ಅಮೆರಿಕ ನಿಸರ್ಗದಲ್ಲಿ ಕೊರೆದಿಟ್ಟ ಪರ್ವತ ಶ್ರೇಣಿ

6

ನಿಸರ್ಗದಲ್ಲಿ ಕೊರೆದಿಟ್ಟ ಪರ್ವತ ಶ್ರೇಣಿ

ಲಾಸ್ ವೇಗಾಸ್‌ನಿಂದ ನಮ್ಮ ಮುಂದಿನ ಗಮ್ಯ ಸ್ಥಾನ ತಲುಪಲು ಬೆಳಗ್ಗೆ ಬೇಗ ಹೊರಟೆವು. ದಾರಿಯಲ್ಲಿ ಬೆಳಗಿನ ತಿಂಡಿಗಾಗಿ ಅಮೆರಿಕದ ಪ್ರಸಿದ್ಧ ತಿನಿಸುಗಳಲ್ಲಿ ಒಂದಾದ ‘ಪ್ಯಾನ್ ಕೇಕ್’ ನ್ನು ‘ಹಾಪ್ ಇನ್’ ರೆಸ್ಟೋರೆಂಟಿನಲ್ಲಿ ಸೇವಿಸಿದೆವು. ಮೊಟ್ಟೆಯನ್ನೂ ತಿನ್ನದವರಿಗೆ ಬ್ರೆಡ್ ಟೋಸ್ಟ್ ಮತ್ತು ರುಚಿಕರವಾದ ಹಣ್ಣುಗಳ ಮಿಶ್ರಣ ದೊರೆಯುತ್ತದೆ. ಆರ್ಡರ್ ತೆಗೆದುಕೊಂಡ ನಂತರ ಅದನ್ನು ನಮ್ಮ ಮೇಜಿಗೆ ತರಲು ಕನಿಷ್ಟ ಹದಿನೈದರಿಂದ ಇಪ್ಪತ್ತು ನಿಮಿಷಗಳನ್ನು ತೆಗೆದುಕೊಳ್ಳುತ್ತಾರೆ.

ಈ ರೆಸ್ಟೋರೆಂಟಿನಲ್ಲಿ ಒಂದು ಕಾಫಿಯ ದರ ನೀಡಿದ ಮೇಲೆ ಎಷ್ಟು ಬಾರಿ ಕೇಳಿದರೂ ಕಾಫಿಯನ್ನು ತಂದು ಕೊಡುತ್ತಾರೆ. ಬಂದ ಗ್ರಾಹಕರು ನಿಧಾನವಾಗಿ ಒಂದೆರಡು ಬಾರಿ ಕಾಫಿ ಹೀರುತ್ತಾ ಮಾತಾಡುತ್ತಾ ಕಾಲ ಕಳೆಯಬಹುದು. ಮಕ್ಕಳು ಕಾಲ ಕಳೆಯಲು ಅವರಿಗೆ ಒಂದು ಡ್ರಾಯಿಂಗ್ ಹಾಳೆಯನ್ನೂ, ಅದಕ್ಕೆ ಬಣ್ಣ ತುಂಬಿಸಲು ಕ್ರೇಯಾನ್‌ಗಳನ್ನೂ ನೀಡುತ್ತಾರೆ. ಇಂಥದ್ದೊಂದು ಗ್ರಾಹಕ ಸೇವೆಯ ವಿಶಿಷ್ಟ ರೀತಿಯನ್ನು ಇಲ್ಲಿ ನೋಡಿದೆವು.

ಲಾಸ್ ವೇಗಾಸ್‌ನಿಂದ 250 ಮೈಲಿ (410 ಕಿ.ಮೀ.) ದೂರದಲ್ಲಿರುವ ‘ಗ್ರ್ಯಾಂಡ್ ಕೆನ್ಯಾನ್’ ಎಂಬ ಪರ್ವತ ಶ್ರೇಣಿ ಆರಿಜೋ಼ನ ರಾಜ್ಯದಲ್ಲಿದೆ. ಸುಮಾರು ಐದಾರು ಸಾವಿರ ಮಿಲಿಯನ್‌ಗಳಷ್ಟು ಹಳೆಯದು ಎನ್ನಲಾದ ಈ ಪರ್ವತ ಶ್ರೇಣಿ ಕೊಲರಾಡೋ ನದಿಯಿಂದ ಕೊರೆಯಲ್ಪಟ್ಟದ್ದು ಎಂದು ಹೇಳುತ್ತಾರೆ. 2600 ಅಡಿ ಆಳದ 277 ಮೈಲು ಸುತ್ತಳತೆಯ ಈ ಪರ್ವತ ಶ್ರೇಣಿ ನಿಸರ್ಗದ ಒಂದು ವಿಸ್ಮಯದಂತಿದೆ.

ಗ್ರ್ಯಾಂಡ್ ಕೆನ್ಯಾನ್‌ನ ಈಗಲ್ ಪಾಯಿಂಟ್

ಭೂಗರ್ಭ ಶಾಸ್ತ್ರಜ್ಞರ ಆಸಕ್ತಿಯ ತಾಣವಾದ ಇದು ಹಲವು ಪದರಗಳ ಕೆಂಪು ಕಲ್ಲಿನ ನಿರ್ಮಿತಿಯಾಗಿದೆ. ಒಂದು ವರ್ಷದಲ್ಲಿ ಐದು ಮಿಲಿಯನ್‌ಗಿಂತಲೂ ಹೆಚ್ಚಿನ ಪ್ರವಾಸಿಗರು ಈ ಪರ್ವತ ಶ್ರೇಣಿಯನ್ನು ಮತ್ತು ಕಣಿವೆಯನ್ನು ವೀಕ್ಷಿಸಲು ಬರುತ್ತಿರುತ್ತಾರೆ.

ಕಣಿವೆಯ ಪ್ರವೇಶ ದ್ವಾರದಿಂದ ಒಳ ಹೋಗಲು ನಮ್ಮ ವಾಹನವನ್ನು ಬಳಸುವಂತಿಲ್ಲ. ಪ್ರವಾಸಿಗರ ಸೌಕರ್ಯಕ್ಕಾಗಿ ಬಸ್ಸುಗಳು, ವ್ಯಾನ್‌ಗಳು, ಇವುಗಳ ಜೊತೆಗೆ ಐಷಾರಾಮಿ ಜನರಿಗಾಗಿ ಹೆಲಿಕ್ಯಾಪ್ಟರ್ ಸೇವೆಯೂ ಸಹಾ ಇದೆ. ಪರ್ವತ ಕಣಿವೆಯ ಹಾದಿಯಲ್ಲಿ ಇಲ್ಲಿನದೇ ಬಸ್ಸಿನಲ್ಲಿ ಸಾಗುವಾಗ ಪ್ರವಾಸಿಗರ ವೀಕ್ಷಣಾ ಸ್ಥಳಗಳಲ್ಲಿ ನಿಲುಗಡೆಯಿರುತ್ತದೆ.

ಇಂತಲ್ಲಿ ಇಳಿದುಕೊಂಡು ಆ ಜಾಗವನ್ನು ನೋಡಿಕೊಂಡು ಮುಂದೆ ಬರುವ ಮತ್ತೊಂದು ಬಸ್ಸಿನಲ್ಲಿ ನಮ್ಮ ಪ್ರಯಾಣವನ್ನು ಮುಂದುವರೆಸಬಹುದು. ಹೀಗೆಯೇ ಮೂರ‍್ನಾಲ್ಕು ತಾಣಗಳನ್ನು ನೋಡಿಕೊಂಡು ಸಾಗಿದರೆ, ಆಗ ಇಲ್ಲಿನ ಪ್ರಮುಖ ಆಕರ್ಷಣೆಯಲ್ಲಿ ಒಂದಾದ ‘ಈಗಲ್ ಪಾಯಿಂಟ್’ ಸಿಗುತ್ತದೆ. ಈ ಜಾಗದಲ್ಲಿ ಒಂದು ಪುರಾಣ ಕತೆಗಳಲ್ಲಿ ಬರುವಂತ ಅಗಾಧ ಹದ್ದು ತನ್ನ ರೆಕ್ಕೆಗಳನ್ನು ಮೈಲುಗಳುದ್ದಕ್ಕೂ ಚಾಚಿ ಹಾರುವುದಕ್ಕೆ ಅನುವಾಗಿರುವಂತೆ ಬೆಟ್ಟದ ನಿರ್ಮಿತಿಯಿದೆ.

ಕೆಳಗಿನ ಕಣಿವೆ, ಮೇಲಿನ ಪರ್ವತ ಕೊರೆದುಕೊಂಡು ನಿರ್ಮಾಣವಾಗಿರುವ ರೀತಿ ಭಗವಂತನ ಸೃಷ್ಟಿ ವೈಚಿತ್ರ್ಯದ ಒಂದು ಉದಾಹರಣೆಯಂತಿದೆ. ಇಲ್ಲಿನ ಪರ್ವತ ಸಾಲುಗಳ ಪ್ರತಿಯೊಂದು ಪರ್ವತದ ಮೇಲೂ ಶಿಲ್ಪಿಯೊಬ್ಬ ಸಾಲುಸಾಲಾಗಿ ಅಡ್ಡಗೆರೆಗಳನ್ನು ಎಳೆದಿರುವಂತೆ, ಶಿಖರವನ್ನು ಸಮನಾಗಿ ಕತ್ತರಿಸಿ ಹಾಕಿರುವಂತೆ ಕಾಣುತ್ತದೆ. ಇಲ್ಲಿನ ಪರ್ವತ ಶಿಲೆಗಳು ರೂಪುಗೊಂಡಿರುವ ರೀತಿಯೇ ಈ ಪ್ರದೇಶದ ವೈಶಿಷ್ಟ್ಯತೆ ಮತ್ತು ಆಕರ್ಷಣೆ. ಹಲವು ವೀಕ್ಷಣಾ ಸ್ಥಳಗಳಿಂದ ಈ ಪರ್ವತ ಶ್ರೇಣಿಯ ಸೌಂದರ್ಯವನ್ನು ವಿವಿಧ ಕೋನಗಳಲ್ಲಿ ನೋಡಬಹುದಾಗಿದೆ.

ಕಣಿವೆಯ ಪ್ರವೇಶ ದ್ವಾರದಿಂದ ಒಳ ಹೋಗಲು ನಮ್ಮ ವಾಹನವನ್ನು ಬಳಸುವಂತಿಲ್ಲ. ಪ್ರವಾಸಿಗರ ಸೌಕರ್ಯಕ್ಕಾಗಿ ಬಸ್ಸುಗಳು, ವ್ಯಾನ್‌ಗಳು, ಇವುಗಳ ಜೊತೆಗೆ ಐಷಾರಾಮಿ ಜನರಿಗಾಗಿ ಹೆಲಿಕ್ಯಾಪ್ಟರ್ ಸೇವೆಯೂ ಸಹಾ ಇದೆ. ಪರ್ವತ ಕಣಿವೆಯ ಹಾದಿಯಲ್ಲಿ ಇಲ್ಲಿನದೇ ಬಸ್ಸಿನಲ್ಲಿ ಸಾಗುವಾಗ ಪ್ರವಾಸಿಗರ ವೀಕ್ಷಣಾ ಸ್ಥಳಗಳಲ್ಲಿ ನಿಲುಗಡೆಯಿರುತ್ತದೆ. ಇಂತಲ್ಲಿ ಇಳಿದುಕೊಂಡು ಆ ಜಾಗವನ್ನು ನೋಡಿಕೊಂಡು ಮುಂದೆ ಬರುವ ಮತ್ತೊಂದು ಬಸ್ಸಿನಲ್ಲಿ ನಮ್ಮ ಪ್ರಯಾಣವನ್ನು ಮುಂದುವರೆಸಬಹುದು.

ಹೀಗೆಯೇ ಮೂರ‍್ನಾಲ್ಕು ತಾಣಗಳನ್ನು ನೋಡಿಕೊಂಡು ಸಾಗಿದರೆ, ಆಗ ಇಲ್ಲಿನ ಪ್ರಮುಖ ಆಕರ್ಷಣೆಯಲ್ಲಿ ಒಂದಾದ ‘ಈಗಲ್ ಪಾಯಿಂಟ್’ ಸಿಗುತ್ತದೆ. ಈ ಜಾಗದಲ್ಲಿ ಒಂದು ಪುರಾಣ ಕತೆಗಳಲ್ಲಿ ಬರುವಂತ ಅಗಾಧ ಹದ್ದು ತನ್ನ ರೆಕ್ಕೆಗಳನ್ನು ಮೈಲುಗಳುದ್ದಕ್ಕೂ ಚಾಚಿ ಹಾರುವುದಕ್ಕೆ ಅನುವಾಗಿರುವಂತೆ ಬೆಟ್ಟದ ನಿರ್ಮಿತಿಯಿದೆ.

ಕೆಳಗಿನ ಕಣಿವೆ, ಮೇಲಿನ ಪರ್ವತ ಕೊರೆದುಕೊಂಡು ನಿರ್ಮಾಣವಾಗಿರುವ ರೀತಿ ಭಗವಂತನ ಸೃಷ್ಟಿ ವೈಚಿತ್ರ್ಯದ ಒಂದು ಉದಾಹರಣೆಯಂತಿದೆ. ಇಲ್ಲಿನ ಪರ್ವತ ಸಾಲುಗಳ ಪ್ರತಿಯೊಂದು ಪರ್ವತದ ಮೇಲೂ ಶಿಲ್ಪಿಯೊಬ್ಬ ಸಾಲುಸಾಲಾಗಿ ಅಡ್ಡಗೆರೆಗಳನ್ನು ಎಳೆದಿರುವಂತೆ, ಶಿಖರವನ್ನು ಸಮನಾಗಿ ಕತ್ತರಿಸಿ ಹಾಕಿರುವಂತೆ ಕಾಣುತ್ತದೆ. ಇಲ್ಲಿನ ಪರ್ವತ ಶಿಲೆಗಳು ರೂಪುಗೊಂಡಿರುವ ರೀತಿಯೇ ಈ ಪ್ರದೇಶದ ವೈಶಿಷ್ಟ್ಯತೆ ಮತ್ತು ಆಕರ್ಷಣೆ. ಹಲವು ವೀಕ್ಷಣಾ ಸ್ಥಳಗಳಿಂದ ಈ ಪರ್ವತ ಶ್ರೇಣಿಯ ಸೌಂದರ್ಯವನ್ನು ವಿವಿಧ ಕೋನಗಳಲ್ಲಿ ನೋಡಬಹುದಾಗಿದೆ.

ಇಲ್ಲಿಗೆ ಬರುವ ಪ್ರವಾಸಿಗರ ಪ್ರಮುಖ ಆಕರ್ಷಣೆ ‘ಸ್ಕೈ ವಾಕ್..’ ‘ಆಕಾಶದಲ್ಲಿ ನಡಿಗೆ..’ ಈಗಲ್ ಪಾಯಿಂಟ್‌ನಿಂದ ಒಂದಷ್ಟು ದೂರ ನಡೆದರೆ ಕೆಳಗಿನ ಕಣಿವೆಯ ಅಗಾಧತೆಯನ್ನು ಕಣ್ತುಂಬಿಕೊಳ್ಳುವಂತೆ 70 ಅಡಿ ಅಳತೆಯ 10 ಅಡಿ ಅಗಲದ ಒಂದು ಅರ್ಧ ಚಂದ್ರಾಕಾರದ ಗಾಜಿನ ಸೇತುವೆಯನ್ನು ನಿರ್ಮಿಸಿದ್ದಾರೆ.

ಇದರ ಮೇಲೆ ಸಾಗುತ್ತಾ 2600 ಅಡಿ ಆಳದ ಕೆಳಗಿನ ಕಣಿವೆಯನ್ನು ನೇರ ನೋಟದಲ್ಲಿ ನೋಡುವುದು ಒಂದು ರೋಮಾಂಚಕ ಅನುಭವ. ಈ ಸೇತುವೆಯ ಮೇಲಿನಿಂದ 180 ಡಿಗ್ರಿ ನೋಟದಲ್ಲಿ ಇಡೀ ಕಣಿವೆಯ ಸೌಂದರ್ಯವನ್ನು ಅನುಭವಿಸಬಹುದು. ಮಧ್ಯೆ, ಮಧ್ಯೆ ಅಲ್ಲಲ್ಲಿ ನಿಂತು ಬೇರೆ ಬೇರೆ ಕೋನಗಳಿಂದ ಪರ್ವತದ, ಕಣಿವೆಯ ಹಲವು ಫೋಟೋಗಳನ್ನು ತೆಗೆಸಿಕೊಳ್ಳಬಹುದು (ನಮ್ಮ ಕ್ಯಾಮೆರಾ ಇಲ್ಲಿ ಉಪಯೋಗಿಸುವಂತಿಲ್ಲ). ಈ ಅಪರೂಪದ ಅನುಭವಕ್ಕೆ ಪಕ್ಕಾಗಿ, ಮತ್ತೆ ಬಂದ ತಾಣಕ್ಕೆ ಹಿಂತಿರುಗುವ ಹಾದಿಯಲ್ಲಿ, ಹಲವು ಹತ್ತು ಸುಂದರ ನೋಟಗಳನ್ನು ನಮ್ಮದಾಗಿಸಿಕೊಂಡೆವು.

ಆಕಾಶದಲ್ಲಿ ನಡಿಗೆ (ಚಿತ್ರಕೃಪೆ: ಗೂಗಲ್)

ಬಸ್ಸಿನಿಂದ ಇಳಿಯುವಾಗ ವಾಹನ ಚಾಲಕಿ ನನಗೆ ಅಭಿನಂದನೆಗಳನ್ನು ತಿಳಿಸಿದಳು. ಏಕೆಂದು ಅರಿವಾಗದೆ ಆಕೆಯ ಮುಖವನ್ನೇ ನೋಡಿದೆ. “ನಿನಗೆ ಓಡಾಡಲಾಗದಿದ್ದರೂ, ನೋಡಬೇಕೆಂಬ ಉತ್ಸಾಹವಿದೆ, ಧೈರ್ಯವಿದೆ, ಛಲವಿದೆ. ಎಷ್ಟೋ ಜನರು, ಅಷ್ಟೇಕೆ, ನನ್ನಮ್ಮನೇ ನಿನ್ನ ಸ್ಥಿತಿಯಲ್ಲಿದ್ದಾಳೆ. ಅವಳನ್ನೂ ಇಲ್ಲೆಲ್ಲಾ ಕರೆದುಕೊಂಡು ಬಂದು ತೋರಿಸಬೇಕೆಂಬ ಆಸೆ ನನಗಿದ್ದರೂ, ಬರುವ ಧೈರ್ಯ ಅವಳಲ್ಲಿಲ್ಲ. ನಿನ್ನನ್ನು ನೋಡಿದಾಗ ತುಂಬಾ ಸಂತೋಷವಾಯಿತು” ಅವಳೆಂದಾಗ ನನ್ನಿಂದ ಮಾತು ಹೊರಡಲಿಲ್ಲ. ಸುಮ್ಮನೆ ಕೈಮುಗಿದೆ. ‘ನನ್ನ ಮಕ್ಕಳು, ಅಳಿಯಂದಿರು ಮತ್ತು ಮನೆಯವರ ಬೆಂಬಲ, ಒತ್ತಾಸೆಯಿಲ್ಲದಿದ್ದರೆ, ನನಗೂ ಈ ಧೈರ್ಯ, ಛಲವನ್ನು ಉಳಿಸಿಕೊಳ್ಳುವ ಶಕ್ತಿಯಿತ್ತೆ?!’ ಈ ಪ್ರಶ್ನೆಗೆ ನನ್ನಲ್ಲಿ ಉತ್ತರವಿಲ್ಲ.

ರಥಯಾತ್ರೆಯ ಕಡೆಯ ಪಯಣ..

ನಮ್ಮ ರಥಯಾತ್ರೆಯ ಕಡೆಯ ಗಮ್ಯ ಸ್ಥಾನವಾದ ಗ್ರ್ಯಾಂಡ್ ಕೆನ್ಯಾನ್‌ಅನ್ನು ನೋಡಿಯಾಗಿತ್ತು. ಮಧ್ಯಾಹ್ನದ ಸುಡುಬಿಸಿಲು. ಇಷ್ಟು ಹೊತ್ತೂ ಹೊಟ್ಟೆಯ ಕಡೆ ಗಮನವಿಲ್ಲದವರಿಗೆ ಈಗ ಹಸಿವಾಗತೊಡಗಿತ್ತು.  ಊಟದ ನಂತರ ನಮ್ಮ ಮುಂದಿದ್ದದ್ದು 756 ಮೈಲಿ (1200 ಕಿ.ಮೀ.)ಗಳ ಸುದೀರ್ಘ ಪಯಣ.

ನಮ್ಮ ಊರು ಮಿಲ್ಪಿಟಾಸ್‌ಗೆ ಸೇರಲು ಕನಿಷ್ಟ 12ರಿಂದ 14 ಗಂಟೆಗಳ ಪಯಣ. ಏನೇ ಆದರೂ, ಅಂದಿನ ರಾತ್ರಿ ಅಂದರೆ ಮಾರನೆಯ ದಿನ ಬೆಳಗಿನ ಜಾವದೊಳಗೆ ನಾವು ನಮ್ಮ ಊರನ್ನು ಸೇರಿಕೊಳ್ಳಲೇ ಬೇಕಿತ್ತು. ನಮ್ಮ ವಾಹನದ ಬಾಡಿಗೆಯ ಅವಧಿ ಬೆಳಗ್ಗೆ 7 ಗಂಟೆಗೆ ಮುಗಿಯುವುದರಲ್ಲಿತ್ತು. ಹಾಗಾಗಿ ಹೊಟ್ಟೆಯ ಕಡೆ ಗಮನ ಕೊಡುತ್ತಲೇ ನಾವು ನಮ್ಮ ಹಿಂತಿರುಗುವ ಮಾರ್ಗವನ್ನು ಹಿಡಿದೆವು.

ದಾರಿಯಲ್ಲಿ ಹೂವರ್ ಅಣೆಕಟ್ಟನ್ನು ನೋಡಿಕೊಂಡು ಹೋಗಬೇಕೆಂಬ ನಮ್ಮ ಆಸೆ ಸಂಜೆ ಐದು ಗಂಟೆ ದಾಟಿದ್ದರಿಂದ ಫಲಿಸಲಿಲ್ಲ. ಅಲ್ಲಿಂದ ಮುಂದೆ ಒಂದು ಕಡೆ ಟೀ ಮತ್ತು ಅಲ್ಪ ವಿರಾಮಕ್ಕೆ ನಿಲ್ಲಿಸಿದವರು, ರಾತ್ರಿಯ ಊಟದ ತನಕ ಎಲ್ಲೂ ವಾಹನವನ್ನು ನಿಲ್ಲಿಸದೆ ಸಾಗಿದೆವು. ರಾತ್ರಿಯ ಊಟಕ್ಕೆ ಮೆಕ್ಸಿಕನ್ ಊಟ ಮಾಡಲು ಹಲವರ ಓಟು ಬಿದ್ದ ಕಾರಣ, ‘ಚಿಪೋಟ್ಲೆ’ ಎಂಬ ಮೆಕ್ಸಿಕನ್ ರೆಸ್ಟೋರೆಂಟಿಗೆ ಭೇಟಿಯಿತ್ತು, ರುಚಿಯ ವೈವಿಧ್ಯತೆಯನ್ನು ಸವಿದೆವು.

ಭಾರತೀಯ ಊಟಕ್ಕೆ ಅತಿ ಸನಿಹವಾದದ್ದು ಮೆಕ್ಸಿಕನ್ ಊಟವೆನ್ನುತ್ತಾರೆ. ಅವರೂ ನಮ್ಮಂತೆಯೇ ಅನ್ನ, ತರಕಾರಿ ಸಲಾಡ್, ಕಾಳುಗಳು ಇಂಥವನ್ನು ತಮ್ಮ ಆಹಾರದಲ್ಲಿ ಹೆಚ್ಚಾಗಿ ಉಪಯೋಗಿಸುತ್ತಾರೆ. ಮಸಾಲೆ ಪದಾರ್ಥಗಳೂ ಭಾರತೀಯ ಶೈಲಿಗೆ ಸನಿಹವಾದ್ದು, ಆರೋಗ್ಯಕರವಾದ್ದು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಶಾಖಾಹಾರಿ ಊಟವೂ ದೊರೆಯುವಂಥದ್ದು.

ಊಟದ ನಂತರ ಮಧ್ಯರಾತ್ರಿಯಲ್ಲೊಮ್ಮೆ ಒಂದು ಹತ್ತು ಹದಿನೈದು ನಿಮಿಷ ವಾಹನವನ್ನು ನಿಲ್ಲಿಸಿ ಲಘು ವಿರಾಮ ತೆಗೆದುಕೊಂಡ ನಂತರ ಬೆಳಗಿನ ಜಾವ ಐದು ಗಂಟೆಯವರೆಗೂ ಇನ್ನೆಲ್ಲೂ ನಿಲ್ಲಿಸದೆ ಮುಂದೆ ಸಾಗಿ ಕ್ಷೇಮವಾಗಿ ನಮ್ಮ ಯಾತ್ರೆಯನ್ನು ಮುಗಿಸಿಕೊಂಡು ನಮ್ಮ ಗೂಡನ್ನು ಸೇರಿಕೊಂಡೆವು.

ಕಾರನ್ನು ವಾಪಸ್ಸು ಕೊಟ್ಟು ಬರಲು ಹೋದ ಅಳಿಯ ಒಬ್ಬರನ್ನು ಬಿಟ್ಟರೆ ಮಿಕ್ಕವರೆಲ್ಲಾ ಸುಖವಾಗಿ ಯಾತ್ರೆ ಕಳೆದ ನೆಮ್ಮದಿಯಿಂದ ಬೆಳಗ್ಗೆ ಒಂಭತ್ತು ಗಂಟೆಯ ತನಕ ಮೈಮರೆತು ನಿದ್ರಿಸಿದೆವು. ಒಂದು ಸುದೀರ್ಘ ಪಯಣ ಸುಖವಾಗಿ ಮುಗಿದಿತ್ತು. ಅಂದೇ ರಾತ್ರಿ ಹಿರಿಯ ಮಗಳ ಕುಟುಂಬ ಬೆಂಗಳೂರಿಗೆ ವಾಪಸ್ಸು ಹೊರಡುವವರಿದ್ದರು. ಅವರನ್ನು ಬೀಳ್ಕೊಂಡ ಮೇಲೆ ನಮ್ಮ ಮುಂದಿನ ಅನ್ವೇಷಣೆಯ ಬಗ್ಗೆ ಯೋಚಿಸುವುದು ಎಂದುಕೊಂಡೆವು.

ಭೂಶಿರ ಸುಂದರಿ..

ಸ್ಯಾನ್‌ಫ್ರಾನ್ಸಿಸ್ಕೋದಿಂದ 30 ಮೈಲಿ (50 ಕಿ.ಮೀ.) ನೈರುತ್ಯ ದಿಕ್ಕಿನಲ್ಲಿ ಸಾಗಿದರೆ ಅಲ್ಲಿರುವ ‘ಮರೀನ್ ಕೌಂಟಿ’ಯಲ್ಲಿ ‘ಪಾಯಿಂಟ್ ರೇಸ್’ ಎಂಬ ಭೂಶಿರವಿದೆ. ಸುತ್ತಲೂ ಫೆಸಿಫಿಕ್ ಸಾಗರ ಅದರ ಮಧ್ಯದಲ್ಲೊಂದಷ್ಟು ಭೂಭಾಗ ಆ ಸಾಗರದಲ್ಲೊಂದಷ್ಟು ಜಾಗ ಮಾಡಿಕೊಂಡು ನುಗ್ಗಿದಂತಿದೆ.

ಒಂದು ಭಾನುವಾರ ಈ ಸುಂದರಿಯನ್ನು ನೋಡಲು ನಾವು ಹೊರಟೆವು. ಮಿಲ್ಪಿಟಾಸ್‌ನಿಂದ ಸ್ಯಾನ್‌ಫ್ರಾನ್ಸಿಸ್ಕೋದ ಗೋಲ್ಡನ್ ಬ್ರಿಡ್ಜಿನ ಸಮಾನಾಂತರದಲ್ಲಿ ನಿರ್ಮಿಸಿರುವ ‘ಬೇ ಬ್ರಿಡ್ಜ್’ ಮುಖಾಂತರ ಸಾಗಿದೆವು. ಬೆಟ್ಟಗಳ ತಿರುವು ಹಾದಿ. ದಾರಿಯುದ್ದಕ್ಕೂ ಫರ್ ಮತ್ತು ಪೈನ್ ಮರಗಳ ಹಸಿರು ಕಾನನ. ನಡು-ನಡುವೆ ಒಂದೊಂದು ಸಣ್ಣ ಊರುಗಳು ಸಿಗುತ್ತಿದ್ದವು.

ಪಾಯಿಂಟ್ ರೇಸ್‌ಗೆ ಇನ್ನೂ ಒಂದು ಮುಕ್ಕಾಲು ಗಂಟೆಯ ಹಾದಿ ಇರುವಾಗಲೇ ಪ್ರವಾಸಿಗರ ಮಾಹಿತಿ ಕೇಂದ್ರ ದೊರೆಯಿತು. ಅನೇಕ ಚಾರಣಿಗರು ಇಲ್ಲಿ ಬಿಡಾರ ಹೂಡುವ ಸಲಕರಣೆಗಳೊಂದಿಗೆ ಬಂದಿದ್ದರು. ರಾತ್ರಿಯೆಲ್ಲಾ ಈ ಜಾಗದಲ್ಲಿ ಗುಡಾರಗಳಲ್ಲಿ ತಂಗಿದ್ದು, ಬೆಳಗಿನ ಜಾವವೇ ಇಲ್ಲಿಂದ ಚಾರಣಕ್ಕೆ ಹೊರಡುತ್ತಾರೆ ಸಾಹಸಿಗರು.  ಕರಡಿಯನ್ನು ಬಿಟ್ಟರೆ ಬೇರಾವ ವನ್ಯ ಮೃಗಗಳೂ ಇಲ್ಲಿ ನೆಲೆಸಿಲ್ಲ. ಅವೂ ಬಂದರೆ ಆಹಾರ ಹುಡುಕುತ್ತಾ ಬರುತ್ತವೆಯೇ ಹೊರತು ಬೇರೆ ಯಾವುದೇ ಹಾವಳಿ ಎಬ್ಬಿಸುವುದಿಲ್ಲ ಎಂದು ಇಲ್ಲಿನವರು ಹೇಳುತ್ತಾರೆ.

ಅಲ್ಲಿಂದ ಮುಂದೆ ಸಾಗುತ್ತಾ ದೊಡ್ಡ ಹುಲ್ಲುಗಾವಲಿನ ಪ್ರದೇಶ ಎದುರಾಯಿತು. ಅಲ್ಲಲ್ಲಿ ಜಿಂಕೆ, ಕಡವೆಗಳು ಕಾಣುತ್ತಿದ್ದವು. ಬೇಸಿಗೆಯಾದ್ದರಿಂದ ಹುಲ್ಲೆಲ್ಲಾ ಒಣಗಿ ಹಳದಿ ಮಿಶ್ರಿತ ಕಂದು ಬಣ್ಣದ ಬೋಳು ಗುಡ್ಡೆಗಳಂತೆ ಕಾಣುತ್ತಿದ್ದವು. ಇಂತಹ ಬೋಳುಗುಡ್ಡಗಳು ಬೇ ಪ್ರದೇಶದಲ್ಲಿ ಸರ್ವೇ ಸಾಮಾನ್ಯ. ಒಂದು ಮಳೆ ಬಂದರೆ ಸಾಕು ಮಂತ್ರದಂಡಕ್ಕೆ ಒಳಗಾದಂತೆ ಒಂದು ವಾರದಲ್ಲೇ ಹಸಿರಿಗೆ ತಿರುಗಿಬಿಡುತ್ತವಂತೆ!

ಈ ಜಾಗಗಳನ್ನು ಎಕರೆಗಟ್ಟಲೆ ಗುತ್ತಿಗೆ ಪಡೆದುಕೊಂಡು, ಹೈನುಗಾರಿಕೆ ಮತ್ತು ಮಾಂಸಕ್ಕಾಗಿ ಹಸುಗಳನ್ನು ಸಾಕುತ್ತಾರೆ. ಜನವಸತಿ ಇಲ್ಲದಿದ್ದರೂ ವಿದ್ಯುತ್ ಸೌಲಭ್ಯವಿದೆ. ಈ ಹುಲ್ಲುಗಾವಲಿನ ಪುಟ್ಟ-ಪುಟ್ಟ ಗುಡ್ಡಗಳಲ್ಲಿ ಗುಂಪು-ಗುಂಪಾಗಿ ಮೇಯುತ್ತಿರುವ ಹಸುಗಳನ್ನು ಅಲ್ಲಲ್ಲಿ ಕಾಣುತ್ತೇವೆ. ಇವುಗಳ ವಸತಿಗಾಗಿ ಎಕರೆಗಟ್ಟಲೇ ಭೂಮಿಯಲ್ಲಿ ಸೌಕರ್ಯವನ್ನು ಜೊತೆಗೇ ಒಂದು ಡೈರಿಯನ್ನೂ ಮಾಡಿಕೊಂಡಿರುತ್ತಾರೆ.

ಪುಟ್ಟ ಕರುಗಳು ಬಿಸಿಲಿಗೆ ಬಳಲಬಾರದೆಂದು ಒಟ್ಟೊಟ್ಟಿಗೆ ಐವತ್ತು, ಅರವತ್ತು ಸಣ್ಣ ಸಣ್ಣ ನಾಯಿಗೂಡಿಗಿಂತಲೂ ಸ್ವಲ್ಪ ದೊಡ್ಡದಾದ ಗೂಡುಗಳನ್ನು ನಿರ್ಮಿಸಿರುತ್ತಾರೆ. ಪುಟ್ಟ ಪುಟ್ಟ ಟೆಂಟುಗಳಂತೆ ಕಾಣುವ ಈ ಮುದ್ದಾದ ಗೂಡುಗಳ ಕಿಂಡಿಯಿಂದ ಮುಖ ತೋರುತ್ತಾ ನಿಂತಿರುವ ಕರುಗಳನ್ನು ನೋಡುವುದೇ ಒಂದು ಚಂದ. ಹಾಲು ಹಿಂಡುವ ಸಮಯಕ್ಕೆ ಎಲ್ಲ ಹಸುಗಳನ್ನು ಸಾಲಾಗಿ ಕರೆದುಕೊಂಡು ಡೈರಿಯ ಕಡೆ ಸಾಗುತ್ತಾರೆ. ಸರತಿಯ ಸಾಲಿನಲ್ಲಿ ಅವು ಸಾಗುವ ದೃಶ್ಯ ನೋಡಲು ಒಂದು ಮೋಜು.

ಇವುಗಳನ್ನೆಲ್ಲಾ ದಾಟಿಕೊಂಡು ಮುಂದೆ ಸಾಗಿದರೆ, ರಸ್ತೆಯ ಒಂದು ಬದಿಯಲ್ಲಿ ಸಮುದ್ರ ಕಾಣಸಿಗುತ್ತದೆ. ನೋಡನೋಡುತ್ತಲೇ ಎತ್ತರದಲ್ಲಿರುವ ಗಮ್ಯ ಸ್ಥಳವನ್ನು ತಲುಪಿ ಬಿಡುತ್ತೇವೆ. ವಾಹನ ನಿಲುಗಡೆಯ ಜಾಗದಿಂದ ಸುಮಾರು ಒಂದು, ಒಂದೂವರೆ ಕಿಲೋ ಮೀಟರ್‌ಗಳಷ್ಟು ದೂರ ನಡಿಗೆಯಲ್ಲಿ ಸಾಗಬೇಕು. ವಾಹನದಿಂದ ಕೆಳಗಿಳಿದೊಡನೆ, ಸಮುದ್ರದ ಮೇಲಿನಿಂದ ಜೋರಾಗಿ ಬೀಸುವ ತಂಪಾದ ಗಾಳಿ ಹಿಡಿದು ಅಲ್ಲಾಡಿಸಿಬಿಡುತ್ತದೆ.

ಅಲೆಗಳು ಬಹಳ ರೌದ್ರವೆಂದೂ, ಕಡಲು ಆಳವೆಂದೂ ತೋರುತ್ತದೆ. ಅಂತೆಯೇ ಇದು ತಿಮಿಂಗಿಲಗಳ ವಾಸಸ್ಥಾನ ಕೂಡ. ಹಾಗಾಗಿ ಇಲ್ಲಿ ಕಾಣುವ ಸಮುದ್ರತೀರದಲ್ಲಿ ಜನಸಂಚಾರವನ್ನು ಕಾಣುವುದಿಲ್ಲ. ಕೆಳಗೆ ಸಮುದ್ರದ ತಡಿಯಿಂದ ಐನೂರು, ಆರುನೂರು ಅಡಿ ಎತ್ತರದಲ್ಲಿ ಸಾಗುತ್ತಿರುವ ನಾವು, ನಮ್ಮ ಕಣ್ಣ ಮುಂದೆ ಮರಳ ತಡಿ, ಅದರ ಮುಂದಿನ ಮಹಾಸಾಗರ, ಎಲ್ಲವೂ ದೇವರು ತನ್ನ ಕುಂಚದಲ್ಲಿ ರಚಿಸಿರುವ ಅದ್ಭುತ ಕಲಾಕೃತಿಯಂತೆ ಕಾಣುತ್ತದೆ!.

ಸಾಗುವ ಹಾದಿಯಲ್ಲಿ ಗಾಳಿಯ ಹೊಡೆತ ಎಷ್ಟೊಂದು ತೀವ್ರವಾಗಿರುತ್ತದೆಂದರೆ ಹಾದಿಯ ಬದಿಯ ಮರಗಳೆಲ್ಲವೂ ಸಮುದ್ರದ ಗಾಳಿಗೆ ಹಿಮ್ಮುಖವಾಗಿ ಬಾಗಿಕೊಂಡು ಬೆಳೆದಿರುತ್ತವೆ. ಮರದ ಕೆಳಗೆ ಸಾಗುವಾಗ ಶೈತ್ಯಾಗಾರದ ಅನುಭವ, ದಾಟಿ ಬಿಸಿಲಿಗೆ ಬಂದರೆ ಅಬ್ಬಾ! ಎನ್ನುವಂತಿರುತ್ತದೆ.

ಹೀಗೇ ಸಾಗುತ್ತಾ ವೀಕ್ಷಣಾ ತಾಣ ದೊರೆಯುತ್ತದೆ. ಇಲ್ಲಿ ಸಮುದ್ರ ಜೀವಿಗಳಿಗೆ ಸಂಬಂಧಪಟ್ಟ ವಸ್ತು ಸಂಗ್ರಹಾಲಯವಿದೆ. ತಿಮಿಂಗಿಲವೊಂದರ ಪಳೆಯುಳಿಕೆ ಇದೆ. ಇದರ ಹಿಂದಿನ ಬದಿಯಲ್ಲಿ ದುಂಡಾಗಿರುವ ವೀಕ್ಷಣಾ ತಾಣದ ಕೇಂದ್ರ ಜಾಗವಿದೆ. ಅಲ್ಲಿ ನಿಂತು ಸುತ್ತಲೂ ಕಾಣುವ ಸಾಗರವನ್ನು ಮನಸಾರ ವೀಕ್ಷಿಸಬಹುದು.

ಟೈಟಾನಿಕ್ ಚಿತ್ರದಲ್ಲಿ ಹಡಗಿನ ತುತ್ತ ತುದಿಯಲ್ಲಿ ನಿಂತು ಕೈ ಚಾಚಿ, ‘ಸುತ್ತಲ ಸಮುದ್ರವೆಲ್ಲಾ ತನ್ನದೇ’ ಎನ್ನುವಂತಹ ಅನುಭವವನ್ನು ಪ್ರವಾಸಿಗ ಇಲ್ಲಿ ಪಡೆದುಕೊಳ್ಳಬಹುದು. ಇಲ್ಲಿಂದ ಕೆಳಗೆ ಸಾಗರಕ್ಕೆ ಇನ್ನೂ ಹತ್ತಿರದಲ್ಲಿ 1870ರಲ್ಲಿ ನಿರ್ಮಿಸಿರುವ ಲೈಟ್‌ಹೌಸ್ ಇದೆ. 1975ರಿಂದ ಅದು ಕಾರ್ಯ ನಿರ್ವಹಿಸುತ್ತಿಲ್ಲ. ಬರಿಯ ಪ್ರೇಕ್ಷಣೀಯ ಸ್ಥಳವಾಗಿದೆ.

ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಗಾಳಿಯು ಅತ್ಯಂತ ವೇಗವಾಗಿ ಬೀಸುತ್ತಿರುವ ದಿನಗಳಲ್ಲಿ ಆ ಜಾಗಕ್ಕೆ ಹೋಗಲು ಅನುಮತಿ ನೀಡುವುದಿಲ್ಲ. ಹೋಗಲು ಅನುಮತಿ ನೀಡುವ ದಿನಗಳಲ್ಲೂ ಹಗುರವಾದ ಟೊಪ್ಪಿ, ಕನ್ನಡಕ, ಕೈಚೀಲ ಇಂಥವು ರಭಸದಿಂದ ಬೀಸುವ ಗಾಳಿಗೆ ಸಮುದ್ರದ ಪಾಲಾಗುವ ಸಂಭವವಿರುತ್ತದೆ. ಆದ್ದರಿಂದ ಅತ್ಯಂತ ಜಾಗರೂಕರಾಗಿಯೇ ಕೆಳಗಿಳಿಯಬೇಕು.

ಪಾಯಿಂಟ್ ರೇಸ್ ವೀಕ್ಷಣಾ ತಾಣದಿಂದ ಕೆಳಗೆ ಕಾಣುತ್ತಿರುವ ಲೈಟ್ ಹೌಸ್

ನಾವು ಭೇಟಿ ನೀಡಿದ ದಿನ ತೀವ್ರವಾದ ಗಾಳಿಯಿದ್ದುದರಿಂದ ನಮಗೆ ಇಳಿಯಲು ಸಾಧ್ಯವಾಗಲಿಲ್ಲ. ಆದರೆ ಕೆಳಗೆ ಇರುವ ಲೈಟ್‌ಹೌಸ್ ಸ್ಪಷ್ಟವಾಗಿ ಕಾಣುತ್ತಿತ್ತು. ಮೇಲಿನಿಂದಲೇ ಟೈಟಾನಿಕ್‌ನ ಅನುಭವವನ್ನು ನೀಡುವ ಈ ಸ್ಥಳ, ಆ ಲೈಟ್‌ಹೌಸ್‌ನ ತುದಿಯಲ್ಲಿ ನಿಂತು ಕೈಚಾಚಿದರೆ ಹೇಗಿರಬಹುದು ಎಂಬ ಕಲ್ಪನೆಯನ್ನಂತೂ ಧಾರಾಳವಾಗಿ ಮಾಡಿಕೊಳ್ಳಬಹುದಿತ್ತು. ಸೂರ್ಯರಶ್ಮಿಗೆ ಫಳಫಳ ಹೊಳೆಯುವ ನೀರಿನ ಅಲೆಗಳು.. ಅನಂತವಾದ ನೀಲಾಕಾಶ.. ಕಾಣುವಷ್ಟೂ ದೂರದ ಸಾಗರ.. ಭೂಮಿಯ ತುಟ್ಟ ತುದಿಯಲ್ಲಿ ‘ನಾನು’ ಎನ್ನುವಂಥ ಒಂದು ಅಸ್ತಿತ್ವ ನಿಂತಿರುವ ಒಂದು ವಿಶಿಷ್ಟ ಅನುಭವವು ಈ ಪಾಯಿಂಟ್ ರೇಸ್ ಭೂಶಿರದಲ್ಲಿ ದೊರೆಯಿತು.

ಇಲ್ಲಿ ಸಾಕಷ್ಟು ಸಮಯವನ್ನು ಕಳೆದ ನಂತರ ವಾಹನ ನಿಲುಗಡೆಯ ತಾಣವನ್ನು ತಲುಪಿದೆವು. ಇಲ್ಲಿಂದ ಬೆಟ್ಟದ ಮೇಲೆ ಇನ್ನೂ ಮುಂದೆ ಸಾಗುವ ದಾರಿ ಕಾಣುತ್ತದೆ. ಶಕ್ತಿಯುಳ್ಳವರು, ಸಾಹಸ ಪ್ರಿಯರು ಇದನ್ನು ಹತ್ತಿ ‘ಇನ್ನೂ ಮೇಲಿನಿಂದ ನೋಡುವ ಅನುಭವವೇ ಬೇರೆ ಲೋಕದ್ದು’ ಎಂದು ಅಲ್ಲಿ ಹೋಗಿ ಬಂದಿರುವ ಅಳಿಯ ಆ ದಿನದ ದೃಶ್ಯವನ್ನು ಮನದಲ್ಲಿ ತರಿಸಿಕೊಂಡು ಹೇಳಿದ್ದು ಅವರ ಕಣ್ಣಿನಲ್ಲಿ ಕಾಣುತ್ತಿದ್ದ ಆ ಕನಸಿನ ಪ್ರಭೆಯಿಂದ ನಮಗೂ ಅರ್ಥವಾಗುವಂತಿತ್ತು. ನಮ್ಮ ಬೊಗಸೆಯಲ್ಲಿ ದಕ್ಕಿದಷ್ಟು ನಮ್ಮ ಪುಣ್ಯ!

ಈ ಜಾಗದಲ್ಲಿ ಹಸಿರು ಪಾಚಿಯ ಬದಲಿಗೆ ಕೇಸರಿ ಬಣ್ಣದ ಪಾಚಿಯು ಅಲ್ಲಲ್ಲಿ ಬೆಳೆದಿದೆ. ಇದು ಇಲ್ಲಿನ ವಿಶೇಷವಾಗಿದ್ದು ಅದರ ಬಗೆಗಿನ ವೈಜ್ಞಾನಿಕ ವಿವರಗಳನ್ನು ಹಾಗೂ ಈ ಜಾಗಕ್ಕೇ ಮೀಸಲಾದ ಕೆಲವು ಸಸ್ಯ ಪ್ರಭೇದಗಳ ಬಗೆಗಿನ ವಿವರಗಳನ್ನು ಇಲ್ಲಿನ ಕೆಲವು ತಿಳುವಳಿಕೆ ಭಿತ್ತಿಗಳಲ್ಲಿ ನೀಡಿದ್ದಾರೆ. ಪ್ರಕೃತಿಯ ವೈಚಿತ್ರಗಳದೆಷ್ಟೋ! ಇದಷ್ಟೇ ಅಲ್ಲದೆ ಇಲ್ಲಿ ಅನೇಕ ಜಾತಿಯ ಸಸ್ಯ ವೈವಿಧ್ಯವನ್ನು ಹಲವು ಬಗೆಯ ಬಣ್ಣ-ಬಣ್ಣದ ಹೂಗಳನ್ನೂ ಕಾಣಬಹುದು.

ಇಲ್ಲಿಂದ ವಾಪಸ್ಸು ಹೊರಟು ‘ಸ್ಟಿನ್ಸನ್’ ಸಮುದ್ರ ತೀರಕ್ಕೆ ಬಂದೆವು. ಇಲ್ಲಿ ಸಾಕಷ್ಟು ಜನ ಕಡಲ ತಡಿಯ ಆಟೋಟಗಳಲ್ಲಿ ತೊಡಗಿಕೊಂಡಿದ್ದರು. ಆದರೆ ಆ ತಣ್ಣನೆಯ ಹೊತ್ತೊಯ್ಯುವ ಗಾಳಿಯಲ್ಲಿ, ಕೊರೆಯುವ ನೀರಿನಲ್ಲಿ ಅವರು ಅದು ಹೇಗೆ ಮುಳುಗೇಳುತ್ತಿದ್ದರೋ, ನಮ್ಮ ಊಹೆಗೂ ನಿಲುಕದ್ದು. ಇಲ್ಲಿನವರಿಗೆ ಇದು ಅಭ್ಯಾಸವಾಗಿ ಹೋಗಿದೆಯೋ ಏನೋ.. ಹೊರಗೆ ತೀವ್ರವಾಗಿ ಗಾಳಿಯಿದ್ದುದರಿಂದ ಕಾರಿನಲ್ಲಿ ಕುಳಿತೇ ನಾವು ತಂದಿದ್ದ ಮಾವಿನಕಾಯಿಯ ಚಿತ್ರಾನ್ನ, ಮೊಸರನ್ನದ ಬುತ್ತಿಯನ್ನು ಬಿಚ್ಚಿದರೆ, ಸಾಕಷ್ಟು ಹಸಿದಿದ್ದ ನಮಗೆ ಅದು ಅಮೃತ ಸಮಾನವಾಗಿ ತೋರಿದ್ದರಲ್ಲಿ ಅಚ್ಚರಿಯೇನು! ತಂದಿದ್ದ ಡಬ್ಬಿಯನ್ನು ಬಳಿದು ಹಾಕಿಕೊಂಡು ಸವಿದೆವು.

ವೈಜ್ಞಾನಿಕ ಸಿದ್ಧಾಂತಗಳಿಗೆ ಸವಾಲೊಡ್ಡುವ ಗೂಢತೆಗಳ ನೆಲೆ

ಸಾಂತಾಕ್ರೂಸ್‌ನ ಬಳಿ ದಟ್ಟ ಅರಣ್ಯದ ನಡುವೆ ‘ಮಿಸ್ಟರಿ ಸ್ಪಾಟ್’ ಎಂದು ಕರೆಯುವ ಒಂದು ಗೂಢತೆಗಳ ಆಗರವಾದ ನೆಲೆಯಿದೆ. ಇಲ್ಲಿಗೆ ಹೋಗುವ ಹಾದಿಯೇ ಬಲು ಸೊಗಸು. ಎತ್ತರೆತ್ತರವಾದ ಮರಗಳ ಕಾಡು, ನಿರ್ಜನವಾದ ಪ್ರದೇಶ, ನಮ್ಮ ಮಲೆನಾಡಿನಲ್ಲಿ ಸಾಗುವಂತಹ ಪಯಣ. ಈ ಸ್ಥಳವನ್ನು ತಲುಪಿದಾಗ ಮಾತ್ರ, ಅಲ್ಲಿ ನೋಡಲು ಬಂದಿರುವ ಯಾತ್ರಿಕರು ಹಾಗೂ ಅವರ ವಾಹನಗಳು ಕಾಣಸಿಗುವುದು.

ಮಿಸ್ಟರಿ ಸ್ಪಾಟ್‌ನ ಪ್ರವೇಶ ದ್ವಾರ

ಇದೊಂದು ದೃಷ್ಟಿ ಭ್ರಮೆಯನ್ನುಂಟು ಮಾಡುತ್ತಾ, ಭೌತಶಾಸ್ತ್ರದ ಸಿದ್ಧಾಂತಗಳಿಗೆ ಸವಾಲೊಡ್ಡುತ್ತಿರುವ ಪ್ರವಾಸಿ ತಾಣ. ಜಾರ್ಜ್ ಪ್ರಾಥರ್ ಎಂಬವನು 1939ರಲ್ಲಿ ಈ ಜಾಗವನ್ನು ಕಂಡುಹಿಡಿದು, ಜಗತ್ತಿಗೆ ತೋರಿದನಂತೆ. ಇಪ್ಪತ್ತು ಜನರ ಗುಂಪುಗಳಲ್ಲಿ ನಾಲ್ಕು ಹಂತಗಳಲ್ಲಿ ಈ ನಿಗೂಢ ನೆಲೆಯನ್ನು ತೋರಿಸಲು ಪ್ರದರ್ಶಕರು ಕರೆದೊಯ್ಯುತ್ತಾರೆ.

ಆರಂಭದ ಮೊದಲ ಆವರಣದ ಒಳಹೊಗುತ್ತಿದ್ದಂತೆಯೇ, ಎಲ್ಲರನ್ನೂ ಗುಂಪುಗೂಡಿಸಿಕೊಂಡು ಇಲ್ಲಿನ ಸ್ಥಳ ಪುರಾಣವನ್ನು ಬಿತ್ತರಿಸುತ್ತಾ, ಮೊದಲ ಪ್ರಾತ್ಯಕ್ಷಿಕೆಯನ್ನು ತೋರುತ್ತಾರೆ. ಒಂದು ಕೊಳವೆಯಲ್ಲಿ ಪೂರ ನೀರನ್ನು ತುಂಬಿ, ಅದರಲ್ಲಿ ಒಂದೇ ಒಂದು ಗುಳ್ಳೆಯಷ್ಟು ಜಾಗವನ್ನು ಖಾಲಿ ಬಿಟ್ಟಿದ್ದಾಗ, ಆ ಕೊಳವೆಯನ್ನು ಭೂಮಿಗೆ ಸಮಾನಾಂತರವಾಗಿ ಇಟ್ಟುಕೊಂಡಾಗ ಮಾತ್ರ, ಆ ಮುತ್ತಿನಂತ ಗುಳ್ಳೆ ಕೊಳವೆಯ ಮಧ್ಯಭಾಗದಲ್ಲಿ ನಿಲ್ಲುತ್ತದೆ ಎನ್ನುವುದು ಭೌತಶಾಸ್ತ್ರದ ಸಿದ್ಧಾಂತ.

ಆದರೆ ಇಲ್ಲಿ, ಸಮಾನಾಂತರಕ್ಕೆ ಬದಲಾಗಿ, ಆ ಕೊಳವೆಯನ್ನು ೩೦ ಡಿಗ್ರಿಗಳಷ್ಟು ಬಾಗಿಸಿ ಇಟ್ಟಾಗ ಆ ಗುಳ್ಳೆ ಕೊಳವೆಯ ಮಧ್ಯದಲ್ಲಿ ಉಳಿಯುತ್ತದೆ. ಆ ಕೊಳವೆಯನ್ನು ಎಲ್ಲ ಕೋನಗಳಲ್ಲೂ ಬಾಗಿಸಿ ‘ಅದರಲ್ಲಿ ಯಾವ ದೋಷವೂ ಇಲ್ಲ’ ಎನ್ನುವುದನ್ನು ಪ್ರದರ್ಶಕರು ಸಾಬೀತು ಮಾಡುತ್ತಾರೆ.

ಎರಡನೆಯ ಹಂತಕ್ಕೆ ಒಂದಷ್ಟು ಮೆಟ್ಟಿಲುಗಳನ್ನು ಹತ್ತಿಕೊಂಡು ಮೇಲಕ್ಕೆ ಸಾಗಬೇಕು. ಸಾಗುವ ಹಾದಿಯಲ್ಲಿ ಬೆರಳುದ್ದದ ಬಾಳೆಹಣ್ಣಿನ ಆಕಾರದಲ್ಲಿರುವ ಕೆಲವು ವಿಚಿತ್ರ ಹುಳಗಳು ಅಲ್ಲಲ್ಲಿ ಕಾಣಸಿಗುತ್ತವೆ. ಮೇಲ್ನೋಟಕ್ಕೆ ಇವುಗಳು ಹುಳಗಳೆಂದು ಅನ್ನಿಸುವುದೇ ಇಲ್ಲ. ಹತ್ತಿರದಿಂದ ನೋಡಿದಾಗ ಮಾತ್ರ ಅವುಗಳ ಕಾಲು, ಮೂತಿ, ಮೀಸೆ ಎಲ್ಲವೂ ತೋರುತ್ತವೆ. ಇದನ್ನು ದಾಟಿಕೊಂಡು ಎರಡನೇ ವಿಸ್ಮಯದ ಮರದ ಮನೆಯ ಹೊರ ಆವರಣದಲ್ಲಿ ಇನ್ನೆರಡು ಪ್ರಾತ್ಯಕ್ಷಿಕೆಗಳನ್ನು ನೋಡಬಹುದು.

ಪ್ರದರ್ಶಕ ಒಂದು ಚೆಂಡನ್ನು ಜಾರುಮಣೆಯ ಮೇಲಿನಿಂದ ಜಾರಿಬಿಟ್ಟಾಗ, ಗುರುತ್ವಾಕರ್ಷಣ ಶಕ್ತಿಯ ಸಿದ್ಧಾಂತದ ಪ್ರಕಾರ, ಅದು ಕೆಳಮುಖವಾಗಿ ಬೀಳಬೇಕು. ಆದರೆ, ಇಲ್ಲಿ ಅದು ಮೇಲ್ಮುಖವಾಗಿ ಚಲಿಸಿ ಅಲ್ಲಿಂದ ಹೊರಬೀಳುತ್ತದೆ. ಅದೇ ಜಾರುಮಣೆಯ ಮೇಲೆ ನೀರನ್ನು ಸುರಿದಾಗಲೂ, ಅದೂ ಚೆಂಡಿನಂತೆಯೇ ಮೇಲ್ಮುಖವಾಗಿ ಚಲಿಸಿ ಹೊರಬೀಳುತ್ತದೆ.

ಮಿಸ್ಟರಿ ಸ್ಪಾಟ್‌ನ ಮನೆಯಲ್ಲಿ ಪ್ರಾತ್ಯಕ್ಷಿಕೆ ನೀಡುತ್ತಿರುವವಳೊಂದಿಗೆ ಮಿಕ್ಕವರೂ ವಾಲಿಕೊಂಡೇ ನಿಂತಿರುವುದು.

ಈ ವಿಚಿತ್ರಕ್ಕೆ ಅಚ್ಚರಿ ಪಡುತ್ತಾ ಆ ಮರದ ಮನೆಯ ಮೊದಲ ಕೋಣೆಗೆ ಹೋದರೆ, ಅಲ್ಲಿ ನಿಂತ ಪ್ರೇಕ್ಷಕರೆಲ್ಲಾ ಅರಿವಿಲ್ಲದೇ 17 ಡಿಗ್ರಿಗಳಷ್ಟು ವಾಲಿಕೊಂಡು ನಿಂತಿರುತ್ತಾರೆ; ಅಡ್ಡಾದಿಡ್ಡಿಯಾಗಿ ನಡೆಯುತ್ತಾರೆ; ಆದರೂ ಬೀಳುವುದಿಲ್ಲ. ಪ್ರದರ್ಶಕ ಅಲ್ಲಿರುವ ಒಂದು ಮೇಜಿನ ತುತ್ತ ತುದಿಯಲ್ಲಿ ನಿಂತಿದ್ದಾಗ ಅವನ ದೇಹ ಮೇಜಿನಿಂದ ಹೊರಗೆ ವಾಲಿರುವುದನ್ನು ಕಾಣಬಹುದು.

ಹಲವು ಪ್ರೇಕ್ಷಕರು ಈ ಮೇಜಿನ ತುದಿಯಲ್ಲಿ ಟೈಟಾನಿಕ್ ಭಂಗಿಯಲ್ಲಿ ನಿಂತು ಫೋಟೋಗಳನ್ನು ತೆಗಿಸಿಕೊಳ್ಳುತ್ತಾರೆ. ಅಡ್ಡಾದಿಡ್ಡಿಯಾಗಿ ನಡೆಯುತ್ತಾ ಬೀಳದಿರುವ ವಿಸ್ಮಯಕ್ಕೆ ಬೆರಗಾಗುತ್ತಾ ಮುಂದಿನ ಕೋಣೆಯತ್ತ ನಡೆಯುತ್ತಾರೆ.

ಆ ಕೋಣೆಯಲ್ಲಿ ಒಂದು ಮೇಜಿನ ಮೇಲೆ ತಗುಲಿ ಹಾಕಿರುವ ಭಾರವಾದ ಪೆಂಡುಲಮ್ ಭೂಮಿಗೆ ನೇರವಾಗಿ ನಿಲ್ಲದೆ ಒಂದು ಕೋನದಲ್ಲಿ ನಿಂತಿರುತ್ತದೆ. ಅದನ್ನು ತೂಗಾಡಿಸಿ ಬಿಟ್ಟರೂ, ಮತ್ತೆ ಬಂದು ಅದೇ ಕೋನದಲ್ಲಿ ನಿಲ್ಲುತ್ತದೆ. ಪ್ರೇಕ್ಷಕರ ಪ್ರಯೋಗಕ್ಕಾಗಿ ಅಲ್ಲಿ ಗೋಡೆಯ ಮೇಲೆ ಎರಡು ಹಲಗೆಗಳನ್ನು ಹುಗಿದಿದ್ದಾರೆ. ಅದರ ಮೇಲೆ ನಿಂತ ಪ್ರೇಕ್ಷಕ ಅದೇ ಕೋನದಲ್ಲಿ ಬಾಗಿ ನಿಂತಿರುವ ಅನುಭವವಾಗುತ್ತದೆ.

ಈ ವಿಚಿತ್ರಗಳನ್ನು ನೋಡುತ್ತಾ ಕೆಲವರಿಗೆ ತಲೆಸುತ್ತು, ವಾಂತಿ ಬರುವ ಹಾಗಾಗುವುದೂ ಉಂಟು.  ಆದರೆ ಹೇಗೆ ಹೇಗೋ ವಾಲಾಡುತ್ತಿದ್ದರೂ, ನಡೆಯುತ್ತಿದ್ದರೂ, ಕೆಳಗೆ ಬೀಳುವುದಿಲ್ಲವೆನ್ನುವುದು ಮಾತ್ರಾ ಒಂದು ಅಚ್ಚರಿಯೇ!.

ಅಲ್ಲಿಂದ ಹೊರಬಂದು ಮನೆಯ ಹಿಂದಿನ ಹೊರ ಆವರಣಕ್ಕೆ ಬಂದರೆ, ಅಲ್ಲಿ ದೃಷ್ಟಿ ಭ್ರಮೆಯ ಪ್ರಾತ್ಯಕ್ಷಿಕೆಯನ್ನು ನೋಡಬಹುದು. ಒಂದೊಂದೇ ಅಂಗುಲ ವ್ಯತ್ಯಾಸವಿರುವ ಐವರನ್ನು ಕ್ರಮ ಪ್ರಕಾರವಾಗಿ ಒಬ್ಬರ ಪಕ್ಕ ಒಬ್ಬರನ್ನು ಒಂದು ಕಡೆಯಿಂದ ನಿಲ್ಲಿಸಿದಾಗ ಅವರ ನಡುವಿನ ಎತ್ತರದ ಅಂತರ ಬಹಳ ಕಡಿಮೆಯಿರುವಂತೆ, ಅದೇ ವಿರುದ್ಧ ಕ್ರಮದಲ್ಲಿ ನಿಲ್ಲಿಸಿದಾಗ ಅವರ ಎತ್ತರದ ಅಂತರ ತುಂಬಾ ಹೆಚ್ಚಿರುವಂತೆ ಕಾಣುತ್ತದೆ.

ಕ್ರಮದಲ್ಲಲ್ಲದೇ, ಒಬ್ಬರ ಪಕ್ಕ ಒಬ್ಬರನ್ನು ನಿಲ್ಲಿಸಿದಾಗ ಅವರ ನೈಜ ಎತ್ತರಕ್ಕಿಂತ ಕಡಿಮೆ ಇಲ್ಲವೇ ಎತ್ತರ ಇರುವಂತೆ ಭಾಸವಾಗುತ್ತದೆ. ಇದೇನು ಕಣ್ಕಟ್ಟೋ ಎಂದುಕೊಳ್ಳುತ್ತಾ ಅಲ್ಲಿಂದ ಹೊರಬಿದ್ದರೆ ಮುಂದಿನ ತಾಣಕ್ಕೆ ಕೆಲವು ಮೆಟ್ಟಿಲುಗಳನ್ನು ಇಳಿಯಬೇಕು.

ಈ ತಾಣದಲ್ಲಿ ಪ್ರದರ್ಶಕ ಮಧ್ಯದಲ್ಲಿ ನಿಂತು ಇಬ್ಬರು ಬೇರೆ-ಬೇರೆ ಎತ್ತರದ ಮಕ್ಕಳನ್ನು ಒಂದು ರೇಖೆಯ ಎರಡು ತುದಿಗಳಲ್ಲಿ ನಿಲ್ಲಿಸಿ, ಅಲ್ಲಿಂದ ಸಮನಾಂತರ ತ್ರಿಕೋನದ ಮೇಲಿನ ತುದಿಯಲ್ಲಿ ಇನ್ನೊಬ್ಬ ಉದ್ದದ ಹುಡುಗನನ್ನು ನಿಲ್ಲಿಸಿ, ಅವನು ನೋಡಿದಾಗ ಇಬ್ಬರ ಎತ್ತರವೆಷ್ಟಿದೆ ಎಂದು ತಿಳಿಸಲು ಅವನ ಕೈಯನ್ನು ಅವರ ತಲೆಯ ನೇರಕ್ಕೆ ಇರಿಸಿಕೊಳ್ಳಲು ಸೂಚಿಸುತ್ತಾನೆ.

ಹಾಗೆ ಅವನು ಅವರ ತಲೆಯ ನೇರಕ್ಕೆ ತನ್ನ ಕೈಗಳನ್ನು ಚಾಚಿದಾಗ ಅವನ ಎರಡೂ ಕೈಗಳ ನಡುವಿನ ಎತ್ತರದ ಅಂತರವನ್ನು ಅಳೆದು ತೋರಿಸುತ್ತಾನೆ. ನಂತರ ಇಬ್ಬರು ಮಕ್ಕಳನ್ನೂ ಪಕ್ಕ ಪಕ್ಕದಲ್ಲಿ ನಿಲ್ಲಿಸಿ ಅವರ ನಡುವಿನ ಅಂತರವನ್ನು ಅಳೆದಾಗ ಸುಮಾರು ಆರು ಇಂಚುಗಳಷ್ಟು ವ್ಯತ್ಯಾಸ ಕಂಡುಬರುತ್ತದೆ.

ಈ ನಿಗೂಢತೆಯ ರಹಸ್ಯವನ್ನು ಭೇದಿಸಲು ಹಲವು ವಿಜ್ಞಾನಿಗಳು, ಮನಃಶ್ಯಾಸ್ತ್ರಜ್ಞರು ಪ್ರಯತ್ನಿಸಿದ್ದಾರೆ. ಮನೆಯೇ 20 ಡಿಗ್ರಿಗಳಷ್ಟು ವಾಲಿದೆ; ಅದರಿಂದ ಈ ಅನುಭವವಾಗುತ್ತಿರಬಹುದು ಎಂದಿದ್ದಾರೆ. ಹಾಗೆಯೇ ದೃಷ್ಟಿ ಭ್ರಮೆಗೂ ಹಲವು ಕಾರಣಗಳನ್ನು ನೀಡುತ್ತಾರೆ.

ಇಲ್ಲಿನ ಪ್ರದರ್ಶಕರ ಪ್ರಕಾರ, ಒಂದಾನೊಂದು ಕಾಲದಲ್ಲಿ, ಈ ಜಾಗದಲ್ಲಿ ಆಕಾಶದಿಂದ ಬಿದ್ದ ಉಲ್ಕಾಪಾತದಿಂದಾಗಿ, ಇಲ್ಲಿ ಒಂದು ನಿಗೂಢ ವೃತ್ತ ಸೃಷ್ಟಿಯಾಗಿದೆ. ಅದರಿಂದಲೇ ಈ ನಿರ್ದಿಷ್ಟ ಜಾಗದಲ್ಲಿ ಮಾತ್ರ ಈ ಅನುಭವ ಸಾಧ್ಯವಾಗುತ್ತದೆ. ಯಾವ ಸಿದ್ಧಾಂತ ಹೇಗೇ ಇರಲಿ, ಇಲ್ಲಿ ನೋಡುವಷ್ಟು ಕಾಲವೂ ಒಂದಷ್ಟು ಮನರಂಜನೆಗಂತೂ ಏನೂ ಕೊರತೆಯಿಲ್ಲ.

ಶೂನ್ಯದಿಂದ ಸೃಷ್ಟಿ ಸಾಧ್ಯವಿಲ್ಲ ಎಂದು ತಿಳಿದಿದ್ದರೂ, ಇಂದ್ರಜಾಲ ಪರಿಣಿತನೊಬ್ಬನು ಗಾಳಿಯಲ್ಲಿ ಕೈಯನ್ನು ಹೀಗಾಡಿಸಿ ಒಂದು ಜಿಲೇಬಿಯನ್ನೋ, ಮೈಸೂರು ಪಾಕನ್ನೋ ಕೊಟ್ಟರೆ `ಆಹಾ’ ಎಂದು ಚಪ್ಪಾಳೆ ತಟ್ಟುತ್ತಾ ಅದನ್ನು ಸವಿಯುವುದಿಲ್ಲವೆ! ಕೆಲವೊಂದು ವಿಷಯಗಳನ್ನು ಕೆದಕುತ್ತಾ, ಮೂಲಕ್ಕೆ ಹೋದರೆ ಆ ವಿಷಯದ ಸ್ವಾರಸ್ಯವೇ ಹಾಳಾಗಿ ಹೋಗುತ್ತದೆ. ಒಂದು ವಿಶಿಷ್ಟ ಅನುಭವವನ್ನು ಪಡೆಯಲು ಬಯಸುವವರು, ಅಲ್ಲಿ ನೋಡುವ ವಿಷಯಗಳಲ್ಲಿ ಮನರಂಜನೆಯ ಉದ್ದೇಶವಿರುವವರು, ಜಾಸ್ತಿ ತಲೆ ಖರ್ಚು ಮಾಡದೆ, ಸಂತೋಷವಾಗಿ ಹೋಗಿ, ನಗುಮುಖದಿಂದ ಹೊರಬರಬಹುದು.

ಸಾಂತಾಕ್ರುಜ಼್ ಕಡಲತೀರ ಈ ಮಿಸ್ಟರಿ ಸ್ಪಾಟ್‌ನಿಂದ ಹತ್ತಿರವಿದ್ದುದರಿಂದ ಅಲ್ಲಿಂದ ಹೊರಬಂದವರು ಸಾಗರ ತೀರಕ್ಕೆ ಹೋದೆವು. ಸಾಂತಾಕ್ರುಜ಼್ ವಿದ್ಯಾಭ್ಯಾಸಕ್ಕೆ ಆದ್ಯತೆಯಿರುವ ಕೇಂದ್ರ. ಇಲ್ಲಿ ಹಲವು ವಿದ್ಯಾಲಯಗಳು, ಮತ್ತು ವಿಶ್ವವಿದ್ಯಾಲಯ ಕೂಡಾ ಇದೆ.  ಹಾಗಾಗಿ ಇಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇಲ್ಲಿನ ಮೂರ‍್ನಾಲ್ಕು ಮೈಲು ಉದ್ದದ ಕಡಲ ತೀರದಲ್ಲಿ ವೇಗವಾಗಿ ಸೈಕಲ್ಲಿನಲ್ಲಿ ಚಲಿಸುತ್ತಾ ಮೋಜನ್ನು ಅನುಭವಿಸುವುದು ಹಲವರ ಹವ್ಯಾಸ.

ಇಡೀ ಕುಟುಂಬವೇ ಒಬ್ಬೊಬ್ಬರಿಗೊಂದೊಂದು ಸೈಕಲ್ಲನ್ನು ತಂದುಕೊಂಡು ಈ ಮೋಜನ್ನು ಅನುಭವಿಸುವುದು ಇಲ್ಲಿ ಸಾಮಾನ್ಯವಾಗಿ ಕಂಡುಬರುವ ದೃಶ್ಯ. ನಾವೇನು ಕಮ್ಮಿ?! ಸೈಕಲ್ ತುಳಿಯುವ ಕಷ್ಟ ಪಡದೆ ಕಾರಿನಲ್ಲಿ ಕುಳಿತು ಈ ಹಾದಿಯಲ್ಲಿ ಸಾಗುತ್ತಾ ಇದೇ ಮೋಜನ್ನು ಪಡೆದೆವು. ಸಮುದ್ರ ತೀರದಲ್ಲಿ ಒಂದಷ್ಟು ಕಾಲ ಕಳೆದು ಮನೆಕಡೆ ಸಾಗಿದೆವು.

(ಮುಂದುವರಿಯುವುದು)

‍ಲೇಖಕರು avadhi

October 14, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: