ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಪ್ಪನೆಂಬ ಹೆಬ್ಬಂಡೆಗೆ

ಮಾರುತಿ ದಾಸಣ್ಣವರ

ಅಮ್ಮನ ಮಮತೆಯ

ಹೊಸಿಲು ದಾಟಿ

ಅಪ್ಪನೆಂಬ ಸಾಗರದ

ತೆಕ್ಕೆಯಲಿ ಬಿದ್ದೆ.

ಅಲ್ಲಿನ ಹವಳ ದಿನ್ನೆಗಳ

ಹತ್ತಿ, ಇಳಿದು

ಮುತ್ತುಗಳ ಹಾರ ಮಾಡಿ

ಹಾಕಿಕೊಂಡೆ.

ತಿನ್ನಲು ಬಂದ ತಿಮಿಂಗಿಲಗಳ

ಗಾಳ ಹಾಕಿ ಸದೆಬಡಿದ ಅಪ್ಪನನು

ಅಪ್ಪಿ ಮುದ್ದಾಡಿದೆ.

ಆಕಾಶದಂಥ ಅಪ್ಪ

ಅಸಂಖ್ಯ ನಕ್ಷತ್ರಗಳ

ಕಥೆ ಹೇಳಿದ.

ಸೂರ್ಯ ಚಂದ್ರರ ತಂದು

ಮುಡಿಗೆ ಮುಡಿಸಿದ.

ಅಪ್ಪನ ಹೆಗಲ ಕುದುರೆ ಹತ್ತಿ

ಸಂತೆಗಳ ಸುತ್ತಿದೆ,

ಜಾತ್ರೆಗಳ ನೋಡಿದೆ

ಎಷ್ಟೊಂದು ಆಟಗಳ

ಆಡಿ ಗೆದ್ದೆ…

ಸದಾ ಅಪ್ಪನ ತೋಳಿನ

ಉಕ್ಕಿಗೇ ಆತುಕೊಂಡಿರುತ್ತಿದ್ದಾಕೆ

ಯಾಕೋ…..

ಬರು ಬರುತ್ತ ನಾಚಿದೆ,

ಬೆಳೆದೆ, ಬಹುಶ:

ಹೆಣ್ಣಾದೆ……

ಜೊತೆಗಾರನಿಗಾಗಿ ಹಂಬಲಿಸಿ

ಹುಡುಕಿದೆ.

ಆಗಲೇ…..

ಅಪ್ಪ ನನ್ನ ಮತ್ತು

ಅವನ ಮಧ್ಯೆ ನಿಂತದ್ದು,

ಆಗಲೇ ಅವ ಯಾಕೋ

ಇಷ್ಟವಾಗದೇ ಹೋದದ್ದು

ಮುಂದೆ…

ಅಪ್ಪ ತಾನೇ ತಿಮಿಂಗಿಲವಾದ,

ಶತಮಾನಗಳನ್ನು ತಿಂದು

ಅರಗಿಸಿಕೊಂಡ ಸರಪಳಿಯಾದ.

ಬಾಗಿಲಿಗೆ ನಿಂತ ಹೆಬ್ಬಂಡೆಯಾದ..

ಪ್ರೀತಿಯಲಿ ಬಿದ್ದ ನಾನು

ಬೆಣ್ಣೆಯಾದೆ, ಹುಳುವಾದೆ,

ಪಾತರಗಿತ್ತಿಯಾದೆ….

ಸರಪಳಿಯ ಸಂದಿಯೊಳಗಿಂದ

ನುಸುಳಿಕೊಂಡು

ಹಾರಿ ಹೋದೆ…

ಆ ಅವನ ತೊಡೆಯ ಮೇಲೆ

ಮುಖವಿಟ್ಟು ಬಿಕ್ಕಿದೆ,

ದು:ಖವನು ಕಕ್ಕಿದೆ.

ಸಾಗರದಂತಿದ್ದ ಅಪ್ಪ

ಸಣ್ಣ ಒರತೆಯಾದ,

ಬತ್ತಿ ಬರಿದಾದ ಬಾವಿಯಾದ,

ಬಾನೆತ್ತರವನಳೆಯುತ್ತಿದ್ದವ

ತೀರಾ ಕುಬ್ಜನಾದ.

ನಾಲ್ಕು ಗೋಡೆಗಳನೇರಿಸಿಕೊಂಡು

ಬಂಧಿಯಾದ.

ಅಹಮಿಯ ಅಗ್ನಿಯಲಿ

ಕುದ್ದು ಹೋದ…

ಒಂದು ದಿನ …..

ನನ್ನನೇ ಕೊಂದು

ತನ್ನ ತುಮುಲಗಳ

ತೀರಿಸಿಕೊಂಡ…

ನಾನೀಗ ಮಣ್ಣಲ್ಲಿ ಹೂತು,

ಕಳಿತು, ಕೊಳೆಯುತ್ತಿದ್ದೇನೆ.

ನಾಳೆ ಮೊಳೆಯುತ್ತೇನೆ

ಗಿಡವಾಗಿ ಬೆಳೆಯುತ್ತೇನೆ

ಮರವಾಗಿ ನಿಲ್ಲುತ್ತೇನೆ.

ನನಗೆ…..

ಎಲ್ಲ ಅಪ್ಪಂದಿರನ್ನು

ಸಾಗರವಾಗಿಸಬೇಕಿದೆ,

ಆಕಾಶವಾಗಿಸಬೇಕಿದೆ

ಅಪ್ಪಂದಿರನ್ನಾಗಿಸಬೇಕಿದೆ.

‍ಲೇಖಕರು Avadhi

8 November, 2020

1 Comment

  1. T S SHRAVANA KUMARI

    ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading