ಅಮೆರಿಕದಲ್ಲಿ ‘ರೋಡ್ ಟ್ರಿಪ್’

 

ಯಶೋಮತಿಯೆಂಬ ಸ್ವರ್ಗದ ಅಪ್ಸರೆ..

ಮಿಲ್ಪಿಟಾಸ್‌ನಿಂದ ಸುಮಾರು ಇನ್ನೂರು ಮೈಲು ದೂರದಲ್ಲಿರುವ, ನಾಲ್ಕು ಗಂಟೆಗಳ ಹಾದಿಯಲ್ಲಿರುವ ‘ಯೋಸೆಮಿಟಿ’ ಪರ್ವತ ಮತ್ತು ಕಣಿವೆಗಳ ಸೌಂದರ್ಯವನ್ನು ಕಾಣಲು ಮುಂಜಾನೆ ಎಂಟು ಗಂಟೆಗೇ ಮನೆಯಿಂದ ಹೊರಟೆವು. ಹಾದಿಯುದ್ದಕ್ಕೂ ಅಲ್ಲಲ್ಲಿ ಬಾದಾಮಿ, ಕಿತ್ತಳೆ ಮತ್ತು ಆಲಿವ್ ತೋಟಗಳು.

ಪರ್ವತದ ಬುಡ ತಲುಪಲೇ ಸುಮಾರು ಎರಡು ಗಂಟೆಗಳ ಸಮಯ ತೆಗೆದುಕೊಂಡಿತು. ಪರ್ವತದ ತುದಿ ನೆಲಮಟ್ಟದಿಂದ ಸುಮಾರು ಆರು ಸಾವಿರ ಅಡಿ ಎತ್ತರದಲ್ಲಿದೆ. ತಪ್ಪಲಿನಿಂದಲೇ ಬಗೆಬಗೆಯಾದ ಹೂಗಳು, ವಿಶಿಷ್ಟ ಸಸ್ಯರಾಶಿ, ಕಡ್ಡಿಗಳಂತ ಎಲೆಗಳುಳ್ಳ ಮರಗಳು ನಮ್ಮನ್ನು ಕೈಬೀಸಿ ಕರೆಯುತ್ತವೆ. ದಾರಿಯಲ್ಲಿ ಬದಿಯಲ್ಲಿ ಕಾಣುವ ಅಗಾಧ ಪರ್ವತಗಳು, ಕಣಿವೆಗಳು ‘ನಮ್ಮೊಡಲಿನ ರಹಸ್ಯವನ್ನು ಬಿಟ್ಟುಕೊಡುವುದಿಲ್ಲ’ ಎಂಬಂತೆ ಬಿಗುವಿನಿಂದ ನಿಂತಿವೆ.

ಈ ಜಾಗದ ವೈಶಿಷ್ಟ್ಯವೆಂದರೆ ಇಲ್ಲಿ ಅನೇಕ ಪ್ರವಾಸಿ ತಾಣಗಳಿದ್ದರೂ ಎಲ್ಲ ಕಾಲದಲ್ಲೂ ಎಲ್ಲವನ್ನೂ ನೋಡಲು ಸಾಧ್ಯವಿಲ್ಲ. ಬೇಸಿಗೆಯಲ್ಲಿ ನಾವು ನೋಡಬಹುದಾದ ಎಲ್ಲ ತಾಣಗಳನ್ನು ಚಳಿಗಾಲದಲ್ಲಿ ನೋಡಲು ಸಾಧ್ಯವಿಲ್ಲ. ಆಯಾ ಕಾಲದಲ್ಲಿ ತೆರೆದಿರುವ ತಾಣಗಳ ವಿವರಗಳನ್ನು ಮೊದಲೇ ಜಾಲತಾಣದಲ್ಲಿ ನೋಡಿಕೊಂಡು ಅಂತೆಯೇ ಪ್ರವಾಸಿ ನಕ್ಷೆಯನ್ನು ರೂಪಿಸಿಕೊಳ್ಳಬಹುದು.

ಬ್ರೈಡಲ್ ವೇಲ್ ಜಲಪಾತ

ಪರ್ವತಾರೋಹಣ ಪ್ರೇಮಿಗಳು ಬೇಸಿಗೆಯಲ್ಲಿ ಇಲ್ಲಿ ಬಂದು ಕೆಲವು ದಿನ ತಂಗಲು ಬಹಳಷ್ಟು ಅಂದರೆ ತಿಂಗಳುಗಳ ಮುಂಚಿತವಾಗಿಯೇ ಕ್ಯಾಂಪಿನ ಸ್ಥಳಗಳನ್ನು ಕಾದಿರಿಸಿಕೊಳ್ಳುತ್ತಾರೆ. ಇಲ್ಲಿರುವ ಒಂದು ಮರವನ್ನೂ ಯಾರೂ ಕಡಿಯುವಂತಿಲ್ಲ; ತಾನಾಗಿಯೇ ಧರೆಗುರುಳಿದರೂ ಅದನ್ನು ಮುಟ್ಟುವಂತಿಲ್ಲ; ಅದು ಅಲ್ಲೇ ಕೊಳೆತು ಭೂಮಿಯ ಪಾಲಾಗಬೇಕಷ್ಟೆ!

ಬೇಸಗೆಯಲ್ಲಿ ಕಾಳ್ಗಿಚ್ಚಿನಿಂದ ಆಗೀಗ ಕೆಲವು ಮರಗಳು ನಾಶವಾಗಬಹುದು; ಬಿಟ್ಟರೆ ಇಲ್ಲಿನ ನಿವಾಸಿಗಳಾಗಲೀ, ಪ್ರವಾಸಿಗರಾಗಲೀ, ಈ ನಿಯಮವನ್ನು ಅತಿಕ್ರಮಿಸುವುದಿಲ್ಲ. ಇಷ್ಟೊಂದು ಶಿಸ್ತನ್ನು ಪಾಲಿಸುವುದರಿಂದಲೇ ಈ ಪರ್ವತ ಶ್ರೇಣಿಯಲ್ಲಿ ಪ್ರಕೃತಿ ಮಾತೆ ಯಾವುದೇ ಭಯ, ಆತಂಕವಿಲ್ಲದೆ ತನ್ನೆಲ್ಲಾ ಶೃಂಗಾರದೊಂದಿಗೆ ಹಾಯಾಗಿ ವಿಹರಿಸುತ್ತಿದ್ದಾಳೆ. ಈ ಅದ್ಭುತ ತಾಣವನ್ನು ನೋಡಿದಾಗ ನನಗನ್ನಿಸಿದ್ದು ‘ಇವಳು ದೇವಲೋಕದಿಂದ ಇಳಿದು ಬಂದ ಯಶೋಮತಿಯೆಂಬ ಅಪ್ಸರೆ…..!!’

ಈ ಭೂಭಾಗವೆಲ್ಲಾ ಹಿಮಾಚ್ಛಾದಿತವಾಗಿ ಮಂಜುಗಡ್ಡೆಯಾಗಿದ್ದ ಕಾಲದಿಂದ ಭೂಮಿಯಲ್ಲಿ ತಾಪವೇರುತ್ತಾ ಬಂದು, ಆ ಮಂಜುಗಡ್ಡೆಗಳೆಲ್ಲಾ ಒಮ್ಮೆಲೆ ಕರಗಿ ನೀರಾಗಿ ಹರಿಯ ತೊಡಗಿದಾಗ ಆ ರಭಸಕ್ಕೆ ಇಲ್ಲಿನ ಬೃಹತ್ ಗಾತ್ರದ ಪರ್ವತಗಳ ಕಲ್ಲುಗಳು ಸೀಳಿಕೊಂಡಿರುವುದು, ದೇವ-ದಾನವರ ಯುದ್ಧದಲ್ಲಿ ಪರ್ವತವನ್ನು ವಜ್ರಾಯುಧದಿಂದ ಸೀಳಿದಾಗ ಇಬ್ಭಾಗವಾಗಿ ಬಿದ್ದಿತೇನೋ ಎನ್ನುವಂತಿದೆ ಮೂರು ಸಾವಿರದ ಇನ್ನೂರು ಅಡಿ ಆಳದ ಇಲ್ಲಿನ ಕಣಿವೆ.

‘ಎನಿತು ಕಾಲ ಕಲ್ಲು ನೀರೊಳಗಿರ್ದೊಡೇಂ ನೆನೆದು ಮೃದುವಾಗಬಲ್ಲದೇ?’ ಎಂದು ಪ್ರಶ್ನಿಸಿಕೊಳ್ಳುವ ನಮಗೆ ಪ್ರಕೃತಿಯ, ನೀರಿನ ಅಗಾಧ ಶಕ್ತಿಯ ಅರಿವು ಈ ಕಣಿವೆಗಳನ್ನು ನೋಡಿದಾಗ ಅಚ್ಛರಿ ಹುಟ್ಟಿಸುತ್ತದೆ. ಹೀಗೆಯೇ ಮುಂದೆ ಸಾಗಿದಾಗ ಮಾರ್ಗ ಮದ್ಯದಲ್ಲಿ ‘ಎಲ್ ಕ್ಯಾಪಿಟಾನ್’ ಎನ್ನುವ ಒಂದು 3593 ಅಡಿ ಎತ್ತರದ ಅಖಂಡ ಶಿಲೆ ಶಿವಲಿಂಗದಂತೆ ನಿಶ್ಚಲವಾಗಿ ನಿಂತಿದ್ದು, ಅದರ ಬೃಹದಾಕಾರ ಬೆರಗು ಮೂಡಿಸುತ್ತದೆ. ‘ಭೂಮಿಯ ಮೇಲೆ ಸುಮಾರು 3600 ಅಡಿ ಎತ್ತರವಿರುವ ಇದು ಹಾಗೆ ಭದ್ರವಾಗಿ ನಿಂತಿರಬೇಕಾದರೆ, ಭೂಮಿಯ ಒಳಗೆ ಇನ್ನೆಷ್ಟು ಆಳದ ತನಕ ಇರಬಹುದು?’ ಎನ್ನುವ ಊಹೆ ನೋಡುಗನಿಗೆ ಬಿಟ್ಟಿದ್ದು.

ಇನ್ನೂ ಮುಂದೆ ಸಾಗಿದರೆ ಸಿಗುವುದು ‘ಬ್ರೈಡಲ್ ವೇಲ್’ ಎಂಬ ಜಲಪಾತ. ‘ಮದುವಣಗಿತ್ತಿಯ ಉಡುಗೆ’ ಎನ್ನಬಹುದೇ! ಒಬ್ಬ ಕ್ರಿಶ್ಚಿಯನ್ ಸಂಪ್ರದಾಯಸ್ಥ ವಧುವು ಅಚ್ಚ ಬಿಳುಪಿನ ಉಡುಗೆಯಲ್ಲಿ ನಿಂತಿರುವಂತೆ ಬೆಳ್ನೊರೆಯುಟ್ಟ ಈ ಜಲಪಾತ ಅತ್ಯಂತ ಸುಂದರವಾಗಿ ಕಾಣುತ್ತದೆ. ಬಿಸಿಲು ಇದರ ಮೇಲೆ ಬಿದ್ದಾಗ ಇಂದ್ರಛಾಪ ಮೂಡಿ ಒಂದು ಅಲೌಕಿಕ ಸೌಂದರ್ಯದಿಂದ ಈ ಜಲಪಾತ ಕಂಗೊಳಿಸುತ್ತದೆ.

ಸಾಕಷ್ಟು ಹತ್ತಿರದಿಂದ ನೋಡಲು ಅವಕಾಶವಿದ್ದು ಹತ್ತಿರ ಹೋದಂತೆಲ್ಲಾ ಮೈಮೇಲೆ ಸಿಂಪಡಣೆಯಾಗುವ ತುಂತುರು ಹನಿಗಳ ಸ್ನಾನ ಆಪ್ಯಾಯಮಾನವಾಗಿರುತ್ತದೆ. ಚಳಿಗಾಲದಲ್ಲಿ ಈ ನೀರು ಹಾಗೆಯೇ ಮಂಜುಗಡ್ಡೆಯಾಗಿ ನಿಂತು ಮುತ್ತಿನ ರಾಶಿಯಂತೆ ಕಾಣುವುದಂತೆ.  ಆಗಿನ ಅದರ ಸೌಂದರ್ಯವೇ ಬೇರೆಯದ್ದು ಎಂದು ನೋಡಿದವರು ಹೇಳುತ್ತಾರೆ; ಹೇಗಿರಬಹುದೆಂದು ನಾವು ಊಹಿಸಿಕೊಳ್ಳಬಹುದು.

ಇನ್ನೂ ಮುಂದೆ ಸಾಗಿದರೆ, ಇನ್ನೂ ಒಂದು 2425 ಅಡಿ ಎತ್ತರದಿಂದ ಧುಮುಕುವ ‘ಯೋಸೆಮಿಟಿ ಜಲಪಾತ’ ಸಿಗುತ್ತದೆ. ಬಹಳ ನಡೆಯಬೇಕಾದ್ದರಿಂದ, ಮತ್ತು ಸಮಯಾಭಾವದಿಂದ ಅದರ ಸನಿಹಕ್ಕೆ ಹೋಗಲಾಗಲಿಲ್ಲ. ಸ್ವಲ್ಪ ದೂರದಿಂದಲೇ ನೋಡಿದೆವು. ಇಲ್ಲಿಂದ ಮುಂದೆ ಸ್ವಲ್ಪ ದೂರದಲ್ಲಿ ಪ್ರಯಾಣಿಕರು ತಂಗಲು, ಉಣಲು ಹೋಟೆಲ್‌ಗಳು, ಪರ್ವತಾರೋಹಿಗಳು ಇರಲು ಮಾಡಿಕೊಳ್ಳುವ ಕ್ಯಾಂಪಿಂಗ್ ಪ್ರದೇಶಗಳು ಸಿಗುತ್ತವೆ.

ಅಲ್ಲಿಯೇ ನಾವು ತಂದಿದ್ದ ಬುತ್ತಿಯನ್ನು ಊಟ ಮಾಡಿದೆವು. ಅಲ್ಲಿನ ಭಾಗದಿಂದ ‘ಹಾಫ್ ಡೋಂ’ ಏಕಶಿಲಾ ಪರ್ವತವನ್ನು ನೋಡಬಹುದು. ಒಂದು ಬೃಹತ್ ಲಿಂಗಾಕಾರದ ಶಿಲೆಯನ್ನು ಸರಿಯಾಗಿ ಅರ್ಧಕ್ಕೆ ಸೀಳಿದಂತೆ ಕಾಣುವ ಈ ಶಿಲೆ ‘ಹಾಫ್ ಡೋಂ’ ಎಂದು ಪ್ರಸಿದ್ಧವಾಗಿದೆ.

ಈ ಕಣಿವೆಯ ಪರ್ವತದ ಕಲ್ಲುಗಳು ಬಿರಿದಿರುವ ರೀತಿಯೇ ಇಲ್ಲಿನ ಒಂದು ವೈಶಿಷ್ಟ್ಯತೆ. ಎಲ್ಲವೂ ಬೃಹದಾಕಾರದ ಕಲ್ಲುಗಳೇ. ಎಂತಹ ಶಿಲೆಯಾದರೂ ಪ್ರಕೃತಿಯ ಶಕ್ತಿಯ ಮುಂದೆ ತಲೆಬಾಗಲೇಬೇಕು ಎನ್ನುವ ಸತ್ಯವನ್ನು ಈ ತಾಣ ಸಾರಿ ಹೇಳುತ್ತದೆ.

ಇಷ್ಟಾಗುವ ಹೊತ್ತಿಗೆ ಸಂಜೆ ನಾಲ್ಕು ಗಂಟೆಯಾಗಿತ್ತು. ಹಿಂತಿರುಗುವ ಪಯಣ ಸುಮಾರು ನಾಲ್ಕು ಗಂಟೆಗೂ ಮಿಕ್ಕಿದ ಹಾದಿ.  ಹಾಗಾಗಿ ಒಲ್ಲದ ಮನಸ್ಸಿನಿಂದಲೇ ಆದರೂ ವಾಪಸ್ಸು ಹೊರಟೆವು.

ಹಾಫ್ ಡೋಮ್ ಪರ್ವತ

ಬೆಟ್ಟ, ಕಣಿವೆ, ಜಲಪಾತ, ಹಾದಿಯ ಪಕ್ಕದಲ್ಲೇ ಕೈ ಅದ್ದಿದರೆ ಮರಗಟ್ಟಿ ಹೋಗುವಷ್ಟು ತಣ್ಣಗೆ ಹರಿಯುವ ಶುಭ್ರ ನೀರಿನ ‘ಟುಲೋಮ್ನು’ ನದಿ, ಬೃಹದಾಕಾರದ ಮರಗಳು, ಅಗಾಧ ಸಸ್ಯ ರಾಶಿ, ವಿವಿಧ ಬಣ್ಣದ, ಆಕಾರದ ಹೂಗಳು, (ಕರಡಿ ಮುಂತಾದ ವನ್ಯಮೃಗಗಳೂ ಇವೆಯಂತೆ; ನಮ್ಮ ಕಣ್ಣಿಗೆ ಯಾವುದೂ ಬೀಳಲಿಲ್ಲ) ಇಂತಹ ಪ್ರಕೃತಿ ಮಾತೆಯ ಸ್ವಚ್ಛಂದ ವಿಹಾರವನ್ನು ನೋಡುತ್ತಾ, ಒಂದು ಹೊಸ ಅನುಭೂತಿಯನ್ನು ಪಡೆದುಕೊಂಡ ಹಿಗ್ಗಿನಿಂದ ಮನೆಗೆ ಮರಳಿದೆವು.

ಇನ್ನೊಂದು ಬಾರಿ, ಇನ್ನು ಒಂದು ತಿಂಗಳಾದ ನಂತರ ತೆರೆಯುವ ಇಲ್ಲಿನ ‘ಮಾರಿಪೋಸ ಗ್ರೋವ್’ಗೆ ಹೋಗಬೇಕೆಂದು ಅಂದುಕೊಂಡೆವು. ರೆಡ್‌ವುಡ್ ಮರಗಳ ದಟ್ಟವಾದ ಕಾಡು. ಕ್ಯಾಂಪಿಂಗ್‌ಗೆ ಅವಕಾಶವಿದೆ. ಒಂದು ರಾತ್ರಿ ಅಲ್ಲಿ ತಂಗಿದ್ದು ಆ ಅನುಭವವನ್ನೂ ನಮ್ಮದಾಗಿಸಿಕೊಳ್ಳಬೇಕೆಂದು ಯೋಜಿಸಿಕೊಂಡೆವು. ಆದರೆ ಅಷ್ಟರಲ್ಲಿ ಈ ಪ್ರದೇಶದಲ್ಲಿ ಕಾಳ್ಗಿಚ್ಚು ಶುರುವಾದ್ದರಿಂದ ಆ ಆಸೆ ನೆರವೇರಲಿಲ್ಲ. ಇರಲಿ.. ಮುಂದೆಂದಾದರೂ ನೋಡಲು ಅವಕಾಶ ಇದ್ದೇ ಇದೆಯಲ್ಲಾ..

ರಥಯಾತ್ರೆಯ ಸಿದ್ಧತೆ..

ಭಾರತದಲ್ಲಿ ಯಾರೂ ಏಳು ನೂರು, ಎಂಟು ನೂರು ಕಿಲೋಮೀಟರ್ ದೂರವಿರುವ ಊರಿಗೆ ಕಾರಿನಲ್ಲಿ ಹೋಗಲು ಅಷ್ಟಾಗಿ ಇಷ್ಟಪಡುವುದಿಲ್ಲ. ಪ್ರಯಾಣದ ಉದ್ದ ಹೆಚ್ಚಾದಷ್ಟು ರೈಲಿನಲ್ಲಿ ಪಯಣಿಸುವುದನ್ನು ಬಯಸುತ್ತೇವೆ. ಭರಿಸಲು ಶಕ್ತಿ ಇರುವ ಎಲ್ಲೋ ಕೆಲವರು ವಿಮಾನ ಪ್ರಯಾಣಕ್ಕೆ ಸಿದ್ಧರಾಗುತ್ತಾರೆ.

ರಸ್ತೆಗಳ ದುಸ್ಥಿತಿ, ಜಾಗವಿರುವಷ್ಟೂ ಜನರನ್ನು ತುಂಬಿಕೊಂಡು, ಮಕ್ಕಳನ್ನು ತೊಡೆ ಮೇಲೆ ಕುಳ್ಳಿರಿಸಿಕೊಂಡು, ಸ್ವಲ್ಪಮಟ್ಟಿಗೆ ಇರುಕಿಕೊಂಡಂತೆ ಹೋಗುವುದು ಮತ್ತು ಕಾರಿನಲ್ಲಿ ಕುಳಿತವರಲ್ಲಿ ಒಬ್ಬರು, ಹೆಚ್ಚೆಂದರೆ ಇಬ್ಬರನ್ನು ಬಿಟ್ಟರೆ ಮಿಕ್ಕವರಿಗೆ ವಾಹನ ಚಲಾಯಿಸಲು ಬಾರದಿರುವುದು.. ಇಂತಹ ಅನೇಕ ಕಾರಣಗಳು ದೂರ ಪ್ರಯಾಣಕ್ಕೆ ರೈಲನ್ನೋ, ವಿಮಾನವನ್ನೋ ನೆಚ್ಚಿಕೊಳ್ಳುವಂತೆ ಮಾಡುತ್ತದೆ.

ಕೆಲವು ಹೆದ್ದಾರಿಗಳಲ್ಲಿ ಮಾಡುವ ಪಯಣ ಮಾತ್ರ (ವಾಹನ ಸುಸ್ಥಿತಿಯಲ್ಲಿದ್ದರೆ) ಸುಖಕರವಾದ ಅನುಭವವನ್ನು ನೀಡುತ್ತದೆ.  ಹಾಗಾಗಿ ನಮ್ಮಲ್ಲಿ ದೂರದೂರುಗಳಿಗೆ ಕಾರಿನ ಪಯಣ ಅಷ್ಟೊಂದು ಚಾಲ್ತಿಯಲ್ಲಿಲ್ಲ.

ಅಮೆರಿಕದಲ್ಲಿ ‘ರೋಡ್ ಟ್ರಿಪ್’ ಎನ್ನುವುದು ವಾರಾಂತ್ಯದ ರಜೆಯ ಜೊತೆಯಲ್ಲಿ ಒಂದೆರಡು ರಜೆಗಳು ಕೂಡಿಕೊಂಡರೆ ಒಂದು ಮೋಜಿನ ವಿಷಯ. ನಾವು ಬೆಂಗಳೂರು, ಮೈಸೂರಿಗೆ ಓಡಾಡಿದಂತೆ ಸಾವಿರಾರು ಕಿಲೋಮೀಟರ್ ಸಂಚರಿಸಿಕೊಂಡು ಸಂತೋಷವಾಗಿ ಕಾಲ ಕಳೆಯುತ್ತಾರೆ. ಸುಸ್ಥಿತಿಯಲ್ಲಿರುವ ರಸ್ತೆಗಳು ಮತ್ತು ವಾಹನಗಳು ಪಯಣವನ್ನು ಒಂದು ಮೋಜಾಗಿಸುತ್ತದೆಯೇ ಹೊರತು ಶ್ರಮದಾಯಕವಾಗಿಸುವುದಿಲ್ಲ.

ಜೊತೆಗೆ ಇಲ್ಲಿ ನಮ್ಮ ಅನುಕೂಲಕ್ಕೆ ತಕ್ಕಂತೆ ಅಂದರೆ ಪ್ರಯಾಣದಲ್ಲಿ ಭಾಗವಹಿಸುವ ಜನರ ಸಂಖ್ಯೆಗೆ ಅನುಕೂಲವಾಗುವಂತ, ಸುಸ್ಥಿತಿಯಲ್ಲಿರುವ ವಾಹನಗಳು ಬಾಡಿಗೆಗೆ ದೊರೆಯುತ್ತವೆ. ಬಾಡಿಗೆಗೆ ಪಡೆದುಕೊಂಡು, ಸ್ವತಃ ಚಲಾಯಿಸಿಕೊಂಡು ಹೋಗುವ ಅವಕಾಶ ಇಲ್ಲಿರುವುದರಿಂದ ರೋಡ್ ಟ್ರಿಪ್‌ಗಳು ಆಕರ್ಷಣೀಯ. (ನಮ್ಮಲ್ಲೂ ದೆಹಲಿ ಮತ್ತು ಕೆಲವು ದೊಡ್ಡ ಪಟ್ಟಣಗಳಲ್ಲಿ ಇಂತಹ ಅನುಕೂಲತೆ ಇದೆ ಎಂದು ಕೇಳಿದ್ದೇನೆ).

ಹೀಗೆ ಒಂದು ರೋಡ್ ಟ್ರಿಪ್‌ನ ರಥಯಾತ್ರೆಯ ಯೋಜನೆಯನ್ನು ನಾವು ಹಾಕಿಕೊಂಡೆವು. ಮಿಲ್ಪಿಟಾಸ್‌ನಿಂದ ದಕ್ಷಿಣಕ್ಕೆ 470 ಮೈಲಿ (750 ಕಿ.ಮೀ.) ದೂರದಲ್ಲಿರುವ ಸ್ಯಾಂಡಿಯಾಗೋನಲ್ಲಿ ಎರಡು ದಿನ; ಅಲ್ಲಿಂದ 120 ಮೈಲಿ (200 ಕಿ.ಮೀ.) ವಾಪಸ್ಸು ಬಂದು ಲಾಸ್ ಏಂಜಲೀಸ್‌ನಲ್ಲಿ ಮೂರು ದಿನ; ಅಲ್ಲಿಂದ ಪೂರ್ವಕ್ಕೆ ೨೭೦ ಮೈಲಿ (440 ಕಿ.ಮೀ.) ಹೊರಟು ಲಾಸ್ ವೇಗಾಸ್‌ನಲ್ಲಿ ಒಂದು ದಿನ; ಅಲ್ಲಿಂದ ಮುಂದೆ 252 ಮೈಲಿ (410 ಕಿ.ಮೀ.) ಇರುವ ಗ್ರಾಂಡ್ ಕೆನ್ಯಾನ್ ಪರ್ವತ ಮತ್ತು ಕಣಿವೆಗಳನ್ನು ನೋಡುವುದು ನಮ್ಮ ಕಡೆಯ ಗಮ್ಯ ಸ್ಥಾನ.

ಅಲ್ಲಿಂದ 760 ಮೈಲಿ (1200 ಕಿ.ಮೀ.) ವಾಪಸ್ಸು ಮಿಲ್ಪಿಟಾಸ್ ತಲುಪುವುದು. ಕಡೆಯ ದಿನ ಅಮೋಘ 12 ಗಂಟೆಗಳಿಗೂ ಮಿಕ್ಕಿದ ಪಯಣ.. ಲಾಸ್ ವೇಗಾಸ್‌ನಿಂದ ಗ್ರಾಂಡ್ ಕೆನ್ಯಾನ್ ಮತ್ತು ಅಲ್ಲಿಂದ ವಾಪಸ್ಸು ನೇರವಾಗಿ ಮಿಲ್ಪಿಟಾಸ್.. ಹತ್ತಿರ ಹತ್ತಿರ 1100 ಮೈಲಿಗಳು.

ನಾವು ಹೋದ ಕಡೆಯಲ್ಲೆಲ್ಲಾ ನಮಗೆ ಶಾಖಾಹಾರಿ ಆಹಾರ ಸಿಗುವ ಭರವಸೆಯಿಲ್ಲದ್ದರಿಂದ, ನಾವು ಹಲವು ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಯಿತು. ಸಾಕಷ್ಟು ಚಪಾತಿ, ಪರೋಟ, ತೇಪ್ಲಾ, ಬ್ರೆಡ್, ಚೀಸ್, ಜ್ಯಾಂ, ಉಪ್ಪಿನಕಾಯಿ, ಚಟ್ನಿಪುಡಿ, ಹಣ್ಣುಗಳು, ಸಲಾಡ್‌ಗೆ ಆಗುವಂತಹ ತರಕಾರಿಗಳು, ಹಾಲು, ಮೊಸರು ಇಂತವನ್ನು ಐಸ್ ಬಾಕ್ಸಿನಲ್ಲಿ ಜೋಡಿಸಿಕೊಂಡೆವು.

ಸ್ಯಾಂಡಿಯಾಗೋ ಮತ್ತು ಲಾಸ್ ಏಂಜಲೀಸ್‌ನಲ್ಲಿ ನಾವು ಇಳಿದುಕೊಂಡ ‘ಎಕ್ಸ್ಟೆಂಡೆಡ್ ಸ್ಟೇ ಅಮೆರಿಕ’ ತಂಗುದಾಣದಲ್ಲಿ ಅಡುಗೆ ಮಾಡಿಕೊಳ್ಳುವ ಅನುಕೂಲವಿದ್ದುದರಿಂದ ಕಾಫಿಪುಡಿ, ಕುಕ್ಕರ್, ಅಕ್ಕಿ, ಬೇಳೆ, ಎಣ್ಣೆ, ಮಸಾಲೆ ಪುಡಿಗಳಂತ ಅತ್ಯಗತ್ಯ ಸಾಮಾನುಗಳನ್ನು ಜೊತೆಗೆ ತೆಗೆದುಕೊಂಡೆವು. ಉಪ್ಪಿಟ್ಟಿನ ಮಿಶ್ರಣ, ಗೊಜ್ಜವಲಕ್ಕಿ ಮಿಶ್ರಣದಂತಹ ದಿಢೀರ್ ತಿಂಡಿಗಳ ಸಿದ್ಧತೆಗಳನ್ನು ಮಾಡಿಕೊಂಡೆವು.

ಬೆಳಗ್ಗಿನ ತಿಂಡಿಗೆ ಉಪ್ಪಿಟ್ಟು, ಅವಲಕ್ಕಿ, ಬ್ರೆಡ್, ಚಿತ್ರಾನ್ನ ಇಂಥವುಗಳನ್ನು ತಿಂದು ತಿರುಗಲು ಹೊರಟರೆ, ಮಧ್ಯಾಹ್ನದ ಊಟಕ್ಕೆ ಸಾಕಷ್ಟು ಚಪಾತಿ, ಪರೋಟ ಇಂಥವನ್ನು ತೆಗೆದುಕೊಂಡು ಹೋಗುತ್ತಿದ್ದೆವು. ಜೊತೆಯಲ್ಲಿ ಧಾರಾಳವಾಗಿ ಹಣ್ಣುಗಳು, ಬಿಸ್ಕತ್, ಚಿಪ್ಸ್ ಮುಂತಾದ ಕುರುಕು ತಿಂಡಿಗಳನ್ನು ಸಹಾ ಒಯ್ಯುತ್ತಿದ್ದೆವು. ಇವೆಲ್ಲವುಗಳ ಜೊತೆಗೆ ಹೋದಲ್ಲಿ ನಮಗಿಷ್ಟವಾಗುವಂತಹುದೇನಾದರೂ ಸಿಕ್ಕರೆ ಮರೆಯದೆ ಅದನ್ನು ರುಚಿ ನೋಡುತ್ತಿದ್ದೆವು.

ಸುತ್ತಾಟ ಮುಗಿಸಿ, ರಾತ್ರಿ ವಸತಿಗೆ ಬಂದು ಶುಭ್ರವಾಗಿ ಅನ್ನ, ಸಾರು, ಹುಳಿ, ಗೊಜ್ಜು ಇಂಥವೇನಾದರೊಂದನ್ನು ಮಾಡಿಕೊಂಡು, ಪೊಗದಸ್ತಾಗಿ ತಿಂದು ಮಾರನೆಯ ಬೆಳಗ್ಗೆಗೆ ತಯಾರಾಗಲು ಸಿದ್ಧರಾಗಿ ಎಚ್ಚರವಿಲ್ಲದೆ ಬೆಳಗ್ಗೆ ಆರು ಗಂಟೆಯ ತನಕ ಸೊಂಪಾಗಿ ನಿದ್ರೆ ಮಾಡುತ್ತಿದ್ದೆವು.

ಈ ರಥಯಾತ್ರೆಯ ನನ್ನ ಅನುಭವಗಳನ್ನೂ, ಕಂಡ ವಿಶೇಷಗಳನ್ನು ಇನ್ನು ಹೇಳುತ್ತಾ ಹೋಗುತ್ತೇನೆ. ಬೇರೆಯವರಿಗೆ, ಓದುಗರಿಗೆ ‘ಇದರಲ್ಲೇನು ವಿಶೇಷ?’ ಎನ್ನಿಸಬಹುದು. ಆದರೆ ಸುಮಾರು 25 ವರ್ಷಗಳಿಂದ ಅಂದುಕೊಂಡ ಕಡೆಯಲ್ಲೆಲ್ಲಾ ಹೋಗಲಾಗದ, ನೋಡಬೇಕೆನ್ನಿಸಿದ್ದನ್ನೆಲ್ಲಾ ನೋಡಲಾಗದ, ಅನ್ನಿಸಿದ್ದನ್ನೆಲ್ಲಾ ಮಾಡಲಾಗದ ಒಂದು ಅಸಹಾಯ ಸ್ಥಿತಿಯಲ್ಲಿರುವ ನನಗೆ, ಈ ಕೊರತೆಯನ್ನು ನಿವಾರಿಸಿ ಈ ರಥದಲ್ಲಿ ನನಗೊಂದು ಗಾಲಿಕುರ್ಚಿಯನ್ನು ಇರಿಸಿಕೊಂಡಿದ್ದು, ತಾವು ಹೋದ ಪ್ರತಿಯೊಂದು ಜಾಗಕ್ಕೂ ನನ್ನನ್ನು ಕರೆದೊಯ್ದ ನನ್ನ ಮಕ್ಕಳು, ಅಳಿಯಂದಿರು ಮತ್ತು ಪತಿಗೆ ನಾನು ಶರಣು. 25 ವರ್ಷಗಳ ಕಹಿಯನ್ನು ಈ ಎಂಟು ದಿನಗಳ ಮಟ್ಟಿಗೆ ಮರೆಸಿದ ಈ ಯಾತ್ರೆ ಪ್ರಾಯಶಃ ನನ್ನ ಜೀವಮಾನದ ಅತ್ಯಂತ ಸುಖದ, ಸಂತಸದ ದಿನಗಳಲ್ಲಿ ಒಂದು!

ವಾರಾಂತ್ಯದ ರಜೆಯನ್ನು ಸದುಪಯೋಗಪಡಿಸಿಕೊಳ್ಳಲೋಸುಗ ನಮ್ಮ ಪಯಣ ಶುಕ್ರವಾರ ಮಧ್ಯಾಹ್ನ ಮೂರು ಗಂಟೆಗೆ ಆರಂಭವಾಯಿತು. ವಾರಾಂತ್ಯಕ್ಕೆ ಬೇಗ ಮನೆ ಸೇರಲಿಚ್ಛಿಸುವವರು, ನಮ್ಮ ಹಾಗೇ ಹೊರ ಪ್ರಯಾಣದ ಯೋಜನೆಯನ್ನು ಹಾಕಿಕೊಂಡಿರುವವರು ಆಫೀಸಿನ ಕೆಲಸವನ್ನು ಬೇಗ ಬೇಗನೇ ಮುಗಿಸಿ ಇದೇ ಸಮಯಕ್ಕೆ ಹೊರಡುವುದರಿಂದ, ನೂರಾರು ವಾಹನಗಳು ಒಮ್ಮೆಲೇ ರಸ್ತೆಗೆ ಇಳಿಯುತ್ತವೆ.

ಕ್ಯಾಸಾ ಡಿ ಫ್ರುಕ್ಟಾದ ಒಂದು ನೋಟ

ವೇಗದ ಮಿತಿಯಿದ್ದರೂ, ಒಂದರ ಹಿಂದೊಂದು ವಾಹನಗಳು ವ್ಯವಸ್ಥಿತವಾಗಿ ಚಲಿಸುವಾಗ ಕನಿಷ್ಠ ವೇಗದ ಮಿತಿಯಲ್ಲೇ ಸಾಗಬೇಕಾಗುತ್ತದೆ. ಹೀಗಾಗಿ ನಮ್ಮ ಶುರುವಿನ ಪಯಣ ಮಂದಗತಿಯಲ್ಲಿ ಸಾಗಿತು. ಗಿಲ್‌ರಾಯ್‌ದಾಟಿದ ನಂತರ ಸಂಜೆ ಸುಮಾರು ಆರು ಗಂಟೆಗೆ ಒಂದು ಪ್ರಯಾಣಿಕರ ತಂಗುದಾಣದಲ್ಲಿ ಟೀ ಮತ್ತು ಸಣ್ಣ ವಿರಾಮಕ್ಕಾಗಿ ವಾಹನವನ್ನು ನಿಲ್ಲಿಸಿದೆವು.

ಇಲ್ಲಿ ಪ್ರಯಾಣಿಕರ ಸೌಲಭ್ಯಕ್ಕಾಗಿ ಒಂದು ಸಣ್ಣ ರೆಸ್ಟೋರೆಂಟ್, ಶೌಚಾಲಯ ಮುಂತಾದ ಅನುಕೂಲತೆಗಳಿವೆ. ಆದರೆ ಇಲ್ಲಿನ ಪ್ರಮುಖ ಆಕರ್ಷಣೆ ಸಾವಯುವ ಮಳಿಗೆ ‘ಕ್ಯಾಸ ಡಿ ಫ್ರುಕ್ಟಾʼ. ಇಲ್ಲಿ ಹಣ್ಣುಗಳನ್ನು ಉಪ್ಪು, ಹುಳಿ, ಖಾರದಲ್ಲಿ ಅದ್ದಿ ವಿವಿಧ ರೀತಿಯಲ್ಲಿ ಸಂಸ್ಕರಿಸಿ ಇಟ್ಟಿರುತ್ತಾರೆ. ಹೀಗೆ ಸಂಸ್ಕರಿಸಿದ ಮಾವಿನ ಹಣ್ಣಿನ ಹೋಳುಗಳು, ಹುಣಿಸೇ ಹಣ್ಣು, ಅನಾನಸ್ ಮುಂತಾದವು ಬಾಯಲ್ಲಿ ನೀರೂರಿಸುವಂತೆ ಇರುತ್ತವೆ. ಅವರದ್ದೇ ವಿಶಿಷ್ಟ ರೀತಿಯ ದ್ರಾಕ್ಷಾರಸವನ್ನು ಮತ್ತು ಪಾನೀಯಗಳನ್ನು ತಯಾರಿಸಿಟ್ಟಿರುತ್ತಾರೆ.

ಸಂಸ್ಕರಿಸಿದ ಹಣ್ಣುಗಳ ಒಂದು ನೋಟ

ವಿವಿಧ ಒಣ ಹಣ್ಣುಗಳ ಚಾಕಲೇಟ್‌ಗಳು ದೊರಕುತ್ತವೆ. ಅಂಗಡಿಯಲ್ಲಿ ಒಂದು ಸುತ್ತು ಹಾಕಿ ಬಂದರೆ ಸುಮಾರಷ್ಟು ಆಕರ್ಷಣೀಯ ವಸ್ತುಗಳು, ತಿನಿಸುಗಳು, ಪಾನೀಯಗಳು ಕಾಣಸಿಗುತ್ತವೆ.

ಇಲ್ಲಿಂದ ಮುಂದೆ ಹೊರಟವರು, ರಾತ್ರಿ ಸುಮಾರು ಒಂಭತ್ತು ಗಂಟೆಗೆ ಇನ್ನೊಂದು ತಂಗುದಾಣದಲ್ಲಿ ಊಟಕ್ಕೆ ಮತ್ತು ಲಘು ವಿರಾಮಕ್ಕೆ ನಿಲ್ಲಿಸಿದೆವು. ತಂದಿದ್ದ ಬುತ್ತಿಯನ್ನು ಸವಿದೆವು. ಇಲ್ಲಿಂದ ಮುಂದೆ ನಮ್ಮ ಪಯಣ ವೇಗವಾಗಿ ಸಾಗಿ ಮಧ್ಯರಾತ್ರಿ 2 ಗಂಟೆಗೆ ಸ್ಯಾಂಡಿಯಾಗೋಗೆ ತಲುಪಿ ನಾವು ಕಾದಿರಿಸಿದ್ದ ಅತಿಥಿ ಗೃಹಕ್ಕೆ ತೆರಳಿ ‘ಮಲಗಿದ್ದೊಂದೇ ಗೊತ್ತುʼ ಎನ್ನುವ ಹಾಗೆ ನಿದ್ರೆಗೆ ಶರಣಾಗಿ ಬೆಳಗ್ಗೆ ಆರು ಗಂಟೆಯವರೆಗೆ ಎಚ್ಚರಿಲ್ಲದೆ ನಿದ್ರೆಗೆ ಶರಣಾದೆವು. ಮರುದಿನದ ನಮ್ಮ ಮೊದಲ ದಿನದ ಕಾರ್ಯಕ್ರಮ ವಿಶ್ವವಿಖ್ಯಾತವಾದ ‘ಸೀ ವರ್ಲ್ಡ್ – ಸಮುದ್ರ ಪ್ರಪಂಚ’ವನ್ನು ನೋಡಲು ಹೋಗುವುದು.

(ಮುಂದುವರಿಯುವುದು)

‍ಲೇಖಕರು avadhi

October 10, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: