ಮುಟ್ಟಿದರೆ ಮುನಿ! ಇವರನ್ನು ಮುಟ್ಟಿದರೆ ೩೫೦೦ ರೂ ದಂಡ!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ.

ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಮಹಿಳಾ ಸ್ವಾವಲಂಬನೆ ವಿಭಾಗದಲ್ಲಿ ಗ್ರಾಮೀಣ ಮಹಿಳೆಯರಿಗೆ ಕಲಾ ತರಬೇತಿ ನೀಡುತ್ತಿರುವುದು ತೃಪ್ತಿಕೊಟ್ಟಿದೆ.

ತಿರುಗಾಟ ಹುಚ್ಚು. ಸ್ಟ್ರೆಂತೂ, ವೀಕ್ನೆಸ್ಸುಗಳೆರಡೂ ಹಿಮಾಲಯವೇ. ಬದುಕಿನ ಚಿಕ್ಕ ಚಿಕ್ಕ ಸಂಗತಿಗಳು ಕ್ಯಾಮರಾ ಫ್ರೇಮಿನೊಳಗೆ ಇಳಿವಾಗ ಅವುಗಳು ರೂಪಾಂತರ ಹೊಂದುವ ಅದ್ಭುತ ಸಾಧ್ಯತೆಗಳ ಬಗ್ಗೆ ಸದಾ ಬೆರಗು.

ನಾನೂ ಮಗನೂ ಕನ್ನಡ ಮಾತಾಡೋದನ್ನು ಕೇಳಿ ʻನೀವು ಮಾತಾಡ್ತಿರೋದು ಯಾವ ಭಾಷೆ? ಇಂಗ್ಲೀಷಾ?ʼ ಅಂತ ಕೇಳಿದಳಾಕೆ. ನನಗೆ ಹಾರ್ಟ್‌ ಫೇಲಾಗೋದೊಂದು ಬಾಕಿ. ಕಳೆದ ನಾಲ್ಕೈದು ವರ್ಷಗಳಲ್ಲಿ ನಾವು ಮಾತಾಡೋ ಕನ್ನಡ ಭಾಷೆಯನ್ನು ಕಾಶ್ಮೀರಿಯಾ? ಗುಜರಾತಿಯಾ? ಬೆಂಗಾಲಿಯಾ? ಅಸ್ಸಾಮಿಯಾ? ಅಂತೆಲ್ಲ ಕೇಳಿ ನನ್ನನ್ನು ದಂಗುಬಡಿಸಿ, ಆಮೇಲೆ ನಾನು ಇದೊಳ್ಳೆ  ಕಾಮಿಡಿಯೆಂದು ನಕ್ಕಿದ್ದಿದೆ.

ತಮಿಳೋ, ತೆಲುಗೋ ಅಂತ ಕೇಳಿದರೆ ಅದೇ ದೊಡ್ಡ ಪುಣ್ಯ. ಕೊನೇ ಪಕ್ಷ, ದಕ್ಷಿಣ ಭಾರತೀಯ ಭಾಷೆ ಅಂತಾದರೂ ಅರ್ಥ ಮಾಡಿಕೊಂಡಿದ್ದಾರೆ ಎಂದು ನನಗೆ ನಾನು  ಸಮಾಧಾನ ಮಾಡಿಕೊಳ್ಳುತ್ತಿದ್ದೆ. ಆದರೀಬಾರಿ ʻಇಂಗ್ಲೀಷಾ?ʼ ಅಂತ ಕೇಳಿದ್ದು ಕೇಳಿ ಆಗಿದ್ದ ಶಾಕಿಗೆ ಚೇತರಿಸಿಕೊಳ್ಳೋದು ಭಾರೀ ಕಷ್ಟವಾಯಿತು! 

ʻಕನ್ನಡʼ ಎಂದು ಮೆತ್ತಗೆ ಉತ್ತರಿಸಿದ ನನಗೆ ಆಕೆ ನನ್ನ ಲೆಕ್ಕಾಚಾರದ ಹಾಗೆಯೇ ʻಕೆನಡಾʼ ಎಂದು ಪುನರುಚ್ಛರಿಸಿದ್ದನ್ನು ಹೆಚ್ಚು ಹೃದಯದೊಳಕ್ಕೆ ತೆಗೆದುಕೊಳ್ಳಲು ಹೋಗಲಿಲ್ಲ. ಈಗೆಲ್ಲಾ ೧೦೦ಕ್ಕೆ ೯೫ ಮಂದಿಯೂ ಇಲ್ಲಿ ಕನ್ನಡವನ್ನು ʻಕನ್ನಡ್‌ʼ, ʻಕೆನಡಾʼ ಅಂತೆಲ್ಲಾ ಹೇಳೋದು ಕೇಳಿ ಕೇಳಿ ಅಭ್ಯಾಸವಾಗಿದೆ.

ಜನರ ಸಾಮಾನ್ಯ ಜ್ಞಾನ ಎಷ್ಟು ಚೆನ್ನಾಗಿದೆ ಎಂದರೆ, ಈ ಕನ್ನಡ ಭಾಷೆಯನ್ನು ದೇಶದ ಯಾವ ಭಾಗದಲ್ಲಿ ಮಾತಾಡುತ್ತಾರೆ ಎಂಬುದೂ ಹಲವರಿಗೆ ಗೊತ್ತಿರುವುದಿಲ್ಲ. ʻನೋಡಿ ಮಕ್ಕಳೇ ನಮ್ಮ ಭಾರತ ಅನ್ನೋ ದೇಶದ ದಕ್ಷಿಣ ಭಾಗದಲ್ಲಿ ಕರ್ನಾಟಕ ಅನ್ನೋ ರಾಜ್ಯವಿದೆ. ಆ ರಾಜ್ಯದ ಅಧಿಕೃತ ಭಾಷೆ ಕನ್ನಡʼ ಎಂದು ಮುದದಿಂದ ವಿವರಿಸುವುದೂ ನನಗೀಗೀಗ ಅಭ್ಯಾಸವಾಗಿಬಿಟ್ಟಿದೆ! 

ಕುರಿಯ ಮೈಯಲ್ಲಿದ್ದ ಕೂದಲನ್ನೆಲ್ಲ ಕಿತ್ತುಕೊಂಡು ತನ್ನ ಜಾಕೆಟ್ಟಿಗೇ ಅಂಟಿಸಿಕೊಂಡಂತಿದ್ದ ಹಾಗೂ ಆಗಿನ ಚಳಿಗೆ ಸ್ವಲ್ಪ ಹೆಚ್ಚೇ ಅನಿಸುವ ವೇಷಭೂಷಣದಲ್ಲಿದ್ದ ಆ ಪಂಜಾಬಿ ಹುಡುಗಿ, ನಾನೂ ಆಗಷ್ಟೇ ಬಂದು ಕೂತಿದ್ದ ಅಗ್ಗಿಷ್ಟಿಕೆ ಮುಂದೆ ಬಂದು ತಾನೂ ಕೂತಳು, ಚಳಿ ಕಾಯಿಸಲು. ʻಯಾವೂರು ಎಂದೆ?ʼ ʻಭಟಿಂಡಾʼ ಅಂದಳು. ʻಜಬ್‌ ವಿ ಮೆಟ್‌ʼ ನೆನಪಾಯಿತು. ಹೆಚ್ಚು ಮಾತಾಡುವ ಮೂಡಿರಲಿಲ್ಲದ್ದರಿಂದ ‘ಹುಂ’ ಎಂದು ಸುಮ್ಮನೆ ಕುಳಿತೆ.

ಆದರೆ ಅವಳಿಗೆ ನಿಲ್ಲಿಸುವ ಪ್ಲ್ಯಾನಿನಲ್ಲಿರಲಿಲ್ಲ. ʻಇನ್ನೊಂದೇ ವರ್ಷ! ನಾನು ಕೆನಡಾದಲ್ಲಿರುವೆ. ಅಲ್ಲಿ ಉನ್ನತ ಶಿಕ್ಷಣಕ್ಕಾಗಿ ಪ್ರಯತ್ನ ಮಾಡುತ್ತಿರುವೆ. ನಾವೆಲ್ಲರೂ ಅದ್ಕೇ ಟ್ರೈ ಮಾಡ್ತಿರೋದುʼ ಅಂತೆಲ್ಲ ಇಡೀ ತಂಡದ ಬಗ್ಗೆಯೂ ಇಷ್ಟುದ್ದ ಕಥೆ ಹೇಳಿ, ಮತ್ತೆ ಕನ್ನಡವನ್ನೂ ಕೆನಡಾವನ್ನೂ ಮಿಕ್ಸ್‌ ಮಾಡಿದಳು. ನನಗೆ ಈ ಬಾರಿ ನಿಜಕ್ಕೂ ತಲೆಬಿಸಿಯಾಯಿತು.

ʻಓ ದೇವರೇ, ನೀನು ಇದ್ದೀಯೆಂದಾದರೆ, ನನ್ನನ್ನು ಇವಳಿಂದ ಬಚಾವ್‌ ಮಾಡಿಬಿಡಪ್ಪಾʼ ಎಂದು ಮೇಲೆ ನೋಡಿ ಕೈಮುಗಿದು ಸುಮ್ಮನೆ ಕುಳಿತೆ. ಮಗನನ್ನು ನೋಡಿ ʻಇದು ಹುಡುಗನೋ ಹುಡುಗಿಯೋʼ ಅಂದಾಗಲಂತೂ ನಾನು ತಲೆತಿರುಗಿ ಬೀಳೋದೊಂದು ಬಾಕಿ. ಭಟಿಂಡಾದ ಹುಡುಗಿಯರೇ ಹೀಗಾ… ಜಬ್‌ ವಿ ಮೆಟ್‌ನ ಕರೀನಾ ಥರ ಅಂತ ಸಣ್ಣಗೆ ಸಂಶಯವೂ ಸುಳಿದುಹೋಗಿ ನಗು ಬಂತು.

ಇರಲಿ, ನಾನಿಲ್ಲಿ ಹೇಳಹೊರಟಿರುವ ಕಥೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಇನ್ನು ನೇರವಾಗಿ ವಿಷಯಕ್ಕೆ ಬರೋಣ. ಹಿಂಗೆ ಕಲ್ಲು ಹೊಡೆದೂ ಹೊಡೆದೂ ಮಾತನಾಡಿಸಿದ ಆಕೆ, ʻಇವತ್ತಷ್ಟೇ ಬಂದ್ರಿ ನೀವು ಅನ್ಸುತ್ತೆ. ನಾಳೆ ಏನು ಪ್ಲಾನು?ʼ ಅಂತ ಮತ್ತೆ ಪೀಠಿಕೆ ಹಾಕಿದಳು. ಇದು ತಾಳಮೇಳವಿಲ್ಲದ ಮಾತುಕತೆ ಎಂಬ ಲೆಕ್ಕಾಚಾರದ ಉದಾಸೀನತೆಯಿಂದ, ʻಇನ್ನೂ ಪ್ಲಾನು ಆಗಿಲ್ಲ. ಬಹುಶಃ ಗ್ರಹಣಕ್ಕೆ ಟ್ರೆಕ್!ʼ‌ ಅಂದೆ. ಅದಕ್ಕವಳು ಉತ್ತರವಾಗಿ, ʻನಾವಿವತ್ತು ಮಲಾನಾಕ್ಕೆ ಹೋದ್ವಿʼ ಅಂದಳು.

ಅಷ್ಟೂ ಹೊತ್ತೂ ಉಡಾಫೆಯಿಂದಿದ್ದ ನನಗೆ ಆಕೆ ಮಲಾನಾ ಅಂದಿದ್ದು ಕಿವಿ ನೆಟ್ಟಗಾಯಿತು. ʻಹೆಂಗಿತ್ತು ಮಲಾನಾ?ʼ ಅಂದೆ. ಒಂದೇ ಉಸಿರಿಗೆ, ʻಅಯ್ಯೋ ನಮ್ಗೇನು ಹುಚ್ಚಾ? ಆ ಹಳ್ಳಿ ವಿಚಿತ್ರವಪ್ಪಾ! ಅಲ್ಲಿ ಭಾರೀ ರೂಲ್ಸ್.‌ ರಸ್ತೆಯಂತೂ ಭಾರೀ ಮೋಸ. ನೀವು ಖಂಡಿತಾ ಹೋಗಬೇಡಿ. ಹೋದ್ರೂ ನಿಮ್ಮ ಕಾರಲ್ಲಂತೂ ಹೋಗಲೇಬೇಡಿ. ಕೆಳಗೆ ಪ್ರಪಾತದಲ್ಲಿರೋದು ಗ್ಯಾರೆಂಟಿ. ನಾವೆಲ್ಲ ಸ್ವಲ್ಪ ದೂರ ಹೋಗಿ ವಾಪಸ್‌ ಬಂದ್ವಿ. ಸಿಕ್ಕಾಪಟ್ಟೆ ನಡೀಬೇಕು. ಟ್ರೆಕ್‌ ಮಾಡಬೇಕು. ಬೆಟ್ಟದ ತುದೀನಲ್ಲಿ ಹಳ್ಳಿ. ಅಲ್ಲಿಗೆ ಹತ್ತೋದು ಅಷ್ಟರಲ್ಲೇ ಇದೆ.

ಇನ್ನೊಂದೇನು ಗೊತ್ತಾ? ಅಲ್ಲಿ ಯಾವುದನ್ನೂ ಮುಟ್ಟಬಾರದಂತೆ! ಅವರ ಮನೆ, ದೇವಸ್ಥಾನ, ಮಕ್ಕಳು, ಅಲ್ಲಿನ ಮನುಷ್ಯರು… ಯಾವುದನ್ನೂ ಮುಟ್ಟಬಾರದು, ಮುಟ್ಟಿದ್ರೆ ೩೫೦೦ ರೂಪಾಯಿ ದಂಡವಂತೆ! ಏನೋ ತಿಳೀದೆ ಅಪ್ಪಿತಪ್ಪಿ ಮುಟ್ಟಿಬಿಟ್ರೂ ಮೂರೂವರೆ ಸಾವಿರ ಕೊಟ್ಟು ಬರಬೇಕು. ಇಲ್ಲಿಂದ ಜೀಪಿಗೆ ದುಡ್ಡು ಸುರಿದು, ಕಷ್ಟ ಪಟ್ಟು ಬೆಟ್ಟ ಹತ್ತಿ ಆಮೇಲೆ ಅಲ್ಲಿ ದುಡ್ಡು ಧರ್ಮದಂಡ ಮಾಡಿ ಬರೋದಾ? ನೋ ವೇ. ಪುಣ್ಯಕ್ಕೆ, ಅಲ್ಲಿ ಗಾಡೀಲಿ ಇಳಿದ ಮೇಲೆ ಪಕ್ಕದ ಅಂಗಡಿಯವ್ನು ಈ ವಿಷಯ ಹೇಳಿದ. ನಮ್ಗೆ ಮೊದ್ಲು ಗೊತ್ತೇ ಇರಲಿಲ್ಲ. ಹುಚ್ಚಾ ನಮ್ಗೆ ಅಂತ ವಾಪಾಸ್ಸು ಬಂದ್ವಿʼ ಅಂತ ಒಂದೇ ಉಸಿರಲ್ಲಿ ತಾನು ಹೋಗೇ ಇಲ್ಲದ ಮಲಾನಾದ ಕಥೆ ಹೇಳಿ ಉಸಿರು ಬಿಟ್ಟಳು.

ಅರೆ, ಈ ಮಲಾನಾ ಬಗ್ಗೆ ಇದೆಲ್ಲ ಮೊದಲೇ ತಿಳಿದಿದ್ದರೂ, ಇಷ್ಟು ದೂರ ಬಂದು ಅಲ್ಲಿಗೆ ಹೋಗೋ ಯೋಚನೆ ನಾವ್ಯಾಕೆ ಮಾಡಿಲ್ಲ ಅಂತ ಒಂದು ಕ್ಷಣ ನನ್ನ ಬಗ್ಗೇ ನನಗೆ ಆಶ್ಚರ್ಯವೆನಿಸಿ, ನಮ್ಮ ಗ್ರಹಣದ ಪ್ಲ್ಯಾನು ಕೂಡಲೇ ತಲೆಕೆಳಗಾಗಿ ಮಲಾನಾ ಪ್ಲ್ಯಾನು  ಗರಿಗೆದರಿತು. ಗ್ರಹಣವನ್ನು ಒಂದು ದಿನ ಮುಂದಕ್ಕೆ ಹಾಕಿ, ಅದಕ್ಕೂ ಮುಂಚೆ ʻನಾಳೆನೇ ಮಲಾನಾಕ್ಕೆʼ ಜೈ ಎಂದೆ. ಹಾಗಾಗಿ ನಾ ಮಲಾನಾಕ್ಕೆ ಹೋದ ಕ್ರೆಡಿಟ್ಟು ಆ ಭಟಿಂಡಾ ಹುಡುಗಿಗೆ. ಎಲ್ಲಿಯ ಮಲಾನಾ, ಎಲ್ಲಿಯ ಭಟಿಂಡಾ!

ಒಮ್ಮೆ ನಿರ್ಧರಿಸಿದ ಮೇಲೆ ಹಿಂತಿರುಗಿ ನೋಡೋದುಂಟೇ? ಮರುದಿನ ಮಧ್ಯಾಹ್ನ ಗಂಟೆ ೨ಕ್ಕೆ ನಾವು ಆ ಪಾರ್ವತೀ ಕಣಿವೆಯ ಬೆಟ್ಟವೊಂದರ ತುತ್ತತುದಿಯ ಆ ಮಲಾನಾದಲ್ಲಿದ್ದೆವು. ಊರಿಗೆ ಊರೇ ಖಾಲಿ! ಜನರಿಗೆ ತಮ್ಮ ತಮ್ಮ ಮನೆಗಳನ್ನು ಕ್ಲೀನು ಮಾಡಲು ಪುರುಸೊತ್ತೇ ಇಲ್ಲ ಎಂಬಂತೆ ಚೆಂದ ಚೆಂದದ ಮರದ ಮನೆಗಳೆಲ್ಲ ಧೂಳು ಹಿಡಿದು ಜೇಡರ ಬಲೆಯಲ್ಲಿ ಮುಳುಗಿಹೋಗಿದ್ದವು. ಎಲ್ಲೋ ಒಂದಿಬ್ಬರು ಮುದುಕರು ದೇವಸ್ಥಾನದ ಜಗುಲಿಯಲ್ಲಿ, ಇನ್ನೊಂದು ನಾಲ್ಕು ಮಕ್ಕಳು ಇಡೀ ಊರೇ ತಮ್ಮ ಅಂಗಳವೆಂಬಂತೆ ಓಡಾಡಿಕೊಂಡು ಆಡುತ್ತಿದ್ದರು. ಉಳಿದವರೆಲ್ಲ ಎಲ್ಲಿ?

ಯಾಕೆ ಈ ಊರು ಇಷ್ಟೊಂದು ಬಿಕೋ ಎನ್ನುತ್ತಿದೆ ಎಂದರೆ, ಆ ಜಮದಗ್ನಿ ದೇವಸ್ಥಾನದ ಮೂಲೆಯಲ್ಲಿ ಕೂತ ತಾತ ತನ್ನ ಬೊಚ್ಚು ಬಾಯಗಲಿಸಿ, ಎಲ್ಲರೂ ಗದ್ದೆಗೆ ಹೋಗಿದ್ದಾರೆ, ಸಂಜೆ ಮೇಲೆಯೇ ಸಿಗೋದು ಎಂದು ಉತ್ತರಿಸಿ ತನ್ನ ಕೈಲಿದ್ದ ಸೊಪ್ಪನ್ನು ಎರಡೂ ಕೈಯಲ್ಲಿ ಅರೆಯುತ್ತಾ ಕೈಗಂಟಿದ್ದನ್ನು ಕೆರೆದು ತೆಗೆಯುತ್ತಾ, ʻಹೀಗೆ ನೋಡಿ ಮಲಾನಾ ಕ್ರೀಮು ಮಾಡೋದುʼ ಎನ್ನುತ್ತಾ ನಕ್ಕರು.

ಅದೊಂದು ಕಾಲವಿತ್ತು. ಮಲಾನಾ ಎಂಬ ಈ ಹಿಮಾಚಲದ ಹಳ್ಳಿ ತಲುಪಲು ಚಂದ್ರಖೇಣಿ, ದಿಯೋತಿಬ್ಬಗಳನ್ನು ಹತ್ತಿಳಿದು ೪೫ ಕಿಮೀ ನಡೆಯಬೇಕಿತ್ತು.  ಇನ್ನು ಚಳಿಗಾಲದಲ್ಲಿ ಊಹಿಸಿಯೂ ನೋಡಬೇಕಿಲ್ಲ. ಹಿಮಕರಗಿದ ನಂತರವಷ್ಟೆ ಹೋಗಬಹುದು. ಅಷ್ಟರವರೆಗೆ ಸಂಪರ್ಕ ಕಟ್.‌ ಸಧ್ಯ, ಈ ದೂರ ೨೧ ಕಿಮೀಗೆ ಇಳಿದಿದೆ ಕಸೋಲ್ ನಿಂದ.  ವಾಹನವೇರಿ ಹೊರಟರೆ, ೧೭ ಕಿಮೀ ನಿರಾಯಾಸ. ಇನ್ನುಳಿದ ನಾಲ್ಕು ಕಿಮೀ ಕಾಲ್ನಡಿಗೆಯಿಂದ ಬೆಟ್ಟವೇರಿದರೆ ಮುಗೀತು, ಮಲಾನಾದಲ್ಲಿ ನಾವಿರತ್ತೇವೆ!

ತೀರಾ ಒಂದೆರಡು ದಶಕಗಳ ಹಿಂದಿನವರೆಗೆ ಈ ಮಲಾನಾ ಎಂಬ ಹಳ್ಳಿಯೊಂದು ಸ್ವತಂತ್ರ ಹಳ್ಳಿ. ತನ್ನದೇ ಆದ ಪ್ರಜಾಪ್ರಭುತ್ವ ವ್ಯವಸ್ಥೆ. ತನ್ನದೇ ನ್ಯಾಯವ್ಯವಸ್ಥೆ. ತನ್ನದೇ ನೀತಿನಿಯಮಗಳು. ಹೊರಗಿನವರಿಗೆ ಪ್ರವೇಶವಿಲ್ಲ. ನಮ್ಮ ದೇಶ ಭಾರತವೆಂಬ ವಿಚಾರವೂ ಇವರ ತಲೆಯೊಳಗೆ ಸುಳಿಯದು. ಹೊರಗಿನ ಯಾವುದೇ ಹಸ್ತಕ್ಷೇಪವೂ ಹಳ್ಳಿಯೊಳಗೆ ಬರದು. ಹೊರಗಿನವರು ಹಳ್ಳಿಯೊಳಗೆ ಬಂದರೂ ಇವರ್ಯಾರನ್ನೂ ಅವರು ಮುಟ್ಟುವ ಹಾಗಿಲ್ಲ. ಹೀಗೆ ತಮ್ಮದೊಂದು ಬೇರೆಯದೇ ಪ್ರಪಂಚ ಕಟ್ಟಿಕೊಂಡಿದ್ದ ಇಲ್ಲಿ ಒಂದೆರಡು ದಶಕಗಳ ಹಿಂದಿನಿಂದ ನಿಧಾನವಾಗಿ ಹೊರಪ್ರಪಂಚಕ್ಕೆ ತೆರೆದುಕೊಂಡಿದೆ. ಗ್ರಾಮ ಪಂಚಾಯತ್‌ ಬಂದಿದೆ. ಚುನಾವಣೆಗಳು ನಡೆಯುತ್ತವೆ. ಶಾಲೆ ತೆರೆದಿದೆ. ಆದರೂ, ಹಳೇ ನಿಯಮಗಳು ಇನ್ನೂ ಅಳಿಸಿಹೋಗಿಲ್ಲ. ಊರಿನ ನ್ಯಾಯವೇ ಇವರಿಗೆ ಅಂತಿಮ. 

ಕಣ್ಣೆದುರಿಗೇ ಕಂಡ ಜಮದಗ್ನಿ ದೇವಸ್ಥಾನ, ಅದರ ಗೋಡೆಯಲ್ಲಿ, ಮುಟ್ಟಿದರೆ ೩೫೦೦ ರೂ ದಂಡ ಬೋರ್ಡು ನೇತಾಡುತ್ತಿತ್ತು. ಫೋಟೋ ಕ್ಲಿಕ್ಕಿಸಿದೆ, ಬೊಚ್ಚು ಬಾಯಗಲಿಸಿ ನನ್ನನ್ನೇ ನೋಡಿದ ಆ ತಾತ, ಕ್ರೀಮು ಹಿಡಿದ ಕೈಯನ್ನು ತೋರಿಸುತ್ತಾ, ಇದನ್ನೂ ತೆಗೀರಿ ಫೋಟೋ ಎಂದು ಪೋಸು ಕೊಟ್ಟರು.

ʻಯಾವೂರು ನಿಮ್ದು?ʼ ಅವರ ಕುತೂಹಲಭರಿತ ಪ್ರಶ್ನೆ. ʻಕರ್ನಾಟಕ, ದಕ್ಷಿಣ ಭಾರತʼ ಎಂದೆ. ʻಓಹೋ ಪರಶುರಾಮ ಕ್ಷೇತ್ರ ನಿಮ್ಮದು, ನೋಡಿ ಇದು ಆ ಪರಶುರಾಮನ ಅಪ್ಪನ ಕ್ಷೇತ್ರ, ಅರ್ಥಾತ್‌ ಜಮ್ಲು (ಜಮದಗ್ನಿ) ಮುನಿಗಳ ಊರು. ಇದು ಜಮದಗ್ನಿಯ ದೇವಸ್ಥಾನ. ಅವರೇ ನಮ್ಮನ್ನು ಕಾಯುವವರು, ನಾವು ನೀವು ಅಪ್ಪ ಮಗನ ಕಡೆಯವರು ನೋಡಿ, ಸಂಬಂಧಿಕರು ಹಾಗಿದ್ರೆʼ ಎಂದು ಮತ್ತೊಮ್ಮೆ ಮುದ್ದಾದ ಬೊಚ್ಚು ಬಾಯಿ ತೆರೆದು ನಕ್ಕರು. ಬಹಳ ಚಂದದ ಮರದ ಕಥ್ಕುನಿ ಶೈಲಿಯ ದೇವಸ್ಥಾನ. ಗೋಡೆಯ ತುಂಬೆಲ್ಲಾ ಜಿಂಕೆ ತಲೆಬುರುಡೆ, ಕೊಂಬುಗಳು.

ಊರಿಗೆ ಊರೇ ಪೂಜಿಸುವುದು ಜಮದಗ್ನಿಯನ್ನು. ಈ ಪುಟ್ಟ ಹಳ್ಳಿ ತುಂಬಾ ಇರುವುದು ಜಮದಗ್ನಿಯ ಮಂದಿರಗಳೇ. ಇಲ್ಲಿನ ಕಥೆಗಳ ಪ್ರಕಾರ, ಜಮದಗ್ನಿಯೇ ಇಲ್ಲಿ ವಾಸವಿದ್ದು ಈ ನೆಲದ ನಿಯಮಗಳನ್ನು ರೂಪಿಸಿದ್ದು. ಇಲ್ಲಿನ ಜನರ ಪ್ರಕಾರ, ಇದು ಪ್ರಪಂಚದ ಅತ್ಯಂತ ಹಳೆಯ ಪ್ರಜಾಪ್ರಭುತ್ವ ವ್ಯವಸ್ಥೆಯಾಗಿದ್ದು,  ಈಗಲೂ ಅದನ್ನೇ ಪಾಲಿಸುತ್ತಿದೆ.

ಇವಿಷ್ಟೇ ಅಲ್ಲ. ಅವರು ಇನ್ನೂ ಒಂದು ಕಥೆ ಹೇಳುತ್ತಾರೆ. ಅವರ ಪ್ರಕಾರ ತಾವು ಗ್ರೀಸ್‌ನಿಂದ ವಲಸೆ ಬಂದ ಅಲೆಗ್ಸಾಂಡರನ ವಂಶಸ್ಥರು. ಅಲೆಗ್ಸಾಂಡರ್‌ ಇಲ್ಲಿ ಬಂದಿದ್ದಾಗ ಅವನ ಸೇನೆಯ ಒಂದಿಷ್ಟು ಮಂದಿ ಇಲ್ಲಿ ನೆಲೆ ನಿಂತರು ಎಂಬುದು ಅಂತೆಕಂತೆಗಳು. (ಆದರೆ ಇದು ನಿಜವಲ್ಲ. ಈ ಬಗ್ಗೆ ಮಾಹಿತಿ ಕಲೆ ಹಾಕುತ್ತಾ ಹೋದರೆ, ಅಲೆಗ್ಸಾಂಡರನ ಸೇನಾ ವಂಶಸ್ಥರು ಬಂದಿದ್ದೂ ಹೌದು, ನಮ್ಮ ನಾಡಿನಲ್ಲಿ ನೆಲೆ ನಿಂತಿದ್ದೂ ಹೌದು. ಆದರೆ ಅದು ಮಲಾನಾವಲ್ಲ. ಅದು ಈಗಿನ ಪಾಕಿಸ್ಥಾನದ ಕಲಶ್‌ ಎಂಬ ಕಣಿವೆಯಲ್ಲಿ. ಈ ಬಗ್ಗೆ ಡಿಎನ್‌ಎ ಪರೀಕ್ಷೆಗಳೂ ನಡೆದಿದ್ದು, ಈ ಸತ್ಯಾಸತ್ಯತೆಯನ್ನು ಪತ್ತೆ ಹಚ್ಚಲಾಗಿದೆ. ಮಲಾನಾದ ಜನರ ಡಿಎನ್‌ಎ ದಕ್ಷಿಣ ಏಷ್ಯಾ/ಇಂಡೋ- ಆರ್ಯನ್‌ ಡಿಎನ್‌ಎಯನ್ನು ಹೋಲುವುದರಿಂದ ಗ್ರೀಸ್‌ ಸಂಬಂಧವನ್ನು ತಳ್ಳಿಹಾಕಲಾಗಿದೆ.)

ಕುಲ್ಲು ಕಣಿವೆಯೊಳಗೆ ಹತ್ತಿರ ಹತ್ತಿರ ೨೦೦ ಹಳ್ಳಿಗಳಿವೆ. ಆದರೆ ಮಲಾನಾ ಎಂದೆಂದಿಗೂ ಇವೆಲ್ಲ ಹಳ್ಳಿಗಳಿಂದ ತನ್ನ ಅಂತರ ಕಾಯ್ದುಕೊಂಡಿದೆ. ಇಡೀ ಕುಲ್ಲು ಕಣಿವೆಯ ಹಳ್ಳಿಗಳೆಲ್ಲವೂ ಕುಲುಹಿ ಭಾಷೆಯನ್ನು ಮಾತಾಡಿದರೆ, ಮಲಾನಾ ಇದರಲ್ಲೂ ಡಿಫರೆಂಟು. ಇವರು ಇಂದಿಗೂ ಮಾತನಾಡುವುದು ಲಿಪಿಯಿಲ್ಲದ ಕನಶಿ ಭಾಷೆಯನ್ನು. ಮಲಾನಾದ ಜನರು ಕುಲುಹಿ ಭಾಷೆ ಕಲಿತು ಹತ್ತಿರದ ಹಳ್ಳಿಗಳ ಮಂದಿಯೊಂದಿಗೆ ಸಂಪರ್ಕ ಸಾಧಿಸಿದರೂ, ತಮ್ಮ ಹಳ್ಳಿಯ ಭಾಷೆಯನ್ನು ಮಾತ್ರ ಜತನದಿಂದ ತಮಗಾಗಿ ಮಾತ್ರ ಉಳಿಸಿಕೊಂಡಿದ್ದಾರೆ.

ಒಂದು ಕಾಲದಲ್ಲಿ ತನ್ನ ವಿಶಿಷ್ಟ ಸಂಸ್ಕೃತಿಯಿಂದ ಮೆರೆದಿದ್ದ ಮಲಾನಾ ಖಂಡಿತವಾಗಿಯೂ ಈಗ ಅಂದಿನಂತಿಲ್ಲ. ಜಾಗತೀಕರಣ, ಪ್ರವಾಸೋದ್ಯಮದ ನೆರಳಿನಲ್ಲಿ ಮುಗ್ಧತೆಯನ್ನು ಕಳೆದುಕೊಂಡಿದೆ. ಮಲಾನಾ ಜಲವಿದ್ಯುತ್‌ ಯೋಜನೆ ದಶಕಗಳ ಹಿಂದೆ ಇಲ್ಲಿಗೆ ಕಾಲಿಟ್ಟ ಮೇಲಂತೂ ಮಲಾನಾ ಸಾಕಷ್ಟು ಬದಲಾಗಿದೆ. ಬೇರೆಯೇ ಪ್ರಪಂಚದಲ್ಲಿದ್ದ ಮಲಾನಾ ಜನರನ್ನು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ತೆರೆಸಿಕೊಂಡಿದ್ದು ಇದೂ ಕೂಡಾ. ಹಳ್ಳಿಯೊಳಗೆ ಕಾಲಿಡುತ್ತಿದ್ದಂತೇ ಸ್ವಾಗತಿಸುವ ಕಸದ ರಾಶಿ ಇದಕ್ಕೊಂದು ಸಣ್ಣ ಉದಾಹರಣೆ. 

ಏರು ಹಾದಿಯ ಸುಡುಬಿಸಿಲಿನಲ್ಲಿ ಚರ್ಮ ಒಣಗಿಸುತ್ತಾ ಹತ್ತಿದ್ದ ನಾವು ಆ ಅಂಗಡಿಯ ಬದಿಯಲ್ಲಿದ್ದ ಮರದ ಬೆಂಚಿನಲ್ಲಿ ಉಸ್ಸೆಂದು ಕೂತಿದ್ದೆವು. ಆ ಪುಟಾಣಿ ಗೂಡಂಗಡಿಯಲ್ಲಿ ಸುಖಾಸುಮ್ಮನೆ ಆ ಕಂಪನಿಯ ಪ್ಲಾಸ್ಟಿಕ್‌ ಕುರ್ಚಿಯ ಮೇಲೆ ಆಗಸಕ್ಕೇ ಕಾಲುಚಾಚಿ ನಿಧಾನಕ್ಕೆ ಹೊಗೆ ಬಿಡುತ್ತಾ, ತನ್ನಷ್ಟು ಸುಖಿ ಈ ಜಗತ್ತಿನಲ್ಲೇ ಯಾರೂ ಇಲ್ಲ ಎಂಬಂಥ ಭಾವಭಂಗಿಯಲ್ಲಿ ಕೂತಿದ್ದ ಆತ,  ಮಾತನಾಡುತ್ತಾ, ʻಏನು ಮಾಡೋಣ ಹೇಳಿ, ವಿದೇಶೀ ಪ್ರವಾಸಿಗರಿಂದಾಗಿ ನಮ್ಮ ಹಳ್ಳಿ ಹಾಳಾಗಿ ಹೋಯಿತು. ಬಂದರೆ ಇಲ್ಲಿ ತಿಂಗಳುಗಟ್ಟಲೆ ಕೂತುಬಿಡುತ್ತಿದ್ದರು. ಅವರ ದುಡ್ಡೇನೋ ಬಂತು, ಸಾಕಷ್ಟು ಹೋಂಸ್ಟೇಗಳೂ ಬೆಳೆದವು. ಆದರೆ, ಊರು ಹಾಳಾಗಿ ಹೋಯಿತು.

ಅದಕ್ಕೆ, ನಾವೆಲ್ಲ ಸೇರಿ ಕಳೆದ ಕೆಲವು ವರ್ಷಗಳಿಂದ ಅವರನ್ನು ಹಳ್ಳಿಯೊಳಗೆ ಬಿಡುತ್ತಿಲ್ಲ. ರಾತ್ರಿ ಇಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯನ್ನೂ ಬಹಳಷ್ಟು ನಿಲ್ಲಿಸಿಬಿಟ್ಟಿದ್ದೇವೆ. ಈಗೆಲ್ಲ ಬಂದವರು ಅದೇ ದಿನ ಇಳಿದುಹೋಗುತ್ತಾರೆ. ಈಗ ಸ್ವಲ್ಪ ನೆಮ್ಮದಿ ಮರಳಿದೆ ಎಂದ. ಆ ಅಂಗಡಿಯಾತನ ಈ ಹಪಹಪಿತನಕ್ಕೆ ಕಾರಣವೂ ಇದೆ. ಅದು ಅಲ್ಲಿನ ಗಾಂಜಾ ಬೆಳೆ ನಂಟು!

೭೦ರ ದಶಕದವರೆಗೆ ವೈದ್ಯಕೀಯ ಬಳಕೆಗಾಗಿ ಬೆಳೆಯುತ್ತಿದ್ದ ಗಾಂಜಾವನ್ನು ಮಾದಕ ದ್ರವ್ಯವಾಗಿ ಬಳಸುವುದು ಹೇಗೆ ಎಂದು ಇಸ್ರೇಲೀಯರಿಂದ ಕಲಿತುಕೊಂಡ ಈ ಹಳ್ಳಿಗರು, ಅದನ್ನೊಂದು ವ್ಯಾಪಾರೀ ಬೆಳೆಯಾಗಿ ಬೆಳೆಸಲು ಪ್ರಾರಂಭಿಸಿದ್ದೇ ಪ್ರವಾಸಿಗರ ಮೂಲ ಆಕರ್ಷಣೆಯಾಯಿತು. ಅದರ ನಾರಿನಿಂದ ವಿವಿಧ ಕರಕುಶಲ ವಸ್ತುಗಳು ತಯಾರಾದರೆ, ಮಲಾನಾ ಕ್ರೀಂ ಪ್ರಪಂಚದಾದ್ಯಂತ ಬಹುಬೇಡಿಕೆಯ ವಸ್ತುವಾಯಿತು!
ಇಷ್ಟೆಲ್ಲ ಆಗಿ ವಾಪಸ್ಸು ಬರುವಾಗ ಮನೆಯಿಂದ ಕಾಲ್.‌ ಗ್ರಹಣಕ್ಕೆ ಹೋಗುತ್ತೇವೆ, ಇನ್ನೆರಡು ದಿನ ಫೋನ್‌ ಸಿಗಲ್ಲ ಅಂದು, ಸಡನ್ನು ಪ್ಲ್ಯಾನು ಬದಲಿಸಿ ಮಲಾನಾಕ್ಕೆ ಬಂದಿದ್ದೆವು. ʻಫೋನು ಸಿಗಲ್ಲ ಅಂತಿದ್ರಿ! ಆದ್ರೆ ಸಿಕ್ತಿದೆ!ʼ ಆ ಕಡೆಯಿಂದ ಆಶ್ಚರ್ಯ.

ʻಲಾಸ್ಟ್‌ ಮಿನಿಟ್ಟಲ್ಲಿ ಪ್ಲ್ಯಾನು ಚೇಂಜಾಯ್ತು, ಗ್ರಹಣ್‌ ಅಲ್ಲ ಮಲಾನಾಕ್ಕೆ ಬಂದಿದ್ವಿʼ, ಈ ಬದಿಯಿಂದ ಉತ್ತರ. ʻಹೌದಾ? ಅದೇನದು ಮಲಾನಾ? ಮತ್ತೆ ಪ್ರಶ್ನೆ. ಅದೊಂದು ಹಳ್ಳಿ. ಅಲ್ಲಿ ಅವರದ್ದೇ ಪ್ರಜಾಪ್ರಭುತ್ವ. ಅವರದ್ದೇ ವ್ಯವಸ್ಥೆ. ಅಲ್ಲಿ ನಾವು ಹೊರಗಿನೋರು ಏನನ್ನೂ ಮುಟ್ಟೋ ಹಾಕಿಲ್ಲ! ಮುಟ್ಟಿದ್ರೆ ೩೫೦೦ ದಂಡʼ ಈ ಕಡೆಯಿಂದ ಪ್ರತ್ಯತ್ತರ. ʻಅಯ್ಯೋ, ಇದೊಳ್ಳೆ ಕಥೆಯಾಯ್ತಲ್ಲ! ಅವರ ಊರಿಗೆ ಹೋಗಿ ಅಲ್ಲಿ ಏನೂ ಮುಟ್ಟೋ ಹಾಗಿಲ್ಲ ಅಂದ್ರೆ ಏನರ್ಥ? ಇಂಥ ಊರಿಗೆಲ್ಲ ಯಾಕೆ ಹೋಗ್ತೀರಿ ಅಂತ? ದಂಡ ತೆತ್ರಾ ಹೇಗೆ?ʼ ಅನ್ನುವಲ್ಲಿಗೆ ಮಂಗಳಾರತಿ ಕಾರ್ಯಕ್ರಮ ಮುಗಿಯಿತು.

‍ಲೇಖಕರು ರಾಧಿಕ ವಿಟ್ಲ

November 8, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: