
ಆಲ್ಬರ್ಟ್ ಕಮೂವಿನ ‘ಪತನ’ ಮೂಲದಲ್ಲಿ ಇಂಗ್ಲಿಷಿನಲ್ಲಿ ‘ದಿ ಫಾಲ್’ ಎಂದು ಕರೆಯುವ ಈ ಕಿರುಕಾದಂಬರಿಯನ್ನು ಪ್ರೇಮ್ ಸಾಗರ್ ಕಾರಕ್ಕಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ಈ ಕಿರುಕಾದಂಬರಿಯನ್ನು ನಾನು ಮೂಲದಲ್ಲಿ ಇಂಗ್ಲಿಷಿನಲ್ಲಿ ಓದಿದ್ದರೂ ಕನ್ನಡದ್ಲಲ್ಲಿ ಓದುವಾಗ ಅದೇ ಸಮಯಕ್ಕೆ ಜೊತೆಗೆ ಸಿಕ್ಕಿದ್ದ ಫ್ಯೊದರ್ ದೊಸ್ತೋವಸ್ಕಿಯ ‘ಅಧೋಲೋಕದ ಟಿಪ್ಪಣಿಗಳು’ ಓದಿದ್ದು ನನಗೆ ಬೇರೊಂದು ಲೋಕವನ್ನು ಕಾಣುವಂತಾಯಿತು.
‘ಅಧೋಲೋಕದ ಟಿಪ್ಪಣಿಗಳು’ ಕೂಡ ಮೂಲದಲ್ಲಿ ‘ನೋಟ್ಸ್ ಫ್ರಮ್ ಅಂಡರ್ ಗ್ರೌಂಡ್’ ಎಂಬ ಕಿರುಕಾದಂಬರಿ. ಇದನ್ನು ಗೌತಮ್ ಜ್ಯೋತ್ಸ್ನಾ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
ಈ ಎರಡು ಕಾದಂಬರಿಗಳು ಅಸ್ತಿತ್ವವಾದ, ಅಸಂಗತವಾದ ಮತ್ತು ತತ್ವಜ್ಞಾನಕ್ಕೆ ಸಂಬಂಧ ಪಟ್ಟ ಸಂಕೀರ್ಣ ಕಾದಂಬರಿಗಳು ಎಂದು ವಿಮರ್ಶಕರು ಪರಿಗಣಿಸುತ್ತಾರೆ.
ಇಲ್ಲಿ ಎರಡು ಕಿರುಕಾದಂಬರಿಗಳನ್ನು ಪ್ರಸ್ತಾಪ ಮಾಡಲು ಮುಖ್ಯ ಕಾರಣ ಆಲ್ಬರ್ಟ್ ಕಮೂವಿನ ‘ಪತನ’ ಫ್ಯೊದರ್ ದೊಸ್ತೋವಸ್ಕಿಯ ‘ಅಧೋಲೋಕದ ಟಿಪ್ಪಣಿ’ಗಳಿಂದ ತುಂಬಾ ಪ್ರಭಾವಿತ ಕಾದಂಬರಿ.
ನೊಬೆಲ್ ಪ್ರಶಸ್ತಿ ವಿಜೇತ ಆಲ್ಬರ್ಟ್ ಕಮೂ ಒಂದು ಪೀಳಿಗೆಯನ್ನೇ ಪ್ರಭಾವಿಸಿದ ಫ್ರೆಂಚ್ ಲೇಖಕ. ಇಪ್ಪತ್ತನೇ ಶತಮಾನದ ಜಗತ್ತಿನ ಮಹತ್ತರವಾದ ಲೇಖಕರ ಹೆಸರಿನ ಸಾಲಿನಲ್ಲಿ ಕಮೂವಿನ ಹೆಸರು ಕೇಳಿ ಬರುತ್ತದೆ.

ಫ್ಯೊದರ್ ದೊಸ್ತೋವಸ್ಕಿ ಇದುವರೆಗಿನ ಜಗತ್ತಿನ ಶ್ರೇಷ್ಠ ಕಾದಂಬರಿಕಾರರ ಸಾಲಿನಲ್ಲಿ ಮೊದಲಿಗನಾದ ಮತ್ತು ರಷ್ಯಾದವನೇ ಆದ ಅವನ ಸಮಕಾಲೀನ ಲಿಯೋ ಟಾಲ್ ಸ್ಟಾಯ್ ನಂತರ ಕೇಳಿ ಬರುವ ಎರಡನೇ ಹೆಸರು.
ಇಂತಹ ದೊಸ್ತೋವಸ್ಕಿಯಿಂದ ತುಂಬಾನೇ ಪ್ರಭಾವಿತನಾಗಿದ್ದೇನೆ ಎಂದು ಆಲ್ಬರ್ಟ್ ಕಮೂ ತಾನೇ ಒಪ್ಪಿಕೊಂಡಿದ್ದಾನೆ.
ಇಲ್ಲಿ ಎರಡು ಕಾದಂಬರಿಗಳಲ್ಲೂ ರೆಸ್ಟೋರೆಂಟ್ ಒಂದರ ಪ್ರಸ್ತಾಪ ಬರುತ್ತದೆ. ಎರಡು ಕಾದಂಬರಿಯ ನಾಯಕರು ತಮ್ಮ ಅವನತಿಯನ್ನ ಅಥವಾ ಅಧೋಲೋಕವನ್ನ ಅವಲೋಕಿಸುತ್ತಾರೆ. ಎರಡರಲ್ಲೂ ತಮ್ಮ ಬದುಕಿನ ತಪ್ಪು ಹೆಜ್ಜೆಗಳನ್ನು ತಪ್ಪೊಪ್ಪಿಗೆಯ ಮೂಲಕ ಹೇಳುವ ವಸ್ತುವಾಗಿವೆ.
ಆದರೆ ತಮ್ಮ ತಪ್ಪು ಹೆಜ್ಜೆಗಳ ಅಧೋಲೋಕದಿಂದ ಹೊರಬರುವುದನ್ನು ಇಲ್ಲಿ ಇಬ್ಬರು ಲೇಖಕರೂ ಪ್ರಸ್ತಾಪಿಸುವುದಿಲ್ಲ. ಆಲ್ಬರ್ಟ್ ಕಮೂವಿನ ಪತನದಲ್ಲಿ ಜೀನ್ ಬ್ಯಾಪ್ಟಿಸ್ಟ್ ಕ್ಲೆಮೆನ್ಸ್ ಎಂಬುವ ನ್ಯಾಯಾಧೀಶ ಆಮ್ ಸ್ಟರ್ ಡ್ಯಾಮಿನ ‘ಮೆಕ್ಸಿಕೋ ಸಿಟಿ’ ಎಂಬ ರೆಸ್ಟೋರೆಂಟಿನಲ್ಲಿ ಅಪರಿಚಿತ ವ್ಯಕ್ತಿಯೊಬ್ಬನ ಮುಂದೆ ತನ್ನ ತಪ್ಪೊಪ್ಪಿಗೆ ಮಾಡಿಕೊಳ್ಳುತ್ತಾನೆ.
ಅಧೋಲೋಕದ ಟಿಪ್ಪಣಿಯಲ್ಲಿ ನಾಯಕ ಒಬ್ಬ ಸರ್ಕಾರಿ ಉದ್ಯೋಗಿ. ಅವನ ಹೆಸರನ್ನು ಲೇಖಕ ದೊಸ್ತೋವಸ್ಕಿ ಎಲ್ಲೂ ತಿಳಿಸುವುದಿಲ್ಲ. ಎಲ್ಲಾ ವಿಮರ್ಶಕರು ಅವನನ್ನ ಅಧೋಲೋಕದ ಮನುಷ್ಯ ಎಂದೇ ಕರೆಯುತ್ತಾರೆ.
ಈ ಅಧೋಲೋಕದ ಮನುಷ್ಯ ರಷ್ಯಾದ ಸೈಂಟ್ ಪೀಟರ್ಸ್ಬರ್ಗ್ ನ ‘ಹೋಟೆಲ್ ಡಿ ಪ್ಯಾರಿಸ್’ ಎಂಬ ರೆಸ್ಟೋರೆಂಟಿನಲ್ಲಿ ನಡೆಯುವ ಘಟನೆಯನ್ನು ತಪ್ಪೋಪಿಗೆಯ ರೀತಿ ತಿಳಿಸುತ್ತಾನೆ. ಅಲ್ಲಿ ಅವನ ಗೆಳೆಯರು ಇವನನ್ನು ವಿಚಿತ್ರವಾಗಿ ನೋಡುತ್ತಾರೆ. ಇವನಿಗೆ ಕೀಳಿರಿಮೆ ಬರುವಂತೆ ನೋಡಿಕೊಳ್ಳುತ್ತಾರೆ.
ಇಲ್ಲಿ ನೀವು ಗಮನಿಸಬೇಕಾದ ವಿಷಯ ಕಮೂವಿನ ಪತನದಲ್ಲಿ ‘ಮೆಕ್ಸಿಕೋ ಸಿಟಿ’ ಬರುತ್ತದೆ. ಇದು ಮೆಕ್ಸಿಕೋ ದೇಶದ ರಾಜಧಾನಿ. ದೊಸ್ತೋವಸ್ಕಿಯ ಅಧೋಲೋಕದ ಟಿಪ್ಪಣಿಯಲ್ಲಿ ‘ಹೋಟೆಲ್ ಡಿ ಪ್ಯಾರಿಸ್’ ಬರುತ್ತದೆ. ಪ್ಯಾರಿಸ್ ಫ್ರಾನ್ಸ್ ದೇಶದ ರಾಜಧಾನಿ. ಇಲ್ಲಿ ಇಬ್ಬರೂ ಲೇಖಕರು ಏನನ್ನೋ ಹೇಳಲು ಪ್ರಯತ್ನಿಸುತ್ತಾರೆ.
ಅಧೋಲೋಕದ ಟಿಪ್ಪಣಿಯಲ್ಲಿ ‘ಹೋಟೆಲ್ ಡಿ ಪ್ಯಾರಿಸ್’ ನಲ್ಲಿ ಅವಮಾನಿತನಾದ ಅಧೋಲೋಕದ ಮನುಷ್ಯ ಕುದುರೆಗಾಡಿಯಲ್ಲಿ ವೇಶ್ಯಾಗೃಹಕ್ಕೆ ಹೋಗುತ್ತಾನೆ. ಅಲ್ಲಿಯೂ ಇವನಿಗೆ ನೆಮ್ಮದಿ ಇರುವುದಿಲ್ಲ. ರೆಸ್ಟೋರೆಂಟಿನಲ್ಲಿ ಅವಮಾನ ಮಾಡಿದ ಗೆಳೆಯನನ್ನು ದ್ವಂದ್ವ ಯುದ್ಧದಲ್ಲಿ ಕೊಂದು ಸೈಬೀರಿಯಾಕ್ಕೆ ಹೋಗಬೇಕು ಅಂದುಕೊಳ್ಳುತ್ತಾನೆ.
ಕಮೂವಿನ ಪತನದಲ್ಲಿನ ಕ್ಲೆಮೆನ್ಸ್ ಬದುಕಿನ ಎಲ್ಲಾ ರೀತಿಯ ಸುಖಗಳನ್ನು ಅನುಭವಿಸಿದವನು. ವೇಶ್ಯಾಗೃಹಗಳಿಗೂ ಹೋಗಿ ಬಂದವನು. ಆದರೆ, ಈಗ ಆಧ್ಯಾತ್ಮಿಕವಾಗಿ ಬದುಕಿನ ಅರ್ಥವೇನು ಎಂದು ಹುಡುಕುತಿರುವವನು.
ಒಂದು ಯುವತಿಯ ಜೊತೆ ದೈಹಿಕ ಸಂಬಂಧವಿಟ್ಟುಕೊಂಡವನು. ಅವಳಿಂದ ತಿರಸ್ಕರಿಸಲ್ಪಟ್ಟು ಅವಮಾನಿತನಾದವನು. ಜೀವನದಲ್ಲಿ ಹಣ ಅಧಿಕಾರ ಎಂದು ಬದುಕಿದವನು. ಜೊತೆಗೆ ಎರಡನೇ ಮಹಾಯುದ್ಧದ ಸಮಯದಲ್ಲಿ ಸರ್ವಾಧಿಕಾರಿಗಳ ಕೈಗೆ ಸಿಕ್ಕ ಇಡೀ ಯುರೋಪಿನ ಪತನವನ್ನು ಒಬ್ಬ ವ್ಯಕ್ತಿಯ ವೈಯುಕ್ತಿಕ ಪತನದ ಜೊತೆ ಅವಲೋಕಿಸುತ್ತಿರುವವನು.
ಕಮೂವಿನ ಕೈಗೆ ಪೆನ್ನು ಸಿಕ್ಕರೆ ಅದು ಅದ್ಭುತವನ್ನೇ ಸೃಷ್ಟಿಸುತ್ತಿತ್ತು ಎಂದು ಹಲವರು ಹೇಳುತ್ತಾರೆ. ಮನುಷ್ಯನ ಅಂತರಂಗವನ್ನ ಪ್ರವೇಶಿಸಿ ಅಲ್ಲಿ ಕೋಲಾಹಲವನ್ನು ಎಬ್ಬಿಸುತ್ತಿದ್ದ ಎಂದು ಹಲವರು ಭಾವಿಸುತ್ತಾರೆ. ಅಲ್ಲಿ ಮನುಷ್ಯನ ಅಸ್ತಿತ್ವ ಮತ್ತು ಬದುಕಿನ ಉದ್ದೇಶ ಏನು ಎಂದು ಓದುಗರು ತಮಗೆ ತಾವೇ ಪ್ರಶ್ನೆ ಮಾಡಿಕೊಳ್ಳುವ ಹಾಗೆ ಮಾಡುತ್ತಿದ್ದ ಅನ್ನುತ್ತಾರೆ.
ಕಮುವಿನ ಹಳೆ ಗೆಳೆಯ ಹಾಗೂ ಜಗತ್ಪ್ರಸಿದ್ದ ಲೇಖಕ, ತತ್ವಜ್ಞಾನಿ, ಚಿಂತಕ ಜೀನ್ ಪಾಲ್ ಸಾರ್ತ್ರೆ ಈ ಕಾದಂಬರಿಯನ್ನು ಕಮೂವಿನ ಶ್ರೇಷ್ಠ ಕಾದಂಬರಿಗಳಲ್ಲಿ ಒಂದು ಜನ ಇನ್ನು ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂದು ಹೇಳಿದ್ದಾನೆ.
ಪ್ರತಿಯೊಬ್ಬರೂ ಬದುಕಿನ ಅರ್ಥವನ್ನು ಒಂದಲ್ಲ ಒಂದು ರೀತಿ ಹುಡುಕುತ್ತಿರುತ್ತಾರೆ. ಇಲ್ಲಿ ಕಮೂ ಬದುಕಿನ ಅರ್ಥವನ್ನು ಒಂದು ರೀತಿ ಹುಡುಕಿದರೆ ಇವನಿಗೆ ಸ್ಫೂರ್ತಿಯಾಗಿದ್ದ ದೊಸ್ತೋವಸ್ಕಿ ಇನ್ನೊಂದು ರೀತಿ ಹುಡುಕುತ್ತಾನೆ. ಆದರೆ ಈ ಇಬ್ಬರು ಅದಕ್ಕೆ ಪರಿಹಾರ ಸೂಚಿಸುವುದಿಲ್ಲ.

ಆದರೆ, ಲಿಯೋ ಟಾಲ್ ಸ್ಟಾಯ್ ಇವರಿಬ್ಬರಿಗಿಂತ ಭಿನ್ನವಾಗಿ ದೊಸ್ತೋವಸ್ಕಿಯ ‘ಅಧೋಲೋಕದ ಟಿಪ್ಪಣಿಗಳಿಗೆ’ ಉತ್ತರ ಎಂಬಂತೆ ತನ್ನ ‘ಎ ಕನ್ಫೆಷನ್’ ಎಂಬ ಕೃತಿ ರಚಿಸಿದ್ದಾನೆ. ಇದನ್ನು ಓ. ಎಲ್. ನಾಗಭೂಷಣ ಸ್ವಾಮಿಯವರು ‘ಭಿನ್ನಪ’ ಎಂದು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
ತನ್ನ ಬದುಕಿನಲ್ಲಿ ಮಾಡಿರುವ ತಪ್ಪುಗಳನ್ನು ಅದರ ಜೊತೆಗೆ ಬಂದ ತಲ್ಲಣಗಳನ್ನು ಟಾಲ್ ಸ್ಟಾಯ್ ಚೆನ್ನಾಗಿ ಚಿತ್ರಿಸಿದ್ದಾನೆ. ಇಲ್ಲಿನ ಕಥಾನಾಯಕ ಕೂಡ ಮೇಲಿನ ಎರಡು ಕಾದಂಬರಿಗಳ ಕಥಾನಾಯಕನೇ ಆಗಿದ್ದಾನೆ. ಬದುಕಿನ ಎಲ್ಲಾ ಸುಖಗಳನ್ನು ಅನುಭವಿಸಿದ್ದಾನೆ.
ಬದುಕಿನ ಒಂದು ಘಟ್ಟದಲ್ಲಿ ದೊಸ್ತೋವಸ್ಕಿಗೆ, ಕಮೂಗೆ ಮತ್ತು ಇವರಿಬ್ಬರಿಗಿಂತ ಭಿನ್ನವಾದ ಟಾಲ್ ಸ್ಟಾಯ್ ಗೆ ತನ್ನ ಬದುಕಿನ ಅರ್ಥವೇನು ಅದರ ಗುರಿಯೇನು ಎಂಬ ಪ್ರಶ್ನೆ ತುಂಬಾ ಕಾಡುತಿತ್ತು. ಇದು ಟಾಲ್ ಸ್ಟಾಯ್ ನ ಆತ್ಮಚರಿತ್ರೆಯ ಭಾಗವೇ ಎಂದು ಕೆಲವರು ಹೇಳುತ್ತಾರೆ. ನನಗೆ ಮೇಲಿನ ಎರಡು ಕೃತಿಗಳು ದೊಸ್ತೋವಸ್ಕಿ ಮತ್ತು ಕಮೂವಿನ ಆತ್ಮಚರಿತ್ರೆಯೇ ಇರಬಹುದು ಎಂದು ಅನಿಸುತ್ತದೆ.
ಇಲ್ಲಿ ಟಾಲ್ ಸ್ಟಾಯ್ ತತ್ವಜ್ಞಾನದ ಪ್ರಶ್ನೆ ಎತ್ತುತ್ತಾನೆ. “ದೇವರು ಅಸ್ತಿತ್ವದಲ್ಲಿಲ್ಲವಾದರೆ ಸಾವು ಯಾವಾಗಲೂ ಮನುಷ್ಯನ ಬೆನ್ನ ಹಿಂದೆಯೇ ಇರುವುದಾದರೆ ಮನುಷ್ಯನ ಬದುಕಿನ ಅರ್ಥವೇನು?” ಅದನ್ನು ಹುಡುಕುತ್ತ ಸದಾ ಅರಿವೆನೆಡೆಗೆ ನಡೆಯಲು ಟಾಲ್ ಸ್ಟಾಯ್ ಪ್ರಯತ್ನಿಸುತ್ತಾನೆ. ಆ ಬೆಳಕಿನ ಮಾರ್ಗದೆಡೆಗೆ ಸಾಗುವುದೇ ಟಾಲ್ ಸ್ಟಾಯ್ ಬದುಕಿನ ಕೊನೆಯ ದಿನಗಳ ಗುರಿಯಾಗಿತ್ತು ಎಂದು ಅವನ ಆತ್ಮಚರಿತ್ರೆ ಓದಿಕೊಂಡವರಿಗೆಲ್ಲಾ ಗೊತ್ತು.
ಈ ಕಾರಣದಿಂದಲೇ ಮಾಸ್ತಿ ಯಾವಾಗಲೂ ದೊಸ್ತೋವಸ್ಕಿಗಿಂತ ಟಾಲ್ ಸ್ಟಾಯ್ ಮಹತ್ತರವಾದ ಲೇಖಕ ಎಂದು ಹೇಳುತ್ತಿದ್ದರು. ಕಾರಣ ದೊಸ್ತೋವಸ್ಕಿ ನಮ್ಮನ್ನು ಕತ್ತಲೆಯ ದಾರಿಯಲ್ಲಿ ಕರೆದುಕೊಂಡು ಹೋಗಿ ಬಿಟ್ಟುಬಿಡುತ್ತಾನೆ ಆದರೆ ಟಾಲ್ ಸ್ಟಾಯ್ ನಮ್ಮನ್ನು ಆ ಕತ್ತಲೆಯ ಅಧೋಲೋಕ ಹೊರಗೆ ಕರೆದುಕೊಂಡು ಬರುತ್ತಾನೆ ಅಥವಾ ಬೆಳಕಿನೆಡೆಗಿನ ದಾರಿಯನ್ನು ನಮಗೆ ತೋರಿಸುವ ಮಾರ್ಗದರ್ಶಕನಾಗಿದ್ದಾನೆ ಎಂದು ಹೇಳುತ್ತಿದ್ದರಂತೆ.
ಓದುಗರು ಈ ಮೂರೂ ಕೃತಿಗಳನ್ನ ಒಟ್ಟಿಗೆ ಓದಿದರೆ ಬೇರೆಯ ಲೋಕವೊಂದು ನಮ್ಮೊಳಗೇ ತೆರೆದುಕೊಳ್ಳದೆ ಇರಲಾರದು ಎಂದು ಇಲ್ಲಿ ಖಂಡಿತ ಹೇಳಬಯಸುತ್ತೇನೆ. ಈ ಮೂರೂ ಕೃತಿಗಳು ಕನ್ನಡದಲ್ಲಿ ಅನುವಾದವಾಗಿವೆ. ಅನುವಾದ ಕೂಡ ಚೆನ್ನಾಗಿ ಬಂದಿವೆ. ಜೊತೆಗೆ ಆಲ್ಬರ್ಟ್ ಕಮೂವಿನ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಓದುಗರು ಕೇಶವ ಮಳಗಿಯವರ ಕಾಮೂ ತರುಣ ವಾಚಿಕೆಯನ್ನು ಕನ್ನಡದಲ್ಲಿಯೇ ಓದಬಹುದು.






super article about kamu but he is not equal to legend tollstoy