ಕೋರಿ ರೊಟ್ಟಿಯ ನಾಡಲ್ಲಿ ಖಡಕ್ ರೊಟ್ಟಿ…

‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ.

ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ.

ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ.

ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ ಸುಷ್ಮಿತಾ ‘ಮಣ್ಣಪಳ್ಳದ ಮೂಕಿಚಿತ್ರ’ದಲ್ಲಿ ಈ ಊರಿನ ಯಾರೂ ಕಾಣದ ಚಿತ್ರಗಳನ್ನು ಕಟ್ಟಿ ಕೊಡಲಿದ್ದಾರೆ.

ಅವಿಭಜಿತ ದಕ್ಷಿಣ ಕನ್ನಡದ ಭಾಗವಾಗಿರುವ ಮಣಿಪಾಲದಲ್ಲೂ ಕೋರಿ ರೊಟ್ಟಿಯ ಘಮ ಇದೆ. ಈ ಊರಿನಲ್ಲಿ ಹುಟ್ಟಿದವರಿಗೆ, ಬೆಳೆದವರಿಗೆ ಎಲ್ಲರಿಗೂ ಕೋರಿ ರೊಟ್ಟಿ ವಿಶೇಷ ಆಹಾರ ಪದ್ಧತಿಯ ಪ್ರಮುಖ ಭಾಗವೇ. ಇವರನ್ನು ಬಿಟ್ಟು, ಇಲ್ಲಿಗೆ ಬರುವವರೂ ಮಸಾಲೆಗಳ ನಡುವಿಂದ ಎದ್ದು ಬರುವ ಇದರ ರುಚಿಗೆ ಗಂಟು ಬಿದ್ದು ‘ಕೋರಿ ರೊಟ್ಟಿ’ಯನ್ನು ಹುಡುಕುತ್ತ ಹೋಟೆಲ್, ಪರಿಚಯಸ್ಥರ ಮನೆ ಅಂತೆಲ್ಲ ಅಲೆಯುವುದೂ ಹೊಸದಲ್ಲ. ಜೊತೆ ಜೊತೆಗೇ ಕುಚ್ಚಲಕ್ಕಿ ಅನ್ನ, ಮೀನು, ಕೋರಿ ಗಸಿ ಹೀಗೆ ಸ್ಥಳೀಯ ಪಾರಂಪರಿಕ ಖಾದ್ಯಗಳು ಒಂದೆಡೆ ಆದರೆ, ಇಟಾಲಿಯನ್, ಚೈನೀಸ್, ಮೆಕ್ಸಿಕನ್ ಅಂತೆಲ್ಲ ಜನಪ್ರೀಯ ಖಾದ್ಯಗಳೂ ಇಲ್ಲಿಯವೇ ಎನ್ನುವಷ್ಟು ಮಣಿಪಾಲದ ಸಂಸ್ಕೃತಿಯ ಒಳ ಹೊಕ್ಕಿದೆ.

ಈ ನಾಲಿಗೆ, ಹೊಟ್ಟೆ ಮತ್ತು ಜೇಬಿನ ಸರಪಳಿಯಲ್ಲಿ ಬಿಸಿಲೂರಿನ ಖಡಕ್ ರೊಟ್ಟಿಯೂ ಜೋಡಣೆಯಾಗಿ ಮಣಿಪಾಲ ಮತ್ತು ಅಕ್ಕ ಪಕ್ಕ ತನ್ನ ಜಾಗ ಕಂಡುಕೊಳ್ಳುತ್ತಿದೆ. ಉತ್ತರದ ರೊಟ್ಟಿ ಮತ್ತು ಅದರ ಜೊತೆ ಪದಾರ್ಥಗಳು ತಮ್ಮ ಊರವರ ಜೊತೆಗೇ ಈ ಶಹರವನ್ನು ಹೊಕ್ಕಿತ್ತು. ಅವರ ಮನೆಯ ಒಲೆಯ ಮುಂದೆ ಅಷ್ಟೇ ಕೇಳಿಸುತ್ತಿದ್ದ ರೊಟ್ಟಿ ಬಡಿಯುವ ಸಪ್ಪಳ ಈಗ ಮಣಿಪಾಲದಿಂದ ಉಡುಪಿ ಬಸ್ ಸ್ಟ್ಯಾಂಡ್ ನ ಐದು ಕಿಲೋಮೀಟರಿನ ಮಧ್ಯದ ಬಹಳಷ್ಟು ಜಾಗಗಳಲ್ಲಿ ಕೇಳಿಯೇ ಕೇಳುತ್ತದೆ. 

ಸಂಜೆ ಬಿಸಿಲು ಆರುತ್ತಲೇ ಉಡುಪಿ ಬಸ್ ಸ್ಟ್ಯಾಂಡ್ ನ ವಿರುದ್ಧ ಬದಿಯ ಫುಟ್ ಪಾತ್ ನ ಉದ್ದಕ್ಕೂ ಹೆಂಗಸರು ಸಾಲು ಕಟ್ಟಿ ರೊಟ್ಟಿ ಬಡಿಯುತ್ತ ಕೂತಿರುತ್ತಾರೆ. ಬೆಳಗ್ಗೆ ಅದೇ ಜಾಗದಿಂದ ಹೊರಟ ನೂರಾರು ಕೂಲಿ ಕಾರ್ಮಿಕರು ದಣಿದು ವಾಪಸ್ಸು ಬರುತ್ತಲೇ ಬಿಸಿ ಬಿಸಿ ರೊಟ್ಟಿಯೊಂದಿಗೆ ತಯಾರಾಗಿರುತ್ತಾರೆ. ದಿನವಿಡೀ ಊರಿನ ಯಾವುದೋ ಯಾವುದೋ ಮೂಲೆಯಲ್ಲಿ ದುಡಿದು, ಹೊಟ್ಟೆಗೆ ಏನು ಸಿಕ್ಕಿತೋ ಅದನ್ನು ತಿಂದು ಬಂದ ಜೀವಗಳಿಗೆ ಸಂಜೆ ಸಮಾಧಾನವೀಯಲು ತಮ್ಮೂರಿನ ರೊಟ್ಟಿ ಮತ್ತು ಅದರ ಸಂಬಂಧಿ ಪಲ್ಯಗಳೇ ಆಗಬೇಕು.

ಇಲ್ಲಿಗೆ ಕೂಲಿ ಕೆಲಸವನ್ನು ನಂಬಿಕೊಂಡು ಕಾಲಿಟ್ಟ ಬಹು ಸಂಖ್ಯೆಯ ಬಯಲು ಸೀಮೆಯವರ ನಿತ್ಯ ಆಹಾರ ಜೋಳದ ರೊಟ್ಟಿ ಮತ್ತು ಕೆಂಪು ಚಟ್ನಿ. ಕುಚ್ಚಲಕ್ಕಿ ಅನ್ನಕ್ಕೆ ಒಗ್ಗಿಕೊಂಡ ಪ್ರದೇಶದಲ್ಲಿ ಖಡಕ್ ರೊಟ್ಟಿಯ ಸದ್ದು ತಂದದ್ದೂ ಅವರೇ. ಅವರ ಹಸಿವನ್ನು ನಂಬಿಯೇ ರೊಟ್ಟಿ ಮಾಡುವ ಕೈಗಳೂ ಇಲ್ಲಿ ದುಡಿಮೆಯನ್ನು ಆರಂಭಿಸಿದ್ದು.

ಇವರ ಉದ್ಯೋಗದಲ್ಲಿ ಕೈ ಬಲವೇ ಬಂಡವಾಳ. ಇನ್ನು ಹಸಿದ ಹೊಟ್ಟೆಗೆ ನಾಲಿಗೆ ರುಚಿ ಕೂಡಿಕೊಂಡೆ ಬಂದಿದ್ದು. ಅದರ ವಿಶ್ಲೇಷಣೆ ಈ ಸಂದರ್ಭದಲ್ಲಿ ಅನಗತ್ಯವೇ. ಬಗಲಲ್ಲಿ ತಿಂಗಳ ಹಸುಗೂಸಿರಲಿ, ಇಲ್ಲ ಕುಡಿದ ಗಂಡ ಪಕ್ಕದಲ್ಲೇ ಮಲಗಿರಲಿ ಅವರ ರೊಟ್ಟಿ ಬಡಿಯುವ ಬಿರುಸು ಮಾತ್ರ ಕಡಿಮೆಯಾಗುವುದಿಲ್ಲ. 

ಯಾವಾಗೋ ಒಮ್ಮೊಮ್ಮೆ ಖಾನಾವಳಿಗಳಲ್ಲಿ ರೊಟ್ಟಿ ಊಟ ಉಂಡು, ಅದು ಹಿತ ಅನ್ನಿಸಿಯೂ ಆ ಖಾದ್ಯ ಆ ಊರಿನದ್ದು ಮಾತ್ರ ಅಂದು ಊರಿಗೆ ವಾಪಸ್ಸು ಬರುತ್ತಿದ್ದ ನಾನು ಈ ಹೆಂಗಸರ ಒಲೆಯ ಮುಂದೆ ನಿಂತು ಬಾಯಲ್ಲಿ ನೀರು ತರಿಸಿಕೊಂಡದ್ದೂ ಇದೆ. ಊರು ಬಿಟ್ಟು ಬದುಕು ಕಟ್ಟಿಕೊಳ್ಳಲು ಮಣಿಪಾಲಕ್ಕೆ ಬಂದ ಕುಟುಂಬಗಳ ಹೆಣ್ಣುಮಕ್ಕಳೇ ಇವರೆಲ್ಲರೂ. ಇಲ್ಲಿಗೆ ಬಂದ ಮೇಲೆ ದುಡಿಮೆಗೆ ಒಂದಿಲ್ಲೊಂದು ದಾರಿ ಕಂಡುಕೊಳ್ಳುವುದು ಅವರಿಗೆ ಸೂಚಿತವೇ.

ದಿನಗೂಲಿ, ಮನೆಕೆಲಸ, ಗಾರ್ಮೆಂಟು, ತರಕಾರಿ ಮಾರುವುದು ಇವೆಲ್ಲಕ್ಕಿಂತ ಹಸಿದು ಬರುವವರ ಹಸಿವು ತಣಿಸಿ ತಾವು ಒಂದಿಷ್ಟು ಸಂಪಾದಿಸುವ ಎನ್ನುವುದು ಇವರ ಆಲೋಚನೆ. ಹಾಗೆ ನಿರ್ಧರಿಸಿಯೇ ತಮ್ಮ ನಿತ್ಯದ ಜಾಗದಲ್ಲಿ ಸಪಾಟು ಕಡಪದ ಕಲ್ಲನ್ನು ಇಟ್ಟುಕೊಂಡು, ನೀಟು ರೊಟ್ಟಿ ಮಾಡುತ್ತಾ ಬದುಕು ಕಟ್ಟಿಕೊಂಡಿದ್ದಾರೆ.

ಈರವ್ವ ಇದೇ ಸಾಲಿನಲ್ಲಿ ಕೊನೆಗೆ ಕೂರುವವಳು. ದಿನ ಒಂದೇ ಬಿರುಸಿನಿಂದ ರೊಟ್ಟಿ ಮಾಡಿ, ಕೇಳಿದವರಿಗೆಲ್ಲ ಪೇಪರ್ ಪೊಟ್ಟಣದಲ್ಲಿ ಬಡಿಸುವವಳು. ಸುಮಾರು ಐದು-ಆರು ವರ್ಷದ ಹಿಂದೆ ಶಾಲೆಯ ಪ್ರಾಜೆಕ್ಟ್ ನೆಪದಲ್ಲಿ ಈ ಸಾಲು ಹೆಂಗಸರನ್ನು ಮಾತನಾಡಿಸಲು ಹೋದಾಗ ಇವಳು ಸಿಕ್ಕಿದ್ದಳು. “ಎಲ್ಲರ ಗೋಳೇ ನನ್ನದು ಅದರಲ್ಲಿ ಹೊಸದು ಅಂತ ಏನಿದೆ? ಗಂಡ ವಾರದಲ್ಲಿ ಮೂರು ದಿನ ದುಡಿತಾನೆ ಮೂರು ದಿನ ಕುಡಿತಾನೆ. ಅವನ ನಂಬಿ ಇನ್ನೆಂತ ಮಾಡೋದು? ಅದಕ್ಕೆ ಬೆಳಗ್ಗೆ ಏನಾದರೂ ಚಿಕ್ಕ ಪುಟ್ಟ ಕೆಲಸಗಳನ್ನೆಲ್ಲ ಮಾಡೋದು, ಸಾಯಂಕಾಲ ಬಂದು ಇಲ್ಲಿ ಕೂರೋದು. ಎರಡೂ ಹೊತ್ತು ದುಡಿಮೆ ಆಗುತ್ತದೆ. ಬದುಕುವುದು ಸ್ವಲ್ಪ ಹಗುರ ಆಗುತ್ತದೆ” ಎಂದಳು.

ಹುಟ್ಟಿದಾಗಿಂದ ರೊಟ್ಟಿ ಊಟಕ್ಕೆ ಹೊಂದಿಕೊಂಡಿರುವ ಬಯಲು ಸೀಮೆಯ ದುಡಿಯುವ ವರ್ಗವೇ ನಮ್ಮ ಗ್ರಾಹಕರು. ಎಲ್ಲೋ ಅಪರೂಪಕ್ಕೊಮ್ಮೆ ನಿಮ್ಮಂತ ಊರಿನವರು ಬರುತ್ತಾರೆ. ಇದು ನಿಮಗೆಲ್ಲ ಅತೀ ಒಗ್ಗುವ ಆಹಾರ ಏನಲ್ಲ. ಇದನ್ನ ಅರಗಿಸಿಕೊಳ್ಳೋಕೆ ನೀರು ಕುಡಿದೆ ಸಾಕಾಗಿ ಬಿಡುತ್ತದೆ. ಆದರೆ ನಾವು ಕಲ್ಲು ದೇಹದವರಲ್ಲವೇ? ಬೆಳಗ್ಗಿನಿಂದ ಸಂಜೆವರೆಗೆ ದುಡಿವಾಗ ರೊಟ್ಟಿ ಇಲ್ಲದೆ ಇದ್ದರೆ ಶಕ್ತಿ  ಎಲ್ಲಿಂದ ಬಂದೀತು. ಮನೆಯಲ್ಲಿ ಆದರೂ ಇಷ್ಟು ಹೊತ್ತಿಗೆ ಹೀಗೆ ಹಚ್ಚಿದ ಓಲೆ ಮುಂದೆ ರೊಟ್ಟಿ ತಟ್ಟೋದೇ ಕೆಲಸ ಅಲ್ಲವಾ? ಅದನ್ನೇ ಇಲ್ಲಿ ಮಾಡಿದರೆ ಒಂದು ಐವತ್ತು ರೊಟ್ಟಿ ಜಾಸ್ತಿ ಆಗುತ್ತದಷ್ಟೆ. ಒಂದಿಷ್ಟು ಕಾಸಾದರೂ ಆಗುತ್ತೆ ಅಲ್ಲವಾ?  ಅಂದಿದ್ದಳು.

ದುಡಿಮೆಗೆ ಮುಷ್ಟಿಯಷ್ಟು ಜಾಗ ಸಿಕ್ಕರೂ ದುಡಿದೇ ಬಿಡುವೆ ಎನ್ನುವ ಗಟ್ಟಿಗರ ಗುಂಪು ಇದು. ದುಡಿಯಲಿಕ್ಕೆ ಹೊಸ ದಾರಿಗಳನ್ನು ಅನ್ವೇಷಿಸುತ್ತಾರಷ್ಟೆ. ಈರವ್ವನಿಗೆ ಗಂಡನ್ನ ಬೈದು, ಬಡಿದು ಏನು ಮಾಡಿಯೂ ಬದಲಾಯಿಸಲಿಕ್ಕೆ ಆಗಲಿಲ್ಲ ಅನ್ನುವ ನೋವಿದೆ. ಆದರೆ ಅದಕ್ಕೆ ಕೊರಗುತ್ತ ಕೂತರೆ ಏನಾದೀತು? ಮಕ್ಕಳಿದ್ದಾರೆ. ತನಗೂ ಬದುಕು ಅವಶ್ಯಕತೆಯೇ. ಅದಕ್ಕೆ ದುಡಿಮೆ ಎಲ್ಲರಿಗೂ ಬೇಕು.

“ಒಂದಿಷ್ಟು ಓದಿದ್ದರೆ ಯೂನಿವರ್ಸಿಟಿಯ ಒಳಗೆ ‘ಹೌಸ್ ಕೀಪಿಂಗ್ ಸ್ಟಾಫ್’ ಅಂತೆಲ್ಲ ಸೇರಬಹುದಿತ್ತು. ಸಮಯದ ದುಡಿಮೆಯ ಜೊತೆಗೆ ಜೀವನಕ್ಕೆ ಏನಾದ್ರೂ ಭದ್ರತೆ ಆದರೂ ಇರುತ್ತಿತ್ತು. ಶಾಲೆ ಮೆಟ್ಟಿಲೇ ಹತ್ತದ ತಪ್ಪಿಗೆ ಆ ಪುಣ್ಯವೂ ತನಗಿಲ್ಲ. ದಿನ ಪೂರ್ತಿ ಒಂದಾದ ಮೇಲೆ ಒಂದು ದುಡಿಮೆ. ಯಾವುದು ಕೈಗೆ ಹತ್ತುತ್ತದೋ ಅದನ್ನೇ ಸಾಧ್ಯವಾದಷ್ಟು ದಿನ ಮುಂದುವರಿಸೋದು” ಎಂದಳು.

ಹೀಗೆ ಸಂಜೆ ಆಗುತ್ತಲೇ ದುಡಿಮೆಗೆ ಇನ್ನೊಂದು ದಾರಿ ತೆರೆದುಕೊಂಡಿರುತ್ತದೆ. ಈ ಬಡವರ ಖಾನಾವಳಿಗಳನ್ನು ಮೀರಿ ಒಂದಿಷ್ಟು ಸ್ಥಿತಿವಂತರ ರೊಟ್ಟಿ ಮನೆಗಳು ಕೂಡ ಈ ಪ್ರದೇಶದಲ್ಲಿ ಆರಂಭ ಆಗಿದೆ ಆದರೂ ಈ ಗಟ್ಟಿಗಿತ್ತಿಯರ ಪೆಟ್ಟು ಉಂಡ, ಚಿಲ್ಲರೆಗಷ್ಟೇ ಸಿಗುತ್ತಿದ್ದ ಗಟ್ಟಿ ರೊಟ್ಟಿಗಳು ಕೂಲಿ ಕಾರ್ಮಿಕರ ಹಸಿವಿನ ಜೊತೆಗೇ ಆ ಹೆಣ್ಣು ಮಕ್ಕಳ ಹೊಟ್ಟೆಯನ್ನೂ ತುಂಬಿಸುತ್ತಿವೆ.

ಆಹಾರ ಪ್ರಕಾರಗಳ ಕೊಡು-ಕೊಳ್ಳುವಿಕೆಯಲ್ಲಿ ಮಣಿಪಾಲವು ಇವರ ದೆಸೆಯಿಂದ ರುಚಿಕಟ್ಟಾದ ಖಡಕ್ ರೊಟ್ಟಿಗಳನ್ನು ಇಲ್ಲಿಗೆ ಬರಮಾಡಿಕೊಂಡಿದೆ. ಆದರೆ ಮಣಿಪಾಲಿಗರಿಗೆ ಇನ್ನೂ ರೊಟ್ಟಿ ಊಟ ಇನ್ನೂ ಹೊರಗಿನ ಖಾದ್ಯವೇ. ಸಾವಿರಾರು ಖಾದ್ಯಗಳ ಪಟ್ಟಿಯಲ್ಲಿ ರುಚಿ ನೋಡಲಷ್ಟೇ ಸವಿಯುವನಂತಹದು.

ಬಹು ಬಗೆಯ ಖಾದ್ಯಗಳನ್ನು ತನ್ನದಾಗಿಸಿಕೊಂಡಿರುವ ಊರಲ್ಲಿ ಇದು ಅವರ ಅಪರೂಪದ ಆಯ್ಕೆಯಲ್ಲಿ ಬರುವಂತದ್ದು. ಆದರೆ ಬಯಲು ಸೀಮೆಯ ಜೀವಗಳಿಗೆ ರೊಟ್ಟಿ ಇಲ್ಲದೆ ರಟ್ಟೆಯಲ್ಲಿ ಶಕ್ತಿ ಎಲ್ಲಿಂದ ಬಂದೀತು ಅನ್ನೋದೇ ಮಾತು. ಅವರಿಗೆ ನಾಳಿನ ರೊಟ್ಟಿ ತಟ್ಟಲಿಕ್ಕಾದರೂ ಇವತ್ತು ರೊಟ್ಟಿ ಉಣ್ಣಲೇ ಬೇಕು ಅನ್ನಿ.

November 24, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಕೀರ್ತಿ

    ಕೋರಿ ರೊಟ್ಟಿಯ ನಾಡಲ್ಲಿ ಖಡಕ್ ರೊಟ್ಟಿ – ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: