ಅಮೆರಿಕದಲ್ಲಿ ಸಂಜೀವಿನಿ ಪರ್ವತವನ್ನೇರಿ ಕುಳಿತ ಹನುಮ

(ನಿನ್ನೆಯಿಂದ)

8

ಸಾಗರದೊಳಗೊಂದು ಸಣ್ಣ ಸುತ್ತು..

ಸ್ಯಾನ್ ಫ್ರಾನ್ಸಿಸ್ಕೋದ ಒಂದು ಪ್ರಮುಖ ಆಕರ್ಷಣೆ ಸಾಗರದಲ್ಲಿ ದೋಣಿ ವಿಹಾರ. ರಜೆಯ ದಿನಗಳಲ್ಲಾದರೆ ಮುಂಗಡ ಕಾದಿರಿಸಿಕೊಂಡು ಹೋಗಬೇಕು; ಇತರ ದಿನಗಳಲ್ಲಾದರೆ ಹಾಗೆಯೇ ನುಗ್ಗಬಹುದು. ಇಲ್ಲಿನ ಹಲವು ಪಿಯರ್‌ಗಳಲ್ಲಿ ನಾವು ‘ಪಿಯರ್ 39’ ದೋಣಿವಿಹಾರ ತಾಣಕ್ಕೆ ಹೋಗಿದ್ದೆವು. ಒಂದು ಗಂಟೆಯ ಸಮಯ ಹಿರಿದಾದ ಎರಡಂತಸ್ತಿನ ನಾವೆಯಲ್ಲಿ ಕುಳಿತು ಫೆಸಿಫಿಕ್ ಸಾಗರಯಾನ ಮಾಡುತ್ತಾ ಸುತ್ತಲ ವೀಕ್ಷಣೆಯನ್ನು ಮಾಡುವುದೇ ಒಂದು ಸುಂದರ ಅನುಭವ.

ನೆಲ ಮಹಡಿ, ಒಂದನೆಯ ಅಂತಸ್ತು ಹಾಗೂ ಎರಡನೆಯ ಅಂತಸ್ತಿನಲ್ಲಿ ಜನರು ಒಳಗೆ ಎಲ್ಲಿ ಬೇಕಾದರೂ ಕುಳಿತುಕೊಳ್ಳಬಹುದು ಇಲ್ಲವೇ ಮೊದಲ ಹಾಗೂ ಎರಡನೇ ಅಂತಸ್ತಿನಲ್ಲಿ ಹೊರಗೆ ಕುಳಿತು ಅಥವಾ ನಿಂತು ಸಮುದ್ರದ ಗಾಳಿಗೆ ಎದೆಯೊಡ್ಡಿ ಸುಂದರ ದೃಶ್ಯಗಳನ್ನು ಕಣ್ತುಂಬಿಕೊಳ್ಳುತ್ತಾ ತಮಗೆ ಇಷ್ಟ ಬಂದಂತೆ ಈ ಯಾನವನ್ನು ಮಾಡಬಹುದು.

ನಾವೆಯಿಂದ ಕಾಣುವ ಸ್ಯಾನ್ ಫ್ರಾನ್ಸಿಸ್ಕೋ ನಗರದ ನೋಟ

ನಾವೆಯ ಕಫ್ತಾನ ವೀಕ್ಷಕ ವಿವರಣೆಯನ್ನು ನೀಡುತ್ತಿರುತ್ತಾನೆ. ಮೊಬೈಲ್‌ನಲ್ಲಿ ಅದಕ್ಕಾಗಿ ಸಿದ್ಧಗೊಳಿಸಿದ ತಂತ್ರಾಂಶವನ್ನು ಪಡೆದುಕೊಂಡು, ಕಿವಿಗಳಿಗೆ ಕೇಳಿಸುವ ಸಾಧನಗಳನ್ನು ಅಳವಡಿಸಿಕೊಂಡರೆ ಅವನು ಹೇಳುವ ಪ್ರತಿಯೊಂದು ಮಾಹಿತಿಯೂ ನಿಖರವಾಗಿ ಕೇಳುತ್ತದೆ. ನಾವೆ ಹೊರಟ ತುಸು ಸಮಯದಲ್ಲೇ ನೀರು ನಾಯಿಗಳು (ಸೀ ಲಯನ್ಸ್) ಕಾಣ ಸಿಕ್ಕವು.

ಒಂದು ಸಣ್ಣ ತಂಗುದಾಣದ ಮೇಲೆ ಕೂತು, ಮಲಗಿ ಹಲವು ಭಂಗಿಗಳಲ್ಲಿ ಅವು ಆರಾಮು ಪಡೆಯುತ್ತಿದ್ದ ದೃಶ್ಯ ನೋಡುವಂಥದ್ದು. ಮುಂದೆ ಸಾಗಿದಂತೆ ಆಲ್‌ಕಟ್ರಾಜ಼್ ದ್ವೀಪ ಸಿಗುತ್ತದೆ. ಅದೇ ಹಾದಿಯಲ್ಲಿ ಮುಂದೆ ಸಾಗುತ್ತಾ ‘ಗೋಲ್ಡನ್ ಬ್ರಿಡ್ಜ್’ ತಲುಪುತ್ತೇವೆ. ಆ ಅಗಾಧವಾದ ಸೇತುವೆಯನ್ನು ಅಡಿಯ ಭಾಗದಿಂದ ನೋಡುವಾಗ ಅದು ಮನುಷ್ಯ ನಿರ್ಮಿತಿಯ ಒಂದು ಅದ್ಭುತವೆನಿಸುತ್ತದೆ. ಅಲ್ಲಿಂದ ಇನ್ನೊಂದು ಬದಿಯಲ್ಲಿರುವ `ಬೇ ಬ್ರಿಡ್ಜ್’ ಕೂಡಾ ಕಾಣಸಿಗುತ್ತದೆ.

ಇಷ್ಟು ದೂರದಿಂದ ಸ್ಯಾನ್ ಫ್ರಾನ್ಸಿಸ್ಕೋ ಪಟ್ಟಣವನ್ನು ನೋಡಿದಾಗ ಚಿಕ್ಕ-ಮಕ್ಕಳು ಮನೆಕಟ್ಟುವ ಆಟದ ಸಾಮಾನಿನಿಂದ ಒತ್ತೊತ್ತಾಗಿ ಕಟ್ಟಿರುವ ಕಟ್ಟಡ ಸಮೂಹದಂತೆ ಕಾಣುತ್ತದೆ. ವಾಪಸ್ಸು ಬರುವಾಗ ಮತ್ತೆ ಆಲ್‌ಕಟ್ರಾಜ಼್ ದ್ವೀಪದ ಸನಿಹ ಬರುತ್ತೇವೆ. ಈ ದ್ವೀಪದಲ್ಲಿ ೨೨ ಎಕರೆ ಜಾಗದಲ್ಲಿ ೧೯೩೪ರಿಂದ ೧೯೬೩ರ ವರೆಗೆ ಅಸ್ತಿತ್ವದಲ್ಲಿದ್ದ ಒಂದು ವಿಶಾಲವಾದ ಸೆರೆಮನೆಯನ್ನು ಕಾಣುತ್ತೇವೆ.

ಆಲ್ಕಟ್ರಾಜ಼್ ಸೆರೆಮನೆ

ಇದರಿಂದ ಕೆಲವು ಖದೀಮರು ತಪ್ಪಿಸಿಕೊಂಡ ಹಿನ್ನೆಲೆಯಲ್ಲಿ ಈ ಸೆರೆಮನೆಯನ್ನು ಮುಚ್ಚಲಾಯಿತೆಂದು ಹೇಳುತ್ತಾರೆ. ಇಂದು ಅದು ಒಂದು ಚಾರಿತ್ರಿಕ ಕಟ್ಟಡದ ಅವಶೇಷದಂತೆ ನಿರ್ಮಾನುಷವಾಗಿ ಉಳಿದುಕೊಂಡಿದೆ. ಹೀಗೆಯೇ ಒಂದು ಗಂಟೆ ಕಾಲ ಸಾಗರಯಾನ ಮುಗಿಯುತ್ತಾ ಬಂದು ಒಂದು ವಿಶಿಷ್ಟ ಅನುಭವದೊಂದಿಗೆ ತೀರವನ್ನು ಸೇರುತ್ತೇವೆ.

ಇದಕ್ಕೆ ಹೊಂದಿಕೊಂಡಿರುವ ‘ಫಿಶರ್‌ಮೆನ್ ವಾರ್ಫ್’ ಮಾರುಕಟ್ಟೆ ಪ್ರದೇಶದಲ್ಲಿ ಹಲವಾರು ಬಗೆಯ ತಿನಿಸು ಮಾರಾಟದ ಸ್ಥಳಗಳಿವೆ; ಅಕ್ವೇರಿಯಂಗಳಿವೆ; ತಾಜಾ ಮೀನಿನ ತಿನಿಸುಗಳಿಗೆ ಹೆಸರುವಾಸಿಯಾಗಿದೆ. ಮಾಮೂಲಿನಂತೆ ಬಟ್ಟೆಗಳ, ಉಡುಗೊರೆಗಳ ಇನ್ನಿತರ ಹಲವು ಹತ್ತು ಬಗೆಯ ವ್ಯಾಪಾರಿ ಮಳಿಗೆಗಳಿವೆ.

ನನಗೆ ಇದರಲ್ಲಿ ಬಹಳ ವಿಶೇಷವೆನಿಸಿದ್ದು ‘ಎಡಗೈ ಭಂಟ’ರಿಗಾಗಿಯೇ ಇರುವ ಮಳಿಗೆ. ಈ ವಿಶೇಷ ತೆರನಾದ ಮಳಿಗೆಯನ್ನು ನಾನು ನೋಡಿದ್ದು ಇದೇ ಮೊದಲು. ಇಲ್ಲಿ ಎಡಗೈ ಭಂಟರು ಉಪಯೋಗಿಸಲು ಅನುಕೂಲವಾಗುವಂತ ಹಲವು ವಸ್ತುಗಳಿವೆ. ಅವರಿಗಾಗಿಯೇ ವಿಶೇಷ ರೀತಿಯಲ್ಲಿ ತಯಾರಾದ ಕತ್ತರಿ, ಪೆನ್ಸಿಲ್, ಸ್ಕೇಲ್, ಪೆನ್ಸಿಲನ್ನು ಚೂಪು ಮಾಡುವ ಸಾಧನ, ರೇಖಾಗಣಿತದಲ್ಲಿ ಉಪಯೋಗಿಸುವ ಜಾಮೆಟ್ರಿ ಪೆಟ್ಟಿಗೆ.. ಇಂತಹ ಹಲವು ಮಕ್ಕಳು ಉಪಯೋಗಿಸುವ ಉಪಕರಣಗಳಿವೆ.

ಪಿಯರ್ 39ನ ‘ಫಿಶರ್‌ಮೆನ್ ವಾರ್ಫ್’

ಅಂತೆಯೇ ದೊಡ್ಡವರು ಉಪಯೋಗಿಸಬಹುದಾದ ಕೈಗವಸು, ಕಾಫಿ ಕುಡಿಯುವ ಮಗ್ ಪ್ರತಿಯೊಂದನ್ನು ಅವರಿಗಾಗಿಯೇ ವಿಶೇಷ ರೀತಿಯಲ್ಲಿ ವಿನ್ಯಾಸಗೊಳಿಸಿದ್ದಾರೆ. `I MAY BE A LEFTEE BUT I AM ALWAYS RIGHT’ ಎಂದು ಬರೆದಿದ್ದ ಟೊಪ್ಪಿಗೆಯೊಂದು ಎಡಗೈ ಭಂಟರ ಆತ್ಮ ವಿಶ್ವಾಸದ ಪ್ರತೀಕದಂತಿತ್ತು.

ನನ್ನ ಮೊಮ್ಮಗನೂ ಎಡಗೈ ಭಂಟನೇ ಆದ್ದರಿಂದ ಅವನಿಗಾಗಿ ಕೆಲವು ವಿಶೇಷ ವಸ್ತುಗಳನ್ನು ಕೊಂಡುಕೊಂಡೆವು. ನಾವು ಆಲಕ್ಷ್ಯದಿಂದ ನೋಡುವ ಒಂದು ಸಂಗತಿಯ ಬಗ್ಗೆ ಇಷ್ಟೊಂದು ಕಾಳಜಿ ವಹಿಸಿ, ವಿಶೇಷ ಪರಿಕರಗಳ ಅದ್ಭುತ ಕಲ್ಪನೆಯನ್ನು ತಂದುಕೊಂಡು ಸಾಕಾರಗೊಳಿಸಿದ ಈ ಮಳಿಗೆಯ ಜನಕನಿಗೆ ಒಂದು ದೊಡ್ಡ ನಮೋ..!

ದೇಗುಲಗಳಲ್ಲಿ ಇಣುಕಿದಾಗ..

ಇಲ್ಲಿನ ದೇವಸ್ಥಾನಗಳು ಹೇಗಿರುತ್ತವೆ ಎನ್ನುವ ಕುತೂಹಲಕ್ಕೆ ಉತ್ತರವಾಗಿ ಕೆಲವು ದೇವಸ್ಥಾನಗಳಿಗೆ ಹೋಗಿದ್ದೆವು. ಲಿವರ್‌ಮೂರ್‌ನ ದೇವಸ್ಥಾನದ ಹೊರತು ಮಿಕ್ಕೆಲ್ಲಾ ದೇವಸ್ಥಾನಗಳಲ್ಲಿ ಕಂಡ ಸಾಮ್ಯತೆಯೆಂದರೆ, ಇವು ಹೊರಗಿನಿಂದ ಒಂದು ಕಛೇರಿಯ ಕಟ್ಟಡದಂತೆ ಕಾಣುತ್ತವೆ.

ಸುಮಾರು ನಲವತ್ತು ವರ್ಷಗಳ ಹಿಂದೆ ಎನ್.ಟಿ.ರಾಮರಾವ್ ಉದ್ಘಾಟಿಸಿದ ಲಿವರ್‌ಮೂರ್ ದೇವಸ್ಥಾನ ಮಾತ್ರ ಗೋಪುರ, ಪ್ರವೇಶ ದ್ವಾರ, ಗರುಡಗಂಬ ಇಂತಹ ದಕ್ಷಿಣ ಭಾರತದ ದೇವಸ್ಥಾನಗಳ ಲಕ್ಷಣಗಳನ್ನು ಹೊಂದಿದೆ. ಇತರ ದೇವಸ್ಥಾನಗಳಲ್ಲಿ, ಗೋಪುರವಾಗಲಿ, ಗರುಡಗಂಬವಾಗಲೀ, ಶಂಖ, ಚಕ್ರದಂತಹ ಚಿತ್ರಗಳಾಗಲೀ, ದ್ವಾರಪಾಲಕ ವಿಗ್ರಹಗಳಾಗಲೀ ಯಾವುದೂ ಕಾಣುವುದಿಲ್ಲ.

ಕಟ್ಟಡದ ಮುಂದೆ ಅಥವಾ ವರಾಂಡದಂತಹ ಒಂದು ಆವರಣದಲ್ಲಿ ಒಂದು ಚಪ್ಪಲಿ ಸ್ಟ್ಯಾಂಡು ಮತ್ತು ಕಾಲು ತೊಳೆಯುವ ವ್ಯವಸ್ಥೆಯಿರುತ್ತದೆ. ಕಾಲು ತೊಳೆದು ಒಳ ಹೋದರೆ ಒಂದು ದೊಡ್ಡ ಆವರಣದಲ್ಲಿ ಎಲ್ಲ ದೇವರ, ದೇಗುಲಗಳೆಂದು ಕೊಳ್ಳಬಹುದಾದ, ದೊಡ್ಡ ಮಂಟಪದಂತಹ ಗೂಡುಗಳು ಪಕ್ಕ-ಪಕ್ಕದಲ್ಲಿಯೇ ಕಾಣ ಸಿಗುತ್ತವೆ.

ಶಂಕರಾಚಾರ್ಯರು, ಮಧ್ವಾಚಾರ್ಯರು, ರಾಮಾನುಜಾಚಾರ್ಯರು ಎಲ್ಲರೂ ಪಕ್ಕ-ಪಕ್ಕದಲ್ಲೇ ಕುಳಿತು ವಿವಿಧತೆಯಲ್ಲಿ ಏಕತೆಯನ್ನು ಮೆರೆಯುತ್ತಾರೆ. ಗಣಪತಿ, ಶಿವ, ವಿಷ್ಣು, ಬಾಲಾಜಿ, ಸುಬ್ರಮಣ್ಯ, ಅಯ್ಯಪ್ಪ, ದುರ್ಗಿ, ಲಕ್ಷ್ಮಿ, ಸತ್ಯನಾರಾಯಣ, ರಾಘವೇಂದ್ರ ಸ್ವಾಮಿಗಳು, ಶಿರಡಿ ಸಾಯಿಬಾಬಾ, ಪುರಿಯ ಜಗನ್ನಾಥ ಎಲ್ಲರೂ ಬಂದ ಭಕ್ತಾದಿಗಳೆಲ್ಲರಿಗೂ ಸಮಾನವಾಗಿ ದರ್ಶನ ಸೌಭಾಗ್ಯವನ್ನು ನೀಡುತ್ತಾರೆ.

ಎಲ್ಲರೂ ತಮ್ಮ-ತಮ್ಮ ಇಷ್ಟದ ದೇವರ ಮುಂದೆ ನಿಂತು ಆರತಿಯ ಸಮಯವಾಗಿದ್ದರೆ ಮಂಗಳಾರತಿ ತೀರ್ಥ ಇವುಗಳನ್ನು ತೆಗೆದುಕೊಂಡು, ಕೊಟ್ಟರೆ ಪ್ರಸಾದವನ್ನೂ ಸ್ವೀಕರಿಸಿ, ನಮಸ್ಕರಿಸಿ ಬರಬಹುದು. ಕೆಲವೆಡೆ ದೇವಸ್ಥಾನದವರು ವಿಶೇಷ ಪ್ರಸಾದದ ವ್ಯವಸ್ಥೆ ಮಾಡಿದ್ದರೆ, ಹಲವೆಡೆ ಬರುವ ಭಕ್ತಾದಿಗಳು ತಾವು ತಯಾರಿಸಿಕೊಂಡು ಬಂದ ನೈವೇದ್ಯದ ಸಾಮಗ್ರಿಯನ್ನು ದೇವರಿಗೆ ಅರ್ಪಿಸಿದ ನಂತರ, ಅದನ್ನು ಪ್ರಸಾದ ವಿತರಣೆಯ ಜಾಗದಲ್ಲಿ ಇರಿಸುತ್ತಾರೆ.

ಲಿವರ್‌ಮೂರ್ ದೇವಸ್ಥಾನ

ಈ ಜಾಗದಲ್ಲಿ ಪೇಪರ್ ತಟ್ಟೆಗಳು, ದೊನ್ನೆಗಳು, ಕೆಲವೆಡೆ ಹೊತ್ತೊಯ್ಯುವಂಥ ಡಬ್ಬಿಗಳು ಮತ್ತು ಪ್ಲಾಸ್ಟಿಕ್ ಸ್ಪೂನ್‌ಗಳನ್ನು ಇರಿಸಿರುತ್ತಾರೆ. ಶಿಸ್ತಾಗಿ ತಮಗೆ ಏನು ಬೇಕೋ, ಎಷ್ಟು ಬೇಕೋ ಅಷ್ಟನ್ನು ಬಡಿಸಿಕೊಂಡು ಬಂದು ಕುಳಿತು ತಿನ್ನಲು ಕುರ್ಚಿಗಳನ್ನು, ಮೇಜುಗಳ ವ್ಯವಸ್ಥೆಯನ್ನೂ ಮಾಡಿರುತ್ತಾರೆ. ಪಕ್ಕದಲ್ಲೇ ಕುಡಿಯುವ ನೀರು, ಪೇಪರ್ ಲೋಟಗಳೂ ಇರುತ್ತವೆ.

ಆರಾಮಾಗಿ ಕುಳಿತು ತಿಂದ ನಂತರ ಉಪಯೋಗಿಸಿದ ಸಾಮಗ್ರಿಗಳನ್ನು ಅಲ್ಲಿರುವ ಕಸದ ಬುಟ್ಟಿಗೆ ಹಾಕಿ ಬಂದರಾಯಿತು. ಪುತ್ತಿಗೆ ಮಠದಂತಹ ಕೆಲವೆಡೆ ಪ್ರತಿದಿನವೂ ಮಧ್ಯಾಹ್ನ ಊಟದ ವ್ಯವಸ್ಥೆಯಿದೆ. ಅಡುಗೆಯನ್ನು ಮಾಡಿಟ್ಟಿರುತ್ತಾರೆ. ಬಂದ ಭಕ್ತಾದಿಗಳಲ್ಲಿ ಒಬ್ಬಿಬ್ಬರು ಬಡಿಸಲು ಸಹಾಯ ಮಾಡುತ್ತಾರೆ, ಮತ್ತೆ ಕೆಲವರು ಊಟದ ನಂತರ ಊಟಮಾಡಿದ ಜಾಗವನ್ನು ಶುಚಿಗೊಳಿಸಿ ಹೋಗುತ್ತಾರೆ.

ಈ ದೇವಾಲಯದಲ್ಲಿ ನಾಮಕರಣ ಇನ್ನಿತರ ಸಾಂಪ್ರದಾಯಿಕ ಆಚರಣೆಗಳನ್ನು ಮಾಡಲು ವ್ಯವಸ್ಥೆ ಮಾಡಿಕೊಡುತ್ತಾರೆ. ತಿಥಿಯನ್ನೂ ಮಾಡಿಸಿಕೊಡುತ್ತಾರೆ. ಇಸ್ಕಾನ್ ದೇವಾಲಯದ ಕೃಷ್ಣ ಬಲರಾಮ ಮಂದಿರದ ಪಕ್ಕದಲ್ಲಿ ಹಲವು ಕಛೇರಿಗಳು ಇರುವುದರಿಂದ ಅಲ್ಲಿ ಅತಿ ಕಡಿಮೆ ದರದಲ್ಲಿ ಊಟ ಮಾಡುವ ವ್ಯವಸ್ಥೆಯಿದೆ. ಒಂದು ವಾರಕ್ಕೊ, ತಿಂಗಳಿಗೋ ಆಗುವಷ್ಟು ಟೋಕನ್‌ಗಳನ್ನು ಒಮ್ಮೆಲೇ ಬೇಕಾದರೂ ಇನ್ನೂ ರಿಯಾಯಿತಿ ದರದಲ್ಲಿ ಖರೀದಿಸಿ ಇಟ್ಟುಕೊಳ್ಳಬಹುದು. ಸ್ವಾಮಿ ನಾರಾಯಣ ಮಂದಿರದಲ್ಲೂ ಪ್ರಸಾದವನ್ನು ಕೊಳ್ಳಬಹುದು.

ವಿಶೇಷ ದಿನಗಳಲ್ಲಿ ಆಯಾ ದೇವರಿಗೆ ವಿಶೇಷ ಪೂಜೆಯ ಏರ್ಪಾಟಾಗಿರುತ್ತದೆ. ಎಲ್ಲ ದೇವಸ್ಥಾನಗಳಿಗೂ ಜಾಲತಾಣಗಳಿದ್ದು, ಅವುಗಳಲ್ಲಿ ವಿಶೇಷ ಪೂಜೆಗಳ, ಕಾರ್ಯಕ್ರಮಗಳ ವಿವರಗಳನ್ನು ದಿನ ದಿನವೂ ನೀಡುತ್ತಿರುತ್ತಾರೆ. ಸಂಕಷ್ಟ ಹರ ಗಣಪತಿ ಪೂಜೆಯಂದು ಗಣಪತಿಗೆ ವಿಶೇಷ ಪೂಜೆ, ಮಂಗಳವಾರ ಸಂಜೆ ಹನುಮಾನ್ ಚಾಲೀಸ, ಹುಣ್ಣಿಮೆಯಂದು ಸತ್ಯನಾರಾಯಣ ಪೂಜೆ, ಗುರುವಾರ ಸಾಯಿ ಮಂದಿರ ಮತ್ತು ರಾಘವೇಂದ್ರ ಸ್ವಾಮಿಗಳಿಗೆ ವಿಶೇಷ ಪೂಜೆ, ವರಮಹಾಲಕ್ಷ್ಮಿ, ಗೌರಿ, ಗಣೇಶ ಇಂತಹ ಹಬ್ಬಗಳಲ್ಲಿ ದೇವಸ್ಥಾನದಲ್ಲಿ ಆಯಾ ಪೂಜೆಗಳಲ್ಲಿ ಸಾರ್ವಜನಿಕರು ಭಾಗವಹಿಸುವ ಅವಕಾಶ..

ಈ ರೀತಿ ನಮ್ಮಲ್ಲಿನಂತೆ ಅಲ್ಲೂ ಹಲವು ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಇದಲ್ಲದೆ, ಹರಿಕತೆ, ಭಜನೆ ಇಂಥವೂ ಆಗಾಗ ನಡೆಯುತ್ತಿರುತ್ತದೆ. ಯಾರದಾದರೂ ಮನೆಯಲ್ಲಿ ಗೃಹಪ್ರವೇಶ, ಸತ್ಯನಾರಾಯಣ ಪೂಜೆ ಇಂಥವನ್ನು ಮಾಡಬೇಕೆಂದರೆ ಇಲ್ಲಿಂದ ಪುರೋಹಿತರನ್ನು ಕಳುಹಿಸಿಕೊಡುವ ವ್ಯವಸ್ಥೆಯೂ ಇದೆ.

ಈ ದೇವಾಲಯಗಳ ಶೈಲಿಯಲ್ಲಿ ಎರಡು ವಿಧ. ದಕ್ಷಿಣ ಭಾರತದವರ ಸ್ವಾಮ್ಯದ ದೇವಾಲಯಗಳಾದರೆ ಅಲ್ಲಿ ವಿಗ್ರಹಗಳು ಕರಿಯ ಕಲ್ಲಿನವು; ಪೂಜಾ ವಿಧಾನ ಇಲ್ಲಿ ದಕ್ಷಿಣ ಭಾರತದಲ್ಲಿ ಇರುವಂಥದ್ದೇ. ಮಂತ್ರ, ಪೂಜೆ, ನೈವೇದ್ಯ, ಮಂಗಳಾರತಿ, ನಮಸ್ಕಾರ, ಪ್ರಸಾದ ವಿನಿಯೋಗ ಎಲ್ಲವೂ ಇಲ್ಲಿನ ರೀತಿಯಲ್ಲೇ.

ಅದೇ ಉತ್ತರ ಭಾರತದವರ ಸ್ವಾಮ್ಯದ ದೇವಾಲಯಗಳಾದರೆ ಅಲ್ಲಿ ಬಿಳಿ ಕಲ್ಲಿನ ಚಂದದ ಬೊಂಬೆಗಳಂತ ವಿಗ್ರಹಗಳು, ನಿರ್ದಿಷ್ಟ ಸಮಯದಲ್ಲಿ ಆರತಿ ಹಾಡನ್ನು ಹೇಳುತ್ತಾ ಆರತಿ ಮಾಡುವುದು, ನಂತರ ಪ್ರಸಾದ ವಿನಿಯೋಗ ಎಲ್ಲವೂ ಅಲ್ಲಿನ ಶೈಲಿಯಲ್ಲಿ. ಏನೆಂದರೆ ಮಂಗಳಾರತಿಯಾಗಲೀ, ಆರತಿಯಾಗಲೀ ಬಂದಿರುವ ಭಕ್ತಾದಿಗಳೆಲ್ಲರೂ ಮಾಡುವ ಅವಕಾಶ ಬಹಳೆಡೆ ಇರುತ್ತದೆ. ಈ ದೇಗುಲಗಳಲ್ಲಿ ಗಣಪತಿ, ಸಾಯಿಬಾಬಾ, ಪುರಿ ಜಗನ್ನಾಥ, ದುರ್ಗಾ ಮತ್ತು ರಾಧಾ-ಕೃಷ್ಣರನ್ನು ಸಾಮಾನ್ಯವಾಗಿ ಎಲ್ಲೆಡೆಯೂ ಕಾಣುತ್ತೇವೆ. ಇಲ್ಲಿಯಂತೆ ಅಲ್ಲಿಯೂ ಎಲ್ಲ ದೇವಾಲಯಗಳಲ್ಲೂ ಕಾಣಿಕೆಗಳ ಡಬ್ಬಿಯೂ ಇರುತ್ತದೆ.

ಇಲ್ಲಿನ ವಿಶೇಷ ಪೂಜೆಗಳು ಹೇಗೆ ನಡೆಯುತ್ತವೆಂಬ ಕುತೂಹಲದಿಂದ ಎರಡು ದೇಗುಲಗಳಿಗೆ ಆಯಾ ದಿನಗಳಲ್ಲಿ ಭೇಟಿಯಿತ್ತೆವು. ಒಂದು ಗುರುವಾರ ಬೆಳಗ್ಗೆ ಆರೂವರೆಗೆ ಸಾಯಿ ಮಂದಿರಕ್ಕೆ ಹೋದೆವು. ಅಂದು ಬಾಬಾಗೆ ಅಭಿಷೇಕ, ಬಂದಿರುವ ಭಕ್ತಾದಿಗಳೆಲ್ಲರೂ ಇದರಲ್ಲಿ ಭಾಗವಹಿಸಿ ಅವರು ಕೊಡುವ ಒಂದು ಪುಟ್ಟ ಕಲಶದಂತ ಪಾತ್ರೆಯ ನೀರಿನಿಂದ ಕೈಯ್ಯಾರೆ ಅಭಿಷೇಕ ಮಾಡಬಹುದು.

ಅದಾದ ನಂತರ ಬಾಬಾನನ್ನು ಅಲಂಕರಿಸುವಲ್ಲಿ ಸಹಾಯ ಮಾಡಬಹುದು. ಅಲಂಕರಣದ ನಂತರ ಪೂಜೆ ಮಾಡಬಹುದು. ಆರತಿ ಹಾಡನ್ನು ಹಾಡುತ್ತಿರುತ್ತಾರೆ; ಬಂದವರೆಲ್ಲರೂ ಆರತಿ ಮಾಡಬಹುದು. ನಾವೇ ಪೂಜೆ ಮಾಡಿದೆವೆಂಬ ಕೃತಾರ್ಥಭಾವದಿಂದ ಬಂದಿರುವ ಭಕ್ತಾದಿಗಳೆಲ್ಲರೂ ತಂದಿರುವ ಹಲವಾರು ಬಗೆಯ ನೈವೇದ್ಯಗಳನ್ನು ತಟ್ಟೆ ತುಂಬಾ ಬಡಿಸಿಕೊಂಡು ಬೆಳಗಿನ ಉಪಾಹಾರವನ್ನು ಸಂಪೂರ್ಣವಾಗಿ ಮೆದ್ದು ಸಂತೃಪ್ತರಾಗಿ ಮನೆಗೆ ತೆರಳಬಹುದು.

ಸಂಜೆಯ ವೇಳೆಯಾದರೆ ಜನ ಸಂದಣಿ ಹೆಚ್ಚುವುದರಿಂದ ಸರತಿಯ ಸಾಲು ಇರುತ್ತದೆ. ಇಷ್ಟು ನಿರಂಬಳವಾದ ಅವಕಾಶವಿರುವುದಿಲ್ಲ. ಪ್ರಸಾದವನ್ನೂ, ಅಲ್ಲೇ ತಿನ್ನುವುದಕ್ಕಿಂತ ಕೊಂಡೊಯ್ಯುವ ಡಬ್ಬಿಗಳಲ್ಲಿ ತೆಗೆದುಕೊಂಡು ಹೋಗಲು ವಿನಂತಿಸುತ್ತಾರೆ.

ಸಂಕಷ್ಟಹರ ಚತುರ್ಥಿಯ ದಿನ ಇಲ್ಲಿನ ಪ್ರಸನ್ನ ಗಣಪತಿ ದೇವಾಲಯಕ್ಕೆ ಹೋಗಿದ್ದೆವು. ಇದೊಂದೇ ದೇವಸ್ಥಾನದಲ್ಲಿ ಮಾತ್ರ ನಾವು ಗಣಪತಿಯನ್ನು ಬಿಟ್ಟರೆ ಪುರಿ ಜಗನ್ನಾಥನನ್ನು ಮಾತ್ರ ನೋಡಿದ್ದು. ಸಂಜೆ ಐದೂವರೆಗೆ ಆರಂಭವಾದ ಪೂಜೆ ಮುಗಿದ ನಂತರ ವಿದ್ಯುಕ್ತವಾದ ರೀತಿಯಲ್ಲಿ ಅಗ್ನಿಯನ್ನು ಪ್ರತಿಷ್ಠಾಪಿಸಿಕೊಂಡು, ತುಪ್ಪ, ಸಮಿತ್ತು, ಹವಿಸ್ಸು ಇಂತಹ ಎಲ್ಲ ಪರಿಕರಗಳನ್ನೂ ಬಳಸಿಕೊಂಡು ಗಣಹೋಮವನ್ನು ಮಾಡಿದರು.

ಅದಾದ ನಂತರ ದೇವರಿಗೆ ರುದ್ರಾಭಿಷೇಕವನ್ನು, ಅಲಂಕಾರವನ್ನು ಮಾಡಿ, ಹಲವಾರು ಭಕ್ತರು ತಂದಿದ್ದ ನಾನಾ ಬಗೆಯ ನೈವೇದ್ಯಗಳನ್ನು ಸಮರ್ಪಿಸಿದರು. ನಂತರದ ಮಂಗಳಾರತಿಯಲ್ಲಿ ಅರ್ಚಕರ ನಂತರ ಬಂದ ಭಕ್ತಾದಿಗಳಿಗೂ ಮಂಗಳಾರತಿ ಮಾಡಲು ಅವಕಾಶವಿತ್ತು. ಮಂಗಳಾರತಿ, ತೀರ್ಥದ ನಂತರ ಭಕ್ತಾದಿಗಳು ತಂದಿದ್ದ ಹಲವಾರು ನೈವೇದ್ಯದ ಪರಿಕರಗಳೆಲ್ಲಾ ಭೋಜನದ ಸ್ಥಳಕ್ಕೆ ಬಂದವು.

ಬಂದವರೆಲ್ಲರೂ ಸರದಿಯಲ್ಲಿ ನಿಂತು ತಮಗೆ ಬೇಕಾದ್ದನ್ನು ಹಾಕಿಸಿಕೊಂಡು ಕುಳಿತು ಆರಾಮಾಗಿ ತಿಂದು ತೃಪ್ತರಾಗಿ ಮನೆಕಡೆ ನಡೆದರು. ನಾವೂ ಅವರ ರೀತಿಯನ್ನೇ ಹಿಂಬಾಲಿಸಿದೆವು. ಬಂದಿದ್ದವರಲ್ಲಿ ಕನ್ನಡದವರೇ ಹೆಚ್ಚಿದ್ದರಿಂದ ಮತ್ತು ಪೂಜೆಯ ರೀತಿ ವಿಧಾನಗಳೂ ನಮ್ಮ ರೀತಿಯಲ್ಲೇ ಇದ್ದುದರಿಂದ ಬೆಂಗಳೂರಿನಲ್ಲೇ ಕುಳಿತು ಪೂಜೆ ನೋಡಿದ ಹಾಗಿತ್ತು.

ಸ್ಯಾನ್ ಹೊಸೆಯಲ್ಲಿರುವ ಗುರುದ್ವಾರ

ಅಮೆರಿಕದಲ್ಲೇ ಅತಿ ದೊಡ್ಡದೆಂಬ ಖ್ಯಾತಿ ಹೊಂದಿರುವ ಗುರುದ್ವಾರ ‘ಸ್ಯಾನ್ ಹೊಸೆ’ಯಲ್ಲಿದೆ. ಗುರುದ್ವಾರದ ಬೀದಿಯೆಂದೇ ಹೆಸರಾದ ರಸ್ತೆಯ ಕೊನೆಯಲ್ಲಿ ಒಂದು ಸಣ್ಣ ಗುಡ್ಡದ ಮೇಲೆ ಇದು ನಿರ್ಮಾಣವಾಗಿದೆ. ಇದರ ಮುಂದೆ ನಿಂತು ಕೆಳಗೆ ಸುತ್ತಲೂ ಕಾಣುವ ಪ್ರಕೃತಿ ಸೌಂದರ್ಯವನ್ನು ಕಣ್ಣು ತುಂಬಿಕೊಳ್ಳುವುದೇ ಒಂದು ಸುಂದರ ಅನುಭವ.

ತಲೆಗೆ ಬಟ್ಟೆಯನ್ನು ಕಟ್ಟಿಕೊಂಡು ದೇವಾಲಯವನ್ನು ಪ್ರವೇಶಿಸಬೇಕು. ಬೇಕಾದವರಿಗೆ ತಲೆಗೆ ಕಟ್ಟಿಕೊಳ್ಳುವ ಬಟ್ಟೆಗಳನ್ನೂ ಅಲ್ಲೇ ಇಟ್ಟಿರುತ್ತಾರೆ. ಅತ್ಯಂತ ವಿಶಾಲವಾಗಿರುವ ಇದರ ಸಭಾಂಗಣದಲ್ಲಿ ಎರಡು ಸಾವಿರ ಜನ ಒಮ್ಮೆಲೇ ಕುಳಿತುಕೊಳ್ಳಬಹುದು. ಭಾರತದಲ್ಲಿ ಇದುವರೆಗೂ ಒಂದೂ ಗುರುದ್ವಾರದ ಒಳಗೆ ಹೋಗಿರದ ನಾನು ಮೊತ್ತ ಮೊದಲ ಬಾರಿಗೆ ಗುರುದ್ವಾರವೆಂದರೆ ಹೇಗಿರುತ್ತದೆಂಬುದನ್ನು ಇಲ್ಲಿ ತಿಳಿದುಕೊಂಡೆ.

ಅಲ್ಲಿ ವಿಶೇಷ ಪೀಠದ ಮೇಲೆ ಇರಿಸಿದ್ದ ಗುರುಗ್ರಂಥ ಸಾಹೇಬಕ್ಕೆ ನಮಗೆ ತಿಳಿದ ರೀತಿಯಲ್ಲಿ ನಮಸ್ಕರಿಸಿ ಅಲ್ಲಿನ ವಿಶೇಷ ಪ್ರಸಾದವನ್ನು ಸ್ವೀಕರಿಸಿ ಲಂಗರ್ ಪಡಸಾಲೆಗೆ ಬಂದೆವು. ಈ ವಿಶಾಲವಾದ ಪಡಸಾಲೆಯಲ್ಲಿ ಸಾವಿರಕ್ಕೂ ಮೇಲ್ಪಟ್ಟು ಜನ ಒಮ್ಮೆಲೇ ಊಟ ಮಾಡಬಹುದು. ಒಮ್ಮೆ ಹಾಕಿಸಿಕೊಂಡು ಬಂದ ನಂತರ ಮತ್ತೆ ಬೇಕೆನಿಸಿದರೆ ಆ ತಟ್ಟೆಯನ್ನು ತೊಳೆಯುವ ಜಾಗದಲ್ಲಿಟ್ಟು, ಕೈತೊಳೆದುಕೊಂಡು, ಬೇರೆಯದೇ ತಟ್ಟೆಯಲ್ಲಿ ಮತ್ತೆ ಬಡಿಸಿಕೊಂಡು ಬರಬೇಕು. ತಿನ್ನುವ ಯಾವ ಪದಾರ್ಥವನ್ನೂ ಎಸೆಯುವಂತಿಲ್ಲ; ಬೇಕಾದಷ್ಟನ್ನು ಮಾತ್ರ ಹಾಕಿಸಿಕೊಳ್ಳಬೇಕು.

ಕೆಳಗೆ ಕೂರಲಾಗದವರಿಗೆ ಕುರ್ಚಿ ಮೇಜಿನ ವ್ಯವಸ್ಥೆಯೂ ಇದೆ. ಪುಷ್ಕಳವಾದ ಊಟ ಮುಗಿಸಿಕೊಂಡು ಬಂದು ಕಟ್ಟಡದ ಒಳ ಹೊರಗನ್ನೆಲ್ಲಾ ನೋಡಿದೆವು. ಒಂದು ಸಣ್ಣ ವೈದ್ಯಾಲಯ, ಗ್ರಂಥಾಲಯ ಇಂತಹ ವ್ಯವಸ್ಥೆಯೂ ಇಲ್ಲಿದೆ. ಶನಿವಾರ, ಭಾನುವಾರಗಳಂದು ಇಲ್ಲಿ ಒಂದು ಮಿನಿ ಪಂಜಾಬೇ ನೆರೆಯುತ್ತದೆ ಎಂದು ಅಲ್ಲಿನವರು ಹೇಳಿದರು. ಎಷ್ಟು ಜನ ಬಂದರೂ ತಡೆದುಕೊಳ್ಳುವಷ್ಟು ಸ್ಥಳಾವಕಾಶ ಮತ್ತು ಕಾರು ನಿಲುಗಡೆ ಸ್ಥಳ ಇಲ್ಲಿದೆ. ಇಷ್ಟು ದೊಡ್ಡ ಆವರಣದಲ್ಲಿ ಅವರು ಕಾಪಾಡಿಕೊಂಡಿರುವ ಸ್ವಚ್ಛತೆ, ಶುಭ್ರತೆ ನಿಜಕ್ಕೂ ಅನುಕರಣೀಯ.

ಸಂಜೀವಿನಿ ಪರ್ವತವನ್ನೇರಿ ಕುಳಿತ ಹನುಮ

ಹನುಮನಿಗೂ, ಸಂಜೀವಿನಿಯಂಥ ಔಷಧಕ್ಕೂ ಅಮೆರಿಕದಲ್ಲೂ ಅದೇನು ನಂಟೋ! ಮಿಲ್ಪಿಟಾಸ್‌ನಿಂದ ಸುಮಾರು ಐವತ್ತು ಮೈಲಿಗಳ ದೂರದಲ್ಲಿರುವ ‘ಗಿಲ್‌ರಾಯ್’ನ ‘ಮೌಂಟ್ ಮಡೋನ’ ಬೆಟ್ಟದ ಮೇಲೆ ಹತ್ತಿ ಕುಳಿತಿದ್ದಾನೆ.

ಭಾರತದ ಬಾಬಾ ಹರಿದಾಸರ ನೇತೃತ್ವದಲ್ಲಿ 2003ರ ಏಪ್ರಿಲ್ 11ರಂದು ಈ ಗುಡ್ಡದ ಮೇಲೆ ಹನುಮಂತನ ದೇವಸ್ಥಾನವನ್ನು ಸ್ಥಾಪಿಸಿದ್ದಾರೆ. ನಂತರ 2012ರ ಸೆಪ್ಟೆಂಬರ್ 19ರಂದು ಹನುಮನ ಜೊತೆಗೂಡಲು ಗಣಪತಿಯೂ ಇಲ್ಲಿ ತನ್ನ ಮಂದಿರವನ್ನು ಸ್ಥಾಪಿಸಿಕೊಂಡು ಕುಳಿತಿದ್ದಾನೆ. ನೋಡಿದ ಎಷ್ಟೋ ದೇಗುಲಗಳಲ್ಲಿ ಇದು ಒಂದು ವಿಭಿನ್ನತೆ ಇರುವ ದೇವ ಮಂದಿರ.

ಮೌಂಟ್ ಮಡೋನಾನಲ್ಲಿರುವ ಹನುಮನ ದೇಗುಲ

ಹನುಮಂತನಿಗೂ ಆರೋಗ್ಯಕ್ಕೂ ಒಂದು ಅವಿನಾಭಾವ ಸಂಬಂಧವೇ. ಈ ಮಾತಿಗೆ ಪೂರಕವಾಗಿ ಇಲ್ಲಿ ಯೋಗ ಮಂದಿರವಿದೆ; ಧ್ಯಾನ ಮಂದಿರವಿದೆ; ಆಯುರ್ವೇದ ಪುನಃಶ್ಚೇತನ ಕೇಂದ್ರವಿದೆ. ಗಣಪತಿಯ ಅನುಗ್ರಹದಿಂದ ಒಂದು ಶಾಲೆಯೂ ಇದೆ. ಗಿಲ್‌ರಾಯ್‌ನ ಗುಡ್ಡಗಳೆಲ್ಲಾ ಒಣಗಿ ಕಂದುಬಣ್ಣಕ್ಕೆ ತಿರುಗಿದ್ದರೂ, ಇದೊಂದು ಗುಡ್ಡ ಮಾತ್ರ ಹಸಿರಿನಿಂದ ಕಂಗೊಳಿಸುತ್ತಿದ್ದು, ಬೆಟ್ಟದ ಮೇಲಿನಿಂದ ಕಾಣುವ ನಿಸರ್ಗ ಸೌಂದರ್ಯ ಮೈಮರೆಸುವಂಥದ್ದು.

ದೇವಸ್ಥಾನದ ವತಿಯಿಂದ ಇರುವ ಒಂದು ಸಣ್ಣ ರೆಸ್ಟೋರೆಂಟ್ ಬಿಟ್ಟರೆ ಇಲ್ಲಿ ಇನ್ಯಾವುದೇ ಅಂಗಡಿ, ಮುಂಗಟ್ಟುಗಳು ಇಲ್ಲ. ಇಲ್ಲಿನ ಆಶ್ರಮದ ಸಾತ್ವಿಕ ಊಟ ಮಾಡ ಬಯಸುವವರು ಮುಂಚಿತವಾಗಿ ನೋಂದಾಯಿಸಿಕೊಂಡು ಬರಬೇಕು. ಹೊರಗಿನ ಯಾವ ಆಹಾರವನ್ನೂ ಇಲ್ಲಿ ತಂದು ತಿನ್ನುವಂತಿಲ್ಲ. ಇಲ್ಲಿ ವಿವಿಧ ಆರೋಗ್ಯ ಶಿಬಿರಗಳು ನಡೆಯುತ್ತಿರುತ್ತವೆ. ಇಂತಹ ಶಿಬಿರಗಳಿಗೆ ಬರಲು ಇಚ್ಛಿಸುವವರು ನೋಂದಾಯಿಸಿಕೊಂಡು ಬರಬೇಕು.

ಬೆಟ್ಟವನ್ನೇರಿ ಕುಳಿತ ಹನುಮ

ಅವರಿಗೆ ಸಾತ್ವಿಕ ಆಹಾರವನ್ನಷ್ಟೇ ಅಲ್ಲದೆ, ಇಲ್ಲಿನ ಪರಿಸರಕ್ಕೆ ಹಾನಿಯಾಗದಂತೆ ನೈಸರ್ಗಿಕ ವಸ್ತುಗಳಿಂದಲೇ ತಯಾರಿಸಿದ, ಶಿಬಿರಾರ್ಥಿಗಳು ಉಪಯೋಗಿಸಬೇಕಾದ ಎಣ್ಣೆ, ಸಾಬೂನು, ಶಾಂಪೂ, ಹಲ್ಲುಜ್ಜುವ ಪೇಸ್ಟು, ಬ್ರಷ್, ಟವೆಲ್ ಎಲ್ಲವನ್ನೂ ಅವರೇ ನೀಡುತ್ತಾರೆ. ಆಹಾರ, ಯೋಗ, ಧ್ಯಾನ ಎಲ್ಲದರ ಬಗೆಗೂ ಬಲು ಕಟ್ಟುನಿಟ್ಟಿನ ಕ್ರಮವನ್ನು ಅನುಸರಿಸುತ್ತಾರೆ.

ಇನ್ನು ಶನಿವಾರ, ಭಾನುವಾರ ಹಾಗೂ ರಜಾ ದಿನಗಳಂದು ಈ ದೇವಸ್ಥಾನಕ್ಕೆ ಹೋಗ ಬಯಸುವವರು ಮುಂಚಿತವಾಗಿ ಜಾಗವನ್ನು ಕಾದಿರಿಸಿಕೊಂಡಿರಬೇಕು. ಇಲ್ಲಿ ಸುಮಾರು ಒಂದು ನೂರು ಕಾರುಗಳನ್ನು ನಿಲ್ಲಿಸಬಹುದಾದ ವ್ಯವಸ್ಥೆಯಿದೆ. ಅದಕ್ಕಿಂತ ಹೆಚ್ಚು ಒಂದು ಕಾರು ಬರುವುದಕ್ಕೂ ಇಲ್ಲಿ ಅವಕಾಶ ಕೊಡುವುದಿಲ್ಲ. ಆ ದಿನಗಳಲ್ಲಿ ವಿಶೇಷವಾದ ಧ್ಯಾನ ಮತ್ತು ಯೋಗದ ಕಾರ್ಯಕ್ರಮಗಳಿರುತ್ತವೆ.

ಆದರೆ ಬರಿದೇ ಆಂಜನೇಯನನ್ನು, ಗಣಪನನ್ನು ನೋಡಿ ಬರುವುದಾದರೆ ಬಿಡಿ ದಿನಗಳಲ್ಲಿ ಹೋಗಿ ಬರುವುದು ಒಳಿತು. ಬೆಳಗ್ಗೆ 6-30ಕ್ಕೆ ಮತ್ತು ಸಂಜೆ 6-00 ಗಂಟೆಗೆ ನಡೆಯುವ ಗಣಪನ ಮತ್ತು ಹನುಮನ ಆರತಿಯ ಕಾರ್ಯಕ್ರಮ ಬಲು ಸೊಗಸು. ವಿಶೇಷವೆಂದರೆ ಇಲ್ಲಿ ಬಿಳಿಯ ಅರ್ಚಕ ಪೂಜಾ ಕೈಂಕರ್ಯವನ್ನು ನೆರವೇರಿಸುವುದು. ಮೊದಲು ಗಣಪತಿಯ ಪೂಜೆ; ನಂತರ ಆಂಜನೇಯನದು.

ಆ ಸಮಯದಲ್ಲಿ ಅಲ್ಲಿ ಸೇರಿರುವರೆಲ್ಲರಿಗೂ ಭಜನೆಯ ಪುಸ್ತಕಗಳನ್ನು ನೀಡುತ್ತಾರೆ. ಎಲ್ಲರೂ ಶಿಸ್ತಾಗಿ ಕುಳಿತ ನಂತರ ಇಬ್ಬರು ಬಿಳಿಯರು ತಬಲಾ ಮತ್ತು ಹಾರ್ಮೋನಿಯಂ ಹಿಡಿದು ಮೈಕ್ ಮುಂದೆ ಕುಳಿತು ತಲ್ಲೀನರಾಗಿ ಹಾಡುವ ಪರಿ ಒಂದು ಆಲೌಕಿಕ ವಾತಾವರಣವನ್ನೇ ಸೃಷ್ಟಿಸಿಬಿಡುತ್ತದೆ. ಸುತ್ತಲಿನ ನಯನ ಮನೋಹರ ಪ್ರಕೃತಿ ಸೌಂದರ್ಯ, ಬೀಸುವ ತಂಗಾಳಿ, ಗದ್ದಲವಿಲ್ಲದೆ ಕುಳಿತುಕೊಂಡು ಹಾಡುವವರೊಂದಿಗೆ ದನಿಗೂಡಿಸುವ ಭಕ್ತಾದಿಗಳು ಎಲ್ಲವೂ ಒಂದಕ್ಕಿಂತ ಒಂದು ಅತಿ ಸುಂದರ.

ಹಾಡುವಷ್ಟು ಕಾಲವೂ ಬಿಳಿಯ ಪೂಜಾರಿ ಪೂಜಾ ಕೈಂಕರ್ಯವನ್ನು ನೆರವೇರಿಸುತ್ತಿರುತ್ತಾರೆ. ಪೂಜೆ ಮುಗಿದು ಆರತಿಯಾದ ನಂತರ ಬಂದವರೆಲ್ಲರೂ ಎರಡೂ ಬದಿಯಲ್ಲಿ ಸಾಲಿನಲ್ಲಿ ನಿಂತು, ದೇವರ ಮೂರ್ತಿಯ ಸನಿಹಕ್ಕೆ ಹೋಗಿ ತೀರ್ಥ ಪ್ರಸಾದಗಳನ್ನು ಸ್ವೀಕರಿಸಬೇಕು. ಆದಿನ ಭಕ್ತಾದಿಗಳು ನೈವೇದ್ಯಕ್ಕೆಂದು ತಂದ ಹಣ್ಣು, ಸಿಹಿ ಇಂಥವನ್ನು ಬಂದವರೆಲ್ಲರಿಗೂ ನೀಡುತ್ತಾರೆ.

ಆರತಿಯ ಹಾಡುಗಳು, ರಾಮರಕ್ಷಾ ಸ್ತೋತ್ರ, ಹನುಮಾನ್ ಚಾಲೀಸಾ ಎಲ್ಲವನ್ನೂ ಹಾಡಿದ ನಂತರ ಮೃತ್ಯುಂಜಯ ಮಂತ್ರವನ್ನು ಹೇಳುತ್ತಾ ಅಂದಿನ ಕಾರ್ಯಕ್ರಮ ಮುಗಿಯುತ್ತದೆ. ಇಷ್ಟೆಲ್ಲಾ ಆಗುವ ಹೊತ್ತಿಗೆ ಸಂಜೆ ಏಳು ಗಂಟೆಯ ಸಮೀಪಕ್ಕೆ ಬಂದಿರುತ್ತದೆ. ಏಳು ಗಂಟೆಯ ನಂತರ ಇಲ್ಲಿನ ಆಶ್ರಮವಾಸಿಗಳು ಮತ್ತು ಶಿಬಿರಾರ್ಥಿಗಳು ಮೌನವನ್ನು ಪಾಲಿಸುತ್ತಾರೆ. ಹಾಗಾಗಿ ಈ ಸಮಯಕ್ಕೆ ಮುಂಚೆಯೇ ಬಂದವರೆಲ್ಲರೂ ಸದ್ದಿಲ್ಲದೆ ನಿರ್ಗಮಿಸಿಬಿಡುತ್ತಾರೆ.

ಈ ದೇಗುಲದ ಅನುಭವ ಒಂದು ಹೊಸ ಪರಿಯದು. ಆ ಸಂಜೆಯ ಸಮಯದಲ್ಲಿ ಸುತ್ತಲ ಕಾಡಿನ ಮಧ್ಯೆ ಸಾಗುತ್ತಿರುವಾಗ ಮಲೆನಾಡಿನಲ್ಲಿ ಸಂಚರಿಸಿದ ಅನುಭವವಾಗುತ್ತದೆ. ದಟ್ಟ ಅರಣ್ಯ, ಬೆಟ್ಟವನ್ನು ಇಳಿಯುವ ಸುತ್ತು ಬಳಸಿನ ಕಿರಿದಾದ ಹಾದಿ, ನಿಧಾನವಾಗಿ ಆವರಿಸಿಕೊಳ್ಳುವ ಸಂಜೆಯ ಮಸಕು ಬೆಳಕು, ಅಷ್ಟರವರೆಗೆ ನೋಡಿ ಬಂದಿದ್ದ ಬೇರೆಯೇ ಲೋಕದ ಅನುಭವ ಎಲ್ಲವೂ ಒಂದು ಹಿತವನ್ನು ನೀಡುತ್ತದೆ. ಬೇ ಪ್ರದೇಶಕ್ಕೆ ಹೋದವರು ಇದರ ಸುಂದರ ಅನುಭವವನ್ನು ಪಡೆಯಬಹುದು.

ಗ್ರಂಥಾಲಯದಲ್ಲಿ..

ಇಲ್ಲಿನ ಪ್ರತಿ ಊರಿನಲ್ಲೂ ಸಾರ್ವಜನಿಕ ಗ್ರಂಥಾಲಯಗಳಿವೆ. ಬಹಳಷ್ಟು ಗ್ರಂಥಾಲಯಗಳು ಎರಡು ಮೂರು ಮಜಲುಗಳಲ್ಲಿ ಸಾಕಷ್ಟು ವಿಶಾಲವಾಗಿದ್ದು, ಬೆಳಗ್ಗಿನಿಂದ ಸಂಜೆವರೆಗೂ ತೆರೆದಿರುತ್ತವೆ. ಈ ದೇಶದಲ್ಲಿ ದಿನವೂ ವೃತ್ತ ಪತ್ರಿಕೆಗಳನ್ನು ಮನೆಗೆ ತಂದುಕೊಡುವ ವ್ಯವಸ್ಥೆಯಿಲ್ಲ. ಬೇಕಾದವರು ತಾವೇ ಹೋಗಿ ತರಬೇಕು. ಹಾಗಾಗಿ ದಿನವೂ ಓದುವ ಹವ್ಯಾಸವಿರುವವರು ವೃತ್ತಪತ್ರಿಕೆಗಳನ್ನೂ, ನಿಯತಕಾಲಿಕಗಳನ್ನೂ ಓದಲು ಗ್ರಂಥಾಲಯಕ್ಕೆ ಬರುವುದನ್ನು ಕಾಣಬಹುದು.

ಒಂದು ಪ್ರತ್ಯೇಕವಾದ ವಿಶಾಲವಾದ ಸ್ಥಳವನ್ನು ಈ ರೀತಿಯ ಪತ್ರಿಕೆ ಮತ್ತು ನಿಯತಕಾಲಿಕಗಳ ಓದಿಗಾಗಿ ಮೀಸಲಿರಿಸಿರುತ್ತಾರೆ. ಈ ವಿಭಾಗದಲ್ಲಿ ಬರಿಯ ಅಮೆರಿಕನ್ ಪತ್ರಿಕೆಗಳಲ್ಲದೆ, ಬೇರೆ-ಬೇರೆ ದೇಶಗಳ ಪತ್ರಿಕೆಗಳೂ ಓದಲು ದೊರೆಯುತ್ತವೆ. ಏನೆಂದರೆ ಬೇರೆ ದೇಶದ ಪತ್ರಿಕೆಗಳು ಇಲ್ಲಿಗೆ ತಲುಪಲು ಒಂದೆರಡು ದಿನ ತಡವಾಗುವುದರಿಂದ ದಿನ ಕಳೆದ ಪತ್ರಿಕೆಗಳು ಮಾತ್ರವೇ ಇಲ್ಲಿ ದೊರಕುವುದು. ಆದರೆ ಈಗ ದೂರದರ್ಶನದಲ್ಲಿ, ಇಂಟರ್‌ನೆಟ್‌ಗಳಲ್ಲಿ ತಾಜಾ ತಾಜಾ ಸುದ್ದಿಗಳೂ ಆಗಾಗಲೇ ದೊರಕುವುದರಿಂದ ಬರಿಯ ಓದುವ ಸಂತೋಷಕ್ಕೆ ಮಾತ್ರ ಈ ಪತ್ರಿಕೆಗಳು ಪ್ರಸ್ತುತವಾಗುತ್ತವೆ.

ಗ್ರಂಥಾಲಯದಲ್ಲಿ ಪುಸ್ತಕ ಜೋಡಣೆಯನ್ನು ಅಚ್ಚುಕಟ್ಟಾಗಿ ಮಾಡಿರುತ್ತಾರೆ. ಪ್ರತಿಯೊಂದು ವಿಷಯಕ್ಕೂ ಬೇರೆ-ಬೇರೆ ವಿಭಾಗಗಳನ್ನು ಮಾಡಿರುತ್ತಾರೆ. ಅಲ್ಲಿ ಓದಲು ಸಿಗುವ ಎಲ್ಲ ಪುಸ್ತಕಗಳ ಯಾದಿಯೂ, ಅದನ್ನಿಟ್ಟಿರುವ ಜಾಗವೂ ಅಲ್ಲಿರುವ ಕಂಪ್ಯೂಟರಿನಲ್ಲಿ ದೊರಕುತ್ತದೆಯಾದ್ದರಿಂದ ಹುಡುಕುವ ಕೆಲಸ ಸುಲಭವಾಗುತ್ತದೆ.

ಚಿಣ್ಣರಿಗಾಗಿಯೇ ಒಂದು ವಿಭಾಗ ಮೀಸಲಾಗಿರುತ್ತದೆ. ಅಲ್ಲಿ ಕಲಿಕಾ ಪುಸ್ತುಕಗಳು, ಕತೆ ಪುಸ್ತಕಗಳು ಮತ್ತು ಕಾಮಿಕ್ಸ್ ಇಂತಹ ಅವರಿಗೆ ಬೇಕಾದ ಸಕಲ ಪುಸ್ತಕಗಳೂ ದೊರಕುತ್ತವೆ. ಬೇಸಿಗೆಯ ರಜೆಯ ದಿನಗಳಲ್ಲಿ ಪೋಷಕರು ಮಕ್ಕಳನ್ನು ಇಲ್ಲಿಗೆ ಕರೆದುಕೊಂಡು ಬಂದು ಅವರನ್ನು ಈ ವಿಭಾಗದಲ್ಲಿ ಬಿಟ್ಟು, ತಾವೂ ತಮಗೆ ಬೇಕಾದ ವಿಭಾಗಕ್ಕೆ ಹೋಗಿ ಕೆಲವು ಗಂಟೆಗಳ ಕಾಲವನ್ನು ಕಳೆಯುವುದುಂಟು.

ಹೀಗೆಯೇ ಮಿಲ್ಪಿಟಾಸ್‌ನ ಗ್ರಂಥಾಲಯವನ್ನು ನೋಡಿ ಬರಲು ಹೋದೆವು. ಮೂರು ಮಜಲುಗಳಲ್ಲಿರುವ ಸಾಕಷ್ಟು ವಿಶಾಲವಾದ ಗ್ರಂಥಾಲಯ. ಒಂದೊಂದೇ ವಿಭಾಗವನ್ನು ನೋಡುತ್ತಾ ಎಲ್ಲ ಮಜಲುಗಳನ್ನೂ ಸುತ್ತಿದೆವು.

ಇಲ್ಲಿಯೂ ಕೂಡಾ ಸದಸ್ಯತ್ವದ ಕಾರ್ಡನ್ನು ಪಡೆದುಕೊಂಡವರು ಬೇಕಾದ ಪುಸ್ತಕಗಳನ್ನು ಮನೆಗೆ ಒಯ್ಯಬಹುದು. ಇಲ್ಲವೇ ಇಲ್ಲಿಯೇ ಕುಳಿತು ಓದಲು, ಬರೆದುಕೊಳ್ಳಲು ಎಲ್ಲ ವಿಭಾಗಗಳಲ್ಲಿಯೂ ತಕ್ಕ ಅನುಕೂಲಗಳನ್ನು ಮಾಡಿದ್ದಾರೆ. ಎಲ್ಲ ಕಡೆಯೂ ಕಣ್ಣು ಹಾಯಿಸಿದ ಮೇಲೆ ಕಡೆಗೆ ಸಾಹಿತ್ಯದ ವಿಭಾಗಕ್ಕೆ ಬಂದೆವು.

ಇಂಗ್ಲಿಷ್, ಫ್ರೆಂಚ್, ಸ್ಪಾನಿಷ್ ಇಂತಹ ಹಲವಾರು ಭಾಷೆಗಳ ಸಾವಿರಾರು ಪುಸ್ತಕಗಳು ಬೇರೆ-ಬೇರೆ ಸಾಲುಗಳಲ್ಲಿ, ಕಪಾಟುಗಳಲ್ಲಿ ಜೋಡಿಸಿಟ್ಟಿದ್ದಾರೆ. ಹುಡುಕುತ್ತಲೇ ಹೋದಾಗ ಅಲ್ಲಿ ಭಾರತೀಯ ಭಾಷೆಗಳ ಸಾಲು ಮತ್ತು ಕಪಾಟುಗಳು ದೊರಕಿದವು. ಭಾರತೀಯ ಭಾಷೆಗಳ ಹರಹು ವಿಸ್ತಾರವಾದುದು. ಇಲ್ಲಿ ಭಾರತದ ಬಹುತೇಕ ಎಲ್ಲ ಭಾಷೆಗಳ ಪುಸ್ತಕಗಳನ್ನೂ ಇರಿಸಿದ್ದಾರೆ.

ಮಿಲ್ಪಿಟಾಸ್ ಲೈಬ್ರರಿಯಲ್ಲಿ ಕನ್ನಡ ಪುಸ್ತಕಗಳು..

ಪ್ರತಿಯೊಂದು ಸಾಲಿನಲ್ಲೂ ಅಲ್ಲಿರುವ ಯಾವ ಯಾವ ಕಪಾಟುಗಳಲ್ಲಿ ಯಾವ ಯಾವ ಭಾಷೆಯ ಪುಸ್ತಕಗಳನ್ನು ಇಡಲಾಗಿದೆ ಎನ್ನುವುದನ್ನು ನಮೂದಿಸಿದ್ದರು. ಹಾಗಾಗಿ ನಮಗೆ ಕನ್ನಡ ಪುಸ್ತಕಗಳನ್ನು ಹುಡುಕುವುದು ಅಷ್ಟೊಂದು ಕಷ್ಟವಾಗಲಿಲ್ಲ. ಬೇರೆಯೇ ದೇಶ, ಪರಿಸರದಲ್ಲಿ ನಮ್ಮ ಭಾಷೆಯ ಪುಸ್ತಕಗಳನ್ನು ನೋಡಿದಾಗ ಆದ ಸಂತಸ ಅನುಭವಿಸುವಂತದ್ದು.

ದೇವರನ್ನು ನೋಡುವಷ್ಟು ಶ್ರದ್ಧೆಯಿಂದ, ಮಗುವನ್ನು ಮುಟ್ಟುವಷ್ಟು ಮಮತೆಯಿಂದ ಆ ಪುಸ್ತಕಗಳ ಮೇಲೆ ಕೈಯಾಡಿಸಿದೆ.. ಕುವೆಂಪು, ಎಸ್.ಎಲ್.ಭೈರಪ್ಪ, ಜಯಂತ ಕಾಯ್ಕಿಣಿ, ಲಂಕೇಶ್, ಯು.ಆರ್.ಅನಂತ ಮೂರ್ತಿ.. ಹೀಗೆ ಹಲವಾರು ಸಾಹಿತ್ಯ ದಿಗ್ಗಜರು ಆ ನೆಲದಲ್ಲೂ ವಿರಾಜಮಾನರಾಗಿ ಕುಳಿತಿರುವುದು ಅಭಿಮಾನವೆನ್ನಿಸಿತು.

ಭಾವುಕಳಾಗಿ ಒಂದಷ್ಟು ಹೊತ್ತು ಅಲ್ಲೇ ನಿಂತಿದ್ದು ಕಣ್ತುಂಬುವ ತನಕ ಮತ್ತೆ ಮತ್ತೆ ನೋಡುತ್ತಾ, ಆ ಪುಸ್ತಕಗಳನ್ನು ತೆಗೆದು ಒಂದೆರಡು ಪುಟಗಳನ್ನು ತಿರುಗಿಸಿ ಮತ್ತೆ ಅದರ ಜಾಗದಲ್ಲಿಡುತ್ತಾ ಒಂದು ಸಾರ್ಥಕ ಭಾವವನ್ನು ಮನದುಂಬಿಕೊಂಡು ಅಲ್ಲಿಂದ ಹೊರಟೆ… ʻವಿಶ್ವದ ಎಷ್ಟೋ ಭಾಷೆಗಳಲ್ಲಿ ಕನ್ನಡವೂ ತನ್ನ ಸ್ಥಾನವನ್ನು ಭದ್ರವಾಗಿಟ್ಟುಕೊಂಡಿದೆ!ʼ ಎನ್ನುವ ಅಭಿಮಾನವುಕ್ಕಿ ಬಂತು.

ಸಂತೆಯೊಳಗೊಂದು ಸುತ್ತು..

ಶನಿವಾರ ಅಥವಾ ಭಾನುವಾರಗಳಂದು ಅಮೆರಿಕದಲ್ಲೂ ಹಲವೆಡೆ ಸಂತೆಗಳು ಸೇರುತ್ತವೆ. ವಾರದ ರಜಾ ದಿನಗಳಲ್ಲೊಂದು ಬೆಳಗು, ಇಲ್ಲಿನ ರೈತರು ತಾವು ಬೆಳೆದ ತರಕಾರಿ, ಹಣ್ಣು, ಹಲವು ಬಗೆಯ ಹೂವುಗಳು ಇಲ್ಲವೇ ತಮ್ಮ ಕೇಂದ್ರಗಳಲ್ಲಿ ಉತ್ಪಾದಿಸಿದ ಮೊಟ್ಟೆ, ತಾಜಾ ಮೀನು, ಜೇನು, ಬ್ರೆಡ್, ಹಲವು ಬಗೆಯ ಶರಬತ್ತು ಇಂಥವನ್ನು ಬೆಳಗ್ಗೆ ಏಳೂವರೆ – ಎಂಟು ಗಂಟೆಯಿಂದ ಆರಂಭವಾಗಿ ಮಧ್ಯಾಹ್ನದ ವರೆಗೂ ಇಲ್ಲವೇ ತಂದಿರುವ ಸರಕು ತೀರುವವರೆಗೂ ಈ ಸಂತೆಯಲ್ಲಿ ವ್ಯಾಪಾರ ನಡೆಸುತ್ತಿರುತ್ತಾರೆ.

ಇದು ಬೆಳೆದ ರೈತರಿಂದ ಗ್ರಾಹಕರಿಗೆ ನೇರವಾದ ವ್ಯಾಪಾರ; ಪ್ರತಿಯೊಂದು ಗುಡಾರದ ಮೇಲೂ ತಮ್ಮ ಫಾರ್ಮ್‌ಗಳ ಹೆಸರುಗಳ ಫಲಕವನ್ನು ಹಾಕಿಕೊಂಡಿರುತ್ತಾರೆ. ಇಲ್ಲಿ ಮಧ್ಯವರ್ತಿಗಳಿಲ್ಲ; ಕೆಲವೊಮ್ಮೆ ಮಾಲ್‌ಗಳಿಗಿಂತ ಕೆಲವು ಉತ್ಪನ್ನಗಳ ದರಗಳು ಹೆಚ್ಚಿದೆಯೆನಿಸಿದರೂ, ತರಕಾರಿ ಮಾಲ್‌ಗಳಲ್ಲಿನಂತೆ ಸಂರಕ್ಷಿಸಿ ಇಟ್ಟಿರುವಂಥದಲ್ಲ; ನೇರವಾಗಿ ತೋಟದಿಂದ ಈ ಗುಡಾರಕ್ಕೆ ಬಂದವು ಮತ್ತು ಹೆಚ್ಚಿನವು ಸಾವಯುವ ಕೃಷಿಯ ವಿಧಾನದಿಂದ ಬೆಳೆದಂತವು.

ಇಲ್ಲಿ ನೀಡುವ ಪ್ರತಿಯೊಂದು ಡಾಲರ್ ಕೂಡ ಬೆಳೆದ ರೈತನಿಗೇ ತಲುಪುತ್ತದೆಂಬ ಕಾರಣದಿಂದ ಹಲವರು ಇಂತಹ ಸಂತೆಯಲ್ಲಿ ಒಂದು ವಾರಕ್ಕಾಗುವಷ್ಟು ತರಕಾರಿ, ಹಣ್ಣು ಮತ್ತು ಹೂವುಗಳನ್ನು ಕೊಳ್ಳಲು ಇಚ್ಛಿಸುತ್ತಾರೆ. ಈಗ ಹಾಗೆಯೇ.. ಈ ಸಂತೆಯೊಳಗೊಂದು ಸುತ್ತು ಅಡ್ಡಾಡಿ ಬರೋಣ..

ಸಂತೆಯೊಳಗೊಂದು ಸುತ್ತು

ಇಲ್ಲಿಗೆ ಬಂದ ರೈತರು ಒಂದು ಗುಡಾರವನ್ನು ನಿರ್ಮಿಸಿಕೊಂಡು, ಟೇಬಲ್ಲುಗಳನ್ನು ಜೋಡಿಸಿಕೊಂಡು, ತಮ್ಮ-ತಮ್ಮ ಬೆಳೆಗಳನ್ನು ಅಂದವಾಗಿ ಜೋಡಿಸಿಟ್ಟುಕೊಂಡಿರುತ್ತಾರೆ.

ಭಾರತದಲ್ಲಿ ಸಿಗುವ ಹಲವು ಬಗೆಯ ತರಕಾರಿ, ಹಣ್ಣು, ಸೊಪ್ಪುಗಳು ಕೂಡ ಇಲ್ಲಿ ತಮ್ಮ ತಮ್ಮ ಹಕ್ಕು ಸ್ಥಾಪಿಸಿಕೊಂಡು ಕುಳಿತು ಇಲ್ಲಿ ಬರುವ ಭಾರತೀಯರಿಗೆ ತಮ್ಮ ಬೇರುಗಳನ್ನು ನೆನಪಿಸುತ್ತಾ ಕರೆಯುತ್ತಿರುತ್ತವೆ. ಹುರಳಿ ಕಾಯಿ, ಕ್ಯಾರೆಟ್, ಬೆಂಡೆ, ಬದನೆ, ಈರುಳ್ಳಿ, ಆಲೂಗಡ್ಡೆ, ಟೊಮ್ಯಾಟೋ, ಬಟಾಣಿ, ಕೋಸುಗಳು..

ಇವುಗಳ ಜೊತೆಯಲ್ಲಿಯೇ ಹಾಗಲ, ಚಪ್ಪರದವರೆ, ತೊಂಡೆ, ಅಲಸಂಡೆ, ಬಸಳೆ ಸೊಪ್ಪು, ದಂಟು, ಮೆಂತೆ, ಕೊತ್ತಂಬರಿ, ಗೋಂಕೂರ, ಒಂದೆಲಗ ಇಂತಹ ದೇಸಿ ತರಕಾರಿಗಳು ಮತ್ತು ಸೊಪ್ಪುಗಳು ಇಲ್ಲಿನ ಆಕರ್ಷಣೆಯ ಸರಕುಗಳು. ಇದರೊಂದಿಗೆ ಚೀನೀಯರು ಹೆಚ್ಚಾಗಿ ಉಪಯೋಗಿಸುವ ಹಲವು ಬಗೆಯ ನಾವು ಹೆಸರು ಕೇಳರಿಯದ ತರಕಾರಿ ಮತ್ತು ಸೊಪ್ಪುಗಳೂ ಇಲ್ಲಿವೆ. ಹಾಗಾದರೆ ಇದು ಬರಿಯ ಏಷಿಯನ್ನರಿಗೆ ಮಾತ್ರವೇ?! ಖಂಡಿತಾ ಇಲ್ಲ, ಅಮೇರಿಕನ್ನರ ಬ್ರಕೋಲಿ, ಚೆರ‍್ರಿ ಟೊಮ್ಯಾಟೋ ಇನ್ನಿತರವೂ ತಮ್ಮ ಜಾಗವನ್ನು ಸ್ಥಾಪಿಸಿಕೊಂಡು ಕುಳಿತಿರುತ್ತವೆ. ಬರಿಯ ಹಸಿ ಮೆಣಸಿನಕಾಯಿ, ಟೊಮ್ಯಾಟೋ, ಈರುಳ್ಳಿ ಮತ್ತು ಆಲೂಗಡ್ಡೆಗಳಲ್ಲೇ ಅದೆಷ್ಟು ಬಗೆ!

ಸಂತೆಯ ಅಂಗಡಿಯಲ್ಲಿ ವ್ಯಾಪಾರ

ತರಕಾರಿಯಾಯಿತು; ಇನ್ನು ಹಣ್ಣಿನ ಕಡೆಗೆ ಹೋಗೋಣ ಬನ್ನಿ.. ಇಲ್ಲಿಯೇ ಬೆಳೆಯುವ ಸ್ಟ್ರಾಬೆರಿ, ಕಿತ್ತಳೆ, ನೆಕ್ಟರೀಸ್, ಏಪ್ರಿಕಾಟ್, ದ್ರಾಕ್ಷಿ, ಚೆರ‍್ರಿ, ಪೀಚ್, ಬ್ಲೂಬೆರ‍್ರಿ, ಬಾಳೆ, ಕಲ್ಲಂಗಡಿ, ಸಿದ್ದೋಟಿ.. ಅದೆಷ್ಟು ಬಗೆಯ ಹಣ್ಣುಗಳು!

ಎಲ್ಲ ಹಣ್ಣುಗಳ ಮಾದರಿಯ ಒಂದಷ್ಟು ಹೋಳುಗಳನ್ನು ಕತ್ತರಿಸಿಟ್ಟು ಹಾದು ಹೋಗುವವರಿಗೆಲ್ಲಾ ರುಚಿಗೆ ನೀಡುತ್ತಿರುತ್ತಾರೆ. ಸವಿ ನಾಲಿಗೆ, ಮನವನ್ನು ತಣಿಸಿದರೆ ಒಳಗೆ ಹೋಗಿ ಬೇಕಾದುದನ್ನು ಆಯ್ಕೆ ಮಾಡಿಕೊಂಡು ಕೊಳ್ಳಬಹುದು. ತರಕಾರಿಯಲ್ಲಾಗಲೀ, ಹಣ್ಣುಗಳಲ್ಲಾಗಲೀ, ಕೆಲವೆಡೆ ಕೆಲವು ಬಗೆಯವನ್ನು ಒಟ್ಟಾಗಿ ಕೊಂಡರೆ ರಿಯಾಯಿತಿ ದರದಲ್ಲಿ ಸಿಗುವುದೂ ಉಂಟು. ಹಾಗೆಯೇ ಒಂದೇ ದರದ ಹಣ್ಣು/ತರಕಾರಿಗಳನ್ನು ಒಟ್ಟಿಗೆ ಒಂದು ತೂಕಕ್ಕೆ ತೂಗಿಸಿ, ಕೊಳ್ಳುವ ಸೌಲಭ್ಯವೂ ಇರುತ್ತದೆ.

ಇಲ್ಲೆಲ್ಲೋ ಹಣ್ಣನ್ನು ಸವಿಯುತ್ತಿರುವಾಗ, ಸುಶ್ರಾವ್ಯವಾದ ಹಾಡೊಂದು ಕೇಳಿ ಬರುತ್ತಿದೆಯೇ?!  ನೋಡೋಣ ಬನ್ನಿ.. ದನಿಯನ್ನರಸಿ ಹೊರಟರೆ, ಸಂತೆಯ ಮಧ್ಯದಲ್ಲೊಂದು ಜಾಗವನ್ನು ಮಾಡಿಕೊಂಡು, ಕೈಲೊಂದು ಮೈಕನ್ನು ಹಿಡಿದುಕೊಂಡು ಸುಂದರ ತರುಣಿಯೊಬ್ಬಳು ಹಾಡುತ್ತಿದ್ದಾಳೆ ನೋಡಿ! ಒಂದಷ್ಟು ಜನ ಅಲ್ಲೇ ನಿಂತು ಕೇಳಿ ಆನಂದಿಸುತ್ತಿದ್ದರೆ, ಮತ್ತೆ ಕೆಲವರು ಆಚೀಚೆ ಹಾದು ಹೋಗುತ್ತಾ, ಆ ಬದಿ, ಈ ಬದಿ ಗುಡಾರಗಳಲ್ಲಿ ವ್ಯಾಪಾರ ಮಾಡುತ್ತಾ ಆಗೀಗ ಈ ಕಡೆ ಗಮನ ಹರಿಸುತ್ತಾ ತಲೆದೂಗುತ್ತಿದ್ದಾರೆ.

ಅವಳ ಮುಂದೊಂದು ಪುಟ್ಟ ಮೇಜು, ಅದರ ಮೇಲೆ ಅವಳು ಹಾಡಿರುವ ಸಿ.ಡಿಗಳು, ಡಿ.ವಿ.ಡಿಗಳು. ಅವುಗಳ ಬೆಲೆಯ ಒಂದು ರಟ್ಟಿನ ಫಲಕ, ಪಕ್ಕದಲ್ಲೇ ಇನ್ನೊಂದು ಪುಟ್ಟ ರಟ್ಟಿನ ಡಬ್ಬಿ ಇವೆ. ಬೇಕಾದವರು ದುಡ್ಡು ಕೊಟ್ಟು ಇವುಗಳನ್ನು ಖರೀದಿಸುತ್ತಿದ್ದಾರೆ; ಇಲ್ಲವೇ ತಮಗೆ ಖುಷಿಯಾಯಿತೆನಿಸಿದರೆ ಪಕ್ಕದ ರಟ್ಟಿನ ಡಬ್ಬಿಗೆ ಒಂದೆರಡು ಡಾಲರ್‌ಗಳ ಮೆಚ್ಚುಗೆ ಹಣವನ್ನು ಹಾಕಿ ಮುಂದೆ ಸಾಗುತ್ತಿದ್ದಾರೆ. ಇಲ್ಲಿಯೇ ನಿಲ್ಲುವುದು ಬೇಡ; ಮುಂದೆ ಇನ್ನೂ ಸಾಕಷ್ಟಿದೆ.. ಅವುಗಳನ್ನು ನೋಡೋಣ..

ಸಾಲಿನ ಕೊನೆಯಲ್ಲೇ ವೇಸ್‌ನಲ್ಲಿ ಇಡಬಹುದಾದ ಹಲವು ಬಗೆಯ ಹೂಗಳ ಅಂಗಡಿಗಳಿವೆ. ಮನೆಯಲ್ಲಿ ಹೂಗಿಡಗಳಿಲ್ಲದಿದ್ದರೆ, ಇಲ್ಲಿ ದೇವರ ಪೂಜೆಗೆ ಸಿಗುವುದೂ ಇದೇ ಬಗೆಯ ಹೂಗಳೇ. ಇದಕ್ಕೆ ಲಂಬವಾಗಿರುವ ಸಾಲಿನಲ್ಲಿ ಸ್ಥಳೀಯವಾಗಿ ಬೆಳೆಯುವ ಬಾದಾಮಿ, ಒಣದ್ರಾಕ್ಷಿ, ಏಪ್ರಿಕಾಟ್‌ನಂತಹ ಒಣ ಹಣ್ಣುಗಳ ಅಂಗಡಿಗಳೂ ಇವೆ. ವಿವಿಧ ಬಗೆಯ ಜೇನುತುಪ್ಪವಿದೆ. ಇನ್ನೂ ಮುಂದೆ ಸಾಗಿದರೆ ತಾಜಾ ಮೀನುಗಳ ಮಾರಾಟ ಮಳಿಗೆಗಳಿವೆ.

ಕೋಳಿ ಮೊಟ್ಟೆ ಮತ್ತು ಬೇಕರಿ ಉತ್ಪನ್ನಗಳೂ ಗ್ರಾಹಕರಿಗಾಗಿ ಕಾಯುತ್ತಿವೆ. ಇವೆಲ್ಲವನ್ನೂ ನೋಡಿಕೊಂಡು ಸಾಲಿನಿಂದೀಚೆಗೆ ಬರುವಾಗ ಅಲ್ಲಿ ಪಾಪ್‌ಕಾರ್ನ್, ಹುರಿದ ನೆಲಗಡಲೆ, ಬಿಡಿಸಿದ ಸೊಪ್ಪಿನ ಕಡಲೆ ಇಂತಹ ದೇಸಿ ತಿನಿಸುಗಳ ವಾಹನ ಮಳಿಗೆಗಳೂ ಇವೆ.

ಮಾಲ್‌ಗಳಲ್ಲಿ ತಿರುಗಿ ತರಕಾರಿ, ಹಣ್ಣುಗಳ ವ್ಯಾಪಾರ ಮಾಡುವವರ ಏಕತಾನತೆಗೆ ಬಿಸಿಲು ಮತ್ತು ಗಾಳಿಯಲ್ಲಿ ಅಡ್ಡಾಡುತ್ತಾ ಬೇಕಾದ್ದನ್ನು ಕೊಳ್ಳುವಂಥ ಇಂತಹ ಸಂತೆ ಒಂದು ಬೇರೆಯದೇ ಆದ ಅನುಭವವನ್ನು ನೀಡುತ್ತದೆ. ಹಳ್ಳಿಗಳ ವಾತಾವರಣದಿಂದ ಬಂದವರಿಗಂತೂ ತಮ್ಮ ನೆಲದ ವಾಸನೆ ಎಲ್ಲೋ ಮನದಲ್ಲಿ ಮೂಡುತ್ತಿರುತ್ತದೆ.

ಗ್ರಾಹಕ ಮತ್ತು ವ್ಯಾಪಾರಿಯ ನಡುವೆ ಒಂದಷ್ಟು ಮಾತುಕತೆಯಿರುತ್ತದೆ. ಸುಮ್ಮನೆ ಬೇಕಾದ ಸರಕುಗಳನ್ನು ತಳ್ಳುಗಾಡಿಯಲ್ಲಿ ತುರುಕಿಕೊಂಡು ಹೋಗಿ ನಗದು ಮುಂಗಟ್ಟೆಯಲ್ಲಿ ಚರ್ಚೆಯಿಲ್ಲದೇ ಪಾವತಿಸುವಂಥದಲ್ಲ. ಇಂತಹ ದೇಸಿ ವ್ಯಾಪಾರವನ್ನು ಆನಂದಿಸುವವರಿಗೆ ಸಂತೆಯೂ ಒಂದು ವಾರಾಂತ್ಯದ ಮನರಂಜನೆಯೇ!.

ಸಂತೆಯೆಂದ ಮೇಲೆ ಬೇಡುವವರಿಲ್ಲದಿದ್ದರೆ ಅದು ಪೂರ್ಣವಾಗುತ್ತದೆಯೇ?! ಅದೋ.. ಮೂಲೆಯಲ್ಲಿ.. ಪಕ್ಕದ ತೊಟ್ಟಿಲಲ್ಲಿ ಪುಟ್ಟ ಮಗುವೊಂದನ್ನು ಮಲಗಿಸಿಕೊಂಡು, ‘ಮೂರು ಮಕ್ಕಳ ತಾಯಿ, ಕೈಲಿ ಕೆಲಸವಿಲ್ಲ, ಏನಾದರೂ ಸಹಾಯ ಮಾಡಿ, ದೇವರು ನಿಮ್ಮನ್ನು ಆಶೀರ್ವದಿಸಲಿ’ ಎಂದು ಬರೆದ ರಟ್ಟಿನ ಫಲಕವನ್ನು ಪಕ್ಕದಲ್ಲಿ ಇಟ್ಟುಕೊಂಡು ಹರಕು ಬಟ್ಟೆಯ ಮೇಲೆ ಕುಳಿತಿದ್ದಾಳೆ ಆಕೆ. ಬಾಯಿಬಿಟ್ಟು ಕರೆಯುವುದಿಲ್ಲ.

ನೋಡಿ ಹೋಗುವ ಕೆಲವರು ಕೆಲವು ಸೆಂಟ್ಸ್‌ಗಳನ್ನೋ, ಒಂದೆರಡು ಡಾಲರ್‌ಗಳನ್ನೋ ಅವಳ ಮುಂದೆ ಹಾಕಿ ಮುಂದೆ ಸಾಗುತ್ತಾರೆ.. ಕೊಂಡಿರುವ ಸರಕನ್ನೆಲ್ಲಾ ತಮ್ಮ ವಾಹನಗಳಿಗೆ ತುಂಬಿಕೊಂಡು ಮತ್ತೆ ಮುಂದಿನ ವಾರದ ಎದುರು ನೋಡುತ್ತಾ..

(ಮುಂದುವರಿಯುವುದು)

‍ಲೇಖಕರು avadhi

October 16, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: