ಆ ಮೂರು ಮುತ್ತುಗಳು ನೆನಪಾಗಿ ತುಸು ಹೆಚ್ಚೇ ಬೆಚ್ಚಗಾಗುತ್ತೇನೆ ನಾನು..

ಯಾರೋ ಸಿಕ್ಕರು, ಯಾರೋ ನಕ್ಕರು; ಕುರುಡು ಕತ್ತಲಲ್ಲಿ ಅಮೃತಕ್ಷಣ!

ಈ ಚಳಿಯಲ್ಲಿ ಜುಣುಗುಡುವ ದೇಹವನ್ನು ಕ್ವಿಲ್ಟ್ ಅಡಿ ತೂರಿಸಿ ರವೀಂದ್ರರ ‘Spring hesitates at winter’s door’ ಸಾಲುಗಳನ್ನು ಓದುತ್ತಿದ್ದರೆ, ಬಾಳ ಪಥದಲ್ಲಿ ಎಲ್ಲೋ ಒಮ್ಮೆ ಪ್ರವೇಶಿಸಿ, ಸ್ಪರ್ಶಿಸಿ, ಪೂರ್ತಿಯಾಗಿ ಆಲಂಗಿಸಿ ‘ಕೊಳ್ಳದೊಳಗ ಜಾರಿದ್ಹಾಂಗ’ ಎನ್ನುವಂತಹ ಅನುಭವ ನೀಡಿದ ಆ ಮೂರು ಮುತ್ತುಗಳು ನೆನಪಾಗಿ ತುಸು ಹೆಚ್ಚೇ ಬೆಚ್ಚಗಾಗುತ್ತೇನೆ ನಾನು.

ಮುತ್ತಿನಿಂದಾಗಿ ಸಹವಾಸಕ್ಕೆ ಬಂದ ಮೂವರೂ ಅವರವರ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದವರು. ಜತೆಯೇ ಇದ್ದರೆ, ಸಾಂಗತ್ಯದ ಉನ್ನತಭಾವ ನಶಿಸಿ, ಅನಧಿಕೃತ ಸಂಬಂಧವೊಂದರ ಸಂಕೇತವಾಗುವ ಸಂಭವ ಹೆಚ್ಚೆಂದು ತೊರೆದು ಹೊರಟಿದ್ದು ನಾನೇ. ಒಮ್ಮೊಮ್ಮೆ ಬಲವಂತದ ಈ ಬರಗಾಲಕ್ಕಿಂತ ಜತೆ ಇದ್ದಿದ್ದರೆ ಸುಭಿಕ್ಷೆ ಇರುತ್ತಿತ್ತೇನೋ ಎನಿಸಿದ್ದಿದೆ. ಆಗೆಲ್ಲ ಇಲ್ಲ-ಇಲ್ಲ ಮೂಲತಃ ಸ್ವಾತಂತ್ರ್ಯಪ್ರಿಯ ಆತ್ಮವಾದ ನನಗೆ ಚಂಚಲತೆಯೆ ಮುಖ್ಯ. ಚಂಚಲ ಮನಸಿನ ಜೊತೆ ಬದುಕುವುದೂ ಒಂದು ಕಲೆ ಎಂದು ಜಂಭದಿಂದ ನಡೆದಿದ್ದೇನೆ.

ಅವನು ಚಿತ್ರ ಪ್ರದರ್ಶನವೊಂದರಲ್ಲಿ ಪರಿಚಯವಾಗಿದ್ದ. ಮನಸ್ಸಲ್ಲಿರುವ ಬಣ್ಣಗಳನ್ನು ನನಗೆ ಕ್ಯಾನ್ವಾಸ್ ಮೇಲೆ ಹರಡಲು ಬಾರದು. ಉದಾಹರಣೆಗೆ ‘ಕೆಜಿಎಫ್’ ಸಿನೆಮಾದ ಬಣ್ಣ ಸಿನಿಮಟೋಗ್ರಫಿಯಲ್ಲಿ ಇಷ್ಟವಾಗುವುದಕ್ಕಿಂತ ಅಕ್ರೆಲಿಕ್ Abstract ನಲ್ಲಿ ಹೆಚ್ಚು ಇಷ್ಟ ಮತ್ತು ಆಪ್ತ. ‘ರೆಹಮಾನ್ ತನ್ನ ಕಿವಿಗೆ ಅದೇನು ಸೌಂಡ್ ಬೇಕೊ ಅದನ್ನು ಹಾಗೇ ತೆಗೀತಾನೆ (ರಾಜೀವ ತಾರಾನಾಥರ ಮಾತು)’ ಎನ್ನುವಂತೆ ಇವನು ನನ್ನೊಳಗಿನ ವರ್ಣಸಂಯೋಜನೆಯನ್ನು ಹಾಗ್ಹಾಗೆ ಎದುರು ಹಿಡಿದಿದ್ದ.  ಮುಂದೆ… ‘ಕಣ್ಣೀಗೆ ಬಣ್ಣಗಳ ಮೆತ್ತುವ ಕನಸಿನಲಿ ನನ್ನ ಮುಳುಗಿಸುತೇನಿ ಅಂದ.’ ಒಮ್ಮೆ ಭುವನೇಶ್ವರದಲ್ಲಿ ನಡೆಯಲಿರುವ ಚಳಿಗಾಲದ ಕಲಾ ಪ್ರದರ್ಶನಕ್ಕೆ ನನ್ನ ಸಾಥ್ ಕೇಳಿದ್ದಕ್ಕೆ ಹೋಗಿದ್ದೆ.

ಅಂದು ಕಾರ್ಯಕ್ರಮದಲ್ಲಿದ್ದವನನ್ನು ನೋಡ ನೋಡುತ್ತಿದ್ದ ಹಾಗೆ ತುಂಬಾ ಮುದ್ದು ಬಂದಿತು. ಚಂದ್ರ ಕಣ್ಬಿಡುವಾಗ ಆರು ಡಿಗ್ರಿ ಸೆಲ್ಸಿಯಸ್‌ಗೂ ಕಡಿಮೆ ತಾಪಮಾನ. ಕಾಟೇಜಿನಿಂದ ಹೊರಬಂದು ಚಿಲ್ಕ ಸರೋವರ ತೀರದಲ್ಲಿ ಸಿಗರೇಟು ಸುಡುತ್ತಿದ್ದೆ. ದೇಹದ ಮೇಲೆ ಮಂಜಿನ ಪದರು ಜಮಾಯಿಸುವಂತಹ ಚಳಿಯಲ್ಲಿ ನನ್ನ ಜೀವಭಾವ ಕಾವು ಕೂತಿರುವುದು ಯಾವುದಕ್ಕೆ ಎನ್ನುವುದು ಅರಿವಾದಂತೆ ಬಳಿ ಬಂದ. ಒರಟು ಕೆನ್ನೆಯ ಮೇಲೆ ಕೈಯಾಡಿಸಿ, ಕತ್ತಿನ ಪಕ್ಕ ಮುಖ ಹುದುಗಿಸಿ ಮೈಗೆ ಉಸಿರ ಶಾಖ ಕೊಡುತ್ತಿದ್ದೆ.

 

ಆ ಕ್ಷಣ ನನಗೂ, ನಿದ್ರಿಸುತ್ತಿರುವ ಸರೋವರದ ಮೇಲೆ ಕನಸಿನ ಗಾಯದಂತೆ ಚಲಿಸುವ ದೋಣಿಗಳಿಗೂ, ರಾತ್ರಿ ಗಾಢವಾಗುತ್ತಿದ್ದಂತೆಯೇ ನೀರ ಮಡಿಲೊಳಕ್ಕೆ ಆತ್ಮಗಳನ್ನು ಜಾರಿಸಿ, ಬೆಳಗ್ಗೆಗೆ ಆತ್ಮಗಳು ಮೊಳಕೆಯೊಡದಂತೆ ಪುನುರುತ್ಥಾನಗೊಳ್ಳುವ ಫ್ಲೆಮಿಂಗೋಗಳಿಗೂ ಏನೂ  ವ್ಯತ್ಯಾಸವಿರಲಿಲ್ಲ. ಅವನು ಅಪ್ಪಿ ಮುತ್ತಿಟ್ಟ ಗಳಿಗೆಗೆ ಉಸಿರು ಬಿಗಿ ಹಿಡಿದು ಕಾಲವನ್ನು ತೆಕ್ಕೆಯಲ್ಲಿ ಹಿಡಿದು ನಿಲ್ಲಿಸಿದ್ದೆ. ತಾನಾಗಿಯೇ ಒದಗಿ ಬಂದ ಐಶ್ವರ್ಯದಂತಹ ಆ ಮುತ್ತಿಟ್ಟವನ ಉತ್ಕಟತೆಯ ಹಂಬಲ ಇನ್ನೂ ನಾನೇ ಆಗಿದ್ದಾಗಲೇ ಅಲ್ಲಿಂದ ನಿಷ್ಕ್ರಮಿಸಿದೆ.

ಇನ್ನೊಂದು ಚಳಿಗಾಲದಲ್ಲಿ ಇಂಟರ್ನಿಯಾಗಿ ಹಿಂದಿ ಪ್ರಮುಖ ದಿನಪತ್ರಿಕೆಯ ಭೂಪಾಲ್‌ ನಲ್ಲಿರುವ ಆಫೀಸು ಸೇರಿದಾಗ ಜಾನೇಮಾನೇ ಪತ್ರಕಾರನ ಸರ್ವೀಸಿನಷ್ಟು ನನ್ನ ವಯಸ್ಸಿರಲಿಲ್ಲ. ಅವನ ಕ್ರಶ್‌ನಲ್ಲಿದ್ದೇನೆ ಎನ್ನುವುದು ಗೊತ್ತಾದ ಮೇಲೂ ಕೊಟ್ಟ ಕಂಫರ್ಟ್ ನಿಂದ ಚಿಮ್ಮುವುದನ್ನು ನೋಡಿದ ಸ್ನೇಹಿತೆಯರು ಮುತ್ತು ಪಡೆಯುವ ಸವಾಲೆಸೆದರು.

ಇಂತಹ ತುಂಟತನಗಳಲ್ಲಿ ನನ್ನ ಇಚ್ಛಾಶಕ್ತಿ ಬಗ್ಗೆ ಶಂಕೆಯೇ ಇಲ್ಲವೆಂದು ಕಣ್ಣು ಮಿಟುಕಿಸಿದೆ. ಹಠಾತ್ ಸುದ್ದಿ ಬೆಳವಣಿಗೆಯಿಂದಾಗಿ ಒಂದು ರಾತ್ರಿ ತಡವಾಗಿದ್ದಕ್ಕೆ ಅವನ ಕಾರಿನಲ್ಲೇ ಹೊರಟೆ. ಪಿಜಿ ಮುಂದೆ ಇಳಿಯಲಿದ್ದವಳು ಟ್ರಾನ್ಸ್‌ನಲ್ಲಿದ್ದವಳಂತೆ ಅವನೆಡೆಗೆ ತಿರುಗಿ ಎರಡೂ ಕೈ ಚಾಚಿ ತೋಳಿನಿಂದ ಕೊರಳು ಸುತ್ತಿ, ಎದೆಯ ನಡುವೆ ಮುಖ ಒತ್ತಿದೆ.

ಮಗುವಿನಂತೆ ತಬ್ಬಿ, ಮೂಗಿಗೆ ಮೂಗು ತಾಗಿಸಿ ತುಟಿಯಿಂದ ತುಟಿ ತೀಡಿದ 90 ಸೆಕೆಂಡ್: ಮುತ್ತಿನ ಸಮಯದ ಬಿಸಿಯುಸಿರ ಕದನ ನೋಡಿಯೇ ವಾತಾವರಣದಲ್ಲಿ ಹೆಪ್ಪುಗಟ್ಟಿದ್ದ ಮಂಜುಹನಿಗಳು ಕರಗಿ ಉದುರಿದವು. ಮಾತೆತ್ತಿದ್ದರೆ ‘ಯು ನೋ, ಐ ಆಮ್ ಸೀನಿಯರ್’ ಎನ್ನುತ್ತಿದ್ದವ ಇದರಲ್ಲೂ ದೊಡ್ಡವ ತಾನೆ? ಇನ್ನೂ ಸ್ವಲ್ಪ ಹೊತ್ತು ಮುತ್ತು ಕೊಡಬಹುದಾಗಿತ್ತಲ್ವ ಚಿಕ್ಕವಳಿಗೆ ಎಂದು ಬೈಯ್ದುಕೊಳ್ಳುತ್ತಿರುತ್ತೇನೆ ಈಗಲೂ!

ಇಂಟರ್ನ್ ಶಿಪ್ ಮುಗಿದ ಮೇಲೆ ಅಲ್ಲೇ ಕೆಲಸ ಮುಂದುವರಿಸುವಂತೆ ಒಳ್ಳೆಯ ಆಫರ್ ಇಟ್ಟ. ಸುಮ್ಸುಮ್ನೆ ತುಟಿ ಚುಂಬಿಸಿ, ಮನದಾಸೆ ಕೆರಳಿಸುವ ಈ ವಯಸ್ಸೇ ಹೀಗೆ, ಒಲವಿನ ಹುಡುಗಿ ದೂರವೇ ಇರುತ್ತೇನೆ ಎಂದು ಹೇಳಿ ಹೊರಟವಳನ್ನು ಘನತೆಯಿಂದ ಬೀಳ್ಕೊಟ್ಟ. ಅಲ್ಲಿದ್ದಷ್ಟು ದಿನ ಒಮ್ಮೆಯೂ ಸಲಿಗೆ ವಹಿಸದೆ, ನೀನು ಬಯಸಿದ್ದಕ್ಕಷ್ಟೇ ಮುತ್ತಿಟ್ಟಿದ್ದು ಎನ್ನುವಂತೆ ವರ್ತಿಸಿದವನ ಎದೆಯೊಲುಮೆ ದೊಡ್ಡದು.

ನಿನ್ನಿಂದ ಮುತ್ತಿಡಿಸಿಕೊಳ್ಳದ ಈ ತುಟಿಗಳೇಕೆ? ನೀನು ಮುತ್ತಿಡದಿದ್ದರೆ ಮುಂದಿನ ಜನ್ಮದಲ್ಲಿ ನಾನು ಕುಪ್ಪಳಿಸುವ ಕಪ್ಪೆಯಾಗುವೆ, ಕೊಡೇ ಮುತ್ತು ಎಂದು ಕಾಡುವ ಗೆಳೆಯನದು ಸಾಕ್ಷ್ಯಚಿತ್ರ ನಿರ್ಮಾಣದಲ್ಲಿ ದೊಡ್ಡ ಹೆಸರು. ಕೊಡಬಾರದು ಅಂತೇನಿಲ್ಲ ಎಂದು ಎರಡೂ ಮುತ್ತುಗಳ ಬಗ್ಗೆ ಹೇಳುತ್ತಾ ನಾನೊಂದು ಕೆಟ್ಟ ಕವಿತೆ ಎಂದೆ.

ಆಸ್ಕರ್ ವೈಲ್ಡ್; ಕೆಟ್ಟ ಕವಿತೆ ಹೆಚ್ಚು ಪ್ರಾಮಾಣಿಕವಾಗಿರುತ್ತದೆ ಎನ್ನುತ್ತಾನೆ ಎನ್ನುತ್ತ ನನ್ನ ಮೇಲೇಕೆ ಕರುಣೆಯಿಲ್ಲ ಎಂದು ಪ್ರಶ್ನಿಸಿದ. ನುಡಿಸೋತ ಮೂಕಒಲವಿನಂತೆ ನಿಂತವನನ್ನು ನೋಡಲಾರದೆ, ಬಳಿ ಸಾರಿ ಒಡಲಿಗೊಡಲು ಬೆಸೆದು ಮುತ್ತಿಟ್ಟೆ. ಆ ಕಾಡಿನ ಮನೆಯ ನೆಲುವಿಗೆ ತೂಗು ಹಾಕಿದ್ದ ಲಾಟೀನು ಚಳಿಗಾಳಿಗೆ ಪಟಪಟ ಎನ್ನುತ್ತಿರುವಂತೆ ಅವನ ಹೃದಯವೂ ಹೊಡೆದುಕೊಳ್ಳುತ್ತಿತ್ತು.

ನಾನಿಟ್ಟ ಮುತ್ತಿನಲ್ಲಿ ಅವನ ಉಸಿರಾಟವಷ್ಟೇ ಅಲ್ಲ, ಆತ್ಮವೂ ಸೇರಿತ್ತು. ಅದಕ್ಕೆ, ದೀಪವಾರಿದ ಕತ್ತಲಲ್ಲೂ ಅವನ ಅದರದ ಮೇಲಿನ ಸಂತೃಪ್ತಿಯ ನಗು ನನಗೆ ಕಾಣಿಸಿತು. ಗಲ್ಲ ಹಿಡಿದು ರಮಿಸುತ್ತ ನನ್ನ ಮನೆಯಲ್ಲಿ ನೀ ಒಳಹೊರಗೆ ಆಡಿದರೂ ಸಾಕು ಸುಖವಿರುತ್ತದೆ ಎಂದ. ಏನು ಹೇಳಿದರೂ ಒಲ್ಲೆ, ಒತ್ತಾಯದ ಬೇಡಿಕೆ ಒಲವನ್ನು ಸಮೃದ್ಧಗೊಳಿಸುವುದಿಲ್ಲ. ಮೂರು ಸಲ ಘಟಿಸಿದ್ದು ನಾಲ್ಕನೆಯ ಸಲವೂ ಸಂಭವಿಸಬಹುದು. ನಾನು ಅಷ್ಟೆಲ್ಲ ವಿಧೇಯಳಲ್ಲ ಎಂದು ಹೊರಟೆ.

ಮೇಲಿನದನ್ನು ಬರೆಯುತ್ತಿದ್ದಾಗ ಮಧ್ಯರಾತ್ರಿ. ಇದನ್ನು ಮುಗಿಸುವುದು ಹೇಗೆ ಎಂದು ಕಂಪ್ಯೂಟರ್‌ನಲ್ಲಿ ದೃಷ್ಟಿ ನೆಟ್ಟವಳಿಗೆ ಹಿಂದೆ ಅಪ್ಪ ಬಂದು ನಿಂತಿದ್ದು ಗೊತ್ತೇ ಆಗಲಿಲ್ಲ. ವ್ಯಕ್ತಿಗಳು, ಅಭಿರುಚಿ ಬದಲಾದಂತೆ ಬದಲಾಯಿಸುವ ಕೆಲಸಗಳು, ಅದಕ್ಕಿಂತ ವಿಚಿತ್ರವಾದ ನನ್ನ ಅಲೆಮಾರಿ ಮನಸ್ಥಿತಿ ನೋಡಿ ಪಿಸುಗುಡುವವರ ಬಗ್ಗೆ ತಲೆಕೆಡಿಸಿಕೊಳ್ಳದೆ ನನ್ನಿಷ್ಟದ ಹಾಗೆ ಜೀವಿಸುವ ವರ ಕೊಟ್ಟಿದ್ದು ಅಪ್ಪ-ಅವ್ವ.

ಮಕ್ಕಳ ಬಗ್ಗೆ, ಬದುಕಿನ ಬಗ್ಗೆ ಅಪ್ಪ-ಅವ್ವನದು ಎಷ್ಟೇ ಉದಾತ್ತ ಯೋಚನೆಗಳಿದ್ದರೂ, ನನಗೆ ಭೂತದಲ್ಲಿ ಬಿಟ್ಟು ಬಂದವರ ನೆನಪಿಗಿಂತ; ಭವಿಷ್ಯದಲ್ಲಿ ಎಲ್ಲಿ ನೆಲೆ ನಿಲ್ಲುವುದು ಎನ್ನುವ ಯೋಚನೆಗಿಂತ, ವರ್ತಮಾನದಲ್ಲಿ ಬೇಕಿರುವುದು ಐಹಿಕ ಒಲವು (Earthly Affection) ಎನ್ನುವುದನ್ನು ಇವರಿಗೆ ಹೇಗೆ ಮನಗಾಣಿಸಲಿ ಎಂದು ಒದ್ದಾಡುತ್ತಿದ್ದೆ.

ಸಂಕ್ರಮಣ ಕಾಲಘಟ್ಟದಲ್ಲಿರುವ ಈ ಪೀಳಿಗೆಯ ಪಿಳ್ಳೆಗೆ ಬೇಕಿರುವುದು ಮಜಬೂತ್ ರಿಶ್ತೆ ನೀಡುವ ಸುರಕ್ಷಿತ ಭಾವ, ಸುಖದ ಗಳಿಗೆಗಳಿಂತ: ಇಂತಹ ಯಾರೋ ಸಿಕ್ಕರು, ಯಾರೋ ನಕ್ಕರು; ಕುರುಡು ಕತ್ತಲಲ್ಲಿ ಅಮೃತಕ್ಷಣ! ಎನ್ನುವುದು ಅರ್ಥವಾದಂತೆ ತಲೆಯ ಮೇಲೆ ಅಭಯ ಹಸ್ತವನ್ನಿಟ್ಟರು. ಅಪ್ಪ ತೆರೆದು ಬಂದ ಬಾಗಿಲಿಂದ ಆ ತಣ್ಣನೆಯ ರಾತ್ರಿಯಲ್ಲಿ ಏಸೋ ಕಡಲ ದಾಟಿ ಬಂದು ಮುತ್ತಿಟ್ಟ ಚಳಿಗೆ ಗಾಳಿಯಷ್ಟು ಸರ್ವಸ್ವತಂತ್ರಳಾದ ಸಂಕ್ರಮಣಶೀಲೆಯ ಮೈಮೇಲೆ ಕುಸುರೆಳ್ಳು ಮೂಡಿದವು.

‍ಲೇಖಕರು avadhi

January 12, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ವಿಜಯವಾಮನ

    ನಾನು ಹಳೇ ತಲೆಮಾರಿನವ. ಹೀಗೆ ಬರಿಯುವುದು ಬೋಲ್ಡ್ ಅಂತೇನೂ ಅನ್ನಿಸಲಿಲ್ಲ, ಅನ್ನಿಸಬೇಕಾಗಿಯೂ ಇಲ್ಲ. ಅನುಭವದ ಸಾಚಾತನ ಕವನದ ಹಾಗೆ ಮರುಜನ್ಮ ಪಡೆಯುವುದು ಮಾತ್ರ ಎಂಥ ಸೊಗಸಾಗಿದೆ ರೀ. ಆದರೆ ಒಂದು ಮಾತು, ನಮಗೂ ಹೀಗೇ ಅನಿಸುತಿತ್ತು, ಅಭಿವ್ಯಕ್ತಿಗೆ ಈ ನಾವೀನ್ಯತೆ ಇರಲಿಲ್ಲ. ಗ್ರೇಟ್.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: