ಪವಿತ್ರ ಆರ್ಥಿಕತೆ ಅಪಹಾಸ್ಯಕ್ಕೆ ಈಡಾಗುವ ಸಾಧ್ಯತೆ ಇದೆ

ಪವಿತ್ರ ಆರ್ಥಿಕತೆಗಾಗಿ ಖ್ಯಾತ ರಂಗಕರ್ಮಿ, ದೇಸಿ ಚಳವಳಿಯನ್ನು ಹುಟ್ಟು ಹಾಕಿದ ಪ್ರಸನ್ನ ಉಪವಾಸ ಸತ್ಯಾಗ್ರಹ ನಡೆಸಿದ್ದರು. ‘ಇದೇನಿದು ಪವಿತ್ರ ಆರ್ಥಿಕತೆ?’ ಎನ್ನುವ ಪ್ರಶ್ನೆಗಳೂ ಎದ್ದಿವೆ.

ಈ ಬಗ್ಗೆ ನಾ.ದಿವಾಕರ ಅವರು ಬರೆದಿರುವ ‘ಪ್ರಸನ್ನ ಮತ್ತೊಬ್ಬ ಅಣ್ಣಾ ಹಜಾರೆಯಂತೆ ಕಾಣುತ್ತಾರೆ’ ಎನ್ನುವ ಲೇಖನ ‘ಜುಗಾರಿ ಕ್ರಾಸ್’ ಅಂಕಣದಲ್ಲಿ  ಪ್ರಕಟವಾಗಿತ್ತು.

ಡಿ.ಎಸ್. ರಾಮಸ್ವಾಮಿ ಅವರು  ‘ಪವಿತ್ರ ಆರ್ಥಿಕತೆ’ ಎಂಬ ಅರ್ಥವಿಲ್ಲದ ಪದ  ಎಂದು ವಿಮರ್ಶಿಸಿದ್ದರು.

ಎಲ್ ಸಿ ನಾಗರಾಜ್ ಅವರು ‘ಪವಿತ್ರ ಆರ್ಥಿಕತೆ ಅಂತಾ ಕರೆದುಕೊಂಡಿದ್ದರೆ ತಪ್ಪೇನಿದೆ?’ ಎಂದು ಪ್ರಶ್ನಿಸಿದ್ದರು.

ಮುರಳಿ ಕೃಷ್ಣ ಅವರು ‘ಪವಿತ್ರ ಆರ್ಥಿಕತೆಯನ್ನು ಸಾರಾಸಗಟಾಗಿ ತಳ್ಳಿ ಹಾಕಿಬಿಡಬಹುದೇ?’ ಎಂದು ಬರೆದಿದ್ದರು.

ಪ್ರಸಾದ್ ರಕ್ಷಿದಿ ಅವರು ‘ಏಕವ್ಯಕ್ತಿ ಕೇಂದ್ರಿತವಾಗಿ ಇಂದು ಹೋರಾಟ ಸಾಧ್ಯವೆ?’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಇದಕ್ಕೆ ‘ಅವಧಿ’ ಪ್ರತಿಕ್ರಿಯೆಯನ್ನು ಆಹ್ವಾನಿಸಿತ್ತು.

ಇದೀಗ ಸಂಪಿಗೆ ತೋಂಟದಾರ್ಯ ಅವರು ಪ್ರತಿಕ್ರಿಯಿಸಿದ್ದಾರೆ- 

ಸಂಪಿಗೆ ತೋಂಟದಾರ್ಯ

ಪ್ರಸನ್ನ ಅವರು ಬಯಸುವ, ವಿಕೇಂದ್ರಿತ ಅಭಿವೃದ್ಧಿ, ಸಣ್ಣ ಕೈಗಾರಿಕೆಗಳು, ಗುಡಿ ಕೈಗಾರಿಕೆಗಳು, ಸಣ್ಣ ನೀರಾವರಿ, ಮಳೆ ಕೊಯ್ಲು , ಕೃಷಿ ಅಭಿವೃದ್ಧಿ , ಕೃಷಿ ಉತ್ಪನ್ನ ಆಧಾರಿತ ಕೈಗಾರಿಕೆಗಳು , ಇತ್ಯಾದಿಗಳಿಂದ ಗ್ರಾಮೀಣ ಕ್ಷೇತ್ರದಲ್ಲಿನ ಅಭಿವೃದ್ಧಿ ಸರಿ ದಾರಿಯಲ್ಲಿ ನಡೆದು ಸ್ವಾವಲಂಬಿ, ಸ್ವಪರಿಪೂರ್ಣ ಗ್ರಾಮೀಣ ಪ್ರದೇಶಗಳು ಸ್ಥಾಪನೆ ಆಗಬೇಕಾದುದು ನಿಜವಾಗಿಯೂ ಮುಖ್ಯವಾದುದು.
ಮತ್ತು ಇವೆಲ್ಲವೂ ಸಹಕಾರ ತತ್ತ್ವದ ಮೇಲೆ ನಡೆದರಂತೂ ನಮ್ಮ ಸಮಾಜ ಶಾಂತಿ ಸಮಾಧಾನಗಳನ್ನು ಪಡೆದು‌ ಮುಂದುವರಿಯುವುದರಲ್ಲಿ ಅನುಮಾನವಿಲ್ಲ.

ಇದು ಪ್ರಪಂಚದ ಇತರ ದೇಶಗಳ ಆರ್ಥಿಕ, ಸಾಮಾಜಿಕ ಏರುಪೇರುಗಳಿಂದ ಮುಕ್ತವಾಗಿಯೂ ಇರುತ್ತದೆ. ಆದರೆ ಈ ಬಗೆಯ ಆರ್ಥಿಕತೆಯಲ್ಲಿ ಮನುಷ್ಯರು ಐಶಾರಾಮಿ – ಲೋಲುಪ್ತ ಬದುಕಿನ ಆಕರ್ಷಣೆಗೆ ಒಳಗಾಗಬಾರದು ಅಷ್ಟೇ.

ಆದರೆ ಮನುಷ್ಯರು ಮೂಲತಃ ಸ್ವಾರ್ಥಿಗಳು. ಸ್ವಾರ್ಥ ಮನುಷ್ಯರಲ್ಲಿಯ ಜೀನ್‍ಗಳಲ್ಲೇ ಇದೆ. ಆದ್ದರಿಂದಲೇ ಜಗತ್ತು ಸದಾ‌ ಸಂಘರ್ಷದಲ್ಲಿಯೇ ಸಾಗುತ್ತಿದೆ. ಬದುಕಿಗೊಂದು ಅರ್ಥವಿದೆಯೆ ಎಂದು ಯೋಚಿಸಿದಾಗ ಹೆದರಿಕೆ ಆಗುತ್ತದೆ. ಯಾಕೆಂದರೆ ಅರ್ಥ ಅಂದರೇನು ಎಂಬುದೇ ಸಮಸ್ಯೆಯಾಗಿ ಬಿಡುತ್ತದೆ. ಅರ್ಥವಿಲ್ಲದ ಬದುಕು ಎಂದು ಭಾವಿಸಿದಾಗ ಹುಚ್ಚುತನ ಹೆಚ್ಚುತ್ತದೆ. ಅಸಂಗತ ನಾಟಕಗಳ ಪಾತ್ರಗಳ ರೀತಿ ಮನುಷ್ಯರು ವರ್ತಿಸಲು ಪ್ರಾರಂಭಿಸುತ್ತಾರೆ. ಕಾಲಿಗುಲನಂತೆ ಆತ್ಮಹತ್ಯೆಗೆ ಈಡಾಗುತ್ತಾರೆ.

 

ಆರ್ಥಿಕತೆಯಲ್ಲೂ ವಿಜ್ಞಾನದ ಮತ್ತು ಅಧ್ಯಾತ್ಮಗಳ ಸತ್ಯದ ಬೆಳಕಿನ ಪ್ರಭಾವ ಇರಬೇಕು. ಅಂದರೆ ತರಬೇಕು. ಪೂರ್ಣ ದೃಷ್ಟಿ ಅಂತಾರಲ್ಲ ಅದು. ಮನುಷ್ಯರ ಬದುಕಿನ‌ ಉಸಿರಾಗಬೇಕು. ಇಲ್ಲದೇ ಹೋದರೆ ಕಾಲಾನುಕ್ರಮೇಣ ಹುಟ್ಟುವ ಹೊಸ ಹೊಸ ಆವಿಷ್ಕಾರಗಳು ಹೆಚ್ಚು ಹೆಚ್ಚು ಅರ್ಥಹೀನ ಯಾಂತ್ರಿಕ ಬದುಕಿಗೆ ಆಸೆ ಪಡುವಂತೆ ಮಾಡುತ್ತವೆ. ಅವುಗಳಿಂದ ತಪ್ಪಿಸಿಕೊಳ್ಳುವುದು ಬಹು ಕಷ್ಟ.

ಆಗ ಈ ಪವಿತ್ರ ಎನ್ನುವ ಆರ್ಥಿಕತೆ ಅಪಹಾಸ್ಯಕ್ಕೆ ಈಡಾಗುವ ಸಾಧ್ಯತೆ ಇದೆ. ಆದರೆ ಪ್ರಕೃತಿಯ ಇತ್ತೀಚಿನ ವರ್ತನೆಗಳು ಮನುಷ್ಯರ ಆಲೋಚನೆಗಳನ್ನು ಬದಲಿಸಲು ಸಹಾಯ ಮಾಡುತ್ತಿವೆ. ಹಾಗಾಗಿ ಇದರ ಹಿನ್ನೆಲೆಯಲ್ಲಿ ಒಂದು ಸಮತೋಲನದ ಆರ್ಥಕತೆಯನ್ನು ರೂಪಿಸಬೇಕು. ತಂತ್ರಜ್ಞಾನದ ಆವಿಷ್ಕಾರಗಳನ್ನು ತಿರಸ್ಕರಿಸಲಾಗದು, ಹಾಗಂತ ಸರಳ ಜೀವನದ ಮಹತ್ವವನ್ನೂ ಅಲ್ಲಗಳೆಯಲಾಗುವುದಿಲ್ಲ. ಪ್ರಸನ್ನ ಅವರ ಪವಿತ್ರ ಆರ್ಥಿಕತೆ ಒಂದು ತುದಿಯಂತೆ ಇದೆ. ಯಂತ್ರಗಳ ಕಳಚುವ ಉದ್ದೇಶ ಹೊಂದಿದೆ. ಆದರೆ, ಮನುಷ್ಯರು ಈಗಾಗಲೇ ಯಂತ್ರಗಳ ಗುಲಾಮರಾಗಿದ್ದಾರೆ. ಅಂದರೆ ಮತ್ತೊಂದು ತುದಿಯಲ್ಲಿ ಇದ್ದಾರೆ. ಹಾಗಾಗಿ ಕೇವಲ ಆದರ್ಶಮಯವಾಗಿ, ಭಾವನಾತ್ಮಕವಾಗಿ ಯೋಚಿಸದರೆ ಸಾಲದು.

ಮನುಷ್ಯರ ಮೂಲಭೂತ ಸ್ವಭಾವಗಳನ್ನು ಪರಿಗಣಿಸಿ, ಅವರ ಪ್ರಜ್ಞೆಗೆ ನಿಲುಕುವ ರೀತಿ ಬದುಕಿನ ಅರ್ಥ ಸಾಮರ್ಥ್ಯಗಳನ್ನು ತಿಳಿಸುತ್ತಾ, ನಶ್ವರ ಬದುಕಿನಲ್ಲಿ ಸಾಲ ಮಾಡಿಯಾದರೂ ಅಂದರೆ ಭೂಮಿಯ ಒಡಲು ಬಗೆದಾದರೂ ನಾವು ಉಂಡು ತಿಂದು ಹೋಗಿ ಬಿಡುವ ಬದುಕಿನ ಅಮಾನವೀಯತೆ ಢಾಳಾಗಿ ಗೋಚರಿಸುವಂತೆ , ಇಡೀ ಮನುಕುಲವೇ ಜಗತ್ತನ್ನು ಸೃಷ್ಟಿಸಿದ ಶಕ್ತಿಯ ಭಾಗವೇ ಆಗಿದ್ದು , ಪ್ರಕೃತಿಯು ಸಕಲ ಜೀವ ರಾಶಿಗಳಿಗೆ ಸೇರಿದ್ದು ಎಂಬ ಸತ್ಯವನ್ನು ಅರಿಯುವಂತೆ ಮಾಡುವ ನಿಟ್ಟಿನಲ್ಲಿ ಸಮಾಜಕ್ಕೆ ಶಿಕ್ಷಣ ನೀಡುವ ಅಸಾಧಾರಣ ತರದ ಕಾರ್ಯಕ್ರಮ ರೂಪಿಸಬೇಕಾಗಿದೆ.

ಇದು ಕೇವಲ ಇಂದಿನ ದಿನ ಮಾನಕ್ಕೆ, ಇಂದಿನ ಭಾರತಕ್ಕೆ, ಇಂದಿನ ರಾಜಕೀಯಕ್ಕೆ ಸೀಮಿತವಾಗಿಲ್ಲ. ಗುಡಿ ಕೈಗಾರಿಕೆಗಳಿಗೆ ತೆರಿಗೆ ತೆಗೆದು ಹಾಕಿದರೆ ಎಲ್ಲವೂ ಸುಧಾರಿಸುವುದಿಲ್ಲ. ತುಂಬಾ ವಿಶಾಲವಾಗಿ ಇಡೀ ಪ್ರಪಂಚದ ಮನುಕುಲಕ್ಕೆ ಅನ್ವಯಿಸುವಂತಹ ಸಿದ್ಧಾಂತ ರೂಪಿಸಬೇಕಾಗುತ್ತದೆ.

ಇದು ಈ ಕಾಲಕ್ಕೆ, ಸದ್ಯದ ಸತ್ಯಾಗ್ರಹಕ್ಕೆ, ಮೇಲ್ನೋಟಕ್ಕೆ ಸರಿ ಕಾಣದೆ ಹೋಗಬಹುದು. ಆದರೆ ಸತ್ಯ ಅದರಲ್ಲಿದೆ. ಇದರ ಬಗ್ಗೆ ಆಲೋಚಿಸಬೇಕು. ಪ್ರಸನ್ನ ಅವರು ಭಾರತದ ಗ್ರಾಮೀಣ ಜನರ ಬದುಕಿಗೆ ಸ್ವಲ್ಪ ಅನುಕೂಲಕರ ಆಗುವಂತಹ ಆರ್ಥಿಕ ಸ್ಥಿತಿ ಉಂಟು ಮಾಡುವಲ್ಲಿ ಯಶಸ್ವಿಯಾದರೂ ಪ್ರಶ್ನೆ ಮತ್ತೊಂದು ರೀತಿಯಲ್ಲಿ ಬಂದು ಕಂಗೆಡಿಸುವ ಸಾಧ್ಯತೆ ಇದೆ.

ಇಲ್ಲದಿದ್ದರೆ ‌ಮಹಾತ್ಮ ಗಾಂಧಿ ಅವರ ಅನುಯಾಯಿಗಳೇ ಅಧಿಕಾರ ಹಿಡಿದು ದಶಕಗಳ ಕಾಲ ಆಳಿದಾಗಲೇ ಗಾಂಧಿ ಪ್ರಣೀತ ಆರ್ಥಿಕ ನೀತಿ ಜಾರಿಯಾಗಿ ಇಷ್ಟು ಹೊತ್ತಿಗೆ ಅದು ಬಲವಾಗಿ ಬೇರು ಬಿಡುತ್ತಿತ್ತು. ಆದರೆ ಹಾಗಾಗಲಿಲ್ಲ ಅಷ್ಟೇ ಅಲ್ಲ‌ ಅವರ ಆರ್ಥಿಕತೆಯ ಒಂದು ಸಣ್ಣದಾದ ಅಂಶವನ್ನೂ ನೆರವೇರಿಸಲೂ ಆಗಿಲ್ಲ. ಇದರ ಬಗ್ಗೆ ಆಳವಾಗಿ‌ ಆಲೋಚಿಸಬೇಕು. ಉತ್ತರ ಸುಲಭವಿಲ್ಲ. ಆದರೂ ಗ್ರಾಮೀಣ ಅರ್ಥ ವ್ಯವಸ್ಥೆಯ ಹಾದಿಯಲ್ಲಿ ಎರಡು ಹೆಜ್ಜೆ ಮುಂದೆ ಹೋಗಬಹುದೇನೋ ಎಂಬ ದೃಷ್ಟಿಯಿಂದ ಪ್ರಸನ್ನರ ಸತ್ಯಾಹ್ರಹಕ್ಕೆ ಬೆಂಬಲ ಕೊಡಬಹುದು. ಅವರ ಬೇಡಿಕೆಗಳು ಈಡೇರಿಸಲಾಗದಂತಹವೇನಲ್ಲ. ಅವು ಬೇಗ ಈಡೇರಲಿ. ಅವರ ಕನಸು ನನಸಾಗಲಿ ಎಂದು ಹಾರೈಸುತ್ತೇನೆ.

‍ಲೇಖಕರು avadhi

October 17, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. pratham

    ಪವಿತ್ರ ಆರ್ಥಿಕತೆ: there is no meaning for this. I did not understand what is this… Still reading till I understand meaning.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: