ಅಮ್ಮಂದಿರ ನೆನಪಿನಲ್ಲಿ ಸರ್ವರಿಗೆ ಸಮಬಾಳು

ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ

ಈ ಬಾರಿ ಜರ್ಮನಿಗೆ ಬಂದು ಒಂದು ವಾರದಲ್ಲಿ ‘ಮದರ್ಸ್ ಡೇ’ಯ ದಿನ ನಾವು ಐವರು ವ್ಯೂತ್ಸ್ ಬುರ್ಗ್ ಹೊರಗಣ ಚಿಕ್ಕ ಊರು ಫಾಲ್ಕ ಬಳಿಗೆ ತಿರುಗಾಟ ಹೊರಟೆವು -ಪ್ರೊಫೆಸರ್ ಬ್ರೂಕ್ನರ್ ,ಅಮೇರಿಕಾದ ಅರಿಜೋನ ವಿಶ್ವವಿದ್ಯಾಲಯದ ಪ್ರೊ.ಅನ್ನೇ ಫೆಲ್ಡ್ ಹೌಸ್ ,ಅವರ ಗಂಡ ಅದೇ ವಿವಿಯ ಪ್ರೊ.ಸ್ಟೀವ್ ,ಕೋಕಿಲ ಮತ್ತು ನಾನು.ದಾರಿಯಲ್ಲಿ ನದಿಯನ್ನು ಕಾರಿನಲ್ಲಿ ಕಡವು ಮೂಲಕ ದಾಟಿ ,ಸಣ್ಣ ಹಳ್ಳಿಯೊಂದರಲ್ಲಿ ರೆಸ್ಟೋರೆಂಟ್ ನಲ್ಲಿ ಊಟಕ್ಕೆ ಹೋದರೆ ,ಅಲ್ಲಿ ಜನಸಾಗರ.ಮದರ್ಸ್ ಡೇಯ ಸಂಭ್ರಮ ಆಚರಣೆಯ ಜನ ಸಮುದಾಯ.ಕೊನೆಗೂ ಜಾಗ ಪಡೆದು,ಊಟಕ್ಕೆ ಕುಳಿತಾಗ ,ಅಮ್ಮಂದಿರ ನೆನಪು.ಸ್ಟೀವ್ ಅವರ ಅಮ್ಮ ತೊಂಬತ್ತನಾಲ್ಕು ವರ್ಷದ ಹೆಲೆನ್ ವಿಗ್ಗ್ಲೆಸ್ ವರ್ತ್ ಸ್ವತಂತ್ರವಾಗಿ ಅಮೇರಿಕಾದ ಮಯಾಮಿ ಬೀಚ್ ಬಳಿ ಚೆನ್ನಾಗಿ ಬದುಕುತ್ತಿರುವ ಸಂಗತಿ ಹೇಳುತ್ತಾ ತಮ್ಮ ಅಮ್ಮನ ಅಪೂರ್ವ ಗುಣಗಳ ಕಥನಗಳನ್ನು ಹೇಳತೊಡಗಿದರು.ಅಮ್ಮನ ಹಳೆಯ ನೆನಪುಗಳ ಸಂಗತಿಗಳನ್ನು ಬಿತ್ತರಿಸಿದರು.

ಈಗಲೂ ತನ್ನನ್ನು ಮಗುವಿನಂತೆ ವಿಚಾರಿಸಿಕೊಳ್ಳುವ ಸಾಂತ್ವನದ ಮನೋಧರ್ಮವನ್ನು ವಿವರಿಸಿದರು.ಅನ್ನೇ ಫೆಲ್ಡ್ ಹೌಸ್ ತೊಂಬತ್ತು ವರ್ಷ ಬದುಕಿ ೨೦೦೦ದಲ್ಲಿ ತೀರಿಹೋದ ತಮ್ಮ ಅಮ್ಮನ ನೆನಪು ಮಾಡಿಕೊಂಡರು.ಬ್ರೂಕ್ನರ್ ೮೮ ವರ್ಷ ದಾಟಿ ಈಗಲೂ ತನ್ನ ಊರಿನಲ್ಲಿ ಸ್ವತಂತ್ರವಾಗಿ ಬದುಕುತ್ತ ಎಲ್ಲ ಜೀವನಾಸಕ್ತಿ ಉಳ್ಳ ತನ್ನ ಅಮ್ಮನೊಡನೆ ಬೆಳಗ್ಗೆ ತಾನೇ ಫೋನಿನಲ್ಲಿ ಮಾತಾಡಿದ ವಿಷಯ ತಿಳಿಸುತ್ತಾ ,ಈಗಲೂ ಅಮ್ಮನ ಜೀವನಾಸಕ್ತಿಯ ಕಥನವನ್ನು ಬಿಚ್ಚಿಟ್ಟರು.ಕೋಕಿಲ ಮಂಗಳೂರಿನ ಬಳಿ ಕಾವೂರಿನಲ್ಲಿ ಇರುವ ಎಪ್ಪತ್ತೈದರ ತನ್ನ ಅಮ್ಮನ ಬಗ್ಗೆ ಹೇಳುತ್ತಾ ತಾನು ಬೆಳಗ್ಗೆ ಫೋನಿನಲ್ಲಿ ಅಮ್ಮನ ಆರೋಗ್ಯ ವಿಚಾರಿಸಿದ ಸುದ್ದಿ ಹೇಳಿದಳು.ಕೊನೆಯದ್ದು ನನ್ನ ಸರದಿ.ಕಳೆದ ವರ್ಷ ಇದೇ ತಿಂಗಳು.ನಾನು ಮತ್ತು ಕೋಕಿಲ ವ್ಯೂತ್ಸ್ ಬುರ್ಗ್ ನಲ್ಲಿ ಇದ್ದ ಸಂದರ್ಭ.ಮೇ ಹತ್ತೊಂಬತ್ತು ಅಮ್ಮನನ್ನು ಕಳೆದುಕೊಂಡದ್ದು.ಮೇ ೨೭ರನ್ದು ನನ್ನ ಬ್ಲಾಗಿನಲ್ಲಿ ಬರೆದ ‘ನೋವಿನ ಒಂದು ವಾರ’ ಬರಹದ ಸಾರಾಂಶವನ್ನು ಅವರಿಗೆ ಹೇಳಿದೆ.

ನಾನು ಈ ಬಾರಿ ಕರ್ನಾಟಕದಲ್ಲಿ ಇದ್ದಾಗ ,ನನ್ನ ಬ್ಲಾಗ್ ಬರಹಗಳ ಸಂಕಲನ ‘ಬ್ಲಾಗಿಲನು ತೆರೆದು ‘ಬೆಂಗಳೂರಲ್ಲಿ ಸರಿಯಾಗಿ ಒಂದು ತಿಂಗಳ ಹಿಂದೆ ಎಪ್ರಿಲ್ ೧೮ರನ್ದು ಬಿಡುಗಡೆ ಆಯಿತು.ಪುಸ್ತಕ ಬಿಡುಗಡೆ ಮಾಡಿದ ಯು.ಆರ್.ಅನಂತಮೂರ್ತಿ,ಅತಿಥಿಗಳಾಗಿದ್ದ ಸಿ.ಏನ್.ರಾಮಚಂದ್ರನ್ ಮತ್ತು ನಾ.ದಾಮೋದರ ಶೆಟ್ಟಿ-ಎಲ್ಲರೂ ಆ ಪುಸ್ತಕದ ‘ನೋವಿನ ಒಂದು ವಾರ’ಲೇಖನದ ಬಗ್ಗೆ ವಿಶೇಷವಾಗಿ ಉಲ್ಲೇಖ ಮಾಡಿದರು.ಬಹುತೇಕ ಲಘು ದಾಟಿಯ ,ಹಾಸ್ಯದ ,ವಿಡಂಬನೆಯ ,ವಿಮರ್ಶೆಯ ಬರಹಗಳ ನಡುವೆ ವಿಷಾದದ ಆರ್ದ್ರ ಈ ಲೇಖನ ಬೇರೆಯಾಗಿ ನಿಲ್ಲುತ್ತದೆ ಎನ್ನುವ ಅಭಿಪ್ರಾಯಗಳು ಪ್ರಕಟ ಆದುವು.ಒಂದು ಅರ್ಥದಲ್ಲಿ ಅವರು ಹೇಳಿದ್ದು ಸರಿಯೇ.ಆದರೆ ನನ್ನ ಅಂತಹ ಬರಹಗಳ ಹಿಂದಿನ ಪ್ರೇರಣೆ ಮಾತು ಶಕ್ತಿ ಕೂಡ ನನ್ನ ಅಮ್ಮ ಮತ್ತು ಅಪ್ಪ.

ಸಾಮಾಜಿಕತೆ ,ಸಾಮುದಾಯಿಕತೆ,ಸಮಾನತೆ -ಇವನ್ನು ಆಧುನಿಕ ಪ್ರಜಾಪ್ರಭುತ್ವದ ತತ್ವಗಳೆಂದು ಭಾವಿಸಲಾಗುತ್ತದೆ.ಆದರೆ ಜಗತ್ತಿನಾದ್ಯಂತ ಅಮ್ಮಂದಿರು ಇವುಗಳನ್ನು ಬದುಕಿದ್ದಾರೆ ಮತ್ತು ತಮ್ಮ ಮಕ್ಕಳಿಗೆ ಬಿಟ್ಟುಹೋಗಿದ್ದಾರೆ.ಇದಕ್ಕೆ ಗ್ರಂಥಗಳ,ಸಂವಿಧಾನದ ,ಪ್ರಣಾಳಿಕೆಗಳ ,ಪ್ರವಚನಗಳ,ಸಿದ್ಧಾಂತಗಳ ಸಾಕ್ಷಿಗಳು ಇಲ್ಲ. ನಾವು ಇವತ್ತು ಹೇಳುವ ಮೌಲ್ಯಗಳು ,ಆದರ್ಶಗಳು- ಇವನ್ನು ತುಂಬಾ ಸಹಜವಾಗಿ ಅವರೆಲ್ಲ ಬದುಕಿದ್ದಾರೆ.ಸಕಲ ಜೀವ ರಾಶಿಗಳನ್ನು ಪ್ರೀತಿಯಿಂದ ಕಾಣುವುದು,ಯಾರಲ್ಲೂ ಭೇದಭಾವ ಮಾಡದಿರುವುದು,ದ್ವೇಷ ಇಲ್ಲದೆ ಮನೆ ಊರು ಕಟ್ಟುವುದು,ತನ್ನ ಮಕ್ಕಳಂತೆ ಎಲ್ಲ ಮಕ್ಕಳನ್ನು ಕಾಣುವುದು -ಇವನ್ನು ಅನೇಕ ಅಮ್ಮಂದಿರು ‘ಸಾಧನೆ’ಎಂದು ಪರಿಗಣಿಸದೆ ,ಇನ್ನೊಬ್ಬರೊಡನೆ ಹೆಚ್ಚುಗಾರಿಕೆ ಎಂದು ಹೇಳಿಕೊಳ್ಳದೆ ಆಗುಮಾಡಿದ್ದಾರೆ.

ಬಹುತೇಕ ಅಮ್ಮಂದಿರಂತೆ ನನ್ನ ಅಮ್ಮ ಯಮುನಾ ಕೂಡ ಧಾರ್ಮಿಕರಾಗಿದ್ದರು.ದೇವರನ್ನು ನಂಬುತ್ತಿದ್ದರು,ಪ್ರಾರ್ಥನೆ ಮಾಡುತ್ತಿದ್ದರು,ವಿಶೇಷ ದಿನಗಳಂದು ದೇವಸ್ಥಾನಗಳಿಗೆ ಹೋಗುತ್ತಿದ್ದರು.ಅವರ ಬದುಕಿನಲ್ಲಿ ಅವರು ಅಪಾರ ಕಷ್ಟ ನೋವು ಅನುಭವಿಸಿದ್ದರು.ಹಿರಿಯರಿಗೆ ಆಸ್ತಿ ಇದ್ದರೂ ಅದು ದೊರೆಯದೆ ಮಕ್ಕಳನ್ನು ಸಾಕಲು ಪಟ್ಟ ಪಾಡು ,ಸಣ್ಣ ಕೃಷಿಯಲ್ಲಿ ಬದುಕುವ ಒದ್ದಾಟ ,ಹಸು ಕಟ್ಟಿ ಹಾಲು ಮಾರಿ ರೇಶನ್ ಅಕ್ಕಿ ಪಡೆಯಲು ಪಟ್ಟ ಕಷ್ಟಗಳು -ಇವು ಯಾವುವೂ ಅವರ ಜೀವನ ಶ್ರದ್ಧೆಯನ್ನು ಕುಗ್ಗಿಸಲಿಲ್ಲ.ನಾನು ಪುತ್ತೂರಿನಲ್ಲಿ ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗ ,ಕುಟುಂಬದಲ್ಲಿ ಅವರಿಗೆ ಆದ ಅನಿರೀಕ್ಷಿತ ಆಘಾತದ ಒತ್ತಡವನ್ನು ತಡೆಯಲಾರದೆ ಸತ್ಯಸಾಯಿ ಬಾಬಾ ಮೊರೆಹೋದದ್ದು.ಸಾಂತ್ವನಕ್ಕೆ ಭರವಸೆಯ ಹುಲ್ಲುಕಡ್ಡಿ ಸಿಕ್ಕಿದರೂ ಅದೇ ದೇವರಾಗುತ್ತದೆ.ಆದರೆ ಇವು ಎಲ್ಲವುಗಳ ನಡುವೆಯೂ ದುಡಿಮೆ ಮತ್ತು ಎಲ್ಲರನ್ನೂ ಸಮಾನವಾಗಿ ಕಾಣುವ ,ತನಗೆ ಉಣ್ಣಲು ಇಲ್ಲದಾಗಲೂ ಬೇರೆಯವರಿಗೆ ಕೊಡುವ ಔದಾರ್ಯ -ಇವನ್ನು ದೇವರ ಬಗೆಗಿನ ನಂಬಿಕೆಗಿಂತ ಹೆಚ್ಚು ನಿಷ್ಠೆಯಿಂದ ವ್ರತದಂತೆ ನಡೆಸಿಕೊಂಡುಬಂದರು.ನಮಗೆ ಅವರು ಸದಾ ಹೇಳುತ್ತಿದ್ದ ಮಾತು,’ಸೋಮಾರಿಯಾಗಿ ಬದುಕಬಾರದು ‘ಎಂದು.

ಅಮ್ಮ ಧಾರ್ಮಿಕರಾಗಿಯೂ ,ಜಾತ್ಯತೀತರಾಗಿದ್ದರು.ಐದನೆಯ ತರಗತಿವರೆಗೆ ಮಾತ್ರ ಶಾಲೆಗೇ ಹೋಗಿದ್ದ ಅಮ್ಮ ,ನಾನು ಮುಂದಿನ ದಿನಗಳಲ್ಲಿ ಪುಸ್ತಕಗಳಿಂದ ಓದಿದ ಅನೇಕ ವಿಷಯಗಳನ್ನು ನನಗೆ ಬಾಲ್ಯದಲ್ಲೇ ಹೇಳಿಕೊಟ್ಟಿದ್ದರು ಮತ್ತು ನನ್ನ ಬದುಕಿನ ಉದ್ದಕ್ಕೂ ಆಚರಿಸಿ ದಾರಿ ತೋರಿಸುತ್ತಿದ್ದರು.ಜಾತಿಗಳ ಅಸ್ಪ್ರಶ್ಯತೆ ಯನ್ನು ಬಹಳ ಹಿಂದೆಯೇ ದೂರ ಮಾಡಿದ್ದರು.ಧರ್ಮದ ಭೇದಗಳನ್ನು ಸಹಿಸಿಕೊಳ್ಳುತ್ತಿರಲಿಲ್ಲ.ಮಂಗಳೂರಿನ ಮಾರ್ನಮಿಕಟ್ಟೆಯ ಬಳಿ ನಮ್ಮ ಮನೆಯಲ್ಲಿ ಇರುವಾಗ ಬೆಳಗ್ಗೆ ಆರು ಗಂಟೆಗೆ ವಾಕಿಂಗ್ ಹೊರಟರೆ ಮಂಗಳಾದೇವಿ ದೇವಸ್ಥಾನಕ್ಕೆ ಹೋಗಿ ,ಬರುವಾಗ ಕಾಸಿಯಾ ಚರ್ಚಿಗೆ ಬಂದು ಎರಡೂ ಕಡೆ ನಮಸ್ಕರಿಸಿ ವಾಕಿಂಗ್ ಮುಗಿಸುತ್ತಿದ್ದರು.ಮಂಗಳೂರಲ್ಲಿ ಕೋಮುಗಲಭೆಗಳು ಆದಾಗ ಅವರು ಅನುಭವಿಸುತ್ತಿದ್ದ ನೋವು,ಅಸಮಾಧಾನ ಮಾತಿನಲ್ಲಿ ನೇರವಾಗಿ ವ್ಯಕ್ತಪಡಿಸುತ್ತಿದ್ದರು.ಮನುಷ್ಯರ ಬದುಕಿಗಿಂತ ಧರ್ಮ ದೇವರು ದೊಡ್ಡದಲ್ಲ ಎನ್ನುತ್ತಿದ್ದರು.ನಲುವತ್ತು ವರ್ಷಗಳ ಹಿಂದೆ ,ಕಳೆದ ಶತಮಾನದ ಎಪ್ಪತ್ತರ ದಶಕದಲ್ಲಿ ಮಾನವವಿಜ್ಞಾನದ ನನ್ನ ಓದು, ತುಳುನಾಡಿನ ಭೂತಗಳ ಬಗ್ಗೆ ನಾನು ನಡೆಸಿದ ಅಧ್ಯಯನ ,ಕರಾವಳಿ ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿ ಸುತ್ತಾಡಿ ನಾನು ಪಡೆದ ಅನುಭವಗಳು -ಇವೆಲ್ಲ ಒಟ್ಟು ಸೇರಿ ,ವಿಚಾರ ಸಾಹಿತ್ಯದ ಓದಿಗೆ ಮೊದಲೇ ,ಧರ್ಮ ದೇವರುಗಳ ಬಗೆಗಿನ ನನ್ನ ನೋಟಗಳನ್ನು ಮರು ರೂಪಿಸಿದಾಗ ,ಆರಂಭದಲ್ಲಿ ಅಮ್ಮ ಬೇಸರಗೊಂಡದ್ದು ಉಂಟು.ಆದರೆ ಅದು ಉಳಿದವರ ಬದುಕಿನ ಕ್ರಮಕ್ಕೆ ಅಡ್ಡಿಪಡಿಸದಿರುವ ಸ್ವಾಯತ್ತತೆ ಎಂದು ಗೊತ್ತಾದ ಬಳಿಕ ಅಮ್ಮ ನನ್ನ ನಿಲುವನ್ನು ಒಪ್ಪಿಕೊಂಡರು.ತಾನು ಮಾಡುವ ಕೆಲಸ ಮತ್ತು ಪ್ರಾಮಾಣಿಕತೆ ಶ್ರದ್ಧೆ ಎಲ್ಲ ಧರ್ಮಕ್ಕಿಂತ ಮುಖ್ಯ ಎನ್ನುವ ಅಮ್ಮನ ನಂಬಿಕೆ ನನ್ನ ಬಗೆಗಿನ ಅವರ ಪ್ರೀತಿಯನ್ನು ಇನ್ನಷ್ಟು ಗಾಢವಾಗಿಸಿದ್ದು ನನಗೆ ಬದುಕಿನುದ್ದಕ್ಕೂ ಆಸರೆಯಾಗಿತ್ತು.

ಅಮ್ಮ ಕುಮಾರವ್ಯಾಸ ಮತ್ತು ಜೈಮಿನಿಭಾರತದ ಪದ್ಯಗಳನ್ನು ಗಮಕದ ಮಾದರಿಯಲ್ಲಿ ಪುಸ್ತಕ ನೋಡದೆಯೇ ಗಂಟೆಗಟ್ಟಲೆ ಹಾಡುತ್ತಿದ್ದರು.ಅವರು ಸಂಗೀತ ,ಗಮಕ ಅಭ್ಯಾಸ ಮಾಡಿದವರು ಅಲ್ಲ.ಆದರೆ ಅವರ ಕನ್ನಡ ಉಚ್ಚಾರಣೆಯ ಸ್ಪಷ್ಟತೆ ,ಹಾಡಿನ ಧಾಟಿ ಅನುಪಮ.ಕುಮಾರವ್ಯಾಸ ಭಾರತದ ‘ವಿಧುರ ನೀತಿ’ಅವರಿಗೆ ತುಂಬಾ ಪ್ರಿಯವಾದ ಭಾಗ.ಅದು ಅವರ ಬದುಕಿನ ನಿಜವಾದ ನೀತಿ ಕೂಡ ಆಗಿತ್ತು.ತುಳು ಕವಿ ಏನ್.ಎಸ.ಕಿಲ್ಲೆ ಅವರ ‘ಕಾನಿಗೆ’ ತುಳು ಕವನ ಸಂಕಲನದ ಕವನಗಳನ್ನು ಅಮ್ಮ ಭಾವಪೂರ್ಣವಾಗಿ ಸುಶ್ರಾವ್ಯವಾಗಿ ಹಾಡುತ್ತಿದ್ದರು.’ತೂಂಕುವೆ ತೊಟ್ಟಿಲ್ ಮಾನಾವೆ ಬಾಲೆ’,’ಪತ್ತವತಾರ ‘-ಅವರಿಗೆ ಹೆಚ್ಚು ಇಷ್ಟವಾದ ಕವನಗಳು.ಶಿವರಾಮ ಕಾರಂತರ ಪತ್ನಿ ಲೀಲಾ ಕಾರಂತ ಮತ್ತು ನನ್ನ ಅಮ್ಮ ಪ್ರಾಣ ಗೆಳತಿಯರು.ನಾವು ಹುಡುಗರಾಗಿದ್ದಾಗ ಲೀಲಾ ಕಾರಂತರು ಮಕ್ಕಳೊಡನೆ ಪುಣಚಾದ ಅಗ್ರಾಳದ ನಮ್ಮ ಮನೆಗೆ ಬಂದು ಅಮ್ಮನೊಡನೆ ಸಾಹಿತ್ಯ ಸಂಗೀತ ಮಾತಾಡುತ್ತಾ ,ಅಮ್ಮನಿಗೆ ಬಗೆ ಬಗೆಯ ಸಸ್ಯಾಹಾರಿ ಅಡುಗೆ ಕಲಿಸುತ್ತಾ ಇರುತ್ತಿದ್ದರು.ಲೀಲಾ ಕಾರಂತರು ತೀರಿಹೋದಾಗ ಅಮ್ಮ ಊಟಮಾಡದೆ ಕಣ್ಣೀರು ಹಾಕುತ್ತಾ ಕುಳಿತ್ತಿದ್ದರು.ವಿ.ಸೀತಾರಾಮಯ್ಯ ಅವರ ‘ವಿಶ್ವಾಸ’ ಕವನವನ್ನು ಲೀಲಾ ಕಾರಂತರಿಂದ ಹಾಡಲು ಕಲಿತ ಅಮ್ಮ ಹಾಡಿದ ಸಾಲುಗಳು ಈಗಲೂ ಅನುರಣಿಸುತ್ತಿವೆ.

ಅಮ್ಮನ ಬಗ್ಗೆ ಹೇಳಲು ಸಾಕಷ್ಟು ಸಂಗತಿಗಳು ಇವೆ.ಬಡತನವನ್ನು ಒಂದು ವರವನ್ನಾಗಿ ನೋಡಿದ ಅಮ್ಮ ನನಗೆ ಕಲಿಸಿದ್ದು ಅಪಾರ,ಬಿಟ್ಟುಹೋದದ್ದು ಬಹಳ.ಇದು ಅನೇಕ ಅಮ್ಮಂದಿರ ಸಂಕಥನ ಕೂಡಾ.’ಅಮ್ಮಂದಿರ ದಿನ ‘ಮಕ್ಕಳು ತಮ್ಮ ತಮ್ಮ ಅಮ್ಮಂದಿರಿಗೆ ಶುಭಾಶಯ ಹೇಳುತ್ತಾರೆ ,ಆಶೀರ್ವಾದ ಕೇಳುತ್ತಾರೆ,ಉಡುಗೊರೆ ಕೊಡುತ್ತಾರೆ .ಅದರೊಂದಿಗೆ ಅಮ್ಮಂದಿರ ‘ನೆನಪು ‘ಗಳ ನೆನಪು ಮಾಡಿಕೊಂಡರೆ ,ಮತ್ತು ಅವನ್ನು ತಮ್ಮ ಬದುಕಿನಲ್ಲಿ ಆ ದಿನ ಮಾತ್ರ ಅಲ್ಲ, ದಿನ ದಿನ ನೆನಪು ಮಾಡಿಕೊಂಡರೆ ,ಸಾಂತ್ವನಕ್ಕೆ ಮತ್ತೆ ಬೇರೆಯೇ ಗುರು,ಸ್ವಾಮಿ ,ಬಾಬಾ ಬೇಕಾಗದಿರಬಹುದು..ಇಂದು ನಮಗೆ ಬೇಕಾಗಿರುವುದು ನಮಗೆ ಮತ್ತು ಎಲ್ಲರಿಗೆ ಜೊತೆಯಾಗಿಯೇ ಸಾಂತ್ವನ .’ಸರ್ವರಿಗೆ ಸಮಪಾಲು ,ಸರ್ವರಿಗೆ ಸಮಬಾಳು ‘ ಕುವೆಂಪು ಅವರ ಈ ಸಂದೇಶ -ಅಮ್ಮಂದಿರ ಮೂಲಕ ನಮಗೆಲ್ಲರಿಗೆ.

 

‍ಲೇಖಕರು G

May 20, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. gn nagaraj

    jagatthinella thayandiru mahileyaragi horuva hone garike avaru anubhavisuva sankastagalu, adaralliyoo badathanada manegalallimanaviya ganatheya paramochha madarigalu

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: