ಆಹಾ, ನನಗೂ ಪತ್ರ! ನನಗೊಂದು ಪತ್ರ!

‘ಬಾಲ ಒಂದಿಲ್ಲ ಅಷ್ಟೇ..’ ಅನ್ನೋದನ್ನೇ ತಮ್ಮ ವಿಸಿಟಿಂಗ್ ಕಾರ್ಡ್ ನಂತೆ ನಮ್ಮ ಮುಂದೆ ಹಿಡಿದವರು ಹೇಮಾ ಖುರ್ಸಾಪೂರ. 

ಪ್ರತಿಷ್ಠಿತ ಮಕ್ಕಳ ಕೇಂದ್ರಿತ ಪುಸ್ತಕಗಳ ರೂವಾರಿ ‘ಪ್ರಥಮ್ ಬುಕ್ಸ್’ ನ ಕನ್ನಡ ಸಂಪಾದಕರಾಗಿರುವ ಹೇಮಾ ತನ್ನ ಊರು ಶಿಗ್ಗಾವಿಯಲ್ಲಿ ಗೆಳೆಯರ ದಂಡು ಕಟ್ಟಿಕೊಂಡು ಅಲ್ಲಿಯ ಶಾಲೆಯ ಅಭಿವೃದ್ಧಿಗೂ ಮನ ಕೊಟ್ಟಿದ್ದಾರೆ. 

‘ಉಳಿದವರೆಲ್ಲಾ ಶಾಲೆ ಅಭಿವೃದ್ಧಿ ಮಾಡ್ತಾರೆ, ನಾನು ಮಕ್ಕಳ ಜೊತೆ ಬಾಲ ಕಟ್ಟಿಕೊಂಡು ಕುಣೀತೀನಿ’ ಅಂತ ತಮ್ಮ ಇಂದಿನ ಐಕಾನಿಕ್ ಸ್ಮೈಲ್ ಕೊಡುತ್ತಾರೆ. 

ಹೇಮಾಗೆ ಪುಸ್ತಕ ಎಂದರೆ ಇನ್ನಿಲ್ಲದ ಹುಚ್ಚು. ತಾವು ಓದಿದ ಕೃತಿಗಳ ಪಾತ್ರಗಳು ಇವರನ್ನು ಇನ್ನಿಲ್ಲದಂತೆ ಕಾಡುತ್ತವೆ. ‘ನಿದ್ದೆಯಲ್ಲೂ..’ ಎಂದು ಮಾತು ಸೇರಿಸುತ್ತಾರೆ. ಇಂದಿನಿಂದ ಪ್ರತೀ ವಾರ ಹೇಮಾ ತಮ್ಮನ್ನು ಕಾಡಿದ ಪಾತ್ರಗಳನ್ನು ತಂದು ನಮ್ಮ ಎದುರು ನಿಲ್ಲಿಸಲಿದ್ದಾರೆ.

‘ವಿಮರ್ಶೆಯ ವಿರ್ಮರ್ಶೆ’ ಪುಸ್ತಕದ ‘ಕವಿಗಳು, ಸಹೃದಯರು ಇತ್ಯಾದಿ’ ಅಧ್ಯಾಯದಲ್ಲಿ ಕಡಿದಾಳು ಶಾಮಣ್ಣ ಅವರ ವ್ಯಕ್ತಿತ್ವ ಪರಿಚಯ ಮಾಡಿಕೊಡುತ್ತ ತೇಜಸ್ವಿ ಅವರು ಹೇಳುವುದು, “ಉದಾಹರಣೆಗೆ ಕೋಣಂದೂರು ಲಿಂಗಪ್ಪನವರ ಕ್ರಾಂತಿಕಾರಿ ಸಂಘದ ಆಸ್ಥಾನ ವಿಮರ್ಶಕರಾಗಿ ಇಂಥ ಸಾಹಿತ್ಯೇತರ ವ್ಯಕ್ತಿ ಇದ್ದರು, ಅವರು ಯಾವತ್ತೂ ಸಾಹಿತ್ಯ ರಚನೆಗಾಗಲೀ ಅಧಿಕೃತ ಸಾಹಿತ್ಯ ವಿಮರ್ಶೆಗಾಗಲಿ ಕೈ ಹಾಕಿದವರೇ ಅಲ್ಲ. ಪುಸ್ತಕಗಳನ್ನು ಅವರು ಪುರಸೊತ್ತು ಸಿಕ್ಕರೆ, ಮಾಡಲು ಬೇರೇನೂ ಕೆಲಸ ಹೊಳೆಯದಿದ್ದರೆ ಮಾತ್ರ ಹೊರತೆಗೆಯುತ್ತಿದ್ದರು. ಪುಸ್ತಕದಲ್ಲಿ ಪ್ರಿಂಟಾದ ಭಾಷೆಯನ್ನು ಕಂಡರೇ ನನಗಾಗುವುದಿಲ್ಲೆಂದು ಆಗಾಗ ಅವರು ಹೇಳಿದ್ದುಂಟು…” ಎಂದು.

ಒಂದರಿಂದ ಆರನೇ ತರಗತಿವರೆಗೆ ನನ್ನದು ಹೋಂ ಸ್ಕೂಲ್. ಅಧಿಕೃತವಾಗಿ ಶಾಲೆಗೆ ಹೋಗಿ ಪಠ್ಯ ಕಲಿಯುವುದು ಅಂತಾದಾಗ, ಕಲಿಯುವುದು ಅನ್ನುವದಕ್ಕಿಂತ ಬರೆಯುವುದು ಎಂದರೂ ಅಡ್ಡಿಯಿಲ್ಲ. ಓದವುದು ಹೇಗೋ ಮಾಡಿ ಮುಗಿಸುತ್ತಿದ್ದೆ. ಬರೆಯುವ ವಿಷಯ ಬಂದಾಗ ಥೇಟು ಕಡಿದಾಳು ಶಾಮಣ್ಣರಂತೆ ಪುಸ್ತಕದಲ್ಲಿ ಪ್ರಿಂಟಾದ ಅಕ್ಷರಗಳನ್ನು ಕಂಡರೇ ನನಗೆ ಆಗುತ್ತಿರಲಿಲ್ಲ.

ಬರೆಯುವುದರಿಂದ ತಪ್ಪಿಸಿಕೊಳ್ಳಲು ಕಾರಣ ಹುಡುಕುತ್ತಿದ್ದ ಸಮಯದಲ್ಲೇ ಅಣ್ಣ, ಚಿಕ್ಕಕ್ಕ ಕಲಿಯಲು ಹಾಸ್ಟೇಲ್ ಸೇರಿದರು. ತಂಗಿಯ ಕಾಟದಿಂದ ತಪ್ಪಿಸಿಕೊಂಡದ್ದಕ್ಕೊ ಏನೋ ಸಂಭ್ರಮದಿಂದ ಪತ್ರ ಬರೆಯುತ್ತಿದ್ದರು. ಅವರು ಮನೆಯವರೆಲ್ಲರಿಗೇ ಬರೆಯುತ್ತಿದ್ದರೂ ಕೊನೆಯಲ್ಲಿ ತಂಗಿಗೆ ಸಿಹಿಮುತ್ತುಗಳು ಎನ್ನುತ್ತ, ನಿನ್ನ ಪತ್ರಕ್ಕಾಗಿ ಎದುರು ನೋಡುತ್ತಿರುವ ಅಂತ ಬರೆದು ಮುಗಿಸಿರುತ್ತಿದ್ದರು. ಹಾಗಾಗಿ ಅದು ನನಗಾಗಿಯೇ ಬಂದ ಪತ್ರ!

ಎಲ್ಲರೂ ಓದಿ, ಅಣ್ಣ-ಅಕ್ಕನಿಗೆ ಪತ್ರ ಬರೆದು ಬಿಡು ಎಂದು ಫರ್ಮಾನು ಹೊರಡಿಸುತ್ತಿದ್ದರು. ಸಿಟ್ಟಿನಲ್ಲಿ ಕಾಗೆ ಕಾಲು, ಗುಬ್ಬಿ ಕಾಲಿನಂಥ ಅಕ್ಷರಗಳಲ್ಲಿ ಬರೆಯುವ ಶಾಸ್ತ್ರ ಮಾಡುತ್ತಿದ್ದೆ. ಅಡ್ರೆಸ್ಸಿನಲ್ಲಿದ್ದ ಮೋಡಿ ಲಿಪಿ ಅಂಚೆಯವರಿಗೆ ಹೇಗೆ ಅರ್ಥ ಆಗುತ್ತಿತ್ತು ಅನ್ನೋದು ಇವತ್ತಿಗೂ ನನಗೆ ಸೋಜಿಗ. ನಮ್ಮ ಮೂವರ ನಡುವಿನ ಭಾವಾನಾತ್ಮಕ ನಂಟು ಬೆಳದದ್ದೂ ಕೂಡ ಪತ್ರಗಳಿಂದಲೇ ಎನ್ನುವುದು ಬೇರೆ ವಿಷಯ.

ನಾನು ಪತ್ರವನ್ನು ಪ್ರೀತಿಯಿಂದ ಬರೆಯಲು ಶುರು ಮಾಡಿದ್ದು, ‘ವಿಲಿಯಂ ಷೇಕ್ಸಪೀಯರ್’ನ ‘ಕೊರಿಯೋಲೇನಸ್’ ನಾಟಕ ಓದಿದ ಮೇಲೆ. ನಾಟಕದಲ್ಲಿ ಬರುವ ಒಂದು ಪಾತ್ರ ‘ಮೆನೆನಿಯಸ್.’ ‘ಕೊರಿಯೋಲೇನಸ್’ನ ಸ್ನೇಹಿತ. ಮಾತಿನಲ್ಲಿ ಚತುರ, ತಮಾಷೆಗಾರ. ಎಂಥ ಕ್ಲಿಷ್ಟ ಸಂದರ್ಭಗಳನ್ನೂ ತನ್ನ ವಾಕ್ಚಾತುರ್ಯದಿಂದಲೇ ಪಾರಾಗುತ್ತಿದ್ದವ. ಯಾವುದೋ ಒಂದು ಪರಿಸ್ಥಿತಿಯಲ್ಲಿ ತೀರಾ ಕುಸಿದು ಹೋಗಿರುತ್ತಾನೆ.

ಆಗ ‘ಕೊರಿಯೋಲೇನಸ್’ನ ಹೆಂಡತಿ ‘ವರ್ಜಿಲಿಯಾ’ ಬಂದು ನಿಮಗೊಂದು ಪತ್ರ ಬಂದಿದೆ, ನಾ ಕಂಡೆ ಎನ್ನುತ್ತಾಳೆ. ಪತ್ರ ಏನು ವಿಷಯ ಹೊತ್ತು ಬಂದಿರಬಹುದು ಒಳ್ಳೆಯ ಸಂಗತಿ, ಕೆಟ್ಟ ಸುದ್ದಿ… ಊಹೂಂ ಏನೇನೂ ಯೋಚಿಸದೇ; ಆಹಾ, ನನಗೂ ಪತ್ರ! ನನಗೊಂದು ಪತ್ರ! ಹಾಗಾದರೆ ನನಗಿನ್ನೂ ಏಳು ವರ್ಷ ಆಯಸ್ಸು ವೃದ್ಧಿ. ಈ ರಾತ್ರಿ ನಮ್ಮ ಮನೆ ಗಿರ್ರನೆ ತಿರುಗಿ ಗಿರಗಿಟ್ಟೆಯಾಗಲಿ, ಬಿಡು… ಎಂದು ಸಂಭ್ರಮಿಸುತ್ತಾನೆ.

ಅರೆರೆ, ನನಗೆ ಪತ್ರ ಬಂದಾಗಲೂ ಹೀಗೆ ಅಲ್ಲವೇ ಅನಿಸುವುದು. ಹಾಗಿದ್ದ ಮೇಲೆ ನಾನು ಪತ್ರ ಬರೆದಾಗಲೂ ಆ ಕಡೆಯವರಿಗೂ ಹೀಗೇ! ಅಲ್ಲಿಂದ ಮುಂದೆ ಎಲ್ಲರಿಗೂ ರೀಮ್ ಲೆಕ್ಕದಲ್ಲಿ ಹಾಳೆ ಖರ್ಚು ಮಾಡಿ ಪತ್ರಗಳನ್ನು ಬರೆದಿದ್ದು ನಾನು. ಇವತ್ತಿಗೂ ಬಹುತೇಕರ ಬಳಿ ನನ್ನ ಪತ್ರಗಳಿವೆ.

ಈ ಪತ್ರಗಳ ಬಗ್ಗೆ ನನ್ನ ಮನದಲ್ಲಿ ಎರಡು ಬೇಸರದ ಸಂಗತಿಗಳಿವೆ. ಒಂದು ಅಣ್ಣನ ಸಹಪಾಠಿಯೊಬ್ಬರು ನನ್ನ ಇಬ್ಬರು ಅಕ್ಕಂದಿರಿಗೂ, ನನಗೂ ಇನ್ನೊಬ್ಬ ಅಕ್ಕ ಎನ್ನುವಷ್ಟು ಹತ್ತಿರ ಇದ್ದರು. ಅವರು ನಮ್ಮ ಮೂವರಿಗೂ ಬರೆದ ಅನೇಕ ಪತ್ರಗಳು ಈಗಲೂ ನನ್ನ ಹತ್ತಿರ ಇವೆ. ನಾನು ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದ ತಕ್ಷಣ ಅವರು ಪತ್ರ ಬರೆಯುವುದು ಸಡನ್ ಆಗಿ ನಿಂತು ಹೋಯಿತು. ಯಾಕೆ ಅಂತ ಗೊತ್ತಿಲ್ಲ.

ಇನ್ನೊಂದು, ಯಾವುದೋ ಅಂತರ್ ಕಾಲೇಜು ಸ್ಪರ್ಧೆಗಳಲ್ಲಿ ಪರಿಚಯವಾದ ಹುಡುಗನೊಬ್ಬನ ಪ್ರೇಮ ನಿವೇದನೆಯ ಪತ್ರ ಹದಿನೈದು ವರ್ಷದ ನಂತ್ರ ನನ್ನ ಕೈಗೆ ಸಿಕ್ಕಿದ್ದು. ಆ ಪತ್ರ ಬಂದಾಗ ನಾನು ಯಾವುದೋ ದೂರ ಪ್ರಯಾಣದಲ್ಲಿದ್ದೆ. ಬಂದ ಪತ್ರವನ್ನು ಓದಿ ಅಪ್ಪ ಯಾವುದೋ ಪುಸ್ತಕದಲ್ಲಿ ಇಟ್ಟು ಮರೆತಿದ್ದಾರೆ. ನನಗೆ ಕೇಳಲು ವಿಷಯವೇ ಗೊತ್ತಿಲ್ಲ. ಕಳೆದ ವರ್ಷ ಊರಲ್ಲಿ ಮನೆ ಶಿಫ್ಟ್ ಮಾಡಿ ಪುಸ್ತಕಗಳನ್ನು ಜೋಡಿಸುತ್ತಿದ್ದಾಗ ಕಂಡಿತು. ಅದರಲ್ಲಿದ್ದ ಹೆಸರು ನೋಡಿ ಯಾರಿರಬಹುದು ಅಂತ ನೆನಪಿಸಿಕೊಳ್ಳಲು ಪ್ರಯತ್ನಪಟ್ಟೆ, ನೆನಪಾಗಲೇ ಇಲ್ಲ.

ಇನ್ನೊಂದು ಮಜವಾದ ಪತ್ರದ ಕತೆ ಇದೆ. ನನಗೆ ಬಂದ ಇಂಥ ಪತ್ರವೊಂದು ಬೇರೆಯವರಿಗೆ ಬಂದಿರಲು ಸಾಧ್ಯವೇ ಇಲ್ಲ! ನನ್ನ ಕಿರಿಯ ಸ್ನೇಹಿತನೊಬ್ಬ ಅವನ ಫ್ಯಾಕ್ಟರಿ ಕೆಲಸ, ವ್ಯವಹಾರ ಮತ್ತೊಂದು ಅಂತ ತುಂಬಾ  ಬ್ಯುಸಿಯಾಗಿರುತ್ತಾನೆ. ಮಾವಿನ ಸೀಸನ್ ನಲ್ಲಿ ಅವನು ಮನೆಗೆ ಹಣ್ಣು ಒಯ್ಯುವಾಗ, ತನ್ನ ಅಷ್ಟೂ ಕೆಲಸಗಳ ನಡುವೆ ಅರೆ ಇವಳಿಗೂ ಇಷ್ಟ ಅಂತ ಜಾಸ್ತಿ ತಗೊಂಡು ಕೊರಿಯರ್ ಹುಡುಗನಿಗೆ ಕೊಟ್ಟು ಕಳುಹಿಸಲು ಹೇಳಿದ್ದಾನೆ. ಆದರೆ ಕೊರಿಯರ್ ಹುಡುಗನ ಬಾಸ್ ಈಗ ಹಣ್ಣನ್ನೆಲ್ಲ ಪಾರ್ಸಲ್ ಮಾಡ್ತಿಲ್ಲ ಬೇಡ ಅಂದಿದಾನೆ.

ಅದಕ್ಕೆ ಸ್ನೇಹಿತ ಬರೆದ ಪತ್ರದಲ್ಲಿ ಇದ್ದಿದ್ದು ಇಷ್ಟೇ, “ನಾನು ಮಾವಿನ ಹಣ್ಣು ಕೊರಿಯರ್ ಗೆ ಕೊಟ್ಟಿದ್ದೆ, ಅವರ್ ಬಾಸ್ ಬೇಡ ಅಂದರಂತೆ. ಅದಕ್ಕೆ ವಾಪಸ್ ಕೊಟ್ಟರು. ನಾನು ಅವನ್ನು ಅವರಿಗೇ ಕೊಟ್ಟೆ ತಿನ್ನೋಕೆ. ಇವಾಗ ನೀನು ಏನು ಮಾಡಬೇಕೆಂದರೆ ನಾನು ಇದರಲ್ಲಿ 500 ರೂ., ಹಣ ಕಳಸ್ತಾ ಇದೀನಿ, ನೀನೇ ಮಾರ್ಕೆಟಿಗೆ ಹೋಗಿ ತಗೊಂಡು ಬಾ, ತಿನ್ನು ok…”

ಬೇರೆ ವಿಷಯದಲ್ಲಿ ಜನರೇಷನ್ ಗ್ಯಾಪ್ ನನ್ನನ್ನು ಅಷ್ಟಾಗಿ ಕಾಡುವುದಿಲ್ಲ. ಆದರೆ ಪತ್ರದ ವಿಷಯಕ್ಕೆ ಬಂದರೆ ಮಾತ್ರ ಒಂದು ಪದರು ಸೃಷ್ಟಿಯಾಗಿ ಬಿಟ್ಟಿದೆ ಎನಿಸುತ್ತಿರುತ್ತದೆ. ದೊಡ್ಡವ್ವ, ಅವ್ವ, ಸಣ್ಣವ್ವ ಗಂಡನ ಮನೆಗೆ ಬಂದ ಮೇಲೆ ಅಣ್ಣಂದಿರ ಪತ್ರ ಬಂದರೆ, ಬೆಳಗಾಗುವವರೆಗೆ ದಿಂಬು ತೊಯ್ದು ತೊಪ್ಪೆಯಾಗಿರುತ್ತಿಂತೆ. ಅಂತಃಕರಣದ ನೆನಪಿನ ಸಕಾರಣದೊಂದಿಗೆ ಅಳುವ ತಲೆಮಾರಿಗೆ ಬೆಳಗ್ಗೆಗೆ ಎಲ್ಲ ನಿಚ್ಚಳ. ಆದರೆ, ನನ್ನ ಪೀಳಿಗೆಯವರು ಕಾರಣವೇ ಇಲ್ಲದೆ ರಾತ್ರಿ ಕಳೆದು ಬೆಳಗು ಮಾಡುತ್ತೇವೆ. ಬೆಳಗಿಗೆ ನೋಟ ಮಸುಕು ಎನ್ನುತ್ತ ನಿದ್ದೆಯಿಲ್ಲದೆ ಕಂಗೆಟ್ಟ ಪಾಪೆಗಳಿಂದ ಒಸರುವ ಬಿಸಿನೀರನ್ನು ತೊಡೆಯುತ್ತೇವೆ.

ಅಪ್ಪುಗೆಯಷ್ಟೇ ಬೆಚ್ಚನೆಯ ಭಾವ ಮತ್ತು ಹಿತ ಕೊಡುವ ಮತ್ತೊಂದು ಏನಾದ್ರೂ ಇದೆ ಅಂದ್ರೆ ಅದು ನನಗೆ ಪತ್ರವೇ.

ತೀರಾ ಸಾಮಾನ್ಯ ಎನ್ನುವ ಸಂಗತಿಗಳೆಲ್ಲ ಪತ್ರದಲ್ಲಿ ಅಕ್ಷರ ರೂಪಕ್ಕೆ ಇಳಿದರೆ ಅದಕ್ಕೊಂದು ಮಾಂತ್ರಿಕ ಸ್ಪರ್ಶವಾಗುವುದು, ಗಾಂಧೀಜಿ ತಮಗೆ ಬಂದ ಎಲ್ಲ ಪತ್ರಗಳಿಗೂ ತಾವೇ ಕೈಯ್ಯಾರೆ ಉತ್ತರಿಸುತ್ತಿದ್ದುದು, ಕಣ್ಣಿಂದ ತೂಗಿ, ದಿಂಬಿನಡಿ ಕೂತು ಹಾಡುವ ಪತ್ರದ ಲಾಲಿ ಎಂದರೆ… ಇಲ್ಲ, ಇಲ್ಲ ಇನ್ನು ಬಹಿರಂಗ ಓದಿಗೆ ಬರೆಯುವುದು ಕಷ್ಟ… ಪತ್ರ ಬರೆಯಿರಿ, ನಾನೂ ಪತ್ರ ಬರೆಯುತ್ತೇನೆ!!

August 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: