ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಭಿಜ್ಞಾ ಪಿ ಎಮ್ ಗೌಡ ಕವಿತೆ- ಸದ್ದಡಗಿ ಕುಳಿತಿದೆ ನ್ಯಾಯ…

ಅಭಿಜ್ಞಾ ಪಿ ಎಮ್ ಗೌಡ

ನಿರ್ಭೀತಿ ನಿರ್ಮುಕ್ತ
ನಿರ್ಭಯಗಳೆಲ್ಲ ಅಸದೃಶ್ಯ
ಹೆತ್ತೊಡಲ ಅಳಲು
ಅತಿವೃಷ್ಠಿ ಅನಾವೃಷ್ಠಿಗಳಂತೆ
ಭೀಭತ್ಸ ಭೋರ್ಗರೆತ
ಅನಾವರಣದಂತೆ
ಒಳಗೊಳಗೆ ಹೆಣ್ಕೂಸುಗಳ
ನರಳುತಿರುವ ಮೊರೆತ…

ನಿಸ್ತೇಜ ಸೃಷ್ಟಿಸಿದೆ
ನಿರ್ಲಜ್ಜೆಗಳ ವರ್ತನೆ
ಬೇಲಿಯೆ ಎದ್ದು ಹೊಲ ಮೇಯ್ದಂತೆ
ತಳಭಾಗವೆ ಕೊಳೆತಿರಾಗ
ಮೇಲ್ಭಾಗ ಚಿಗುರಲುಂಟೆ.?
ಅತಿರೇಕದ ವರ್ತನೆ
ಅವಮಾನಗಳಾಗುತಿದ್ದರು
ಕಪ್ಪುಹಣವೆಂಬ ಕಾಲ್ಚೆಂಡಿನ
ಕೈಚಳಕದಡಿ ಅನ್ಯಾಯಗಳು ನಿಶ್ಯಬ್ಧ
ನ್ಯಾಯಗಳು ಮೌನದಲಿ ಬಂಧ..!

ಶಿಷ್ಟರ ರಕ್ಷಕ ದುಷ್ಟರ
ಭಕ್ಷಕರಾಗಬೇಕಾದವರು
ನೀಚಕೃತ್ಯದಲಿ ತೊಡಗಿದರೆ
ಉಂಟೆ ಕಲಿಕಾರ್ಥಿಗಳಿಗೆ ರಕ್ಷಣೆ..?
ಪೋಷಕರಿಗುಂಟೆ ನೆಮ್ಮದಿ.?
ಸುಜ್ಞಾನಿಗಳೆ ನೀಚಕೃತ್ಯ
ಎಸಗುವಷ್ಟು ಅಜ್ಞಾನಿಗಳಾದಾಗ
ಸಮಾಜಕ್ಕೇನಿದೆ ಅವರಿಂದ
ಸಂದೇಶ.?
ನಿಜಕ್ಕೂ ಇದೊಂದು
ಅತ್ಯಂತ ನಿರ್ಘೃಣವೆ ಸರಿ.!

ಸಚ್ಚಾರಿತ್ರವೆಂಬ
ಮುಖವಾಡಗಳ ಅನಾವರಣ
ಸದ್ಗುಣಗಳ್ಹಿಂದೆ
ದುರ್ಗುಣಗಳ ರೌದ್ರಾವತಾರ.!
ಅಲ್ಲಲ್ಲಿ ಆರ್ಭಟಿಸುತಿದೆ
ಒಳ್ಳೆತನವೆಂಬ
ಸೋಗಿನಲ್ಲಿರುವವರ ದುಷ್ಕೃತ್ಯ
ಬುಗಿಲೇಳುತಿರುವ ಕಾಮವೆಂಬ
ಪೈಶಾಚಿಕತೆಯ ತುಲಾಭಾರದ
ತುಳಿತದಡಿ ಹೈರಾಣಾಗುತಿವೆ
ಹೆಣ್ಕೂಸುಗಳು..!

ಅದ್ಯಾವಾಗ
ನಿರ್ಗಮನವೊ ಅವರೊಳಗಿರೊ
ಈ ಕಾಮತೃಷೆಯೆಂಬ ಪಿಡುಗು
ಭ್ರಷ್ಟತೆಗಳೆ ತುಳುಕುತಿವೆ
ದೈವ ರೂಪವೆಂದು
ಬಿಂಬಿಸಿದವರ ನಿಕೃಷ್ಟ ವರ್ತನೆ
ಅಸಹ್ಯವೆನಿಸುತಿವೆ
ಕಳ್ಳ ಕಪಟರಿಂದಲೆ ನಿಷ್ಕಲ್ಮಶ
ನಿಸ್ವಾರ್ಥಿಗಳಿಗಿಲ್ಲ ಬೆಲೆ..

ಹಣ ಅಧಿಕಾರದಿಂದ
ಎಲ್ಲವೂ ಖುಲಾಸು
ಸಮಾಜವನ್ನೊಮ್ಮೆ ಅವಲೋಕಿಸಿ
ಮನುಷ್ಯತ್ವದಿಂದಿಡಿದು
ಕೊನೆಗೆ ಜೀವ ಜೀವನದವರೆಗೂ
ಎಲ್ಲವೂ ಮಾರಾಟಕ್ಕಿವೆ
ಇನ್ನೆಲ್ಲಿದೆ ಘನತೆ ಗೌರವಗಳು
ಸರ್ವವು ಹಣಮದ
ಅಧಿಕಾರದ ಮದ
ದನಿಯೆತ್ತುವವರಿಲ್ಲದೆ
ಹೆಣ್ಕೂಸುಗಳ ಕೂಗು ವ್ಯರ್ಥ.

‍ಲೇಖಕರು Admin

4 September, 2022

1 Comment

  1. Shivanand.Ramdurg

    Super….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading