಅಂಟಿಸಿಕೊಂಡು ಶಕ್ತಿ ದೇವತೆಗಳ ಆರಾಧನೆ ಮತ್ತು ಶಾಕ್ತ್ಯ ಪಂಥದ ಗಾಳಿಗಂಧ ಇರುವಲ್ಲೆಲ್ಲ ತಿರುಗಾಡಿ ಶಾಕ್ತ್ಯ ಪಂಥದ ಮೌಲ್ಯಾನ್ವೇಷಣೆ ನಡೆಸಿ ಕೊನೆಗೆ ಪತ್ರಿಕಾ ವ್ಯಸಾಯಕ್ಕೆ ಇಳಿದ ‘ಇಂದಿರಾತನಯ’ರು ನಂತರ ಪ್ರಸಿದ್ಧ ಕಾದಂಬರಿಕಾರರಾದರು.

ಸತ್ಯಾನ್ವೇಷಣೆಯ ಪರ್ಯಟನದ ನಂತರ ‘ಇಂದಿರಾತನಯ’ರು ಪತ್ರಿಕಾ ವ್ಯವಸಾಯವನ್ನು ಜೀವನಮಾರ್ಗವಾಗಿ ಆರಿಸಿಕೊಂಡರು. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ‘ಇಂದಿರಾತನಯ’ರು ‘ನಗುವ ನಂದ’ ಪತ್ರಿಕೆಗೆ ಅಘೋಷಿತ ಸಾಹಿತ್ಯ ಸಲಹೆಗಾರರಾಗಿದ್ದರು.

‘ಇಂದಿರಾತನಯ’ ನನ್ನ ‘ಸುಮಂಗಲಿ’ ಕಾದಂಬರಿಯ ಹಸ್ತಪ್ರತಿಯನ್ನು ಓದಿ, ‘ಯಾರು ಈ ಹುಡುಗ, ನನ್ನನು ಕಾಣಲು ಹೇಳುತ್ತೀರ’ ಎಂದು ಸಂಪಾದಕ ರಂಗನಾಥರಾಯರಲ್ಲಿ ಹೇಳಿದರಂತೆ. ಇದಾದ ಒಂದು ವಾರದಲ್ಲಿ ನಾನು ‘ನಗುವ ನಂದ’ ಕಚೇರಿಗೆ ‘ಸುಮಂಗಲಿಯ’ ಬಗ್ಗೆ ತಿಳಿಯಲು ಹೋದೆ.

ಕಾದಂಬರಿಯ ಪ್ರಕಟಣೆ ಮುಂದಿನ ತಿಂಗಳಿನಿಂದ ಶುರುವಾಗಲಿದೆಯೆಂದು ಸಂಪಾದಕರು ತಿಳಿಸಿದಾಗ ನನ್ನ ಸಂತೋಷ ಮುಗಿಲು ಮುಟ್ಟಿತ್ತು.

‘ನಿಮಗೆ ಇಂದಿರಾತನಯರು ಗೊತ್ತೆ?’ ಸಂಪಾದಕರ ಪ್ರಶ್ನೆ.

‘ಗೊತ್ತು. ಅವರ ಪರಿಚಯವಿಲ್ಲ, ಅವರ ಕಾದಂಬರಿ ಓದಿದ್ದೇನೆ.’

-ಆ ವೇಳೆಗೆ ನಾನು ‘ಇಂದಿರಾತನಯ’ರ ‘ನಕ್ಷತ್ರ ಗಾನ’ ಕಾದಂಬರಿ ಓದಿದ್ದೆ.

‘ಅವರನ್ನು ಭೇಟಿಯಾಗಿ. ಸಂಜೆ ಐದರ ಸುಮಾರಿಗೆ ಬಂದರೆ ಇಲ್ಲೇ ಸಿಗುತ್ತಾರೆ.’

ಹೀಗೆ ‘ಇಂದಿರಾತನಯ’ರ ಪರಿಚಯವಾಯಿತು. ನನ್ನ ಪೂರ್ವಾಪರ ಕೇಳಿದರು. ‘ಸುಮಂಗಲಿ’ ಕಾದಂಬರಿ ಚೆನ್ನಾಗಿ ಬಂದಿದೆ. ಪಾತ್ರಪೋಷಣೆ ಇನ್ನಷ್ಟು ಗಟ್ಟಿಯಾಗಬಹುದಿತ್ತು ಎಂದು ಕೆಲವು ಪಾತ್ರಗಳನ್ನು, ಪ್ರಸಂಗಗಳನ್ನು ಎತ್ತಿ ಹೇಳಿದರು. ‘ಇಂದಿರಾತನಯ’ರು ಆಗಲೇ ‘ಮಂತ್ರಶಕ್ತಿ’ ‘ಶಕ್ತಿಪೂಜೆ’ ‘ಸೇಡಿನ ಕಿಡಿ’ ‘ಪೋಜಾ ತಂತ್ರ’ ಕಾದಂಬರಿಗಳಿಂದ ಸುಪ್ರಸಿದ್ಧರಾಗಿದ್ದರು. ಅವರು ಈ ಅಣುಗನ ಕೃತಿ ಬಗ್ಗೆ ಮಾತಾಡಿದ್ದು ಕೇಳಿ ನನಗೆ ಆಕಾಶ ಒಂದೇ ಗೇಣು ಎನ್ನುವಂತಾಗಿತ್ತು.

“ಎಲ್ಲಿ ಕೆಲಸ ಮಾಡುತ್ತಿದ್ದೀರಿ?” ಎಂಬುದು ‘ಇಂದಿರಾತನಯ’ರ ಮುಂದಿನ ಪ್ರಶ್ನೆಯಾಗಿತ್ತು. ಸದ್ಯ ನಿರುದ್ಯೋಗಿ, ಬರವಣಿಗೆಯನ್ನೇ ವೃತ್ತಿಯನ್ನಾಗಿಸಿಕೊಳ್ಳುವ ಇರಾದೆಯಿದೆ ಎಂಬ ನನ್ನ ಬಯಕೆಯನ್ನು ಕೇಳಿ ‘ಕಷ್ಟ… ಕಷ್ಟ…’ ಎಂದು ಲೊಚಗುಟ್ಟಿದರು. ಪತ್ರಿಕಾಲಯದಲ್ಲಿ ಉದ್ಯೋಗ ದೊರೆತರೆ ಉದರಂಭರಣವೂ ಆದೀತು, ನನ್ನ ಬರವಣಿಗೆಗೂ ಸಹಾಯವಾದೀತು ಎನ್ನುವ ಆಸೆಯನ್ನು ಅವರ ಮುಂದೆ ತೋಡಿಕೊಂಡೆ.

‘ಪತ್ರಿಕೆಯ ಸಂಪಾದಕರಾಗಲು ಕನ್ನಡದ ಜೊತೆಗೆ ಇಂಗ್ಲಿಷ್ ಜ್ಞಾನವೂ ಅಗತ್ಯ. ನಿಮಗೆ ಇಂಗ್ಲಿಷ್ ಗೊತ್ತೆ?’ ಎಂದರು.

‘ಗೊತ್ತು’ ಎಂದು ಬಿಟ್ಟೆ ಕೆಟ್ಟ ಧೈರ್ಯದಿಂದ. ಹೈಸ್ಕೂಲಿನಲ್ಲಿ ಇಂಗ್ಲಿಷ್ ಮೇಷ್ಟ್ರು ಕ್ಷೇತ್ರಪಾಲಯ್ಯನವರು ಪಾಠ ಹೇಳಿದ ವರ್ಡ್ಸ್ ವರ್ತ್, ಶೆಲ್ಲಿ, ಚಾರ್ಲ್ಸ್ ಡಿಕನ್ಸ್ ಅವರುಗಳ ಕಿರುಪರಿಚಯವಾಗಿತ್ತು. ಕ್ಷೇತ್ರಪಾಲಯ್ಯನವರು ವರ್ಡ್ಸ್ ವರ್ತ್ ನ ‘ಸಾಲಿಟರಿ ರೀಪರ್’ ಕವಿತೆ ಓದಿದ ಪರಿ, ಡಿಕನ್ಸ್ ನ ‘ಆಲಿವರ್ ಟ್ವಿಸ್ಟ್’ ಕಥೆ ಹೇಳಿದ ಪರಿ ನನ್ನನ್ನು ಮಂತ್ರಮುಗ್ಧನನ್ನಾಗಿಸಿತ್ತು.

“ನಾಳೆಯಿಂದ ಹಿಂದೂ ಪತ್ರಿಕೆಯನ್ನ ತಪ್ಪದೆ ಓದಿ. ಅದರಲ್ಲಿ ನಿಮಗೆ ಇಷ್ಟವಾದ ಸುದ್ದಿಯನ್ನು ಕನ್ನಡದಲ್ಲಿ ಬರೆಯುವ ಪ್ರಯತ್ನ ಮಾಡಿ” ಎಂದು ‘ಇಂದಿರಾತನಯ’ರು ಪತ್ರಿಕಾ ವೃತ್ತಿಯ ಓಂನಾಮ ಹೇಳಿಕೊಟ್ಟರು. ಒಂದು ವಾರ ಕಾಲ ವ್ರತನಿಷ್ಠನಾಗಿ ಪಕ್ಕದಲ್ಲಿ ಭಾರದ್ವಾಜರ ನಿಘಂಟು ಇಟ್ಟುಕೊಂಡು ಭಾಷಾಂತರದಲ್ಲಿ ತೊಡಗಿಕೊಂಡೆ.

ಅನುವಾದ ಮಾಡಬಲ್ಲೆ ಎನ್ನುವ ಆತ್ಮವಿಶ್ವಾಸ ಅಲ್ಪಸ್ವಲ್ಪ ಕುದುರಿತು. ನೇರ ‘ಇಂದಿರಾತನಯ’ರ ಮನೆಗೆ ಧಾವಿಸಿದೆ ನನ್ನ ಅನುವಾದಿತ ಸುದ್ದಿಗಳೊಂದಿಗೆ. ‘ಇಂದಿರಾತನಯ’ರು ಅದಾವುದನ್ನು ನೋಡಲಿಲ್ಲ, ಅವರ ಶ್ರೀಮತಿಯವರು ತಿಂಡಿ ಕಾಫಿಗಳಿಂದ ಉಪಚರಿಸಿದರು.

ನಂತರ ‘ಇಂದಿರಾತನಯ’ರು ಅಂದಿನ ಹಿಂದೂ ಪತ್ರಿಕೆ ಕೊಟ್ಟು ಅಂದಿನ ಅಗ್ರವಾರ್ತೆಯನ್ನು ಅನುವಾದಿಸಲು ಹೇಳಿದರು. ಸುಮಾರು ಒಂದು ಗಂಟೆಕಾಲ ತಿಣುಕಾಡಿ ಅನುವಾದ ಮುಗಿಸಿ ಅವರ ಕೈಯ್ಯಲ್ಲಿಟ್ಟೆ. ನಿಧಾನವಾಗಿ ಓದಿ ಒಂದೊಂದು ಪದದ ಅರ್ಥವನ್ನೂ ಕೇಳಿ, “ಅನುವಾದವೆಂದರೆ ಅಕ್ಷರಶಃ ಮಕ್ಕಿ ಕಾ ಮಕ್ಕಿಯಲ್ಲ, ಇಂಗ್ಲಿಷ್ ಕಾಪಿಯನ್ನು ಓದಿ ಅರ್ಥಮಾಡಿಕೊಂಡು ನಿಮ್ಮ ಭಾಷೆಯಲ್ಲಿ ಬರೆಯಬೇಕು.

ಆದರೆ ಮೂಲದಿಂದ ಸ್ವಲ್ಪವೂ ಪಲ್ಲಟವಾಗಿರಬಾರದು. ಈಗ ಪ್ರಯತ್ನಿಸಿ ಎಂದು ಇನ್ನೊಮ್ಮೆ ಬರೆಸಿದರು. ಮತ್ತೆ ಬರೆದುದನ್ನು ನೋಡಿ “ಈಗ ಹೋಗಿ. ಮುಂದಿನವಾರ ಬನ್ನಿ” ಎಂದು ನನ್ನನ್ನು ಸಾಗ ಹಾಕಿದರು. ಅವರ ಪರೀಕ್ಷೆಯಲ್ಲಿ ಪಾಸಾದೆನೋ ಇಲ್ಲವೋ ಎಂಬ ಚಿಂತೆಯಲ್ಲೇ ಮನೆ ಸೇರಿಕೊಂಡೆ. ಅಂದಿನಿಂದಲೇ ಹಿಂದೂ ಜೊತೆಗೆ ಷೇಕ್ಸ್ ಪಿಯರ್, ಒ ಹೆನ್ರಿ, ಗ್ರಹಾಂಬೆಲ್ ಮೊದಲಾದವರ ಪ್ರವೇಶವಾಯಿತು.

ಮುಂದಿನ ಸಲ ಭೇಟಿಯಾದಾಗ ಸಂಯುಕ್ತ ಕರ್ನಾಟಕ ಪತ್ರಿಕೆಯ ಸ್ಥಾನಿಕ ಸಂಪಾದಕರನ್ನು ಭೇಟಿ ಮಾಡಿ ಒಂದು ಅರ್ಜಿ ಕೊಡಲು ತಿಳಿಸಿದರು. ನಾನು ಅರ್ಜಿಯೊಂದಿಗೆ ನನ್ನ ‘ವಿನೋದ’ ‘ನಗುವ ನಂದ’ ಬರಹಗಳ ಕಟಿಂಗ್ಸ್ ನೊಂದಿಗೆ ಸಂಪಾದಕರನ್ನು ಭೇಟಿಯಾದೆ.

“ಈಗ ಯಾವುದೂ ಹುದ್ದೆ ಖಾಲಿ ಇಲ್ಲ. ಖಾಲಿ ಆದಾಗ ನೋಡೋಣ” ಎಂದರು ಸಂಪಾದಕರು. ಇದಾದ ಹದಿನೈದು ದಿನಕ್ಕೆ ಸಂದರ್ಶನಕ್ಕೆ ಕರೆ ಬಂತು. ಸಂದರ್ಶನಕ್ಕೆ ಇಬ್ಬರನ್ನು ಕರೆದಿದ್ದರು. ಇನ್ನೊಬ್ಬರು ಬೆಳ್ಳಗಿನ ನನಗಿಂತ ಸ್ಫುರದ್ರೂಪಿ ಯುವಕ.

ಪಿಟಿಐ ವಾರ್ತಾ ಸಂಸ್ಥೆಯ ಮೂರು ನಾಲ್ಕು ಇಂಗ್ಲಿಷ್ ಸುದ್ದಿಗಳನ್ನು ಕೊಟ್ಟು ಭಾಷಾಂತರಿಸಲು ಹೇಳಿದರು. ಕೊಟ್ಟ ಸಮಯ ಕೇವಲ ಅರ್ಧಗಂಟೆ. ನಂತರ ಸ್ವಲ್ಪ ಹೊತ್ತು ಕೂಡಿಸಿ ಮೌಖಿಕ ಸಂದರ್ಶನ ನಡೆಸಿದರು.

ಈ ಮಧ್ಯೆ ಇನ್ನೊಬ್ಬ ಅಭ್ಯರ್ಥಿ ತಮ್ಮನ್ನು ಜಿ ಎಸ್ ಸದಾಶಿವ ಎಂದು ಪರಿಚಯಿಸಿಕೊಂಡರು.

“ಸಾಕ್ಷಿ ಮೊದಲ ಸಂಚಿಕೆಯಲ್ಲಿ ಪ್ರಕಟವಾಗಿರುವ ಕಥೆಯ ಜಿ ಎಸ್ ಸದಾಶಿವ ನೀವೇನಾ?”

ಹೌದು ಎಂದು ಅವರು ತಲೆಯಾಡಿಸಿದರು. ಅಂದು ಹೀಗೆ ಪರಿಚಿತರಾದ ಸದಾಶಿವ ಮುಂದೆ ನನ್ನ ಆಪ್ತಮಿತ್ರರಾಗಿ ಕೊನೆಯವರೆಗೂ ಕಷ್ಟ-ಸುಖಗಳಲ್ಲಿ ಭಾಗಿಯಾದರು.

ಸಂದರ್ಶನದಲ್ಲಿ ಸಂಪಾದಕ ರಂಗನಾಥ ದಿವಾಕರ ಮತ್ತು ಸ್ಥಾನಿಕ ಸಂಪಾದಕ ಆರ್ ಕೆ ಜೋಶಿ ಇದ್ದರು. ಜೋಶಿಯವರು ರಾಜ್ಯ ರಾಷ್ಟ್ರಗಳ ರಾಜಕೀಯ ವಿದ್ಯಮಾನಗಳ ಬಗ್ಗೆ ಒಂದೆರಡು ಪ್ರಶ್ನೆಗಳನ್ನು ಕೇಳಿದರು. ದಿವಾಕರರು ನನ್ನ ಬರವಣಿಗೆಯ ಕಟಿಂಗ್ಸ್ ನೋಡಿ “ಇನ್ನೂ ಏನೆಲ್ಲ ಬರೆದಿದ್ದೀರಿ” ಎಂದು ಕೇಳಿದರು.

“ಕಥೆ, ರೇಡಿಯೋ ನಾಟಕ.”

ಆಕಾಶವಾಣಿಯಲ್ಲಿ ನನ್ನದೊಂದು ಕಿರು ನಾಟಕ ಪ್ರಸಾರವಾಗಿತ್ತು.

“ಆಕಾಶವಾಣಿಯಲ್ಲಿ ನಿಮ್ಮ ನಾಟಕಕ್ಕೆ ಎಷ್ಟು ಸಂಭಾವನೆ ಕೊಟ್ಟರು?” ದಿವಾಕರರ ಪ್ರಶ್ನೆ.

“ಹತ್ತು ರೂಪಾಯಿ”

“ಯೂ ಆರ್ ಲಕ್ಕೀ… ನನಗೆ ಅವರು ಐದೇ ರೂಪಾಯಿ ಕೊಡ್ತಾರೆ. ನೀವಿನ್ನು ಹೋಗಬಹುದು” ಎಂದು ಕೇಂದ್ರದ ಮಾಜಿ ವಾರ್ತಾ ಸಚಿವರು ಅಪ್ಪಣೆ ಕೊಟ್ಟರು.

August 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ನೂತನ ದೋಶೆಟ್ಟಿ

    ಸರ್, ನಮಸ್ಕಾರ.
    ಕಷ್ಟದ ದಿನಗಳಾದರೂ ಎಂಥ ಮೊಸರು ಕಡೆದು ಬೆಣ್ಣೆ ರೂಪಿಸಿದ ಅನುಭವ.
    ನೀವು ಕಸ್ತೂರಿಯಲ್ಲಿದ್ದಾಗ ನನ್ನ ಮೂರು ಕತೆಗಳನ್ನು ಪ್ರಕಟಿಸಿದ್ದಿರಿ. ನಿಮ್ಮ ಒಳ್ಳೆಯ ಮಾತುಗಳು ಸಾರ್ಥಕ ಎನಿಸುವಂತೆ ಮಾಡಿದ್ದವು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: