‘ಆನೆ ಕಥೆ’ ಜೊತೆ ನಮ್ಮದೊಂದು ಕಥೆ..

ನಾಗರಾಜ್ ನವೀಮನೆ ಅವರ ಚೊಚ್ಚಲ ಕೃತಿ ‘ಆನೆ ಕಥೆ’.

ಅಭಿನವ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.

ನಾಗರಾಜ್ ನವೀಮನೆ ಈ ಪುಸ್ತಕದಲ್ಲಿ ಸಾಕಾನೆ ಹಾಗೂ ಮಾವುತರ ನಡುವಿನ ಬದುಕು ಹಾಗೂ ಒಡನಾಟವನ್ನು ಚಿತ್ರಿಸಿದ್ದಾರೆ. ಅಲ್ಲದೆ, ಆನೆ ಡಾಕ್ಟರ್, ಆನೆ ಡಾಕ್ಯುಮೆಂಟರಿ ಮತ್ತು ಇನ್ನಿತರ ವಿವರಗಳನ್ನು ದಾಖಲಿಸಿದ್ದಾರೆ.

ಆನೆ ಮತ್ತು ಮಾವುತನ ನಡುವಿನ ಭಾವನಾತ್ಮಕ ಸಂಬಂಧವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಈ ಕೃತಿ ಕುರಿತು ಕೃಷ್ಣ ಚೆಂಗಡಿ ಹಾಗೂ ತುಷಾರ್ ರಾಜೇಶ್ ಬರೆದ ಬರಹಗಳು ಇಲ್ಲಿವೆ-

ಲೇಖಕ ನಾಗರಾಜ್ ನವೀಮನೆ

‘ಆನೆ ಕಥೆ’ ಪುಸ್ತಕ ಲೇಖಕರಿಗೆ ತಲುಪಿಸಲು ಹೊಗಿ… ಆನೆಗೆ ಸಿಕ್ಕಿ ಹಾಕಿಕೊಂಡಿದ್ವಿ…

ಕೃಷ್ಣ ಚೆಂಗಡಿ

‘ಆನೆ ಕಥೆ’ ಇದು ಈಚೆಗೆ ಅಭಿನವ ಪ್ರಕಟಿಸಿರುವ ಕೃತಿ. ಈ ಕೃತಿ ವಿಜಯ ದಶಮಿಗೆ ಬರಬೇಕೆಂದುಕೊಂಡಿದ್ದರಿಂದ ತುಂಬಾ ಕಡಿಮೆ ಸಮಯದಲ್ಲಿ ಅಂದರೆ ಎರಡೇ ದಿನಗಳಲ್ಲಿ ಪುಸ್ತಕ ವಿನ್ಯಾಸಮಾಡಿ, ಕರಡು ತಿದ್ದಿಸಿ, ಮುಖಪುಟ ರಚಿಸಿ ಅಚ್ಚುಕಟ್ಟಾಗಿ ಮುದ್ರಣಮಾಡಲಾಯಿತು. ಇನ್ನು ಲೇಖಕರಿಗೆ ಪುಸ್ತಕ ತಲುಪಿಸುವುದಷ್ಟೇ ಬಾಕಿ.

ಅಭಿನವ ಪ್ರತೀ ವರ್ಷವು ಸರಸ್ವತಿ ಪೂಜೆಯದಿನದಂದು ಪುಸ್ತಕ ಗೊದಾಮಿಗೆ ಪೂಜೆ ಮುಗಿಸಿ ಹೊರಗಡೆ ಹೊರಡುವುದು ಪದ್ದತಿ.

ಈ ವರುಷವೂ ಎಂದಿನಂತೆ ಪೂಜೆ ಮುಗಿಸಿ ಮನೆಯವರೆಲ್ಲ ಕೂಡಿ ಬಿಳಿಗಿರಿ ರಂಗನ ಬೆಟ್ಟ, ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗಿ ಮೈಸೂರಿಗೆ ಹೋಗೋಣ ಅಂತ ಅಂದುಕೊಂಡಿದ್ದರಿಂದ, ‘ಆನೆ ಕಥೆ’ ಲೇಖಕರಾದ ನಾಗರಾಜ್ ನವೀಮನೆ ಅವರಿಗೆ ಪುಸ್ತಕಗಳನ್ನ ನೇರವಾಗಿ ತಲುಪಿಸೋಣ ಅಂದುಕೊಂಡು ನಮ್ಮಜೊತೆಯಲ್ಲೇ ಕಾರಿನಲ್ಲಿಟ್ಟುಕೊಂಡು ಹೊರಟೆವು.

ಬೆಂಗಳೂರಿನಿಂದ ಹೊರಟಿದ್ದೇ ತಡವಾಗಿತ್ತು. ಚಾಮರಾಜನಗರದಿಂದ ನನ್ನ ಶಾಲಾದಿನಗಳ ಮಿತ್ರ ಶಕ್ತಿವೇಲ್ ರನ್ನು ಕರೆದುಕೊಂಡು ಬಿಳಿಗಿರಿ ರಂಗನ ಬೆಟ್ಟಕ್ಕೆ ಹೊರಟೆವು. ಸಂಜೆ ೬ಗಂಟೆಯ ನಂತರ ಬೆಟ್ಟಕ್ಕೆ ಪ್ರವೇಶವಿಲ್ಲ. ನಾವು ಅಲ್ಲಿಗೆ ಹೋಗುವ ಹೊತ್ತಿಗೆ ಸಂಜೆ : ೫:೩೦. ದೇವಸ್ಥಾನದ ಆಡಳಿತ ಮಂದಿ ಮತ್ತು ಫಾರೆಸ್ಟ್ ಆಫೀಸರ್ ೬ಗಂಟೆಯ ಒಳಗೆ ಬೆಟ್ಟದಿಂದ ಇಳಿಯಲು ಸೂಚನೆ ನೀಡಿದ್ದರು. ಅವರ ಸೂಚನೆಯ ಮೇರೆಗೆ ಬೆಟ್ಟಕ್ಕೆ ಹೊರಟೆವು. ಹೋಗುವಾಗಲೇ ದಾರಿಯಲ್ಲಿ ಆನೆಗಳು ಸಾಲು ಸಾಲಾಗಿ ರಸ್ತೆಯಿಂದ ದೂರದಲ್ಲಿ ಮೇಯುತ್ತಿದ್ದವು. ಬೆಳಕಿದ್ದುದರಿಂದ ಬೆಟ್ಟದಿಂದ ವಾಪಸ್ ಬರುತ್ತಿದ್ದವರೆಲ್ಲ ಗಾಡಿಗಳನ್ನು ನಿಲ್ಲಿಸಿ ಫೋಟೋ, ವಿಡಿಯೋ ಕ್ಲಿಕ್ಕಿಸುತ್ತಿದ್ದರು, ನಾವು ಕಾರನ್ನು ನಿಲ್ಲಿಸಿ ಫೋಟೋ ತೆಗೆದುಕೊಂಡೆವು. ಬೆಟ್ಟ ತಲುಪುವುದರೊಳಗೆ ೬:೧೦ ಆಗಿತ್ತು. ದೇವಸ್ಥಾನದಲ್ಲಿ ಪೂಜೆ ಮುಗಿಸಿ ಹೊರಬರುವ ಹೊತ್ತಿಗೆ ೭:೦೦ಗಂಟೆಯಾಗಿತ್ತು. ಚಾಮರಾಜನಗರದಲ್ಲಿ ರಾತ್ರಿ ಉಳಿಯುವ ವ್ಯವಸ್ಥೆಯಾಗಿದ್ದರಿಂದ ವಾಪಸ್ ಬರಲೇ ಬೇಕಿತ್ತು. ಅಂತೆಯೆ ಬೆಟ್ಟದಲ್ಲಿ ಫಾರೆಸ್ಟ್ ಆಫೀಸರ್ ಕಾರನ್ನ ತಡೆದು ಈಗ ನಿಮ್ಮನ್ನ ಕೇಳಗಡೆ ಹೋಗಲು ಬಿಡುವುದಿಲ್ಲ. ಇಲ್ಲೇ ರೂಂ ಮಾಡಿ ಉಳಿಯಿರಿ, ಆನೆಗಳು ಮತ್ತು ಕಾಡುಪ್ರಾಣಿಗಳು ರಸ್ತೆಯಲ್ಲೇ ನಿಂತಿರುತ್ತವೆ ಎಂದು ತಿಳಿಸಿದರು.

ನಾಳಿನ ಕಾರ್ಯಕ್ರಮವೆಲ್ಲ ನಿಗಧಿಯಾಗಿದ್ದರಿಂದ ಹೋಗಲೇಬೇಕೆಂದು ಆಫೀಸರ್ ಹತ್ರ ಕೇಳಿಕೊಂಡೆವು. ಬಿಡುವುದೇ ಇಲ್ಲ ಎಂದು ಹಟ ಹಿಡಿದರು. ನಾನು ಹುಟ್ಟಿ ಬೆಳೆದದ್ದೆಲ್ಲಾ ಚಾಮರಾಜನಗರ ಜಿಲ್ಲೆ ಚೆಂಗಡಿಯಲ್ಲಿ. ಶಾಲಾದಿನಗಳಲ್ಲೇ ಸಾಕಷ್ಟು ಬಾರಿ ಆನೆ ನೋಡಿದ್ವಿ ಮತ್ತು ನಮ್ಮ ಮನೆ ಇದ್ದದ್ದು ಊರಿನಿಂದ ಸ್ವಲ್ಪದೂರದಲ್ಲಿ, ಕಾಡಿಗೆ ಹತ್ತಿರದಲ್ಲಿ. ಹೊಲದಲ್ಲಿ ಬೆಳೆ ಬಂದಾಗ ನೇರವಾಗಿ ನಮ್ಮ ಮನೇ ಹತ್ರಾನೆ ಬರುತ್ತಿದ್ದವು. ಹೀಗಾಗಿ ಈ ಭಾಗದವರೇ ಆದುದ್ದರಿಂದ ನಮಗೆ ಆನೆಗಳ ಹೆದರಿಕೆಗಿಂತ ತಲುಪಬೇಕಿರುವ ಸ್ಥಳವೇ ಮುಖ್ಯವಾಗಿತ್ತು. ಸುಮಾರು ಮುಕ್ಕಾಲು ಗಂಟೆ ನಮ್ಮನ್ನ ನಿಲ್ಲಿಸಿದ್ದರು.

ಕೊನೆಗೆ ನಮ್ಮ ಸಂಬಂಧಿಕರೊಬ್ಬರು ಫಾರೆಸ್ಟ್ ಇಲಾಖೆಯಲ್ಲಿದ್ದರು ಅವರಿಗೆ ಫೋನ್ ಮಾಡಿ ಅವರ ಅನುಮತಿಯ ಮೇರೆಗೆ ಬೆಟ್ಟದಿಂದ ಇಳಿದೆವು. ಇಳಿದು ಒಂದು ಒಂದೂವರೆ ಕಿಲೋಮೀಟರ್ ಬಂದೆವು ‘ಅಬ್ಬಾ! ರಸ್ತೆಯಲ್ಲೆ ವಿರಾಜಾಮಾನವಾಗಿ ನಿಂತಿವೆ ಗಜಪಡೆ.’ ಕಾರು ಬರುತ್ತಿದ್ದಂತೆ ನಿಧಾನವಾಗಿ ರಸ್ತೆಯಿಂದ ಬಲಗಡೆ ಒಂದು ಎಡಗಡೆಗೆ ಮತ್ತೊಂದು ಹೋಗುವುದಕ್ಕೆ ಹೆಜ್ಜೆ ಇಡುತ್ತಿದ್ದವು. ಒಂದು ಕಾರಿನ ಎದುರಿಗೇ ಬಂದಿತು ತಕ್ಷಣ ಕಾರನ್ನ ನಿಲ್ಲಿಸಿದೆ. ನಿಲ್ಲಿಸಿ ಲೈಟ್ ಡಿಂ ಅಂಡ್ ಡಿಪ್ ಮಾಡಿದೆ. ಎದುರಿಗೆ ಬರುತ್ತಿದ್ದದ್ದಕ್ಕೆ ಹೇಗಾಯ್ತೋ ಸರ ಸರನೆ ಕಾರಿನ ಬಲಭಾಗಕ್ಕೆ ಬಂದೇ ಬಿಟ್ಟಿತು ಮತ್ತು ಜೋರಾಗಿ ಕಿರುಚಿತು. ಕಿರುಚಿದ ತಕ್ಷಣ ರಸ್ತೆಯ ಪಕ್ಕದಲ್ಲಿದ್ದ ಆನೆಗಳೆಲ್ಲಾ ಬರತೊಡಗಿದವು. ನಮಗೆ ಏನೂ ತೋಚುತ್ತಿಲ್ಲ, ಕೈ ಕಾಲುಗಳೆಲ್ಲಾ ನಡುಗುತ್ತಿವೆ. ಬಾಯಿಂದ ಮಾತುಗಳೇ ಹೊರಡುತ್ತಿಲ್ಲ. ಹಿಂದೆ ಹೋಗೋಣವೆಂದರೆ ಕಡಿದಾದ ಬೆಟ್ಟ. ಮುಂದೆ ರಸ್ತೆಗೇ ನಿಂತಿದೆ. ಗೆಳೆಯನ ಧೈರ್ಯದಿಂದ ಮುಂದೆ ಮೂವ್ ಮಾಡಿದೆ. ಬಿಳಿಗಿರಿ ರಂಗನ ದರ್ಶನ ಪಡೆದಿದ್ದರಿಂದ ಹೇಗೋ ಬದುಕಿ ಬಂದೆವು.

ಹೀಗೆ ‘ಆನೆ ಕಥೆ’ ಲೇಖಕರಿಗೆ ತಲುಪಿಸಲು ಹೊಗಿ ‘ಆನೆ’ಗೆ ಸಿಕ್ಕಿ ಹಾಕಿಕೊಂಡಿದ್ವಿ. ಕಾರಿನ ಒಳಗೂ ಆನೆ ಹೊರಗೂ ಆನೆ…

ಮರುದಿನ ಮೈಸೂರಿಗೆ ಹೋಗಿ ಲೇಖಕರಿಗೆ ಪುಸ್ತಕ ತಲುಪಿಸಿ ಒಂದು ಪ್ರತಿಯನ್ನ ಅವರ ಕೈಗೆ ನೀಡಿದೆ ಅವರ ಕಣ್ಣುಗಳಲ್ಲಿ ಮಂದಹಾಸದ ನಗು. ಇದು ಅವರ ಮೊದಲ ಕೃತಿಯಾದುದ್ದರಿಂದ ತಾಯಿ ತನ್ನ ಮಗುವನ್ನ ನೋಡಿದಾಗ ಎಷ್ಟು ಖುಷಿಪಡುತ್ತಾಳೋ ಅಷ್ಟು ಖುಷಿ ಅವರ ಮುಖದಲ್ಲಿತ್ತು. ಹೀಗಾಗಿ ‘ಆನೆ ಕಥೆ’ ಬರೆದವರಿಗೆ ನಿಜವಾಗಿ ಎದುರಾದ ಆನೆಯ ಕಥೆಯನ್ನ ಹೇಳಲೇ ಇಲ್ಲ…

ನವಿಮನೆಯವರೊಟ್ಟಿಗೆ ಹೆಚ್ಚು ಮಾತಾನಾಡಲು ಆಗಲಿಲ್ಲ ಮತ್ತೊಮ್ಮೆ ಸಿಗೋಣ ಅಂತ ಕೈ ಕುಲುಕಿ ಹಿಂದಿರುಗಿದೆ.

ತುಷಾರ್ ರಾಜೇಶ್

ಎಲ್ಲರನ್ನೂ ನೇರವಾಗಿ ಆನೆ ಎಂಬ ಜೀವಿ ಒಪ್ಪಿಕೊಳ್ಳುವುದಿಲ್ಲ. ಒಮ್ಮೆ ಒಗ್ಗಿದರೆ ಕೊನೆವರೆಗೂ ಅದು ಮರೆಯುವುದಿಲ್ಲ.

ತುಂಬಾ ಸರಳವಾಗಿ, ಅರ್ಥಪೂರ್ಣವಾಗಿ ನಾಗರಾಜ್ ನವೀಮನೆ ಬರೆದಿದ್ದಾರೆ. ಸಮಾಜದ ಎಲ್ಲ ವರ್ಗದವರಿಗೂ ಸರಳವಾಗಿ ಅರ್ಥವಾಗುವಂತೆ ಇದೆ ಬರವಣಿಗೆ. ಆನೆ ಮತ್ತು ಮಾವುತ, ಕಾವಾಡಿಗಳ ಭಾವನಾತ್ಮಕ ಸಂಬಂಧ ತುಂಬಾ ಚೆನ್ನಾಗಿ ಅನಾವರಣಗೊಂಡಿದೆ ಪುಸ್ತಕದಲ್ಲಿ.

ಮನೋಜ್ ಬೂಕನಕೆರೆ ಅವರ ಚಿತ್ರಗಳು, ಪುಸ್ತಕನ್ನು ಅಲಂಕರಿಸುತ್ತಾ ಬಂದಿವೆ. ಆನೆ ಮತ್ತು ಮಾವುತರ ಸಂಬಂಧ ಭಾಷೆಯನ್ನು ಮೀರಿದ್ದು. ಮಾತಿನ ಮಂಟಪಕ್ಕೆ ಪ್ರೀತಿಯ ತೋರಣವನ್ನು ಮಾವುತ ಕಟ್ಟಿದರೆ, ಮೌನದಲ್ಲೇ ತನ್ನ ಮಾಲೀಕನಿಗೆ ಸನ್ನೆಗಳನ್ನು ಆನೆಗಳು ಸೂಚಿಸುತ್ತವೆ.

ಶ್ರೀಸಾಮಾನ್ಯರಿಗೆ ಕುತೂಹಲವೆನಿಸುವ ಆನೆಗಳ ಬದುಕು, ಅವುಗಳ ಊಟ, ಅವುಗಳ ನಡವಳಿಕೆ, ಅವುಗಳ ಆರೋಗ್ಯ ಎಲ್ಲವನ್ನೂ ಅಚ್ಚುಕಟ್ಟಾಗಿ ಬರೆದಿದ್ದಾರೆ. ಅರ್ಜುನ, ಬಲರಾಮ, ದ್ರೋಣ, ರಾಜೇಂದ್ರ, ವಿಕ್ರಮ ಇನ್ನಿತರ ಆನೆಗಳು ಮತ್ತು ಅವುಗಳ ಮಾವುತರ ಬಗ್ಗೆಯೂ ಎಷ್ಟೋ ವಿಚಾರಗಳು ಗೊತ್ತಾಯ್ತು. ಇವೆಲ್ಲಾ ವಿವರಗಳು ನಮಗೆಲ್ಲ ಗೊತ್ತೇ ಇರಲ್ಲ. ನಮ್ಮ ನಾಡಿನ ಮಾವುತರ ಮತ್ತು ಕಾವಾಡಿಗಳ ದೇಸಿ ಜ್ಞಾನದ ಮಹತ್ವವನ್ನು ತುಂಬಾ ಚೆನ್ನಾಗಿ ವಿವರಿಸಿದ್ದಾರೆ. ಸಾಬು ದಸ್ತಗಿರ್ ಕತೆ ಕೂಡ ಸೊಗಸಾಗಿ ಮೂಡಿಬಂದಿದೆ.

ಕ್ರಾಲ್ ಬಗ್ಗೆ, ಖೆಡ್ಡಾ ಆಪರೇಷನ್ ಬಗ್ಗೆ, ಆನೆ ಗಣತಿ ಬಗ್ಗೆ ಅತಿ ಸರಳವಾಗಿ ವಿವರಣೆ ಕೊಟ್ಟಿದ್ದೀರ..! ಒಟ್ಟಾರೆ ಒಂದು ಸಕ್ಕತ್ ಪುಸ್ತಕ, ಎಲ್ಲರೂ ಓದಲೇಬೇಕು..! ಶುಭವಾಗಲಿ…

 

‍ಲೇಖಕರು avadhi

October 17, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Vinathe

    ಕೃಷ್ಣರವರೇ,
    ಕನ್ನಡದಲ್ಲಿ ಆನೆಗಳ ಬಗ್ಗೆ ಕಥೆ ಹೇಳಿರುವ ಹೊಸಪುಸ್ತಕದ ವಿಷಯ ಕೇಳಿ ಖುಷಿಯಾಯ್ತು. ‘ಅಭಿನವ ಪ್ರಕಾಶನ’ ಮತ್ತು ಲೇಖಕ ನಾಗರಾಜ್ ರಿಗೆ ಅಭಿನಂದನೆಗಳು. ಕೃಪಾಕರ-ಸೇನಾನಿ ಈ ಪುಸ್ತಕದ ಕುರಿತು ಪ್ರೋತ್ಸಾಹದ ಮಾತನ್ನು ಹೇಳಿ ಓದುಗರನ್ನು ಮತ್ತಷ್ಟು ಹುರಿದುಂಬಿಸಿದ್ದಾರೆ. ‘ಅವಧಿ’ ಯ ಲೇಖನದಲ್ಲಿ ಈ ಕೃತಿ ಕುರಿತು ನೀವು ಏನಂತ ಬರೆದಿದ್ದೀರ ಅಂತ ಕುತೂಹಲದಿಂದ ಮುಂದಕ್ಕೆ ಓದಿದೆ. ಆಗ ತಾನೇ ಪೂರ್ತಿರೂಪ ತಾಳಿ ಚೆಂದನೆಯ ಪುಸ್ತಕವಾಗಿ ಹೊರಬಂದಿದ್ದ ಕೃತಿಯ ಪ್ರತಿಗಳನ್ನು ಹೊತ್ತು ನೀವೇ ಖುದ್ದಾಗಿ ಲೇಖಕರಿಗೆ ತಲುಪಿಸುವ ಉತ್ಸಾಹವನ್ನ ಮೆಚ್ಚಿದೆ.
    ಆದರೆ ನಂತರ ನೀವು ಹಂಚಿಕೊಂಡ ನಿಮ್ಮದೇ ಸ್ವಂತ ‘ಕಾರಿನ ಒಳಗೂ ಆನೆ, ಹೊರಗೂ ಆನೆ’ ಕಥೆ ಓದಿ ತುಂಬಾ ಬೇಸರವಾಯ್ತು. ಚಿಂತೆಯೂ ಆಯ್ತು. ನಿಮ್ಮ ಅನುಭವಹಂಚಿಕೆಯಲ್ಲಿ ಕೆಲ ಪೂರ್ಣಸತ್ಯಗಳು, ಅರ್ಧಸತ್ಯಗಳು ನಿಚ್ಚಳವಾಗಿ ಎದ್ದುಕಂಡವು. ಅವನ್ನು ಹಾಗೆ ಅರ್ಥೈಸಿಕೊಂಡಿದ್ದು ನನ್ನ ದೃಷ್ಟಿಕೋನ ಮಾತ್ರವೇ. ಬೇರೆ ಓದುಗರು ನಿಮ್ಮ ಅನುಭವವನ್ನು ಅವರವರದೇ ಕಣ್ಣಿನಲ್ಲಿ ಓದುತ್ತಾರೆ ಎನ್ನುವುದು ನಿಜ. ನಾನು ಕಂಡಿದ್ದು ಹೀಗಿದೆ.
    ಕಾಡಿನಂಚಿನಲ್ಲಿ ಆನೆಗಳನ್ನು ನೋಡುತ್ತಾ ಬೆಳೆದ ನಿಮಗೆ ಆನೆಗಳ ಪರಿಸರ, ಸ್ವಭಾವ, ಚರ್ಯೆ, ಅವುಗಳ ದಿನಚರಿ ಕುರಿತು ಸ್ವಲ್ಪವಾದರೂ ತಿಳಿದಿರಬೇಕಲ್ಲವೇ? ಕಾಡನ್ನು, ಪ್ರಾಣಿಪ್ರಪಂಚವನ್ನು ಕಾಪಾಡಲು ನಾವೇ ಮನುಷ್ಯರು ಮಾಡಿರುವ ಕಾನೂನುಗಳ ಬಗ್ಗೆ ಇನ್ನೂ ಹೆಚ್ಚಾಗಿ ಗೊತ್ತಿರಬೇಕಲ್ಲವೇ? ಆರು ಗಂಟೆಯ ನಂತರ ಬೆಟ್ಟಕ್ಕೆ ಪ್ರವೇಶವಿಲ್ಲ ಎಂದಾದಮೇಲೂ, ಫಾರೆಸ್ಟ್ ಆಫೀಸರ್ ಅದರ ಬಗ್ಗೆ ಎಚ್ಚರಿಸಿದ ಮೇಲೂ ಐದೂವರೆಗೆ ನೀವು ಬೆಟ್ಟಕ್ಕೆ ಹೊರಟದ್ದನ್ನ, ದಾರಿಮಧ್ಯದಲ್ಲಿ ಕಾರು ನಿಲ್ಲಿಸಿ ಸಂಜೆಯೂಟ ಮಾಡುತ್ತಿದ್ದ ಆನೆಗಳ ಫೋಟೋ ಹಿಡಿದ್ದನ್ನ, ಆರು ಗಂಟೆ ಹತ್ತು ನಿಮಿಷಕ್ಕೆ ಬೆಟ್ಟ ತಲುಪಿದ ವಿಷಯವನ್ನು, ಪೂಜೆ ಮುಗಿಸಿ ಹೊರಬಂದಾಗ ಆಗಲೇ ಏಳು ಗಂಟೆಯಾಗಿತ್ತು ಅನ್ನೋದನ್ನ ಕರಾರುವಕ್ಕಾಗಿ ಲೇಖನದಲ್ಲಿ ದಾಖಲಿಸಿದ್ದೀರಿ. ಕಾನೂನು ಮೀರಿ ಆ ಸಮಯದಲ್ಲಿ ಬೆಟ್ಟವಿಳಿಯುವ ನಿಮ್ಮ ಪ್ರಯತ್ನವನ್ನು ಪ್ರಶ್ನಿಸಿ ಆ ಫಾರೆಸ್ಟ್ ಆಫೀಸರ್ ತನ್ನ ಕರ್ತವ್ಯವನ್ನು ಪರಿಪಾಲಿಸಿದಾಗ ಅವರು ನಿಮ್ಮನ್ನು ಮುಕ್ಕಾಲು ಗಂಟೆ ನಿಲ್ಲಿಸಿದ್ದರು ಎಂದು ಹೇಳಿಕೊಂಡಿದ್ದೀರಿ.
    ಅಷ್ಟೇ ಅಲ್ಲ, ಅರಣ್ಯಇಲಾಖೆಯಲ್ಲಿರುವ ನಿಮ್ಮ ಸಂಬಂಧಿಕರ ವಶೀಲಿ ಬಳಸಿ ಕಾನೂನು ಉಲ್ಲಂಘಿಸಿ ಬೆಟ್ಟವನ್ನು ಇಳಿದು ಬಂದು ಆ ಸರಕಾರೀ ಸಿಬ್ಬಂದಿ ಫಾರೆಸ್ಟ್ ಆಫೀಸರ್ ಅವರ ಕರ್ತವ್ಯ ಪ್ರಜ್ಞೆಯ ವಿರುದ್ಧ ಹೋಗಿ ಅವರನ್ನು ದಾರಿತಪ್ಪಿಸಿದ್ದೀರಿ. ಅವರಿಗೆಷ್ಟು ಅವಮಾನ, ಬೇಸರವಾಯ್ತೋ?
    ನಿಮ್ಮ ಅನುಭವದ ಕಥೆ ಇಷ್ಟಕ್ಕೆ ಕೊನೆಗೊಳ್ಳಲಿಲ್ಲವಲ್ಲಾ… ನೀವು ಕಾರಿನಲ್ಲಿ ಹೋಗುತ್ತಿದ್ದಾಗ ಆನೆಗಳು ಹೇಗೆ ಎದುರಾದವು, ಹಿಂಡಿನ ಒಂದಾನೆಗೆ ನಿಮ್ಮ ಕಾರಿನಿಂದ ಹೇಗೆ ತೊಂದರೆಯಾಯ್ತು, ಅದಕ್ಕೆ ಎಷ್ಟು ಆತಂಕವುಂಟಾಯ್ತು, ಒಂದಾನೆಯ ಆತಂಕ ಇಡೀ ಗುಂಪಿಗೆ ಕ್ಷಣಮಾತ್ರದಲ್ಲಿ ಹೇಗೆ ಹಬ್ಬಿಬಿಟ್ಟಿತು ಅನ್ನೋದನ್ನ ಹೇಳಿದ್ದೀರ. ಸಂಜೆ-ರಾತ್ರಿ ಸಮಯದಲ್ಲಿ ತಮ್ಮ ವಿಶ್ರಾಂತಿಸುವ, ನಿದ್ದೆ ಸ್ಥಳಕ್ಕೆ ತಲುಪುವ ಗಮನದಲ್ಲಿದ್ದು, ಆ ಪ್ರಾಣಿಗಳ ಸ್ವಾಭಾವಿಕ ಪರಿಸರದಲ್ಲಿ (ಆನೆ ಕಾರಿಡಾರ್ ಅನ್ನೋಣವೇ) ಮನುಷ್ಯರು ನಿರ್ಮಿಸಿರುವ ರಸ್ತೆಯನ್ನು ಹುಷಾರಾಗಿ ದಾಟುತ್ತಾ ರಸ್ತೆಯ ಆ ಕಡೆಯಿದ್ದ ಕಾಡಿನ ಭಾಗಕ್ಕೆ ಹೋಗುತ್ತಿದ್ದ ಗಜಪಡೆಯಲ್ಲಿ ನೀವು ಅಲ್ಲೋಲಕಲ್ಲೋಲವೆಬ್ಬಿಸಿದ್ದೀರಿ ಅನ್ನೋದು ನಿಮಗೆ ಗೊತ್ತಾಯ್ತೆ?
    ನೀವು ಮಾಡುತ್ತಿದ್ದ ಕಾರಿನ ಲೈಟ್ ಡಿಮ್ ಅಂಡ್ ಡಿಪ್ ಆ ಆನೆಗಳನ್ನು ಅದೆಷ್ಟು ಗೊಂದಲಕ್ಕೀಡು ಮಾಡಿರಬೇಡ? ಅವಕ್ಕಾದ ಗೊಂದಲ, ಆತಂಕ, ಇಡೀ ಹಿಂಡಿಗೆ ಉಂಟಾಗಿದ್ದ ಭಯ, ಹೆದರಿಕೆ ನಿಮಗೆ ಅರ್ಥವಾಯ್ತೆ? ನಿಮ್ಮದನ್ನ ಹೇಳಿಕೊಂಡಿದ್ದೀರ. ‘ಬಿಳಿಗಿರಿ ರಂಗನ ದರ್ಶನ ಪಡೆದಿದ್ದರಿಂದ ಅದ್ಹೇಗೋ ಬದುಕಿಬಂದೆವು’ ಅಂತ ಹೇಳಿಕೊಂಡಿದ್ದೀರಾ – ನೀವು ಪಡೆದ ದರ್ಶನವೇ ಭ್ರಷ್ಟಾಚಾರದ ನಡೆಯಾಯ್ತಲ್ಲಾ?
    ‘ಆನೆ ಕಥೆ’ ಪುಸ್ತಕವನ್ನು ತಲುಪಿಸಲು ಹೋಗಿ ಒಂದು ಇಡೀ ಆನೆಗಳ ತಂಡಕ್ಕೆ ತೊಂದರೆ ಕೊಟ್ಟರಲ್ಲ? ನಿಮ್ಮ ಕಾರಿನಿಂದ, ಕಾರಿನ ಲೈಟಿನಿಂದ ಭಯಗೊಂಡು ಹೆದರಿಕೆಯಿಂದ ಕೂಗಿಕೊಂಡ ಆ ಆನೆಯ ಸ್ಥಳದಲ್ಲಿ ಒಂದು ಕ್ಷಣ ನಿಮ್ಮನ್ನಿರಿಸಿಕೊಂಡು ಊಹಿಸಿಕೊಳ್ಳಿ. ನಿಮ್ಮ ಕಾರಿನಿಂದ ಗುದ್ದಿಸಿಕೊಳ್ಳುವ ಮತ್ತು ಗಾಯಗೊಳ್ಳುವ ಪರಿಸ್ಥಿತಿಯಲ್ಲಿ ಆ ಆನೆ ಇತ್ತು. ಆ ದೇವರ ಕೃಪೆಯಿಂದ ನಿಮ್ಮಿಂದ ಆಗಬಹುದಾಗಿದ್ದ ಅಪಘಾತದಿಂದ ಆನೆ ತಪ್ಪಿಸಿಕೊಂಡು ಪ್ರಾಣಸಹಿತ ಉಳಿಯಿತು.
    ಮನುಷ್ಯ-ಪ್ರಾಣಿ ಸಂಘರ್ಷದ ಬಗ್ಗೆ ಭಾರತದಲ್ಲಿ ಮತ್ತು ಪ್ರಪಂಚದ ಪೂರ್ತಿ ಅನೇಕ ಕೆಲಸಗಳು ನಡೆದಿವೆ. ಪ್ರಾಣಿಗಳ ಪರಿಸರವನ್ನು ಆಕ್ರಮಿಸುವ ಮನುಷ್ಯ ಚಟುವಟಿಕೆಗಳನ್ನು ಕಡಿಮೆಮಾಡಲು, ಪರ್ಯಾಯ ವಿಧಾನಗಳನ್ನು ಜಾರಿಗೊಳಿಸಲು ಅನೇಕಾನೇಕ ಪ್ರಯತ್ನಗಳು ನಡೆಯುತ್ತಿವೆ. ವಸ್ತುಸ್ಥಿತಿ ಹೀಗಿರಬೇಕಾದರೆ ಅದಕ್ಕೆ ವಿರುದ್ಧವಾಗಿ ಕಾಡಿನ ಪರಿಸರದಲ್ಲಿ ನೀವು ಮಾಡಿದ ಕಾನೂನು ಉಲ್ಲಂಘನೆ ವಿಷಯ, ನಿಮ್ಮಿಂದ ಆನೆಗಳಿಗೆ ಆದ ತೊಂದರೆಯ ವರ್ಣನೆ ಬಗ್ಗೆ ನೀವು ಉತ್ಸಾಹದಿಂದ ಬರೆದಿದ್ದೀರಿ.
    ಭಾರತದ ಕಾಡುಗಳಲ್ಲಿ, ಸ್ವಾಭಾವಿಕ ಪರಿಸರದಲ್ಲಿ ಈಗ ಉಳಿದಿರುವುದು (೨೦೧೭ ಪ್ರಕಾರ) ಕೇವಲ ೨೭,೦೦೦ ಆನೆಗಳು ಮಾತ್ರ. ಪ್ರಾಜೆಕ್ಟ್ ಟೈಗರ್ ನಂತರ ಪ್ರಾಜೆಕ್ಟ್ ಆನೆ ಅತ್ಯಂತ ಮುಖ್ಯವಾದ ಕಾರ್ಯಕ್ರಮ. ಆನೆಗಳನ್ನು ಉಳಿಸಲು, ಅವುಗಳ ನೈಸರ್ಗಿಕ ಪರಿಸರವನ್ನು ಕಾಪಾಡಲು ಭಾರತ ಸರ್ಕಾರವಷ್ಟೇ ಅಲ್ಲ ಭಾರತದೊಂದಿಗೆ ಅನೇಕ ಅಂತರರಾಷ್ತ್ರೀಯ ಸಂಸ್ಥೆಗಳು, ಸರಕಾರಗಳು ಕೆಲಸಮಾಡುತ್ತಿವೆ. ಸಾಕಷ್ಟು ಹಣದ ಹೊಳೆ ಹರಿದಿದೆ. ಆದರೆ ಎಲ್ಲಕ್ಕಿಂತ ಬೇಕಿರುವುದು ನಮ್ಮ ಪ್ರಜ್ಞಾವಂತಿಕೆ. ನಮ್ಮಿಂದ ಇತರ ಜೀವಿಗಳಿಗೆ ತೊಂದರೆಯಾಗಬಾರದು ಎನ್ನುವ ಕನಿಷ್ಠ ನಿಲುವು. ‘ತಲುಪಬೇಕಿರುವ ಸ್ಥಳವೇ ಮುಖ್ಯವಾಗಿತ್ತು’ ಅನ್ನೋ ನಿಮ್ಮ ಹಠ, ನಿರ್ಧಾರಕ್ಕಿಂತಲೂ ಸಂಜೆ ಆರು ಗಂಟೆಯಾದ ಮೇಲೆ ಕಾಡುಪ್ರಾಣಿಗಳಿಗೆ ನಮ್ಮಿಂದ ತೊಂದರೆಯಾಗಬಾರದು ಅನ್ನೋದು ನಿಮ್ಮ ಗಮನದಲ್ಲಿರಬೇಕಿತ್ತು. ಪಾಪದ ಪ್ರಾಣಿಗಳಿಗೆ ನಿಮ್ಮಿಂದ ಭಯ, ಹೆದರಿಕೆಯಾಗುತ್ತಿರಲಿಲ್ಲ. ನೀವಂತೂ ಸಂತೋಷವಾಗಿ ನಾಗರಾಜರ ಕೈಕುಲುಕಿ ವಾಪಸ್ ಬಂದಿರಿ. ಅವು ಹೇಗೆ ಚೇತರಿಸಿಕೊಂಡವೋ ಏನೋ. ಬಲ್ಲವರ್ಯಾರು? ಕೇಳುವವರಿದ್ದಾರೆಯೇ?
    ವಿನತೆ ಶರ್ಮ

    ಪ್ರತಿಕ್ರಿಯೆ

Trackbacks/Pingbacks

  1. ‘ಆನೆ ಕಥೆ’ ಪುಸ್ತಕವನ್ನು ತಲುಪಿಸಲು ಹೋಗಿ ಒಂದು ಇಡೀ ಆನೆಗಳ ತಂಡಕ್ಕೆ ತೊಂದರೆ ಕೊಟ್ಟರಲ್ಲ? – . - […] ಈ ಕೃತಿಯನ್ನು ಲೇಖಕರಿಗೆ ತಲುಪಿಸಿದ ಬಗ್ಗೆ ಅಭಿನವದ ಕೃಷ್ಣ ಚೆಂಗಡಿ ಅವರು ವಿವರವಾಗಿ ಅವಧಿಯಲ್ಲಿ ನಿರೂಪಿಸಿದ್ದರು. ಅದು ಇಲ್ಲಿದೆ  […]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: