ಕಥೆ- ಸೂಳೇಬಾವಿ ಕ್ಯಾಂಪು- ಈ ಕಥೆಯು ಯಾವ ನೈಜ ಘಟನೆಯನ್ನು ಅವಲಂಬಿಸಿರುವುದಿಲ್ಲ.

ಪುಟ್ಟರಾಧ್ಯ

(ನಿನ್ನೆಯಿಂದ)

ತಲೆಗೆ ಏನೇನಲ್ಲ ಯೋಚನೆ ಬರಲು ಶುರುವಾಗಿತ್ತು. ಸುಮಾರು ಐದಾರು ವರ್ಷಗಳ ಹಿಂದೆ ಒಬ್ಬ ಬಂಡೀಪುರದ ರೇಂಜ್ ಫಾರೆಸ್ಟ್ ಆಫೀಸರ್ ಒಬ್ಬರನ್ನು ಹಾಡು ಹಗಲಲ್ಲಿಯೇ ಕೊಲೆ ಮಾಡಲಾಗಿತ್ತು. ಅದಾದ ನಂತರ ಕರ್ನಾಟಕ ಸರ್ಕಾರ ತೀವ್ರವಾಗಿ ಸ್ಪಂದಿಸಿ ರೇಂಜ್ ಫಾರೆಸ್ಟ್ ಆಫೀಸರ್ ಗಳ ಭದ್ರತೆ ಮತ್ತು ಆಗುಹೋಗುಗಳ ಬಗ್ಗೆ ಬಹಳ ಖಾಳಜಿ ವಹಿಸಿತ್ತು.

ಕೊಲೆ ಮಾಡಿದ ಗುಂಪನ್ನು ಹಿಡಿದು ಯಾವ ರೀತಿ ಶಿಕ್ಷಿಸಿತ್ತೆಂದರೆ ಇಂದಿಗೂ ರೇಂಜ್ ಫಾರೆಸ್ಟ್ ಆಫೀಸರ್ ಗಳನ್ನು ಮುಟ್ಟಲು ಯಾವುದೇ ಸುಪಾರಿಗಳು ಒಪ್ಪುತ್ತಿರಲಿಲ್ಲ. ಸಾರಾಳು ಬೆಂಗಳೂರಿಗೆ ಹೋದಾಗ ಮೊದಲನೆಯ ಬಾರಿ ಆಂಟಿ ಪೊಚಿಂಗ್ ಕ್ಯಾಂಪಿನಲ್ಲಿ ನಡೆದಿದ್ದ ಘಟನೆಯನ್ನು ರುಬಿಕಾಳಿಗೆ ವಿವರಿಸಿದ್ದಳು. ರುಬಿಕಾಳಿಗೆ ಶಂಕರನ ಮೇಲೆ ಆಗಲೇ ಅನುಮಾನ ಬಂದಿತ್ತಾದರೂ ಕಾದು ನೋಡೋಣವೆಂದು ಸುಮ್ಮನಿದ್ದಳು.

ಆದರೂ ಶಂಕರನು ದೆವ್ವದ ಕಥೆ ನಂಬಿಲ್ಲವಾದರೆ ಇವರ ಸಾಮ್ರಾಜ್ಯವೇ ಮುಚ್ಚಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಬಹುದು. ಆದ್ದರಿಂದ ಇದನ್ನು ಅಷ್ಟಕ್ಕೇ ಬಿಡಲು ಅವಳು ತಯಾರಿರಲಿಲ್ಲ. ರುಬಿಕಾಳು ನೇರವಾಗಿ ಬಂಗ್ಲೊ ಮೀಟಿಂಗ್‍ಗೆ ಹೋಗದೆ ಇಲ್ಲಿಗೆ ಬಂದಿದ್ದೆ ಶಂಕರನ ಬಗ್ಗೆ ಹೆಚ್ಚು ತಿಳಿಯಲು ಮತ್ತೆ ಸಾಧ್ಯವಾದರೆ ಅವನಿಗೆ ಹತ್ತಿರವಾಗಲು. ಆ ಬಂಗ್ಲೊಗೆ ಹೋಗಲು ರುಬಿಕಾಳಿಗೆ ಅಂತರಸಂತೆ ಕಾಡಲ್ಲದೆ ಕೇರಳದ ಕಡೆಗಳಿಂದಲೂ ಬಹಳ ದಾರಿಗಳಿದ್ದವು.

ಆದ್ದರಿಂದ ರುಬಿಕಾಗೆ ಕಾಡಿನ ಒಳಗೆ ಉಳಿಯಲು ಅನುಮತಿಗಿಂತ ಶಂಕರನ ಸಾಂಗತ್ಯವೇ ಹೆಚ್ಚು ಬೇಕಾಗಿದ್ದು. ಇವನನ್ನ ಅವಳ ತೆಕ್ಕೆಗೆ ಬೀಳಿಸಿಕೊಳ್ಳಲು ಆಗಿರಲಿಲ್ಲ. ಮೋಹದ ಬಲೆಗೆ ಬೀಳದೆ ಬೇಕಾಗಿರುವುದನ್ನು ಪಡೆದು ಶಂಕರ ನುಸುಳಿಕೊಂಡಿದ್ದ. ಈಗ ರುಬಿಕಾಳಿಗೆ ಇರುವುದು ಒಂದೇ ದಾರಿ, ಶಂಕರ , ಆನಂದ ಮತ್ತು ತಮ್ಮಯ್ಯನವರನ್ನು ಸಾಧ್ಯವಾದಷ್ಟು ಬೇಗ ಮುಗಿಸಿಹಾಕುವುದು.

 

ಇಂತಹ ಕುಖ್ಯಾತ ಗ್ಯಾಂಗಿನ ಬಾಸ್ ಆಗಿ ಇವಳೇ ಏಕೆ ಈ  ಕೆಲಸ ಮಾಡಬೇಕು ಕಾರಣ ಇವಳು ಕೊಲೆ ಮಾಡಲು ಹೊರಟಿರುವುದು ಕರ್ನಾಟಕ ಸರ್ಕಾರದ ರೇಂಜ್ ಫಾರೆಸ್ಟ್ ಆಫೀಸರ್. ಅಂದರೆ ೯೦ರ ದಶಕದಲ್ಲಿ ಕೊಲಂಬಿಯಾದಲ್ಲಿಯೋ ಮೆಕ್ಸಿಕೋದಲ್ಲಿಯೋ ಅಮೆರಿಕಾದ ಡ್ರಗ್ ಎನ್ಫೋರ್ಸ್ಮೆಂಟ್ ಏಜೆನ್ಟ್ ಗಳಿಗೆ ( DEA ) ಎಷ್ಟು  ಬೆಲೆಯಿತ್ತೋ ಹಾಗೆ ಕರ್ನಾಟಕ ಸರ್ಕಾರದ ರೇಂಜ್ ಫಾರೆಸ್ಟ್ ಆಫೀಸರ್ ಗಳಿಗೂ ಅಷ್ಟೇ ಬೆಲೆ.

ಸುಪಾರಿಗೆ ಕೊಡಲು ಸಾಧ್ಯವಿಲ್ಲ ಕಾರಣ  ಹಾಗೆಯೇ ನೆರವಾಗಿ ರೇಂಜ್ ಫಾರೆಸ್ಟ್ ಆಫೀಸರನ್ನು ಹೊಡೆಸಿದರೆ ಈ ಕೇಸಿನ ಪೂರ್ಣ ವಿಚಾರಣೆಯಾಗಿ ಮತ್ತೆ ಎಲ್ಲ ಬೆಳಕಿಗೆ ಬರಬಹುದು. ಆದ್ದರಿಂದ ಶಂಕರನ ನಂಬಿಕೆಯನ್ನು ಪರೀಕ್ಷಿಸಿ ಮುಂದಿನ ನಿರ್ಧಾರ ಕೈಗೊಳ್ಳೋಣ ಎಂದು ಇಲ್ಲಿನವರೆಗೂ ಬಂದಿದ್ದಳು. ಅವಳ ಅನುಮಾನದಂತೆ ಶಂಕರನನ್ನು ದೆವ್ವ-ಭೂತದ ಬೆದರಿಕಗಳಿಂದ ಭೇದಿಸಲು ಸಾಧ್ಯವಾಗಿರಲಿಲ್ಲ.

ಹಿಂದೆ  ಇದ್ದ ಅಧಿಕಾರಿಗಳಂತೆ ಇವನು ಒಂದು ಘಟನೆಗೆ ಹೆದರಿ ಸುಮ್ಮನಾಗಿರಲಿಲ್ಲ. ಬೇರೆಯವರ ಕೈಲಿ ಮಾಡಿಸಿ ಸ್ವಲ್ಪ ಅನಾಹುತವಾದರೆ ಇವಳ  ಸಾಮ್ರಾಜ್ಯವೇ ಒಡೆದುಹೋಗಲಿದೆ. ಇವಳೇ ಕೊಲೆ ಮಾಡಬೇಕು ಮತ್ತು ಯಾವ ಕಾರಣಕ್ಕೂ ಯಾರಿಗೂ ತಿಳಿಯಬಾರದು. ಅದಕ್ಕೂ ಮುನ್ನ ಶಂಕರನ ಮನಸ್ಸಿಗೆ ಹತ್ತಿರವಾಗಬೇಕು ಅದು ಈಗ ಸಾಧ್ಯವಿಲ್ಲ. ಆದರೆ ಇಲ್ಲಿಂದ ಅವಳು ಇವರನ್ನು ಮುಗಿಸದೆ ಹೊರಟು ಹೋದರೆ ಅವಳಿಗೆ ತಿಳಿಯದೆಯೇ ಇವಳ ಕಥೆ ಪತ್ರಿಕೆಗಳಲ್ಲಿ ಅಚ್ಚಾಗಿ ಹೋಗಿರುತ್ತದೆ.

ಅಷ್ಟೊತ್ತಿಗೆ ಸಮಯ ಬೆಳಿಗ್ಗೆ ಹತ್ತು ಘಂಟೆಯಾಗುತ್ತ ಬಂದಿತ್ತು. ಸಾರಾ ಬಸ್ಸನ್ನು ಹಿಡಿದು ಬೆಂಗಳೂರಿಗೆ ಹೊರಟರೆ ರುಬಿಕಾ ಹಾಡಿಗೆ ಹೋಗಿ ಬರುತ್ತೇನೆಂದು ಶಂಕರನಿಗೆ ಹೇಳಿ ಹೊರಟು ಹೋಗಿದ್ದಳು. ಶಂಕರ ಕಾರ್ಯಗತವಾದ, ಶಂಕರನಿಗೆ ಇನ್ನು ಹೆಚ್ಚಿನ ಮಾಹಿತಿ ಹುಡುಕಿದರೆ ರುಬಿಕಾಳ ಪೂರ್ಣ ನೆಟ್ ವರ್ಕ್ ಸಿಗುವುದೆಂಬುದರ ಬಗ್ಗೆ ವಿಶ್ವಾಸವಿತ್ತು. ಅದರ ಜೊತೆಗೆ ಇನ್ನು ಹೆಚ್ಚು ಮಾಹಿತಿಯನ್ನು ಕಲೆಹಾಕಿ ಒಂದು ರಿಪೋರ್ಟ್ ತಯಾರಿಸಿ ಇವನ ಉನ್ನತ ಅಧಿಕಾರಿಯೊಡನೆ ಮಾತನಾಡುವುದಿತ್ತು.

ಹಾಗಾಗಿ ಇವನಿಗೂ ರುಬಿಕಾಳು ಅಂತರಸಂತೆಯಲ್ಲಿಯೇ ಇದ್ದರೆ ಇನ್ನು ಒಳ್ಳೆಯದೆಂಬುದು ಅವನಿಗೂ ತಿಳಿದಿತ್ತು. ಶಂಕರ ಮೊದಲು ಕರೆಸಿದ್ದು ತಮ್ಮಯ್ಯನನ್ನು”ತಮ್ಮಯ್ಯ. ನೀನು ಹೋಗಿ ರಹಸ್ಯ ದಾರಿ ಹಿಡಿದು ರುಬಿಕಾಳಿಗಿಂತ ಮುಂಚೆ ಹಾಡಿಯನ್ನು ತಲುಪಿ  ಕೆಂಚಯ್ಯನನ್ನು ಕರೆದುಕೊಂಡು ಆಫೀಸಿಗೆ ಕರೆದು ತಾ . ನಿನ್ನ ಜೊತೆ ಸಂಗಮೇಶ ಇರುತ್ತಾರೆ ” ಎಂದು ತಮ್ಮಯ್ಯನನ್ನು ಮತ್ತು ಸಂಗಮೇಶರನ್ನು ಕಳುಹಿಸಿದ.

ತಮ್ಮಯ್ಯ ಹೋದವನೇ ರುಬಿಕಾಳ ಜೀಪಿಗೆ ಹಾಡಿಯಲ್ಲಿ ಹುಡುಕಿದ ನಂತರ ಶಿಂಗಾನಾಯ್ಕರನನ್ನು ಕೇಳಿದ ಮೇಲೆ ಅವಳು ಇನ್ನು ತಲುಪಿಲ್ಲದ್ದನ್ನು ಖಚಿತಪಡಿಸಿಕೊಂಡು ಕೆಂಚಯ್ಯನ ಬಳಿ ಮಾತನಾಡಿ ಅವನನ್ನು ಆಫೀಸಿಗೆ ಕರೆ ತಂದಿದ್ದ. ಕೆಂಚಯ್ಯನಿಗೆ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಕೊಂಚವೂ ಮಾಹಿತಿಯಿರಲಿಲ್ಲವಾದ್ದರಿಂದ ಸುಮ್ಮನೆ ಜೀಪು ಹತ್ತಿ ಕುಳಿತು ಹೊರಟಿದ್ದ.

ಹೀಗೆ ಕಾರಣಾಂತರಗಳಿಂದ ಬಹಳ ಜನರನ್ನು ಆಫೀಸಿಗೆ ಕರೆದುಕೊಂಡು ಹೋಗುವುದು ರೂಡಿಯಲ್ಲಿದ್ದರಿಂದ ಕೆಂಚಯ್ಯನು ಆರಾಮಾಗಿ ಹತ್ತಿ ಬಂದಿದ್ದ. ರುಬಿಕಾ ಹಾಡಿಗೆ ಹೋಗಿದ್ದರೆ ಕೆಂಚಯ್ಯನು ಹೋಗಿರುವುದು ತಿಳಿಯುತ್ತಿತ್ತೇನೋ. ಆದರೆ, ಅವಳು ಹಾಡಿಗೆ ಹೋಗಿರಲಿಲ್ಲ. ಬದಲಿಗೆ ಯಾವುದೋ ಒಂದು ಜಾತಿಯ ಸಸ್ಯವನ್ನು ಹುಡುಕಿ ಕೇರಳದ ಕಾಡಿಗೆ ಹೋಗಿದ್ದಳು. ಆ ಸಸ್ಯದ ಗುಟ್ಟು ಬಹಳ ಜನರಿಗೆ ಗೊತ್ತಿರಲಿಲ್ಲ.

ಮಧ್ಯಾಹ್ನದಷ್ಟರಲ್ಲಿ ತಮ್ಮಯ್ಯ ಮತ್ತು ಸಂಗಮೇಶ ಕೆಂಚಯ್ಯನೊಂದಿಗೆ ವಾಪಸಾಗಿದ್ದರು. ಶಂಕರನಿಗೆ ಕೆಂಚಯ್ಯನನ್ನು ಭೇದಿಸಲು ದಾರಿಗಳನ್ನು  ಹುಡುಕುಬೇಕಿತ್ತು. ಆನಂದ ಹೇಳಿದ “ಶಂಕರ ನಮಗೆ ಹೆಚ್ಚು ಸಮಯ ಉಳಿದಿಲ್ಲ, ಮೈಸೂರಿಗೆ ಫೋನ್ ಮಾಡಿ ಎನ್‍ಕೌಂಟರ್ ಸ್ಪೆಷಲಿಸ್ಟ್ ರವಿಯವರನ್ನು ಕರೆಸಿಕೋ. ಅವರಾದರೆ  ಘಂಟೆಯೊಳಗೆ ಬಾಯಿ ಬಿಡಿಸುತ್ತಾರೆ. ಜೊತೆಗೆ ನನಗು ಪರಿಚಯದವರೇ, ಸರ್ಕಾರದ ಅನುಮತಿ ಪಡೆದು ವಿಚಾರ ಮಾಡಲು ಹೋದರೆ ಕೋರ್ಟು ಕಚೇರಿ ಅಲೆಯುತ್ತಾ ರುಬಿಕಾ  ತಪ್ಪಿಸಿಕೊಳ್ಳಬಹುದು” .

ಇನ್ಸ್ ಪೆಕ್ಟರ್  ರವಿ ಶಂಕರನಿಗೂ ಪರಿಚಯದವರೇ ಆದದ್ದರಿಂದ ಕರೆ ಮಾಡಿ ಘಂಟೆಯೊಳಗೆ ಅಂತರಸಂತೆ ಆಫೀಸಿಗೆ ಬಂದಿದ್ದರು. ಅವರಿಗೆ ವಿಷಯವನ್ನೆಲ್ಲ ವಿವರವಾಗಿ ಹೇಳಿದಾಗ ಎಲ್ಲ ವಿಷಯ ಬಾಯಿ ಬಿಡಿಸುವುದಾಗಿ ಹೇಳಿದ್ದರು. ಕೆಂಚಯ್ಯ ಬಂದ ತಕ್ಷಣವೇ ಸಮಯ ವ್ಯರ್ಥ ಮಾಡದೆ ಇನ್ಸ್ ಪೆಕ್ಟರ್ ರವಿ ಕೆಲಸ ಶುರು ಮಾಡಿಕೊಂಡಿದ್ದರು . ಇನ್ಸ್ ಪೆಕ್ಟರ್ ರವಿ ಕರ್ನಾಟಕದಾದ್ಯಂತ ಹೆಸರಾಂತ ಸ್ಪೆಷಲಿಸ್ಟ್ ಬೇರೆ ಆದ್ದರಿಂದ ರವಿಯವರಿಗೆ ಇವನ ಬಳಿ ಬಾಯಿ ಬಿಡಿಸುವುದು ಹೆಚ್ಚೇನೂ ಕಷ್ಟವಾಗಿರಲಿಲ್ಲ.

ಕೆಂಚಯ್ಯನ ಮಾಹಿತಿಯ ಪ್ರಕಾರ ರುಬಿಕಾ ಗಾಂಜಾ ಪ್ರಪಂಚಕ್ಕೆ ಬರಲು ಕಾರಣ ಅವಳ ಪಿಎಚ್‍ಡಿ ಇನ್ ಮೆಡಿಸಿನಲ್ ಪ್ಲಾಂಟ್ಸ್ ಅಟ್ ಸ್ಟಾನ್ಫೋರ್ಡ್  ಯುನಿವರ್ಸಿಟಿ ಅಮೆರಿಕಾ. ಅಲ್ಲಿರುವಾಗ ಇವಳ ಪಿಎಚ್‍ಡಿ ಮಾರ್ಗದರ್ಶಕರಾಗಿದ್ದ ಆಂಥನಿ ಫರ್ನಾಂಡಿಸ್‍ನನ್ನು ಮದುವೆಯಾಗಿ ಅವನಿಂದ ಬಹಳ ಪ್ರಭಾವಿತಳಾಗಿದ್ದಳು. ಥೀಸಿಸ್‍ಗೆಂದು ಹೊರದೇಶದಲ್ಲಿದ್ದಾಗ ಬೇರೆ ಜಾತಿಯ ಸಸ್ಯಗಳ ಜೊತೆ ಮಾರಿವಾನಾ ಜಾತಿಯ ಸಸ್ಯವನ್ನು ಬೆಳೆಯುವಲ್ಲಿ ತಜ್ಞಳಾಗಿದ್ದು ತನ್ನ ಗಂಡನ ಪ್ರಭಾವದಿಂದ.

ಗಂಡನ ದುರಾಸೆ ಹಣ ಮಾಡುವತ್ತ ಹೊರಳಿ ಗಾಂಜಾ ಮಾಫಿಯಾಕ್ಕೆ ಇಳಿದಿದ್ದು ರುಬಿಕಾಳನ್ನು ಪ್ರೀತಿಸುವ ನಾಟಕವಾಡಿ ರುಬಿಕಾಳನ್ನು ಮದುವೆಯಾಗಿದ್ದ. ಅಮೆರಿಕಾದಲ್ಲಿ ಮಾರಿವಾನ ಬೆಳೆಯಲು ಅಷ್ಟು ಸುಲಭವಿರಲಿಲ್ಲ. ಆದ್ದರಿಂದ ಮುಂದುವರೆಯುತ್ತಿರುವ ರಾಷ್ಟ್ರಗಳಲ್ಲಿ ಬೆಳೆದು ಅದನ್ನು ಅಮೆರಿಕಾಕ್ಕೆ ಕದ್ದು ಸಾಗಿಸುವುದು ವಾಡಿಕೆಯಲ್ಲಿತ್ತು.

ಭಾರತದಲ್ಲಿ ಅಷ್ಟಾಗಿ ಇನ್ನು ಇದು ಚಾಲ್ತಿಯರಲಿಲ್ಲ. ಇಲ್ಲಿಗೆ ಬಂದು ಎನ್‍ಜಿಒ ಹೆಸರಲ್ಲಿ ಅಮೆರಿಕಾದಿಂದ ಪ್ರೈವೇಟ್ ವಿಮಾನಗಳಲ್ಲಿ ಮುಂಬೈವರೆಗೂ ಅಮೆರಿಕಾದಿಂದ ಬಹಳಷ್ಟು ವಸ್ತುಗಳನ್ನು ತಂದು ಹಾಡಿಗಳಲ್ಲಿ ಜನ-ಜೀವನ ಸರಿ ಮಾಡುವ ನಾಟಕ ಮಾಡಿದ್ದರು. ಈ ಕೆಲಸಕ್ಕೆ ಮಿನಿಸ್ಟ್ರಿ ಆಫ್ ಟ್ರೈಬಲ್ ಅಫೇರ್ಸ್ ಕಡೆಯಿಂದ “ಡೆಮಾನ್ಸ್ಟ್ರೇಷನ್ ಆಫ್ ಟೆಕ್ನಾಲಜಿ ಇನ್ ಅಪ್ ಲಿಫ್ಟಿಂಗ್ ಟ್ರೈಬಲ್ ಲೈವ್ಸ್” ಎಂಬ ಪ್ರಾಜೆಕ್ಟ್  ಅನ್ನು ಜಾರಿಗೊಳಿಸಿ ಈ ಎನ್‍ಜಿಒ ಗೆ ಸಿಗುವಂತೆ ಮಾಡಿಕೊಂಡಿದ್ದು ರುಬಿಕಾಳ ಚಾಣಾಕ್ಷತನ.

ಇದೇ ಪ್ರೈವೇಟ್ ವಿಮಾನದಲ್ಲಿ ಲೋಡುಗಟ್ಟಲೆ ಗಾಂಜಾ ವಾಪಾಸ್ಸಾಗುತ್ತಿದ್ದಿದು ಭಾರತ ಸರ್ಕಾರದ ಕಣ್ಣಿಗೆ ಬಿದ್ದಿರಲಿಲ್ಲ. ಈ ಎನ್‍ಜಿಒ ಕರ್ನಾಟಕದ ಆರು ಕಾಡುಗಳಲ್ಲಿ ಕೆಲಸ ಮಾಡುತ್ತಿದೆ ಮತ್ತು ಎಲ್ಲ ಕಡೆಯಿಂದಲೂ ಮಾಲು ಮುಂಬೈಗೆ ತಲುಪಿ ಅಲ್ಲಿಂದ ಹೊರದೇಶಕ್ಕೆ ರವಾನೆಯಾಗುತ್ತಿದೆಯೆಂದು ವಿಚಾರಣೆಯಲ್ಲಿ ತಿಳಿಯಲ್ಪಟ್ಟಿತ್ತು.

ಆ ಆಂಟಿ ಪೋಚಿಂಗ್ ಕ್ಯಾಪ್‍ನ್ನು ಇವರ ಸಾಮ್ರಾಜ್ಯದ ಬಾರ್ಡರ್ ಅನ್ನಾಗಿ ಪರಿಗಣಿಸಿ ದೆವ್ವದ ಕಥೆಗಳಿಗೆ ಕುಮ್ಮಕ್ಕು ನೀಡುವ ಪಾಳು ಬಂಗಲೆಯನ್ನಾಗಿ ಮಾಡಿದ್ದು, ಅಷ್ಟೂ ಕೊಲೆಗಳನ್ನು ಮಾಡಿಸಲು ಪ್ಲಾನ್ ಮಾಡಿದ್ದರೆಲ್ಲರ ಹಿಂದಿನ ಕೈ ರುಬಿಕಾಳೆಂಬುದನ್ನು ಒತ್ತಿ ಹೇಳಬೇಕಿಲ್ಲ. ಆದರೆ ಈ ಕೆಂಚಯ್ಯ ಯಾರು? ಹೇಗೆ ಇವರ ಬಳಿ ಸಿಕ್ಕಿಬಿದ್ದಿದ್ದ ಎಂಬುದು ಇನ್ನು ಕುತೂಹಲಕರ ವಿಷಯವಾಗಿತ್ತು.

ಕೆಂಚಯ್ಯನ ಅಸಲಿ ಹೆಸರು ಜೆಫ್ರಿ ಭಕ್ತಕುಮಾರ. ಮೂಲತಃ ತಮಿಳುನಾಡಿನಿಂದ ಭದ್ರಾ ಅಣೆಕಟ್ಟು ಕಟ್ಟುವಾಗ ಕೂಲಿ ಕೆಲಸಕ್ಕೆಂದು ಬಂದಾಗ ರುಬಿಕಾಳ ನಂಬಿಕೆ ಸಂಪಾದಿಸಿ ಭದ್ರಾ ಅಭಯಾರಣ್ಯದಲ್ಲೂ  ಈ ಎನ್‍ಜಿಒ ದ  ಕೆಲಸವಾದ ದೆವ್ವದ ಹೆಸರಲ್ಲಿ ಭಯ ಹುಟ್ಟಿಸಿ ಅರಣ್ಯದ ಒಂದು ಭಾಗವನ್ನು ರುಬಿಕಾಳ ಸಾಮ್ರಾಜ್ಯಕ್ಕೆ ದಕ್ಕಿಸಿಕೊಟ್ಟಿದ್ದ. ಅಲ್ಲಿಂದ ಬಂದದ್ದು ಅಂತರಸಂತೆ ಕಾಡಿಗೆ.

ದೇವರ ಹೆಸರಿನಲ್ಲಿ ಗುಳೆ ಬಂದು ಊರಿನಿಂದ ಊರಿಗೆ ಬರುತ್ತೇನೆಂದು ಹೇಳಿ ಹಾಡಿಯ ಅಮಾಯಕ ಜನರನ್ನು ನಂಬಿಸಿದ್ದ. ಸಾರಾ ಇವನ ಹೆಂಡತಿ, ಓದು ಬರಹ ಬಂದಿದ್ದರಿಂದ ಮಾಹಿತಿ ರವಾನೆ ಮಾಡಲು ಎನ್‍ಜಿಒ ನೆಪದಲ್ಲಿ ಬೆಂಗಳೂರಿನಿಂದ ಈ ಎಲ್ಲ ಕಾಡುಗಳಲ್ಲಿ ಭೇಟಿ ನೀಡಿ ರುಬಿಕಾಳಿಗೆ ಮಾಹಿತಿ ನೀಡುತ್ತಿದ್ದಳು. ಇವಳು ಮದುವೆಯಾಗಿರುವುದು ರುಬಿಕಾಳಿಗೆ ಬಿಟ್ಟರೆ ಇನ್ನು ಯಾರಿಗೂ ತಿಳಿದಿರಲಿಲ್ಲ.

ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆಗೆ ಇಬ್ಬರು ಪೂಜೆಯ ನೆಪದಲ್ಲಿ ಪಿಲೆಕಮ್ಮ ದೇವಸ್ಥಾನದ ಹಿಂದಿನ ಕಾಡಿನಲ್ಲಿ ಮಿಲನಗೊಳುತ್ತಿದ್ದರು. ವೀರಣ್ಣ ದೊಡ್ಡಮನಿ ಅಮಾಯಕ ಮನುಷ್ಯ. ಈ ಚಟುವಟಿಕೆಗಳು  ಅವರಿಗೆ ತಿಳಿದಿರಲಿಲ್ಲ. ಎನ್‍‍ಜಿಒ ದ ಕೆಲಸಗಳಿಗೆಂದು ಅಲ್ಲಲ್ಲಿ ಸಂಬಳ ನೀಡಿ ಕೆಲವರನ್ನು ನೇಮಿಸಿಕೊಂಡಿದ್ದರು.

ಸಂಜೆಯಾಗುತ್ತಾ ಬಂದಿತ್ತು. ಬೇಸಿಗೆಯ ಬಿಸಿ ಇನ್ನು ಇಳಿದಿರಲಿಲ್ಲ. ಶಂಕರನಿಗೆ ಮಾಹಿತಿ ಎಲ್ಲ ಸಿಕ್ಕ ತಕ್ಷಣ ಕೆಂಚಯ್ಯನನ್ನು ಗೆಸ್ಟ್  ಹೌಸಿನ ಬಳಿ ಕರೆದೊಯ್ದು  ಬಾಯಿ ಕಟ್ಟಿ ಸ್ಟೋರ್ ರೂಮಿನಲ್ಲಿ ಕೂರಿಸಿದ್ದ. ರುಬಿಕಾ ಅಷ್ಟೊತ್ತಿಗಾಗಲೇ ವಾಪಸಾಗುವಾಗ ದಾರಿಯಲ್ಲೇ ಶಂಕರನ ಜೀಪನ್ನು ನೋಡಿ ಅಲ್ಲಿಯೇ ನಿಲ್ಲಿಸಿದ್ದಳು. ಅವಳಿಗೆ ಕೆಂಚಯ್ಯನನ್ನು ಕರೆಸುತ್ತಾರೆಂಬ ವಿಷಯ ಕೊಂಚವೂ ಹೊಳೆದಿರಲಿಲ್ಲ.

ಕಾರಣ, ಅವಳು ಹಾಡಿಗೆ ಹೋಗುತ್ತೇನೆಂದು ಹೇಳಿ ಹೋಗಿದ್ದ ಕಾರಣ ಅವಳ ಮುಂದೆಯೇ ಬಂದು ಕೆಂಚಯ್ಯನನ್ನು ಕರೆದುಕೊಂಡು ಹೋಗುವ ಸಾಧ್ಯತೆಗಳಿಲ್ಲ ಎಂದು ನಂಬಿದ್ದಳು. ಆದರೆ, ಆ ವಿಷಯದಲ್ಲಿ ಶಂಕರ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಕೆಲಸವನ್ನು ಸಾಧಿಸಿದ್ದ.  ಒಳ ಹೋದಾಗ ಶಂಕರ ಸೋಫಾದಲ್ಲಿ ಕುಳಿತಿದ್ದ ಮತ್ತು ಆನಂದ ಪತ್ರಿಕೆ ಓದುತ್ತಿದ್ದ. ಗೆಸ್ಟ್ ಹೌಸಿನ ಕೆಲಸದವರು ಅಲ್ಲಿರಲಿಲ್ಲ.

ಶಂಕರನೇ ಕೆಂಚಯ್ಯನನ್ನು ಅಲ್ಲಿಗೆ ಕರೆದು ತಂದು ಕೂಡಿ ಹಾಕುವ ಸಲುವಾಗಿ ಅಲ್ಲಿದ್ದ ಕೆಲಸದವರಿಗೆ ಮನೆಗೆ ಹೋಗಲು ಹೇಳಿದ್ದ. ಶಂಕರನ ಆಫೀಸಿನಿಂದ ಮಧ್ಯಾಹ್ನ ಅವನ ಸಹೋದ್ಯೋಗಿ ರೇಂಜ್ ಫಾರೆಸ್ಟ್ ಆಫೀಸರ್ ಗಳಿಗೆ ವಿಷಯ ತಿಳಿಸಿ ಆನಂದನ ಸಹೋದ್ಯೋಗಿ ಮಿತ್ರರೊಡನೆ ಹೋಗಿ ಮಾಹಿತಿಯನ್ನ ಹಿಡಿದು ಬರಲು ಹೇಳಿದ್ದ.

ಶಂಕರ ಆ ಆರು ಫಾರೆಸ್ಟ್ ರೇಂಜರ್ ಗಳಿಗೆ ಪೂರ್ಣ ಪ್ರಮಾಣವಾಗಿ ವಿಷಯ ದೊರೆಯದೆಯೇ ಯಾರು ವಿಷಯವನ್ನು ಬಹಿರಂಗಪಡಿಸಬಾರದೆಂದು ಮನವರಿಕೆ  ಮಾಡಿದ್ದ. ಈ ಕೆಲಸಕ್ಕೆಂದು ಬೆಂಗಳೂರಿನ ಇಲಾಖೆಯ ಪ್ರಧಾನ ಕಾರ್ಯದರ್ಶಿಯರೊಂದಿಗೆ ಮಾತನಾಡಿ ಅನುಮತಿ ಪಡೆದಿದ್ದ. ಸಾಮಾನ್ಯವಾಗಿ ಫಾರೆಸ್ಟ್ ಡಿಪಾರ್ಟ್ಮೆಂಟ್ ನಲ್ಲಿ ವಿಷಯಗಳು ರಾಜಕೀಯ ಸಾಮ್ರಾಜ್ಯದೊಳಗೆ ನುಸುಳುವುದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ.  ಆದ್ದರಿಂದ ಮಾಹಿತಿಯನ್ನು ತಡೆಹಿಡಿಯಲಾಗಿತ್ತು.

 

ಇಷ್ಟು ವೇಗವಾಗಿ ಶಂಕರನು ಕಾರ್ಯ ಪ್ರವರ್ತನಾಗುತ್ತಾನೆಂದು ರುಬಿಕಾಳಿಗೆ ಅರ್ಥವಾಗಿರಲಿಲ್ಲ. ತಾನು ಇಲ್ಲಿಂದ ಹೋಗುವವರೆಗೂ ಇದ್ದು ನಂತರ ಕಾರ್ಯ ಸಾಧಿಸಬಹುದು ಎಂದು ತಿಳಿದಿದ್ದಳು. ಅವನು ಕಾರ್ಯ ಪ್ರವೃತ್ತನಾಗುವ ಮುಂಚೆಯೇ ಆನಂದ, ಶಂಕರ ಮತ್ತು ತಮ್ಮಯ್ಯನಿಗೆ ಮೇಲೆ ಕಳುಹಿಸುವ ಪ್ಲ್ಯಾನ್ ಹೆಣೆದಿದ್ದಳು.

ಜೀಪನ್ನು ಹೊರಗಡೆ ನಿಲ್ಲಿಸಿ ಒಳ ಬಂದು ಶಂಕರನನ್ನು ನೋಡಿದಳು. ಆನಂದನು ಅಲ್ಲೇ ಕುಳಿತಿದ್ದ. ತಮ್ಮಯ್ಯ ಹೊರಗಡೆ ಜೀಪಿನಲ್ಲೆ ಮಲಗಿಬಿಟ್ಟಿದ್ದ. ರುಬಿಕಾ ಮಾತನಾಡುವು ಮುಂಚೆಯೇ ಶಂಕರ ಅಸಾಧ್ಯವಾಗಿ ಕೆಮ್ಮತೊಡಗಿದ. ಆನಂದ ನೀರನ್ನು ಹಿಡಿದು ಓಡಿ ಬಂದವನೇ ಏನಾಯಿತೆಂದು ಕೇಳಿ ನೀರು ಕುಡಿಸಿದ. ಶಂಕರ ನಿಧಾನವಾಗಿ ಹೇಳಿದ “ಏನಿಲ್ಲ ಆನಂದ , ಯಾಕೋ ಉಸಿರು ಸಿಕ್ಕಿದಂಗಾಯ್ತು . ಬಾಯಿ ಉರೀತಿದೆ ಈಗ ಸರಿ ಆಯ್ತು ಬಿಡು”.

ಆನಂದ ಹೇಳಿದ ” ಸರಿ ಮಧ್ಯಾಹ್ನ ಖಾರ ತಿಂದಿದ್ದು ಜಾಸ್ತಿ ಆಯ್ತು, ಸ್ವಲ್ಪ ನೀರು ಕುಡಿದು ಮಲ್ಕೋ . ಆಮೇಲೆ ಕೆಲಸ ಇದೆ” ಎಂದ . ರುಬಿಕಾ ಮಾತನಾಡಿದಳು “ಹಲೋ ಶಂಕರ್ ಸಾರ್, ಎನಿ ಹೆಲ್ಪ್ . ನಾನು ಸದಾ ನಿಮ್ಮ ಸೇವೆಯಲ್ಲಿ ” ಶಂಕರ ನಗುತ್ತ ಹೇಳಿದ “ಹೌದೇ? ಥ್ಯಾಂಕ್ಯೂ . ನಿಮ್ಮಿಂದ ಕೆಲವು ಮಾಹಿತಿ ಬೇಕಾಗಿದೆ ಆದರೆ ಇಂದು ಬೇಡ. ನಿಮ್ಮ ಸೇವೆಯನ್ನು ಸದ್ಯದಲ್ಲಿಯೇ ಪಡೆಯುವುದು ಗ್ಯಾರಂಟಿ “.

ರುಬಿಕಾ ಉತ್ತರಿಸಿದಳು “ಶೂರ್ , ಗುಡ್ ಬೈ . ನಾನು ಬೆಂಗಳೂರಿಗೆ ಹೊರಡುತ್ತಿದ್ದೇನೆ. ನಿಮಗೆ ಸರಿ ಎನ್ನಿಸಿದಾಗ ನನಗೆ ಒಂದು ಕರೆ ನೀಡಿದರು ಸಾಕು ನಾನೆ ಇಲ್ಲಿಗೆ ಬರುತ್ತೇನೆ “. ಆ ಶಂಕರನ ಕೆಮ್ಮು ರುಬಿಕಾಳಿಗೆ ಹೊರಡಲು ಸೂಚನೆ ಕೊಟ್ಟಿತ್ತು. ಅಂದರೆ ಅವಳ ಉಪಾಯ ಫಲಿಸುತ್ತಿದೆ ಶಂಕರ ಇನ್ನ ನಲವತ್ತೆಂಟು ಘಂಟೆಗಳಲ್ಲಿ ಬದುಕಿರುವುದೇ ಇಲ್ಲ, ಜೊತೆಗೆ ಆನಂದ, ತಮ್ಮಯ್ಯ, ಸಾರಾಳು ಕೂಡ.

ಬೆಳಗ್ಗೆ ಕಾಫಿ ಕುಡಿದವರಲ್ಲಿ ಈ ಮೂವರು ಇದ್ದಾರೆ. ಅಂದರೆ ಇವರ್ಯಾರು ಇನ್ನು ಎರಡು ದಿನದ ಮೇಲೆ ಬದುಕಿರುವುದಿಯೇ ಇಲ್ಲ,  ಈಗ ಕೆಮ್ಮು ಶುರುವಾಗಿದೆ, ಇನ್ನೆರಡು ಘಂಟೆಗಳಲ್ಲಿ ವಿಪರೀತ ತಲೆನೋವು ಶುರುವಾಗಲಿದೆ. ಮತ್ತೆರಡು  ಘಂಟೆಗಳಲ್ಲಿ ಕೈ, ಕಾಲಿನ ಸ್ವಾಧೀನ ಕಳೆದುಕೊಳ್ಳುತ್ತಾರೆ. ಬೆಳಿಗ್ಗೆಯೊಳಗೆ ಕೋಮಾ, ಅದರ ಮುಂದಿನ ದಿನ ಸಾವು . ನಂತರ ಮೆಡಿಕಲ್ ಪರೀಕ್ಷೆಯಲ್ಲಿ ಸಹಜ ಸಾವು ಇಲ್ಲ ಯಾವುದೊ ವೈರಸ್ ತಗುಲಿ ಮೂವರಿಗೂ ಹರಿದು ತೊಂದರೆಗೊಳಗಾಗಿ ಸತ್ತಿರಬಹುದೆಂದು ಅನುಮಾನಿಸುತ್ತಾರೆ.

ಅವರ ದೇಹದಲ್ಲಿ ವಿಷವಿರುವುದು ತಿಳಿಯುವುದೇ ಇಲ್ಲ. ಕೊನೆಗೂ  ನನ್ನ ಪಿಎಚ್ಡಿ ಉಪಯೋಗಕ್ಕೆ ಬರುತ್ತಿದೆ ಎಂದು ಒಳೊಗೊಳಗೆ ಹಿಗ್ಗಿದ್ದಳು. ನಾನು ಈಗ ಹೊರಡಬಹುದು ಏಕೆಂದರೆ ಈ ಅವಸ್ತೆಯಲ್ಲಿ ವಿಚಾರಣೆಯಿರಲಿ ಎದ್ದು ಓಡಾಡುವುದಕ್ಕೂ ಆಗದು ಎಂದು ನಿರ್ಧರಿಸಿ ಶಂಕರನಿಗೆ ಕೊನೆಯ ಬಾರಿ ಗುಡ್ ಬೈ ಹೇಳಿ ಜೀಪನ್ನು ಬೆಂಗಳೂರಿನತ್ತ ತಿರುಗಿಸಿದಳು.

ಅವಳು ಹೊರಟು ಸ್ವಲ್ಪ ಹೊತ್ತಿನ ನಂತರ ಆನಂದನಿಗೂ ಕೆಮ್ಮು ಶುರುವಾಯಿತು. ಆಗ ಶಂಕರನು “ನಿನಗೂ ಖಾರದ ಮಹಿಮೆ ಹೆಚ್ಚೇ ಆಯಿತೆಂದು ಕಾಣುತ್ತಿದೆ” ಎಂದೇಳಿದ . ಆನಂದ ನಗುತ್ತ ಹೇಳಿದ “ಹೌದು ನೋಡು, ನಿಂಗವ್ವನಿಗೆ ಸ್ವಲ್ಪ ಖಾರ ಕಡಿಮೆ ಹಾಕಿ ಅಡಿಗೆ ಮಾಡಲು ಹೇಳು ಶಂಕ್ರ.” ಹೊರಗಡೆ ಜೀಪಿನಲ್ಲಿ ಮಲಗಿದ್ದ ತಮ್ಮಯ್ಯನಿಗೆ ವಾಂತಿ ಬರಲು ಜೀಪಿನಿಂದ ಎದ್ದು ಮನೆಯ ಹಿಂದೆ ಓಡಿದ. ಮನೆಯ ಹಿಂದೆ ವಾಂತಿ ಮಾಡಿದವನೇ ಗೆಸ್ಟ್ ಹೌಸಿನ ಕಿಟಕಿಯ ಕೆಳಗೆ ಓತಾಲಂಗಾ ಹಣ್ಣು ಬಿದ್ದಿರುವುದನ್ನು ಕಂಡು ತಮ್ಮಯ್ಯನಿಗೆ ಏನೋ ಹೊಳೆದಂತಾಗಿ ಹಣ್ಣನ್ನು ಎತ್ತಿಕೊಂಡು ಒಳಗೆ ಓಡಿದ.

ಶಂಕರ ಮತ್ತು ಆನಂದ ಇಬ್ಬರು ಅಸಾಧಾರಣವಾಗಿ ಕೆಮ್ಮುತ್ತಿರುವುದನ್ನು ನೋಡಿ ತಮ್ಮಯ್ಯನಿಗೆ ತಾನು ಅನುಮಾನ ಪಡುತ್ತಿರುವುದು ನಿಜವೆಂದು ಮನವರಿಕೆಯಾಯಿತು. ಓತಾಲಾಂ ಮರ (Cerbera odollam) ಕೇರಳದ ಕಾಡುಗಳಲ್ಲಿ ಕಾಣ ಸಿಗುತ್ತದೆ. ಅದರ ವಿಷ ಎಷ್ಟು ಪ್ರಭಾವಿಯೆಂದರೆ ಅದನ್ನು ಯಾರಾದರೂ ಸ್ವಲ್ಪ ಪ್ರಮಾಣದಲ್ಲೂ ತಿಂದರೂ ನಿಧಾನವಾಗಿ ಹಣ್ಣಿನಲ್ಲಿರುವ ಕಾರ್ಡಿಯಾಕ್ ಗ್ಲೈಕೊಸೈಡ್ ವಿಷ ಮೈಗೇರಿ ಹೃದಯದ ಮಾಂಸಖಂಡದ  ಕ್ಯಾಲ್ಶಿಯಂ ಕಣಗಳ ಕಣಿವೆಗಳನ್ನು ಬ್ಲಾಕ್ ಮಾಡಿ ಹೃದಯ ಬಡಿತವನ್ನು ಏರುಪೇರು ಮಾಡಿ ನಂತರ ಬಹು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪುತ್ತಾರೆ.

ಸದ್ಯದ ಮೆಡಿಕಲ್ ಪರಿಣಿತಿಯಲ್ಲಿ ಅದನ್ನು ಸಹಜ ಸಾವೆಂದೇ ಪರಿಗಣಿಸಿವುದು ರುಬಿಕಾಳಿಗೆ ಮಾತ್ರ ಗೊತ್ತಿದ್ದ ವಿಷಯ. ಈ ಮರದ ಬಗೆಗಾಗಲಿ ವಿಷದ ಬಗೆಗಾಗಲಿ ಇನ್ನು ಜನರಿಗೆ ತಿಳುವಳಿಕೆ ಇರುವುದಿಲ್ಲವೆಂದು ರುಬಿಕಾಳು ನಂಬಿದ್ದಳು. ಅವಳ ನಂಬಿಕೆಯಂತೆ ಆ  ಹಣ್ಣಿನ ಬಗ್ಗೆ ತಿಳಿದಿದ್ದಿದು ಬಹಳ ಕಡಿಮೆ ಜನರಿಗೆ. ಆದರೆ, ಲಕ್ ಫೆವರ್ಸ್ ದ ಬ್ರೇವ್ ಅನ್ನುವ ಹಾಗೆ ಶಂಕರನ ಧೈರ್ಯದ ಜೊತೆ ಅದೃಷ್ಟವು ಸೇರಿದ್ದರಿಂದ ತಮ್ಮಯ್ಯನಿಗೆ ಈ ಹಣ್ಣಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದಿದ್ದರೂ ಅದನ್ನು ತಿಂದರೆ ಆಗುವ ಪರಿಣಾಮಗಳು ಚೆನ್ನಾಗಿಯೇ ತಿಳಿದಿತ್ತು.

ಈ ಹಣ್ಣು ಇವರ ದೇಹ ಹೇಗೆ  ಸೇರಿತು ಎಂದು ತಿಳಿಯಲು  ಶಂಕರ ಇಬ್ಬರನ್ನು ಜೀಪು ಹತ್ತಿಸಿಕೊಂಡು ಗೆಸ್ಟ್ ಹೌಸಿನ ಸಹಾಯಕರ ಮನೆಗೆ ಚಲಾಯಿಸಿದ. ನಿಂಗವ್ವ ಮನೆಯ ಮುಂದೆಯೇ ನಿಂತಿದ್ದಳು “ಬೆಳಿಗ್ಗೆ ಕಾಫಿ ಮಾಡಿದ್ದು ಯಾರು ರುಬಿಕಾಳೇನಾದರೂ ಕೆಟಲ್ ಹತ್ತಿರ ಇದ್ದದ್ದು ನೋಡಿದಿಯಾ ?” ನಿಂಗವ್ವ ಎರಡು ಕ್ಷಣ ಯೋಚಿಸಿ “ಕಾಫಿ ಮಾಡಿದ್ದು ನಾನೇ ಸಾರ್, ಆದರೆ ಕೆಟಲ್ ಅನ್ನು ರುಬಿಕಾ ಮೇಡಂ ಅಡುಗೆ ಕೋಣೆಯಿಂದ ಮೇಜಿನ ಬಳಿ ಇರಿಸಲೆಂದು ನನ್ನಿಂದ ಪಡೆದು ಹೋದದ್ದು ನಿಜ. ಸಾರಾ ಮೇಡಂ ಇನ್ನು ಒಳಗಡೆ ಬಂದಿರಲಿಲ್ಲ” ಶಂಕರ ಇನ್ನು ಹೆಚ್ಚು ಅವಳ ಬಳಿ ಮಾತನಾಡಲಿಲ್ಲ.

ಅವನಿಗೆ ರುಬಿಕಾಳು ಹಣ್ಣಿನ ವಿಷವನ್ನು ಕಾಫಿಯಲ್ಲಿ ಬೆರೆಸಿರುವುದು ಖಚಿತವಾಯ್ತು. ಆನಂದ ಕೇಳಿದ “ಈಗ ವಿಷವನ್ನು ನಮ್ಮ ದೇಹದಿಂದ ತೆಗೆಯಲು ಸಾಧ್ಯವೇ ಇಲ್ಲವೇ? ಯಾವುದಾದರೂ ದಾರಿಯಿದೆಯೇ?” ತಮ್ಮಯ್ಯ ಇಲ್ಲಿಂದ ಸುಮಾರು ಒಂದು ಘಂಟೆ ಕಾಡಿನೊಳಗೆ ಹೋದರೆ ಇದಕ್ಕೆ ಮದ್ದಿನ ಗಿಡ ಇದೆ. ಆದಷ್ಟು ಬೇಗ ಅಲ್ಲಿಗೆ ಹೋಗಿ ಅದನ್ನು ತಿಂದರೆ ಇದರ ವಿಷವನ್ನೆಲ್ಲ ವಾಂತಿಯ  ಜೊತೆ ಹೊರ ಹಾಕಬಹುದು ಎಂದು ಜೀವದಾನ ನೀಡಿದ್ದ.

ಅಲ್ಲಿಂದ ಶಂಕರ ಜೀವಮಾನದ ಅತೀ  ಹೆಚ್ಚಿನ ವೇಗವನ್ನು ಕ್ಲಾಕ್ ಮಾಡಿ ತಮ್ಮಯ್ಯ ಹೇಳಿದ ಕಡೆ ತಾನೇ ಖುದ್ದಾಗಿ ಡ್ರೈವ್ ಮಾಡಿಕೊಂಡು ಹೋಗಿದ್ದ. ಆ ಹೋಗುವ ದಾರಿಯಲ್ಲಿ ಜೀಪಿನ ಚಕ್ರದ ಮಾರ್ಕುಗಳು ಕಂಡು ಅವುಗಳು ಬೆಳಿಗ್ಗೆ ಹಾಡಿಗೆ ಹೋಗದೆ ಇಲ್ಲಿಗೆ ಬಂದಿದ್ದ ರುಬಿಕಾಳದೇ  ಎಂದು ಶಂಕರನಿಗೆ ಮನವರಿಕೆಯಾಯಿತು.

ಅವಳು ಕೂಡ ಅನುಮಾನ ಬರದಿರಲು ಅದೇ ಕಾಫಿಯನ್ನು ಕುಡಿದು ತದ ನಂತರ ಇಲ್ಲಿಗೆ ಬಂದು ಈ ಮದ್ದನ್ನು ತಿಂದಿದ್ದರಿಂದ ಅವಳಿಗೆ ವಿಷವೇ ಏರಿರಲಿಲ್ಲವೆಂದು ಕಾಣುತ್ತದೆ. ಆದರೆ ಇವರು ವಿಷ ದೇಹಕ್ಕೆ ಏರಿ ಎಂಟು ಘಂಟೆಯ ಮೇಲಾದರೂ ಆಗಿದ್ದರಿಂದ ತೊಂದರೆಗಳು ಶುರುವಾಗಿದ್ದವು.  ಹೋಗುವಾಗ ಸಂಗಮೇಶನನ್ನು ಕರೆದುಕೊಂಡು ಹೋಗಿದ್ದು ಅವರ ಜೀವ ಉಳಿಯಲು ಸಹಾಯಕವಾಗಿತ್ತು.

ಮದ್ದನ್ನು ತಿಂದು ಎಲ್ಲವನ್ನು ದೇಹದಿಂದ ಹೊರಗಡೆ ಹಾಕಿ ಸಂಗಮೇಶ ಇವರನ್ನು ಕರೆದುಕೊಂಡು ಮನೆಗೆ ಬಿಟ್ಟಾಗ ಮಧ್ಯರಾತ್ರಿ ಒಂದು ಘಂಟೆಯಾಗಿತ್ತು. ಶಂಕರ ಬೆಳಿಗ್ಗೆ ಎದ್ದವನೇ ಆ ಆರು ಸಹೋದ್ಯೋಗಿಗಳಿಂದ ವಿಷಯ ಪಡೆದು ಕೇಸ್ ರಿಪೋರ್ಟ್ ತಯಾರಿಸಿ ಅದಕ್ಕೆ “ಸೂಳೇಬಾವಿ ಕೇಸ್” ಎಂದು ನಾಮಕರಣ ಮಾಡಿ ತನ್ನ ಬ್ಯಾಗಿನೊಳಗೆ ಭದ್ರ ಮಾಡಿಕೊಂಡು ಖುದ್ದಾಗಿ  ಬೆಂಗಳೂರಿನ ಮಲ್ಲೇಶ್ವರಂನ  ಅರಣ್ಯ ಭವನಕ್ಕೆ ಹೊರಟ.

ಶಂಕರ ಬಂದೊಡನೆ ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕರ್ನಾಟಕದ ಪೊಲೀಸ್ ಮಹಾ ನಿರ್ದೇಶಕರೊಡನೆ ಚರ್ಚೆ ಮಾಡಿ ಇಡೀ ಎನ್‍ಜಿಒ ದ ಜಾಲವನ್ನು ಇಪ್ಪತ್ನಾಲ್ಕು ಘಂಟೆಯೊಳಗೆ ಬಿಡಿಸಿದ್ದರು. ಆನಂದ ಐದು ಪುಟಗಳ ಚಿತ್ರ ಸಮೇತ ಪತ್ರಿಕಾ ವರದಿ ತಯಾರಿಸಿ ಶಂಕರನ ಅನುಮತಿಗಾಗಿ ಕಾಯುತ್ತಿದ್ದ.

ರುಬಿಕಾಳ ನಂಟು ಭಾರತ ಸರ್ಕಾರದ ಅಂದಿನ ಏವಿಯೇಷನ್ ಮಿನಿಸ್ಟರ್ ನಿಂದ ಹಿಡಿದು ಕರ್ನಾಟಕದ ಹೋಮ್ ಮಿನಿಸ್ಟರ್ ರವರೆಗೂ ಬೆಳೆದಿತ್ತು. ಈ ಮಂತ್ರಿಗಳ ಮತ್ತು ಎನ್‍ಜಿಒ ದ ನೆಟ್ ವರ್ಕನ್ನು ಆನಂದ ಸಂಪೂರ್ಣವಾಗಿ ಎಳೆ-ಎಳೆಯಾಗಿ ರಿಪೋರ್ಟಿನಲ್ಲಿ ಸೇರಿಸಿ ಅರಣ್ಯ ಇಲಾಖೆಯ ಮತ್ತು ಪೊಲೀಸ್ ಇಲಾಖೆಯ ಬೆಂಬಲದೊಂದಿಗೆ ಮರುದಿನ ಪ್ರಕಟಿಸಿದ್ದ.

ಇನ್ಸ್ ಪೆಕ್ಟರ್ ರವಿ ರುಬಿಕಾಳ ಕೈಗೆ ಕೋಳ ತೊಡಿಸಲು ತೋಳದಂತೆ ಕಾಯ್ದಿದ್ದು, ಮರುದಿನ ಪ್ರಕಟವಾದ ನಂತರವೇ ಇವಳನ್ನು ಬಂಧಿಸಿ ಕರೆತಂದಿದ್ದ. ಕೆಂಚಯ್ಯನನ್ನು ಜೈಲಿಗೆ ಕಳಿಸಲಾಯ್ತು. ಸಾರಾಳು ಆಗಾಗಲೇ ವಿಷ ಮೈಮೇಲೇರಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ  ಮರಣ ಹೊಂದಿದ್ದಳು. ಈ ಒಂದು ತನಿಖೆಯಿಂದ 90 ರ ದಶಕದಲ್ಲಿ ಶುರುವಾಗಿ ಭಾರತದಲ್ಲಿ ಬೇರೂರಲು ಪ್ರಯತ್ನಿಸಿದ್ದ ಬಹು ದೊಡ್ಡ ಗಾಂಜಾ ಮಾಫಿಯಾ ಅಂತರಸಂತೆ ಕಾಡಿನ ರೇಂಜ್ ಫಾರೆಸ್ಟ್ ಆಫೀಸಿನಿಂದ ಬಯಲಿಗೆ ಬಂದಿತ್ತು.

ಕರ್ನಾಟಕ ಸರ್ಕಾರ ಪತನವಾಗಲು ಬಹಳ ಬೇಡಿಕೆಯಿದ್ದರೂ ಅಂದಿನ ಮುಖ್ಯಮಂತ್ರಿಗಳು ಈ ಮಾಫಿಯಾದಲ್ಲಿ ಸೇರಿದ್ದವರನ್ನೆಲ್ಲವನೂ ನಿರ್ದಾಕ್ಷಿಣ್ಯವಾಗಿ ಕಿತ್ತು ಹಾಕಿ ತನಿಖೆ ಶುರು ಮಾಡಿದ್ದರಿಂದ ಸ್ವಲ್ಪದರಲ್ಲೇ ರಾಜ್ಯ ಸರ್ಕಾರ ಉಳಿದಿತ್ತು. ಇದರಲ್ಲಿ ಸೇರಿದ್ದ ಭಾರತ ಸರ್ಕಾರದ ಮಂತ್ರಿಗಳನ್ನೆಲ್ಲ ಮಂತ್ರಿ ಪದವಿಯಿಂದ ಕೆಳಗಿಳಿಸಿ ಅವರ ಮೇಲೆ ಸುಪ್ರೀಂ ಕೋರ್ಟಿನಲ್ಲಿ ಕೇಸು  ಜಡಿಯಲಾಗಿತ್ತು.

ಶಂಕರನಿಗೆ ಇಷ್ಟೆಲ್ಲಾ ಆದ ನಂತರ ಈ ತನಿಖೆಯಲ್ಲಿ ಕೆಲವು ಬಾರಿ ಇಲಾಖೆ ಗಮನಕ್ಕೆ ತರದೇ ಸ್ವತಂತ್ರವಾಗಿ ತನಿಖೆ ನಡೆಸಿದ್ದಕ್ಕೆ ಇವನ ಮೇಲೆಯೂ ಬಹಳ ವಿಚಾರಣೆಗಳಾಗಿ ಇವನನ್ನುಇಲಾಖೆಯನ್ನೇ ಬದಲಿಸಿ ಬೆಂಗಳೂರಿನ ಟ್ರಾಫಿಕ್ ವಿಭಾಗಕ್ಕೆ ಎಸಿಪಿ ಯಾಗಿ ನೇಮಕ ಮಾಡಿ ಅರಣ್ಯ ಇಲಾಖೆಯಿಂದ ಹೊರಗೆಳೆಯಲಾಗಿತ್ತು.

ಶಂಕರ ತನ್ನ ರಿಟೈರ್ಡ್ ಲೈಫನ್ನು ಬೆಂಗಳೂರಿನ ಟ್ರಾಫಿಕ್ ವಿಭಾಗದಲ್ಲಿ ಕಳೆಯತೊಡಗಿ ವರ್ಷವಾಗಿತ್ತು.  ಆನಂದ ಮುಂದೆ ದೊಡ್ಡ ಪತ್ರಕರ್ತನಾಗಿದ್ದು ಬೇರೆ ಕಥೆ.  “ಸಾರ್ ಹೊರಡೋಣ ಬನ್ನಿ ಇವತ್ತು ಸಿಎಂ ಮೂವಮೆಂಟ್ ಇದೆ , ಲೇಟ್ ಆಗುತ್ತೆ.  ನಿಮ್ಮ ಈವತ್ತಿನ ಡ್ಯೂಟಿ ದೊಮ್ಮಲೂರು ಸರ್ಕಲ್” ತಮ್ಮಯ್ಯ ಹೊರಗಡೆಯಿಂದ ಕೂಗಿದ. ಇವನು ಇನ್ನೇನು ಹೊರಗಡೆ ಹೊರಡಬೇಕು ಅನ್ನುವಷ್ಟರಲ್ಲಿ ಮನೆಯಲ್ಲಿದ್ದ ಫೋನು ರಿಂಗಣಿಸಿತು. ಶಂಕರ ಉತ್ತರಿಸಿದ “ಹಲೋ ಶಂಕರ್ ಹಿಯರ್” ಆ ಕಡೆಯಿಂದ ಅರಣ್ಯ ಪ್ರಧಾನ ಕಾರ್ಯದರ್ಶಿಯವರ ಧ್ವನಿ ಕೇಳಿತು “ರಿಪೋರ್ಟ್ ಟು ಮಿ ಇನ್ ರೇಸ್ ಕೋರ್ಸ್ ಕ್ಲಬ್ ಅಟ್ ಸಿಕ್ಸ್ ಒ  ಕ್ಲಾಕ್”.

ಸೂಚನೆ:

ಇದು ಒಂದು ಕಟ್ಟು ಕಥೆಯಾಗಿದ್ದು, ಹೆಸರುಗಳು, ಜಾಗಗಳು, ಹುದ್ದೆಗಳನ್ನು ಕಥೆಯ ಅವಶ್ಯಕತೆಗಷ್ಟೇ ಬಳಸಿಕೊಳ್ಳಲಾಗಿದೆ.

ಈ ಕಥೆಗೂ ಅಸಲಿ ವ್ಯವಸ್ಥೆಗೂ ಯಾವುದೇ ಸಂಬಂಧವಿರವಿರುವುದಿಲ್ಲ.

ಈ ಕಥೆಯು ಯಾವ ನೈಜ ಘಟನೆಯನ್ನು ಅವಲಂಬಿಸಿರುವುದಿಲ್ಲ.

‍ಲೇಖಕರು avadhi

October 16, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: