ಅಮೃತಾ ಪ್ರೀತಮ್ ರ ‘ಪಿಂಜರ್’

ಪಿಂಜರ್ ಅಂದರೆ ಕನ್ನಡದಲ್ಲಿ ಪಂಜರ ಅಥವಾ ಮಾನವನ ಅಸ್ಥಿಪಂಜರ ಎಂದು ಹೇಳಬಹುದು. ಏನು ಈ ಕಾದಂಬರಿಯ ಹೆಸರು ಹೀಗಿದೆ? ಇದು ಸತ್ತವರ ಕತೆಯನ್ನು ಒಳಗೊಂಡಿರಬಹುದು ಎಂದು ನೀವು ಅಂದುಕೊಳ್ಳಬಹುದು. ಇದು ಸತ್ತವರ ಕತೆ ಎಂದು ಹೇಳುವುದಕ್ಕಿಂತ ಭಾರತ ಪಾಕಿಸ್ತಾನ ಧರ್ಮದ ಆಧಾರದ ಮೇಲೆ ಬ್ರಿಟಿಷರ ಕುಹಕತನದಿಂದ ವಿಭಜನೆಯಾಗುವ ಸಮಯದಲ್ಲಿ ಕೆಲವರ ಮೂರ್ಖತನದಿಂದ ಏನೆಲ್ಲಾ ದುಷ್ಪರಿಣಾಮಗಳು ಅದರಲ್ಲೂ ಎರಡು ಧರ್ಮದ ಸ್ತ್ರೀಯರ ಮೇಲೆ ನಡೆದ ದೌರ್ಜನ್ಯಗಳನ್ನು ಎತ್ತಿ ತೋರಿಸುವ ಕಾದಂಬರಿ.

ಇದು ಕೆಲವೇ ಸ್ತ್ರೀಯರ ಕತೆಯಾದರೂ ಆ ಕಾಲದ ಪ್ರತಿಯೊಬ್ಬ ಸ್ತ್ರೀಯೂ ಹೇಗೆಲ್ಲಾ ಧರ್ಮರಾಜಕಾರಣಕ್ಕೆ ಸಿಕ್ಕಿ ನಲುಗಿ ಅಸ್ಥಿ ಪಂಜರಗಳಾಗಿದ್ದರೂ ಎಂದು ತೋರಿಸುವ ಕೃತಿ. ಈ ಕಾದಂಬರಿಯನ್ನು ಭಾರತೀಯ ಸಾಹಿತ್ಯದ ಇನ್ನೊಬ್ಬ ದೊಡ್ಡ ಲೇಖಕರಾದ ಖುಷ್ವಂತ್ ಸಿಂಗ್ ಅವರು ಇಂಗ್ಲಿಷಿಗೆ ಅನುವಾದಿಸಿದ್ದರು. ಅದರ ಜೊತೆಗೆ ಅಮೃತಾರ ಕೆಲವು ಕತೆಗಳನ್ನು ಸೇರಿಸಿದ್ದರು.

ಈ ಕಾದಂಬರಿಯನ್ನು 2006ರಲ್ಲಿ ಕನ್ನಡದ ಖ್ಯಾತ ವಿಮರ್ಶಕಿ ಎಲ್ ಸಿ ಸುಮಿತ್ರಾ ಅವರು ಅನುವಾದ ಮಾಡಿದ್ದಾರೆ. ಅನುವಾದ ತುಂಬಾ ಚೆನ್ನಾಗಿ ಮೂಡಿಬಂದಿದೆ. ಕಾದಂಬರಿ ಕನ್ನಡದ್ದೇ ಎಂಬುವಷ್ಟರ ಮಟ್ಟಿಗೆ ಸುಲಲಿತವಾಗಿ ಓದಿಸಿಕೊಂಡು ಹೋಗುತ್ತದೆ.

ದೇಶ ವಿಭಜನೆಯ ಬಗ್ಗೆ ಅದರ ದುಷ್ಪರಿಣಾಮಗಳ ಬಗ್ಗೆ ಸಾದತ್ ಹಸನ್ ಮಾಂಟೋ, ಖುಷ್ವಂತ್ ಸಿಂಗ್ ಮತ್ತು ಅಮೃತಾ ಪ್ರೀತಮ್ ಇನ್ನು ಹಲವಾರು ಲೇಖಕರು ತುಂಬಾ ಪರಿಣಾಮಕಾರಿಯಾಗಿ ಅಷ್ಟೇ ಮನೋಜ್ಞವಾಗಿ ಆಗಿನ ಕಾಲದ ಪರಿಸ್ಥಿತಿಯನ್ನು ಚಿತ್ರಿಸಿದ್ದಾರೆ.

ಅವುಗಳನ್ನು ಕನ್ನಡದಲ್ಲಿ ಫಕೀರ ಮಹಮದ್ ಕಟ್ಪಾಡಿ (ಮಾಂಟೋ ಕತೆಗಳು), ಹಸನ್ ನಯೀಂ ಸುರಕೋಡ (ಅಮೃತಾ ಪ್ರೀತಮ್ ರ ಆತ್ಮಚರಿತ್ರೆ “ರಸೀದಿ ತಿಕೀಟು”) ಮತ್ತು ರವಿ ಬೆಳಗೆರೆ ಖುಷ್ವಂತ್ ಸಿಂಗ್ ರ ಕೆಲವು ಲೇಖನಗಳನ್ನು ಅನುವಾದಿಸಿದ್ದರು ಎಂದು ನೆನಪು. 

ಅಮೃತಾ ಪ್ರೀತಮ್ ಭಾರತೀಯ ಸಾಹಿತ್ಯ ಲೋಕದಲ್ಲಿ ಬಹುದೊಡ್ಡ ಹೆಸರು. ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಸಾಹಿತ್ಯ ಕೃಷಿ ಮಾಡಿರುವ ಇವರು ಪಂಜಾಬಿ ಭಾಷೆಯಲ್ಲಿ ಬರೆಯುತ್ತಿದ್ದರು. ಇವರ ವೈಯುಕ್ತಿಕ ಬದುಕಿನ ಕೆಲವು ಘಟನೆಗಳು ಆ ಕಾಲಕ್ಕೆ ಕ್ರಾಂತಿಕಾರಕವಾಗಿದ್ದವು. ಇವರು ಪದ್ಮವಿಭೂಷಣ, ಭಾರತೀಯ ಜ್ಞಾನಪೀಠ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಫೆಲೋಶಿಪ್ ಕೂಡ ಪಡೆದಿದ್ದರು. ನೂರಕ್ಕಿಂತ ಹೆಚ್ಚು ಕೃತಿಗಳನ್ನು ಬರೆದಿರುವ ಅಮೃತಾ ಭಾರತ ಮತ್ತು ಪಾಕಿಸ್ತಾನ ಎರಡು ದೇಶಗಳಲ್ಲೂ ಸಮಾನವಾಗಿ ಓದುಗರನ್ನು ಪಡೆದಿದ್ದರು. 

ಅಮೃತಾ ಅವರು 1919ರಲ್ಲಿ ಅಂದಿನ ಪಶ್ಚಿಮ ಪಂಜಾಬಿನ ಗುಜ್ರನವಾಲಾದಲ್ಲಿ ಹುಟ್ಟಿದರು. ಆಗಿನ್ನೂ ಭಾರತಕ್ಕೆ ಸ್ವಾತಂತ್ರ್ಯ ಬಂದಿರಲಿಲ್ಲ. ಭಾರತ ಪಾಕಿಸ್ತಾನ ವಿಭಜನೆಯಾಗಿರಲಿಲ್ಲ. ಭಾರತ ಪಾಕಿಸ್ತಾನ ವಿಭಜನೆಯ ನಂತರ  ಗುಜ್ರನವಾಲಾ ಎಂಬ ಆ ಊರು ಪಾಕಿಸ್ತಾನಕ್ಕೆ ಸೇರಿತು.

ಅಮೃತಾರ ತಂದೆ ಕರ್ತಾರ ಸಿಂಗ್ ಹಿತಕಾರಿ ಓರ್ವ ಶಾಲಾ ಶಿಕ್ಷಕರಾಗಿದ್ದರು, ಕವಿಯಾಗಿದ್ದರು, ಅವರೊಬ್ಬ ಬಹು ಭಾಷಾ ವಿದ್ವಾಂಸರಾಗಿದ್ದರು. ಅಮೃತಾ ಕರ್ತಾರ ಸಿಂಗ್ ಹಿತಕಾರಿ ಅವರ ಏಕೈಕ ಪುತ್ರಿ. ಕರ್ತಾರ ಸಿಂಗ್ ಆ ಕಾಲಕ್ಕೆ ಸಾಹಿತ್ಯ ಪತ್ರಿಕೆಯೊಂದರ ಸಂಪಾದಕರಾಗಿದ್ದರು. ಜೊತೆಗೆ ಅವರು ಸಿಖ್ ಧರ್ಮದ ಮತ ಪ್ರಚಾರಕರಾಗಿದ್ದರು. ದುರಾದೃಷ್ಟವೆಂಬಂತೆ ಅಮೃತಾ ಇನ್ನು ಕೇವಲ ಹನ್ನೊಂದು ವರ್ಷದ ಚಿಕ್ಕ ಹುಡುಗಿಯಾಗಿರುವಾಗಲೇ ಅವರ ತಾಯಿ ತೀರಿ ಹೋದರು.

ತಾಯಿಯ ಮರಣಾನಂತರ ಅವರು ತಮ್ಮ ತಂದೆಯ ಜೊತೆ ಲಾಹೋರಿಗೆ ತೆರಳಿ ಅಲ್ಲಿ ನೆಲೆಸಿದರು. ತಾಯಿಯ ಸಾವಿನ ನೋವು ಅವರ ಬದುಕಿನ ಮೇಲೆ ತೀವ್ರವಾದ ಗುರುತನ್ನು ಅವರ ಬದುಕಿನ ಕೊನೆಯವರೆಗೂ ಬಿಟ್ಟಿತು. ಅದರಿಂದ ಒಂಟಿತನವನ್ನು ಅವರು ಅನುಭವಿಸಬೇಕಾಯಿತು. ಆ ಒಂಟಿತನದ ನೋವಿನಿಂದ ತಪ್ಪಿಸಿಕೊಳ್ಳಲು ಸಾವಿರಾರು ಪುಸ್ತಕಗಳನ್ನು ಓದಿದರು. ಕೊನೆಗೆ ತಾವೇ ಬರೆಯಲು ಆರಂಭಿಸಿದರು.

ಅವರು ಮೊದಲು ಪ್ರಕಟಿಸಿದ ಕವನಸಂಕಲನದ ಹೆಸರು ‘ಅಮೃತ್ ಲೆಹೆರಾನ್’ ಅದನ್ನು ಇಂಗ್ಲಿಷ್ ಭಾಷೆಯಲ್ಲಿ “Immortal Waves” ಅಥವಾ ಕನ್ನಡದಲ್ಲಿ “ಸಾವಿಲ್ಲದ ಅಲೆಗಳು” ಎಂದು ಕರೆಯಬಹುದು. ಆಗಿನ್ನೂ ಅವರಿಗೆ ಕೇವಲ ಹದಿನಾರು ವರ್ಷ. ತಮ್ಮ ಹದಿನಾರನೆಯ ವಯಸ್ಸಿಗೆ ಆ ಕಾಲದ ಪಂಜಾಬಿ ಸಾಹಿತ್ಯ ಲೋಕದ ಮನ್ನಣೆ ಪಡೆದರು. 

1936ರಲ್ಲಿ ಅವರು ಪ್ರೀತಮ್ ಸಿಂಗ್ ಎಂಬುವ ಪತ್ರಿಕಾ ಸಂಪಾದಕರೊಬ್ಬರನ್ನು ಮದುವೆಯಾದರು. ಅವರು ಕೇವಲ ಏಳು ವರ್ಷದ ಅವಧಿಯಲ್ಲಿ ಅಂದರೆ 1936 ರಿಂದ 1943 ರವರೆಗೆ ಆರು ಕವನಸಂಕಲನಗಳನ್ನು ಪ್ರಕಟಿಸಿದರು. ಮೊದಮೊದಲು ಹೆಚ್ಚು ಪ್ರೇಮಗೀತೆಗಳನ್ನು ಬರೆಯುತ್ತಿದ್ದ ಅಮೃತಾ ಆನಂತರ ಪ್ರಗತಿಪರ ಚಳುವಳಿಯ ಭಾಗವಾದರು. 

ಅವರು ಆಗಿನ ಬ್ರಿಟಿಷ್ ಸರ್ಕಾರದ ವಿರುದ್ಧ 1944ರಷ್ಟು ಹಿಂದೆಯೇ ಲೇಖನಗಳನ್ನು ಬರೆಯಲು ಆರಂಭಿಸಿದರು. ಅವರ ಲೋಕ ಪೀಡ್ (ಜನರ ಆಕ್ರೋಶ) ಕೃತಿಯಲ್ಲಿ ಇದನ್ನು ನಾವು ಕಾಣಬಹುದು. ಇದು ಆ ಸರ್ಕಾರವನ್ನು ಟೀಕೆಯ ಜೊತೆ ಬಡಿದೆಚ್ಚರಿಸಲು ಬರೆದ ಲೇಖನವಾಗಿತ್ತು. ಆಗ ಎರಡನೇ ಮಹಾಯುದ್ದದ ಸಮಯವಾದ್ದರಿಂದ ಮತ್ತು ಬಂಗಾಳದಲ್ಲಿ ತೀವ್ರ ಬರಗಾಲದಿಂದ ಸತ್ತವರ ಬಗ್ಗೆ ಅನುಕಂಪ ಮತ್ತು ಪರಿಸ್ಥಿತಿಯ ಮಾನವಕೃತ ಅಪರಾಧದ ಅವಲೋಕನವಿತ್ತು.

ಅಮೃತಾ ಅವರು ಸಾಹಿತ್ಯವಲಯದಲ್ಲಿ ಹೆಚ್ಚು ಗುರುತಿಸಿಕೊಂಡಿದ್ದರಿಂದ ಕೆಲವು ಕಾಲ ಆ ಕಾಲದ ಲಾಹೊರ್ ಆಕಾಶವಾಣಿ ಕೇಂದ್ರದಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿತು. ಆಮೇಲೆ 1947ರಲ್ಲಿ ಭಾರತ ಪಾಕಿಸ್ತಾನ ವಿಭಜನೆಯಾದ ಮೇಲೆ ತೀವ್ರವಾಗಿ ನೊಂದು ಭಾರತದ ಭಾಗಕ್ಕೆ ವಲಸೆ ಬಂದರು.

‘ಪಿಂಜರ್’ ಕಾದಂಬರಿ ಬಗ್ಗೆ ಹೇಳುವುದಕ್ಕಿಂತ ಮೊದಲು ಅಂದರೆ ದೇಶ ವಿಭಜನೆಯ ಮುಂಚೆ ಇದ್ದ ಚಿತ್ರಣವನ್ನು ನೀಡಬೇಕು. 1947ಕ್ಕಿಂತ ಹಿಂದೆ ಅಂದರೆ ಪಾಕಿಸ್ತಾನ, ಬಾಂಗ್ಲಾದೇಶಗಳೆರಡೂ ಭಾರತದ ಭೂಭಾಗವೇ ಆಗಿದ್ದ ಕಾಲದಲ್ಲಿ ಈಗಿನ ಪಾಕಿಸ್ತಾನದ ಪೇಷಾವರದಿಂದ ಹಿಡಿದು ಬಾಂಗ್ಲಾದೇಶದ ಚಿತ್ತಗಾಂಗ್ ಅಷ್ಟೇ ಏಕೆ ಅಫ್ಘಾನಿಸ್ತಾನದ ಕಾಬುಲ್ ನಗರದಿಂದ ಬರ್ಮಾದ ಮಾಂಡಲೇಯವರೆಗೂ ಜನ ಯಾವುದೇ ಧರ್ಮದ ಅಡತಡೆಗಳಿಲ್ಲದೆ ಮುಕ್ತವಾಗಿ ಓಡಾಡುತ್ತಿದ್ದರು. ವ್ಯಾಪಾರ ಮಾಡುತ್ತಿದ್ದರು.

ರವೀಂದ್ರನಾಥ ಠಾಗೋರರ ‘ಕಾಬೂಲಿವಾಲಾ’ ಕತೆಯ ರಹಮಾನ್ ಕಾಬೂಲ್ ಹತ್ತಿರದ ಒಂದು ಹಳ್ಳಿಯಿಂದ ಕೋಲ್ಕತ್ತಾ ನಗರಕ್ಕೆ ಬಂದು ಉತ್ತುತ್ತಿ, ಬಾದಾಮಿ, ಪಿಸ್ತ ಇನ್ನು ಹಲವಾರು ಒಣಗಿಸಿದ ಹಣ್ಣುಗಳ ವ್ಯಾಪಾರ ಮಾಡುತ್ತಿದ್ದನು. ‘ವಿಗಡ ವಿಕ್ರಮರಾಯ’ ನಾಟಕ ಬರೆದ ಕನ್ನಡದ ಹೆಮ್ಮೆಯ ನಾಟಕಗಾರ ಸಂಸ ಈಗಿನ ಪಾಕಿಸ್ತಾನದ ಕ್ವೆಟ್ಟಾ, ಪೇಶಾವರ, ಲಾಹೋರ್ ನಗರಗಳಲ್ಲಿ ಇತ್ತ ಪೂರ್ವದಲ್ಲಿ ಬರ್ಮಾದ ಮಾಂಡಲೇ, ಬಾಂಗ್ಲಾದ, ಢಾಕಾ ಮತ್ತು ಚಿತ್ತಗಾಂಗ್ ನಗರಗಳಲ್ಲಿ ತಿರುಗಿ ಬಂದಿದ್ದೆ ಎಂದು ಹೇಳುತ್ತಾರೆ.

ಅಷ್ಟೇ ಏಕೆ ಸುಭಾಷ್ ಚಂದ್ರ ಬೋಸರು ಇಂಡಿಯನ್ ನ್ಯಾಷನಲ್ ಆರ್ಮಿ ಸ್ಥಾಪಿಸುವುದಕ್ಕಿಂತ ಮುಂಚೆ ಕೋಲ್ಕತ್ತಾದಿಂದ ಪೇಷಾವರಕ್ಕೆ ರೈಲಿನಲ್ಲಿ ಹೋಗಿ ಅಲ್ಲಿಂದ ಕಾಬುಲ್ ಮೂಲಕ ರಷ್ಯಾ ಸೇರಿ ನಂತರ ಜರ್ಮನಿ ತಲುಪಿದ್ದರು ಎಂದು ಇತಿಹಾಸ ಹೇಳುತ್ತದೆ.

ಈ ರೀತಿ ಸಹಬಾಳ್ವೆಯಿಂದ ಬದುಕುತ್ತಿದ್ದ ಜನ ಇದ್ದಕಿದ್ದ ಹಾಗೆ ದ್ವೇಷ ಕಾರಲು ಮುಖ್ಯ ಕಾರಣ ಧರ್ಮದ ಆಧಾರದ ದೇಶ ವಿಭಜನೆ ಎಂದು ಹೇಳಬಹುದು. ಆ ರೀತಿ ದ್ವೇಷದ ಬೆಂಕಿಯಲ್ಲಿ ನಂದಿದ ಪಾತ್ರವೇ ಈ ಕಾದಂಬರಿಯ ನಾಯಕಿ ಪುರೋ ಎಂದು ಹೇಳಬಹುದು. ಪುರೋ ಈಗಿನ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಹಿಂದು ಕುಟುಂಬವೊಂದರಲ್ಲಿ ಆ ಕಾಲದಲ್ಲಿ ಜನಿಸಿದ ಸುಮಾರು ಹದಿನೈದು ಹದಿನಾರು ವರ್ಷದ ಹುಡುಗಿ. ಅವಳದು ಚಿಕ್ಕ ಸಂಸಾರ. ಅವಳನ್ನು ಪಕ್ಕದ ಊರಿನ ಒಬ್ಬ ದೊಡ್ಡ ಜಮೀನ್ದಾರನ ಮಗನ ಜೊತೆ ಮದುವೆಯ ನಿಶ್ಚಿತಾರ್ಥವಾಗುತ್ತದೆ.

ಅವಳು ತನ್ನ ಮದುವೆಯ ಕನಸನ್ನು ಕಾಣುತ್ತ ಸ್ವಚ್ಛಂದವಾಗಿ ಹಕ್ಕಿಯ ಹಾಗೆ ಹಾರಾಡುತ್ತ ದಿನ ಸಾಗಿಸುತ್ತಿರುತ್ತಾಳೆ. ಅದೇ ಸಮಯಕ್ಕೆ ದೇಶ ವಿಭಜನೆಯ ಕರಾಳ ಛಾಯೆ ಮೂಡುತ್ತದೆ. ಮುಸ್ಲಿಮರಲ್ಲಿ ಹಿಂದೂಗಳ ಮೇಲೆ ಹಿಂದುಗಳಲ್ಲಿ ಮುಸ್ಲಿಮರ ಮೇಲೆ ನಂಬಿಕೆ ಕಳೆದು ಹೋಗುತ್ತದೆ. ಅಲ್ಲಿಯವರೆಗೂ ಸಹಬಾಳ್ವೆಯಿಂದ ಬದುಕುತ್ತಿದ್ದ ಜನ ಇದ್ದಕಿದ್ದ ಹಾಗೆ ದ್ವೇಷಕಾರಲು ಆರಂಭಿಸುತ್ತಾರೆ.

ಒಂದು ದಿನ ಪುರೋ ತನ್ನ ಜಮೀನಿಗೆ ಹೋಗಿ ಕಾಲುದಾರಿಯಲ್ಲಿ ಬರುತ್ತಿರುತ್ತಾಳೆ. ಅಲ್ಲೊಬ್ಬ ರಶೀದ್ ಎಂಬ ಮುಸ್ಲಿಂ ಯುವಕ ಅವಳನ್ನೇ ದಿಟ್ಟಿಸಿ ನೋಡುತ್ತಾ ಅವಳ ಕೈಯಿಡಿದು ಎಳೆಯುತ್ತಾನೆ. ಪುರೋ ಆ ತಕ್ಷಣ ಹೆದರಿದರೂ ಆ ವಿಷಯವನ್ನು ಅವಳು ಯಾರಿಗೂ ಹೇಳುವುದಿಲ್ಲ.

ಆನಂತರ ಇನ್ನೊಂದು ದಿನ ಪುರೋ ತನ್ನ ತಾಯಿಯ ಮಾತುಗಳನ್ನು ಕೇಳಿ ತನ್ನ ಹೊಲಕ್ಕೆ ಅವಳ ಚಿಕ್ಕ ತಂಗಿ ಜೊತೆ ಹೋಗಿ ಬೆಂಡೇಕಾಯಿ ಕಿತ್ತುತರಲು ಹೋಗಿರುತ್ತಾಳೆ. ಆ ದಿನ ಅವರ ಮನೆಗೆ ಅವಳ ಭಾವಿ ಪತಿ ಬರುವ ಸಂಭವ ಇರುತ್ತದೆ. ಆ ಭಾವಿ ಪತಿಯ ಮನೆಯವರಿಗೆ ಒಳ್ಳೆಯ ತರಕಾರಿಯ ಪಲ್ಯ ಮಾಡಲು ಪುರೋ ಅಮ್ಮ ಯೋಚಿಸಿರುತ್ತಾಳೆ. ಪುರೋ ಬೆಂಡೇಕಾಯಿ ಕಿತ್ತುಕೊಂಡು ತನ್ನ ತಂಗಿಯೊಡನೆ ಮನೆಗೆ ಬರುತ್ತಿರುತ್ತಾಳೆ. ಅದೇ ಸಮಯಕ್ಕೆ ಒಂದು ದೊಡ್ಡ ಕುದುರೆಯ ಮೇಲೆ ರಶೀದ್ ಯೋಧನ ಹಾಗೆ ವೇಗವಾಗಿ ಬಂದು ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಪುರೊಳ ಸೊಂಟಕ್ಕೆ ಕೈ ಹಾಕಿ ಅವಳನ್ನು ಅನಾಮತ್ತಾಗಿ ಕುದುರೆ ಮೇಲೆ ಕೂರಿಸಿಕೊಂಡು ಅಪರಿಸುತ್ತಾನೆ.

ಆ ನಂತರ ಪುರೋಗೆ ಏನಾಯಿತು? ಮೊದಲೇ ನಿಶ್ಚಯವಾಗಿದ್ದ ಅವಳ ಮದುವೆ ನಡೆಯಿತೇ? ರಶೀದ್ ಅವಳನ್ನು ಏನು ಮಾಡಿದ? ಈ ಹಮೀದಾ ಯಾರು? ಅವಳಿಗೂ ಪುರೋ ಏನಾಗಬೇಕು? ಇವನ್ನೆಲ್ಲಾ ತಿಳಿಯಲು ಕಾದಂಬರಿ ಓದಲೇ ಬೇಕು.

ದೇಶ ವಿಭಜನೆಯಾದ ಮೇಲೆ ಪುರೋ ಪಾಕಿಸ್ತಾನದಲ್ಲಿ ಉಳಿದುಕೊಂಡಳೆ ಅಥವಾ ಲೇಖಕಿ ಅಮೃತಾರ ತರಹ ಭಾರತಕ್ಕೆ ಬಂದು ನೆಲೆಸಿದಳೇ? ಅವಳ ಕುಟುಂಬ ಎಲ್ಲಿ ಹೋಯಿತು? ಇಲ್ಲಿ ಮೂಲಭೂತವಾದದ ಹಿಂದೆ ಬಿದ್ದು ಧರ್ಮವೇ ಮುಖ್ಯ ಎನ್ನುವವರಿಂದ ದೇಶ ವಿಭಜನೆಯಾದರೆ ಮಾನವೀಯತೆಯೇ ಮುಖ್ಯ ಎಂದು ಬದುಕಿದವರು ಹಲವರು.

ರಶೀದನ ಅತ್ತೆಯನ್ನು ಪುರೋಳ ಚಿಕ್ಕಪ್ಪ ಅಪಹರಿಸಿ ಅವಳನ್ನು ಅತ್ಯಾಚಾರ ಮಾಡಿ ಎರಡು ದಿನದ ನಂತರ ತಂದು ಅವಳ ಊರಿಗೆ ಬಿಟ್ಟು ಹೋಗಿರುತ್ತಾನೆ. ಆ ಸೇಡನ್ನು ತೀರಿಸಿಕೊಳ್ಳಲು ರಶೀದನನ್ನು ಪುರೋಳನ್ನು ಅಪಹರಿಸುವ ರೀತಿ ತಯಾರು ಮಾಡುತ್ತಾರೆ. ಅವಳನ್ನು ಅಪಹರಿಸಿದ ರಶೀದ ಮುಂದೆ ಏನಾದ? ಅವನ ಕುಟುಂಬ ಎಲ್ಲಿಗೆ ಹೋಯಿತು? ಇದನ್ನು ತಿಳಿಯಲು ಕಾದಂಬರಿ ಓದಬೇಕು. ಇದು ಅವಿಭಜಿತ ಭಾರತದ ಕತೆ.

ನುಡಿದಂತೆ ನಡೆದ ಅಮೃತಾ ಪ್ರೀತಮ್ ತಾವು ಬರೆದಂತೆ ಬದುಕಿದರು. ಧರ್ಮ ಧರ್ಮದ ಎಲ್ಲೇ ಮೀರಿ ಬಾಳ್ವೆ ನಡೆಸಿದರು. ಅಮೃತಾ ಅವರ ಮೊದಲ ಪತಿ ಪ್ರೀತಮ್ ಸಿಂಗ್ ಅವರ ತಂದೆ ಲಾಹೋರಿನಲ್ಲಿ ಪ್ರಖ್ಯಾತ ಸಿದ್ಧ ಉಡುಪು ಮಾರಾಟಗಾರರಾಗಿದ್ದರು. ಲಾಹೋರಿನ ಪ್ರಖ್ಯಾತ ಅನಾರಕಲಿ ಬಜಾರಿನಲ್ಲಿ ಅವರ ಬಹುದೊಡ್ಡ ಅಂಗಡಿ ಇತ್ತು. ದೇಶ ವಿಭಜನೆಯ ನಂತರ ಅಮೃತಾ ಮತ್ತು ಪ್ರೀತಮ್ ಸಿಂಗ್ ಭಾರತಕ್ಕೆ ಬಂದು ನೆಲೆಸಿದ್ದರು. ವಿವಾಹ ಬಂಧನದಿಂದ ನೆಮ್ಮದಿಯನ್ನು ಕಾಣದ ಅಮೃತಾ ಪ್ರೀತಮ್ ಅವರನ್ನು ಬಿಟ್ಟು 1960ರಲ್ಲಿ ಖ್ಯಾತ ಕವಿ ಸಾಹಿರ್ ಲುಧಿಯಾನ್ವಿ (ಅಬ್ದುಲ್ ಹಾಯೀ) ಅವರೊಂದಿಗೆ ಒಂದೇ ಮನೆಯಲ್ಲಿ ಜೀವಿಸುತ್ತಿದ್ದರು. ಇದನ್ನೆಲ್ಲಾ ಅವರು ತಮ್ಮ ಆತ್ಮಚರಿತ್ರೆ “ರಸೀದಿ ಟಿಕೆಟ್” ನಲ್ಲಿ ಬರೆದಿದ್ದಾರೆ ಎಂದು ತಿಳಿದು ಬರುತ್ತದೆ.

ಯಾವಾಗ ಕವಿ ಸಾಹಿರ್ ಲುಧಿಯಾನ್ವಿ ಬದುಕಲ್ಲಿ ಇನ್ನೊಬ್ಬ ಮಹಿಳೆ ಪ್ರವೇಶಿಸಿದಳೋ ಆಗ ಅಮೃತಾ ಅವರಿಂದ ಕೂಡ ದೂರವಾದರು. ಆ ಸಮಯಕ್ಕೆ ಇನ್ನೊಬ್ಬ ಹೆಸರಾಂತ ಬರಹಗಾರ ಇಮ್ರೊಜ್ ಅವರಲ್ಲಿ ಸಂಗಾತಿಯಾಗಿ ನೆಮ್ಮದಿ ಕಂಡರು. ಅಮೃತಾ ಅವರು ತಮ್ಮ ಬದುಕಿನ ಅತ್ಯಮೂಲ್ಯ ಕೊನೆಯ ನಲವತ್ತು ವರ್ಷಗಳನ್ನು ಇಮ್ರೊಜ್ ರೊಂದಿಗೆ ದೆಹಲಿಯಲ್ಲಿ ಕಳೆದರು.

ಕಲಾವಿದರಾಗಿದ್ದ ಇಮ್ರೊಜ್ ಅಮೃತಾರ ಬಹುತೇಕ ಕೃತಿಗಳ ಮುಖಪುಟಗಳನ್ನು ರಚಿಸಿದ್ದರು ಎಂದು ತಿಳಿದು ಬರುತ್ತದೆ. ಅವರಿಬ್ಬರ ವೈಯುಕ್ತಿಕ ಬದುಕಿನ ಆತ್ಮಕತೆ “ಅಮೃತಾ ಇಮ್ರೊಜ್: ಎ ಲೌ ಸ್ಟೊರಿ” ಕೂಡ ಪ್ರಕಟವಾಗಿದೆ. ಅಮೃತಾ ಬಹುಕಾಲದ ಅನಾರೋಗ್ಯದಿಂದ ಕೋಮಾ ತಲುಪಿದರು.

ಅಮೃತಾರು ದೀರ್ಘವಾದ ನಿದ್ರಾವಸ್ಥೆಯಲ್ಲಿಯೇ ತಮ್ಮ 86ನೇ ವಯಸ್ಸಲ್ಲಿ, 2005ರಲ್ಲಿ ನಿಧನರಾದರು ಎಂದು ತಿಳಿದು ಬರುತ್ತದೆ. ಅಮೃತಾರ ಸಂಗಾತಿ ಇಮ್ರೊಜ್ ಗೆ ಈಗ 95ನೇ ವರ್ಷ. ಈಗ ಅಮೃತಾರ ಪುತ್ರಿ ಕಂಡ್ಲಾ, ಪುತ್ರ ನವರೋಜ್, ಸೊಸೆ ಅಲ್ಕಾ ಮತ್ತು ಮೊಮ್ಮಕ್ಕಳಾದ ಟೌರಸ್, ನೂರ್, ಅಮಾನ್ ಮತ್ತು ಶಿಲ್ಪಿ ಅವರ ಪರಂಪರೆಯನ್ನು ಉಳಿಸಿಕೊಂಡು ಹೋಗುತ್ತಿದ್ದಾರೆ.

ಇಂತಹ ಒಳ್ಳೆಯ ಕಾದಂಬರಿಯನ್ನು ಸಾಮಾನ್ಯ ಓದುಗರು ಕೂಡ ಸುಲಭವಾಗಿ ಓದುವ ಹಾಗೆ ಅನುವಾದ ಮಾಡಿರುವ ಲೇಖಕಿ ಎಲ್ ಸಿ ಸುಮಿತ್ರಾ ಅವರಿಗೆ ಮೊದಲು ಅಭಿನಂದನೆ ಸಲ್ಲಿಸಬೇಕು. ಈ ಕಾದಂಬರಿಯನ್ನು ನೀವು ಇನ್ನು ಓದಿರದಿದ್ದರೆ ಈಗಲಾದರೂ ಓದಬಹುದು.

November 24, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: