ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅನ್ಯಾಯದ ವಿರುದ್ಧ ಧ್ವನಿಯೆತ್ತಿದ ವೈದ್ಯನ ಕಥೆ

ಮೂಲ ಡಾ. ಕಫೀಲ್ ಖಾನ್ ಅವರ ‘ದಿ ಗೋರಖ್‌ಪುರ ಹಾಸ್ಪಿಟಲ್ ಟ್ರಾಜಿಡಿ’

ಪರ್ತಕರ್ತ ಬಿ.ಎಂ. ಹನೀಫ್ ಅವರ ಕನ್ನಡ ಅನುವಾದಿತ ಕೃತಿ ‘ಗೋರಖಪುರ್ ಆಸ್ಪತ್ರೆ ದುರಂತ’

‘ಬಹುರೂಪಿ’ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಯ ಕುರಿತ ಹಂಝ ಮಲಾರ್ ಅವರ ಬರಹ ಇಲ್ಲಿದೆ.

ಕೃತಿ -ಗೋರಖಪುರ್ ಆಸ್ಪತ್ರೆ ದುರಂತ
ಮೂಲ ಲೇಖಕರು -ಡಾ. ಕಫೀಲ್ ಖಾನ್
ಕನ್ನಡಕ್ಕೆ -ಬಿ.ಎಂ. ಹನೀಫ್
ಪ್ರಕಾಶನ -ಬಹುರೂಪಿ
ಬೆಲೆ -400
ಕೊಳ್ಳಲು ಸಂಪರ್ಕಿಸಿ

-ಹಂಝ ಮಲಾರ್

“ಜೈಲಿನ ಊಟವಾದರೂ ಆಗಬಹುದು… ಮನೆಯ ಊಟ ಬೇಡ. ಹಾಗಂತ ಕೆಲವರು ತಮಾಶೆಗೋ, ತಂದೆ-ತಾಯಿ ಬುದ್ಧಿಮಾತು ಹೇಳಿದಾಗಲೆಲ್ಲಾ ಕೋಪದಿಂದ ಹೇಳುವುದುಂಟು. ಹೀಗೆ ಕೋಪದಿಂದ ಹೇಳಿದವರು ಕಾರಣಾಂತರದಿಂದ ಆಕಸ್ಮಿಕವಾಗಿ ಜೈಲು ಸೇರಿದರೆ ಜೈಲಿನ ಊಟ ಮಾಡಬೇಕೋ ಅಥವಾ ಬೇಡವೋ ಎಂದು ನೂರು ಬಾರಿ ಯೋಚಿಸಬೇಕಾದೀತೋ ಏನೊ? ಕೆಲವರು ತಪ್ಪು ಮಾಡಿ ಜೈಲು ಸೇರುತ್ತಾರೆ. ಇನ್ನು ಕೆಲವರು ಯಾರೋ ಮಾಡಿದ ತಪ್ಪಿಗೆ ಅನ್ಯಾಯವಾಗಿ ಜೈಲು ಸೇರಿ ನಾನಾ ಶಿಕ್ಷೆಗಳನ್ನು ಅನುಭವಿಸುವುದುಂಟು. ಬೆಂಗಳೂರಿಗೆ ಕಾರ್ಯನಿಮಿತ್ತ ನಾನು ಹೋದಾಗ ಹಿರಿಯ ಪತ್ರಕರ್ತ ಬಿ.ಎಂ. ಹನೀಫ್ (Bellairu Mohammed Haneef) “ಗೋರಖಪುರ್ ಆಸ್ಪತ್ರೆ ದುರಂತ” ಎಂಬ ಈ ಕೃತಿಯನ್ನು ಕೊಟ್ಟಿದ್ದರು. ಎರಡುವರೆ ತಿಂಗಳು ಕಳೆದಿದ್ದರೂ ನನಗೆ ಅದನ್ನು ಓದಲು ಸಮಯ ಸಿಕ್ಕಿರಲಿಲ್ಲ. ಸಾಮಾನ್ಯವಾಗಿ ಮನಸ್ಸು ಸೋತಾಗ, ಕುಸಿದಾಗ, ಹೃದಯ ಭಾರ ಅನಿಸಿದಾಗ ನಾನು ಆತ್ಮಕಥೆಗಳ ಕೃತಿಯನ್ನು ಕೈಗೆತ್ತಿಕೊಳ್ಳುವೆ. ಮೊನ್ನೆ ಇದನ್ನು ಓದಲು ಆರಂಭಿಸಿ ಕೇವಲ ಮೂರೇ ದಿನದಲ್ಲಿ ಓದಿ ಮುಗಿಸಿದೆ. ಓದುತ್ತಲೇ ಕಣ್ಣೀರಾದೆ. 2017ರ ಆಗಸ್ಟ್‌ನಲ್ಲಿ ಗೋರಖಪುರದ ಬಾಬಾ ರಾಘವದಾ್ ಆಸ್ಪತ್ರೆಯಲ್ಲಿ ಆಮ್ಲಜನಕ (ಸಿಲಿಂಡರ್) ಕೊರತೆಯಿಂದ 67 ಶಿಶುಗಳು ಮತ್ತು 18 ವಯಸ್ಕರು ಮೃತಪಟ್ಟ ಘಟನೆಯು ದೇಶಾದ್ಯಂತ ಸಂಚಲನ ಮೂಡಿಸಿತ್ತು. ಶ್ರೀಮಂತ ಮತ್ತು ಸುಸಂಸ್ಕೃತ ಕುಟುಂಬದಲ್ಲಿ ಹುಟ್ಟಿ ಬೆಳೆದ ಡಾ. ಕಫೀಲ್ ಖಾನ್ ಕಷ್ಟಪಟ್ಟು ಓದಿ ವೈದ್ಯಕೀಯ ಶಿಕ್ಷಣವನ್ನು ಓದಿದವರು. ಗೋರಖಪುರ್ ಆಸ್ಪತ್ರೆ ದುರಂತ ನಡೆದ ತಕ್ಷಣ ಮಾನವೀಯ ಸೇವೆಗೆ ಇಳಿದರು. ಇಡೀ ವ್ಯವಸ್ಥೆಯು ಅವ್ಯವಸ್ಥೆಯ ಆಗರವಾಗಿದೆ ಎಂದು ತಿಳಿದೊಡನೆ ಡಾ. ಕಫೀಲ್ ಖಾನ್ ಅದರ ವಿರುದ್ಧ ಹೋರಾಟ ಮಾಡಲು ಆರಂಭಿಸಿದರು. ಆಡಳಿತ ವ್ಯವಸ್ಥೆಯನ್ನು ಎದುರು ಹಾಕಿಕೊಂಡದ್ದಕ್ಕಾಗಿ ಜೈಲು ಸೇರಿದ್ದ ಅವರು ಅಲ್ಲಿ ತಾನು ಎದುರಿಸಿದ ಪ್ರತಿಯೊಂದು ಕ್ಷಣ ಮತ್ತು ಸನ್ನಿವೇಶವನ್ನು ಎಳೆ ಎಳೆಯಾಗಿ ಬಿಡಿಸಿ ಬರೆದುದನ್ನು ಓದುವಾಗ ಮೈ-ಮನಸ್ಸು ರೋಮಾಂಚನವಾಗುತ್ತದೆ.

ಅನ್ಯಾಯದ ವಿರುದ್ಧ ಹೋರಾಟ ಮಾಡಿದ್ದಕ್ಕಾಗಿ ಎರಡು ಬಾರಿ ಬಂಧನ- ಜೈಲುವಾಸ -ಬಿಡುಗಡೆ, ಉದ್ಯೊಗದಿಂದ ಅಮಾನತು-ವಜಾ, ಕ್ರಿಮಿನಲ್ ಹಿನ್ನಲೆಯ ಆರೋಪದ ಮೇಲೆ ಅಪರಾಧಿಗಳ ಪಟ್ಟಿಗೆ ಹೆಸರು ಸೇರ್ಪಡೆ, ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಕಾನೂನು ಕ್ರಮ… ಇತ್ಯಾದಿ ಮಾಡಲಾಯಿತು. ಬೇರೆ ಯಾರೇ ಆಗಿದ್ದರೂ ಕೂಡ ಪತ್ನಿ-ಮಕ್ಕಳು, ಸಂಸಾರ, ಭವಿಷ್ಯ ಎಂದೆಲ್ಲ ಹೇಳಿ ಸರಕಾರಕ್ಕೆ ಶರಣಾಗುತ್ತಿದ್ದರೋ ಏನೋ?. ಆದರೆ ಡಾ. ಕಫೀಲ್ ಖಾನ್ ಎಂದಿಗೂ ಎದೆಗುಂದಲಿಲ್ಲ. ಜೈಲು ಕೋಣೆಯಲ್ಲಿ ಅಂತರ್ಮುಖಿಯಾಗಿ ಕಾಲ ಕಳೆದರೂ, ಆಸುಪಾಸು ತನ್ನ ಸಹಿತ ಕುಟುಂಬದ ಸದಸ್ಯರನ್ನು ಕ್ರಿಮಿನಲ್‌ಗಳಂತೆ ಕಂಡರೂ ಧೃತಿಗೆಡಲಿಲ್ಲ. ಜೈಲಿನಿಂದ ಹೊರಬಂದ ಬಳಿಕವೂ ಬಡ, ಮುಗ್ಧ ರೋಗಿಗಳ ಆರೋಗ್ಯ ತಪಾಸಣೆ, ಆರೈಕೆಯಲ್ಲಿ ತೊಡಗಿ ಗಮನಸೆಳೆದರು.

“ಯಾವುದೇ ತಪ್ಪು ಮಾಡದ ವ್ಯಕ್ತಿ ಜೈಲು ಸೇರಿ ಅಲ್ಲಿ ಹೊಡೆತ ತಿನ್ನುವುದು, ಪಾಯಿಖಾನೆ ಶುಚಿಗೊಳಿಸುವುದು, ಸೊಳ್ಳೆ – ಜಿಗಣೆಯ ಕಾಟಕ್ಕೆ ನಿದ್ದೆ ಮಾಡದೆ ಸಮಯ ಕಳೆಯುವುದು, ಹಳೆಯ ಕೈದಿಗಳ ಚಾಕರಿ ಮಾಡುವುದು, ಜೈಲಿನ ಅಧಿಕಾರಿಗಳಿಗೆ ಲಂಚ ನೀಡುವುದು, ಜೈಲಿನೊಳಗಿರುವ ರೌಡಿ ಮನಸ್ಥಿತಿಯ ಕೈದಿಗಳ ಹಫ್ತಾ ಬೆದರಿಕೆ ಎದುರಿಸುವುದು ಸಾಮಾನ್ಯವಾಗಿದೆ”. ಇಲ್ಲಿ ಡಾ. ಕಫೀಲ್ ಖಾನ್ ಕೂಡ ಇಂತಹ ಎಲ್ಲಾ ಕ್ಷಣ, ಸನ್ನಿವೇಶಗಳನ್ನು ಎದುರಿಸಿದ್ದಾರೆ. ಅವೆಲ್ಲವನ್ನೂ ಕೂಡ ಅವರು ಸವಿಸ್ತಾರವಾಗಿ ಬರೆದಿದ್ದಾರೆ. ತಾನು ಒಮ್ಮೆ ನಾಯಕ ಮತ್ತು ಇನ್ನೊಮ್ಮೆ ಖಳನಾಯಕನಾಗುವುದು, ಆಡಳಿತವು ತನ್ನನ್ನು ಜೈಲಿನಲ್ಲಿ ಕೊಳೆಯುವಂತೆ ಇನ್ನಿಲ್ಲದ ಮಸಲತ್ತು ಮಾಡುವುದು, ತನ್ನ ಅಮ್ಮ ಮತ್ತು ಪತ್ನಿ ಹಾಗೂ ಕುಟುಂಬಸ್ಥರು ಕೊನೆಯ ಕ್ಷಣದವರೆಗೂ ತನಗೆ ಬೆನ್ನೆಲುಬಾಗಿ ನಿಂತಿರುವುದನ್ನು ಕಫೀಲ್ ಖಾನ್ ವಿವರಿಸಿದ್ದಾರೆ. ಎಲ್ಲೂ ಈ ಕೃತಿಯಲ್ಲಿ ಉತ್ಪ್ರೇಕ್ಷೆ ಇಲ್ಲ. ಎಲ್ಲವನ್ನೂ ನಮ್ಮ ಕಣ್ಣಿಗೆ ಕಟ್ಟುವಂತೆ ಬರೆದಿದ್ದಾರೆ. ತಾನೊಬ್ಬ ಮಕ್ಕಳ ವೈದ್ಯ ಮಾತ್ರವಲ್ಲ ಉತ್ತಮ ಲೇಖಕ ಎಂಬುದನ್ನೂ ಕೂಡ ಡಾ. ಕಫೀಲ್ ಖಾನ್ ಸಾಬೀತುಪಡಿಸಿದ್ದಾರೆ.

ಅನುವಾದ ಕೂಡ ಒಂದು ಕಲೆ. ಆ ಪ್ರಕ್ರಿಯೆಗೆ ತಾಳ್ಮೆ ಕೂಡ ಮುಖ್ಯ. ನಾವು ಸ್ವತಃ ಕೃತಿ ಬರೆಯುವುದಕ್ಕಿಂತಲೂ ಅನುವಾದ ಕಷ್ಟದ ಕೆಲಸ ಎಂದು ನಂಬಿದವ ನಾನು. ಬಿ.ಎಂ. ಹನೀಫ್ ಬಿಡುವಿಲ್ಲದ ಪತ್ರಕರ್ತ. ಹೀಗಿರುವಾಗ ಅವರು ಈ ಕೃತಿಯನ್ನು ಅನುವಾದಿಸಿರುವುದು ವಿಶೇಷ. ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಎಲ್ಲೂ ಈ ಕೃತಿ ಅನುವಾದಿಸಲ್ಪಟ್ಟದ್ದು ಅಂತ ಗೊತ್ತೇ ಆಗುವುದಿಲ್ಲ. ತನ್ನ ಸ್ವಂತದ ಕೃತಿ ಎಂಬಂತೆ ಇದನ್ನು ತುಂಬಾ ಚೆನ್ನಾಗಿ ಅನುವಾದಿಸಿದ್ದಾರೆ. ಹಾಗಾಗಿಯೇ ಇದನ್ನು ಸುಲಲಿತವಾಗಿ ಓದಲು ಸಾಧ್ಯವಾಯಿತು. ಬೆಂಗಳೂರಿನ ಬಹುರೂಪಿ ಪ್ರಕಾಶನವು ಇದನ್ನು ಪ್ರಕಟಿಸಿರುವುದು ಕೂಡ ಈ ಕೃತಿಯ ಹಿರಿಮೆಯನ್ನು ಹೆಚ್ಚಿಸಿದೆ.

‍ಲೇಖಕರು Admin

14 August, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading