ಸಿ ಎಸ್ ಭೀಮರಾಯ ಓದಿದ ‘ಮೊಲೆವಾಲು ನಂಜಾಗಿ’

ಸಿ ಎಸ್ ಭೀಮರಾಯ

ಪ್ರೊ. ಮಲ್ಲಿಕಾರ್ಜುನ ಹಿರೇಮಠವರು ನವ್ಯೋತ್ತರ ಕನ್ನಡದ ಶ್ರೇಷ್ಠ ಲೇಖಕರಲ್ಲಿ ಒಬ್ಬರು. ಕಥೆ, ಕಾವ್ಯ, ಕಾದಂಬರಿ, ವಿಮರ್ಶೆ, ಪ್ರಬಂಧ, ಪ್ರವಾಸಕಥನ ಮತ್ತು ಅನುವಾದ -ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿಗೈದ ಹಿರೇಮಠ ಕಳೆದ ನಾಲ್ಕು ದಶಕಗಳಿಂದ ಹಲವು ಮಹತ್ವದ ಕೃತಿಗಳನ್ನು ಬರೆದು ಗಂಭೀರ ಸಾಹಿತ್ಯಾಸಕ್ತರ ಗಮನ ಸೆಳೆದ ಪ್ರತಿಭಾನ್ವಿತ ಲೇಖಕರು. ಅವರು ತಮ್ಮ ಬರಹದ ಪ್ರಾಮಾಣಿಕತೆ, ಪ್ರಬುದ್ಧತೆ ಹಾಗೂ ಕಲಾತ್ಮಕತೆಗಳಿಂದಾಗಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಹತ್ವದ ಸ್ಥಾನ ಪಡೆದಿದ್ದಾರೆ. ಹಿರೇಮಠ ಬರೆದದ್ದು ಕಡಿಮೆ. ಆದರೆ ಬರಹದ ಗಾತ್ರವೊಂದೇ ಒಬ್ಬ ಲೇಖಕನ ಅಥವಾ ಲೇಖಕಿಯ ಪ್ರತಿಭೆ-ಸಾಧನೆಯನ್ನು ನಿರ್ಧರಿಸುವುದಿಲ್ಲವೆಂಬ ಮಾತು ಮಲ್ಲಿಕಾರ್ಜುನ ಹಿರೇಮಠರ ವಿಷಯದಲ್ಲಿ ನಿಜವಾಗಿದೆ.

ಪ್ರಸ್ತುತ ‘ಮೊಲೆವಾಲು ನಂಜಾಗಿ’ ಪ್ರೊ. ಮಲ್ಲಿಕಾರ್ಜುನ ಹಿರೇಮಠರ ದ್ವಿತೀಯ ಕಥಾಸಂಕಲನ. ಇದು ಒಟ್ಟು ಎಂಟು ಕಥೆಗಳನ್ನು ಒಳಗೊಂಡಿದೆ. ಸಣ್ಣಕಥೆಗಳನ್ನು ಕಾದಂಬರಿಗಳ೦ತೆಯೇ ಗಂಭೀರ ಅಭಿವ್ಯಕ್ತಿ ಮಾಧ್ಯಮದಂತೆ ಹೆಣೆದ ಕಥೆಗಳು ಈ ಸಂಕಲನದಲ್ಲಿವೆ. ಈ ಕಥಾಸಂಕಲನದ ಕಥೆಗಳು ಸಣ್ಣಕಥೆಯ ಪ್ರಕಾರದಲ್ಲಿ ಹೊಸ ಜಾಡನ್ನು ತೆರೆಯುವ, ಹೊಸ ತಿರುವನ್ನು ಪಡೆಯುವ ಹವಣಿಕೆಯಲ್ಲಿರುವ ಕಥೆಗಳೆಂದು ಗುರುತಿಸಬಹುದು. ಈ ಲೇಖಕರ ಕಥೆಕಟ್ಟುವ ರೀತಿಯನ್ನು, ಕಲೆಗಾರಿಕೆಯನ್ನು, ವೈಶಿಷ್ಟ್ರ್ಯವನ್ನು ಈ ಕಥೆಗಳು ಮಾಡಿಕೊಡುತ್ತವೆ. ಮನುಷ್ಯ ಸಂಬ೦ಧಗಳ ಕ್ಲಿಷ್ಟತೆ, ಅನಾಥ ಪ್ರಜ್ಞೆ, ದಿನನಿತ್ಯದ ಬದುಕಿನ ಸಂಕಟ, ಏಕತಾನತೆಗಳು ಈ ಸಂಕಲನದ ಕಥೆಗಳಲ್ಲಿ ಮಡುಗಟ್ಟಿವೆ. ಅಲ್ಲಲ್ಲಿ ಹಾಸ್ಯದ ನವಿರು ಎಳೆಗಳಿವೆ.

ಕಥನ ತಂತ್ರದಲ್ಲಿಯೂ ವೈವಿಧ್ಯವಿದೆ. ಮಲ್ಲಿಕಾರ್ಜುನ ಹಿರೇಮಠರು ಈವರೆಗೆ ಬರೆದದ್ದು ಕೆಲವೇ ಕಥೆಗಳಾದರೂ ಅನುಭವಗಳನ್ನು ತಾತ್ವಿಕ,ವೈಚಾರಿಕ ಮತ್ತು ಮಾನವೀಯತೆಯ ಚೌಕಟ್ಟಿನಲ್ಲಿ ನೋಡುವ ತೀವ್ರ ಹಂಬಲವುಳ್ಳ ಬರವಣಿಗೆ ಅವರದಾಗಿದೆ. ಆಧುನಿಕ ಜೀವನದ ಪರಿವರ್ತಿತ ರೂಪವನ್ನು ಗ್ರಹಿಸಲು ಇದ್ದ ಕಾರಣವೊಂದನ್ನು ಲೇಖಕರು ಈ ಕಥಾಸಂಕಲನದಲ್ಲಿ ಮತ್ತಷ್ಟು ಹೆಚ್ಚು ವಿಸ್ತರಿಸಿಕೊಂಡಿದ್ದು ಅವರ ಸೃಜನಶೀಲ ಕಲಾವಂತಿಕೆಗೆ ಸಾಕ್ಷಿಯಾಗುತ್ತದೆ.

ಆಸಕ್ತಿ ಹುಟ್ಟಿಸುವ ಕಥೆ, ಕುತೂಹಲ ಕೆರಳಿಸುವ ಘಟನೆ, ಆಲಂಕಾರಿಕತೆಯಿ೦ದ ಕೂಡಿದ ಭಾಷೆ-ಇತ್ಯಾದಿ ಸಾಂಪ್ರದಾಯಿಕವಾಗಿ ಬಂದಿರುವ ಕಥಾಪರಿಕರಗಳನ್ನು ಉದ್ದೇಶಪೂರ್ವಕವೆಂಬ೦ತೆ ನಿರಾಕರಿಸಿ ಮನುಷ್ಯನ ಮನಸ್ಸಿನ ಲಯಗತಿಯನ್ನು ಅನುಸರಿಸಿ ಸಾಗುವ ಆತ್ಮಗತ ಸ್ವಗತದ ರೀತಿಯ ಮಲ್ಲಿಕಾರ್ಜುನ ಹಿರೇಮಠರ ಬರವಣಿಗೆ ವಿಶಿಷ್ಟ ರೀತಿಯದಾಗಿದೆ. ಆದ್ದರಿಂದ ಇಂಥ ಕಥೆಗಳಿಗೆ ತನ್ನ ಮನಸ್ಸನ್ನು ಒಪ್ಪಿಸಿಕೊಳ್ಳುವ ಬಗೆಯನ್ನು ಕುರಿತಂಥ ಸಮಸ್ಯೆಯನ್ನೇ ಓದುಗ ಪ್ರಪ್ರಥಮವಾಗಿ ಬಗೆಹರಿಸಿಕೊಳ್ಳಬೇಕಾಗಿರುವುದು ಅವಶ್ಯಕ.

‘ಒಂದು ಎರಡು ಬಾಳೆಲೆ ಹರಡು’ ಕಥೆ ಸಮಕಾಲೀನ ಜಗತ್ತಿನ ವೈರುಧ್ಯಗಳನ್ನು ಕಟ್ಟಿಕೊಡುತ್ತದೆ. ಈರಪ್ಪ ಮಾಸ್ತರ ತಮ್ಮ ಇತಿಮಿತಿಗಳ ವ್ಯಾಪ್ತಿಯಲ್ಲಿಯೇ ಬದುಕು ನಡೆಸಲು ಹವಣಿಸುತ್ತಾರೆ. ಆದರೆ ಈರಪ್ಪ ಮಾಸ್ತರ ಹೆಂಡತಿ ತನ್ನ ಗಂಡನ ಮನಸ್ಸನ್ನು ಚೆನ್ನಾಗಿ ತಿಳಿದುಕೊಳ್ಳಲಿಲ್ಲ, ತಿಳಿಯಬೇಕೆಂದು ಅಪೇಕ್ಷಿಸಲಿಲ್ಲ, ಪ್ರಯತ್ನ ಕೂಡ ಮಾಡಲಿಲ್ಲ. ಈರಪ್ಪ ಮಾಸ್ತರ ಒಂದು ರೀತಿಯಲ್ಲಿ ನಡೆಯಬೇಕೆಂದರೆ, ಅವಳು ಬೇರೊಂದು ರೀತಿಯಲ್ಲಿ ನಡೆದು ಗಂಡನಿಗೆ ಬೇಸರವನ್ನುಂಟು ಮಾಡುತ್ತಾಳೆ. ಇದರಿಂದ ನೆಮ್ಮದಿಯ ಕುಟುಂಬದಲ್ಲಿ ಆಶಾಂತಿಯ ಹೊಗೆಯಾಡುತ್ತದೆ. ಈ ಅಶಾಂತಿಗೆ ಪ್ರಮುಖ ಕಾರಣ ಹಣವನ್ನು ದ್ವಿಗುಣಗೊಳಿಸಿಕೊಡುವ ಕಿಟ್ಟಪ್ಪನ ತಂತ್ರಗಾರಿಕೆ. ಕಿಟ್ಟಪ್ಪ ಇಡೀ ಊರಿಗೆ ಮೋಸ ಮಾಡಿದವನು. ಅವನು ಮಾಡುವ ಮೋಸದ ಕಾರ್ಯಕ್ಕೆ ಇಡೀ ಊರು ಮರುಳಾಗಿತ್ತು. ಈರಪ್ಪ ಮಾಸ್ತರರು ಸಹ ತಮ್ಮ ಹೆಂಡಿತಿಯ ಅತಿಯಾದ ಆಸೆಯನ್ನು ಈಡೇರಿಸಲು ಅವಳ ಬಿಲವಾರಗಳನ್ನು ಒತ್ತಿ ಇಟ್ಟು ಹಣ ತಂದು ಕಿಟ್ಟಪ್ಪನ ದಂಧೆಯಲ್ಲಿ ಹಣ ತೊಡಗಿಸುತ್ತಾರೆ. ಆದರೆ ಮಾಸ್ತರರ ದುರ್ದೈವವೋ ಎಂಬ೦ತೆ ಕಿಟ್ಟಪ್ಪ ಸತ್ತು ಮಾಸ್ತರರ ಮತ್ತು ಅವರ ಹೆಂಡತಿಯ ಕನಸುಗಳು ಕಮರಿ ಹೋಗುತ್ತವೆ.ಇದ್ದದ್ದರಲ್ಲಿ ಸುಖ ಮತ್ತು ತೃಪ್ತಿ ಕಾಣದೆ ಇಲ್ಲದ್ದಕ್ಕಾಗಿ ಹಂಬಲಿಸಿ ವ್ಯಥೆ ಪಡುವ ಈ ದಂಪತಿಗಳ ಮನಸ್ಸಿನ ಸ್ಥಿತಿಗತಿಗಳ ಚಿತ್ರ ಈ ಕಥೆಯಲ್ಲಿ ಪರಿಣಾಮಕಾರಿಯಾಗಿ ಅನಾವರಣಗೊಂಡಿದೆ.

ಈ ಸಂಕಲನದ ಅತ್ಯಂತ ಸಂಕೀರ್ಣ ಕಥೆ ‘ತಯಾರಿ’. ಈ ಕಥೆ ಹೆಣ್ಣಿನ ಅಂತರ೦ಗದ ಶೋಧನೆಗೆ ಕನ್ನಡಿ ಹಿಡಿಯುತ್ತದೆ. ಪುರುಷನ ಗತ್ತು ,ಯಜಮಾನಿಕೆಯ ದರ್ಪದಡಿ ಹೊಸಕಿ ಹೋಗುವ ಮಮತಾಳ ದುರಂತವನ್ನು ಈ ಕಥೆ ಬಹು ಸೂಕ್ಷ್ಮವಾಗಿ ಚಿತ್ರಿಸುತ್ತದೆ. ಲೇಖಕರು ಮಮತಾಳ ಅಳಲನ್ನು ಅತ್ಯಂತ ಸಶಕ್ತವಾಗಿ ಹಿಡಿದಿಟ್ಟಿದ್ದಾರೆ. ಕೌಟುಂಬಿಕ ಜೀವನದ ಅನಂತ ಸ್ವರೂಪದ ಕುರಿತು ಇರುವ ಅರಿವಿನಲ್ಲಿ ತೊಳಲಾಡುವ ಮಮತಾ ವಿಧಿಯ ಆಟಕ್ಕೆ ಬಲಿಯಾಗುತ್ತಾಳೆ. ಅವಳು ಬದುಕಿನಲ್ಲಿ ಮತ್ತೆ ಮತ್ತೆ ಪೆಟ್ಟು ತಿನ್ನುತ್ತಾಳೆ. ಅವಳದು ಅಸಹಾಯಕ ಮತ್ತು ದುರಂತ ಬದುಕು. ಸುಖ ಅವಳ ಬದುಕಿನಲ್ಲಿ ಸುಳಿಯುವುದೇ ಇಲ್ಲ. ಮಮತಾ ಜೀವನದಲ್ಲಿ ತನ್ನ ಗಂಡನನ್ನು ಕಳೆದುಕೊಂಡು ದಾರುಣ ಸ್ಥಿತಿಗೆ ತಲುಪುತ್ತಾಳೆ. ಗಂಡ ರವಿಯ ಸಾವಿನಿಂದಾಗಿ ಮಮತಾಳ ಹೋರಾಟದ ಬದುಕಿಗೆ ಅರ್ಥವಿಲ್ಲದಂತಾಗುತ್ತದೆ. ಸಂಬAಧಗಳ ತಾಕಲಾಟ, ಅವಮಾನ,ಅನಿವಾರ್ಯತೆ, ಗಂಡನ ಮನೆಯವರ ಹಿಂಸೆಗಳನ್ನು ಅವಳು ದಿಟ್ಟವಾಗಿ ಎದುರಿಸಿದ ಹಾಗೂ ಎಲ್ಲ ಸಂಕಟಗಳ ನಡುವೆಯೂ ಬದುಕನ್ನು ಪ್ರೀತಿಸಿದ ಅನನ್ಯ ಜೀವದ ಕಥೆಯಾಗಿದೆ.

ಈ ಸಂಕಲನದ ಅತ್ಯಂತ ಕುತೂಹಲಕಾರಿ ಕಥೆಯೆಂದರೆ ‘ಮೊಲೆವಾಲು ನಂಜಾಗಿ’. ಈ ಸಂಕಲನದ ಶೀರ್ಷಿಕೆಯೂ ಆದ ‘ಮೊಲೆವಾಲು ನಂಜಾಗಿ’ ಕಥೆ ಹೆಚ್ಚಿನ ಮಹತ್ವಾಕಾಂಕ್ಷೆಯುಳ್ಳ ರಚನೆಯಾಗಿದೆ. ಆಲಮಟ್ಟಿ ಆಣೆಕಟ್ಟಿನಿಂದಾಗಿ ನೀರಿನಲ್ಲಿ ಮುಳುಗುತ್ತಿರುವ ಒಂದು ಹಳ್ಳಿ ಎಂಬುದು ಇಲ್ಲಿನ ಕಥೆಯ ಕೇಂದ್ರ. ಸಾಮಾಜಿಕ ಸ್ಥಿತ್ಯಂತರ ಇಲ್ಲಿನ ಸ್ಥಾಯಿಭಾವ. ಕಳೆದ ಶತಮಾನದ ಎಪ್ಪತ್ತು-ಎಂಬತ್ತರ ದಶಕಗಳ ಅವಧಿಯಲ್ಲಿ ನಡೆದಿರಬಹುದಾದ ಸಾಮಾಜಿಕ ಪರಿವರ್ತನೆಯ ಚಿತ್ರಣವನ್ನು ಈ ಕಥೆ ಸಮರ್ಥವಾಗಿ ನೀಡುತ್ತದೆ. ಒಂದಡೆ ಕಾವ್ಯಾತ್ಮಕವಾಗಿ ದುಡಿಯುವ ಸಂಕೇತ ಪರಿಣಾಮಗಳು ಇನ್ನೊಂದಡೆ ಅದನ್ನು ದೂಡುವಂತೆ ಬರುವ ವೈಚಾರಿಕ ವಾಚ್ಯ ನಿರೂಪಣೆಗಳು ಕಥೆಯ ಪರಿಣಾಮವನ್ನು ತಮಗೆ ಬೇಕೆನಿಸಿದಂತೆ ತೂಗುತ್ತವೆ.

‘ಅವನತಿ’ ಓದುಗರ ಅಂತಃಕರಣವನ್ನು ಮುಟ್ಟುವಂಥ ಕಥೆಯಾಗಿದೆ. ಕಥೆಯ ಘಟನಾವಳಿಗಳ ಯೋಜನೆಯಲ್ಲಿ ಸರಳಸೂತ್ರವೊಂದು ಇದೆ ಎಂದು ಅನಿಸುವುದಾದರೂ ಕಥೆಯ ಸ್ಪಷ್ಟ ಉದ್ದೇಶವನ್ನು ಸಾಧಿಸುವುದರಲ್ಲಿ ಕಥೆ ಯಶಸ್ವಿಯಾಗಿದೆ. ಈ ಕಥೆಯಲ್ಲಿ ರಾಜಕೀಯ ಆಡಳಿತ ಮತ್ತು ನೌಕರಿಶಾಹಿ ವ್ಯವಸ್ಥೆ,ನವವೈದಿಕ ಶಾಹಿಯಾಗಿ ಪರಿಣಮಿಸಿದೆ. ಇಲ್ಲಿ ಮನುಷ್ಯನ ಸಣ್ಣತನದ ಬಗೆಗೆ ಕಾಣುವ ಕಥೆಗಾರನ ನೈತಿಕ ಕಾಳಜಿ ಅವರ ಬೇರೆ ಕಥೆಗಳಂತೆ ನೇತ್ಯಾತ್ಮಕವಾಗಿರದೆ ವಿಷಾದದ ಎಳೆ ಶಕ್ತಿಯುತವಾಗಿ ಸೇರಿಕೊಂಡಿರುವುದರಿAದ ಗುಣಾತ್ಮಕವಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿನ ಶೋಷಣೆಯ ಒಂದು ಮುಖದ, ಸಂಕೀರ್ಣ ಅಭಿವ್ಯಕ್ತಿಯನ್ನು ಈ ಕಥೆ ಸಮರ್ಥವಾಗಿ ಮಾಡುತ್ತದೆ. ಶೋಷಣೆಯೇ ಮೂಲದ್ರವ್ಯವಾಗಿರುವ ಇಂತಹ ವ್ಯವಸ್ಥೆಯಲ್ಲಿ ಸುರೇಶ ಪಾಟೀಲನಂತಹ ಉಪನ್ಯಾಸಕರ ಅತಂತ್ರ ಬದುಕು ಇಂದಿನ ನಮ್ಮ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಾಣಬಹುದು.

‘ಬೆಕ್ಕು ಹಾರುತಿದೆ ನೋಡಿದಿರಾ..?’ ಕಥೆಯಲ್ಲಿ ವ್ಯಕ್ತಿ-ವ್ಯಕ್ತಿಗಳ ಮನಸ್ಸಿನ ಚಲನವಲನಗಳನ್ನು ಕಲಾತ್ಮಕವಾಗಿ ಹಿಡಿದಿರುವುದಷ್ಟೇ ಅಲ್ಲದೆ, ಅಲ್ಲಿ ಶೋಧಿತವಾಗುವ ಅನುಭವಕ್ಕೆ ಒಂದು ಸಾಂಸ್ಕೃತಿಕ ಪ್ರಾತಿನಿಧ್ಯವೂ ಉಂಟಾಗುವ೦ತೆ ಮಾಡಲಾಗಿದೆ. ಈ ಕಥೆಯಲ್ಲಿ ಮನುಷ್ಯ ಸಂಬ೦ಧವನ್ನು ಕುರಿತಂಥ ತಾತ್ವಿಕ ಸಂದೇಶವನ್ನು ನಿಡುವುದು ನಿರ್ದಿಷ್ಟವಾಗಿ ಕಾಣಿಸದಿದ್ದರೂ ಬಿಚ್ಚಿಕೊಳ್ಳುವ ಸತ್ಯದ ಪರಿಗಳು ಮನುಷ್ಯ ಸಂಬ೦ಧಗಳ ವಿಷಾದಯೋಗದ ಅಧ್ಯಾಯದಂತಿದೆ. ಒಂದು ಸಂಸ್ಕೃತಿಯ ಸಂಕೋಚಗಳು ಸೆಟೆದುಕೊಳ್ಳುವ ಮತ್ತು ಕಳಚಿಕೊಳ್ಳುವ ಬಗೆಯನ್ನು ಒಂದು ವಿಶಿಷ್ಟ ವ್ಯಕ್ತಿ, ಪ್ರಾಣಿ ಮತ್ತು ಆವರಣದ ಸಂದರ್ಭದಲ್ಲಿ ಆತುರವಿಲ್ಲದೆ ಈ ಕಥೆಯಲ್ಲಿ ಶೋಧಿಸಲಾಗಿದೆ.

‘ಒಂದು ಊರಿನ ವೃತ್ತಾಂತ’ ಎಂಬ ಕಥೆಯಲ್ಲಿ ಜೀವನಕ್ರಮದ, ಆಶೋತ್ತರಗಳ ಪಲ್ಲಟ ಒಂದು ಕೌಟುಂಬಿಕ ಆವರಣದೊಳಗೆ ಹಲವು ಬಗೆಗಳಲ್ಲಿ ಸೂಚಿತವಾಗಿದೆ.ಈ ಕಥೆ ಸಾಮಾಜಿಕ ಬದಲಾವಣೆಯ ಪ್ರಕ್ರಿಯೆಯ ಜಟಿಲತೆಯನ್ನೂ, ಸಂಕೀರ್ಣತೆಯನ್ನೂ ಮನೋಜ್ಞವಾಗಿ ದಾಖಲು ಮಾಡುತ್ತದೆ. ಅಲ್ಲದೆ ಲೇಖಕರು ಸಾಮಾಜಿಕ ಪಲ್ಲಟಗಳ ಅನಿವಾರ್ಯತೆಯನ್ನೂ, ಅದರ ಹಿಂದಿನ ವಿಷಾದವನ್ನೂ ಏಕಕಾಲದಲ್ಲಿ ವಾಸ್ತವಿಕವಾಗಿ ಕಟ್ಟಿಕೊಡುವುದರೊಂದಿಗೆ ಪರ-ವಿರೋಧಗಳ ಸರಳ ನೆಲೆಗಳನ್ನು ಮೀರಿ ಬರೆದಿದ್ದಾರೆ. ಕಥೆಯಲ್ಲಿ ಬರುವ ಶಾಮರಾಯ, ನಿಂಗನಗೌಡ ಮತ್ತು ಬಾಳಾಚಾರ್ಯರು ಓದುಗರ ಮನಸ್ಸಿನಲ್ಲಿ ಆಳವಾಗಿ ನೆಲೆಯೂರುತ್ತಾರೆ. ಜಾತಿ ಸಂಬAಧಗಳ ಮತ್ತು ವರ್ಗ ಸಂಬAಧಗಳ ಪರಿಶೀಲನೆಯಲ್ಲೂ ಈ ಕಥೆಯು ಸ್ವಲ್ಪ ಭಿನ್ನವಾದ ಹಾದಿಯನ್ನೇ ಹಿಡಿದಿರುವುದು ಕಂಡುಬರುತ್ತದೆ.

‘ಶಬ್ದ ನಿಶ್ಶಬ್ದ’ ಇದೊಂದು ಅಸಾಧಾರಣ ಕಥೆ. ಇದು ಕಥಾನಾಯಕ ಅಜಗಣ್ಣ ಮತ್ತು ಕಥಾನಾಯಕಿ ಮುಕ್ತಾಯಕ್ಕನ ನಡುವೆ ಇದ್ದ ಅಣ್ಣ-ತಂಗಿಯರ ಹೊಕ್ಕುಳಬಳ್ಳಿಯ ಸಂಬ೦ಧದ ಚಿತ್ರಣ ನೀಡುತ್ತದೆ. ಈ ಕಥೆ ನಮ್ಮ ನಡುವೆ ಅಪರೂಪವಾಗುತ್ತಿರುವ ಮನುಷ್ಯ ಸಂಬ೦ಧಗಳ ಹಲವು ರೂಪಗಳನ್ನು ಚಿತ್ರಿಸಲು ಪ್ರಯತ್ನಿಸುತ್ತದೆ. ಯಾವ ರೀತಿಯ ಬದುಕು ಶ್ರೇಷ್ಠವಾದದ್ದು ಎಂಬ ಪ್ರಶ್ನೆಯನ್ನು ಬದುಕಿಗೆ ಅರ್ಥವಿದೆಯೆ ಎಂಬ ಮತ್ತೊಂದು ಮೂಲಭೂತ ಪ್ರಶ್ನೆಯೊಂದಿಗೆ ಮುಖಾಮುಖಿಯಾಗಿಸಿ ಕಥೆ ಕಟ್ಟುವ ವಿನ್ಯಾಸ ಇಲ್ಲಿ ಕಂಡುಬರುತ್ತದೆ. ಅಜಗಣ್ಣ, ಮುಕ್ತಾಯಕ್ಕ ಮತ್ತು ನಿರಂಜನ ಅಲ್ಲಮಪ್ರಭುಗಳು ನಡೆಸುವ ಆಧ್ಯಾತ್ಮದ ಜೀವನ ಆದರ್ಶವಾದದ್ದು. ಕಥೆ ಒಳಗೊಂಡಿರುವ ಆಧ್ಯಾತ್ಮಿಕ ಅಂಶ ಅಜಗಣ್ಣ, ಮುಕ್ತಾಯಕ್ಕ ಮತ್ತು ನಿರಂಜನ ಅಲ್ಲಮಪ್ರಭುಗಳಂತಹ ಸಂದರ್ಭದಲ್ಲಿ ಇದು ಇನ್ನಷ್ಟು ಆಳ ಅಗಲಗಳನ್ನು ಪಡೆದುಕೊಳ್ಳುತ್ತದೆ.ಇಡೀ ಪ್ರಸಂಗವನ್ನು ಕಥೆಗಾರರು ನಿರ್ವಹಿಸಿರುವ ರೀತಿಯು ಅವರ ಪ್ರಬುಧ್ಧ ಮನಸ್ಥಿತಿಯ ದ್ಯೋತಕವಾಗಿದೆ. ಕಾಲದ ಪ್ರವಾಹದಲ್ಲಿ ಜೀವನದ ಅಂತಿಮ ಗುರಿ, ಉದ್ದೇಶ ಮತ್ತು ಮಾನವೀಯ ಅನುಭವಗಳನ್ನು ಅತ್ಯಂತ ವಾಸ್ತವ ನೆಲೆಯಲ್ಲಿ ಮೂರ್ತಗೊಳಿಸುವ ಕ್ರಮವನ್ನು ಅನನ್ಯ ವಸ್ತುವಾಗಿ ಈ ಕಥೆಯು ಒಂದು ಬಗೆಯ ವಿಸ್ಮಯದಲ್ಲಿ ದಾಖಲಿಸುತ್ತದೆ.

‘ಮಾಗಿ’ ಕಥೆ ಮೂವರು ಸ್ನೇಹಿತರ ಕೌಟುಂಬಿಕ ಜೀವನವನ್ನು ಚೆನ್ನಾಗಿ ಚಿತ್ರಿಸುತ್ತದೆ. ಅವರು ಜೀವನಯಾತ್ರೆಯಲ್ಲಿ ಮಾಗುವ, ಮಾಗಿ ತಮ್ಮ ಕಾಳಜಿಯನ್ನು ಕೌಟುಂಬಿಕ ಚೌಕಟ್ಟಿನಿಂದ ಹೊರಗೂ ವಿಸ್ತರಿಸುವ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ, ಮೆಲುದನಿಯಲ್ಲಿ ಈ ಕಥೆ ಚಿತ್ರಿಸುತ್ತದೆ. ಮನುಷ್ಯ ಸಂಬ೦ಧಗಳ ಕರಾಳ ಸಾಧ್ಯತೆಗಳನ್ನು ಹುಡುಕುತ್ತ ಹೊರಡುವ ಈ ಕಥೆ, ಮತ್ತೆ ಮನುಷ್ಯನ ಪರಿವರ್ತನೆಯ ಸಾಧ್ಯತೆಗಳಲ್ಲಿ ನಂಬಿಕೆಯನ್ನು ಹೊಂದಲು ಯತ್ನಿಸುತ್ತದೆ. ಬದಲಾಗುತ್ತಿರುವ ಬದುಕಿನ ಚಕ್ರದ ಬೀಸಿನ ನಡುವೆ ಜರ್ಜರಿತಗೊಳ್ಳುತ್ತಿರುವ, ಆದರೆ ಅಸ್ಮಿತೆಗಾಗಿ ತುಡಿಯುತ್ತಿರುವ ಮಾಗಿದ ಜೀವಗಳ ವ್ಯಕ್ತಿಚಿತ್ರಗಳನ್ನು ಈ ಕಥೆ ಅದ್ಭುತವಾಗಿ ದಾಖಲಿಸಿದೆ.

ಈ ಸಂಕಲನದ ‘ಒಂದು ಎರಡು ಬಾಳೆಲೆ ಹರಡು’, ‘ತಯಾರಿ’, ‘ಮೊಲೆವಾಲು ನಂಜಾಗಿ’, ‘ಅವನತಿ’, ‘ಒಂದು ಊರಿನ ವೃತ್ತಾಂತ,’ ಶಬ್ದ ನಿಶ್ಶಬ್ಧ’ ಮತ್ತು ‘ಮಾಗಿ’ ಕಥೆಗಳಲ್ಲಿ ಕಾಣಬರುವ ಸಾಮಾಜಿಕ ಕಾಳಜಿ, ಕಥೆಯ ನಿರೂಪಣೆಯಲ್ಲಿ ಕಂಡುಬರುವ ಸಂಯಮ, ಕಲೆಗಾರಿಕೆ ಕನ್ನಡದ ಶ್ರೇಷ್ಠ ಕಥೆಗಳ ಸಾಲಿನಲ್ಲಿ ಇವುಗಳನ್ನು ಸೇರಿಸುತ್ತವೆ. ಈ ಎಲ್ಲ ಕಥೆಗಳು ಹಿರೇಮಠರ ಹಿಂದಿನ ಕಥೆಗಳಿಗಿಂತ ಹೆಚ್ಚು ಆಳವನ್ನು, ಸಂಕೀರ್ಣತೆಯನ್ನು ಮೈಗೂಡಿಸಿಕೊಂಡು ರಚನೆಗೊಂಡಿವೆ. ಅವು ಕಥೆಗಾರನ ಕಲಾತ್ಮಕ ಅಭಿವ್ಯಕ್ತಿ ಮತ್ತು ಸಂಕೀರ್ಣ ಅನುಭವಗಳೆರಡನ್ನೂ ಏಕಕಾಲಕ್ಕೆ ಪ್ರತಿಬಿಂಬಿಸುತ್ತವೆ.

ಪ್ರೊ. ಮಲ್ಲಿಕಾರ್ಜುನ ಹಿರೇಮಠರ ಕಥೆಗಳು ಕನ್ನಡ ಸಣ್ಣಕಥೆಯ ಶಿಸ್ತಿಗೆ ಮಾದರಿ. ಕವಿತೆ, ಪ್ರಬಂಧ, ಪ್ರವಾಸ ಕಥನ, ಕಾದಂಬರಿಗಳನ್ನು ಬರೆದಿರುವ ಹಿರೇಮಠರ ಮೂಲ ಮಾಧ್ಯಮ ಮಾತ್ರ ಸಣ್ಣಕಥೆಯೇ ಎಂಬುವುದನ್ನು ಈ ಸಂಕಲನ ಮತ್ತೊಮ್ಮೆ ಸಾಬೀತುಗೊಳಿಸಿದೆ. ಸಣ್ಣಕಥೆಗಳಿಗೇ ಅನನ್ಯವಾದ ವಸ್ತು ವಿನ್ಯಾಸ ಮತ್ತು ಭಾಷಿಕ ಶರೀರ ಎರಡೂ ಇವರಿಗೆ ಒಲಿದಿವೆ ಮತ್ತು ಸಿದ್ಧಿಸಿವೆ. ಉತ್ತರ ಕರ್ನಾಟಕದ ದಟ್ಟ, ದೃಶ್ಯಾತ್ಮಕ ಪರಿಸರ, ಮನುಷ್ಯ ಸ್ವಭಾವದ ಎಲ್ಲೆಗಳನ್ನು ಸ್ಪರ್ಶಿಸಿ, ನಿಗೂಢ ಲೋಕದ ಮೂಲದ್ರವ್ಯವು ಕಾರ್ಪೊರೇಟ್ ಜಗತ್ತು ಮತ್ತು ಜಗತ್ತಿನ ವಿಸ್ತಾರದೊಂದಿಗಿನ ಅನುಸಂಧಾನದಲ್ಲಿ ಕನ್ನಡದ ಕಥಾಲೋಕವನ್ನು ವಿಸ್ತರಿಸುತ್ತಿರುವ ಹೊಸ ಮಾದರಿಯೊಂದು ಹಿರೇಮಠರ ಕಥೆಗಳಲ್ಲಿ ಬಹು ಸ್ಪಷ್ಟವಾಗಿ ಮೈದಾಳಿದ್ದು ಗಮನಾರ್ಹ. ಅವರ ಕಥೆಗಳಲ್ಲಿ ಗಹನತೆ ಇದೆ ಮತ್ತು ಜೀವನದ ಬಗೆಗೆ ಉಕ್ಕುವ ಪ್ರೀತಿಯೂ ಇದೆ. ಅವರು ಪ್ರತಿ ಕಥಾವಸ್ತುವನ್ನು ಭಿನ್ನ ಎಳೆಗಳ ಮೂಲಕ ಕೊಂಡೊಯ್ಯದಿದ್ದಾರೆ.

ವಿನ್ಯಾಸ ಮತ್ತು ವಿಸ್ತಾರಗಳೆರಡೂ ದೃಷ್ಟಿಗಳಿಂದ ಕನ್ನಡ ಕಥಾ ಸಾಹಿತ್ಯಕ್ಕೆ ಹೊಸ ಸಾಧ್ಯತೆಗಳನ್ನು ತೋರುವ ಕಥೆಗಳು ಈ ಸಂಕಲನದಲ್ಲಿವೆ. ವರ್ತಮಾನದ ವಿಲಕ್ಷಣಗಳನ್ನು ನಿರುದ್ದಿಶ್ಯವೆಂಬ೦ತೆ ಜೋಡಿಸುತ್ತಲೇ ಒಂದು ತಾತ್ವಿಕ ನೆಲೆಯನ್ನು ಕಟ್ಟುವ ಪ್ರಾಮಾಣಿಕ ಪ್ರಯತ್ನ ಈ ಕಥಾಸಂಕಲನದ ಹೆಚ್ಚಿನ ಸಾಧನೆ ಎನಿಸುತ್ತದೆ. ‘ಮೊಲೆವಾಲು ನಂಜಾಗಿ’ ಕಥಾಸಂಕಲನ ಕನ್ನಡದಲ್ಲಿ ಒಂದು ವಿಶಿಷ್ಟ ಕೃತಿಯಾಗಿದ್ದು, ಮಲ್ಲಿಕಾರ್ಜುನ ಹಿರೇಮಠರ ಅನನ್ಯ ಸೃಜನಶೀಲ ಪ್ರತಿಭೆಯ ಸ್ವರೂಪವನ್ನು ಓದುಗರಿಗೆ ಸಮರ್ಥವಾಗಿ ಪರಿಚಯ ಮಾಡಿಕೊಡುತ್ತದೆ. ಮನುಷ್ಯ ಸಂಬ೦ಧಗಳ ಶೋಧನೆಯಿಂದ ಜೀವನದ ಅರ್ಥ ತಿಳಿಯಬಯಸುವ ಅವರ ಕಥೆಗಳು ಕನ್ನಡ ಕಥಾ ಕ್ಷೇತ್ರಕ್ಕೆ ಬಹು ಮುಖ್ಯ ಸೇರ್ಪಡೆಗಳಾಗಿವೆ. ಅವರ ಕಥೆಗಳು ಸಹೃದಯ ಓದುಗರಿಂದ ಗಹನವಾದ ಅಭ್ಯಾಸವನ್ನು ಬಯಸುತ್ತವೆ.

‍ಲೇಖಕರು Admin

September 4, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: