ಏಕವ್ಯಕ್ತಿ ಕೇಂದ್ರಿತವಾಗಿ ಇಂದು ಹೋರಾಟ ಸಾಧ್ಯವೆ?

ಪವಿತ್ರ ಆರ್ಥಿಕತೆಗಾಗಿ ಖ್ಯಾತ ರಂಗಕರ್ಮಿ, ದೇಸಿ ಚಳವಳಿಯನ್ನು ಹುಟ್ಟು ಹಾಕಿದ ಪ್ರಸನ್ನ ಉಪವಾಸ ಸತ್ಯಾಗ್ರಹ ನಡೆಸಿದ್ದರು. ‘ಇದೇನಿದು ಪವಿತ್ರ ಆರ್ಥಿಕತೆ?’ ಎನ್ನುವ ಪ್ರಶ್ನೆಗಳೂ ಎದ್ದಿವೆ.

ಈ ಬಗ್ಗೆ ನಾ.ದಿವಾಕರ ಅವರು ಬರೆದಿರುವ ‘ಪ್ರಸನ್ನ ಮತ್ತೊಬ್ಬ ಅಣ್ಣಾ ಹಜಾರೆಯಂತೆ ಕಾಣುತ್ತಾರೆ’ ಎನ್ನುವ ಲೇಖನ ‘ಜುಗಾರಿ ಕ್ರಾಸ್’ ಅಂಕಣದಲ್ಲಿ  ಪ್ರಕಟವಾಗಿತ್ತು.

ಡಿ.ಎಸ್. ರಾಮಸ್ವಾಮಿ ಅವರು  ‘ಪವಿತ್ರ ಆರ್ಥಿಕತೆ’ ಎಂಬ ಅರ್ಥವಿಲ್ಲದ ಪದ  ಎಂದು ವಿಮರ್ಶಿಸಿದ್ದರು.

ಎಲ್ ಸಿ ನಾಗರಾಜ್ ಅವರು ‘ಪವಿತ್ರ ಆರ್ಥಿಕತೆ ಅಂತಾ ಕರೆದುಕೊಂಡಿದ್ದರೆ ತಪ್ಪೇನಿದೆ?’ ಎಂದು ಪ್ರಶ್ನಿಸಿದ್ದರು.

ಮುರಳಿ ಕೃಷ್ಣ ಅವರು ‘ಪವಿತ್ರ ಆರ್ಥಿಕತೆಯನ್ನು ಸಾರಾಸಗಟಾಗಿ ತಳ್ಳಿ ಹಾಕಿಬಿಡಬಹುದೇ?’ ಎಂದು ಬರೆದಿದ್ದರು 

ಇದಕ್ಕೆ ‘ಅವಧಿ’ ಪ್ರತಿಕ್ರಿಯೆಯನ್ನು ಆಹ್ವಾನಿಸಿತ್ತು.

ಇದೀಗ ಪ್ರಸಾದ್ ರಕ್ಷಿದಿ ಅವರು ತಮ್ಮ ಅಭಿಪ್ರಾಯವ್ಯಕ್ತಪಡಿಸಿದ್ದಾರೆ- 

ಪ್ರಸಾದ್ ರಕ್ಷಿದಿ

ಪ್ರಸನ್ನರ ಉಪವಾಸ ಸತ್ಯಾಗ್ರಹ ಕೊನೆಗೊಂಡಿದೆ. ಮತ್ತೆ ಪವಿತ್ರ ಆರ್ಥಿಕತೆಗಾಗಿ ಒತ್ತಾಯ ಅವರು ಮುಂದುವರಿಸುತ್ತಾರೋ ಇಲ್ಲವೋ ತಿಳಿಯದು. ಆದರೆ ಇಂದಿನ ಆರ್ಥಿಕತೆ ಒಂದು ಪರ್ಯಾಯವಾದ ಆರ್ಥಿಕ ವ್ಯವಸ್ಥೆ ಬೇಕೆನ್ನುವ ಬಗ್ಗೆ ಈ ದೇಶದ ಗಣನೀಯ ಪ್ರಮಾಣದ ಜನರಲ್ಲಿ ಭಿನ್ನಾಭಿಪ್ರಾಯ ಇರಲಾರದು.

ಆದರೆ ಆರ್ಥಿಕ ವ್ಯವಸ್ಥೆ ಹೇಗಿರಬೇಕು.?

ಈಗ ಪ್ರಸನ್ನ ಪವಿತ್ರ ಆರ್ಥಿಕತೆಗಾಗಿ ಉಪವಾಸ ಸತ್ಯಾಗ್ರಹವನ್ನು ಮಾಡುವಂತಹ ಕ್ರಮಕ್ಕೆ ಮುಂದಾದ್ದರಿಂದ, ಅವರೀಗ ತಮ್ಮ ಸತ್ಯಾಗ್ರಹವನ್ನು ಮುಂದುವರಿಸಲಿ ಬಿಡಲಿ ಅದನ್ನೀಗ ವಿಸ್ತೃತವಾಗಿ ಚರ್ಚಿಸುವುದು ಒಳ್ಳೆಯದು.

ಪ್ರಸನ್ನ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಹೆಚ್ಚಾಗಿ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಅವರ ರಂಗಭೂಮಿಯ ಕೆಲಸಗಳು ಸ್ವಲ್ಪ ಹಿನ್ನೆಲೆಗೆ ಸರಿದಂತಿದೆ. ಅದು ಅವರ ಆಯ್ಕೆ.
ಪ್ರಸನ್ನ ಇತ್ತೀಚಿನ ವರ್ಷಗಳಲ್ಲಿ ಗಾಂಧಿಯ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ, ಬರೆಯುತ್ತಿದ್ದಾರೆ. ಸ್ವರಾಜ್ಯದಾಟ ಎಂಬ ನಾಟಕವನ್ನೂ ಮಾಡಿಸಿದ್ದಾರೆ. ಅವರ, ದೇಸೀ ಜೀವನ ಪದ್ಧತಿಯಿಂದ ಪ್ರಾರಂಭವಾಗಿ ಯಂತ್ರಗಳನ್ನು ಕಳಚೋಣ ಬನ್ನಿ, ಶೂದ್ರರಾಗೋಣ ಬನ್ನಿ. ಇವೆಲ್ಲವೂ ಒಂದು ಜೀವನ ಪಧ್ದತಿಯನ್ನು ಒಂದು ಆರ್ಥಿಕತೆಯನ್ನು ಹೇಳುತ್ತ ಬಂದಿವೆ.

ಇವೆಲ್ಲದಕ್ಕೂ ಅವರು ಗಾಂಧಿಯನ್ನು. ಗಾಂಧಿಯ ಶೈಲಿಯನ್ನು ಆಶ್ರಯಿಸುತ್ತಾರೆ. ಇದು ಇಲ್ಲಿಗೇ ನಿಲ್ಲುವುದಿಲ್ಲ, ಆಗಾಗ ಉಪವಾಸ ಸತ್ಯಾಗ್ರಹದಂತ ಕ್ರಮಕ್ಕೂ ಮುಂದಾಗಿ ಬಿಡುತ್ತಾರೆ. ಆದರೆ ಅವರು ಹೇಳುವ ಆರ್ಥಿಕತೆಯನ್ನು ಒಂದು ಸಿದ್ಧಾಂತವಾಗಿ ನಿಖರವಾಗಿ ನಿರ್ವಚನೆ ಮಾಡದೆ ಒಂದು ಬೀಸು ಹೇಳಿಕೆಯ ತರ ಅವರದನ್ನು ಬಳಸುತ್ತ ಬರುವುದು ಕಂಡುಬರುತ್ತದೆ. ಇಲ್ಲವಾದಲ್ಲಿ ದೇಸಿ ಸಂಸ್ಕೃತಿ ಎಂಬ ಪದವನ್ನು ಬಳಸದೆ ಉದ್ದೇಶ ಪೂರ್ವಕವಾಗಿ ದೇಸೀ ಜೀವನ ಪದ್ಧತಿ ಎಂಬ ಮಾತನ್ನು ಹೇಳುವ ಪ್ರಸನ್ನ, ಪವಿತ್ರ ಆರ್ಥಿಕತೆ ಎಂಬ ಪದವನ್ನು ಬಳಸುತ್ತಿರಲಿಲ್ಲ.

ಸುಸ್ಥಿರ ರಂಗಭೂಮಿಯ ಬಗ್ಗೆ ಮಾತನಾಡುವ ಪ್ರಸನ್ನರಿಗೆ ಸುಸ್ಥಿರ ಆರ್ಥಿಕತೆಯ ಬಗ್ಗೆ ಮಾತನಾಡಲು ತಿಳಿಯದೆ ಅಲ್ಲ. ಮೊನ್ನೆಯ ಉಪವಾಸವನ್ನೇ ನೋಡೋಣ ಹಲವು ರಾಜಕೀಯ ನಾಯಕರು ಅವರಿಗೆ ಬೆಂಬಲವಾಗಿ ಬಂದರು. ಕೊನೆಗೆ ಉಪವಾಸ ಮುಗಿಸಿದಾಗ ಪ್ರಸನ್ನ ಹೇಳಿದ ಈ ಸತ್ಯಾಗ್ರಹವನ್ನು ಯಾವುದೇ ಗುಂಪಿಗೂ ಅಧಿಕಾರಕ್ಕೆ ಬರಲು ಬಳಸಲು ಅವಕಾಶ ಕೊಡುವುದಿಲ್ಲ ಎಂದದ್ದು. ಏನನ್ನು ಸೂಚಿಸುತ್ತದೆ. ಎಂಬತ್ತರ ದಶಕದಲ್ಲಿ ರೈತ ನಾಯಕರು ಹೇಳುತ್ತಿದ್ದ ರಾಜಕೀಯ ಎಂದರೆ, ರಾಷ್ಟ್ರದ ಜನರನ್ನು ಕೀಳು ಮಟ್ಟಕ್ಕೆ ಎಳೆಯುವುದು ಎಂಬ ವಾಕ್ಯದಂತೆ ಭಾಸವಾಗುವುದಿಲ್ಲವೇ.

ಯಾವುದೇ ಗುಂಪಿರಲಿ, ಪಕ್ಷವಿರಲಿ ಸುಸ್ಥಿರ ಆರ್ಥಿಕತೆಯನ್ನು ತರುವ ಪ್ರಯತ್ನದಲ್ಲೇ ಅಧಿಕಾರಕ್ಕೆ ಬಂದರೆ ಪ್ರಜಾಸತ್ತಾತ್ಮಕವಾಗಿ ಸರಿಯಾದ ಕ್ರಮವೇ ಅಲ್ಲವೇ. ಅಂದರೆ ಎಲ್ಲರಿಂದ ಸಮಾನ ಅಂತರ ಕಾಯ್ದು ಕೊಳ್ಳುತ್ತಾ, ಜೊತೆಯಲ್ಲಿ ಇಂದಿನ ರಾಜಿಕೀಯ ಪರಿಸ್ಥಿತಿಯಲ್ಲಿ ಒಂದಷ್ಟು ಜನರನ್ನು ಆಕರ್ಷಿಸುವ ದೃಷ್ಟಿಯಿಂದಲೇ ಬಹಳ ಬೇಗ ಹೈಜಾಕ್ ಆಗಬಲ್ಲ ಈ ಪವಿತ್ರ ಆರ್ಥಿಕತೆಯ ಸ್ಲೋಗನ್ ತಯಾರಾಗಿದೆಯೇ?
ಇರಲಿ ಇವೆಲ್ಲ ಸಂವಾದದ ಮೂಲಕ ಚರ್ಚೆಯ ಮೂಲ ಬಗೆಹರಿಸಿಕೊಳ್ಳಬಹುದಾದ ಸಂಗತಿಗಳು.

ಆದರೆ ಈ ಪವಿತ್ರ ಆರ್ಥಿಕತೆ ಎಂದರೇನು. ಬಹಳ ರೊಮ್ಯಾಂಟಿಕ್ ಆದ ಸರಳ ಜೀವನ ಉದಾತ್ತ ಚಿಂತನ ಎಂಬ ಭಾವ ಲಹರಿಯೆ. ಇಂದಿನ ಜಾಗತೀಕರದ ಪ್ರಾರಂಭವಾದ ನಂತರದ ವಿಶ್ವ ಆರ್ಥಿಕತೆಯಲ್ಲಿ ಇದರ ರೂಪು ರೇಷೆಗಳು ಹೇಗಿರಬೇಕು. ಕೃಷಿ ಮತ್ತು ಕೈಗಾರಿಕೆಗಳ ಅನುಪಾತ ಎಷ್ಟಿರಬೇಕು, ಇವಗಳನ್ನೆಲ್ಲ ನಿರ್ವಹಿಸುವ ಚಲನಾ ಶಕ್ತಿಗಳನ್ನು ಹೇಗೆ ನಿಯಂತ್ರಿಸಬೇಕು ಇವುಗಳನ್ನೆಲ್ಲ ಎಲ್ಲಿಯಾದರೂ ವಿಸ್ತೃತವಾಗಿ ಮಾಡಲಾಗಿದೆಯೇ, ಹಾಗೆ ಯಾವುದೇ ಪಕ್ಷ- ಗುಂಪು, ಸಂಘಟನೆಗಳು ಈ ಬಗ್ಗೆ ಮಾಡಿದ ಕೆಲಸಗಳ ಬಗ್ಗೆ ಮಾಹಿತಿ ನಮ್ಮಲ್ಲಿ ಇದೆಯೇ, ಇದ್ದರೆ ಅಂತಹ ಸಂಘಟನೆಗಳೊಡನೆ ಸಂಪರ್ಕ ಸಂವಾದ ಇಲ್ಲದೆ ಹೋರಾಟ ಮುನ್ನಡೆಯುವುದು ಹೇಗೆ?

ಒಂದು ಕ್ರೋಢೀಕೃತ ಕಾರ್ಯಕ್ರಮ ರೂಪಿಸದೆ, ಇವೆಲ್ಲವನ್ನೂ ಬಿಟ್ಟು ಏಕವ್ಯಕ್ತಿ ಕೇಂದ್ರಿತವಾಗಿ ಇಂದು ಹೋರಾಟ ಸಾಧ್ಯವೆ? ಇದೆಲ್ಲ ಪ್ರಶ್ನೆಗಳನ್ನು ಮುಂದಿಟ್ಟಾಗಲೂ ನಮ್ಮಲ್ಲಿ ಗಾಂಧಿ ಮಾದರಿಯ ಹೋರಾಟವೆಂದರೆ ಏಕವ್ಯಕ್ತಿ ಕೇಂದ್ರಿತ ಹೋರಾಟವೆಂದು ನಮ್ಮ ಅನೇಕ ಎಳೆಯ ಗೆಳೆಯರಲ್ಲಿದೆ. ಇದಕ್ಕೆ ಕಾರಣ ಗಾಂಧಿಯ ಬಗ್ಗೆ ಬರಿಯ ಮೇಲ್ ಸ್ತರದ ಸೀಮಿತ ಓದು. ಹೌದು, ಹೊರ ನೋಟಕ್ಕೆ ಆ ರೀತಿ ಭಾಸವಾಗುತ್ತದೆ. ಆದ್ದರಿಂದಲೇ ಪ್ರಸನ್ನರಂತವರ ಏಕ ವ್ಯಕ್ತಿ ಕೇಂದ್ರಿತ ಹೋರಾಟದ ಮಿತಿ ಅವರಿಗೆ ಬೇಗ ತಿಳಿಯುವುದಿಲ್ಲ.

ಆದರೆ, ಗಾಂಧಿ ಈ ದೇಶದ ಕಟ್ಟಕಡೆಯ ಮನುಷ್ಯನವರೆಗೂ ತಲುಪಿದ್ದ, ಅವರೊಂದಿಗೆ ಕನೆಕ್ಟ್ ಆಗಿದ್ದ ರೀತಿಯೇ ಊಹಾತೀತವಾದದ್ದು, ಈ ರೀತಿಯ ಸಂಪರ್ಕ ಸಾಧನಗಳು ಇಲ್ಲದಿದ್ದ ಕಾಲದಲ್ಲಿ ಗಾಂಧಿ ತನ್ನ ಕ್ರಿಯೆಗಳ ಮೂಲಕವೇ ಇದನ್ನು ಸಾಧಿಸಿದ್ದರು.

ಆದ್ದರಿಂದ ಯಾವುದೇ ಗಾಂಧಿ ಮಾದರಿ ಹೋರಾಟಕ್ಕೆ ಎರಡು ಸಂಕಷ್ಟಗಳೂ ಇವೆ. ಮೊದಲನೆಯದ್ದು ಅದನ್ನು ಮುನ್ನಡೆಸುವ ವ್ಯಕ್ತಿಯ ವ್ಯಕ್ತಿತ್ವ ಪಾರದರ್ಶಕವಾಗಿರಬೇಕು, ಮತ್ತು ಹೋರಾಟದ ಪ್ರತಿ ಹಂತದಲ್ಲೂ ಅದು ಜನರ ಮುಂದೆಯೇ ಅನಾವರಣಗೊಳ್ಳುತ್ತ ಹೋಗಬೇಕು. ಆ ಹೋರಾಟ ಸಹಜವೂ ಜೀವಪರವೂ, ಆಗಿದ್ದು ತನಗೆ ತಾನೇ ನೈತಿಕವಾಗಿ ಹೊಣೆಗಾರಿಕೆಯಿಂದ ಕೂಡಿರಬೇಕು.

ಇನ್ನೊಂದು ಬಹಳ ಮುಖ್ಯವಾದದ್ದೆಂದರೆ ಸಧ್ಯದ ಸ್ಥಳೀಯ ಸಮಸ್ಯೆಗಳ ಪರಿಹಾರದ ಉದ್ದೇಶವನ್ನೂ ಹೊಂದಿರಬೇಕು. ಈ ಒಳಗೊಳ್ಳುವ ಕ್ರಿಯೆಯನ್ನು ಪ್ರಸನ್ನರೇ ಪ್ರಾರಂಭಿಸಬೇಕೆಂದೇನಿಲ್ಲ ಯಾರು ಬೇಕಾದರೂ ಮಾಡಬಹುದು. ಪ್ರಸನ್ನರೂ ಜೊತೆಗೂಡಬಹುದು.

‍ಲೇಖಕರು avadhi

October 16, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಡಿ.ಎಸ್. ರಾಮಸ್ವಾಮಿ

    ನಿಜಕ್ಕೂ ಒಪ್ಪಬಹುದಾದ ಸರಳ ವ್ಯಾಖ್ಯಾನ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: