ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅನಿತಾ ಪಿ ತಾಕೊಡೆ ಕವಿತೆ – ದಾರಿ ತಪ್ಪದ ಮೋಡ

ಅನಿತಾ ಪಿ ತಾಕೊಡೆ

ಹಗಲಿನ ಹಾದಿಯಲಿ ಬಿರು ಬಿಸಿಲಿನ ಝಳ
ಕಾರಿರುಳಿನಲಿ ಕಣ್ಣು ಕಟ್ಟಿಸುವ ಕತ್ತಲು
ನಡೆಯ ಗತಿ ತಿರುಗಿಸುವ ಬಿರುಗಾಳಿ ಕೆಲವೊಮ್ಮೆ

ಕಂಡಿರುವ ಕನಸು ಸಾಕಾರಗೊಳ್ಳುವುದೋ ಇಲ್ಲವೋ…!
ಅದ್ಯಾವ ಪರಿವೆಯೂ ಇಲ್ಲದೆ ಸಾಗುತಿದೆ ಮೋಡ
ಸೂರ್ಯ ಚಂದ್ರ ತಾರೆಗಳಿರುವ ಬೆಳಕಿನ ಲೋಕಕ್ಕೆ
ಅವರಂತೆ ಹೊಳೆದು ಬೆಳ್ಳನೆ ಬೆಳಕಾಗುವುದಕ್ಕೆ

ಋತು ಚರ್ಯೆಯಲಿ ಹೇಮಂತ ನಡುಕ ಹುಟ್ಟಿಸಿದರೂ
ಶಿಶಿರ ಸನಿಹವಾಗಿ ಚಿತ್ತ ಚಂಚಲಿಸಿದರೂ
ವರ್ಷ ಶರತ್ ಋತುಗಳು ಸಂಚು ಹೂಡಿದರೂ
ಯಾರ ತೆಕ್ಕೆಗೂ ಸಿಲುಕದ ಮೋಡ
ತನ್ನ ಗುರಿಯತ್ತ ದಿಟ್ಟಿ ನೆಟ್ಟಿದೆ

ಸನಿಹವೆಂದುಕೊ೦ಡಷ್ಟು ದಾರಿ ದೂರವೇ ಆಗಿ
ಸುತ್ತಮುತ್ತಲೆಲ್ಲ ಖಾಲಿಯಾದಂತೆ ಭಾಸವಾಗಿ
ನಡುನಡುವೆ ಏಕಾಂಗಿತನವೂ ಕಾಡಿ
ಆ ಮೋಡ ಬಾಡಿ ಬಡವಾದಂತೆ ಕೃಶವಾದಂತೆ

ಆಕಾಶದಗಲ ಸುತ್ತುತ್ತಲೇ ಇರುವಾಗ
ಎಲ್ಲಿಗೂ ಸಲ್ಲದಾಗುತಿಹೆನೇನೆಂಬ
ಕಾಣದ ಛಾಯೆಯೊಂದು ಅವಯವಗಳ ಚುಚ್ಚುತಿವೆ
ಎಲ್ಲಿದೆ ಸ್ವಗತ ಇಲ್ಲವೇ ಸ್ವಾಗತ…! ಕಾಯುತಿದೆ ಮೋಡ

ಎಲ್ಲೋ ಮೈ ಸೋಕಿ ಕರಗುವುದೂ ಬೇಕಾಗಿರಲಿಲ್ಲ
ತನ್ನ ಇರುವನ್ನಾದರೂ ಉಳಿಸಿಕೊಳ್ಳುವ ಹಪಹಪಿಯಲಿ
ದಾರಿ ತಪ್ಪಿದೆ ಮೋಡ

ಮೋಡದ ಕನಸು ಕೈಗೂಡದೆ ನಿಂತಲ್ಲೆ ನಿಂತು
ಮೋಡ ಮೋಡವಾಗಿರಲೂ ಆಗದೆ
ದಿಕ್ಕುದೆಸೆಯಿಲ್ಲದೆ ಬಿಕ್ಕಿ ಬಿಕ್ಕಿ ಅಳುತಿದೆ
ಒಂದೊ೦ದೇ ಹನಿಗಳು ಧರೆಗುರುಳುತಿವೆ

ವಿರಹದುರಿಯ ಕಾವು ನೋವನರಿತ ಭುವಿಯೊಡಲು
ಮೋಡದ ಒಳಬೇಗುದಿಯನರಿತು ಆಧರಿಸಿತು
ಭಾವಗಳು ಜೊತೆಯಾದಂತೆ ಬಿರುಕು ನುಡಿಗಳು ಮರೆಯಾದಂತೆ
ಮೋಡದ ಕಣಕಣದಲೂ ಜೀವ ಅಂಕುರಿಸಿತು

ನೆಲದಾಸೆಯೇ ಪವಿತ್ರವಾಗಿ ನಿಜಬಂಧುವಾಗಿ
ಕಾಲ ಕಾಲಕೆ ದಾರಿ ತಪ್ಪದೆ ಮೋಡ
ವರ್ಷಧಾರೆಯಾಗಿ ಧರೆಗಿಳಿದು ಬರುತಿದೆ
ಚಿಗುರು ಮೊಗ್ಗು ಹೂವುಗಳು ಅರಳುತಿವೆ
ಮಣ್ಣ ಎದೆ ಕೂಸುಗಳು ನಸುನಗುತಲಿವೆ

‍ಲೇಖಕರು Admin

22 August, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading