ಅನಂತ ಕುಣಿಗಲ್ ನೋಡಿದ ‘ರಬ್ಡಿ’

ಹೆಣ್ಣಿನ ಒಳ ತುಮುಲಗಳನ್ನು ಬಿಚ್ಚಿಡುವ ರಬ್ಡಿ ನಾಟಕ

ಅನಂತ ಕುಣಿಗಲ್

ಹಿಂದಿಯಲ್ಲಿ good news ಮತ್ತು mimi ಅನ್ನೋ ಚಲನಚಿತ್ರಗಳನ್ನ ನೋಡಿದರೆ surrogacy ಎಂದರೇನು ಅಂತ ಅರ್ಥವಾಗಿಬಿಡುತ್ತದೆ. ಆದರೆ surrogacy ಅನ್ನುವ science term ಅನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತ ಆ ಒಂದು ವೈಜ್ಞಾನಿಕ ಪ್ರಯೋಗ ಮನುಷ್ಯ ಜೀವಿಯ ಭಾವಗಳ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತದೆ ಎಂದು ಅರ್ಥ ಮಾಡಿಕೊಳ್ಳಲು ನಾವು ರಬ್ಡಿ ನಾಟಕವನ್ನು ನೋಡಲೇಬೇಕು.

ಪರ್ವ, ಶ್ರೀರಾಮಾಯಣದರ್ಶನಂ, ಮಲೆಗಳಲ್ಲಿ ಮಧುಮಗಳು ನಾಟಕಗಳಂತಹ ಮಹಾರಂಗ ಪ್ರಯೋಗಗಳಾಗಿರುವ ಕನ್ನಡ ನೆಲದಲ್ಲಿ ಒಂದಷ್ಟು ವಿಭಿನ್ನ ಸಾರ್ವತ್ರಿಕ ಪ್ರಯೋಗಗಳೂ ಆಗಿವೆ. ಅವುಗಳನ್ನು ಹುಡುಕಿ, ಬೆನ್ನು ತಟ್ಟಬೇಕಾದ ಕೆಲಸ ಪ್ರೇಕ್ಷಕರಾದ ನಮ್ಮ ನಡೆಯಾಗಿರಬೇಕು. ಅಂಥಹ ಒಂದು ವಿಶಿಷ್ಟವಾದ ಪ್ರಯೋಗವೇ ರಂಗವರ್ತುಲ ತಂಡ ಅಭಿನಯಿಷಿರುವ ನಿತೀಶ್ ಶ್ರೀಧರ್ ಅವರು ನಿರ್ದೇಶಿಸಿರುವ ನಾಟಕ ‘ರಬ್ಡಿ’

ಗಣೇಶೋತ್ಸವದ ಅಂಗವಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕೋತ್ಸವ ಏರ್ಪಡಿಸಲಾಗಿತ್ತು (21.08.22). ಅದರಲ್ಲಿ ರಬ್ಡಿ ಎಂಬ ನಾಟಕದ ಪ್ರದರ್ಶನವೂ ಇತ್ತು. ರಬ್ಡಿ ಎಂಬ ಹೆಸರನ್ನು ಕೇಳಿದರೆ ನಮಗೆ ಏನೋ ವಿಶೇಷತೆ ಇದೆ ಎನ್ನುವ ಕುತೂಹಲ ಮೂಡುತ್ತದೆ. ಆ ಕುತೂಕಲವನ್ನು ಕೆದಕಲೆಂದೇ ಗೆಳೆಯನೊಟ್ಟಿಗೆ ನಾಟಕ ವೀಕ್ಷಿಸಲು ಹೋಗಿದ್ದೆ. ಭಾನುವಾರ ಬೆಳಿಗ್ಗೆಯಾದ್ದರಿಂದ ಜನಸಂದಣಿ ಸೇರಿಸುವುದು ಆಯೋಜಕರಿಗೂ ಕಷ್ಟವಾಗಿರಬೇಕು. ಅಂಥಹ ದೊಡ್ಡ ರಂಗಮಂದಿರದಲ್ಲಿ ಇದ್ದಷ್ಟೇ ಜನರಿಗಾಗಿ ಪ್ರದರ್ಶನ ಶುರುವಾಯ್ತು. ರಂಗಭೂಮಿಯ ಕೆಲವು ಆಸಕ್ತಿದಾಯಕ ವಿಷಯಗಳಲ್ಲಿ ಪ್ರದರ್ಶನ ರದ್ದುಗೊಳಿಸದಿರುವ ವಿಷಯ ನನಗೆ ಬಹಳ ಹೆಮ್ಮೆ ಎನಿಸುತ್ತದೆ. ಕನಿಷ್ಟ ವೀಕ್ಷಕರಿಲ್ಲದೆ ಸಿನೆಮಾ ಪ್ರದರ್ಶನವನ್ನು ತಡೆಹಿಡಿದಿದ್ದುಂಟು. ಪ್ರಯಾಣಿಕರಿಲ್ಲ ಎಂಬ ಕಾರಣಕ್ಕೆ ಎಲ್ಲಿಗೋ ಹೋಗಬೇಕಾದ ಬಸ್ಸನ್ನು ನಿಲ್ಲಿಸಿದ್ದುಂಟು! ಆದರೆ ಪ್ರೇಕ್ಷಕರಿಲ್ಲ ಎಂಬ ಕಾರಣಕ್ಕೆ ನಾಟಕ ನಿಂತಿದ್ದನ್ನು ನಾನು ಈವರೆಗೆ ನೋಡಿಲ್ಲ. ಆ ಅಗಾಧವಾದ ಶಿಸ್ತುನ್ನು ರಂಗಭೂಮಿಯಲ್ಲಿ ಮಾತ್ರ ಕಾಣಲಿಕ್ಕೆ ಸಾಧ್ಯ.

ಸರಿಯಾದ ಸಮಯಕ್ಕೆ ನಾಟಕ ಪ್ರಾರಂಭಿಸುವುದು. ಮುಖ್ಯ ಪಾತ್ರಧಾರಿ ಇಲ್ಲದಿದ್ದರೂ ಆತನ ಪಾತ್ರವನ್ನು ಬೇರೊಬ್ಬರು ನಿಭಾಯಿಸಿ ಪ್ರದರ್ಶನವನ್ನು ಯಶಸ್ವಿಗೊಳಿಸುವುದು ಇದೇ ಮೊದಲೇನಲ್ಲ. ಸಹಜವಾಗಿ ರಂಗದ ಮೇಲೆ ಕತ್ತಲು ಮಾಡಿ ನಾಟಕ ಆರಂಭಿಸಿದರೆ.. ಈ ನಾಟಕ ತಂಡ ಬೆಳಕಲ್ಲಿಯೇ ಸಂಗೀತದ ಜೊತೆ ಪ್ರೇಕ್ಷಕರ ಚಿತ್ತ ಸೆಳೆಯುವಲ್ಲಿ ಗೆದ್ದು, ನಾಟಕದೊಳಗೆ ಕರೆದುಕೊಂಡುಹೋದರು. ಸಿರಿವಂತಿಕೆಯ ಹೆಬ್ಬಾಗಿಲು ಪ್ರವೇಶಿಸಿದ ಯಾರೇ ಆಗಲಿ.. ಅವರಿಗೆ ಸಮಯದ ಹೊಂದಾಣಿಕೆಯಾಗಲೀ.. ಭಾವಗಳಿಗೆ ಸ್ಪಂದಿಸುವ ತಾಳ್ಮೆಯಾಗಲೀ ಕಷ್ಟ ಎಂದು ಮೊದಲ ದೃಶ್ಯದಲ್ಲಿ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಗಂಡ ಹೆಂಡತಿ ಇಬ್ಬರೂ ಸಾಪ್ಟ್ ವೇರ್ ಮಷೀನುಗಳಂತೆ ಹಗಲು ರಾತ್ರಿ ಎಂದು ಎಣಿಸದೆ ದುಡಿಯುವುದರಲ್ಲಿಯೇ ಮುಳುಗಿಹೋಗಿರುತ್ತಾರೆ. ಸ್ವಂತ ಮಕ್ಕಳನ್ನು ಮಾಡಿಕೊಂಡು ಸಲುಹುವ ಸುಖವನ್ನೂ ಕೂಡ ಒಂದು ದೊಡ್ಡ ಅನಾವಶ್ಯಕ ಜವಾಬ್ದಾರಿಯಂತೆ ನೋಡುತ್ತಾರೆ. ಆಗ surrogacy ಎಂಬ ವೈಜ್ಞಾನಿಕ ಪ್ರಯೋಗಕ್ಕೆ ಮುಂದಾಗುತ್ತಾರೆ.

ಮುಂದುವರೆದಂತೆ ತನ್ನ ಅಂಗವಿಕಲ ಮಗುವನ್ನು ಒಳ್ಳೆಯ ಶಿಕ್ಷಣ ಸಂಸ್ಥೆಯಲ್ಲಿ ಓದಿಸಬೇಕೆಂಬ ಆಸೆ ಹೊತ್ತ ಸಾವಂತ್ರಿ ಎಂಬ ಹಳ್ಳಿಯ ಗಟ್ಟಿಗಿತ್ತಿಯ ಪರಿಚಯವಾಗುತ್ತದೆ. ಬೇರೊಬ್ಬರ ಮಗುವನ್ನು ತನ್ನ ಹೊಟ್ಟೆಯಲ್ಲಿ ಬೆಳೆಸುವುದರಿಂದ ವರ್ಷದಲ್ಲಿಯೇ ಲಕ್ಷ ಲಕ್ಷ ದುಡ್ಡು ಸಿಗುತ್ತದೆ. ಆ ದುಡ್ಡಿನಿಂತ ತನ್ನ ಮಗಳನ್ನು ಚೆನ್ನಾಗಿ ಓದಿಸಬಹುದೆಂಬ ವೈಜ್ಞಾನಿಕ ಬಲೆಗೆ ಬಲಿಪಶುವಾಗಿಬಿಡುತ್ತಾಳೆ. ಅವಳ ಹೊಟ್ಟೆಯಲ್ಲಿ ಮತ್ತೊಬ್ಬರ ಮಗು ಬೆಳೆಯುವಾಗ ಆಕೆಯ ಪ್ರತಿಕ್ರಿಯೆ ಹೇಗಿರುತ್ತದೆ? ಹೆರಿಗೆಯಾದ ಮೇಲೆ ಆ ಮಗು ಅಂಗವಿಕಲ ಎಂದು ಗೊತ್ತಾದಮೇಲೆ ಮೂಲ ಪೋಷಕರು ಹೇಗೆ ವರ್ತಿಸುತ್ತಾರೆ? ಇದಕ್ಕೆಲ್ಲ ಕಾರಣವಾದ ಡಾಕ್ಟರುಗಳ ಮನಸ್ಥಿತಿ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಲು ನಾವು ಈ ನಾಟಕವನ್ನು ನೋಡಲೇಬೇಕು.

ತಂತ್ರಜ್ಞಾನ ಬೆಳೆದಂತೆ ಭಾವರಹಿತ ಜೀವಿಗಳಾಗಿ ಬದುಕು ನಡೆಸುವುದನ್ನು ನಾವು ಅಭ್ಯಾಸ ಮಾಡಿಕೊಳ್ಳುತ್ತಿದ್ದೇವೆ. ವಿಜ್ಞಾನದ ಆವಿಷ್ಕಾರಗಳು ನಮ್ಮನ್ನು ಕೆಲವು ಅಪಾಯಗಳಿಂದ ಪಾರು ಮಾಡಿದರೆ.. ಇನ್ನಷ್ಟು ಅಪಾಯಗಳಲ್ಲಿ ಸಿಕ್ಕಿಹಾಕಿಕೊಳ್ಳಲು ಅದೇ ವಿಜ್ಞಾನ ಕಾರಣವಾಗುತ್ತದೆ. ವಿಜ್ಞಾನದಲ್ಲಿ ಒಂದು ಪ್ರಯೋಗದ ಮೂಲಕ ಆಗುವ ಅಸಂಭವಗಳಿಗಿಂತ ಯಶಸ್ಸುಗಳೇ ಜಾಸ್ತಿ. ಆದರೂ ಆ ಅಸಂಭವಗಳಿಗೆ ಬಲಿಯಾದವರಲ್ಲಿ ನಾವೂ ಒಬ್ಬರಾದರೆ??!

ಈ ನಾಟಕ ಬರಿ ನಾಟಕವಲ್ಲ. ಸಂಗೀತಮಯ ನಾಟಕವಾಗಿಯೂ ನಮ್ಮನ್ನು ಬಹಳ ಕಾಡುತ್ತದೆ. ಹಾಡುಗಾರ್ತಿಯಾಗಿ ಶ್ರೀಲಕ್ಷಿ ತಮ್ಮ ಅದ್ಭುತವಾದ ಕಂಠವನ್ನು ಚೆನ್ನಾಗಿ ದುಡಿಸುವಲ್ಲಿ ಸಫಲರಾಗಿದ್ದಾರೆ. ಜೊತೆಗೆ ಕೊಳಲಿನ ನಾದ ನುಡಿಸಿದ ಕಲಾವಿದರು ಒಬ್ಬರಿಗಿಂತ ಒಬ್ಬರು ಮೇಲೆಂಬಂತೆ ಇಬ್ಬರೂ ಸೇರಿ ನಾಟಕವನ್ನು ಸಂಗೀತದ ಮೂಲಕವೇ ದಡ ಮುಟ್ಟಿಸುತ್ತಾರೆ. ಸಾವಂತ್ರಿ ಪಾತ್ರಧಾರಿಯಾದ ದೀಪಿಕ ಆರಾಧ್ಯ ಎನ್ನುವ ಮಹಾತಾಯಿಗೆ ಮೊದಲು ನನ್ನ ಶರಣುಗಳಿರಲಿ. ಅಷ್ಟೊಂದು ಭಾವಗಳನ್ನು ಅದೆಲ್ಲಿಂದ ಹೊತ್ತುತಂದಳೋ.. ಆಕೆಯ ಹಾವ ಭಾವಗಳೇ ಪ್ರೇಕ್ಷಕರ ಕಣ್ಣು ತುಂಬಿಸುತ್ತವೆ.

ದೇಹವನ್ನು ಪಾತ್ರಕ್ಕೆ ಅಣಿಮಾಡುವುದೆಂದರೆ ಇದೇ ಇರಬೇಕು. ಅವರ ಜೊತೆಗೆ ನಟಿ ಸಿರಿ ಪ್ರಹ್ಲಾದ ಮತ್ತು ಇನ್ನಿತರ ಎಲ್ಲಾ ಕಲಾವಿದರು ತಮ್ಮ ತಮ್ಮ  ಪಾತ್ರಗಳ ಜವಾಬ್ದಾರಿಯನ್ನು ನಾಟಕದ ಕೊನೆಯ ಮಾತಿನವರೆಗೂ ಚೆನ್ನಾಗಿಯೇ ಕಾಪಾಡಿಕೊಂಡರು. ಎಲ್ಲಕ್ಕಿಂತ ಮಿಗಿಲಾಗಿ, ಇವರೆಲ್ಲರ ಸಾಮರ್ಥ್ಯವನ್ನು ಒಟ್ಟುಗೂಡಿಸುವಲ್ಲಿ ಸಫಲರಾದ ನಿರ್ದೇಶಕರಿಗೆ ನನ್ನ ವಂದನೆಗಳು ಹಾಗೂ ಇಡೀ ತಂಡಕ್ಕೆ ಹಾಗೂ ಆಯೋಜಕರಿಗೆ ನನ್ನ ಧನ್ಯವಾದಗಳು.

‍ಲೇಖಕರು Admin

August 22, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: