ಗುಳಗಿ ಉಂಡಿ, ಲಡಕಿ ಉಂಡಿ… ಗುಳ್ಳಡಕಿ ಉಂಡಿ

ಹೆಸರೇ ಅನಾಮಿಕಾ ಹಾಗಾಗಿಯೇ ಈಕೆ ಅನಾಮಿಕೆ .

ಹೆಸರು ಹೇಳಲು ಒಲ್ಲದ ಈಕೆ ಭೋಜನಪ್ರಿಯೆ ಅಂತ ಬಿಡಿಸಿ ಹೇಳಬೇಕಿಲ್ಲವಲ್ಲ. ಅದು ಎಷ್ಟು ಖರೆ ಎಂದು ನಮಗೂ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ನಿಜ. ಭೋಜನಕ್ಕೆ ನಮ್ಮನ್ನು ಬಡಿದೆಬ್ಬಿಸುವಂತೆ ಈಕೆ ಬರೆಯುತ್ತಾಳೆ.

ಅಷ್ಟೇ ಆಗಿದ್ದರೆ ಇದನ್ನು ಒಂದು ರಸ ರುಚಿಕಾಲಂ ಹೆಸರಿನಡಿ ಸೇರಿಸಿ ನಾವು ಕೈ ತೊಳೆದುಕೊಳ್ಳುತ್ತಿದ್ದೇವೇನೋ..!

ಆಕೆಗೆ ಒಳಗಣ್ಣಿದೆ. ಒಂದು ಆಹಾರ ಹೇಗೆ ಒಂದು ಸಂಸ್ಕೃತಿಯ ಭಾಗವಾಗಿ ಬರುತ್ತದೆ ಎನ್ನುವುದರ ಬಗ್ಗೆ ಹಾಗೂ ಹೇಗೆ ಆಹಾರ ಒಂದು ಸಂಸ್ಕೃತಿಯನ್ನು ರೂಪಿಸುತ್ತದೆ ಎನ್ನುವುದರ ಬಗ್ಗೆಯೂ

ಹಾಗಾಗಿಯೇ ಇದು ರಸದೂಟವೂ ಹೌದು ಸಮಾಜ ಶಾಸ್ತ್ರದ ಪಾಠವೂ ಹೌದು.

ಹಿಂಗಂದ ಕೂಡಲೇ ಬಾಗಲಕೋಟಿಯವರು, ಬೆಳಗಾವಿಯವರು ಕಣ್ಮುಚ್ಚಿ ಒಮ್ಮೆ ಧ್ಯಾನ ಮಾಡೇ ಬಿಡ್ತಾರ. ಸಣ್ಣ ಸಣ್ಣ ಬೂಂದಿಕಾಳಿನ ಉಂಡಿಗೆ ಒಣಕೊಬ್ಬರಿಯ ಒಗರು ರುಚಿ, ಗಸಗಸೆಯ ಮಂದ ರುಚಿ, ಬೆಲ್ಲದ ಪಾಕ, ಏಲಕ್ಕಿ ಘಮ, ಜಾಯಿಕಾಯಿ ಪುಡಿಯ ವಾಸನೆ ಎಲ್ಲವೂ ಕಣ್ಮುಂದೆ, ಮೂಗಿನ ಮುಂದೆ ಹಾದುಹೋಗಿರಲೂ ಸಾಕು.

ಈ ಉಂಡಿಯ ವಾಸನಿ, ರುಚಿ, ಘಮ ಎಲ್ಲವೂ ನೆನಪಾಗ್ತಾವ. ಇದೊಂಥರ ದೇವರಿದ್ದಂಗ. ಕಣ್ಬಿಟ್ಟು ನೋಡುವುದಕ್ಕಿಂತ, ಕಣ್ಮುಚ್ಚಿ ಕಾಣುವುದೇ ಹೆಚ್ಚು. ಯಾಕಂದ್ರ ಈ ಉಂಡಿಯ ಗಮ್ಮತ್ತು ಮತ್ತು ಎರಡೂ ಅಂಥವೇ. ಉಂಡಿ ತಿನ್ನೂ ಮುಂದ ಎಷ್ಟೇ ಎಚ್ಚರದಿಂದ ತಿಂದ್ರೂ ಕೈ ಬೆರಳೆಲ್ಲ ಜಿಬಿಜಿಬಿ ಆಗಿ, ಅದನ್ನ ತೊಳ್ಯಾಕೂ ಮನಸಾಗದೇ, ಸ್ವಚ್ಛೆ ನೆಕ್ಕಿ, ಸಂತೃಪ್ತರಾಗಿ ಕೈ ತೊಳಿಯೂ ಸುಖನೆ ಬೇರೆ.

ನೀವು ಹೆಂಗೇ ಪ್ರಯತ್ನಿಸಿದರೂ ನಿಮ್ಮನ್ನ ಅಂಟಿಕೊಳ್ಳದೇ ಇರದು… ಕರ್ಮ ಸಿದ್ಧಾಂತದ ಹಂಗ. ಪಟ್ನೆ ಬಾಯಿಗೆ ಹಾಕಿಕೊಂಡರೂ ಎರಡೂ ಬೆರಳಿನ ತುದಿಗಂತೂ ಅಂಟ್ಕೊಳ್ಳತ್ತೆ. ಥೇಟ್‌ ಮೋಹದಂತೆ!

ಈ ಉಂಡಿಗೆ ಬಾಗಲಕೋಟೆಯೊಳಗ ಗುಳಗಿ ಉಂಡಿ ಅಂತಾರ. ಖಾರಾ ಬೂಂದಿ ತಿಂದೇರಿ ಹೌದಿಲ್ಲೊ. ಕುರುಂಕುರುಂ ಅಂತಾವ. ಉಪ್ಪು ಖಾರ ಬಾಯ್ತುಂಬ ತಾಕ್ತದ. ಹಂಗೆನೆ ಇವು ಸಿಹಿ ಬೂಂದಿ. ಆದ್ರ, ಬೂಂದಿ ಲಾಡುವಿನ್ಹಂಗ ಮೃದು ಕೋಮಲ ಇರೂದಿಲ್ಲ. ಗರಿಗರಿಯಾಗಿ, ಕುರುಂಕುರುಂ ಅಂತಾವ. ಬಾಯಾಗ ಸಿಡದಾಗ, ಬೆಲ್ಲದ ರುಚಿ, ಗಸಗಸೆ, ಕೊಬ್ಬರಿ ಎಲ್ಲವೂ ಸೋಕ್ತಾವ. ರುಚಿಮೊಗ್ಗು ಅರಳಸ್ತಾವ.

ಮನ್ಯಾಗ ಕಡಲಿಬ್ಯಾಳಿ ಮೈ ಕೆಂಪೇರುಹಂಗ ಹಂಚಿನಾಗ ಹುರೀಬೇಕು. ಹಿಂಗ ಹುರದ ಕಡಲಿಬ್ಯಾಳಿ, ಆರಿದೊಡನೆ ಸಣ್ಣಗೆ ಹಿಟ್ಟಾಗುವಹಂಗ ಬೀಸ್ತಾರ. ನುಣ್ಣನೆಯ ಹಿಟ್ಟನ್ನು ಜರಡಿ ಹಿಡ್ಕೊಂಡು, ದೋಸೆ ಹದಕ್ಕ ನೀರು ಬೆರಸ್ತಾರ. ಒಂದೇ ಒಂದು ಸಣ್ಣ ಗಂಟು ಉಳೀದಿರೋಹಂಗ ಸೌಟಿಗೂ, ಪಾತ್ರೆಗೂ ಗಿಣಿಮಿಣಿ ಗಿಣಿಮಿಣಿ ತಿರಗಸ್ತಾರ. ನೀರು, ಹಿಟ್ಟು ಕಲತು ಒಂದೇ ಆಗ್ತದ. ಇನ್ನ ಬೇರ್ಪಡಿಸಾಕ ಆಗೂದಿಲ್ಲ ಅನ್ನುವಾಗ, ಜರಡಿ ತೊಗೊಂಡು, ಎಣ್ಣಿ ಬಾಣಲಿ ಮ್ಯಾಲೆ ಹಿಡಿದು, ಈ ಹಿಟ್ಟು ಸೌಟಿಲೆ ಸುರಕೊಂತ ಹೋಗ್ತಾರ. 

ಮಳಿಹನಿ ಬಿದ್ದಂಗ ಅವು ಬಾಣಲೆಗೆ ಇಳೀತಾವ. ಗರಿಗರಿಯಾಗೂಹಂಗ ಕಡುಕೆಂಪು ಬಣ್ಣಕ್ಕ ತಿರಗ್ತಾವ. ಅವಾಗ ಅವನ್ನೂ ಆರಾಕ ಒಂದು ಟಿಶ್ಯುಪೇಪರಿಗೆ ಹಾಕ ಬೇಕು. ಎಣ್ಣಿ ಎಲ್ಲ, ಪೇಪರಿಗೆ ಇಳೀಲಿ ಅಂತ, ಬೀಚಿನ ಪಕ್ಕದ ಮರಳಿನಾಗ ಕೆಂಬಣ್ಣದ ಚೆಲುವಿ, ಮೈಹರವಿಕೊಂಡಂಗ ಇವೂ ಸುಮ್ನ ತಾಟಿನಾಗ ಮೈಚೆಲ್ಕೊಂಡಿರ್ತಾವ. 

ತುಸು, ಬಿಸಿ ಇದ್ದಾಗ ಒಂದು ಜಾಯಿಕಾಯಿ ಪುಡಿ, ಎರಡು ಏಲಕ್ಕಿ ಪುಡಿ, ಒಂದೀಸು ಗಸಗಸೆ, ಒಂದಷ್ಟು ಒಣಕೊಬ್ಬರಿ, ಒಣ ದ್ರಾಕ್ಷಿ, ಗೋಡಂಬಿ, ಎಲ್ಲಾನೂ ಸುರದು, ಕೈಲೆ ಕಲಸ್ತಾರ. ಅದೊಂಥರ ಚಂದ ಕಾಣ್ತಿರ್ತದ. ಇವನ್ನು ಅಲ್ಲೇ ಇಟ್ಟು, ಒಲಿಮ್ಯಾಲೆ ಬೆಲ್ಲ ಕಾಯಾಕ ಇಡ್ತಾರ. ಅಗ್ದಿ ಎಳೀಕೂಸಿನ ಮುಕ ತೊಳದ್ಹಂಗ, ಒಂದೀಸೆ ಈಸು, ನೀರು ಹಾಕಿ, ಕೈ ಆಡಸ್ಕೊಂತ ಇರಬೇಕು. 

ಕಬಡ್ಡಿ ಆಡೂಮುಂದ, ಉಸಿರು ಬಿಡದೆ ಹೇಳ್ಬೇಕಲ್ಲ ಹಂಗ… ಜಪ ಮಾಡೂಮುಂದ 108 ಮಣಿ ಎಣಸೂತನಾನೂ ಮತ್ತ ಯಾವಕಡೆನೂ ಲಕ್ಷ್ಯ ಹೋಗೂದಿಲ್ಲಲ್ಲ ಹಂಗ… ಇದೇ ಬೆಲ್ಲದ ಆಣದೊಳಗ ಕೈ ಆಡಸ್ಕೊಂತ ಇರಬೇಕು. ಸಣ್ಣಗೆ ನೊರೆ ಮೂಡಿ, ಸಣ್ಣ ಗುಳ್ಳೆಗಳು ಒಡೆದೊಡೆದು ಹೋಗುವಾಗ, ಹದ ಬಂದಿದೆಯೇ ಪರಿಶೀಲಿಸಬೇಕು.

ಬಟ್ಟಲೊಳಗೆ ನೀರು ಹಾಕಿ, ಈ ಪಾಕವನ್ನು ಅದಕ್ಕೆ ಬೆರೆಸಬೇಕು. ನೇರ ತಳಕ್ಕಿಳಿದ ಪಾಕ, ಮುಟ್ಟಿದಾಗ ಮುರುಟಿಕೊಂಡು, ಉಂಡೆ ಕಟ್ಟಿಕೊಳ್ಳುತ್ತಿದ್ದರೆ ಪಾಕ ಸಿದ್ಧವಾಗಿದೆ ಅಂತರ್ಥ.  ಆ ಕ್ಷಣಕ್ಕೆ ಒಲೆಯ ಕಾವು ಕಡಿಮೆಯಾಗಬೇಕು. ಆರಿಸಬೇಕು.. ಹಾಗೆ ಆರಿಸಿದೊಡನೆ, ಪಾಕ ತಣಿಯುವುದರಲ್ಲಿ ಈ  ಬೂಂದಿ ಮಿಶ್ರಣವನ್ನು ಅದಕ್ಕೆ ಸುರಿದು, ಕಲಿಸಬೇಕು. 

ಇಡೀ ಮಿಶ್ರಣ ಬಿಸಿಯಿರುವಾಗಲೇ, ಒಂದಷ್ಟು ತುಪ್ಪ ಅದಕ್ಕೆ ಹಾಕಿ, ಕಲಿಸಬೇಕು. ತುಪ್ಪ ಉಂಡೆಗಳು ಒಡೆಯದಂತೆ ಕಾಯುತ್ತವೆ. ಹೀಗೆ ಬಿಸಿಯಿರುವಾಗಲೇ ಅಂಗೈಗೂ ಒಂದಷ್ಟು ತುಪ್ಪ ಸವರಿಕೊಳ್ಳಬೇಕು. ಕೆಂಡದ ಮೇಲೆ ದಾಪುಗಾಲು ಹಾಕಿ ನಡೆಯುವಂತೆ, ಅಂಗೈಮೇಲೆ ಈ ಬಿಸಿಯುಂಡೆಯ ಮಿಶ್ರಣವನ್ನು ಸುರಿದುಕೊಳ್ಳಬೇಕು. ಅಂಗೈಗೆ ತುಪ್ಪ ಸವರಿಕೊಂಡಿರುವುದರಿಂದ ಶಾಖ ತಾಕುವ ಮುನ್ನವೇ, ದುಂಡಾಗಿ ಅವನ್ನು ಕಟ್ಟುತ್ತ ಹೋಗಬೇಕು. 

ಹಿಂಗ ಕಟ್ಟಿದ ಉಂಡಿ ತಪ್ಪಿನೂ ಫ್ರಿಜ್ಜಿನಾಗ ಇಡೂಹಂಗಿಲ್ಲ. ಅಜ್ಜಿಯ ಉಂಡೆ ಡಬ್ಬಿಯೊಳಗೆ ಭದ್ರ ಇರ್ತಾವ ಇವು.  ಗುಳಗಿ ಉಂಡಿ ಅಥವಾ ಲಡಕಿ ಉಂಡಿ ಸಾಮಾನ್ಯಗೆ ನಾಗರ ಪಂಚಮಿಗೆ ಮಾಡ್ತಾರ. ದೀಪಾವಳಿ ಟೈಮಿಗೂ ಮಾಡ್ತಾರ. ಇವು ಬುತ್ತಿ ಕಟ್ಟಾಕ ಅಗ್ದಿ ಹೇಳಿ ಮಾಡಿಸಿದ ಉಂಡಿಗಳು. ಚಳಿಗಾಲದ ಚಳಿಗೆ ಇವು ಮೆತ್ಗ ಆಗೂದಿಲ್ಲ. ಮತ್ತ ತೇವಾಂಶದಿಂದಾಗಿ ಬೂರ್ಸು ಬರೂದಿಲ್ಲ. ಇದೇ ಕಾರಣಕ್ಕ ಈಗ ಗೋಕಾಕಿನ ಲಡಕಿ ಉಂಡಿಗಳು ಆಗಾಗ ಎಲ್ಲ ವಸ್ತುಪ್ರದರ್ಶನಗಳಲ್ಲಿಯೂ ಜಾಗ ಪಡದದ.

ಶ್ರಾವಣ ಮಾಸ ಬಂದೀತವ್ವ ಕರಿಯಾಕ ಅಣ್ಣಯ್ಯ ಬರಲಿಲ್ಲ ಅಂತ ಹಾಡ್ಹೇಳಿ ಕಣ್ಣೀರಾಗುವ ತಂಗಿಯಂದಿರು, ಗುಳ್ಳಡಕಿ ಉಂಡಿ  ಮಾಡೂಮುಂದ ಎರಡೂ ಸಂಸಾರಗಳನ್ನ ತೂಕ ಹಾಕ್ತಿರ್ತಾರ. ಅವ್ವನ ಹತ್ರ ಏನು ಹೇಳಬೇಕು, ಎಷ್ಟು ಹೇಳಬೇಕು. ಎಷ್ಟು ಹೇಳಿದ್ರ ತಾವು ಹಗುರ ಆದಾರು, ಕಣ್ಣೀರಾದ್ರ, ಅವ್ವಾರಿಗೆ ಭಾರ ಎಷ್ಟಾತು.. ಹಿಂಗೆ ಕಡಲಿಹಿಟ್ಟಿನ್ಹಂಗೆ ಒಳಗೊಳಗೆ ಸೋಸ್ತಾರ. 

ಬಾಣಲಿಯೊಳಗ ಬೇಯುಮುಂದ ತಾವು ಬೆಂದು, ಒಳಗೊಳಗ ಟೊಳ್ಳಾಗಿರುವುದು, ಹೊರಗೆಲ್ಲ ಗರಿಗರಿಯಾಗಿ ನಕ್ಕಿರೂದು ತಿಳೀತದ. ಆದ್ರ ಅವ್ವ, ಅಪ್ಪನ ಬೆಲ್ಲದಂಥ ಪ್ರೀತಿಯೊಳಗ ಎರಕ ಹೊಯ್ದಾಗ ಎಲ್ಲ ದುಃಖಗಳೂ ಬೂಂದಿಕಾಳಿನಷ್ಟೇ ಹಗುರ ಅನಸ್ತಾವ. ಜೊಳ್ಳ ಅನಿಸ್ತಾವ. ಇಡೀ ಕುಟುಂಬವನ್ನು ಹತ್ಯಗೆ ಅಂಗೈಯೊಳಗ ಭದ್ರವಾಗಿ ಇಟ್ಕೊಬೇಕಂದ್ರ ಅಂಗೈಗೆ ತುಪ್ಪ ಸವರಿಕೊಂಡಿರಲೇಬೇಕು. ಯಾವ ಬಿಸುಪಿಗೂ, ಕಾವಿಗೂ ಒಳಗಾಗದಂತೆ ಕಟ್ಕೊಂತ ಇರಬೇಕು.

ಬಿಸಿಯಲ್ಲಿ ಬೇಯುವ, ತಣಿಯುವ, ತಣಿಯುವುದರಲ್ಲಿಯೇ ಒಗ್ಗೂಡುವ ಪ್ರಕ್ರಿಯೆ ಕಲಿಸುವ ಈ ಉಂಡಿಗೆ ಅದಕ್ಕೆ ‘ಲಡಕಿ’ ಉಂಡಿ ಅಂದಿರಬಹುದು. ಬಾಂಧವ್ಯದ ಸ್ವಾಸ್ಥ್ಯವನ್ನು ಕಾಪಿಡುವುದರಿಂದ ಗುಳಗಿ ಉಂಡಿ ಅಂತಲೂ ಕರೆದಿರಬಹುದು.

‍ಲೇಖಕರು ಅನಾಮಿಕಾ

November 8, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Sunitha

    ನೀವು ಯಾಕಿನ್ನ ಗುಳ್ಗ ಉಂಡಿದ ಬರದಿಲ್ಲ ಅಂತ ವಿಚಾರದಾಗಿದ್ದ ನಂಗ ಉಂಡಿ ತಿಂದಂಗ ಆತು. ಗುಳ್ಡಕಿ ಉಂಡಿ ಗೋಧಿಲೆ ಮಾಡತಾರ ಅಲ್ಲ?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: