ಅಮರೇಶ ಗಿಣಿವಾರರ ‘ಹಿಂಡೆಕುಳ್ಳು’

ಅವಿಭಜಿತ ರಾಯಚೂರು ಜಿಲ್ಲೆಯಲ್ಲಿ ಹಲವಾರು ಹೆಸರಾಂತ ಕತೆಗಾರರು ಜನಿಸಿದ್ದಾರೆ. ಬಡೇಸಾಬು ಪುರಾಣ ಬರೆದ ಶಾಂತರಸರು, ಯಾತನಾ ಶಿಬಿರ ಬರೆದ ಚಂದ್ರಕಾಂತ ಕುಸನೂರರು, ಹಂಗಿನರಮನೆಯ ಹೊರಗೆ ಕತೆ ಬರೆದ ರಾಜಶೇಖರ ನೀರಮಾನ್ವಿ, ಹವನ ಬರೆದ ಪ್ರೊ. ಮಲ್ಲಿಕಾರ್ಜುನ ಹಿರೇಮಠ, ಬೂಟುಗಾಲಿನ ಸದ್ದು ಬರೆದ ಜಂಬಣ್ಣ ಅಮರಚಿಂತ ನೆನಪಾಗುತ್ತಾರೆ. ಅದೇ ಮಣ್ಣಿನ ಅಮರೇಶ ನುಗಡೋಣಿ, ಚಿದಾನಂದ ಸಾಲಿ, ಮಹಾಂತೇಶ್ ನವಳಕಲ್ಮಠ ಜ್ಞಾಪಕಕ್ಕೆ ಬರುತ್ತಾರೆ.

2012ರ ಕೇಂದ್ರ ಸಾಹಿತ್ಯ ಅಕಾಡೆಮಿಯ “ಯುವ ಪುರಸ್ಕಾರ” ಪ್ರಶಸ್ತಿ ಪಡೆದ ಕವಿ ಆರಿಫ್ ರಾಜ, ಇತ್ತೀಚೆಗೆ ಮಂಜುನಾಯಕ ಚಳ್ಳೂರು ತಮ್ಮ ‘ಫೂ ಮತ್ತು ಇತರ ಕತೆಗಳು’ ಬರೆದು ನಾಡಿನಾದ್ಯಂತ ಹೆಸರು ಮಾಡಿದರು. ನಾಗರಾಜ ಕೋರಿಯವರ ತನುಬಿಂದಿಗೆ, ಮುದಿರಾಜ್ ಬಾಣದ್ ರವರ ಚಾನ್ನೆ, ಅನುವಾದ ಸಾಹಿತ್ಯದಲ್ಲಿ ಉತ್ತಮ ಹೆಸರು ಮಾಡುತ್ತಿರುವ ಅಜಯ್ ವರ್ಮಾ ಅಲ್ಲೂರಿ ಎಲ್ಲರೂ ರಾಯಚೂರು ಜಿಲ್ಲೆಯ ಹೊಸ ತಲೆಮಾರಿನ ಲೇಖಕರುಗಳು.

ಮೇಲಿನ ಎಲ್ಲಾ ಹೆಸರುಗಳ ಜೊತೆ ಈ ವರ್ಷ ಹೊಸದಾಗಿ ಕೇಳಿಬಂದ ಹೆಸರು ಅಮರೇಶ ಗಿಣಿವಾರರದು. ಅದು ಅವರ ಈ ಹಿಂಡೆಕುಳ್ಳು ಕಥಾಸಂಕಲನದ ಮೂಲಕ. ಈ ಹಿಂಡೆಕುಳ್ಳು ಕಥಾಸಂಕಲನ ಈಗಾಗಲೇ ಉತ್ತಮ ಪ್ರತಿಕ್ರಿಯೆ ಪಡೆದಿದೆ. ೨೦೧೯ರ ಸಂಗಾತ ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದೆ. ಇದರ ಮುನ್ನುಡಿಯನ್ನು ಬರೆದವರು ಸಾಹಿತಿ ಮತ್ತು ಪತ್ರಕರ್ತರು ಆಗಿರುವ ಜಿ.ಪಿ. ಬಸವರಾಜುರವರು. ಅವರು ಈ ಕಥಾಸಂಕಲನ ಸಾಹಿತ್ಯದ ಒಳತುಡಿತಗಳನ್ನು ಹಿಡಿದಿಡುವ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದ್ದಾರೆ. ಕತೆಗಾರ ಅಮರೇಶ ನುಗಡೋಣಿಯವರ ಮೊದಲ ಹೆಸರನ್ನು ಹೊಂದಿರುವ ಮತ್ತೊಬ್ಬ ಅಮರೇಶ ತಮ್ಮ ಉತ್ತಮ ಕತೆಗಳ ಮೂಲಕ ಹೊರಹೊಮ್ಮಿದ್ದಾರೆ ಎಂದು ಹೇಳಿದ್ದಾರೆ. ಅದು ಇಲ್ಲಿನ ಕತೆಗಳನ್ನು ಓದಿದವರಿಗೆ ಅತೀಶಯೋಕ್ತಿ ಎಂದು ಅನಿಸುವುದಿಲ್ಲ.

ಈ ಕಥಾಸಂಕಲನದಲ್ಲಿ ಹತ್ತು ಕತೆಗಳಿವೆ.

ಮೊದಲ ಕತೆ ಶಿವನ ಕುದುರೆ. ಈ ಕತೆ ಆ ಮಣ್ಣಿನ ಬಡತನ, ಹಸಿವು, ನೋವು, ಸ್ವಾಭಿಮಾನ ಇನ್ನೊಂದು ಕಡೆ  ಹಾದರ, ಜೂಜು, ಕಳ್ಳತನ, ಕಿಲಾಡಿತನ, ವಂಚನೆ, ಜಗಳ, ಜಟಾಪಟಿ, ಮಾರಾಮಾರಿ ಎಲ್ಲವನ್ನೂ ನಮ್ಮ ಮುಂದೆ ತೆರೆದಿಡುತ್ತದೆ. ಕತೆಯ ಕೊನೆಯಲ್ಲಿ ಮನುಷ್ಯ ಎಷ್ಟೇ ಗಟ್ಟಿಯಿದ್ದರೂ ಕೊನೆಗೆ ಅರೋಗ್ಯ ಹದಗೆಟ್ಟು ಯಾವ ಸ್ಥಿತಿಗೆ ತಲುಪುತ್ತಾನೆ ಎಂದು ತೋರಿಸುತ್ತದೆ.

ಹಿಂಡೆಕುಳ್ಳು ಈ ಕಥಾಸಂಕಲನದ ಶೀರ್ಷಿಕೆಯ ಕತೆ. ಈ ಸಂಕಲನದ ಉತ್ತಮ ಕತೆಯೂ ಎಂದು ಹೇಳಬಹುದು. ಕತೆಯ ಹಿನ್ನೆಲೆ, ರಚನೆ, ಭಾಷೆ ಎಲ್ಲವೂ ಅದ್ಭುತವಾಗಿ ಮತ್ತು ಸುಂದರವಾಗಿ ಮೂಡಿಬಂದಿದೆ. ಮನುಷ್ಯನ ಕ್ರೌರ್ಯ ಅದರಲ್ಲೂ ಪುರುಷನ ಕ್ರೌರ್ಯ ಮತ್ತು ಅದರಿಂದ ಆಗುವ ಅವನ ಅವನತಿಯನ್ನು ಕಾಣಬಹುದು. ಅವನ ಕ್ರೌರ್ಯಕ್ಕೆ ಮೀತಿಯೇ ಇರುವುದಿಲ್ಲ. ಅದರಿಂದ ನೊಂದ ಜೀವಗಳು ಅವನು ಅಸುನೀಗಿದರೆ ಸಾಕು ಎಂಬ ಭಾವನೆ ಹೊಂದುವಂತಾಗುತ್ತದೆ.

ಅವನು ಸತ್ತಾಗ ಅವನ ಹೆಣದ ಮುಖವನ್ನು ಬಿಟ್ಟು ಸಂಪೂರ್ಣವಾಗಿ ಪ್ಯಾಕ್ ಮಾಡಿರುತ್ತಾರೆ. ಅವನಿಗೆ ಯಾವುದೋ ಲೈಂಗಿಕ ರೋಗವಿರುವ ಸಂಭವವನ್ನು ಅದು ತೋರಿಸುತ್ತದೆ. ಅವನ ಹೆಣವನ್ನು ಮಣ್ಣು ಮಾಡಿಬಂದ ನಂತರ ಅವನ ತಿಥಿಗೆ ಅವನ ಸಮಾಧಿಯ ಮೇಲೆ ಏನಾದರೂ ಇಡಬೇಕು ಎಂದು ಊರಿನ ವ್ಯಕ್ತಿಯೊಬ್ಬ ಒತ್ತಾಯ ಮಾಡಿದಾಗ ಅವನ ಹೆಂಡತಿ ಅಲ್ಲಿ ಇಡುವ ವಸ್ತು ಕತೆಗೆ ಬೇರೊಂದು ಆಯಾಮವನ್ನೇ ಕೊಡುತ್ತದೆ. ಆ ರೀತಿ ಸಮಾಧಿಯ ಮೇಲೆ ಇಡುವ ಊಟ ತಿಂಡಿಗಳಿಗೆ ಹಿಂಡೆಕುಳ್ಳು ಎಂದು ಕರೆಯುತ್ತಾರೆ.

ನಶಿಪುಡಿ ಕತೆಯ ಬಗ್ಗೆ ಹೇಳುವುದಾದರೆ ಬಡತನ, ತುಳಿತಕ್ಕೆ ಒಳಪಟ್ಟ ಯುವಕರು ಮಾರ್ಕ್ಸ್ ವಾದ, ಮಾವೋವಾದ, ನಕ್ಸಲ್ ಸಿದ್ದಾಂತಗಳ ಕಡೆ ಆಕರ್ಷಿತರಾಗುವುದು ಸರ್ವೇ ಸಾಮಾನ್ಯ. ತನ್ನ ಮಗ ನಕ್ಸಲೈಟ್ ಆಗಿರುವದನ್ನು ಅರಿತುಕೊಳ್ಳಲು ಸಾಧ್ಯವಾಗದ ಮುಗ್ದ ತಾಯಿ. ಅವನು  ನಶಿಪುಡಿ ತಯಾರಿಸುವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆಂದು ತಿಳಿದು ನೆಮ್ಮದಿಯಿಂದ ಇದ್ದವಳಿಗೆ ಮಗನ ಸಾವಿನ ಸುದ್ದಿ ಟಿವಿಯ ಮೂಲಕ ತಿಳಿದು ಅವನನ್ನು ಪೊಲೀಸರು ಏಕೆ ಕೊಂದಿರುವುದು ಎಂದು ತಿಳಿಯಲಾಗದಂತಹ ಅನಕ್ಷರಸ್ಥೆ ತಾಯಿಯೊಬ್ಬಳ ಮನಕಲಕುವ ದೃಶ್ಯ ಬರುತ್ತದೆ.

ವಾಪಸ್ಸು ಬಂದ ಪತ್ರ ಕಥೆಯಲ್ಲಿ  ಪ್ರೇಮಿಯೊಬ್ಬ ತಾನು ಹಿಂದೆ ಇಷ್ಟಪಡುತ್ತಿದ್ದ ತನ್ನ ಗೆಳತಿ ಅಂದರೆ ಈಗ ವಿವಾಹಿತೆಯಾಗಿರುವ ಮಹಿಳೆಗೆ ಕರೆ ಮಾಡುತ್ತಾನೆ. ಅವಳ ಗಂಡ ತೆಲುಗು ಭಾಷೆಯಲ್ಲಿ ಹೇಳುವುದು ಕಥಾನಾಯಕನಿಗೆ ಏನೆಂದು ತಿಳಿಯುವುದಿಲ್ಲ ಅದು ಅರ್ಥವೂ ಆಗುವುದಿಲ್ಲ. ನಂತರ ಅವಳ ವಿಳಾಸಕ್ಕೆ ಪತ್ರ ಬರೆಯುತ್ತಾನೆ. ಆ ಪತ್ರಕ್ಕೆ ಉತ್ತರವೆಂಬಂತೆ ಟೆಲಿಗ್ರಾಮ್ ಬರುತ್ತದೆ. ಅದರಲ್ಲಿ ಅವನ ಗೆಳತಿ ಸತ್ತು ಹೋಗಿರುವ ಸುದ್ದಿ ಇರುತ್ತದೆ. ಇಲ್ಲಿ ಆ ಗೆಳತಿ ನಿಜವಾಗಲೂ ಸತ್ತು ಹೋಗಿದ್ದಾಳೋ ಅಥವಾ ಅವಳ ಗಂಡನ ದಬ್ಬಾಳಿಕೆಯಲ್ಲಿ ನಲುಗಿದ್ದಾಳೋ ತಿಳಿಯದು. ಕತೆ ನಮ್ಮ ಮುಂದೆ ದೊಡ್ಡ ಪ್ರಶ್ನೆಯನ್ನು ಇಡುತ್ತದೆ.  

ಈ ಕತೆಗಳು ನಮಗೆ ಆಲನಹಳ್ಳಿ ಶ್ರೀಕೃಷ್ಣರ ಅಥವಾ ಗೊರೂರರ ಕತೆಗಳ ರೀತಿ ಪ್ರಾಚೀನತೆ ಮತ್ತು ಆಧುನಿಕತೆಯ ಮುಖಾಮುಖಿಯಾಗಿಸಿದರೂ ಇಲ್ಲಿ ಬಡತನ, ಬಂಡಾಯ, ನೋವು, ಪ್ರೀತಿ, ಕಾಮ, ಹಸಿವು ಇವುಗಳೇ ನಮ್ಮ ಮುಂದೆ ಬಂದು ದೇವನೂರು ಮಹಾದೇವರ ಅಥವಾ ಬರಗೂರು ರಾಮಚಂದ್ರಪ್ಪನವರ ಕತೆಗಳನ್ನು ಜ್ಞಾಪಕಕ್ಕೆ ತರುತ್ತವೆ. ಇದನ್ನು ಪಾತ್ರಧಾರಿ ಕತೆಯಲ್ಲಿಯೂ ಕಾಣಬಹುದು.

ನರಿಮಳೆ ಕಥೆಯಲ್ಲಿಯೂ ಬಡತನ ನಮ್ಮ ಮುಂದೆ ತಾಂಡವವಾಡುತ್ತದೆ. ಇನ್ನೊಂದು ಕಡೆ ಕೊಬ್ಬಿದ ಗೌಡಶಾನಿ ಮತ್ತು ಗೌಡ ನಮ್ಮ ಮುಂದೆ ಬರುತ್ತಾರೆ. ತಾಯಿ ತನ್ನ ಸತ್ತ ಮಗುವನ್ನ ಹಳ್ಳಕ್ಕೆ ಹುಚ್ಚಿಯಾಗಿ ಬಿಡುವಾಗ ನಮ್ಮಲ್ಲಿ ನಮಗೆ ಅರಿಯದೆಯೇ ಕಣ್ಣೀರು ಬರುತ್ತದೆ.  

ಗೋಡೆಗಳ ಸೇಡು

ಅಣ್ಣ ತಮ್ಮಂದಿರ ನಡುವೆ ಏಳುವ ಗೋಡೆ ಅವರ ಕುಟುಂಬಗಳ ನಡುವೆ ಏಳುವ ಗೋಡೆಯಾಗಿ ಮಾರ್ಪಾಡಾಗುತ್ತದೆ. ಅಣ್ಣ ತಮ್ಮಂದಿರೆ ದಾಯಾದಿಗಳ ರೀತಿ ಕಾದಾಡುವಂತಾಗುತ್ತದೆ. ಅದು ಕೇವಲ ಒಂದು ಕುರಿ ಮರಿಯ ವಿಷಯವಾಗಿ ಎಂದು ಹೇಳಬಹುದು.

ಹಳ್ಳ ತೋರಿಸಿದರು ಕತೆಯಲ್ಲಿ ಅನಕ್ಷರಸ್ಥ ತಾಯಿ ಮಗನಿಗೆ ಅಧಿಕಾರಿಗಳು ಮೋಸದ ಮೂಲಕ ಅವರ ಜಮೀನನ್ನು ಕಿತ್ತುಕೊಳ್ಳಲು ಪ್ರಯತ್ನಿಸುವುದನ್ನು ಕಾಣಬಹುದು.

ಮಾಯಮ್ಮ ಮತ್ತು ಮನೆ ನಂಬರ್ ೮೪ ಕತೆಗಳು ಬಡತನದ ಬೇರೊಂದು ರೂಪವನ್ನು ನಮ್ಮ ಮುಂದೆ ತೋರಿಸುತ್ತವೆ.

ಈ ಕಥಾಸಂಕಲನಕ್ಕೆ ಲೇಖಕರುಗಳಾದ ಡಾ. ರಹಮತ್ ತರೀಕೆರೆ, ಕೇಶವ ಮಳಗಿಯವರು ಮತ್ತು ಲೇಖಕಿ ವಿನಯಾ ಒಕ್ಕುಂದ ಅವರು ಬೆನ್ನುಡಿ ಬರೆದಿದ್ದಾರೆ. ಈ ಮೂರು ಜನರು ಹಿಂಡೆಕುಳ್ಳು ಕತೆಯ ಬಗ್ಗೆ ಮತ್ತು ಕಥಾಸಂಕಲನದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಇಲ್ಲಿನ ಕತೆಗಳ ನಿರೂಪಣೆ ಮತ್ತು ಭಾಷೆ ಅದ್ಭುತವಾಗಿ ಮೂಡಿಬಂದಿದೆ. ಶಾಂತರಸರ ಬಡೇಸಾಬು ಪುರಾಣ, ಚಂದ್ರಕಾಂತ ಕುಸನೂರರ, ಯಾತನಾ ಶಿಬಿರದಲ್ಲೂ, ಅಮರೇಶ ನುಗಡೋಣಿಯವರ ತಮಂಧದ ಕೇಡು, ಸವಾರಿ ಕತೆಗಳಲ್ಲಿ ಬಡತನ, ಶೋಷಣೆ, ಹಸಿವು, ಕಾಮ, ಗ್ರಾಮೀಣ ಬದುಕು ಎಲ್ಲವೂ ಬರುತ್ತವೆ. ಇದು ಅಮರೇಶ ಗಿಣಿವಾರರ ಮೊದಲ ಕಥಾ ಸಂಕಲನವಾಗಿರುವುದರಿಂದ ಮುಂದಿನ ಕತೆಗಳಲ್ಲಿ ಅಥವಾ ಕಾದಂಬರಿಗಳಲ್ಲಿ ಹೊಸ ವಸ್ತುವನ್ನು ಆಯ್ಕೆ ಮಾಡಿಕೊಂಡರೆ ಅವರಿಗೆ ಇನ್ನು ಹೆಚ್ಚು ಯಶಸ್ಸು ಸಿಗುತ್ತದೆ ಎಂದು ನನ್ನ ಅಭಿಪ್ರಾಯ.

February 2, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Manjunath Kulkarni

    Namaskara, Chandrakanta Kusnoor is from Gulbarga District and not Raichoor.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: