ಕಿವಿಯಲ್ಲಿ ‘ಪೋಲೆಂಡ್.. ಪೋಲೆಂಡ್.. ಪೋಲೆಂಡ್..’

ಸುಮಾರು ಜನವರಿ ತಿಂಗಳಲ್ಲಿ ಯಾವುದಾದರೂ ದೇಶಕ್ಕೆ ಹೋಗಿ ಬರಬೇಕೆಂದು ನನ್ನ ಗಂಡ ಶುರು ಮಾಡಿದ. ಒಬ್ಬರು ಶುರು ಮಾಡಿದರೆ ನಮ್ಮ ಮನೆಯಲ್ಲದು ಸಾಂಕ್ರಾಮಿಕ ರೋಗದಂತೆ ಹರಡುತ್ತದೆ! ಅಪ್ಪ-ನಾನು-ಮಗ ಮೂವರೂ ಕೋರಸ್ ಹಾಡಿದೆವು. ಎಲ್ಲಿಗೆ ಹೋಗುವುದು ಎನ್ನುವ ಮಾತು ಶುರುವಾಯಿತು.

ಆಗ ನನಗೆ ನೆನಪಾಗಿದ್ದು ಜರ್ಮನಿ ಮತ್ತು ಪೋಲೆಂಡ್! ಜರ್ಮನಿಯಲ್ಲಿ ಹೇಗೂ ನಮ್ಮ ಬಾವನ ಮಗ ಇದ್ದ. ಅಲ್ಲಿಗೆ ಹೋಗಬೇಕೆಂದು ಬಹಳ ದಿನಗಳಿಂದ ಅಂದುಕೊಳ್ಳುತ್ತಿದ್ದೆವು. ನನಗೆ ಯಾವುದಾದರೂ ದೇಶಕ್ಕೆ ಹೋಗಿ ಅಲ್ಲಿ ಪ್ರವಾಸಿಗರಂತೆ ಉಳಿಯದೆ, ಲೋಕಲ್ ಬಸ್, ರೈಲುಗಳಲ್ಲಿ ಓಡಾಡಿ, ಊರಿನಲ್ಲೆಲ್ಲ ಕಾಲ್ನಡಿಗೆಯಲ್ಲಿ ತಿರುಗಾಡಿ, ಅಲ್ಲಿನ ಜನಜೀವನವನ್ನೆಲ್ಲ ಹತ್ತಿರದಿಂದ ನೋಡಿಬರಬೇಕು ಅನ್ನುವುದು ತುಂಬ ದಿನದ ಕನಸು.

ಹಾಗಾಗಿ ಅವನ ಮನೆಯಲ್ಲಿ ಉಳಿದು ಎಲ್ಲ ದೇಶ ನೋಡಿ ಬರೋಣ ಎಂದುಕೊಳ್ಳುತ್ತಿದ್ದೆ. ಈಗ ಪ್ರವಾಸದ ಮಾತು ಶುರುವಾದ ಕೂಡಲೇ ಭಯಂಕರ ಉತ್ಸಾಹದಿಂದ ‘ಜರ್ಮನಿ ಮತ್ತು ಪೋಲೆಂಡ್’ ಎಂದೆವು ನಾನು, ನನ್ನ ಮಗ. ಅವೆರಡು ದೇಶವಾದರೆ ಸ್ವಲ್ಪ ಜಾಸ್ತಿ ದಿನ ನೋಡಬೇಕಾಗುತ್ತದೆ, ಸದ್ಯಕ್ಕೆ ಅಷ್ಟು ಸಮಯವಿಲ್ಲ, ಹಾಗಾಗಿ ಈಗ ಬೇರೆ ಕಡೆಗೆ ಹೋಗೋಣ ಎಂದ ನನ್ನ ಗಂಡ.

ನನ್ನ ಅಪ್ಪ ಬಿಡಿ, ಅವರಿಗೆ ಸೈಬೀರಿಯಾ ಆಗಲಿ ಆಸ್ಟ್ರೇಲಿಯಾ ಆಗಲಿ, ಅಡ್ಡಿಯಿಲ್ಲ, ಒಟ್ಟಿನಲ್ಲಿ ಬೀದಿ ಸುತ್ತುತ್ತಿದ್ದರಾಯಿತು! ಹಾಗಾಗಿ ಅವರು ಮಾತನಾಡಲಿಲ್ಲ. ನಾವೂ ಹೆಚ್ಚು ಕಡಿಮೆ ಅದೇ ಜಾತಿಯವರು!

ಸರಿ, ಅಲ್ಲಿಗೆ ಮತ್ತೆಂದಾದರೂ ಹೋದರಾಯಿತು ಎಂದುಕೊಳ್ಳುತ್ತ, ಈಗ ಮತ್ತೆಲ್ಲಿಗೆ ಹೋಗೋಣ ಎಂದೆವು. ನನ್ನ ಗಂಡ ‘ಸ್ಪೇನ್ ಮತ್ತು ಪೋರ್ಚುಗಲ್?’ ಎಂದ. ಓ ಆದೀತಾದೀತು ಅಂತ ಎಲ್ಲರೂ ದನಿಗೂಡಿಸಿದೆವು ಕೋರಸ್ಸಿನಲ್ಲಿ.

ನಮ್ಮ ಮನೆಯಲ್ಲಿ ಪ್ರವಾಸವೊಂದರ ತಯಾರಿಯೆಂದರೆ ಇಡೀ ವಾತಾವರಣಕ್ಕೇ ಬಿಸಿ ಏರಿ ಬಿಡುತ್ತದೆ. ಅವತ್ತಿನಿಂದ ಸ್ಪೇನ್ ಮತ್ತು ಪೋರ್ಚುಗಲ್ ಬಗ್ಗೆ ಒಂದಿಷ್ಟು ರಿಸರ್ಚ್ ಶುರುವಾಯಿತು. ಒಂದೊಂದು ಜಾಗವನ್ನೂ ನೋಡಿ ಇದನ್ನು ನೋಡದೇ ಬದುಕಿದ್ದೂ ಏನು ಪ್ರಯೋಜನ ಎನ್ನುವಂತೆ ಭಾವೋದ್ವೇಗಕ್ಕೊಳಗಾದೆವು.

ಗ್ರೂಪ್ ಟೂರ್‌ಗಳ ಖರ್ಚು ನೋಡಿ ಪರವಾಗಿಲ್ಲ ಕೈಗೆಟಕುತ್ತದೆ ಅನ್ನಿಸಿತು. ಆದರೆ ನಮಗೆ ಯಾವುದೇ ದೇಶಕ್ಕೆ ಹೋದರೆ ನಮ್ಮದೇ ಆದ ನೂರೆಂಟು ಬೇಕು-ಬೇಡಗಳು. ಮಾಮೂಲಿ ಟೂರಿಸ್ಟ್ ಜಾಗಗಳಲ್ಲದೇ ಮತ್ತೆ ಯಾವ್ಯಾವುದೋ ಜಾಗಗಳು ರಂಭೆ ಊರ್ವಶಿಯರಂತೆ ಕಣ್ಣಿಗೆ ಬಿದ್ದು ನಮ್ಮನ್ನು ಮರುಳುಗೊಳಿಸುತ್ತವೆ.

ಹಾಗಾಗಿ ಗ್ರೂಪ್ ಟೂರ್‌ಗಳು ಎಂದೂ ನಮಗೆ ಆಗಿಬರುವುದಿಲ್ಲ. ಹಾಗಾಗಿ ಸುಮಾರು ವಿವರಗಳನ್ನು ಸಂಗ್ರಹಿಸಿ ಒಂದು customized ಟೂರ್ ಮಾಡಿಕೊಡಲು ಮೂವರು ಟೂರ್ ಆಪರೇಟರ್‌ಗಳನ್ನು ಸಂಪರ್ಕಿಸಿದೆವು. ಒಂದಿಷ್ಟು ದಿನಗಳೊಳಗೆ ಎಲ್ಲ ಕೊಡುತ್ತೇವೆಂದರು.

ನಾವು ಕಾಯುತ್ತಾ ಕುಳಿತಿರುವ ಆ ಸಮಯದಲ್ಲಿ ಅಲ್ಲಿನ ಲೋಕಲ್ ತಿನಿಸುಗಳು ಯಾವುದಿದೆ, ಲೋಕಲ್ ಡ್ರಿಂಕ್ ಯಾವುದಿದೆ, ಅಲ್ಲಿನ ಕರೆನ್ಸಿ, ಅವರದ್ದೊಂದು ಕರೆನ್ಸಿ ಪಡೆಯಲು ನಮ್ಮ ಎಷ್ಟು ರೂಪಾಯಿ ತೆತ್ತಬೇಕು, ದಿನವೊಂದಕ್ಕೆ ತಿನ್ನುವ ಊಟಕ್ಕೆ ಎಷ್ಟು ಖರ್ಚು ಬೀಳುತ್ತದೆ ಅಂತೆಲ್ಲ ಮತ್ತಿಷ್ಟು ವಿಷಯ ಕಲೆ ಹಾಕಿದ್ದಾಯಿತು.

ಅಷ್ಟರಲ್ಲಿ ಟೂರ್ ಆಪರೇಟರ್‌ಗಳು ಕೊಟೇಷನ್ ಕೊಟ್ಟರು. ಒಬ್ಬೊಬ್ಬರದ್ದೂ ರೇಟ್ ನೋಡಿ ಉಸಿರು ಗಂಟಲಲ್ಲೇ ಸಿಕ್ಕಿಕೊಂಡಂತೆನಿಸಿತ್ತು! ನಮ್ಮ ಬಡ್ಜೆಟ್‌ನ ಒಂದೂವರೆ ಪಟ್ಟಿಗಿಂತಲೂ ಹೆಚ್ಚಿನ ದರವದು! ‘ಅಯ್ಯೋ ಯಾಕಿಷ್ಟು ಕಾಸ್ಟ್ಲಿ? ನಿಮ್ಮ ಬ್ರೋಷರ್‌ನಲ್ಲಿ ಅಷ್ಟು ಕಡಿಮೆ ಇತ್ತಲ್ಲಾ’ ಎಂದರೆ ‘ಅದು ನಮ್ಮ ಮಾಮೂಲಿ ಜಾಗಗಳು. ಅಲ್ಲಿಗೆ ಹೋದರೆ ಈಗಲೂ ಅದೇ ದರವೇ ಆಗುತ್ತದೆ. ಆದರೆ ನಿಮ್ಮ ಲಿಸ್ಟ್‌ನಲ್ಲಿ ಹೊಸ ಹೊಸ ಜಾಗಗಳಿರುತ್ತವೆ. ಅಲ್ಲಿಗೆಲ್ಲ ಹೋಗಬೇಕೆಂದರೆ ನಿಮಗೆ ಮಾತ್ರ ಏರ್ಪಾಡು ಮಾಡಿಕೊಡಬೇಕಾಗುತ್ತದೆ. ಹಾಗೆ ಮಾಡಿದ್ದಾದರೆ ಹೆಚ್ಚು ಖರ್ಚು ಬಿದ್ದೇ ಬೀಳುತ್ತದೆ’ ಎಂದರು.

ಅವರು ಹೇಳುವುದೂ ಸತ್ಯವೇ. ಆದರೆ ಮನಸ್ಸು ಜಾಗಗಳ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಹಾಗಾಗಿ ಸಾಕಷ್ಟು ಜುಂಗಾಡಿ, ದರ ಇಳಿಸಲು ಪ್ರಯತ್ನಿಸಿದರೂ ಸಾಧ್ಯವಾಗಲೇ ಇಲ್ಲ. ಕೊನೆಗೆ ‘ಹೋಗತ್ಲಾಗೆ, ಇದರ ಸಹವಾಸವೇ ಬೇಡ. ಬೇರೆ ಎಲ್ಲಿಗಾದರೂ ಹೋಗೋಣ’ ಅಂತ ತೀರ್ಮಾನಿಸಿದೆವು.

ಅಲ್ಲಿಂದ ಮುಂದೆ ನಾವು ಎಲ್ಲಿಗೆ ಹೋಗಬಹುದೆಂದು ಮಾತಿನಲ್ಲಿಯೇ ಇಡೀ ಪ್ರಪಂಚ ಪರ್ಯಟನೆ ಮಾಡಿದೆವು! ಒಂದು ದಿನ ನನ್ನ ಗಂಡ ಇದ್ದಕ್ಕಿದ್ದಂತೆ ‘ಈ ಸ್ಪೇನ್ ಮನೆ ಹಾಳಾಗಲಿ. ಜ಼ೆಕಿಯಾ – ಸ್ಲೊವಾಕಿಯಾ – ಪೋಲ್ಯಾಂಡ್ – ಜರ್ಮನಿಗೆ ಹೋಗಿ ಬಂದುಬಿಡೋಣ ಅಂದ.

ಅಚಾನಕ್ ಬಂದ ಈ ಪ್ರೊಪೋಸಲ್‌ಗೆ ನನಗೆ ಮತ್ತೆ ರೋಮಾಂಚನ ಶುರು! ಯಾವುದೋ ದೇಶವೆಂದು ಹೊರಟಿದ್ದು ಮತ್ತೆಲ್ಲಿಗೋ ಆಗಿಬಿಡುವ ಈ ಅನಿರೀಕ್ಷಿತದ ಸೊಗಸು ಬೇರೆ! ನಾನು ಅತ್ಯಂತ ಉಗ್ರವಾಗಿ, ಪ್ರಾಮಾಣಿಕವಾಗಿ ದ್ವೇಷಿಸುವ ಹಿಟ್ಲರ್‌ನಾಡಿಗೆ ನಾನು ಹೋಗುತ್ತಿದ್ದೀನಾ! ಮನಸ್ಸಿನಲ್ಲೆ ಕುಣಿದಾಡಿದೆ.

ಈ ನಾಲ್ಕು ದೇಶಗಳಿಗೆ ಹೋಗುವುದು ಅಂತಾದ ಮೇಲೆ ಬದುಕು ಪೂರಾ ಹೆಕ್ಟಿಕ್ ಆಗಿಹೋಯಿತು. ಮಗನ ಜೊತೆ ಮೊದಲನೆಯ ಶಿಫ್ಟ್‌ನಲ್ಲಿ ಅಲ್ಲಿ ನೋಡಬೇಕಾದ ಸ್ಥಳಗಳು, ಅಲ್ಲಿನ ಕರೆನ್ಸಿ, ಅಲ್ಲಿನ ತಿಂಡಿ ತಿನಿಸು, ಪಾನೀಯಗಳ ಬಗ್ಗೆ ಮತ್ತದೇ ಮುಗಿಯದ ರಿಸರ್ಚ್. ಅದಾದ ನಂತರ ಎರಡನೆಯ ಶಿಫ್ಟ್‌ನಲ್ಲಿ ನಾನು ಒಬ್ಬಳೇ ಹಿಟ್ಲರ್‌ನ ಕ್ರೌರ್ಯದ ಬಗೆಗೆ ಓದುವುದು, ಡಾಕ್ಯುಮೆಂಟರಿ ನೋಡುವುದು ಈ ಕೆಲಸ.

ರಾಶಿ ರಾಶಿ ಓದಿದೆ, ರಾಶಿ ರಾಶಿ ನೋಡಿದೆ. ಮನಸ್ಸಿನೊಳಗೆ, ಎದೆಯೊಳಗೆ, ತಲೆಯೊಳಗೆ ಎಲ್ಲೆಲ್ಲಿಯೂ ಎರಡನೆ ಮಹಾಯುದ್ಧದ ವಿಷಯವೇ. ಹೀಗೆ ಅತ್ಯಂತ ಉತ್ಕಟತೆಯಿಂದ ಸಿದ್ಧಳಾಗುತ್ತಿರಬೇಕಾದರೆ ಟೂರ್ ಆಪರೇಟರ್ ಖರ್ಚಿನ ಲೆಕ್ಕ ಕೊಟ್ಟರು. ಅದನ್ನು ಕೇಳಿ ನಾವು ಜ್ಞಾನ ತಪ್ಪುವುದೊಂದೇ ಬಾಕಿ! ಆಪಾಟಿ ಹಣ ತೆತ್ತು ಹೋಗುವುದು ಅಸಾಧ್ಯದ ಮಾತಾಗಿತ್ತು.

ಇಷ್ಟೆಲ್ಲ ತಯಾರಿ ನಡೆಸಿ ಒಂದೊಂದೂ ಎಡವಟ್ಟಾಗುತ್ತಾ ಆಗುತ್ತ ಹೋದಾಗ ಮಾತ್ರ ಯಾಕೋ ಹತಾಶಳಾಗಿ ಬಿಟ್ಟೆ. ನನ್ನ ಗಂಡ ಅಷ್ಟೆಲ್ಲ ಆದರೆ ಸಾಧ್ಯವೇ ಇಲ್ಲ ಎಂದು ತೀರ್ಮಾನಿಸಿ ಮತ್ತೆ ‘ಸ್ಪೇನ್ ಮತ್ತು ಪೋರ್ಚುಗಲ್ಲಿಗೇ ಯಾಕೆ ಹೋಗಬಾರದು’ ಎಂದ. Back to square one! ನಾನು ಅದುವರೆಗೆ ಮಾನಸಿಕವಾಗಿ ಪೋಲೆಂಡ್‌ಗೆ ಹೋಗಿಯೇ ಬಿಟ್ಟಿದ್ದವಳು ನಿರಾಸೆಯಿಂದ ತಲೆಯ ಮೇಲೆ ಕೈ ಹೊತ್ತು ಕುಳಿತೆ. ಇದೆಲ್ಲ ಸಾಕು ಸಾಕು ಅನ್ನಿಸಿಬಿಟ್ಟು ಎಲ್ಲಿಗೂ ಹೋಗುವುದೇ ಬೇಡ ಅನ್ನುವ ವೈರಾಗ್ಯ ಆವರಿಸಲು ಶುರುವಾಯಿತು.

ಅಷ್ಟರಲ್ಲಾಗಲೇ ಈ ಮಾತು ಶುರುವಾಗಿ ಹತ್ತಿರ ಹತ್ತಿರ ಮೂರ್ನಾಲ್ಕು ತಿಂಗಳಾಗಿ ಹೋಗಿತ್ತು. ಇದೆಂತ… ಒಂದು ಟೂರ್ ಹೋಗಲು ತಿಂಗಳುಗಟ್ಟಳೆ ಸಮಯ ಹೂಡಬೇಕೇ ಅಂತ ಸಿಟ್ಟು ಬರಲು ಶುರುವಾಯಿತು. ಮನಸ್ಸಿಗೆ ಪೋಲೆಂಡ್ ಬಿಟ್ಟು ಮತ್ತೆ ಯಾವುದೂ ಬೇಕೆನಿಸುತ್ತಿಲ್ಲ. ಹೀಗಿರುವಾಗಲೇ ಒಂದು ದಿನ ಬೆಳಗ್ಗೆ ಎದ್ದವನೇ ನನ್ನ ಗಂಡ ಅಪ್ಪನಿಗೆ ‘ಸ್ವಾಮಿ ನಡೀರಿ ಫಿಲಿಪೈನ್ಸ್‌ಗೆ ಹೋಗೋಣ’ ಅಂತ ಫೋನ್ ಮಾಡುವುದು ಕೇಳಿಸಿತು! ಫಿಲಿಪೈನ್ಸಾ?! ಮತ್ತೀಗ ನಾವು ಫಿಲಿಪೈನ್ಸ್‌ನ ಬಗ್ಗೆ ಓದಬೇಕಾ?! ಏ ಇದೇನು ನಡೆಯುತ್ತಿದೆ ಇಲ್ಲಿ ಎಂದು ಕಿರುಚಿಬಿಡೋಣ ಅನ್ನಿಸಿಬಿಟ್ಟಿತು.

ಏನೋ ಮಾಡಿಕೊಳ್ಳಲಿ ಅನ್ನುವಂತೆ ಹತಾಶಳಾಗಿ ಕುಳಿತುಬಿಟ್ಟೆ. ಅಲ್ಲಿಂದಾಚೆಗೆ ಮತ್ತೆರಡು ದಿನ ಕಳೆಯುವುದರಲ್ಲಿ ಅದರದ್ದೂ ಹೆಚ್ಚು ಕೊಟೇಷನ್ ಕೊಟ್ಟಿರಬೇಕು, ಅದೂ ಹೆಚ್ಚಿರಬೇಕು… ನನ್ನ ಗಂಡ ‘ನಡಿ ಮಚುಪಿಚುಗೆ ಹೋಗಿ ಬಂದು ಬಿಡೋಣ. ಗ್ರೂಪ್ ಟೂರ್ ಇದೆ. Customize ಮಾಡಿಸಿದ್ರೆ ತುಂಬ ಜಾಸ್ತಿ ಆಗತ್ತೆ. ಇದರಲ್ಲೇ ಹೋಗಿ ಬಂದು ಬಿಡೋಣ’ ಎಂದ!

ನನಗೆ ಹೋಗಲೇಬೇಕು ಅನ್ನುವ ಸ್ಥಳಗಳಲ್ಲಿ ಈ ಮಚುಪಿಚು ಒಂದು. ಆದರೆ ಈಗ ಪೋಲೆಂಡ್ ಬಿಟ್ಟು ಅಲ್ಲಿಗೆ ಹೋಗಲು ಮನಸ್ಸು ಒಗ್ಗುತ್ತಲೇ ಇಲ್ಲ. ಆ ಶುಭ ಘಳಿಗೆಯಲ್ಲಿ ಅದ್ಯಾರಿಗೆ ಹೊಳೆಯಿತೋ ಗೊತ್ತಿಲ್ಲ… ಇದ್ದಕ್ಕಿದ್ದಂತೆ ‘ಜ಼ೆಕಿಯಾ ಮತ್ತು ಸ್ಲೊವಾಕಿಯಾ ಬಿಟ್ಟು ಬರೀ ಪೋಲೆಂಡ್ ಮತ್ತು ಬರ್ಲಿನ್ ಹೋಗಿ ಬಂದರೆ ಖರ್ಚು ಕಡಿಮೆಯಾಗುತ್ತದೆ. ಅಲ್ಲವಾ?’ ಎಂಬ ಮಾತು ಬಂದಿತು.

ಇದೂ ಒಂದು ಸಾಧ್ಯತೆ ನಮಗೆ ಹೊಳೆದಿರಲೇ ಇಲ್ಲ! ಕೊನೆಗೆ ಅದರ ದರ ತರಿಸಿಕೊಂಡು ನೋಡಿದರೆ ನಮ್ಮ ಕೈಗೆಟಕುವ ಬೆಲೆಯಲ್ಲಿದೆ!! ಕೊನೆಗೆ ಅಲ್ಲಿಗೇ ಹೋಗುವುದು ಎಂದು ನಿರ್ಧಾರವಾಗಿಬಿಟ್ಟಿತು! ನನಗಂತೂ ಈ ಹೌದು, ಇಲ್ಲ, ಹೌದು, ಇಲ್ಲಗಳ Roller Coaster Rideನಲ್ಲಿ ಜರ್ಮನಿ ಮತ್ತು ಪೋಲೆಂಡ್‌ಗೆ ಹೋಗುತ್ತಿದ್ದೇವೆ ಎಂದು ಈಗಲೂ ನಂಬಿಕೆ ಬರುತ್ತಿಲ್ಲ! ಹಾಗಾಗಿ ಈ ಬಾರಿ ನಿಜಕ್ಕೂ ನಾವು ಅಲ್ಲಿಗೇ ಹೋಗುತ್ತಿದ್ದೇವೆ ಎನ್ನುವುದು ಖಚಿತವಾದದ್ದು ನಾವು ಮೊದಲ ಅಡ್ವಾನ್ಸ್ ಕೊಟ್ಟಮೇಲೆಯೇ!

ಕೊನೆಗೂ ಸೆಪ್ಟೆಂಬರ್ 11ರ ರಾತ್ರಿ ನಾವು ಹೊರಡುವ ದಿನವೆಂದು ತೀರ್ಮಾನವಾಯಿತು.

ನನ್ನ ಮಗ ರೇಗಿಸಲೆಂದು ‘ಅಮ್ಮ ಒಳ್ಳೆ ದಿನ ಹೊರಡ್ತಿದ್ದೀವಿ 9/11’ ಎಂದ ಕಿಡಿಗೇಡಿ ನಗು ನಗುತ್ತ.

‘ತೆಪ್ಪಗಿರು ಹೊರಡುವುದು 11ರ ರಾತ್ರಿಯಾದರೂ ಫ್ಲೈಟ್ ಇರುವುದು 12ರ ಬೆಳಗ್ಗೆ’ ಎಂದೆ!

ಹೀಗೆ ನಮ್ಮ ಪಯಣಾಂಕುರವಾಗಿತ್ತು!

ಸಾಧಾರಣವಾಗಿ ಕೆಟ್ಟ ಅರಾಜಕ ಜೀವನ ನಡೆಸುವ ನಾನು, ಪ್ರವಾಸವೊಂದು ಎದುರಿಗಿರುವಾಗ ಬಾಣಂತಿಯಂತೆ ಆರೋಗ್ಯದ ಕಡೆ ಸಿಕ್ಕಾಪಟ್ಟೆ ಗಮನ ಕೊಡುತ್ತ, ಭಯಂಕರ ಶಿಸ್ತಿನಿಂದ ಬದುಕಿ ಬಿಡುತ್ತೇನೆ. ಹಾಗೆಯೇ ಈ ಬಾರಿಯೂ ಬಹಳ ಜೋಪಾನವಾಗಿ ಬದುಕುತ್ತಿರಬೇಕಾದರೆ ಅಕ್ಕನ ಮಗನ ಮದುವೆಯ ದಿನ ಬಂದಿತು. ಅಲ್ಲಿಯೂ ಒಳ್ಳೆಯ ನೀರನ್ನೇ ಕುಡಿಯುತ್ತ, ಪಾನಿ ಪೂರಿ ಕೈನಲ್ಲೂ ಮುಟ್ಟದೇ ಬಹಳ ಸಾತ್ವಿಕ ಜೀವನವನ್ನೇ ನಡೆಸಿದೆ. ಮದುವೆಯ ದಿನ ಅಲಂಕಾರ ಮಾಡಿ ನಲಿದದ್ದೇ ನಲಿದದ್ದು.

ನಂತರ ಮನೆಗೆ ಹಿಂದಿರುಗುವಾಗಲೇ ಗಂಟಲಿನಲ್ಲಿ ಕಿಚಿಕಿಚಿ ಅಂದಿತು. ಏನೋ ಸರಿ ಹೋಗುತ್ತದೆ ಬಿಡು ಎಂದುಕೊಂಡೆ. ಆದರೆ ಅದು ಸರಿ ಹೋಗಲಿಲ್ಲ! ಮನೆ ತಲುಪುವುದರಲ್ಲಿ ಮೈ ಬಿಸಿ ಬಿಸಿ. ಅಯ್ಯೋ ಇನ್ನೇನು ಗತಿ ಅಂತ ಧೈರ್ಯಗೆಡುವುದರಲ್ಲೇ ‘ಏ ಇನ್ನೂ 11 ದಿನ ಇದೆ ತಗೋ, ಅಷ್ಟರಲ್ಲಿ ನೆಟ್ಟಗಾಗಿರುತ್ತೇನೆ’ ಎಂದು ಸಮಾಧಾನಿಸಿಕೊಂಡೆ. ಡಾಕ್ಟರ್ ಗೆಳತಿಗೆ ಕರೆ ಮಾಡಿದೆ. ಬಂದು ತೋರಿಸದ ಹೊರತು ಯಾವುದೇ ಮಾತ್ರೆ ಕೊಡುವ ಅಭ್ಯಾಸವಿಲ್ಲ ಅವರಿಗೆ.

ಆದರೆ ನಾನು ಈ ಬಾರಿಯ ಜ್ವರದ ಬಗ್ಗೆ ಎಷ್ಟು ಮಾಮೂಲಾಗಿ ಇದ್ದೆನೆಂದರೆ ‘ಏನಾಗಲ್ಲ, ಇದು ಮಾಮೂಲು ಗಂಟಲು ಇನ್ಫೆಕ್ಷನ್‌ ಹಂಗೆ ಒಂದು ಮಾತ್ರೆ ಹೇಳಿ’ ಅಂತ ಸೂರ್ಯಂಗೇ ಟಾರ್ಚು ಹಾಕಿದೆ! ಅವರು ಒಲ್ಲದ ಮನಸಿನಿಂದ ಯಾವುದೋ ಮಾತ್ರೆ ಹೇಳಿದರು. ಮೊದಲನೆಯದ್ದು ನುಂಗಿದಾಗ ಪರವಾಗಿಲ್ಲ ಅನ್ನಿಸಿತು. ಇನ್ನು ನೆಟ್ಟಗಾದೆ ಬಿಡು ಅಂದುಕೊಂಡೆ. ಮಾರನೆಯ ದಿ‌ನಕ್ಕೆ ಮತ್ತೆ ಜ್ವರ, ಸುಸ್ತು, ಸಂಕಟ. ಜೊತೆಗೆ ಗಂಟಲು ಬ್ಲೇಡಿನಿಂದ ಕತ್ತರಿಸಿದಂಥ ನೋವು. ಸ್ವಲ್ಪ ಗಾಬರಿಯಾಯಿತು. ‘ತಾರೀಖು ಇನ್ನೂ 3, ಬಿಡು ಇನ್ನೆರಡು ದಿನದಲ್ಲಿ ಸರಿ ಹೋಗುತ್ತೇನೆ’ ಅಂತ ಧೈರ್ಯ ತಂದುಕೊಂಡೆ.

ದಿನ ಕಳೆಯುತ್ತ ಹೋದಂತೆ ಇದ್ದ ರೋಗದ ಜೊತೆಗೆ ಕೆಮ್ಮೂ ಸೇರಿಕೊಂಡಿತು! ಇಡೀ ರಾತ್ರಿ ಕೆಮ್ಮುತ್ತ ಕೆಮ್ಮುತ್ತ ಕಳೆಯಲಾರಂಭಿಸಿದೆ. ಹೊರಡುವ ಸಮಯ ಬೇರೆ ಹತ್ತಿರವಾಗುತ್ತಿದೆ! ಇದು ಯಾಕೋ ಪರಿಸ್ಥಿತಿ ಸರಿ ಇಲ್ಲ ಎಂದು ಆತಂಕ ಶುರುವಾಯಿತು. ನನ್ನ ಗಂಡ ‘ಬೇರೆ ಡಾಕ್ಟರ್ ಹತ್ತಿರ ಗೋಗೋಣ. ಪೋಲೆಂಡ್ ಹೊರಡುವ ದಿನ ಹತ್ತಿರವಾಗ್ತಿದೆ’ ಎಂದಾಗ ಈ ಲೌಕಿಕ ಜಗತ್ತಿನ ಸಂಕಟಗಳೆಲ್ಲವೂ ಉದುರಿ ಬಿದ್ದು ‘ಪೋಲೆಂಡ್’ ಅನ್ನುವ ಪದವೊಂದು ಮಾತ್ರ ಕಿವಿಯಲ್ಲಿ ‘ಪೋಲೆಂಡ್… ಪೋಲೆಂಡ್… ಪೋಲೆಂಡ್…’ ಎಂದು ಅನುರಣನಗೊಂಡು ಅವನನ್ನು ಹಿಂಬಾಲಿಸಿದೆ!

ಮತ್ತೊಬ್ಬರು ಡಾಕ್ಟರ್ ಬರೆದುಕೊಟ್ಟ antibiotics ನುಂಗುತ್ತ ಇರುವಾಗಲೇ ಅಸ್ತಮಾ ಥರ ಎಳೆತ ಶುರುವಾಯಿತು! ಉಸಿರಾಡಿದರೆ ಎದೆಯಲ್ಲಿ ಸುಯ್ ಅಂತ ಎಳೆತ. ನಾನು ಸಂಪೂರ್ಣ ರೋಗಿಯಾಗಿ ಹೋಗಿದ್ದೆ. ಉಸಿರಾಡಲೂ ಆಗುತ್ತಿಲ್ಲ ಮತ್ತು ದನಿಯೂ ಇಲ್ಲ. ಕಷಾಯ, ವಿಕ್ಸ್ ಹಬೆ, ಇನ್ಹೇಲರ್, ಎದೆಯ ಎಕ್ಸ್‌ರೇ, ಕಫ ಪರೀಕ್ಷೆ, ರಕ್ತ ಪರೀಕ್ಷೆ, ಸ್ಟೀರಾಯ್ಡ್ ಎಲ್ಲದರ ಸುಳಿಯಲ್ಲಿ ಸಿಕ್ಕಿ ನರಳುವಾಗಲೇ 10ನೆಯ ತಾರೀಖು ಬಂದೇ ಬಿಟ್ಟಿತು.

ಮರುದಿನವೇ ಹೊರಡಬೇಕು! ಆದರೆ ಆ ಸ್ಥಿತಿಯಲ್ಲಿ ಕಾಣದ ದೇಶಕ್ಕೆ ಹೋಗಿ ಅಲ್ಲೇನಾದರೂ ಎಡವಟ್ಟಾದರೆ ಎಂದು ಭಯ. ಕೊನೆಗೆ ಡಾಕ್ಟರ್ ಬಳಿ ಹೋಗಿ ‘ನಾನು ಈ ಸ್ಥಿತಿಯಲ್ಲಿ ಊರಿಗೆ ಹೋಗಬಹುದಾ’ ಎಂದೆ. ಅವರು ‘ಯಾವೂರು’ ಅಂದರು. ನಾನು ‘ಪೋಲೆಂಡ್’ ಅಂದೆ. ಅವರು ಕಣ್ಣುಕಣ್ಣು ಬಿಡುತ್ತಾ ‘ಅದು ಊರಾ?! ಅದನ್ಯಾರೀ ಊರು ಅಂತಾರೆ’ ಎಂದು ನಕ್ಕರು.

ನಾನು ಬೆಂಗಳೂರು ಬಿಟ್ಟು ಉಳಿದದ್ದನ್ನೆಲ್ಲ ಊರು ಅಂತಲೇ ಅನ್ನುವುದು ಅಂದೆ. ತಲೆ ಚೆಚ್ಚಿಕೊಳ್ಳುತ್ತ ‘ಹೋಗಿ ಏನಾಗಲ್ಲ’ ಅಂದರು. ಅವತ್ತು ಎದ್ದು ಬಟ್ಟೆ ಇಸ್ತ್ರಿ ಮಾಡಿಸಿದೆ. ತಯಾರಿ ಶುರು ಮಾಡಿದೆ. ನಾಲ್ಕು ಬಟ್ಟೆ ಎತ್ತಿಟ್ಟರೆ ಅರ್ಧ ಗಂಟೆ ಸುಧಾರಿಸಿಕೊಳ್ಳಬೇಕು. ಇದು ಯಾಕೋ ಈ ಬಾರಿಯ ಟೂರ್‌ ಎಡವಟ್ಟಾಗುತ್ತದೆ ಅನ್ನಿಸಲು ಶುರುವಾಯಿತು.

ದೇಶ ಯಾವುದೆಂದು ನಿರ್ಧರಿಸಲು ಮೂರ್ನಾಲ್ಕು ತಿಂಗಳು, ನಂತರ ನೋಡಿದರೆ ಈಗ ಈ ಅನಾರೋಗ್ಯ… ಹಾಗೆಯೇ ನೇತಾಡಿಕೊಂಡು ಸಿದ್ದಳಾದೆ. ಅದೇನು ಬಟ್ಟೆ ಇಟ್ಟುಕೊಳ್ಳುತ್ತಿದ್ದೇನೆ ಅಂತಲೂ ಅರಿವಾಗದ ರೀತಿ ಸಿಕ್ಕಿದ್ದೆಲ್ಲ ಎತ್ತಿಟ್ಟುಕೊಂಡೆ, ಜೊತೆಗೊಂದು ದೊಡ್ಡ ಮೆಡಿಕಲ್ ಶಾಪ್ ಕೂಡಾ!

| ಮುಂದಿನ ವಾರಕ್ಕೆ |

‍ಲೇಖಕರು ಬಿ ವಿ ಭಾರತಿ

August 25, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Vasudeva Sharma

    ಬೇಗ ಹೇಳಿ, ಹೊರಟಿರಿ ತಾನೆ… ಹೋದಿರಿ ತಾನೆ…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: