ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಪ್ಪನ ಗಡ್ಡ ಮತ್ತು ಭಾನುವಾರ..

ಸುಹಾನ್ ಶೇಕ್

ಗಡ್ಡ ಗಿಡ್ಡ ಮಾಡುತ್ತಿದ್ದಾರೆ ಅಪ್ಪ
ಅದೇ ಎರಡು ವರ್ಷದ ಹಿಂದೆ
ಸಂತೆಯಲ್ಲಿ ಕೊಂಡ ಒಡೆದ ಕನ್ನಡಿ
ಇದೆಯಲ್ವಾ ಅದನ್ನು ನೋಡಿ
ಕಲೆಗಾರನೊಬ್ಬ ತನ್ನ ಬಿಂಬವನ್ನು
ಮೇಕಪ್ ಮಾಡಿಕೊಳ್ಳುವ ಹಾಗೆ
ಅಪ್ಪ ತನ್ನ ಗಡ್ಡ ಗಿಡ್ಡ ಮಾಡುತ್ತಿದ್ದಾರೆ

ಏಳು ದಿನದಲ್ಲಿ ಇವತ್ತೊಂದು
ಬಿಡುವಿನ ದಿನ ಅದೇ ಸಂತೆ ಕಡೆ
ಹೋಗಿ, ಶಂಕ್ರಣ್ಣನ ಅಂಗಡಿಯಲ್ಲಿ
ಮಾತಿನೊಂದಿಗೆ ಗುಳಂ ಆಗುವ
ಬಿಸಿ ಬಿಸಿ ಬೋಂಡದ ಜೊತೆ ಚರ್ಚೆಯಾಗುವ ಭಾನುವಾರದ ದಿನ

ಸಲೀಂ ಅಲಿಯ ಚಿಕನ್, ಭಂಡಾರಿ ಬಾಬುವಿನ ಕಟ್ಟಿಂಗ್ ಶಾಪ್, ಮನೆ ಮಾಳಿಗೆಯ ಕ್ಲಿನಿಂಗು,ಹೆಂಡತಿ ಹೇಳಿದ್ದ
ಗರಂ ಮಸಾಲಾ ಪೌಡರ್, ಮಗಳಿನ
ಒಂದು ಜೋಡಿ ರಿಬ್ಬನ್, ಕೊನೆಗೆ ಮರೆಯದೆ
ತರುದುಂಟು ಗೋಬಿ, ಮಸಾಲಾ ದೋಸೆಯ
ಪಾರ್ಸೆಲು

ಭಾನುವಾರದ ಬಿಡುವು ಅಪ್ಪನಿಗೆ
ಜವಾಬ್ದಾರಿಯ ಸವಾರಿ ಮಾಡಿಸುವ ದಿನ
ಮೊನ್ನೆ ಸುರೇಶನಿಗೆ ಕೊಟ್ಟ ಐನ್ನೂರರ ಸಾಲ
ಸವೆದ ಚಪ್ಪಲಿಗೆ ವಿದಾಯ ಹೇಳುವ ದಿನ
ಬೆಳೆದ ಕೂದಲಿಗೆ ಕತ್ತರಿ ಹಾಕುವ ದಿನ
ಆಗಾಗ ಚುಚ್ಚುವ, ಮಧ್ಯ ವಯಸ್ಸಿನ ಅರೆ ಕಪ್ಪು ಬಿಳುಪಿನ ಗಡ್ಡಕ್ಕೆ ಸಾಬೂನು ತೇಪಿ
ಮೆಲ್ಲನೆ ಜೀರೋ ಸೈಜ್ ಮಾಡುವ ದಿನ

ಬ್ಲಾಕ್ ಎಂಡ್ ವೈಟ್ ಮೊಬೈಲಿಗೆ ರೀಚಾರ್ಜ್
ಹಾಕುವ ದಿನ,ಹೆಂಡತಿಯ‌ ಜೊತೆ ಸಿಡುಕು
ತುಂಬಿದ ಪ್ರೀತಿಯಿಂದ ಖರ್ಚು ವೆಚ್ಚದ ಬಗ್ಗೆ
ಲೆಕ್ಕಾಚಾರ ಹಾಕಿ,‌ಮನೆ ಮುಂದೆ ಬೆಳೆದಿರುವ
ಹುಲ್ಲು ಪೊದೆಗಳಿಗೆ ಹಾರೆ ಹಾಕುವ ದಿನ

ಹೊಟ್ಟೆ ತುಂಬ ಹೆಂಡತಿ ಮಾಡಿದ ಚಿಕನ್
ಸಾಂಬರನ್ನು ತಿಂದು ಅರೆ ಮೈಯಲ್ಲಿ ,ಖಾಲಿ
ನೆಲದಲ್ಲಿ ಮಧ್ಯಾಹ್ನದ ನಿದ್ದೆಯ ಸುಖವನ್ನು
ಅನುಭವಿಸುವ ದಿನ, ಸಂಜೆಯ ಮೇಲೆ
ಒಂದು ರೌಂಡ್ ಪೇಟೆ ಕಡೆ ಹೋಗಿ ಬರುವ
ದಿನ, ಅದೇ ಡಿಡಿ ಒನ್ ನಲ್ಲಿ ಬರುವ ಹಳೆ ಸಿನಿಮಾವನ್ನು  ನೋಡಿ ಅರೆ ಮಂಪರಿನಲ್ಲಿ
ಮಲಗುವ ಭಾನುವಾರ ಅಲ್ಲಿಗೆ‌ ಮುಕ್ತಾಯ

‍ಲೇಖಕರು avadhi

13 January, 2020

2 Comments

  1. Rizwan

    Tumba chennagi barediddiri. Sunday ya mahatva keep it up bro

  2. T S SHRAVANA KUMARI

    ಇಂಟರೆಸ್ಟಿಂಗ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading