ಅಮೆರಿಕ ಎಂಬ ಊಟದ ಮಾಯಾಜಾಲ..

ಸಿಹಿ ಮೊಸರಿನ ಹೊಳೆ

ಯೋಗರ್ಟ್ ಎಂದು ಕರೆಸಿಕೊಳ್ಳುವ ಬಗೆ ಬಗೆಯ ಸ್ವಾದ, ಬಣ್ಣ ಹಾಗೂ ಸುವಾಸನೆಯಿಂದ ಕೂಡಿದ, ಬನಿಯಲ್ಲಿ ಹೆಚ್ಚು ಕಡಿಮೆ ಸಾಫ್ಟಿ ಐಸ್‌ಕ್ರೀಂನಂತಿರುವ ಸಿಹಿ ಮೊಸರು ಇಲ್ಲಿನ ಜನರ ಅಚ್ಚುಮೆಚ್ಚಿನ ಸಿಹಿ ಉಣಿಸುಗಳಲ್ಲಿ ಒಂದು. ಇದಕ್ಕೆ ಹೆಸರುವಾಸಿಯಾದ ‘ಯೋಗರ್ಟ್ ಲ್ಯಾಂಡ್’ ಎನ್ನುವ ಮಳಿಗೆಗೆ ಭೇಟಿ ನೀಡಿದಾಗ ಅಲ್ಲಿನ ವೈವಿಧ್ಯತೆ ಬೆರಗಾಗಿಸಿತು.

ಒಂದು ಅರೆ ವೃತ್ತಾಕಾರದ ದೊಡ್ಡ ನಿರ್ಮಿತಿಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಬಗೆಯ ಯೋಗರ್ಟ್‌ಗಳನ್ನು ಹೊರಹೊಮ್ಮಿಸುವ ನಳಗಳಿವೆ. ಒಳಗೆ ಹೋಗುವಾಗಲೇ ರುಚಿ ನೋಡಲು ಮೂರು, ನಾಲ್ಕು ಸಣ್ಣ-ಸಣ್ಣ ಕಾಗದದ ಬಟ್ಟಲುಗಳನ್ನು ನೀಡುತ್ತಾರೆ. ಪ್ರತಿಯೊಂದು ನಳದ ಮೇಲೂ ಅದು ಸುರಿಸುವ ಸ್ಟ್ರಾಬೆರ್ರಿ, ರಾಸ್ಬೆರ್ರಿ, ಬ್ಲೂಬೆರ‍್ರಿ, ಆಲ್ಫಾಂಸೋ ಮಾವು, ಪೀಚ್, ಪಿಸ್ತಾ, ಬಾದಾಮು..

ವಿವಿಧ ಬಗೆಯ ಸಿಹಿಮೊಸರನ್ನು ಸುರಿಸುವ ನಳಗಳು (ಚಿತ್ರಕೃಪೆ: ಗೂಗಲ್)

ಇಂತಹ ಹಲವು ಬಗೆಯ ಸ್ವಾದಗಳ ಹೆಸರಿರುತ್ತದೆ. ಯಾರಿಗೆ ಯಾವುದರ ಮೇಲೆ ಅಕ್ಕರೆ ಮೂಡುತ್ತದೋ ಅದನ್ನು ನಳದಿಂದ ರುಚಿ ನೋಡುವ ಬಟ್ಟಲಲ್ಲಿ ನಿಧಾನವಾಗಿ ಸ್ವಲ್ಪವನ್ನು ಸಂಗ್ರಹಿಸಿಕೊಂಡು ರುಚಿ ನೋಡಬಹುದು. ಈ ಸಂಗ್ರಹಣದ ನಳಗಳನ್ನು ಪ್ರತಿ ಎರಡು, ಮೂರು ನಿಮಿಷಗಳಿಗೊಮ್ಮೆ ಶುಭ್ರ ಟಿಶ್ಯೂ ಕಾಗದದಿಂದ ಒರಸಿ ಶುಚಿಗೊಳಿಸುತ್ತಾ ಅವುಗಳ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸುವ ಪರಿ ನಿಜಕ್ಕೂ ಅಚ್ಚರಿಯಾಗುತ್ತದೆ.

ಹೀಗೆ ರುಚಿ ನೋಡಿದ ಮೇಲೆ ಮುಂಗಟ್ಟೆಗೆ ಬಂದು ಕೊಳ್ಳುವ ಬಟ್ಟಲನ್ನು ಪಡೆದುಕೊಂಡು ತಮ್ಮ ಖಾಯಷಿನಂತೆ ಒಂದು ಬಗೆಯದೋ, ಇಲ್ಲವೇ ಎರಡು ಮೂರು ಬಗೆಯವನ್ನು ಒಟ್ಟಾಗಿಯೋ ಆ ಬಟ್ಟಲಿಗೆ ಸಂಗ್ರಹಿಸಿಕೊಳ್ಳಬಹುದು.

ಬೇಕಾದ ಮೇಲಲಂಕಾರದೊಂದಿಗೆ ತಿನ್ನಲು ಸಿದ್ಧವಾದ ಮೊಸರಿನ ಕುಡಿಕೆ (ಚಿತ್ರಕೃಪೆ: ಗೂಗಲ್)

ಅದನ್ನು ಮುಂಗಟ್ಟೆಗೆ ತಂದು ಇಷ್ಟವಾದರೆ ಅದರ ಮೇಲೆ ಅಲಂಕರಣದಂತೆ ಕತ್ತರಿಸಿದ ಕೆಲವು ಮೇಲಲಂಕಾರದ ಒಣಹಣ್ಣುಗಳನ್ನು ಹಾಕಿಸಿಕೊಂಡು ಒಟ್ಟಿಗೆ ತೂಗಿ ಅದರ ದರವನ್ನು ನೀಡಿ ಹೊರಬಂದು ಕುರ್ಚಿಯ ಮೇಲೆ ಆರಾಮಾಗಿ ಕುಳಿತು ಪ್ರಕೃತಿ ಪ್ರಿಯರು ನೀಲಾಕಾಶವನ್ನುನೋಡುತ್ತಲೋ ಅಥವಾ ಸುತ್ತಲಿನ ಹೂಗಿಡಗಳನ್ನು ನೋಡುತ್ತಲೋ… ರಾತ್ರಿಯಾಗಿದ್ದರೆ ಆಗಸದಲ್ಲಿ ಮೊಸರಿನ ರಾಶಿಯಲ್ಲಿ ತೇಲುವ ಚಂದ್ರಮನನ್ನೂ ಅವನೊಡನೆ ಆಡಲು ಬಂದ ತಾರೆಯರನ್ನೂ ನೋಡುತ್ತಾ ನಿಧಾನವಾಗಿ ಆ ಸ್ವಾದಗಳ ಆನಂದವನ್ನು ಸವಿಯುತ್ತಾ ಒಂದು ಸುಖದ ಅನುಭವದ ಅನುಭೂತಿಯನ್ನು ಪಡೆಯಬಹುದು.

ಇದು ಒಂದು ರೀತಿಯ ಆನಂದವಾದರೆ, ಗುಂಪಿನಲ್ಲಿ ಬಂದು ಒಬ್ಬೊಬ್ಬರು ಒಂದೊಂದು ಸವಿಯ ಬಟ್ಟಲನ್ನು ಪಡೆದುಕೊಂಡು ಬಂದು ನಗುತ್ತಾ, ಹರಟುತ್ತಾ ನಿಧಾನವಾಗಿ ಎಲ್ಲ ರೀತಿಯ ಸವಿಯನ್ನೂ ರುಚಿನೋಡುತ್ತಾ ಕಾಲಹರಣ ಮಾಡುವುದು ಇನ್ನೊಂದು ಬಗೆಯ ಆನಂದ..

ಸರ್ವ ಸಾಮಗ್ರಿ ಮಳಿಗೆಗಳು, ಮಾಲ್‌ಗಳು ಮತ್ತು ಇನ್ನಿತರ ವ್ಯಾಪಾರಿ ಮಳಿಗೆಗಳು

ದಿನಸಿ, ತರಕಾರಿ, ಹಣ್ಣುಗಳಿಗಾಗಿಯೇ ಮೀಸಲಾಗಿರುವಂತಹ ಸಣ್ಣ-ಪುಟ್ಟ ಅಂಗಡಿಗಳು ಅಮೆರಿಕದ ನಗರಗಳಲ್ಲಿ ಕಾಣಸಿಗುವುದಿಲ್ಲ. ಅದೇ ಗ್ರಾಮಾಂತರ ಪ್ರದೇಶಗಳಿಗೆ ಹೋದರೆ ವಿವಿಧ ಅವಶ್ಯಕತೆಗಳ ಸಣ್ಣ-ಪುಟ್ಟ ಅಂಗಡಿಗಳು ಕಾಣಸಿಗುತ್ತವೆ. ಆದರೆ ನಗರಗಳಲ್ಲಿ ಸಾಮಾನ್ಯ ಜನರು ದಿನನಿತ್ಯದ ಅಗತ್ಯಗಳಿಗೆ ಉಪಯೋಗಿಸುವ ಎಲ್ಲ ಸರಕುಗಳನ್ನೂ ಹೊಂದಿರುವ ಸರ್ವ ಸಾಮಗ್ರಿ ಮಳಿಗೆಗಳೇ ಜನಪ್ರಿಯ.

ಈಗ ನಮ್ಮಲ್ಲೂ ಎಲ್ಲೆಡೆ ಕಾಣುತ್ತಿರುವ ಬಿಗ್ ಬಜಾ಼ರ್, ಮೋರ್, ರಿಲೈಯನ್ಸ್‌ನಂತಹ ಸರ್ವ ಸಾಮಗ್ರಿ ಮಳಿಗೆಗಳ ವಿರಾಟ್‌ ಸ್ವರೂಪವಾದ ವಾಲ್ ಮಾರ್ಟ್, ಸೇಫ್ ವೇ ಇಂಥವುಗಳನ್ನು ಕಾಣಬಹುದು. ನಮ್ಮಲ್ಲಿನ ಮೆಟ್ರೋನಂತಹ ಸಗಟು ಮಾರಾಟದ ಸರ್ವಸಾಮಗ್ರಿ ಮಳಿಗೆಯಾದ ಕಾಸ್ಟ್ಕೋಗಳಲ್ಲಿ ಪೆಟ್ರೋಲ್ ಕೂಡ ಸಗಟು ದರದಲ್ಲಿ ಸಿಗುತ್ತದೆ. ಬೇರೆ ಮಳಿಗೆಗಳಲ್ಲಿನಂತೆ ಇಲ್ಲಿ ಅಲ್ಪ ಸ್ವಲ್ಪ ಅಳತೆಗಳಲ್ಲಿ ಕೊಳ್ಳಲಾಗುವುದಿಲ್ಲ; ನಿರ್ದಿಷ್ಟ ಅಳತೆಗಳಲ್ಲಿಯೇ ಕೊಳ್ಳಬೇಕಾಗುತ್ತದೆ.

ಹಾಲು, ಮೊಸರು, ತುಪ್ಪ, ಬೆಣ್ಣೆ ಇಂತಹ ಹಾಲಿನ ಉತ್ಪನ್ನಗಳನ್ನು ಮಾರುವ ನಮ್ಮಲ್ಲಿನ ನಂದಿನಿ ಮಳಿಗೆಗಳಂತಹ ಅಂಗಡಿಗಳಾಗಲೀ, ಅದನ್ನು ಮನೆಗೆ ತಲುಪಿಸುವ ವ್ಯವಸ್ಥೆಯಾಗಲೀ ಇಲ್ಲಿನ ನಗರಗಳಲ್ಲಿ ಕಾಣಸಿಗುವುದಿಲ್ಲ. ಸರ್ವಸಾಮಗ್ರಿ ಮಳಿಗೆಗಳಲ್ಲಿ ಇಂತಹ ಬೇಗ ಕೆಡುವಂತ ಪದಾರ್ಥಗಳಿಗೇ ಮೀಸಲಾದ ದೊಡ್ಡ ದೊಡ್ಡ ಶೈತ್ಯಾಗಾರಗಳಿದ್ದು, ಅದರಲ್ಲಿ ಜನರು ತಮಗೆ ಬೇಕಾದ ಕೊಬ್ಬಿನಂಶದ, ಉತ್ಪನ್ನದ ಹೆಸರಿನ ಪ್ಲಾಸ್ಟಿಕ್ ಡಬ್ಬಗಳಲ್ಲಿ ತುಂಬಿಟ್ಟಿರುವ ಸಂಸ್ಕರಿಸಿದ ಹಾಲನ್ನು ಗ್ಯಾಲನ್‌ಗಳ ಅಳತೆಯಲ್ಲಿ ಕೊಳ್ಳಬಹುದು.

ಇದು ವಾರಗಟ್ಟಲೇ ಕೆಡುವುದಿಲ್ಲ. ಮನೆಯ ಫ್ರಿಡ್ಜ್ ಗಳಲ್ಲಿ ಇರಿಸಿಕೊಂಡು ದಿನವೂ ಬೇಕಾದಷ್ಟೇ ಹಾಲನ್ನು ಹೊರತೆಗೆದು ಕಾಯಿಸಿಕೊಂಡು ಬಳಸುವುದು ಇಲ್ಲಿನ ರೀತಿ. ಮನೆಯಲ್ಲಿ ಹೆಪ್ಪು ಹಾಕದವರು ಮೊಸರನ್ನು (ಇಲ್ಲಿ ಅದನ್ನು ಪ್ಲೇನ್ ಯೋಗರ್ಟ್ ಎನ್ನುತ್ತಾರೆ) ಕೂಡಾ ಇದೇ ರೀತಿಯಲ್ಲಿ ತಮ್ಮ ಆಯ್ಕೆಯ ಡಬ್ಬಿಗಳನ್ನು ತಂದಿಟ್ಟುಕೊಂಡು ಕೆಲವು ದಿನಗಳವರೆಗೆ ಬಳಸುತ್ತಾರೆ.

ಇಂತಹ ಸರ್ವಸಾಮಗ್ರಿ ಮಳಿಗೆಗಳಿಗೆ ಬರುವವರು ಒಂದು ತಳ್ಳುಗಾಡಿಯಲ್ಲಿ ತಮಗೆ ಬೇಕಾದ ಸಾಮಗ್ರಿಗಳನ್ನು ತುಂಬಿಕೊಂಡ ಮೇಲೆ ತಾವೇ ಬೇಕಾದರೂ ಬಿಲ್ಲನ್ನು ತಯಾರಿಸಿಕೊಂಡು ಅದಕ್ಕೆ ಕಾರ್ಡನ್ನು ಉಜ್ಜಿ ಹೊರಗೆ ತೆಗೆದುಕೊಂಡು ಹೋಗಬಹುದಾದ ವ್ಯವಸ್ಥೆಯೂ ಕೆಲವೆಡೆ ಇದೆ. ಇಲ್ಲವಾದರೆ ಮುಂಗಟ್ಟೆಯಂತೂ ಇದ್ದೇ ಇದೆ. ಇಲ್ಲಿ ನೋಡುವ ಇಂತಹ ಪ್ರತಿ ತಳ್ಳು ಗಾಡಿಯಲ್ಲಿಯೂ ಇತರ ಬಟ್ಟೆ, ದಿನಸಿ, ತರಕಾರಿ, ಹಣ್ಣುಗಳಂತ ಸರಕುಗಳೊಡನೆ ಸಾಮಾನ್ಯವಾಗಿ ನೋಡುವ ಸಾಮಗ್ರಿಗಳು ಇಲ್ಲಿನ ಆಹಾರದ ಮುಖ್ಯಭಾಗವಾದ ಬೇಕರಿ ಉತ್ಪನ್ನಗಳು, ಮೊಟ್ಟೆ ಮತ್ತು ಟಿಶ್ಯೂ ಕಾಗದದ ದೊಡ್ಡ-ದೊಡ್ಡ ಬಂಡಲ್ಲುಗಳು.

ಇಲ್ಲಿನ ನಗರಗಳಲ್ಲಿ ಅಲ್ಲಲ್ಲಿ ಭಾರತೀಯರ ಸರ್ವ ಸಾಮಗ್ರಿಗಳ ಮಳಿಗೆಗಳೂ ಕಾಣ ಸಿಗುತ್ತವೆ. ಇಲ್ಲಿ ಭಾರತೀಯರು ಉಪಯೋಗಿಸುವ ಎಲ್ಲ ರೀತಿಯ ಸರಕುಗಳೂ ಲಭ್ಯ. ಎಲ್ಲ ರೀತಿಯ ಬೇಳೆ, ಕಾಳುಗಳು, ಮಸಾಲೆ ಪದಾರ್ಥಗಳು, ತರಕಾರಿಗಳು, ಬಾಳೆ ದಿಂಡು, ಬಾಳೆ ಹೂವುಗಳಂತ ಅಪರೂಪದ ವಸ್ತುಗಳು, ಸೊಪ್ಪುಗಳು, ಹಣ್ಣುಗಳು ಇವುಗಳ ಜೊತೆಗೆ ಚಕ್ಕುಲಿ, ಕೋಡುಬಳೆ, ತೇಂಗೊಳ್ಳು, ಕಡಲೇ ಮಿಠಾಯಿ..

ಇಂತಹ ತಿಂಡಿಗಳ ವೈವಿಧ್ಯಗಳೂ, ಎಲ್ಲ ಪ್ರಸಿದ್ಧ ಕಂಪನಿಗಳ ರವೆ ಇಡ್ಲಿ, ದೋಸೆ, ಶ್ಯಾವಿಗೆ ಇಂತಹ ಧಿಡೀರ್ ತಿಂಡಿಯ ಮಿಶ್ರಣದ ಪೊಟ್ಟಣಗಳು, ತುರಿದ ಇಲ್ಲವೇ ಇಡಿಯಾದ ತೆಂಗಿನಕಾಯಿ, ಪಾತ್ರೆಗಳು, ಮಡಕೆಗಳು, ತುಳಸಿ ಗಿಡ.. ಇಷ್ಟಲ್ಲದೇ ವಿವಿಧ ಪೂಜಾ ಸಾಮಗ್ರಿಗಳೂ ದೊರೆಯುತ್ತವೆ. ಅರಿಶಿನ, ಕುಂಕುಮ, ಗೆಜ್ಜೆವಸ್ತ್ರ, ಹೂಬತ್ತಿ, ಊದುಕಡ್ಡಿ, ಕರ್ಪೂರ, ಕಳಶಕ್ಕಿಡುವ ತಾಮ್ರದ ಚೊಂಬುಗಳು, ಪಂಚಪಾತ್ರೆಯಂತಹ ಪೂಜೆಗೆ ಬಳಸುವ ತಟ್ಟೆ, ಪಾತ್ರೆಗಳು.. ಇಂತಹ ಎಲ್ಲ ವೈವಿಧ್ಯಗಳೂ ಇಲ್ಲಿ ಲಭ್ಯ.

ಬಟ್ಟಲಡಿಕೆ ಸಹಾ ಇಲ್ಲಿ ‘ಮನುಷ್ಯರು ತಿನ್ನುವ ಉಪಯೋಗಕ್ಕಾಗಿ ಅಲ್ಲ’ ಎನ್ನುವ ಎಚ್ಚರಿಕೆಯೊಡನೆ ದೊರೆಯುತ್ತದೆ. ನಾವು ತಂದಿದ್ದ ಕಲಸಿದ ಅಡಿಕೆಯ ದಾಸ್ತಾನು ಮುಗಿದಿದ್ದರಿಂದ ನಾವು ಇದನ್ನೇ ಮನೆಗೆ ತಂದು ಕುಟ್ಟಿ ಹಳಕುಗಳನ್ನು ಮಾಡಿ ಅದರೊಂದಿಗೆ ಏಲಕ್ಕಿ, ಲವಂಗ, ಜಾಯಿಕಾಯಿ, ಜಾಪತ್ರೆ, ಪಚ್ಚ ಕರ್ಪೂರ, ಕೊಬ್ಬರಿ, ಮತ್ತು ಡೈಮಂಡ್ ಸಕ್ಕರೆಯನ್ನು ಬೆರೆಸಿ ಸೊಗಸಾದ ಅಡಿಕೆ ಪುಡಿಯನ್ನು ತಯಾರಿಸಿ ತಿಂದೆವು.

ಮನುಷ್ಯರೇ ಆದ ನಮಗೇನೂ ಆಗಿಲ್ಲ! ಮಗಳಿಗೆ ಇಷ್ಟವೆಂದು ಡಿಂಕ್ ಲಾಡೂವನ್ನು ಮಾಡಿದೆವು. ಹೀಗೇ ಒಂದು ದಿನ ಪತ್ರೊಡೆಯ ಪ್ರಯೋಗವನ್ನೂ ಮಾಡಬೇಕೆಂದ್ದದ್ದು ಸಮಯದ ಅಭಾವದಿಂದ ಸಾಧ್ಯವಾಗಲಿಲ್ಲ. ಬೇ ಪ್ರದೇಶದಲ್ಲಿ ವಾಸಿಸುತ್ತಿರುವ ಭಾರತೀಯರು ಅಡುಗೆ, ತಿಂಡಿಯ ವಿಷಯದಲ್ಲಿ ಏನನ್ನೂ ಕಳೆದುಕೊಳ್ಳುತ್ತಿಲ್ಲ ಎಂದು ನಿರೂಪಿಸಲು ಇದೆಲ್ಲವನ್ನೂ ಹೇಳುತ್ತಿದ್ದೇನೆ.

ಇನ್ನು ಮಾಲ್‌ಗಳಲ್ಲಿ ಒಮ್ಮೆ ಅಡ್ಡಾಡಿ ಬರೋಣ. ಬೆಂಗಳೂರಿನ ಮಂತ್ರಿ ಮಾಲ್, ಒರೈಯಾನ್ ಮಾಲ್ ಮತ್ತು ಸೆಂಟ್ರಲ್ ಮಾಲ್‌ಗಳಿಗಿಂತ ವೈವಿಧ್ಯದಲ್ಲಿ, ವೈಶಾಲ್ಯತೆಯಲ್ಲಿ ಬಹಳಷ್ಟು ದೊಡ್ಡದಿರುವ ವ್ಯಾಲಿ ಫೇರ್ ಮಾಲ್, ‘ಗ್ರೇಟ್ ಮಾಲ್ ಆಫ್ ಅಮೆರಿಕ’ಗಳಂತ ಮಾಲ್‌ಗಳನ್ನು ಇಲ್ಲಿ ನೋಡಬಹುದು.

ಒಂದೇ ಜಾಗದಲ್ಲಿ ಹಲವು ಪ್ರಸಿದ್ಧ ಕಂಪನಿಗಳ ಬಟ್ಟೆ, ಚಪ್ಪಲಿ, ಸುಗಂಧಗಳು, ಕನ್ನಡಕ, ಎಲೆಕ್ಟ್ರಾನಿಕ್ ವಸ್ತುಗಳು ಇಂತಹ ವಿವಿಧ ಸಾಮಗ್ರಿಗಳ ಮಳಿಗೆಗಳು, ತೋಟಗಾರಿಕೆಯ ಸಾಮಗ್ರಿಗಳು, ರೆಸ್ಟೋರೆಂಟ್‌ಗಳು, ಜ್ಯೂಸ್, ಕಾಫಿ, ಐಸ್‌ಕ್ರೀಂ ಮಳಿಗೆಗಳು, ಬ್ಯೂಟಿ ಪಾರ್ಲರ್‌ಗಳು… ಇಂತಹ ಹಲವು ಸುಪ್ರಸಿದ್ದ ಕಂಪನಿಗಳ ವೈವಿಧ್ಯಮಯ ವಸ್ತುಗಳ ಮಳಿಗೆಗಳು ಒಂದು ವಿಶಾಲವಾದ ಜಾಗದಲ್ಲಿ ತಂತಮ್ಮ ಜಾಗವನ್ನು, ಅಸ್ತಿತ್ವವನ್ನು ಸ್ಥಾಪಿಸಿಕೊಂಡು ಕುಳಿತಿರುತ್ತವೆ.

ಒಂದು ವಸ್ತುವನ್ನು ಕೊಳ್ಳ ಹೊರಟರೆ ಅದೇ ವಸ್ತುವಿರುವ ಹಲವು ಕಂಪನಿಗಳ ಮಳಿಗೆಗಳು ಇಲ್ಲಿರುತ್ತವೆ. ಎಲ್ಲದರಲ್ಲೂ ಅಡ್ಡಾಡಿ ಗ್ರಾಹಕ ತನ್ನಿಚ್ಛೆಯ ಸರಕನ್ನು ಕೊಳ್ಳಬಹುದು. ಬೆಂಗಳೂರಿನಲ್ಲೂ ಮಾಲ್ ಸಂಸ್ಕೃತಿ ಬಂದಿರುವ ಹಿನ್ನೆಲೆಯಲ್ಲಿ ಇದರ ಬಗ್ಗೆ ಇಷ್ಟೇ ವಿವರಣೆ ಸಾಕೆನ್ನಿಸುತ್ತದೆ. ಬೆಳಗ್ಗೆದ್ದು ಹೊರಟರೆ ಇಡೀ ದಿನ ಬೇಕಾದರೂ ಓಡಾಡಿ ಸಮಯ ಕಳೆಯಬಹುದಾದ ಒಂದು ಜಾಗ, ಏನನ್ನಾದರೂ ಕೊಳ್ಳಲೇ ಬೇಕೆಂದೇನೂ ಇಲ್ಲವಲ್ಲ.

ಇಲ್ಲಿನ ಕೆಲವು ವಿಶೇಷ ಮಳಿಗೆಗಳೆಂದರೆ ಮಲಗುವ ಕೋಣೆ, ಸ್ನಾನದ ಕೋಣೆ ಮತ್ತು ಅಡುಗೆ ಮನೆಯ ಉಪಕರಣಗಳಿಗಷ್ಟೇ ಸೀಮಿತವಾದ ‘ಬೆಡ್ ಬಾತ್ ಬಿಯಾಂಡ್’, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳಿಗೆ ಹೆಸರಾದ `ಫ್ರೈಸ್’, ಕಸೂತಿ, ಕರಕುಶಲ ವಸ್ತುಗಳ ತಯಾರಿಕೆಗೆ ಬೇಕಾದ ಸಕಲ ಸರಕುಗಳನ್ನೂ ಮಾರುವ ‘ಮೈಕೇಲ್ಸ್’, ಮನೆಯ ಪ್ರತಿಯೊಂದು ಭಾಗದ ಅವಶ್ಯಕತೆಗಳಿಗೂ ಬೇಕಾದ ಎಲ್ಲ ಸಾಮಗ್ರಿಗಳನ್ನು ಹಲವು ವಿಭಾಗದಲ್ಲಿ ಇರಿಸಿಕೊಂಡಿರುವ, ಪ್ರತಿಯೊಂದು ಉತ್ಪನ್ನದಲ್ಲೂ ತನ್ನದೇ ಛಾಪನ್ನು ಒತ್ತಿರುವ ‘ಐಕಿಯಾ’ದಂತಹ ಮಳಿಗೆಗಳು (ಇತ್ತೀಚೆಗೆ ಐಕಿಯಾ ಹೈದರಾಬಾದಿನಲ್ಲೂ ಆರಂಭವಾಗಿದೆ).

ಇಂತಹ ಒಂದು ನಿರ್ದಿಷ್ಟ ಉದ್ದೇಶಗಳಿಗೆ ಮಾತ್ರ ಸೀಮಿತವಾದಂತ ಹಲವು ಬಗೆಯ ಮಳಿಗೆಗಳು ಇಲ್ಲಿ ಕಾಣಸಿಗುತ್ತವೆ. ಆಯಾ ಉದ್ದೇಶಗಳಿಗೆ ಬೇಕಾದ ಸರ್ವ ಸಾಮಗ್ರಿಗಳೂ ಇಲ್ಲಿ ಲಭ್ಯವಿರುತ್ತದೆ. ಉದಾಹರಣೆಗೆ ಫ್ರೈಸ್‌ನಲ್ಲಿ ಒಂದು ಕಂಪ್ಯೂಟರನ್ನು ನಾವೇ ತಯಾರಿಸಿಕೊಳ್ಳಲು ಬೇಕಾದ ಎಲ್ಲ ಸಾಮಗ್ರಿಗಳೂ ಸಿಗುತ್ತವೆ. ನಮಗೆ ಬೇಕಾದಂತ ಬಿಡಿ ಭಾಗಗಳನ್ನು ಆಯ್ದುಕೊಂಡು ನಮ್ಮ ಅವಶ್ಯಕತೆಗೆ ತಕ್ಕಂತ ಕಂಪ್ಯೂಟರನ್ನು ನಾವೇ ತಯಾರಿಸಿಕೊಳ್ಳಬಹುದು. ಹೀಗೆ ಪ್ರತಿಯೊಂದು ಇಂತಹ ಮಳಿಗೆಯೂ ತನ್ನ ಮಾರಾಟದ ಸರಕಲ್ಲಿ ಸ್ವಯಂಪೂರ್ಣವಾಗಿರುವುದು ಒಂದು ವಿಶೇಷ.

ಇತ್ತೀಚೆಗೆ ಭಾರತವೂ ಅಮೆರಿಕದ ಪ್ರಭಾವಕ್ಕೆ ಒಳಗಾಗಿ ‘ಮಾಲ್’ ಸಂಸ್ಕೃತಿಯನ್ನು ಬೆಳೆಸಿಕೊಳ್ಳುತ್ತಿರುವುದು ಅಷ್ಟೊಂದು ಆರೋಗ್ಯಕರ ಬೆಳವಣಿಗೆಯೆಂದು ನನಗೆ ಅನ್ನಿಸುತ್ತಿಲ್ಲ. ಹಲವು ಸಣ್ಣ-ಪುಟ್ಟ ಕಿರಾಣಿ ಅಂಗಡಿಗಳು ನಿಧಾನವಾಗಿ ಮುಚ್ಚುತ್ತಿವೆ.

ಆರ್ಥಿಕವಾಗಿ ಅಷ್ಟೇನೂ ಸಬಲರಲ್ಲದಿದ್ದವರು ದಿನದಿನಕ್ಕೆ ಬೇಕಾಗುವಷ್ಟು ಸರಕನ್ನು ಚಿಲ್ಲರೆಯಾಗಿ ಕೊಂಡುಕೊಳ್ಳುತ್ತಿದ್ದ, ಮಧ್ಯಮ ವರ್ಗದವರು ಅಂಗಡಿಯಲ್ಲಿ ಲೆಕ್ಕ ಬರೆಸಿ ತಂದು ತಿಂಗಳಿಗೊಮ್ಮೆ ಪಾವತಿಸುತ್ತಿದ್ದ, ಗ್ರಾಹಕ ಮತ್ತು ವ್ಯಾಪಾರಿಯ ನಡುವಿದ್ದ ಒಂದು ಭಾವನಾತ್ಮಕ ಸಂಬಂಧ ಇಂದು ಕ್ರಮೇಣ ಕಣ್ಮರೆಯಾಗುತ್ತಿದೆ.

ಒಂದು ಬುಟ್ಟಿಯಲ್ಲಿ ಕೆಲವೇ ತರಕಾರಿಗಳನ್ನಿಟ್ಟುಕೊಂಡು ಮಾರಾಟ ಮಾಡಿ ಅಂದಿನ ಲಾಭದಿಂದ ಜೀವನ ನಡೆಸುತ್ತಿದ್ದ ಸಣ್ಣ-ಪುಟ್ಟ ಚಿಲ್ಲರೆ ವ್ಯಾಪಾರಿಗಳು ನಮ್ಮಲ್ಲೂ ಕಣ್ಮರೆಯಾದರೆ ನಿಜಕ್ಕೂ ಅದು ಒಂದು ದುರಂತವೇ ಸರಿ!

ಹೋಟೆಲ್ ಮತ್ತು ರೆಸ್ಟೋರೆಂಟುಗಳು

ಅಮೆರಿಕದವರ ಆಹಾರದ ಮುಖ್ಯ ಭಾಗ ಬೇಕರಿ ಉತ್ಪನ್ನಗಳು, ಮೊಟ್ಟೆ ಮತ್ತು ಮಾಂಸ. ಮಾಂಸಾಹಾರಿಗಳಿಗೆ ಇಲ್ಲಿ ಯಾವುದೇ ಆಹಾರದ ಸಮಸ್ಯೆ ಇಲ್ಲ. ಎಲ್ಲಿ ಹೋದರೂ ಊಟ ಸಿಗುತ್ತದೆ. ಮೆಕ್ಸಿಕನ್, ಥಾಯ್, ಇಟಲಿ, ಚೈನೀಸ್ ಮತ್ತು ಮೆಡಿಟರೇನಿಯನ್ ಇಂತಹ ಕೆಲವು ದೇಶೀಯ ರೆಸ್ಟೋರೆಂಟುಗಳಲ್ಲಿ ಅನ್ನವೂ ಸಿಗುತ್ತದೆ.

ಇತ್ತೀಚೆಗೆ ಇಲ್ಲಿ ಸಸ್ಯಹಾರವೂ ಜನಪ್ರಿಯವಾಗುತ್ತಿರುವುದರಿಂದ ಹಲವು ರೆಸ್ಟೋರೆಂಟುಗಳಲ್ಲಿ ಮಾಂಸಾಹಾರದ ಜೊತೆಗೆ ಶಾಖಾಹಾರಿ ಖಾದ್ಯಗಳೂ ದೊರೆಯುತ್ತವೆ. ಹಲವು ದೇಶಗಳ ಹೊಸ ಹೊಸ ಸ್ವಾದಗಳ, ಪರಿಮಳಗಳ, ರುಚಿಗಳ, ಅನ್ವೇಷಣೆ ಮಾಡ ಬಯಸುವವರು ಇಂತಹ ಎಲ್ಲ ರೆಸ್ಟೋರೆಂಟುಗಳನ್ನು ಸಂದರ್ಶಿಸಬಹುದು.

ಚಿತ್ರಕೃಪೆ: ಗೂಗಲ್

ಇಲ್ಲಿನವರ ನೆಚ್ಚಿನ ಪಿಜಾ಼ ಮತ್ತು ಬರ್ಗರ್ ಎಲ್ಲೆಡೆಯೂ ದೊರಕಿದರೂ, ಅದರಲ್ಲಿ ಶಾಖಾಹಾರಿ ವೈವಿಧ್ಯಗಳು ಹೆಚ್ಚಿನೆಡೆ ದೊರಕುವುದಿಲ್ಲ. ಇಲ್ಲಿನವರು ಹೆಚ್ಚು ಉಪ್ಪು, ಹುಳಿ, ಖಾರವನ್ನು ತಿನ್ನುವವರಲ್ಲವಾದ್ದರಿಂದ ಇಲ್ಲಿನ ಖಾದ್ಯಗಳು ಉಪ್ಪಿನಕಾಯನ್ನು ಸಹಾ ಸೀದಾ ಸೀದಾ ತಿನ್ನುವ ಭಾರತೀಯರಿಗೆ ರುಚಿಸದಿದ್ದರೆ ಅಚ್ಚರಿಯೇನಿಲ್ಲ.

ಆದರೆ ಇಲ್ಲಿರುವ ಭಾರತೀಯ ರೆಸ್ಟೋರೆಂಟುಗಳಲ್ಲಿ ಎಲ್ಲ ಬಗೆಯ ಭಾರತೀಯ ಖಾದ್ಯಗಳೂ ಸಿಗುತ್ತವೆ ಮತ್ತು ಮೂಲಕ್ಕೆ ಮೋಸವಿಲ್ಲದಂತೆ ರುಚಿಯಾಗಿಯೂ ಇರುತ್ತವೆ. ಕರ್ನಾಟಕ, ಆಂಧ್ರ, ಕೇರಳ, ತಮಿಳುನಾಡು, ಮುಂಬೈ, ಗುಜರಾತ್ ಈ ಎಲ್ಲ ಮಾದರಿಯ ಊಟ ಮತ್ತು ತಿನಿಸುಗಳು ದೊರೆಯುತ್ತವೆ. ಸನ್ನಿವೇಲ್‌ನ ಒಂದೆರಡು ಬೀದಿಗಳು ಇಂತಹ ವಿವಿಧ ರಾಜ್ಯಗಳ ರೆಸ್ಟೋರೆಂಟುಗಳಿಗಾಗಿಯೇ ಹೆಸರಾಗಿದೆ.

ಕಾರಿನಲ್ಲಿ ಸಾಗುತ್ತಾ ಬೆಂಗಳೂರಿನ ಬಸವನಗುಡಿಯ ಪ್ರದೇಶದಲ್ಲಿ ಕಂಡಂತೆ ಒಂದಾದ ಮೇಲೊಂದು ಭಾರತೀಯ ಹೊಟೆಲ್‌ಗಳನ್ನು ನೋಡುತ್ತಾ ಸಾಗಬಹುದು. ಕರ್ನಾಟಕದ ಬೆಂಗಳೂರು ಕೆಫೆ, ಆಂಧ್ರದ ಉಲುವಾಚಾರು, ತಿರುಪತಿ ಭೀಮಾ, ಕೇರಳದ ಆಚ್ಚಿ ಕಡಾಯಿ, ರೆಡ್ ಚಿಲ್ಲಿ, ತಮಿಳುನಾಡಿನ ಕೋಮಲ ವಿಲಾಸ್, ಶರವಣ ಭವನ್, ಗುಜರಾತಿನ ಸುರಧೀ ತಾಲಿ, ಬಾಂಬೆ ಚಾಟ್ಸ್, ಡೆಲ್ಲಿ ಚಾಟ್ಸ್, ರಂಗೋಲಿ ಸ್ವೀಟ್ಸ್ ಎಲ್ಲವೂ ಇಲ್ಲಿ ಹೆಸರುವಾಸಿ.

ರಜಾ ದಿನಗಳಲ್ಲಿ ವಿಶೇಷ ಊಟಗಳ ವ್ಯವಸ್ಥೆಯೂ ಕೆಲವೆಡೆ ಇರುತ್ತವೆ. ಅಂತಹ ದಿನಗಳಲ್ಲಿ ಅಲ್ಲಿಗೆ ಹೋದರೆ ಭಾರತೀಯರ ಮೇಳವನ್ನೇ ನೋಡಬಹುದು. ಪರನಾಡಿನಲ್ಲಿ ಹಲವು ವರುಷಗಳಿಂದ ನೆಲೆಸಿದ್ದರೂ, ಮೆದುಳಿನ ಯಾವುದೋ ನರತಂತುವಿನಲ್ಲಿ ಅಚ್ಚಾಗಿ ಹೋಗಿರುವ ದೇಶೀಯ ಖಾದ್ಯಗಳ ರುಚಿ, ಸ್ವಾದ, ಪರಿಮಳಗಳ ಚಿತ್ರಣ ಕಣ್ಣೆದುರು ಸಾಕಾರವಾಗುವುದನ್ನು ಅನುಭವಿಸುತ್ತಾ ತಾವೂ ತಿಂದು, ತಮ್ಮ ಮಕ್ಕಳಿಗೂ ಅದನ್ನು ಪರಿಚಯಿಸುವ ಪರಿ ನೋಡುವಂಥದ್ದು.

ಚಿತ್ರಕೃಪೆ: ಗೂಗಲ್

ಊಟ ತಿಂಡಿಗಳಷ್ಟೇ ಅಲ್ಲದೆ ಇತ್ತೀಚಿನ ವೈವಿಧ್ಯಮಯವಾದ ಚಾಟ್ಸ್‌ಗಳೂ ಇಲ್ಲಿ ಹೆಚ್ಚು ಜನಪ್ರಿಯವಾಗಿವೆ. ಹಲವಾರು ಚಾಟ್ಸ್‌ ಅಂಗಡಿಗಳಿವೆ. ಇಷ್ಟೇ ಅಲ್ಲದೆ ನಮ್ಮಲ್ಲಿನ ಗಾಡಿಗಳ ಹಾಗಿರುವ ‘ಫುಡ್ ಟ್ರಕ್’ಗಳಲ್ಲಿ ಕೂಡಾ ಚಾಟ್ಸ್ ಮತ್ತು ಇತರ ಬಗೆಯ ತಿನಿಸುಗಳನ್ನೂ ಮಾರುತ್ತಾರೆ. ಯಾವುದೋ ಒಂದು ನಿರ್ದಿಷ್ಟ ಸ್ಥಳದಲ್ಲಿ, ನಿರ್ದಿಷ್ಟ ಸಮಯದಲ್ಲಿ ತರಹೇವಾರಿ ಚಾಟ್‌ಗಳ ಆಕರ್ಷಕ ಚಿತ್ರಗಳನ್ನು ಪ್ರದರ್ಶಿಸುವ ತಮ್ಮ ವಾಹನಗಳನ್ನು ನಿಲ್ಲಿಸಿಕೊಂಡು ವ್ಯಾಪಾರವನ್ನು ಆರಂಭಿಸುತ್ತಾರೆ.

ರುಚಿ ರುಚಿಯಾಗಿರುವ ಇವನ್ನು ರಸ್ತೆಯ ಬದಿಯಲ್ಲಿ ನಿಂತು ತಿನ್ನುತ್ತಾ ಒಂದು ವಿಶಿಷ್ಟವಾದ ದೇಸಿ ಅನುಭವವನ್ನು ಪಡೆಯಬಹುದು. ಖುಷಿಯ ಮಾತೆಂದರೆ ಇವುಗಳ ಬಗೆಗಿನ ವಿವರಗಳನ್ನು ಗೂಗಲ್‌ನಲ್ಲಿಯೂ ನೋಡಿ, ಯಾವ ಯಾವ ಜಾಗದಲ್ಲಿ ಮಾಡುವ ತಿನಿಸುಗಳಿಗೆ, ಗ್ರಾಹಕರು ಎಷ್ಟೆಷ್ಟು ತಮ್ಮ ಮೆಚ್ಚುಗೆಯ ಅಂಕಗಳನ್ನು ಕೊಟ್ಟಿದ್ದಾರೆ ಎನ್ನುವುದನ್ನು ತಿಳಿದುಕೊಂಡು ಅಲ್ಲಿಗೆ ಹೋಗಿ ಸವಿಯಬಹುದು. ಗೂಗಲ್‌ನ ಉಪಯುಕ್ತತೆಗೆ ಮೇರೆಯುಂಟೇ?! ಹಾಗೆಯೇ ಸಿಹಿತಿನಿಸುಗಳ ಪ್ರಿಯರಿಗೂ ಭಾರತೀಯ ಶೈಲಿಯ ಸಿಹಿತಿನಿಸುಗಳು ಹಲವೆಡೆ ಲಭ್ಯವಿದೆ.

ವಿದ್ಯಾಭ್ಯಾಸದ ಕ್ರಮ

ಇಲ್ಲಿನ ಮಕ್ಕಳು ಶಾಲೆಗೆ ಹೋಗುವುದು ಐದು ವರುಷದ ನಂತರ. ಮೊದಲ ತರಗತಿಗೆ ಸೇರುವಾಗ ಕನಿಷ್ಟ ಆರು ವರ್ಷಗಳಾಗಿರಬೇಕು. ಅದಕ್ಕೆ ಮುಂಚಿತವಾಗಿ ಕಿಂಡರ್‌ಗಾರ್ಟನ್ನಿನಲ್ಲಿ ಒಂದು ವರ್ಷ ಕಳೆಯುತ್ತಾರೆ. ಮೊದಲನೆಯ ತರಗತಿಯಿಂದ ಐದನೇ ತರಗತಿಯವರೆಗೆ ಪ್ರಾಥಮಿಕ ಶಾಲೆ; ಆರರಿಂದ ಎಂಟನೇ ತರಗತಿಯವರೆಗೆ ಮಾಧ್ಯಮಿಕ ಶಿಕ್ಷಣ ಹಾಗೂ ಹತ್ತು, ಹನ್ನೊಂದು ಮತ್ತು ಹನ್ನೆರಡನೇ ತರಗತಿಗಳು ಹೈಸ್ಕೂಲು ಶಿಕ್ಷಣ. ಈ ತರಗತಿಗಳ ಕ್ರಮ ಕೆಲವೆಡೆ ಅಲ್ಪ ಸ್ವಲ್ಪ ವ್ಯತ್ಯಾಸವಾಗಬಹುದು.

ಎಲ್ಲೋ ಕೆಲವು ಅತಿ ಶ್ರೀಮಂತರ ಮಕ್ಕಳನ್ನು ಹೊರತುಪಡಿಸಿದರೆ, ಎಲ್ಲರೂ ಕಲಿಯುವುದು ಸರ್ಕಾರಿ ಶಾಲೆಗಳಲ್ಲಿಯೇ. ಶಿಕ್ಷಣದ ಮಟ್ಟವನ್ನು ಆಧರಿಸಿ ಒಂದೊಂದು ಊರಿನ ಶಾಲೆಗೂ 10ರ ವರೆಗೆ ಅಂಕಗಳನ್ನು ನೀಡಿರುತ್ತಾರೆ. 5ರ ತನಕ ಅಂಕಗಳನ್ನು ಹೊಂದಿರುವ ಶಾಲೆಗಳು ಸಾಧಾರಣ ಮಟ್ಟದವು. 6ರ ಮೇಲಿನ ಅಂಕಗಳು ಉತ್ತಮ ಶಿಕ್ಷಣ ಗುಣಮಟ್ಟವನ್ನು ಸೂಚಿಸುತ್ತವೆ. 8ರ ಮೇಲಿನವು ಅತ್ಯುತ್ತಮ.

ಚಿತ್ರಕೃಪೆ: ಗೂಗಲ್

ಇಲ್ಲಿ ಒಂದು ಊರಿನಲ್ಲಿರುವ ನಾಗರಿಕರು ಅದೇ ಊರಿನ ಶಾಲೆಗಳಿಗೇ ಸೇರಿಸಬೇಕೇ ಹೊರತು, ಕಷ್ಟಪಟ್ಟಾದರೂ ವಾಹನದ ಏರ್ಪಾಡು ಮಾಡಿ ದೂರದ ಉತ್ತಮ ಮಟ್ಟದ ಶಾಲೆಗೆ ಕಳುಹಿಸುತ್ತೇನೆಂದು ಅಂದುಕೊಳ್ಳುವಂತಿಲ್ಲ. ಹಾಗಾಗಿ ಇಲ್ಲಿ ಮನೆಗಳನ್ನು ಕೊಳ್ಳುವವರು, ಬಾಡಿಗೆಗೆ ಹಿಡಿಯುವವರು ಶಾಲೆಗಳ ಅಂಕಗಳನ್ನು ಸಹಾ ಗಮನದಲ್ಲಿಟ್ಟುಕೊಂಡೇ ಮನೆ ಮಾಡುತ್ತಾರೆ. ಖಾಸಗಿ ಶಾಲೆಗಳಿಗೆ ಸೇರಿಸುವವರಿಗೆ ಇಂತಹ ನಿಯಮಗಳಿಲ್ಲವಾದರೂ ಅದು ಎಲ್ಲರ ಕೈಗೆಟಕುವಂತಹುದೇ ಅಲ್ಲ ಮತ್ತು ಅವುಗಳ ಬಗ್ಗೆ ಇಲ್ಲಿನವರು ನಮ್ಮಲ್ಲಿನ ಹಾಗೆ ಯಾವುದೇ ಹಿರಿಮೆಯ ಭ್ರಮೆಗಳನ್ನು ಸಹಾ ಇಟ್ಟುಕೊಂಡಿರುವುದಿಲ್ಲ.

ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ಕಲಿಯುವ ಎಲ್ಲ ಪಠ್ಯಗಳೂ ಕಡ್ಡಾಯವಾಗಿರುತ್ತವೆ. ಜೊತೆಯಲ್ಲಿ ತಮಗಿಷ್ಟವಾಗುವಂತಹ ಸಂಗೀತ, ವಾದ್ಯ ಸಂಗೀತ, ಕಂಪ್ಯೂಟರ್, ಕಲೆ, ತೋಟಗಾರಿಕೆ, ಚಿತ್ರ ಬರೆಯುವುದು ಇಂತಹ ಎರಡು ವಿಷಯಗಳನ್ನು ಆಯ್ಕೆ ಮಾಡಿಕೊಂಡು ಅಭ್ಯಾಸ ಮಾಡಬಹುದು. ಇಂಗ್ಲಿಷ್ ಪ್ರಥಮ ಭಾಷೆ; ಎರಡನೆಯ ಭಾಷೆಯಾಗಿ ಫ್ರೆಂಚ್ ಅಥವಾ ಸ್ಪಾನಿಷ್ ಭಾಷೆಯನ್ನು ಆಯ್ದುಕೊಳ್ಳಬಹುದು. ಪ್ರಾಥಮಿಕ ಶಾಲೆಯಲ್ಲಿ ಭಾಷೆಗಳೊಂದಿಗೆ, ಗಣಿತ ಮತ್ತು ಪರಿಸರ ವಿಜ್ಞಾನದ ಪ್ರಾಥಮಿಕ ಪಾಠಗಳನ್ನು ಕಲಿಸುತ್ತಾರೆ.

ಮಾಧ್ಯಮಿಕ ಶಾಲೆಯಲ್ಲಿ ಭಾಷೆಗಳ ಜೊತೆಗೆ ಗಣಿತ, ಸಾಮಾಜಿಕ ವಿಜ್ಞಾನ ಮತ್ತು ವಿಜ್ಞಾನದ ತರಗತಿಗಳು ಇರುತ್ತವೆ. ಇಲ್ಲೂ ಸಹ ಇಂಗ್ಲೀಷ್‌ನ ಜೊತೆಗೆ ತಮಗಿಷ್ಟವಾದ ಎರಡನೆಯ ಭಾಷೆಯ ಆಯ್ಕೆಗೆ ಹಾಗೂ ತಮಗೆ ಆಸಕ್ತಿ ಇರುವ ಫೋಟೋಗ್ರಫಿ, ಚಿತ್ರ ಕಲೆ, ಸಂಗೀತ, ಮಣ್ಣಿನಲ್ಲಿ ಕಲಾಕೃತಿಗಳನ್ನು ಮಾಡುವ ಕಲೆ ಇಂತಹ ಕೆಲವು ವಿಷಯಗಳನ್ನು ಆಯ್ದುಕೊಂಡು ಅಭ್ಯಾಸ ಮಾಡಬಹುದು.

ಹೈಸ್ಕೂಲಿನಲ್ಲಿ ಈ ವಿಷಯಗಳ ಮುಂದುವರಿಕೆಯೇ ಆದರೂ ಕಲಿಸುವ ವಿಷಯದ ಹರಹು ಸಾಕಷ್ಟು ವಿಸ್ತಾರವಾಗುತ್ತಾ ಹೋಗುತ್ತದೆ. ಗಣಿತದ ಜೊತೆಗೆ ಟ್ರಿಗ್ನಾಮೆಟ್ರಿ, ಕ್ಯಾಲ್ಕುಲಸ್ ಅಂಥವೂ, ವಿಜ್ಞಾನದಲ್ಲಿ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರದಂಥದ್ದೂ, ಸಾಮಾಜಿಕ ವಿಜ್ಞಾನದಲ್ಲಿ ಚರಿತ್ರೆಯ ಜೊತೆಯಲ್ಲಿ ಭೂಗೋಳವೂ ಸೇರುತ್ತವೆ. ಐಚ್ಛಿಕ ವಿಷಯಗಳಲ್ಲಿಯೂ ಉನ್ನತವಾದ ತರಬೇತಿಯನ್ನು ಪಡೆದುಕೊಳ್ಳಬಹುದು.

ಎಲ್ಲ ಶಾಲೆಗಳಲ್ಲೂ ಬುದ್ಧಿಮಾಂದ್ಯ, ಮಾತನಾಡಲು ಹಾಗೂ ಕೇಳಲು ತೊಂದರೆಯಿರುವ ಮಕ್ಕಳಿಗೆ ಪ್ರವೇಶವಿದೆ. ಅವರಿಗೆ ಇತರ ಮಕ್ಕಳೊಂದಿಗೆ ಕಲೆತು ಕಲಿಯುವ ಅವಕಾಶವಿದೆ. ಪ್ರತಿ ಶಾಲೆಯಲ್ಲೂ ಇಂತಹ ಮಕ್ಕಳಿಗೆ ವಿಶೇಷ ತರಬೇತಿ ನೀಡುವ ಶಿಕ್ಷಕರು ಕಡ್ಡಾಯವಾಗಿ ಇರುತ್ತಾರೆ. ಶಾಲೆಯ ಅವಧಿಯಲ್ಲಿಯೇ ಅವರವರ ಅವಶ್ಯಕತೆಗಳಿಗೆ ಅನುಗುಣವಾಗಿ ಒಂದು ವೇಳಾಪಟ್ಟಿಯನ್ನು ಸಿದ್ಧಮಾಡಿಕೊಂಡು, ಅವರನ್ನು ತಮ್ಮೊಂದಿಗೆ ತರಬೇತಿಯ ಕೋಣೆಗೆ ಕರೆದೊಯ್ದು ವಿಶೇಷ ತರಬೇತಿ ನೀಡುತ್ತಾರೆ.

ಇಲ್ಲವೇ ಸಾಧ್ಯವಿದ್ದಲ್ಲಿ ತರಗತಿಯಲ್ಲೇ ಅಂತಹ ಮಕ್ಕಳ ಸನಿಹದಲ್ಲೇ ಕುಳಿತುಕೊಂಡು ಅವರು ಪಾಠವನ್ನು ಅರ್ಥಮಾಡಿಕೊಳ್ಳುವ ರೀತಿಯನ್ನು ಕಲಿಸುತ್ತಾರೆ. ವಿಶೇಷ ಗಮನ, ವಿದ್ಯೆ ಮತ್ತು ಇತರ ಮಕ್ಕಳೊಂದಿಗೆ ಬೆರೆಯುವಿಕೆ ಅವರನ್ನು ಸಾಧ್ಯವಾದಷ್ಟು ಮಟ್ಟಿಗೆ ಸಮಾಜದ ಮುಖ್ಯವಾಹಿನಿಗೆ ಕರೆತರುವ ಪ್ರಯತ್ನವಾಗಿರುತ್ತದೆ.

ಇಂತಹ ಹಲವರು ಹೈಸ್ಕೂಲನ್ನು ಮುಗಿಸುವ ಹೊತ್ತಿಗೆ ತಕ್ಕಮಟ್ಟಿಗೆ ಸ್ವತಂತ್ರವಾಗಿ ಜೀವನವನ್ನು ನಿಭಾಯಿಸುವಷ್ಟರ ಮಟ್ಟಿಗೆ ತಯಾರಾಗಿರುತ್ತಾರೆ. ಹೈಸ್ಕೂಲಿನ ಶಿಕ್ಷಣದ ನಂತರ ಇನ್ನೆರಡು ವರ್ಷಗಳು ಇವರಿಗೆ ಬಟ್ಟೆ ತಯಾರಿಕಾ ಘಟಕಗಳಲ್ಲೋ, ಅಂಗಡಿ ಮುಂಗಟ್ಟುಗಳಲ್ಲೋ, ರೆಸ್ಟೋರೆಂಟುಗಳಲ್ಲೋ ಅಥವಾ ಅವರ ಮನೋಭಾವಕ್ಕೆ, ಸಾಮರ್ಥ್ಯಕ್ಕೆ ತಕ್ಕಂತಹ ವೃತ್ತಿಯ ಜಾಗಗಳಲ್ಲಿ ವಿಶೇಷ ತರಬೇತಿಯನ್ನು ಒಂದಷ್ಟು ವೇತನದ ಜೊತೆಗೆ ನೀಡಿ ಇವರನ್ನು ತಮ್ಮ ಪಾಡಿಗೆ ಜೀವನ ನಿಭಾಯಿಸುವಷ್ಟರ ಮಟ್ಟಿಗೆ ತಯಾರು ಮಾಡಿರುತ್ತಾರೆ.

ಮುಂದಿನ ಎರಡು ವರ್ಷಗಳು ಪೋಷಕರ ಇಚ್ಛೆಯಿದ್ದಲ್ಲಿ ಮಕ್ಕಳು ತಮ್ಮ ಪಾಡಿಗೆ ತಾವೇ ಸ್ವಲ್ಪವೇ ಆಧಾರದೊಂದಿಗೆ ಜೀವಿಸುವ ಕಲೆಯನ್ನು ಹೇಳಿಕೊಡುತ್ತಾರೆ. ತಮ್ಮ ಕೋಣೆಯನ್ನು, ಶೌಚಾಲಯವನ್ನು ಶುಚಿಗೊಳಿಸುವುದು; ಬಸ್ಸು, ಟ್ರಾಮುಗಳಲ್ಲಿ ಪಯಣಿಸಿ ಕೆಲಸಮಾಡುವ ಜಾಗವನ್ನು ಸೇರುವುದು; ತಮಗೆ ಬೇಕಾದ ಸಾಮಾನುಗಳನ್ನು ಕೊಂಡು ಸರಿಯಾಗಿ ಬಿಲ್ಲು ಪಾವತಿಸಿ ಚಿಲ್ಲರೆಯನ್ನು ವಾಪಸ್ಸು ಪಡೆದುಕೊಳ್ಳುವುದು; ಉಳಿಕೆಯ ಹಣವನ್ನು ಬ್ಯಾಂಕಿನಲ್ಲಿ ಜಮಾ ಮಾಡುವುದು ಇಂತಹ ತರಬೇತಿಯನ್ನು ಈ ಎರಡು ವರ್ಷಗಳಲ್ಲಿ ನೀಡಿ ಈ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ಸೇರಿಸುವಲ್ಲಿ ನೆರವಾಗುತ್ತಾರೆ.

ಇನ್ನಿತರ ಸಾಮಾನ್ಯ ಮಕ್ಕಳ ಹೈಸ್ಕೂಲಿನ ನಂತರದ ಶಿಕ್ಷಣ ಮಕ್ಕಳ ಆಯ್ಕೆಗೇ ಬಿಟ್ಟದ್ದು. ಇಲ್ಲಿನ ಪೋಷಕರು ಮಕ್ಕಳ ಉನ್ನತ ಶಿಕ್ಷಣದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಕೆಲವು ಮಕ್ಕಳು ಓದನ್ನು ಮುಂದುವರೆಸಲು ಇಚ್ಛಿಸಿದರೆ, ಹಲವರು ಉದ್ಯೋಗಗಳನ್ನು ಹುಡುಕಿಕೊಂಡು ಸ್ವತಂತ್ರರಾಗಿರಲು ಬಯಸುತ್ತಾರೆ; ಇಲ್ಲವೇ ತಮಗೆ ಇಷ್ಟವಾದ ವಿಷಯವನ್ನು ವಿಶೇಷವಾಗಿ ಕಲಿತು ಅದರಲ್ಲೇ ಮುಂದುವರಿಯುವ ಇಚ್ಛೆ ತೋರುತ್ತಾರೆ.

ಇಲ್ಲಿನ ಏಷಿಯಾ ಮೂಲದ ಅದರಲ್ಲೂ ಭಾರತ ಮತ್ತು ಚೀನಾ ದೇಶದ ತಾಯ್ತಂದೆಯರು ಮಾತ್ರವೇ ಮಕ್ಕಳ ಹೈಸ್ಕೂಲಿನ ನಂತರದ ಶಿಕ್ಷಣದ ಬಗ್ಗೆ ಅತ್ಯಂತ ಕಾಳಜಿ ವಹಿಸುತ್ತಾ, ಅವರ ಮೂಲಭೂತ ಸಿದ್ಧಾಂತದ ಹಾಗೆ ಮಕ್ಕಳ ಉನ್ನತ ಶಿಕ್ಷಣದ ಹೊರೆಯನ್ನು ತಾವೇ ಹೊರುತ್ತಾರೆ. ಅಲ್ಲಿನವರೆಗಿನ ಶಿಕ್ಷಣಕ್ಕೆ ಅವರು ಏನನ್ನು ವ್ಯಯಿಸಿರಲಿಲ್ಲವೋ ಅದನ್ನೆಲ್ಲಾ ಬಡ್ಡಿ ಸಹಿತವಾಗಿ ಉನ್ನತ ಶಿಕ್ಷಣಕ್ಕೆ ಖರ್ಚುಮಾಡಿಕೊಂಡು ಮಕ್ಕಳಿಗೆ ಉತ್ತಮ ಭವಿಷ್ಯವನ್ನು ರೂಪಿಸಿದೆವೆಂದು ಪಾವನರಾಗುತ್ತಾರೆ.

ಸಾಮಾನ್ಯವಾಗಿ ಇಲ್ಲಿ ಬೆಳೆದ ಮಕ್ಕಳು ಕಾಲೇಜು ಶಿಕ್ಷಣದ ಹೊತ್ತಿಗೆ ತಮ್ಮ ತಂದೆ, ತಾಯಿಯರಿಂದ ಸ್ವಲ್ಪ ಮಟ್ಟಿಗೆ ದೂರವಾಗಿ ಸ್ವತಂತ್ರವಾಗಿ ಬದುಕಲು ಇಚ್ಛಿಸುತ್ತಾರೆ. ಇಲ್ಲಿ ಓದಲು ಇಚ್ಛಿಸುವ ಮಕ್ಕಳಿಗೆ ಸುಲಭವಾಗಿ ಬ್ಯಾಂಕಿನ ಸಾಲ ಸಿಗುತ್ತದೆ. ಅಲ್ಲದೇ ಕೆಲವು ಮಕ್ಕಳು ಅರೆಕಾಲಿಕ ಉದ್ಯೋಗಗಳನ್ನು ಮಾಡಿ ಸಂಪಾದಿಸುತ್ತಾ ತಮ್ಮ ವಿದ್ಯೆಗೆ ತಾವೇ ಹಣವನ್ನು ಗಳಿಸಿಕೊಳ್ಳುವುದು ಇಲ್ಲಿ ಸಾಮಾನ್ಯವಾದ ವಿಷಯ. ಮಕ್ಕಳ ವೈಯಕ್ತಿಕ ವಿಷಯಗಳಲ್ಲಿ ತಂದೆ-ತಾಯಿಯರು ತಲೆ ಹಾಕುವುದಿಲ್ಲ.

ಈ ರೀತಿ ಮಕ್ಕಳ ಬಗ್ಗೆ ಒಂದು ನಿರ್ಲಿಪ್ತತೆಯನ್ನು ಬೆಳೆಸಿಕೊಳ್ಳುವುದು ಪ್ರಕೃತಿ ಕಲಿಸುವ ಪಾಠವೇನೋ. ರೆಕ್ಕೆ ಬಲಿತ ಯಾವ ಹಕ್ಕಿಯನ್ನೂ ತಾಯಿ-ತಂದೆ ಹಕ್ಕಿಗಳು ಸಾಕುವುದಿಲ್ಲ; ಪ್ರಾಣಿಗಳಲ್ಲಾದರೂ ಅಷ್ಟೆ. ನಮ್ಮ ಆಧ್ಯಾತ್ಮವೂ ಇದನ್ನೇ ಹೇಳುತ್ತದೆಯಾದರೂ, ಭಾರತೀಯರು ಸಂಸಾರದಲ್ಲಿ ಕಮಲ ಪತ್ರದಂತಿರುವುದನ್ನು ಕಲಿಯಲು ಅವರ ಭಾವನಾತ್ಮಕ ಸಂಬಂಧಗಳು ಬಿಡುವುದಿಲ್ಲ.

ಮಕ್ಕಳಿಗೆ ಮಕ್ಕಳಾದರೂ ಇಡಿಯ ಸಂಸಾರವನ್ನೇ ಒಂದು ಮಮತೆಯ ಬಂಧದಲ್ಲಿ ಕಟ್ಟಿ ಸಂತೋಷಪಡುವುದು ಭಾರತೀಯರ ಮನೋಭಾವ. ಇದು ಸರಿಯೋ, ತಪ್ಪೋ ಎನ್ನುವ ವಾದ ಅಪ್ರಸ್ತುತ. ಈ ಬಂಧನದಲ್ಲಿ ಒದ್ದಾಡುತ್ತಿದ್ದರೂ ಒಂದು ಮಟ್ಟದಲ್ಲಿ ಸಂತೋಷವನ್ನು ಅನುಭವಿಸುತ್ತಿರುವುದೂ ಅಷ್ಟೇ ನಿಜ. ಸದ್ಯದಲ್ಲಂತೂ ಹೀಗಿದೆ.. ಮುಂದೆ..?!

(ಮುಂದುವರಿಯುವುದು)

‍ಲೇಖಕರು avadhi

October 17, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: