ಅಮ್ಮಚ್ಚಿ ಟೈಟಲ್ ಕಾರ್ಡ್ ನಲ್ಲಿ ‘ಬೆಲ್ ಬಾಟಂ’

ಕನ್ನಡ ರಂಗಭೂಮಿಯ ಮಹತ್ವದ ಹೆಸರು ಚಂಪಾ ಶೆಟ್ಟಿ.

ಕಾಲೇಜು ರಂಗ ಶಿಬಿರದ ಮೂಲಕ ರಂಗಭೂಮಿ ಪ್ರವೇಶಿಸಿದ ಈಕೆ ನಂತರ ಚಿತ್ರರಂಗದಲ್ಲಿ ಕಂಠದಾನ ಕಲಾವಿದೆಯಾಗಿ ಹೆಸರು ಮಾಡಿದರು.

ರಂಗ ಮಂಟಪ’ ತಂಡದ ಸ್ಥಾಪಕಿಯೂ ಹೌದು. ಈ ತಂಡಕ್ಕೆ ‘ಗಾಂಧಿ ಬಂದ’ ನಿರ್ದೇಶಿಸಿ ಸೈ ಅನಿಸಿಕೊಂಡರು. ನಂತರ ವೈದೇಹಿಯವರ ‘ಅಕ್ಕು’ ಅಮ್ಮಚ್ಚಿ ಎಂಬ ನೆನಪು ಆಗಿ ಚಿತ್ರ ನಿರ್ದೇಶಕಿಯೂ ಆದರು.

ಒಂದು ಸುಂದರ ಕಾವ್ಯದಂತಿರುವ ‘ಅಮ್ಮಚ್ಚಿ ಎಂಬ ನೆನಪು’ ತೆರೆಯ ಮೇಲೆ ಅರಳಿದ ಕಥೆ ನಿಮ್ಮ ಮುಂದೆ..

|ಕಳೆದ ವಾರದಿಂದ ।

ನಾವು ಎಷ್ಟೆಲ್ಲಾ ಪ್ಲಾನ್ ಮಾಡಿ ಹೊರಟರೂ ಶೂಟಿಂಗ್ ಅಂದಮೇಲೆ ಕೆಲವು ತೊಡಕುಗಳು ಬರುವುದು ಸಹಜ.. ಎಲ್ಲಾ ಸರಾಗವಾಗಿ ಆಗುವಾಗ, ತಟ್ಟನೆ ಬರುವ ಕೆಲವು ಚಾಲೆಂಜಸ್ ಗಳು ಆ ಘಳಿಗೆಯಲ್ಲಿ ನಮ್ಮ ತಲೆಕೆಳಗು ಮಾಡಿದ್ದರೂ, ಈ ಘಳಿಗೆಯಲ್ಲಿ ಆ ನೆನಪುಗಳು ನಿಜಕ್ಕೂ ರೋಚಕವೆನಿಸುತ್ತದೆ.. ಅಂತಹಾ ಹಲವಾರು ಘಟನೆಗಳಿದ್ದರೂ ಕೆಲವನ್ನು ಮಾತ್ರ ನಿಮ್ಮ ಮುಂದೆ ಹಂಚಿಕೊಳ್ಳಲಿದ್ದೇನೆ…

ಮೊದಲಿಗೆ, ಪುಟ್ಟಮ್ಮತ್ತೆಯ ತಾಯಿಯನ್ನು ಬಾವಿಗೆಸೆಯುವ ದೃಶ್ಯ.. ಅಂದು ಅಲ್ಲಿ ಪುಟ್ಟಮ್ಮತ್ತೆ ತಾಯಿ ಪಾತ್ರ ಮಾಡಿದ ‘ವಿನುತಾ’ ತಯಾರಾಗಿ ನಿಂತಿದ್ದಾಳೆ ಅವಳಿಗೆ ಈಜು ಬರುತ್ತಿರಲಿಲ್ಲ. ಅವಳಷ್ಟೇ ಎತ್ತರವಿದ್ದ ನನ್ನ ಮಗಳು ‘ಐಸಿರಿ’ಗೆ ಈಜು ಬರುತ್ತಿದ್ದ ‌ಕಾರಣ ಅವಳನ್ನು ಡ್ಯೂಪ್ ಮಾಡಬೇಕೆಂದು ಮೊದಲೇ ಪ್ಲಾನ್ ಮಾಡಿದ್ದೆವು. ಆದರೆ ಪರೀಕ್ಷೆಯ ಕಾರಣ ಅವಳು ಬರಲಾಗಲಿಲ್ಲ. ಮತ್ತೇನು ಮಾಡುವುದು? …

ಮೊದಲೇ ಗಂಡನಿಂದ ಹೊಡೆಸಿಕೊಂಡು, ಅವನು ಕೂದಲು ಹಿಡಿದು ಎಳೆದು ಕೊಂಡು ಬರುವ ದೃಶ್ಯದಲ್ಲಿ, ಗಂಡನ‌ ಪಾತ್ರ ಮಾಡಿದ್ದ ಕಶ್ಯಪ್ ಅವರ ಬಿಗಿ ಹಿಡಿತದಿಂದಾದ ಕೈ ನೋವು,, ನೆಲದಲ್ಲಿ ಜಜ್ಜಿ ಹೋಗುವಂತಹ ಕಲ್ಲುಗಳಿಂದ ಆಗುತ್ತಿರುವ ಕಾಲ ನೋವು, ಎಳೆದ ಕೂದಲಿನಿಂದಾದ ತಲೆನೋವುಗಳಿಂದಲೇ ಹತ್ತಾರು shot ಗಳನ್ನು ಅದ್ಭುತವಾಗಿ ಮಾಡಿ ವಿನುತಾ ಸುಸ್ತಾಗಿದ್ದಾಳೆ…. ಇದೀಗ ಅವಳನ್ನು ಬಾವಿಗೆ ಬೀಳಿಸುವ ದೃಶ್ಯ…. ಅಷ್ಟು ದೊಡ್ಡ ಬಾವಿಯನ್ನು ನೋಡಿದ್ದೇ, .. ವಿನುತಾಗೆ ಹತ್ತಿರ ಬರಲೂ ಅಂಜಿಕೆ.

ನೀನು ಜಸ್ಟ್ ಶಾಟ್ ನಲ್ಲಿ ಬೀಳಮ್ಮ ಕೆಳಗೆ ನಿನ್ನನ್ನು ಹಿಡಿಯುವ ವ್ಯವಸ್ಥೆ ನಾವು ಮಾಡುತ್ತೇವೆಂದರೂ ಅವಳು ಸುತಾರಾಂ ಒಪ್ಪುತ್ತಿಲ್ಲ ಮೊದಲೇ ನೀರೆಂದರೆ ನಡುಗುವ ನಾನು, ಬಹುಶಃ ಅವಳು ಒಪ್ಪಿದ್ದರೂ ಬಿಡುತ್ತಿರಲಿಲ್ಲ. ಆದರೇನು ಮಾಡುವುದು? ಸೀನ್ ಆಗಲೇ ಬೇಕಲ್ಲಾ ಕೂಡಲೇ ನಮ್ಮ ಕಣ್ಣಿಗೆ ಬಿದ್ದದ್ದು ವಿನುತಾಳಷ್ಟೇ ಸಣ್ಣಗಿದ್ದ ಪ್ರೊಡಕ್ಷನ್ ಹುಡುಗ ಬಾಲಾಜಿ.

ನಾವು ಅವನು ಮಾಡಬಹುದಾ ಎಂದು ಯೋಚಿಸುವಷ್ಟರಲ್ಲಿ ಸೀರೆ ಉಟ್ಟು ರೆಡಿಯಾಗಿದ್ದ, ನಮ್ಮ ಬಾಲಾಜಿ. ಹಳ್ಳಿಯ ಹುಡುಗರಿಗೆ ಈಜುವುದ ಹೇಳಿಕೊಡಬೇಕೆ? ಆ ಸೀರೆಯಲ್ಲಿಯೇ ಹೇಳಿದಷ್ಟೂ ಬಾರಿ ಖುಷಿಯಿಂದ ದಢಾರನೆ ನೀರಿಗೆ ಧುಮುಕಿ ನಮ್ಮ ಆತಂಕವನ್ನು ದೂರ ಮಾಡಿ ಇಡೀ ತಂಡವನ್ನು ನಗೆಗಡಲಲ್ಲಿ ಮುಳುಗಿಸಿದ ಬಾಲಾಜಿಯನ್ನು ನಾವು ಮರೆಯುವುದುಂಟೇ?…

ನಾಟಕವಾಗಲೀ, ಸಿನೆಮಾವಾಗಲಿ ಟೆಕ್ನಿಕಲ್ ವಿಚಾರದಲ್ಲಿ, ನಾವು ಎಂದೂ ಎಲ್ಲೂ ಕಾಂಪ್ರಮೈಸ್ ಮಾಡಿಕೊಂಡಿದ್ದಿಲ್ಲಾ… ಕಾಂಪ್ರಮೈಸ್ ಎನ್ನುವುದೇನಿದ್ದರೂ ನಮ್ಮ ವಯಕ್ತಿಕ ಸೌಕರ್ಯಗಳಿಗಾಗಿ ಮಾತ್ರ. ಅಂದು ಶೂಟಿಂಗ್ ಮುಗಿಸಿ ಬಂದು, ಎಡಿಟಿಂಗ್ ಟೇಬಲ್ ನಲ್ಲಿ ಕೂತಾಗ, ಎಲ್ಲಾ ಸರಿಯಿದ್ದರೂ, ಏಕೋ ಏನೋ ಶೂಟ್ ಆಗಿದ್ದ ಸಿನೆಮಾದ ಕ್ಲೈಮ್ಯಾಕ್ಸ್ ದೃಶ್ಯ (ತಿರುಪತಿಯಿಂದ ಹಿಂತಿರುಗುವ ಅಮ್ಮಚ್ಚಿಯ ದೃಶ್ಯ) ಒಂದಿಷ್ಟೂ ಇಷ್ಟವಾಗುತ್ತಿಲ್ಲ. ಬೇಕೆನಿಸುವಷ್ಟು ಭಾವತೀವ್ರತೆಯನ್ನು ಆ ದೃಶ್ಯ ಕಟ್ಟಿಕೊಡುತ್ತಿಲ್ಲ ಅನಿಸಿ ತುಂಬಾ ನಿರಾಸೆಯಾಗಿತ್ತು.

ಎಡಿಟರ್ ಹರೀಶ್ ಅವರು ಮತ್ತು ನಾನು ಎಷ್ಟೇ ಸರ್ಕಸ್ ಮಾಡಿದರೂ ನಮಗೆ ಸಮಾಧಾನವಾಗುತ್ತಿಲ್ಲ. ನನ್ನ ಈ ತೊಳಲಾಟವನ್ನು ಗಮನಿಸಿದ ಶೆಟ್ರು ನಿನಗೆ ಸಮಾಧಾನವಾಗುವುದಾದರೆ ರೀ ಶೂಟ್ ಮಾಡೋಣ ಅಂದುಬಿಟ್ಟರು. ಅವರೇನೋ ಹೇಳಿಬಿಟ್ಟರು, ಆದರೆ ಉಳಿದ ಪ್ರೊಡ್ಯೂಸರ್ ಗಳ ಪರ್ಮಿಷನ್ ಬೇಕಲ್ಲಾ ಎನ್ನುವಷ್ಟರಲ್ಲಿ ಅವರುಗಳು ಡೇಟ್ ಯಾವತ್ತು ಅನ್ನೋದೆ!

ಅಷ್ಟು ಅಪರಿಮಿತ ನಂಬಿಕೆ ಪರಸ್ಪರರಲ್ಲಿ. ಮತ್ತಿನ್ನೇನು ಮಾರ್ಚ್ 9 ‌ರೀ ಶೂಟ್, ಡೇಟ್ ಫಿಕ್ಸ್ ಆಯಿತು ಎಲ್ಲರಿಗೂ ಮತ್ತೊಮ್ಮೆ ಸಂಭ್ರಮ. ಛಲೋ ಕರ್ನಿರೆಗೆ ಅಂತಾ ಮಾರ್ಚ್ 7 ಖುಷಿಯಿಂದ ರೈಲು ಹತ್ತಿದೆವು. ಎಲ್ಲರೂ ಬಂದಾಗಿತ್ತು. ಕೊನೆಗೆ ಬಂದ ವೈಜಯಂತಿ(ಅಮ್ಮಚ್ಚಿ) ನಮಸ್ತೇ ಮೇಡಂ ಅಂದು ಎದುರಿಗೆ ಕೂತಾಗ, ಅವಳನ್ನು ನೋಡಿ ನನಗೆ ಕಣ್ಣುಕತ್ತಲೆ ಬಂದಿತ್ತು.

ಶೂಟಿಂಗ್ ಗಾಗಿಯೇ ಕಪ್ಪಾಗಾಗಿಸಿಕೊಂಡಿದ್ದ ಅವಳ ಕೂದಲು ಮತ್ತೆ ಕೆಂಪಗಾಗಿಬಿಟ್ಟಿತ್ತು. ಈ ವಿಷಯ ಮೊದಲೇ ತಿಳಿದಿದ್ದ ನಾನು ಫೋನ್ ಮಾಡಿ ಮತ್ತೆ ಕಪ್ಪು ಮಾಡಿಕೊಳ್ಳಲು ತಿಳಿಸಿದ್ದೆ. ಈಗ ಇದ್ದಕ್ಕಿದ್ದಂತೆ. ಕೆಂಪುಕೂದಲಿನೊಂದಿಗೆ ಅವಳು ಎದುರಾದಾಗ ದಂಗಾಗದೇ ಇರಲು ಸಾಧ್ಯವೇ?

ಊರಿಗೆ ತಲುಪಿದ ಮರುದಿನವೇ ಶೂಟಿಂಗ್! ಏನಮ್ಮಾ ಮಾಡುತ್ತೀಯಾ? ಗಾಬರಿಯಿಂದ ನಾನು ಕೇಳಿದಾಗ ವೈಜಯಂತಿ, ” ಇಲ್ಲಾ ಮೇಡಂ, ಪಾರ್ಲರ್ ಅವರನ್ನು ಕೇಳಿಕೊಂಡು ಬಂದಿದ್ದೇನೆ ನಾಳೆ ನಾನೇ ಕಪ್ಪು ಮಾಡಿಕೊಳ್ಳುತ್ತೇನೆ” ಅಂದಳು. ಅಲ್ಲಮ್ಮಾ ಅದಕ್ಕೆ ಬೇಕಾದ ಮೆಟಿರಿಯಲ್ಸ್ ತಂದಿದ್ದೀಯಾ ಅಂದೆ ಅವಳು ಕಾನಫಿಡೆಂಟ್ ಆಗಿ “ಹೂ ಮೇಡಂ” ಅಂದಾಗ ನನಗೆ ಸಮಾಧಾನ.

ಬೆಳಿಗ್ಗೆ ಕರ್ನಿರೆ ತಲುಪಿ ಮರುದಿನದ ಶೂಟಿಂಗ್ ಗೆ ಬೇಕಾದ ತಯಾರಿಗಳಲ್ಲಿ ಬ್ಯುಸಿಯಾದ ನಾನು ಆಗಾಗ ನಮ್ಮ ಕಾಸ್ಟ್ಯೂಮ್ ಇನ್ಚಾರ್ಜ್ ಭಾರತಿ ಹತ್ತಿರ ಕೂದಲ ಕತೆ ಏನಾಯ್ತು ಅಂತಾ ವಿಚಾರಿಸುತ್ತಿದ್ದೆ “ಹಾ ಕೇಳಿದೆ ಮೇಡಂ ಸಂಜೆ ಕಲರ್ ಹಾಕಿಕೊಳ್ಳುತ್ತಾಳಂತೆ” ಅಂದರು. ಸರಿ, ಮತ್ತೆ ನಾನು ನನ್ನ ಕೆಲಸಗಳಲ್ಲಿ ಬ್ಯುಸಿ.

ಸಂಜೆ ಆರರ ಹೊತ್ತಿಗೆ ಏಕೋ ಅನುಮಾನ ಬಂದು ವೈಜಯಂತಿಯ ಬಳಿ ನಾನೇ ಹೋಗಿ ಏನಾಯ್ತಮ್ಮಾ ಟ್ರೈ ಮಾಡಿದ್ಯ? ಅಂದೆ ಅವಳು ಇಲ್ಲಾ ಮೇಡಂ ಈಗಲೇ ಮಾಡುತ್ತೇನೆ ಅಂತಾ ಬ್ಯಾಗ್ ತೆಗೆದಳು. ನಾನು ಕೂದಲಿಗೆ ಬಣ್ಣ ಹಾಕುವವರ‌ ಬಳಿ ನೋಡಿದ್ದ ಬಣ್ಣ, ಬಟ್ಟಲು, ಬ್ರಷ್ ಗಳೆಲ್ಲಾ ಹೊರಬರಬಹುದೆಂದು ಕಾದಿದ್ದೆ.

ಆದರೆ ಬ್ಯಾಗ್ನಿಂದ ಹೊರಬಂದದ್ದು ಒಂದು ಚಿಕ್ಕ “ಮಸ್ಕರಾ”. ಇದೇನಮ್ಮಾ ಅಂದೆ “ಹೂ ಮೇಡಂ ಇದನ್ನೇ ಕೂದಲಿಗೆ ಹಚ್ಚಿದರೆ ಸಾಕು ಅಂತಾ ಪಾರ್ಲರ್ ಅವರು ಹೇಳಿದ್ದಾರೆ” ಅಂದಾಗ ಅದೇನು ಅವಳ ಮುಗ್ದತೆಯೋ, ನನ್ನ ಬೇಜವಾಬ್ದಾರಿಯೋ ಒಟ್ಟೂ ಎಂತಾ ಸಿಟ್ಟು ಬಂದಿತ್ತೆಂದರೆ ಆಯ್ತು ಕಪ್ಪು ಮಾಡಿಕೊಂಡು ತೋರಿಸು ಅಂತಾಹೇಳಿ‌ ಅಲ್ಲಿಂದ ಜಾಗ ಖಾಲಿ ಮಾಡಿದೆ.

ಅರ್ಧ ಗಂಟೆಯಾಯಿತು ಒಂದು ಗಂಟೆಯಾಯಿತು ಯಾರದೂ ಪತ್ತೆಯಿಲ್ಲ ಅಷ್ಟು ಚಿಕ್ಕ ಮಸ್ಕರದಲ್ಲಿ ಇಡೀ ಕೂದಲು ಕಪ್ಪಾಗಲು ಸಾಧ್ಯವೇ? ಆದರೂ ಅದರ ಬಣ್ಣ ಸರಿಯಾದೀತೆ? ಮಸ್ಕರಾ ತಲೆಗೆ ಹಚ್ಚಿದ ಕೂಡಲೇ ಅದು ಒಣಗಿ ಪೈಂಟಿಂಗ್ ಬ್ರಷ್ ತರ ಆಗಿಬಿಟ್ಟಿತ್ತು. ಇದು ಖಂಡಿತಾ ವರ್ಕೌಟ್ ಆಗುವುದಿಲ್ಲವೆಂದು ನನಗೆ ಮೊದಲೇ ಗೊತ್ತಿತ್ತು. ಆದರೆ ಅಷ್ಟರಲ್ಲಾಗಲೇ ಗಂಟೆ ಎಂಟಾಗಿತ್ತು.

ಕಡೆಗೆ, ನಮ್ಮ ಇ ಪಿ ವೇಣು ಅವರನ್ನು ಕಳುಹಿಸಿ, ಆ ಹಳ್ಳಿಯಲ್ಲಿದ್ದ ಪಾರ್ಲರ್ ಒಂದನ್ನು ಹುಡುಕಿಸಿ, ರಾತ್ರಿಯಾದ್ದರಿಂದ ಮುಚ್ಚಿದ್ದ ಬಾಗಿಲನ್ನು ತೆಗೆಸಿ, ಎಂಟು ಸಾವಿರ ಕೊಟ್ಟು ಕೆಂಪು ಮಾಡಿಸಿಕೊಂಡಿದ್ದ ಕೂದಲನ್ನು ಒಂದುಸಾವಿರ ಕೊಟ್ಟು ಕಪ್ಪು ಮಾಡಿಸಿದ್ದಾಯಿತು.. ಇಲ್ಲದಿದ್ದರೆ ತಿರುಪತಿಯಿಂದ ಅಮ್ಮಚ್ಚಿ ಕೆಂಪುಕೂದಲೊಂದಿಗೆ ಹಿಂದಿರುಗಬೇಕಾಗಿತ್ತು.

“ಅಮ್ಮಚ್ಚಿ ಬೆಲ್ ಬಾಟಂ”

ಸ್ಲಲ್ಪ ದಿನಗಳ ಹಿಂದೆ ಅಮೆರಿಕಾ ಕನ್ನಡಿಗರೊಂದಿಗೆ ಅಮ್ಮಚ್ಚಿ ತಂಡದ ಸಂವಾದದಲ್ಲಿ ಒಬ್ಬ ಪ್ರೇಕ್ಷಕರು “ನಿಮ್ಮ ಟೈಟಲ್ ಕಾರ್ಡ್ ನಲ್ಲಿ ಬೆಲ್ ಬಾಟಂ ತಂಡಕ್ಕೆ ಧನ್ಯವಾದ ಹೇಳಿರುವುದೇಕೆ? ಎಂದು ಕೇಳಿದ್ದರು. ಅಬ್ಬಾ ಪ್ರೇಕ್ಷಕರು ಎಷ್ಟು ಸೂಕ್ಷ್ಮ ಅನಿಸಿದ್ದರ ಜೊತೆ ಟೈಟಲ್ ಕಾರ್ಡ್ ಗಾಗಿ ಎಷ್ಟೆಲ್ಲಾ ತಲೆಕೆಡಿಸಿಕೊಳ್ಳುತ್ತಿದ್ದುದು ಸಾರ್ಥಕ ಎನಿಸಿತ್ತು. ಅವರ ಆ ಪ್ರಶ್ನೆಗೆ ಉತ್ತರ ಇಲ್ಲಿದೆ.

ಅಂದು, ಎಂದಿನಂತೆ ಬೆಳಗಿನ ಜಾವವೇ ಶೂಟಿಂಗ್ ಶುರುವಾಯಿತು. ಸಾಮಾನ್ಯವಾಗಿ ತಿಂಡಿ ಬ್ರೇಕ್ ಒಳಗೆ ಎರಡು ಶಾಟ್ ಗಳನ್ನಾದರೂ ಮುಗಿಸುತ್ತಿದ್ದ ನಾವು ಅಂದು ತಿಂಡಿ ಮುಗಿಸಿ ಊಟದ ಸಮಯವಾಗುತ್ತಿದ್ದರೂ ಒಂದು ಶಾಟ್ ಕೂಡಾ ಮುಗಿಸಲಾಗುತ್ತಿಲ್ಲ. ಕಾರಣ ಕ್ಯಾಮೆರಾದ ಲೆನ್ಸ್. ಒಂದು ದಿನದ ಶೂಟಿಂಗ್ ಎಂದು ಬೆಂಗಳೂರಿನವರಿಗೆ ಹೇಳದೆ ಅಲ್ಲಿಯ ಕ್ಯಾಮರಾವನ್ನೇ ಬುಕ್ ಮಾಡಿದ್ದೆವು.

ಡಿ.ಓ.ಪಿ. ನವೀನ್ ಅಗತ್ಯವಾದ ಲೆನ್ಸ್ ಗಳನ್ನು ಅವರಿಗೆ ಹೇಳಿದ್ದೂ ಆಗಿತ್ತು ಅವರು ತಂದಿದ್ದೂ ಆಗಿತ್ತು ಆದರೆ ತಂದ ಲೆನ್ಸ್ ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಆಗ ಆಗಿದ್ದ ನಮ್ಮ ಟೆನ್ಷನ್ ವಿವರಿಸಲು ಸಾಧ್ಯವೇ? ಶೂಟಿಂಗ್ ಪ್ಲಾನ್ ಆದದ್ದು ಒಂದೇ ದಿನ. ಹೋಗಲಿ ಮರುದಿನಕ್ಕೆ ಎಕ್ಸ್ಟೆಂಡ್ ಮಾಡೋಣವೆಂದರೆ ನವೀನ್ ಅವರ ಡೇಟ್ಸ್ ಇಲ್ಲಾ. ಮೊದಲೇ ಮಾರ್ಚ್ ತಿಂಗಳು, ಕರಾವಳಿ ಬಿಸಿಲಲ್ಲಿ, ಇಂತದ್ದೊಂದು ಟೆನ್ಷನ್ ನಲ್ಲಿ ಬೆವರಿನಿಂದ ಎಲ್ಲರೂ ಮಿಂದಂತಾಗಿತ್ತು. ಶೂಟಿಂಗ್ ನ ಅಷ್ಟೂ ದಿನಗಳಲ್ಲಿ ಒಮ್ಮೆಯೂ ಆಗದ ಟೆನ್ಷನ್, ರೀ ಶೂಟ್ ನ ಒಂದೇ ದಿನದಲ್ಲಿ ಆಗಿಬಿಟ್ಟಿತ್ತು.

ಹತ್ತಿರದಲ್ಲಿ ಎಲ್ಲೆಲ್ಲಿ ಕ್ಯಾಮೆರಾ ಸಿಗುವುದೋ ವಿಚಾರಿಸಿ, ಎಲ್ಲಾ ಕಡೆ ಪ್ರಯತ್ನಿಸಿದ್ದೂ ಆಯಿತು, ಎಲ್ಲೂ ಇಲ್ಲ. ಅಷ್ಟರಲ್ಲಿ ಯಾರೋ ‘ಬೆಲ್ ಬಾಟಂ’ ಚಿತ್ರದ ಶೂಟಿಂಗ್ ಉಡುಪಿ ಹತ್ತಿರ ನಡೆಯುತ್ತಿದೆ ಎಂದು ತಿಳಿಸಿದರು. ಮರುಭೂಮಿಯಲ್ಲಿ ಓಯಸಿಸ್ ಸಿಕ್ಕ ಅನುಭವ. ಮತ್ತೊಂದು ಖುಷಿಯ ಸಂಗತಿ ತಿಳಿದದ್ದು ಬೆಲ್ ಬಾಟಂ ತಂಡದಲ್ಲಿ ಪ್ರಮೋದ್ ಶೆಟ್ಟಿ ಇದ್ದಾರೆ ಎಂದು.

ಪ್ರಮೋದ್ ಕೂಡ ರಂಗಭೂಮಿಯವರಾದ್ದರಿಂದ ಒಂದು ಸಣ್ಣ ಸಲುಗೆ. ಆದರೂ ಆತಂಕ. ಅವರದ್ದೂ ಶೂಟಿಂಗ್ ನಡೆಯುತ್ತಿದೆ ಅವರಿಗೂ ಲೆನ್ಸ್ ಬೇಕಲ್ಲಾ ! ಅದೇ ಆತಂಕದಲ್ಲಿ ಪ್ರಮೋದ್ ಗೆ ಕಾಲ್ ಮಾಡಿದೆ. ನಮ್ಮ ಅವಸ್ಥೆ ಕೇಳಿದ ಪ್ರಮೋದ್ “ಇಲ್ಲಿಯೂ ಲೆನ್ಸ್ ಬೇಕು ಆದರೆ ನೀವು ಬನ್ನಿ ಹೇಗಾದರೂ ಅರೇಂಜ್ ಮಾಡುವ” ಅಂದಾಗ ಇಡೀ ತಂಡದ ನಿಟ್ಟುಸಿರಿನ ಸದ್ದು ಬಹುಶಃ ಉಡುಪಿಯಲ್ಲಿದ್ದ ಪ್ರಮೋದ್ ಗೂ ಕೇಳಿಸಿರಬೇಕು.

ಕೂಡಲೇ ವೇಣು ಮತ್ತು ಶೆಟ್ರು ನಮ್ಮ ಚಿಕ್ಕಪ್ಪನವರ ಅಳಿಯ ರಾಜೇಶ್ ಅವರ ಸಾರಥ್ಯದಲ್ಲಿ ಶರವೇಗದಲ್ಲಿ ಹೋಗಿ ಲೆನ್ಸ್ ತಂದುಕೊಟ್ಟ ನಂತರ ಸರಾಗವಾಗಿ ಶೂಟಿಂಗ್ ನಡೆದಿತ್ತು. ಒಂದು ದಿನ ಪ್ಲಾನ್ ಮಾಡಿದ್ದ ಶೂಟಿಂಗ್ ಅರ್ಧ ದಿನದಲ್ಲೇ ಮುಗಿಸಬೇಕಾದ ಅಗತ್ಯದಲ್ಲಿಯೇ ಅದ್ಭುತವಾದ ಕ್ಕೈಮ್ಯಾಕ್ಸ್ ಸಿಕ್ಕಿಬಿಟ್ಟಿತು.

ರಾತ್ರಿ ಶೂಟಿಂಗ್ ಮುಗಿಸಿದ ಸಂತೋಷದಲ್ಲಿ, ವೇಣು ಮತ್ತು ಶೆಟ್ರ ಜೊತೆಗೆ ನಾನೇ ಹೋಗಿ ಪ್ರಮೋದ್ ಗೆ ಲೆನ್ಸ್ ತಲುಪಿಸಿ, ಧನ್ಯವಾದ ತಿಳಿಸುತ್ತಾ ಅದರ ಬಾಡಿಗೆ ಕೇಳಿದಾಗ ಪ್ರಮೋದ್ ನಗುತ್ತಾ, ಬಾಡಿಗೆ ಬೆಂಗಳೂರಲ್ಲಿ ತೆಗೆದುಕೊಳ್ಳುತ್ತೇನೆ ಅಂದು ಅವರ ಋಣವನ್ನು ಹಾಗೇ ಇರಿಸಿಕೊಂಡವರು ಕಡೆಗೆ ರಿಲೀಸ್ ಸಮಯದಲ್ಲಿ ನಮಗೆ ಬೇಕಾದ ಸಲಹೆ ಸಹಕಾರಗಳನ್ನು ನೀಡುತ್ತಾ ಋಣಭಾರ ಹೆಚ್ಚಾಗಿಸಿಕೊಂಡರೇ ಹೊರತು ತೀರಿಸಲು ಬಿಡಲಿಲ್ಲ. ಇದನ್ನಲ್ಲವೇ ಕರೆಯುವುದು ಗೆಳೆತನವೆಂದು. ಅದೂ ರಂಗ ಗೆಳೆತನ.

ಅಂತೂ ಶೂಟಿಂಗ್ ಏನೋ ಅಂದುಕೊಂಡಂತೆ ಮುಗಿಯಿತು. ಶೂಟಿಂಗ್ ಮುಗಿದರೆ ಸಿನೆಮಾ ಮುಗಿದಂತೆ ಎಂಬ ಭ್ರಮೆಯಲ್ಲಿದ್ದ ನಮಗೆ ಶೂಟಿಂಗ್ ಅನ್ನುವುದು ಸಿನೆಮಾದ ಒಂದು ಭಾಗವಷ್ಟೇ ಬಹುಶಃ ಕಾಲುಭಾಗ, ಉಳಿದ ಮುಕ್ಕಲು‌ ಭಾಗ ಸಿನೆಮಾ ರೂಪುಗೊಳ್ಳುವುದು ಪೋಸ್ಟ್ ಪ್ರೊಡಕ್ಷನ್ ನಲ್ಲಿ ಎಂದು ತಿಳಿಕೊಟ್ಟವಳು‌ “ಅಮ್ಮಚ್ಚಿ”.

ಸುಮಾರು ಮೂರುತಿಂಗಳು ಎಡಿಟಿಂಗ್ , ಹದಿನೈದು ದಿನಗಳ ಡಬ್ಬಿಂಗ್, ಒಂದು ತಿಂಗಳು ರೀರೆಕಾರ್ಡಿಂಗ್, ಜೊತೆಯಲ್ಲಿಯೇ ಆದ S F X, , ಒಂದು ತಿಂಗಳ D I, ಕಡೆಯಲ್ಲಿ ಆದ ಮಿಕ್ಸಿಂಗ್ (5.1), ಹೀಗೆ ಜನವರಿಯಲ್ಲಿ ಮುಗಿಸಿದ ಶೂಟಿಂಗ್ ಒಂದು ಪರಿಪೂರ್ಣ ರೂಪ ತಾಳಲು ಸರಿಸುಮಾರು ಒಂಭತ್ತು ತಿಂಗಳೇ ಬೇಕಾಯಿತು. ಆ ಒಂಭತ್ತು ತಿಂಗಳ ಪೋಸ್ಟ್ ಪ್ರೊಡಕ್ಷನ್ ಪಯಣದ ರೋಲರ್ ಕೋಸ್ಟರ್ ಅನುಭವ ಮುಂದಿನ ಸಂಚಿಕೆಯಲ್ಲಿ. 

। ಮುಂದಿನ ವಾರಕ್ಕೆ ।

‍ಲೇಖಕರು ಚಂಪಾ ಶೆಟ್ಟಿ

November 8, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: