ದಿಟ್ಟ ಹೂವುಗಳ ಹೋರಾಟ ದಾಖಲಿಸಲು ಖಾಲಿ ಪುಟವೊಂದನ್ನು ಓಪನ್ ಮಾಡಿದೆ..

ಚಿದಂಬರ ನರೇಂದ್ರ 

ಶಮ್ಸ ನದು ಒಂದೇ ತಕರಾರು
ರೂಮಿಯ ಜೊತೆಗಿನ ನನ್ನ
ಅತಿಯಾದ ಸಲುಗೆಯ ಬಗ್ಗೆ ನಿರಂತರ ಆಕ್ಷೇಪ.
ಆಗಾಗ್ಗೆ ಬಂದು ಕೆಣಕಿ, ಕಟುಕಿಯಾಡುತ್ತಾನೆ.

ಮನೆಯ ಉದ್ಯಾನವನದಲ್ಲಿ
ಅರಳಿದ ಹೂಗಳ ಬಗ್ಗೆ ನಾನು ಬರೆದ ರಮ್ಯ ಪದ್ಯವನ್ನು
ಒಂದೂ ಅಕ್ಷರ ಓದದೆ ಹರಿದು ಹಾಕಿದ.

ನಿನ್ನ ಪೊಸೆಸ್ಸಿವ್ ನೆಸ್ ಅತಿಯಾಯ್ತು ಶಮ್ಸ್
ಯಾಕೆ ರೂಮಿ ಮಾತ್ರ ಪದ್ಯ ಬರಿಬಹುದಾ
ಹೂಗಳ ಮೇಲೆ ?

ನನ್ನ ಮೊಂಡುತನಕ್ಕೆ ತಲೆ ಚಚ್ಚಿಕೊಂಡು
ಮೊದಲು, ಒಂದು ಗಾರ್ಡನ್ ತೋರಸ್ತೀನಿ ಬಾ,
ಇಂಥದನ್ನ ಮೇಲ್ವಾನಾ ಕೂಡ ನೋಡಿಲ್ಲ,
ಆಮೇಲೆ ನಿನ್ನ ಪದ್ಯದ ಬಗ್ಗೆ ನೀನೇ ಹೇಳುವೆಯಂತೆ,
ಎಂದವನೇ ತಲೆಗೆ ಮುಂಡಾಸು ಧರಿಸಿ
ನನಗೆ ತನ್ನ ಕೌದಿ ಹೊದಿಸಿ
ದರದರನೇ ಎಳೆದುಕೊಂಡು ಹೊರಟ.

ಅಲ್ಲಿ ಸುತ್ತ ಕತ್ತಲೆಯಿತ್ತಾದರೂ
ಆ ಉದ್ಯಾನವನದಲ್ಲಿ ಅಪಾರ ಬೆಳಕು.
ಕಾಲಿಡುತ್ತಿದ್ದಂತೆಯೇ ದೊಡ್ಡ ಮರವೊಂದು ಮಾತನಾಡಿಸಿತು.

ಆಜಾವೋ ಯಾರ್
ತುಮ್ಹೀ ಕಾ ಇಂತಜಾರ್ ಥಾ
ಪೆಹಲೆ ಚಾಯ್ ವಾಯ್ ಪೀಲೋ
ಬಾದ್ ಮೇ ದೇಖ್ ಲೇನಾ ಬಾಕಿ ಫೂಲ್

ಬಿಸಿ ಬಿಸಿ ಚಹಾ
ನಾನು ಉಫ್ ಉಫ್ ಎನ್ನತ್ತ
ಆರಿಸಿ ಕುಡಿಯುತ್ತಿದ್ದರೆ
ಒಂದೇ ಗುಟುಕಿಗೆ ಚಹಾದ ಕಪ್ ಖಾಲಿ ಮಾಡಿ
ಬಹುತ್ ಬಢಿಯಾ, ಸತ್ ಶ್ರೀ ಅಕಾಲ್
ತಲೆ ಬಾಗಿಸಿದ ಶಮ್ಸ್.

ಒಳದಾರಿಯಿಂದ ಎಳೆದುಕೊಂಡು ಹೋಗಿ
ಒಂದು ಕಪ್ಪು ಕಾಡಿನೆದುರು ನಿಲ್ಲಿಸಿ
ನೋಡ್ತಿರು, ಈಗ ಬಂದೆ ಎನ್ನುತ್ತ ಮಾಯವಾದ
ತಬ್ರೀಜ್ ನ ಹುಂಬ ಮುದುಕ.

ಮೊದಲೇ ಕಪ್ಪು ಕಾಡು
ಅದರ ಮೇಲೊಂದು ದಟ್ಟ ಕರಿ ನೆರಳು
ಆದರೂ ಕೆಲವು ಹೂವುಗಳ ಕಣ್ಣಲ್ಲಿ ಮಿಂಚು
ಕೆಲವು ಹಾಡುತ್ತಿದ್ದವು
ಕೆಲವು ಕುಣಿಯುತ್ತಿದ್ದವು
ಮತ್ತೆ ಕೆಲವು ನೂರಾರು ವರ್ಷಗಳ ಅಪವಾದ ಹೊತ್ತ
ಶಾಪಗ್ರಸ್ತ ಗಂಧರ್ವರಂತೆ
ದುಗುಡ ತುಂಬಿಕೊಂಡಿದ್ದವು.

ಚಳಿ ತಡಿಯಲಾಗಲಿಲ್ಲ
ಅಲ್ಲೆಲ್ಲೋ ಮೂಲೆಯಲ್ಲಿ
ಬೆಂಕಿ ಕಂಡಂತಾಗಿ
ಧಾವಿಸಿದೆ.

ಎಷ್ಟೋ ಪುರಾಣಗಳನ್ನು, ಧರ್ಮ ಗ್ರಂಥಗಳನ್ನು
ಒಟ್ಟು ಮಾಡಿ ಯಾರೋ ಬೆಂಕಿಯಿಟ್ಟಿದ್ದರು.
ಝಳ ಎಷ್ಟಿತ್ತೆಂದರೆ
ಶತಮಾನಗಳ ಚಳಿ ಕಳೆಯುವಷ್ಟು.
ಬೆಂಕಿ ಕ್ಷೀಣವಾದಾಗಲೆಲ್ಲ
ಒಂದೊಂದೇ ಪುಟ ಹರಿದು
ಬೆಂಕಿಯನ್ನು ಜೀವಂತವಾಗಿಟ್ಟಿತ್ತು
ಚಿಂದಿ ಹೊದ್ದುಕೊಂಡಿದ್ದ ಪುಟ್ಟ ಹುಡುಗಿ.

ಹತ್ತಿರದಲ್ಲಿ
ಜೋರು ಜೋರಾಗಿ ಕೇಕೆಯ ದನಿ ಕೇಳಿದಂತಾಗಿ
ಆ ಕಡೆ ಹೆಜ್ಜೆ ಹಾಕಿದೆ.

ಎಲ್ಲಿ ನೋಡಿದರಲ್ಲಿ ಮಕ್ಕಳು.
ಏನೋ ಕೂಗುತ್ತಿದ್ದರು, ಏನೇನೋ ಹಾಡುತ್ತಿದ್ದರು.
ಕೆಲವರು ಖಾಲಿ ನೆಲದ ಮೇಲೆ
ಕಾಗದದ ದೋಣಿ ಚಲಿಸುವುದನ್ನ ನೋಡುತ್ತ
ಮಂತ್ರ ಮುಗ್ಧರಾಗಿದ್ದರು
ಇನ್ನೂ ಕೆಲವರು ಮರ ಹತ್ತಿ ಕುಳಿತ ಮೀನುಗಳನ್ನು ಕಂಡು
ಸೀಟಿ ಹೊಡೆಯುತ್ತಿದ್ದರು
ಕೆಲ ವೃದ್ಧ ಮಕ್ಕಳು ಗಾಳಿಯಲ್ಲಿ ಕೈ ಕಾಲು ಹಾರಿಸುತ್ತ
ಸುತ್ತ ನಿಂತ ಮಕ್ಕಳಿಗೆ ಯುದ್ಧದ ನಾಟಕ ಮಾಡಿ ತೋರಿಸುತ್ತಿದ್ದರು
ಇನ್ನೂ ಕೆಲ ಮಕ್ಕಳು ಅಂಗಡಿಯವನಿಲ್ಲದ ಅಂಗಡಿಯಿಯಿಂದ
ಚಾಕಲೇಟು ಖರೀದಿಸಿ ಚಪ್ಪರಿಸುತ್ತಿದ್ದರು.

ಆಗಲೇ ಶಮ್ಸ್ ನನ್ನ ಹೆಗಲ ಮೇಲೆ ಕೈಯಿಟ್ಟ.
ಮೂಲೆಯಲ್ಲಿ
ಎಮ್ಮೆಯೊಂದರ ಮೇಲೆ ಕುಳಿತುಕೊಂಡು
ಈ ಎಲ್ಲವನ್ನೂ ಕಣ್ತುಂಬಿಕೊಳ್ಳುತ್ತ
ಗದ್ಗದಿತನಾಗಿದ್ದ,
ಗದ್ದದ ಮೇಲಷ್ಟೇ ಗಡ್ಡ ಬಿಟ್ಟುಕೊಂಡಿದ್ದ,
ನೂರಾರು ವರ್ಷಗಳ ಹಿಂದೆ
“ಇಂಥದೊಂದು ದೇಶ ಇದ್ದರೆ ಎಷ್ಟು ಚೆನ್ನ “
ಎಂದು ಪದ್ಯ ಬರೆದು
ಅಂಥದೊಂದು ದೇಶ ಕಾಣಲು
ಇನ್ನೂ ಜೀವ ಹಿಡಿದುಕೊಂಡಿದ್ದ
ಹಣ್ಣು ಹಣ್ಣು ಮುದುಕ ಮಗುವನ್ನು
ನನಗೆ ಪರಿಚಯಿಸಿ
ತಾನೂ ಭಾವುಕನಾದ.

ಆಮೇಲೆ ಶಮ್ಸ್
ಒಂದು ವಿಚಿತ್ರ ಮರ ತೋರಿಸಿದ.
ಹತ್ತಿರ ಹೋದರೆ ಅದ್ಭುತ ಘಮ
ಆದರೆ ಆ ಮರದಲ್ಲಿ ಎಲ್ಲ
ಬೇರೆ ಬೇರೆ ಬಣ್ಣದ ಹೂಗಳು
ಇನ್ನೂ ವಿಚಿತ್ರವೆಂದರೆ
ಘಳಿಗೆಗೊಮ್ಮೆ ಆ ಹೂಗಳು
ಬಣ್ಣ ಬದಲಿಸಿಕೊಳ್ಳುತ್ತಿದ್ದವು.

ಒಂದು ಹೂವಿಗೆ ಕೈ ಹಾಕಿದೆ….

ಅಲಾರಾಂ ಸದ್ದಾಯಿತು
ಕಣ್ಬಿಟ್ಟು ನೋಡಿದರೆ ಬೆಳಗಿನ ನಾಲ್ಕು ಗಂಟೆ.
ಇಷ್ಟು ಹೊತ್ತು
ಶಮ್ಸ್ ನ ಜೊತೆ ಓಡಾಡಿದ್ದು,ನೋಡಿದ್ದು ಕನಸೆ?
ಕನಸೇ ಇರಬೇಕು.

ಎದೆಯ ಮೇಲೆ ಹಾಗೆ ಒರಗಿಕೊಂಡಿದ್ದ
ರೂಮಿಯ ಸೂರ್ಯ ನನ್ನು ಕೆಳಗಿಳಿಸಿ
ರೂಢಿಯಂತೆ ಮೋಬೈಲ್ ಆನ್ ಮಾಡಿದರೆ

ವಾಟ್ಸಾಪಿನಲ್ಲಿ ಗೆಳತಿ
ಕೆಲ ಫೋಟೋ ಕಳಿಸಿದ್ದಳು.

ಕಣ್ಣುಗಳು ಹಸಿಯಾದವು.
ಎಲ್ಲವೂ ದೆಹಲಿಯ ಕೊರೆಯುವ ಚಳಿಯಲ್ಲಿ
ಫ್ಯಾಸಿಸ್ಟ್ ಸರಕಾರದ ವಿರುದ್ಧ
ಹಗಲು ರಾತ್ರಿ ಎನ್ನದೆ ಧರಣಿ ಕುಳಿತಿರುವ
ಹೆಣ್ಣು ಮಕ್ಕಳ ಚಿತ್ರಗಳು

ಶಾಹೀನ್ ಬಾಗ್
ಶಮ್ಸ್ ತೋರಿಸಿದ ಗಾರ್ಡನ್
ಲಾವೋತ್ಸು ನ ಕನಸು.

ಮುಂಜಾನೆ ಕಂಡ ಕನಸು
ನನಸಾಗುವುದಂತೆ
ಹೌದೇ?

ಶಮ್ಸ್ ನ ಮಾತು ನೆನಪಾಯಿತು,
ನಿನ್ನೆ ರಾತ್ರಿ ಬರೆದ
ರಮ್ಯ ಪದ್ಯ ಡಿಲೀಟ್ ಮಾಡಿ

ಹೊಸ ಭರವಸೆಯನ್ನು ಹಾಡಲು ಹೊರಟ
ದಿಟ್ಟ ಹೂವುಗಳ ಹೋರಾಟ ದಾಖಲಿಸಲು
ಖಾಲಿ ಪುಟವೊಂದನ್ನು ಓಪನ್ ಮಾಡಿದೆ.

‍ಲೇಖಕರು avadhi

January 13, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Shyamala Madhav

    ವಸ್ತುಸ್ಥಿತಿಯೊಡನೆ ಶಾಹೀದ್ ಬಾಗ್ ನ ಸ್ಪಷ್ಟ ಚಿತ್ರ ಕಟ್ಟಿಕೊಟ್ಟ ಸುಂದರ ಕವನ!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: