ಕಥೆ- ಸೂಳೇಬಾವಿ ಕ್ಯಾಂಪು- ಏನಾಯ್ತು ಸಾರಾ, ಹುಲಿಯೇ?

ಪುಟ್ಟರಾಧ್ಯ

(ನಿನ್ನೆಯಿಂದ)

2

ಇವಳ ಹಠಾತ್ ಕೂಗಿಗೆ ಶಂಕರ ಬೆಚ್ಚಿ ಕೇಳಿದ ” ಏನಾಯ್ತು ಸಾರಾ, ಹುಲಿಯೇ? ” ಸಾರಾ ಅವಳು ಹೋಗಿದ್ದ ಕಡೆ ಬೆಟ್ಟು ಮಾಡಿದಳು. ಶಂಕರ ಠಕ್ಕನೆ ರಿವಾಲ್ವರ್ ಈಚೆ ತೆಗೆದ, ಆದರೆ ಅವನಿಗೆ ಅಲ್ಲೇನು ಕಾಣಲಿಲ್ಲ ಅವಳನ್ನು ಹಿಡಿದು ಹಾಗೆಯೇ ಅವಳು ಹೋಗಿದ್ದ ಕಡೆ ಮುಂದೆ ನಡೆದ. ಅಲ್ಲಿ ಬಿದ್ದಿದ್ದ ದೇಹವನ್ನು ನೋಡಿ ಶಂಕರನಿಗೆ ಎದೆ ಒಡೆದು ಹೋಯಿತು.

ಬೆತ್ತಲೆ ದೇಹದ ಮುಖದಿಂದ ಹಿಡಿದು ಕಾಲಿನವರೆಗೂ ಮೂರು ಗೆರೆಗಳು ಉಗುರಿನಲ್ಲಿ ಕಿತ್ತಿರುವಂತೆ ಮೂಡಿದ್ದವು. ರಕ್ತ ತುಂಬಾ ಸುರಿದು ದೇಹ ಮಳೆಯಲ್ಲಿ ನೆನೆದು ಹಳಸುತ್ತಿತ್ತು. ಬರೀ ಹೆಣವಾಗಿದ್ದರೆ ಅಷ್ಟು ಭಯವಾಗುತ್ತಿರಲಿಲ್ಲವೇನೋ ಆದರೆ ಯಾರೋ ವಿಚಿತ್ರವಾಗಿ ಕೊಲೆ ಮಾಡಿದ್ದು ಎದ್ದು ಕಾಣುತ್ತಿತ್ತು.  ಸಾಮಾನ್ಯವಾಗಿ ಪ್ರಾಣಿ ಯಾವುದಾದರೂ ಒಂದು ಅಂಗವನ್ನು ಕಿತ್ತು ತಿನ್ನುವುದು ಸಹಜ, ಜೊತೆಗೆ ಮನುಷ್ಯರಾದರು ಈ ರೀತಿ ಕೊಲೆಯನ್ನು ಮಾಡಿರುವುದಿಲ್ಲವೆಂಬುದನ್ನು ಯೋಚಿಸಿದ.

ಬೆಳಗ್ಗೆ ಸಾರಾ ಹೇಳಿದ್ದ ಹಳೆಯ ಕಥೆಗಳು ನೆನಪಾಗತೊಡಗಿದವು. ಸಾರಾಳಿಗೆ ಎದೆ ನಡುಗುತ್ತಿತ್ತು. ಸಮಯ ಆಗಾಗಲೇ ರಾತ್ರಿ ಒಂದು ಘಂಟೆಯ ಆಸು ಪಾಸಾಗಿದೆ.  ತಮ್ಮಯ್ಯ ಮತ್ತು ವೀರಣ್ಣ ನಿದ್ರೆಯಲ್ಲಿದ್ದಾರೆ, ಸಾರಾ ಬೆಚ್ಚಿ ಹೋಗಿದ್ದಾಳೆ. ಯಾವುದೇ ಪ್ರಾಣಿಯ ಗುರುತುಗಳು ಸಹ ಕಾಣುತ್ತಿಲ್ಲ. ಮನುಷ್ಯರ ಕುರುಹುಗಳು ಕಾಣಿಸಲಿಲ್ಲ. ಕಾರಣ, ಈ ಸೂಳೇಬಾವಿ ಕ್ಯಾಂಪಿಗೆ ಮನುಷ್ಯರು ಬರುವುದನ್ನು ಬಿಟ್ಟು ಸುಮಾರು ಐದಾರು ವರ್ಷಗಳಾದರೂ ಆಗಿರಬೇಕು. ಹಾಡಿ  ಜನರು ಕೂಡ ತಮ್ಮ ದೇವರ ಒಕ್ಕಲಾಗಿದೆ ಎಂದು ಯಾವುದೇ ಕಾರಣಕ್ಕೆ ಅತ್ತ ಕಡೆ ಸುಳಿದಿರಲಾರರು.

ಅಂತರಸಂತೆ ಕಾಡಿನಲ್ಲಿ ಕಾಡಿನ ಅಧಿಕಾರಿಗಳ ಗಮನವಿಲ್ಲದೇ ಯಾವುದೇ ಕಾರಣಕ್ಕೂ ಬೇರೆ ಜನರಿಗೆ ಹೋಗಲು ಅವಕಾಶವಿರಲಿಲ್ಲ. ಈ ದೆವ್ವ-ಭೂತದ ಕಥೆಗಳಿಂದ ಯಾವುದೇ ಅಧಿಕಾರಿಗಳು ಇತ್ತ ಬಂದಿರುವಂತಹ ಒಂದು ಸೂಚನೆಗಳು ಬರುವ ದಾರಿಯಲ್ಲಿ ಕಂಡಿರಲಿಲ್ಲ. ಕಾರಣ ರಸ್ತೆಯಲ್ಲಿ ಅನಾಥ ಹುಲ್ಲು ಬೆಳೆದಿದ್ದು ದಾರಿ ಮುಚ್ಚಿಹೋಗಿತ್ತು. ಆದರೂ ತಮ್ಮಯ್ಯನ ಅನುಭವದ ಮೇರೆಗೆ ಈ ಕ್ಯಾಂಪ್ ತಲುಪಿದ್ದರು.

ಇದನ್ನೆಲ್ಲ ನೆನೆದ ಶಂಕರನಿಗೆ ಇವರೆಲ್ಲರನ್ನೂ ಕರೆದುಕೊಂಡು ಬಂದಿದ್ದು ತಪ್ಪಾಯಿತೇನೋ ಎಂದೆನಿಸಿತು.  ರಿವಾಲ್ವರ್ ಅನ್ನು ಹಾಗೆಯೇ ಹಿಡಿದು ಸಾರಾಳ  ಕೈಯನ್ನು ಇವನ ಎಡಗೈನಲ್ಲಿ ಗಟ್ಟಿ ಹಿಡಿದು, ಹೋದ ದಾರಿಯ ಕಡೆ ತೋರಿಸುತ್ತಾ ಕ್ಯಾಂಪಿನ ಕಡೆ ನಡೆದ. ಎಷ್ಟೇ ಭಯವಾಗಿದ್ದರೂ ಶಂಕರನನ್ನು ಭೇದಿಸುವುದು ಅಷ್ಟು ಸುಲಭವಿರಲಿಲ್ಲ.

ಕ್ಯಾಂಪಿನ ಬಳಿ ಬಂದು ಬಾಗಿಲನ್ನು ಭದ್ರಪಡಿಸಿಕೊಂಡ. ಕಾರಣ ಈ ಸಮಯದಲ್ಲಿ ಆ ದೇಹ ಪರೀಕ್ಷಿಸುವುದಾಗಲಿ, ಹೆಚ್ಚಿನ ಪತ್ತೆದಾರಿಕೆ ಮಾಡುವುದಾಗಲಿ ಅವನಿಗೆ ಸರಿಯೆನಿಸಲಿಲ್ಲ. ಸದಾ ವಾಸನೆಗೆ ಯಾವುದಾದರೂ ಪ್ರಾಣಿಗಳು ಬಂದಾಗ ಅವುಗಳ ಜೊತೆ ಪರದಾಡುವುದು ಸುಲಭದ ಮಾತಲ್ಲ. ಸಾರಾ ಮತ್ತೆ ಹೇಳಿದಳು “ನನಗೆ ಏಕೋ ಭಯ ಆಗ್ತಾ ಇದೆ ಸಾರ್. ನಾನು ಕೇಳಿದ ಕಥೆಗಳಂತೆ ಎಲ್ಲ ವಿಚಿತ್ರವಾಗೇ ನಡೀತಿದೆ. ಮನುಷ್ಯ ಅಥವಾ ಪ್ರಾಣಿಗಳು ಆ ಕೃತ್ಯ  ಮಾಡಿರಲಾರರು”.

ಶಂಕರ ನುಡಿದ “ಹೆದರುವುದೇನಿಲ್ಲ ಸಾರಾ,  ನೀವು ಮಲಗಿ ನಾನು ಎದ್ದಿರುತ್ತೇನೆ ಸ್ವಲ್ಪ ಬೆಳಗಾದೊಡನೆ ಇಲ್ಲಿಂದ ಹೊರಟು ಬಿಡೋಣ”. ಸಾರಾ ಸ್ವಲ್ಪ ಹೊತ್ತು ಅಲ್ಲಿಯೇ ಕುಳಿತು ಯೋಚಿಸತೊಡಗಿದಳು. ಶಂಕರ ಬೆಳಿಗ್ಗೆಯಿಂದ ನಡೆದಿದ್ದ ಘಟನೆಗಳನ್ನು ಶುರುವಿನಿಂದ ಓಡಿಸಲು ಯತ್ನಿಸಿದ. ಎಷ್ಟು ಯೋಚಿಸಿದರು ಆ ದೇಹವೇ ಮುಂದೆ ಎದ್ದು ಬಂದಾಂತಾಗುತ್ತಿತ್ತು.

ಸಾರಾ ರೂಮಿನಲ್ಲೇ ಇದ್ದ ಕಟ್ಟೆಯ ಮೇಲೆ ಹೊದಿಕೆಯನ್ನು ಪೂರ್ಣ ಹೊದ್ದು ಮಲಗಲು ಯತ್ನಿಸುತ್ತಿದ್ದಳು. ನಿದ್ದೆ ಹತ್ತದೆ ಹೋದಾಗ ತಮ್ಮಯ್ಯನ ಬಾಟಲಿನಿಂದ ಗಟಗಟನೆ ಸಾರಾಯಿ ಇಳಿಸಿದ್ದಳು. ಶಂಕರನಿಗೆ ಆಶ್ಚರ್ಯವೆನಿಸಲಿಲ್ಲ ಕಾರಣ, ಅಲ್ಲಿ ಆಗಿದ್ದ ಭಯಕ್ಕೆ ನಶೆಯಷ್ಟೇ ಮದ್ದು, ಎಚ್ಚರವಿದ್ದಷ್ಟು ಪೀಕಲಾಟ ತಪ್ಪಿದ್ದಲ್ಲ ಆದರೆ ಶಂಕರನಿಗೆ ಮೈಮರೆತು ಮಲಗುವ ಉದ್ದೇಶ ಮಾತ್ರ ಇರಲಿಲ್ಲ.

ಸ್ವಲ್ಪ ಹೊತ್ತು ಓಡಾಡಿದ ಶಂಕರ, ಅಲ್ಲಿಯೇ ಕಿಟಕಿಯ ಬಳಿ ಕುಳಿತ. ಅವನ ಹಿಂದಕ್ಕೆ ಆ ದೇಹವಿದೆ, ಕಿಟಕಿಯಿಂದ ಕೈ ಯಾವುದಾದರೂ ಒಳಗೆ ಬಂದರೆ ಜೋರಾಗಿ ಕೂಗಿ ಬಿಡೋಣ ಎಂದು ಯೋಚಿಸುತ್ತ ಸ್ವಲ್ಪ ಹೊತ್ತಿನ ನಂತರ ಎದ್ದು ನಿಂತು ಕಿಟಕಿಯಿಂದ ದೂರದವರೆಗೂ ನೋಡಿದ. ಟಾರ್ಚ್ ಬಿಟ್ಟು ಕಣ್ಣಾಯಿಸಿ ನೋಡು ನೋಡುತ್ತಿದ್ದಂತೆ ಹೆದರಿ ದಂಗಾಗಿ ಹೋದ. ಆ ದೇಹ ಇವನತ್ತ ತಿರುಗಿದೆ, ಅದರ ಕಣ್ಣು ಟಾರ್ಚ್ ಬೆಳಕಿಗೆ ಹೊಳೆದದ್ದು ನೋಡಿ ಇವನ ಎದೆ ಛಿದ್ರವಾಗಿ ಹೋಗಿತ್ತು.

ದೇಹ ಬಲಗೈ ಕೆಳಗೆ ಮಾಡಿ ನೆಲದಲ್ಲೇ ತಿರುಗಿದೆ. ಇವನಿಗೆ ಮುಖದಿಂದ ಹಿಡಿದು ಅವಳ ಕಿತ್ತು ಹೋದ ಸ್ತನಗಳು ಹರಿದು ಹೋದ ಹೊಟ್ಟೆ, ಮತ್ತು ಮೇಲಿನಿಂದ ಇದ್ದ ಆ ಮೂರು ಗೆರೆಗಳು ಕಾಣಿಸಿದ್ದರಿಂದ ಅದೇ ದೇಹ ಎಂದು ಖಚಿತವಾಗಿತ್ತು. ಟಾರ್ಚನ್ನು ಆಫ್ ಮಾಡಿದವನೇ ಮತ್ತೆ ನೆನಪಿಸಿಕೊಂಡ “ಹೌದು ನಾನು ಆಗ ನೋಡಿದಾಗಲೂ ದೇಹದ ಕಣ್ಣು ತೆರೆದೇ ಇತ್ತು ” ಎಂದು ಗೊಣಗಿದ. ಆದರೆ ದೇಹ ಬೆತ್ತಲೆಯಾಗಿ ಬೆನ್ನು ಕೆಳಗೆ, ಮುಖ ಆಕಾಶ ನೋಡುತ್ತಿದ್ದೆನೋ ನಿಜ ಈಗ ಅದನ್ನ ಮತ್ತೆ ತಿರುಗಿಸಿದವರು ಯಾರು? ಹೇಗೆ ತಿರುಗಿತು? ಅದು ನನ್ನನ್ನೇಕೆ ನೋಡುತ್ತಿದೆ? ಆ ದೇಹದಲ್ಲಿ ಯಾವುದೇ ಕಾರಣಕ್ಕೆ ಜೀವವಿರುವುದು ಸಾಧ್ಯವಿಲ್ಲ. ಅದನ್ನು ಅವನು ಆಗಲೇ ಖಚಿತಪಡಿಸಿಕೊಂಡು ಬಂದಿದ್ದ.

ಟಾರ್ಚ್ ಮತ್ತೆ ಆನ್ ಮಾಡಲು ಯಾಕೋ ಧೈರ್ಯ ಬರಲಿಲ್ಲ. ಆದರೂ ಟ್ರೈನಿಂಗ್ ದಿನಗಳನ್ನು ನೆನೆಸಿಕೊಂಡ. ಎಂತಹ ಕಷ್ಟಗಳಿಗೂ ಕೊನೆಯಿದ್ದೇ ಇರುತ್ತದೆ ಎಂಬುದನ್ನು ಟ್ರೈನಿಂಗ್ ನಲ್ಲಿ ಸರಿಯಾಗಿಯೇ ಮನವರಿಕೆ ಮಾಡಿಕೊಡಲಾಗಿತ್ತು . ದೆವ್ವ-ಭೂತವಿಲ್ಲವೆಂಬುದು ಅವನಿಗೆ ತಿಳಿದೇ ಇದ್ದರೂ ಜೀವನದಲ್ಲಿ ಮೊದಲ ಬಾರಿ ಬಹಳ ವಿಚಿತ್ರ ಘಟನೆಗಳನ್ನು ನೋಡುತ್ತಿದ್ದಾನೆ. ಗಣಿತವಾಗಿಯೂ, ವೈಜ್ಞಾನಿಕವಾಗಿಯೂ ಲೆಕ್ಕ ಹಾಕಿದರೂ ಅವನ ತಾಳಕ್ಕೆ ಲೆಕ್ಕ ಸರಿ ಹೊಂದುತ್ತಿಲ್ಲ.

ಇದು ಮನುಷ್ಯರ ಅಥವಾ ಪ್ರಾಣಿಯ ಕೃತ್ಯವಲ್ಲ. ನಾಲ್ಕು ಜನರಲ್ಲಿ ಮೂವರು ನಂಬುವ ಭೂತವೇ ಆಗಿದ್ದರೆ ಬೆಳಕು ಹರಿಯುವವರೆಗೂ ಬದುಕುವುದು ಹೇಗೆ ಯೋಚಿಸತೊಡಗಿದ. ಅರ್ಧ ಘಂಟೆಯ ನಂತರ ಟಾರ್ಚ್ ಆನ್ ಮಾಡಿ ಕಿಟಕಿಯ ಹೊರಗೆ ನೋಡಿದಾಗ ದೇಹ ಕಳೆದ ಬಾರಿ ನೋಡಿದ ಸ್ಥಿತಿಯಲ್ಲಿಯೇ ಇತ್ತು. ಮತ್ತೆ ಆಫ್ ಮಾಡಿ ಟಾರ್ಚಿನ ಸುದ್ದಿಗೆ ಹೋಗಲಿಲ್ಲ.

ಇನ್ನರ್ಧ ಘಂಟೆ ಬಿಟ್ಟು ಕಿಟಕಿಯಿಂದ ಹೊರ ನೋಡಿದ ದೂರದಲ್ಲಿ ಯಾವುದೋ ಎರಡು ದೀಪಗಳು ಹೊತ್ತಿದಂತಿದ್ದವು. ಸಾಮಾನ್ಯವಾಗಿ ಕತ್ತಲಲ್ಲಿ ಕಾಡಿನಲ್ಲಿ ಪ್ರಾಣಿಗಳ ಕಣ್ಣುಗಳು ಹೊಳೆಯುವುದು ಸಾಮಾನ್ಯ. ಹಾಗೆಯೇ ನಿಂತಿದ್ದ ಪ್ರಾಣಿ ನಿಧಾನವಾಗಿ ಮುನ್ನಡೆಯಲು ಶುರು ಮಾಡಿತು. ಸ್ವಲ್ಪ ದೂರದವರೆಗೂ ಹೋಗಿ ಹಾಗೆಯೇ ಮರೆಯಾದಂತಾಯಿತು. ಹೀಗೆ ಯೋಚಿಸುತ್ತಲೇ ಮೂರ್ನಾಲ್ಕು ಘಂಟೆಗಳು  ಕಳೆದು ಹೋಗಿದ್ದು ಶಂಕರನಿಗೆ ಅರಿವಿರಲಿಲ್ಲ.

ಶಂಕರನ ಬಿಟ್ಟು ಎಲ್ಲರು ನಿದ್ರೆಯಲ್ಲಿದ್ದರು. ಎಲ್ಲರು ನಿದ್ದೆಗೆ ಜಾರಿದ್ದನ್ನು ಗಮನಿಸಿ ತಲೆ ಓಡದೇ  ಸಿಗರೇಟು ಹೊತ್ತಿಸಿದ್ದ. ಹಾಗೆಯೇ ಒಂದರ ಹಿಂದೆ ಒಂದಂತೆ ಮುಗಿದು  ಮತ್ತೊಂದು  ಮುಗಿಯುವ ಹಂತದಲ್ಲಿತ್ತು. ಉರಿದ ಸಿಗರೇಟಿನಿಂದ ಕೈ  ಬೆರಳು ಬೆಚ್ಚಗಾಗಿದ್ದರಿಂದ ಎಚ್ಚರಗೊಂಡ ಶಂಕರ ಕಿಟಕಿಯಿಂದ ಹೊರ ನೋಡಿದ ಒಳ್ಳೆಯ ಬೆಳಕೇ ಮೂಡಿತ್ತು.

ತಮ್ಮಯ್ಯನನ್ನ ಎದ್ದೇಳಿಸಿದ. ನಂತರ ತನ್ನ ಜಾಕೆಟನ್ನು ಧರಿಸಿದವನೇ ಕೈನಲ್ಲಿ ಪಿಸ್ತೂಲು ಹಿಡಿದು ಬಾಗಿಲನ್ನು ದಬ್ಬಿ ನೋಡಿದರೆ ರಾತ್ರಿ ಹಚ್ಚಿದ ತುಂಡು ಉರಿದು ಬೂದಿಯಾಗಿ ಕೆಂಡದಿಂದ ಹೊಗೆ ಏಳುತ್ತಿತ್ತು. ಸಾರಾಯಿ ನಶೆಯಲ್ಲಿ ಮಲಗಿದ್ದ ತಮ್ಮಯ್ಯನಿಗೆ ರಾತ್ರಿ ನಡೆದುದರ ಬಗ್ಗೆ ಅರಿವೇ ಇರಲಿಲ್ಲ. ಶಂಕರ ರಿವಾಲ್ವರ್ ಹಿಡಿದದ್ದನ್ನು ನೋಡಿ “ಸಾಹೇಬ್ರೆ , ಏನಾರು ತೊಂದ್ರೆ ಏನ್ರೀ ?” ಎಂದು ಪ್ರಶ್ನಿಸಿದ. ಶಂಕರ ಸಾಧ್ಯವಾದಷ್ಟು ಸಾವಾಧಾನದಿಂದ ಉತ್ತರಿಸಿದ ” ರಾತ್ರಿ ಯಾರದೋ ಹೆಂಗಸಿನ ಕೊಲೆಯಾಗಿದೆ” ಎಂದ. ತಮ್ಮಯ್ಯನಿಗೆ ಉಸಿರು ಸಿಕ್ಕಿ ಕೊಂಡಂತಾಯ್ತು .

ಮರು ಮಾತನಾಡಲಿಲ್ಲ ಸುಮ್ಮನೆ ಶಂಕರನನ್ನು ಹಿಂಬಾಲಿಸಿದ. ರಾತ್ರಿ ದೇಹವಿದ್ದ ಕಡೆ ಹೋಗಿ ಶಂಕರ ಹುಡುಕಾಡತೊಡಗಿದ. ಆದರೆ, ರಾತ್ರಿಯಿದ್ದ ದೇಹ ಈಗ ಅಲ್ಲಿರಲಿಲ್ಲ!. ಶಂಕರನಿಗೆ ಗಾಬರಿಯಾದಂತಾಯಿತು. ರಾತ್ರಿ ಸದ್ದೇ ಇರಲಿಲ್ಲ , ಪ್ರಾಣಿಗಳು ದೇಹವನ್ನು ಎಳೆದುಕೊಂಡು ಹೋಗಿರುವ ಯಾವುದೇ ಕುರುಹುಗಳು ಕಾಣಿಸಲಿಲ್ಲ. ಆದರೂ ದೇಹ ಎಲ್ಲಿ ಮಾಯವಾಯಿತು ಎಂದು ಯೋಚಿಸತೊಡಗಿದ.

ಏನೋ ನೆನಪಾದವನಂತೆ ವಾಪಸ್ ರೂಮಿನ ಕಡೆ ಓಡಿದಾಗ ತಮ್ಮಯ್ಯನಿಗೆ ಏನು ಅರ್ಥವಾಗದೇ ಶಂಕರನಿಂದೆ ಪ್ಯಾಂಟ್  ಗಟ್ಟಿ ಹಿಡಿದು ಓಡಿದ. ತಲುಪಿದವನೇ ಸಾರಾಳನ್ನು ಎಬ್ಬಿಸಿ “ನಿನ್ನೆ ನಾವು ಆ ದೇಹವನ್ನು ನೋಡಿದ್ದು ಸುಳ್ಳೋ.. ನಿಜವೋ ?” ಎಂದು ಒಂದೇ ಸಮನೆ  ಕೂಗಿದ್ದಕ್ಕೆ, ಸಾರಾ ಗಾಬರಿಯಿಂದ ಹೌದೆಂದು ತಲೆಯಾಡಿಸಿದಳು. ಮತ್ತೆ ವಾಪಸ್ ಓಡಿ ಹೋಗಿ ನೋಡಿದಾಗ ಅಲ್ಲಿದ್ದ ದೇಹ ಮಾಯವಾಗಿರುವುದಂತೂ ಸತ್ಯ ಎಂದು ಅರಿಯಿತು. ವೀರಣ್ಣನವರಿಗೆ ಇಷ್ಟೆಲ್ಲಾ ಆದರೂ ಇನ್ನು ಎಚ್ಚರವಾಗಿರಲಿಲ್ಲ.

ಸರಿ, ಇನ್ನು ತಡ ಮಾಡುವುದು ಬೇಡವೆಂದು ಅರಿವಾಗಿ ತಮ್ಮಯ್ಯನಿಗೆ ಎಲ್ಲ ಎತ್ತಿಕೊಂಡು ಹಾಡಿಯ ಕಡೆ ನಡೆಯಲು ತಿಳಿಸಿದ. ರಾತ್ರಿಯ ಸಾರಾಯಿ ವೀರಣ್ಣನವರ ತಲೆಯಿಂದ ಇನ್ನು ಇಳಿದಿರಲಿಲ್ಲ. ಸಾರಾ ಹೆಚ್ಚು ಭಾವನೆಗಳನ್ನು ತೋರ್ಪಡಿಸಕೊಳ್ಳಲಿಲ್ಲ ಎಲ್ಲರು ಜೀಪನ್ನು ಹತ್ತಿ ನಡೆದರು. ಹಾಡಿಯ ಹಾದಿಯಲ್ಲಿ ಮುಚ್ಚಿ ಹೋಗಿದ್ದ ದಾರಿ, ತೊರೆ ಇಳಿದಿದ್ದರಿಂದ ಈಗ ಹಳ್ಳವನ್ನು ದಾಟಬಹುದಿತ್ತು.  ಹಾಡಿಯನ್ನು ತಲುಪಿ ಮೊದಲು ಬರ ಹೇಳಿದ್ದು ಹಾಡಿಯ ನಾಯಕ ಶಿಂಗಾ ನಾಯ್ಕರ ರನ್ನು.

ಹೊರ ಪ್ರಪಂಚಕ್ಕೆ ಈ ಹಾಡಿಯ ಜನರು ಇನ್ನು ಹೆಚ್ಚಾಗಿ ಪರಿಚಿತರಿದ್ದಿರಲಿಲ್ಲ. ಹಾಗಾಗಿ ಕಂಡದ್ದನ್ನು ಸತ್ಯ ಸತ್ಯವಾಗಿ ವಿವರಿಸುವುದು ಅವರ ಧರ್ಮ. ಮನುಷ್ಯ ಬುದ್ಧಿವಂತನಾದಂತೆ ಅತಿ ಬುದ್ಧಿವಂತಿಕೆಯಿಂದ ಸುಳ್ಳು ಹೇಳುವುದನ್ನ ಕಲಿಯುತ್ತಾನೆ ನಿಜ. ಆದರೆ, ಇಲ್ಲಿಯ ಜನರ ಬುದ್ಧಿವಂತಿಕೆ ಜೇನು, ಬೇಟೆ ಮತ್ತು ಮೀನು ಹಿಡಿಯುವುದಕ್ಕೆ ಮಾತ್ರ ಸ್ಥೀಮಿತವಾಗಿದ್ದು, ಮಿಕ್ಕಿದ್ದೆಲ್ಲ ನೇರಾನೇರ.

ಶಿಂಗಾನಾಯ್ಕರನನ್ನು ಆ ಕ್ಯಾಂಪಿನ ಬಗ್ಗೆ ಕೇಳಿದಾಗ ವಿಚಿತ್ರ ಸತ್ಯಗಳು ತಿಳಿದು ಬಂದಿದ್ದವು. ಈ ವಿಚಾರವಾಗಿ ಬಹಳ ಅಧಿಕಾರಿಗಳಿಗೆ ತಿಳಿಸಿದ್ದರೂ ಯಾಕೋ ಗಮನ ನೀಡಿರಲಿಲ್ಲ. ಸಾಮಾನ್ಯವಾಗಿ ಬೇಟೆಗೆ ಹೋದವರು ಕಾರಣಾಂತರಗಳಿಂದ (ವಿಪರೀತ ಮಳೆ, ಕಾಡು ಪ್ರಾಣಿಗಳಿಂದ ಗಾಯ ಇತ್ಯಾದಿ) ಉಳಿದಿದ್ದರೆ  ಅದರಲ್ಲಿ ಉಳಿದ ಹೆಂಗಸರು ಕಾಣೆಯಾಗಿದ್ದಿದು ವಿಚಿತ್ರ ಸತ್ಯವಾಗಿತ್ತು ಮತ್ತು ಅವರ ಜೊತೆ ಹೋದ ಗಂಡಸರು ವಾಪಸಾಗುವಷ್ಟರಲ್ಲಿ ತೀವ್ರವಾಗಿ ಮಾನಸಿಕವಾಗಿ ಆಘಾತಗೊಂಡಿದ್ದರು.

ಈ ವಿಷಯವನ್ನು ಹಾಡಿಗೆ ಭೇಟಿ ಕೊಟ್ಟಿದ್ದ ಶಂಕರನು ಬರುವ ಮುಂಚೆ ಇದ್ದ ಅಧಿಕಾರಿಗೆ ತಿಳಿಸಿದ್ದರೂ, ಆ ಅಧಿಕಾರಿ ಆ ವಿಷಯಕ್ಕೆ ಹೆದರಿ ಸರ್ಕಾರಕ್ಕೂ ತಿಳಿಸದೇ ಹಾಡಿಗೂ ಭೇಟಿ ನೀಡುವುದನ್ನು ನಿಲ್ಲಿಸಿದ್ದರು. ಹಾಡಿಯ ಜನ ಹೆಚ್ಚಾಗಿ ನಾಡಿನ ಜನರ ಜೊತೆ ಸಂಪರ್ಕ ಇರಿಸಿಕೊಳ್ಳುವುದನ್ನು ಇಷ್ಟಪಡುತ್ತಿರಲಿಲ್ಲ. ಆದ್ದರಿಂದ ಹೆಚ್ಚಿನದಾಗಿ ಈ ವಿಷಯ ಯಾರಿಗೂ ತಿಳಿದಿರಲಿಲ್ಲ.

ಆದರೆ, ಆ ಜನ ಆ ಭಾಗದ ಕಾಡಿನ ಕಡೆ ಹೋಗುವುದಕ್ಕೆ ದೇವರನ್ನು ಕೇಳಿಸಿದ್ದಾಗ ಅವರ ಹಾಡಿಯ ಊರ ದೇವತೆ ಪಿಲೇಕಾಳಮ್ಮಳ ಬಾಯಿಯಾದ ಪೂಜಾರಿ ಕೆಂಚಯ್ಯ ಹೇಳಿದ್ದು ಹೀಗಿತ್ತು.  ಸುಮಾರು ಐದಾರು ವರ್ಷಗಳ ಹಿಂದೆ ಕಾಡಿಗೆ ಜೇನಿಗೆಂದು ತನ್ನ ಮಕ್ಕಳ ಜೊತೆ ಹೋಗಿದ್ದ ಶಿಂಗಾನಾಯ್ಕರನ ಹೆಂಡತಿ ಮಮತಾ ನಾಯ್ಕರ ರಕ್ತಕಾರಿ ಮಕ್ಕಳ ಜೊತೆ ನೇಣಿಗೆ ಶರಣಾಗಿದ್ದಳು. ವಾರದವರೆಗೂ ಹುಡುಕಿದ ಮೇಲೆ ಹಾಡಿಯ ಜನರೆಲ್ಲಾ ಗುಂಪು ಮಾಡಿಕೊಂಡು ಹೋದಾಗ ಅಲ್ಲಿ ಅವರಿಗೆಲ್ಲ ಕಂಡದ್ದು ಮಮತಾ ನಾಯ್ಕರಳ ಮತ್ತು  ಅವಳ ಇಬ್ಬರು ಮಕ್ಕಳು ನೇಣಿಗೆ ಹಾಕಿಕೊಂಡಿರುವ ದೇಹಗಳು.

ಗೋಡೆಗಳ ಮೇಲೆ ವಿಚಿತ್ರ ಆಕಾರಗಳು ರಕ್ತದಲ್ಲಿ ಬರೆಯಲ್ಪಟ್ಟಿದ್ದವು. ಪ್ರಾಣಿಗಳ ಯಾವುದೇ ಕುರುಹುಗಳಿರಲಿಲ್ಲ. ಅದು ಅವಳೇ ನೇಣಿಗೆ ಹಾಕಿಕೊಂಡಿರುವುದಕ್ಕೆ ಯಾವುದೇ ಸಾಕ್ಷ್ಯಗಳು ಅಲ್ಲಿರಲಿಲ್ಲ. ನಾಲ್ಕೈದು ಬೆಕ್ಕುಗಳು ಇವಳ ದೇಹದ ಕೆಳಗೆ ಸತ್ತು ಬಿದ್ದಿದ್ದವು. ನೆಮ್ಮದಿಯಿಂದಲೇ ಬದುಕಿದ್ದ ಮಮತಾ ನಾಯ್ಕರ ಈ ರೀತಿ ಮಾಡಿಕೊಳ್ಳುವುದನ್ನು ಯಾರು ನಂಬಲಾಗಿರಲಿಲ್ಲ.

ಊರ ದೇವತೆಯನ್ನು ಕೇಳಿದಾಗ ಪೂಜಾರಿ ಕೆಂಚಯ್ಯನ ಮೈಮೇಲೆ ಪಿಲೇಕಾಳಮ್ಮ ಬಂದು ಈ ಸಂದೇಶ ನೀಡಿದ್ದಾಳೆಂದೇ ಎಲ್ಲರು ತಿಳಿದಿದ್ದರು. ಮಮತಾ ನಾಯ್ಕರ ಯಾವುದೋ ಕೆಟ್ಟ ದೃಷ್ಟಿಗೆ ಬಲಿಯಾಗಿ ಅವಳ ಮೇಲಿನ ನಿಯಂತ್ರಣ ಕಳೆದುಕೊಂಡು ತನ್ನ ಮಕ್ಕಳನ್ನು ಹಾಗು ತಾನು ನೇಣಿಗೆ ಹಾಕಿಕೊಂಡಿರುವುದು ಎದ್ದು ಕಾಣುತ್ತಿದೆ ಮತ್ತು ಆ ಕಡೆ ಹೋದವರಿಗೂ ಇನ್ನು ಮುಂದೆ ಮಮತಾ ನಾಯ್ಕರಳ ಪ್ರಭಾವ ಬೀರಲಿದೆ ಎಂಬುದನ್ನು ತುಸು ಜೋರಾಗಿಯೇ ಒದರಿದ್ದು ಹಾಡಿಯ ಜನರನ್ನು ಘಾಸಿಗೊಳಿಸಿತ್ತು.

ಈ ಘಟನೆಯ ನಂತರ ಪೂಜಾರಿ ಕೆಂಚಯ್ಯ ವಾರಾನುಗಟ್ಟಲೆ ಜ್ವರದಿಂದ ಬಳಲಿದ್ದು, ಇನ್ನು ಹೆಚ್ಚಿನ ಜನಕ್ಕೆ ನೀರಿಳಿಸಿತ್ತು. ಕಾಕತಾಳೀಯವೆಂಬಂತೆ ಅಲ್ಲಿಗೆ ಹೋದ ಕೆಲ ಹೆಂಗಸರು ಕಾಣೆಯಾಗಿದ್ದು ಮತ್ತು ಗಂಡಸರು ಮಾನಸಿಕವಾಗಿ ಅಸ್ತವ್ಯಸ್ತರಾಗಿದ್ದು ಸತ್ಯಕ್ಕೆ ಹತ್ತಿರವಾದಂತೆ ಕಂಡಿತ್ತು. ಶಂಕರನಿಗೆ ಇದನ್ನೆಲ್ಲಾ ಕೇಳಿ ನಂಬದೆ ಹೋದರು ರಾತ್ರಿ ಅವನು ಕಂಡಿದ್ದ ಹೆಂಗಸಿನ ಮುಖವನ್ನು ಊಹಿಸಿಕೊಂಡ. ಇವರು ಹೇಳಿದ ಕಥೆಗಳು ಅಲ್ಲಿ ನಡೆದಿದ್ದ ಸನ್ನಿವೇಶಗಳಿಗೆ ಹತ್ತಿರವಿದ್ದವು. ಹಾಡಿಯಿಂದ ಮೂರು ಜನರನ್ನು ಸಲಕರಣೆಗಳೊಂದಿಗೆ ಜೀಪಿನಲ್ಲಿ ಹತ್ತಿಸಿಕೊಂಡು ಆಫೀಸಿನತ್ತ ನಡೆದ.

ನಿನ್ನೆ ಮುರಿದು ಹೋಗಿದ್ದ ಸೇತುವೆಯನ್ನು ಹಾಡಿಯ ಜನ ಮತ್ತು ತಮ್ಮಯ್ಯ ಸೇರಿ ತಾತ್ಕಾಲಿಕವಾಗಿ ಸರಿಪಡಿಸಿದರು. ನಂತರ ಹಾಡಿಯ ಜನ ವಾಪಾಸಾದರೆ ಶಂಕರ ಆಫೀಸಿಗೆ ತಲುಪಿದ್ದ. ಸಾರಾ ಮತ್ತು ವೀರಣ್ಣ ಶಂಕರನಿಗೆ ನಮಸ್ಕರಿಸಿ ಬೆಂಗಳೂರಿನತ್ತ ಪಯಣ ಬೆಳೆಸಿದ್ದರು. ತಿಂಡಿ ಮುಗಿಸಿ ಶಂಕರ ಆಫೀಸಿನಲ್ಲಿದ್ದ ಹಳೆಯ ಪೇಪರ್ ಗಳನ್ನೂ ತಡಕಲು ಪ್ರಯತ್ನಿಸಿದ.

ಹಾಗೆ ಅವನ ಆಫೀಸಿನ ಹದ್ದುಬಸ್ತಿನಲ್ಲಿ ಬರುವ ಎಲ್ಲ ಫಾರೆಸ್ಟ್ ಆಫೀಸರುಗಳನ್ನು ಅಲ್ಲಿಗೆ ಬರಲು ಹೇಳಿದ. ಎಲ್ಲರೊಡನೆ ವಿಚಾರಿಸಿದಾಗ ಅವನಿಗೆ ವಾಪಸ್ ತಿಳಿದಿದ್ದು ಹಾಡಿಯಲ್ಲಿ ಕೇಳಿದ ಕಥೆಯೇ. ಬಹಳ ದಿನಗಳ ಪೇಪರ್ ಗಳೇನು ಸಿಗಲಿಲ್ಲವಾದ್ದರಿಂದ ಮೈಸೂರಿನ ಸ್ನೇಹಿತ ಆನಂದನಿಗೆ ಆಫೀಸಿನ ಲ್ಯಾಂಡ್ ಲೈನಿನಿಂದ ಫೋನಾಯಿಸಿ ಇದನ್ನೆಲ್ಲಾ ತಿಳಿಸಿದಾಗ ಆನಂದ ಬೆಚ್ಚಿ ಹೋಗಿದ್ದು ನಿಜವೇ ಸರಿ.

ಮರುದಿನ ಆನಂದ ಐದಾರು ವರ್ಷದ ಪೇಪರುಗಳನ್ನು ಹೊತ್ತು ಅಂತರಸಂತೆ ಆಫೀಸಿಗೆ ತಲುಪಿ ಶಂಕರನೊಡನೆ ಕುಳಿತು ಪೇಪರ್  ಗಳನ್ನೂ ತಡವುತ್ತಿರುವಾಗ ಆನಂದನಿಗೆ  ಏನೋ ಕಂಡಂತಾಗಿ ಇಂಗ್ಲಿಷ್  ದಿನಪತ್ರಿಕೆಯೊಂದನ್ನು ಶಂಕರನ ಮುಂದೆ ತಳ್ಳಿದ. ಹೆಡ್ ಲೈನ್ಸ್ ನಲ್ಲಿ ಹೀಗೆ ಬರೆದಿತ್ತು. “ತ್ರೀ  ಫಾರೆಸ್ಟ್ ಆಫೀಸರ್ಸ್ ಡೈ ಇನ್ ಮಿಸ್ಟಿರಿಯಾಲ್  ಸರ್ಕ್ಯಾಮ್‍ಸ್ಟೆನ್ಸಸ್” – ಅಂದರೆ “ಮೂರೂ ವನ್ಯ ಅಧಿಕಾರಿಗಳ ನಿಗೂಢ ಸಾವು” .

ಆ ನ್ಯೂಸ್ ಪೇಪರಿನ ಸ್ಟೋರಿಗೂ ಮತ್ತು ಬೆಳಗ್ಗೆ ಸಾರಾ ಹೇಳಿದ ಕಥೆಗೂ ಬಹಳ ಸಾಮ್ಯತೆ ಎದ್ದು ಕಾಣುತ್ತಿತ್ತು. ಆದ್ದರಿಂದ ಸಾರಾ ಹೇಳಿದ್ದು ನಿಜ ಎಂದು ಅರಿತ ಶಂಕರ ಅಲ್ಲಿಗೆ ಜನರು ನಂಬಿರುವುದರಲ್ಲಿ ಸತ್ಯವೇನೋ ಇದೆ, ಅಲ್ಲಿ ನಿಜವಾಗಿಯೂ ನಿಗೂಢತೆ ಎದ್ದು ಕಾಣುತ್ತಿದೆ. ನಾನು ಅಲ್ಲಿಗೆ ಹೋಗಿ ಅನ್ಯಾಯವಾಗಿ ಮಮತಾ ನಾಯ್ಕರಳ ಕೆಂಗಣ್ಣಿಗೆ ಗುರಿಯಾದೆನೇ ಎಂದು ಚಡಪಡಿಸಿದ.

ಇನ್ನು ಈ ರೇಂಜ್ ನಲ್ಲಿ ಕೆಲಸ ಮಾಡುವುದು ಹೇಗೆ ಎಂದು ಅವನನ್ನು ಚಿಂತೆಗೀಡು ಮಾಡಿತು. ಇದೆಲ್ಲ ಯೋಚಿಸುತ್ತ ಇನ್ನು ಎಂತಹ ಸಂದರ್ಭದಲ್ಲೂ ಆ ಕಡೆ ಸುಳಿಯಬಾರದೆಂದು ನಿರ್ಧರಿಸಿ ಆನಂದನ ಜೊತೆ ತನ್ನ ಗೆಸ್ಟ್ ಹೌಸಿಗೆ ಕರೆದುಕೊಂಡು ಹೋಗಲು ತಮ್ಮಯ್ಯನಿಗೆ ಸೂಚಿಸಿ ಯೋಚಿಸತೊಡಗಿದ. ದೆವ್ವ ಭೂತವೇ ಆದರೆ ಅವನ ಜೊತೆ ಬಂದಿದ್ದ ಸಾರಾ ಯಾಕೆ ಕಣ್ಮರೆಯಾಗದೆ ಇವರ ಜೊತೆ ವಾಪಸ್ ಸುರಕ್ಷಿತವಾಗಿ ಬಂದಿದ್ದಳು ಎಂಬುದು ಇವನ ಅನುಮಾನವನ್ನು ಕೆದಕಿತ್ತು.

ವೀರಣ್ಣ ಮತ್ತು ತಮ್ಮಯ್ಯ ಇಬ್ಬರು ಸಾರಾಯಿ ಮತ್ತಿನಲ್ಲಿ ಮಲಗಿದ್ದರಿಂದ ಅಲ್ಲಿ ನಡೆದ ಘಟನೆಗಳ ಅರಿವಾಗದೇ ಅವರಿಗೆ ಯಾವುದೇ ಪ್ರಭಾವ ಬೀರದಿರಲು ಸಾಧ್ಯವಿದೆ. ಆದರೆ ಸಾರಾಳ ಕೇಸ್ ವಿಚಿತ್ರವೆನಿಸಿ ಯಾರಾದರೂ ಅಧಿಕಾರಿಗಳ ದಾರಿ ತಪ್ಪಿಸಲು ಮಾಡಿರಬಹುದಾದ ಯೋಜನೆಯಿರಬಹುದು ಎಂದು ಯೋಚನೆ ಬಂದಾಗ ಸದ್ಯಕ್ಕೆ ಅದರ ಬಗ್ಗೆ ಯೋಚಿಸುವುದು ಬೇಡವೆನಿಸಿ ಸುಮ್ಮನಾಗಿದ್ದು ವಿಚಿತ್ರವೇ ಸರಿ.

ಅಲ್ಲಿಂದ ಶಂಕರ ಮೂರೂ ತಿಂಗಳವರೆಗೂ ಹಾಡಿಯ ಕಡೆ ಸುತ್ತುವುದನ್ನೇ ನಿಲ್ಲಿಸಿದ್ದ. ಆ ದೇಹದ ವಿಶುವಲ್ಸ್ ಗಳು ಅವನ ಮನಸ್ಸನ್ನು ಘಾಸಿಗೊಳಿಸಿದ್ದವು. ಸಾರಾ ಡಿಸೋಜಾ ಮತ್ತು ವೀರಣ್ಣ ದೊಡ್ಡಮನಿಯವರು ಬಂದಾಗ ತನ್ನ ಡೆಪ್ಯೂಟಿಯನ್ನು ಅವರ ಜೊತೆ ಕಳುಹಿಸಿ ಮಧ್ಯಾಹ್ನದೊಳಗೆ ವಾಪಸ್ ಬರಬೇಕೆಂಬುದನ್ನು ತಾಕೀತು ಮಾಡಿದ್ದ.

ಮತ್ತೆ ಸ್ವಲ್ಪ ದಿನಗಳಾದ ಮೇಲೆ ಸಾರಾ ಮತ್ತೆ ವೀರಣ್ಣನವರಿಗೆ ಅವರ ಎನ್‍ಜಿಒ ಜೀಪೊಂದನ್ನು ನೀಡಿದ್ದರಿಂದ ಶಂಕರ ಇಲಾಖೆ ಜೀಪನ್ನು ನಿಲ್ಲಿಸಿ ಅವರ ಜೀಪಿಗೆ ಓಡಾಡಲು ಅನುಮತಿ ನೀಡಿ ಕೈ ತೊಳೆದುಕೊಂಡಿದ್ದ. ಬರು ಬರುತ್ತಾ ಸಾರಾ ಪ್ರಾಜೆಕ್ಟ್ ವಿಷಯದಲ್ಲಿ ಹಾಡಿಯ ಮನೆಯೊಂದರಲ್ಲಿ ಉಳಿಯುವುದನ್ನು ಅಭ್ಯಾಸ ಮಾಡಿಕೊಂಡಿದ್ದಳು.

ಆ ಪ್ರಾಜೆಕ್ಟ್ ಬೇರೆ ಮಿನಿಸ್ಟ್ರಿ ಆಫ್ ಟ್ರೈಬಲ್ ಅಫೇರ್ಸ್, ಭಾರತ ಸರ್ಕಾರದಿಂದ ಜಾರಿಗೊಂಡಿದ್ದರಿಂದ ಶಂಕರ ಹೆಚ್ಚು ಮೂಗು ತೂರಿಸಲು ಹೋಗಿರಲಿಲ್ಲ. ಇದಾದ ಮೇಲೆ ಶಂಕರ ಮತ್ತಷ್ಟು ಕೆಲಸಗಳ ಒತ್ತಡದ ಮೇಲೆ ಆ ನಿಗೂಢ ಆಂಟಿ ಪೊಚಿಂಗ್ ಕ್ಯಾಂಪು ಮರೆತು ಹೋಗಿತ್ತು. 1991 ರ ಫೆಬ್ರವರಿ ತಿಂಗಳು, ಮುಂದೆ ಸುಡು ಬೇಸಿಗೆ ಬರಲಿದ್ದರಿಂದ ಕಾಡಿನಲ್ಲಿ ಅನಾಹುತಗಳಾಗದೆ ಇರುವುದನ್ನ ತಪ್ಪಿಸಲು ಫೈರ್ ಲೈನ್ ಹಾಕಿಸುವಲ್ಲಿ ಶಂಕರ ಕಳೆದುಹೋಗಿದ್ದ.

ಬೇಸಿಗೆಯಲ್ಲಿ ಈ ಭಾಗದ ಕಾಡುಗಳಲ್ಲಿ ಫೈರ್ ಲೈನ್ ಎಂಬುದು ಎಷ್ಟು ಮುಖ್ಯವೆಂದರೆ ಬೆಂಕಿಯೇನಾದರೂ ಕಾಡಿಗೆ ಹರಡಿದರೆ ಇಡೀ ಕಾಡಿಗೆ ಕಾಡೇ ಸುಟ್ಟು ಕರಕಲಾಗಿ ಬಿಡುತ್ತದೆ. ಅದರ ಜೊತೆಗೆ ಅಸಂಖ್ಯಾತ ಪ್ರಾಣಿ-ಪಕ್ಷಿಗಳು ಕೂಡ. ಫೈರ್ ಲೈನ್ ಹಾಕುವುದು ಅಷ್ಟು ಸುಲಭದ ಮಾತೇನಲ್ಲ, ಒಂದು ರೇಖೆಯಲ್ಲಿ ಬೆಂಕಿ ಹತ್ತಿಸಿ ಆರಿಸಬೇಕು.  ಬೆಂಕಿಯನ್ನು ಹತ್ತಿಸಿ ಆರಿಸುತ್ತಾ ಇಡೀ ಕಾಡಿಗೆ ಫೈರ್ ಲೈನ್ ಹಾಕಿ ಕಾಡಿನ ಒಳಗೆ ಬೆಂಕಿ ಹರಡದಂತೆ ಸುರಕ್ಷತೆ ವಹಿಸಬೇಕು.

ಇದು ಪ್ರತಿ ವರ್ಷದ ಕೆಲಸ. ಹೆಚ್ಚು ಕಡಿಮೆಯಾದರೆ ಅಲ್ಲಿ ಕೆಲಸ ಮಾಡುವವರು ಬೆಂಕಿಗೆ ಆಹುತಿಯಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಈ ಕೆಲಸ ಮುಗಿದ ಮೇಲೆ ಆನಂದನಿಗೆ ಸ್ವಲ್ಪ ಬಿಡುವು ಸಿಕ್ಕಂತಾಗಿ ಮೈಸೂರಿನಲ್ಲಿರುವ ಆನಂದನ ಮನೆಗೆ ಭೇಟಿ ನೀಡಲು ಆಸೆಯಾಯಿತು. ಆನಂದ ಪತ್ರಕರ್ತನಾಗಿದ್ದರಿಂದ ಅವನ ಮನೆಯಲ್ಲೇ ಒಂದು ಮಿನಿ ಲೈಬ್ರರಿಯನ್ನು ಮಾಡಿಕೊಂಡಿದ್ದ. ಬೆಳಗ್ಗೆ ತಿಂಡಿ ಮುಗಿಸಿ ಶಂಕರ ಆನಂದನ ಲೈಬ್ರರಿ ಒಳಗೆ ತಲೆ ಹಾಕಿ ಯಾವುದಾದರೂ ಪುಸ್ತಕವನ್ನು ಕೈ ಹಿಡಿಯಲು ಯತ್ನಿಸುತ್ತಿದ್ದಾಗ ಮೇಲಿನ ಶೆಲ್ಫಿನಿಂದ  ಹಳೆಯ ನ್ಯೂಸ್ ಪೇಪರ್ ಗಳು ದೊಪ್ಪನೆ ಉರುಳಿದವು.

ಅದರಲ್ಲಿ ಮತ್ತೊಂದು ಸಾವಿನ ಸುದ್ದಿ ಎದ್ದು ಕಾಣುತ್ತಿತ್ತು. ಮೂರು ದೇಹಗಳನ್ನು ನೆಲದ ಮೇಲಿಟ್ಟು ಚಿತ್ರ ತೆಗೆದು ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಒಂದು ಹೆಂಗಸು ಮತ್ತೆರಡು ಮಕ್ಕಳು. ಹೆಡ್ ಲೈನ್ ಹೀಗೆ ಬರೆದಿತ್ತು. “ತ್ರಿ ಇನ್ನೋಸೆಂಟ್ ಪೀಪಲ್ ಡೈ  ಮಿಸ್ಟಿರಿಯಾಸ್ಲಿ. ” ಆ ಹೆಂಗಸಿನ ಮುಖವನ್ನು ಮತ್ತೆ ದಿಟ್ಟಿಸಿ ನೋಡಿದ ಶಂಕರನಿಗೆ ಹೃದಯ ಕುಸಿದಂತಾಯಿತು, ಉಸಿರು ಸಿಕ್ಕಂತಾಗಿ, ಕಾಲು ನಿಶ್ಯಕ್ತವಾದಂತಾಗಿ ಅಲ್ಲಿಯೇ ಕುರ್ಚಿಯೇ ಮೇಲೆ ಕುಳಿತು ಆ ಹೆಂಗಸನ್ನೆ ದಿಟ್ಟಿಸಿದ.

ಆ ಮುಖ ಅವನು ಅಂದು ಸಾರಾಳ ಜೊತೆ ಹೋಗಿ ಉಳಿದಿದ್ದಾಗ ಕಂಡ ದೇಹದ ಹೆಂಗಸಿನ ಮುಖವೇ. ಶಂಕರನಿಗೆ ಮಾತೇ ಹೊರಡಲಿಲ್ಲ ಆದರೂ ಸಾವರಿಸಿಕೊಂಡು ಆನಂದನನ್ನು ಜೋರಾಗಿ ಕರೆದ. ಓಡಿ ಬಂದ ಆನಂದನಿಗೆ ಶಂಕರನ್ನು ನೋಡಿ ಗಾಬರಿಯಾಯಿತು. ಆನಂದ ಕೂಗಿದ “ಶಂಕ್ರ ಏನಾಯ್ತೋ ? ಯಾಕೆ ಹೀಗೆ ಕೂತ್ಕೊಂಡಿದೀಯಾ? ಹೇ  ಸರೋಜಾ, ನೀರು ತಗೊಂಡ್ ಬಾ ಬೇಗ”. ಸರೋಜಾ ನೀರನ್ನು ಹಿಡಿದು ಕ್ಷಣ ಮಾತ್ರಕ್ಕೆ ಪ್ರತ್ಯಕ್ಷಳಾದಳು.

ಶಂಕರ ಅಲ್ಲಿ ಬಿದ್ದಿದ್ದ ಐದು ವರ್ಷದ ಹಿಂದಿನ  ಪೇಪರನ್ನು ತೋರಿಸುತ್ತಾ ಮುಲುಕಿದ “ಅದು ಮಮತಾ ನಾಯ್ಕರ, ಮೊನ್ನೆ ನಾನು ಕ್ಯಾಂಪಿನಲ್ಲಿ ಕಂಡ ದೇಹವೂ ಇವಳದೇ”. ಶಂಕರನಿಗೆ ಭೂತದ ನಂಬಿಕೆ ಸ್ವಲ್ಪ ಹೆಚ್ಚಾಗಿಯೇ ಕಾಡಲು ಶುರುವಾಗಿತ್ತು. ನೀರನ್ನು ಕುಡಿದ ಶಂಕರ ಆನಂದನಿಗೆ ಎಲ್ಲವನ್ನು ವಿವರಿಸಿದ. ಆನಂದ ಶಂಕರನಿಗೆ ಸಮಾಧಾನ ಹೇಳಿ ಮತ್ತೆರಡು ವಾರ ಎಲ್ಲಿಗೂ ಹೋಗದೆ ರಜೆ ವಿಸ್ತರಿಸಿ ತನ್ನ ಮನೆಯಲ್ಲೇ ಉಳಿಯುವಂತೆ ಹೇಳಿದ.

ಶಂಕರನು ಹೂಗುಟ್ಟು ಲೈಬ್ರರಿಯಿಂದ ಹೊರ ನಡೆದು ಒಂದು ದೀರ್ಘ ನಿದ್ರೆ ತೆಗೆಯುವ ಮನಸ್ಸಾಗಿ ಆನಂದನ ಮನೆಯ ಮೇಲಿನ ರೂಮಿನಲ್ಲಿ ಮಲಗಿದ. ಮೂರ್ನಾಲ್ಕು ದಿನಗಳಾದ ಮೇಲೆ ಆನಂದನ ಮನೆಗೆ ಶಂಕರನ ಆಫೀಸಿನಿಂದ ಕರೆ ಬಂದಿತ್ತು. ಕಾಡಿನಲ್ಲಿ ಬೆಂಕಿ ಅನಾಹುತವಾಗಿದೆಯೆಂದು ಅವನು ಅಲ್ಲಿಗೆ ಹೋಗಲೇಬೇಕೆಂದು ತನ್ನ ಡೆಪ್ಯುಟಿ ಕೇಳಿಕೊಂಡಾಗ ಶಂಕರನಿಗೆ ಬೇರೆ ದಾರಿ ಉಳಿದಿರಲಿಲ್ಲ.

ನಂತರ ಹೊರಟವನೇ ಮತ್ತೆ ಕೆಲಸದಲ್ಲಿ ಮಗ್ನನಾಗಿದ್ದರಿಂದ ಆ ಫೋಟೋ ಅವನನ್ನು ಹೆಚ್ಚು ಕಾಡಲಿಲ್ಲ. ಆದರೆ ಕೆಲಸ ಮುಗಿದೊಡನೆ ಮತ್ತೆ ಯೋಚಿಸತೊಡಗಿದ.. ಎಷ್ಟೇ ವಿಚಿತ್ರಗಳು ನಡೆದಿದ್ದರೂ ಮನಸ್ಸಿನ ಮೂಲೆಯಲ್ಲಿ ಯಾವುದೋ ಅನುಮಾನ ಕಾಡುತ್ತಿತ್ತು. ಇಷ್ಟೆಲ್ಲಾ ಆದರೂ ಈ ಅನುಮಾನಗಳು ಮೂಡುತ್ತಿರುವುದು ಆ ಎರಡು ವರ್ಷದ ಟ್ರೈನಿಂಗ್ ಕಾರಣವಿರಬಹುದು.

ಮಾರ್ಚ್ ತಿಂಗಳು, ಬೇಸಿಗೆ ಬಿಸಿಲು ನೆತ್ತಿ ಮೇಲೇರಿತ್ತು. ಶಂಕರ ಬೇಸಿಗೆಯ ಬಿಸಿಲಿಗೆ ತಲೆ ಕೊಡಲು ಇಚ್ಛೆಯಿಲ್ಲದೆ ಆಫೀಸಿನ ಕೆಲಸದಲ್ಲಿ ಮಗ್ನನಾಗಿದ್ದ. ಹೀಗೆ ಯೋಚಿಸುತ್ತ ತನ್ನ ಡೆಪ್ಯುಟಿ ಸಂಗಮೇಶನಿಗೆ ಕೇಳಿದ “ರೀ ಸಂಗಮೇಶ್ ನೀವು ದೆವ್ವ ಎಲ್ಲ ನಂಬ್ತಿರೇನ್ರಿ?”. ಸಂಗಮೇಶ ಮಹಾನ್ ಸಾಧು , ಹಲವು ಬಾರಿ ಬೇರೆಯ ಅಧಿಕಾರಿಗಳು ಈ  ವಿಷಯಕ್ಕೆ ಸಂಗಮೇಶನನ್ನ ಕಿಚಾಯಿಸಿ ನಗುತ್ತಿದ್ದುಂಟು.

ಸಂಗಮೇಶ ತನ್ನ ಊರಿನ ದೆವ್ವದ ಕಥೆಗಳನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟ. ಮತ್ತೊಮ್ಮೆ ಆ ಕ್ಯಾಂಪಿನ ಕಡೆ  ಹೋಗಲು ಯೋಚಿಸುತ್ತಿದ್ದ ಶಂಕರನಿಗೆ ಸಂಗಮೇಶ ಸರಿಯಾದ ಜೋಡಿಯಲ್ಲ ಎಂದು ಮನವರಿಕೆಯಾಗಿ ಆನಂದನಿಗೆ ಬರ ಹೇಳಿದ. ಆನಂದ ಮೂರ್ನಾಲ್ಕು ದಿನಗಳ ನಂತರ ಬರುವುದೆಂದು ತಿಳಿಸಿದ್ದರಿಂದ ಶಂಕರ ಸುಮ್ಮನಾದ. ಅವತ್ತು ತಿಳಿ ಸಂಜೆಯಾಗುತ್ತಲಿತ್ತು, ಅಮ್ಮ ತೀರಿ ಆರು ತಿಂಗಳಾಗಿತ್ತಷ್ಟೇನೋ, ಅವಳ ನೆನಪಾಗಿ ಶಂಕರನ ಮನಸ್ಸು ಬಾಡಿ ಹೋಗಿತ್ತು.

ಸಿಗರೇಟು ಹೊತ್ತಿಸಿ ಆಫೀಸಿನ ಹೊರಗಡೆ ಹೊಗೆಯಿಂದ ಚಿತ್ರ ಬಿಡಿಸುತ್ತ ನಿಂತಿದ್ದ. ಆಗ ಮೈಸೂರಿನ ಕಡೆಯಿಂದ ಜೀಪೊಂದು ಬಂದು ನಿಂತಿದ್ದು ನೋಡಿ ಸಿಗರೇಟನ್ನು ಎಸೆದು ಆಫೀಸಿನ ಕಡೆ ನಡೆದ. ಜೀಪಿನಿಂದ ಎರಡು ಸುಂದರಿಯರು ಇಳಿದಿದ್ದು ನೋಡಿ ಮನಸಿಗೆ ಹಾಯೆನಿಸಿತು. ಎಷ್ಟೇ ಆಗಲಿ, ಶಂಕರನು ಇನ್ನು ಮದುವೆಯಾಗಿರಲಿಲ್ಲ, ವಯಸ್ಸು ಇಪ್ಪತ್ತೇಳಾಗಿರಬೇಕು ಹುಡುಗಿಯರ ಕಡೆ ಗೌರವದ ಜೊತೆ ಸಾಫ್ಟ್ ಕಾರ್ನರ್  ಕೂಡ ಇದ್ದಿದ್ದನ್ನು ಅಲ್ಲಗೆಳೆಯುವಂತಿಲ್ಲ.

ಸಾರಾ ಶಂಕರನನ್ನು ನೋಡಿದವಳೇ ಕೈ ಕುಲುಕಿ ಹೇಳಿದಳು “ಗುಡ್ ಈವನಿಂಗ್ ಸಾರ್, ಇವರು ನನ್ನ ಎನ್‍ಜಿಒ ಕೊಲೀಗ್ ರುಬಿಕಾ ಫರ್ನಾಂಡಿಸ್, ನಮ್ಮ ಸಂಸ್ಥೆಯ ಫೋಟೋಗ್ರಾಫರ್ ಇವರೇ ಆದ್ದರಿಂದ ಹಾಡಿ ಭೇಟಿಗೆ ಬಂದಿದ್ದಾರೆ.” ಶಂಕರನ ತಲೆ ಬೆಳಕಿನ ವೇಗದೊಂದಿಗೆ ಓಡಿತು. ಹೆಸರು ಎಲ್ಲೋ ಕೇಳಿದಂತಿದಿಯೆಲ್ಲ ಎಂದು ಮೆದುಳಿನ ಮೂಲೆ ಮೂಲೆಗೂ ನುಗ್ಗಿ ಹುಡುಕಾಡಿದ.

ಹೌದು ರುಬಿಕಾ ಫರ್ನಾಂಡಿಸ್- ಆ ದೇಹದ ಫೋಟೋ ತೆಗೆದಿದ್ದ ಫೋಟೋಗ್ರಾಫರ್ ಹೆಸರಿನ ಕ್ರೆಡಿಟ್ ರುಬಿಕಾ ಫರ್ನಾಂಡಿಸ್; ಆದರೆ ಅವಳು ಇವಳೇ ಎಂದು ಹೇಗೆ ಖಚಿತ ಪಡಿಸಿಕೊಳ್ಳುವುದು?. ನೂರಾರು ರುಬಿಕಾಗಳಿರಬಹುದು! ಶಂಕರ ಉತ್ತರಿಸಿದ  “ನಾಳೆ ಸಂಜೆಯೇ ಹೊರಡುತ್ತಾರೆ ತಾನೇ? ಹಾಡಿಯಲ್ಲಿ ಉಳಿಯುವುದಕ್ಕೆ ಅನುಮತಿ  ಇಲ್ಲ ಎಂದು  ಮತ್ತೆ ಹೇಳಬೇಕಾಗಿಲ್ಲವೆಂದು ಅಂದುಕೊಳ್ಳುತ್ತೇನೆ “.

ಈ ಬಾರಿ ಸಾರಾಳ ಸ್ನೇಹ ಸಂಪಾದಿಸುವುದು ಆ ನಿಗೂಢ  ಕ್ಯಾಂಪಿನ ಬಗ್ಗೆ ತಿಳಿಯಲು ಅವಶ್ಯಕವಾಗಿತ್ತು ಬಿಟ್ಟರೆ ರುಬಿಕಾಳು ಸದ್ಯಕ್ಕೆ ಉಪಯೋಗವಿಲ್ಲ ಎಂದುಕೊಂಡ. ವೀರಣ್ಣ ದೊಡ್ಡಮನಿಯವರು ಜೀಪನ್ನು ಬದಿಗೆ ನಿಲ್ಲಿಸಿ ಶಂಕರನಿಗೆ ಉದ್ದದ ಸಲ್ಯೂಟ್ ಮಾಡಿದರು. ಬಿಸಿ ಬಿಸಿ ಕಾಫಿ ಸವಿಯುತ್ತಾ ಅಂದು ನಡೆದ ಘಟನೆಯನ್ನು ಶಂಕರ ಬಣ್ಣಿಸತೊಡಗಿದ .

ಇದನ್ನೆಲ್ಲಾ ಕೇಳಿದ ವೀರಣ್ಣನವರಿಗೆ ಪುಕ್ಕಲು ಚಡ್ಡಿಯೊಳಗೆ ಜಾರಿತ್ತು. ಆದರೂ ಹದಿನೈದು ಸಾವಿರದ ಸಂಬಳ ಬಿಟ್ಟು ಹೋಗುವಂತಿರಲಿಲ್ಲ. ಇಷ್ಟೆಲ್ಲ ಘಟನೆಗಳನ್ನು ಸಾರಾ ವೀರಣ್ಣನವರಿಗೆ ತಿಳಿಸಿಯೇ ಇರಲಿಲ್ಲ. ಈ ಘಟನೆಯನ್ನು ಮಾತನಾಡುತ್ತಿದ್ದಾಗ ರುಬಿಕಾಳ ಮುಖದಲ್ಲಿ ಆಗುತ್ತಿದ್ದ ವಿಚಿತ್ರ ಭಾವನೆಗಳನ್ನು  ಶಂಕರನು ಗಮನಿಸದೆಯೇ ಇರಲಿಲ್ಲ. ಮಾತನಾಡುತ್ತ ಸಂಜೆಯಾಗಿದ್ದು ಇವರ ಗಮನಕ್ಕೆ ಬಂದಿರಲಿಲ್ಲ. ಸಂಜೆಯ ಮೇಲೆ ಹೋಗುವುದು ಬೇಡವೆಂದು ತನ್ನ ಗೆಸ್ಟ್ ಹೌಸಿನಲ್ಲೇ ಎಲ್ಲರು ಉಳಿದುಕೊಳ್ಳಬೇಕೆಂದು ಶಂಕರ ಆಹ್ವಾನ ನೀಡಿದ.

(ಮುಂದುವರಿಯುವುದು)

‍ಲೇಖಕರು avadhi

October 14, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: