-ಎನ್ .ರವಿಕುಮಾರ್ ( ಟೆಲೆಕ್ಸ್)
ಮಸಣಕ್ಕೊಂದು ಕೃತಜ್ಞತೆ
ನನ್ನ ಮನೆಯ ಹಿಂದಿನ ದಿಬ್ಬದ ಮಸಣ
ಒಂದೂ ದಿನವೂ ನಿರುಮ್ಮಳವಾಗಿರುವುದಿಲ್ಲ
ಅದೊಂದು ವಿದಾಯದ ಬಯಲು
ಅಳುವವರ ತೊರೆವವರ ಕಡೇ ಜಗುಲಿ
ಬಗೆದ ಗುಂಡಿಯ ಮೇಲೆದ್ದ ಮಣ್ಣು ಪವಿತ್ರ
ಗುರುತು ಅಳಿವ ನೆನಪಾಗಿ ಉಳಿವ ಚಿತ್ರ
ದಿಬ್ಬದ ಮೇಲೆ ದೇವರುಗಳಿದ್ದಾರೆ
ಚಿನ್ನ ಬೆಳ್ಳಿ, ಕಾಸು ಕರಿಮಣಿ ಕಾಣಿಕೆ ಕೊಟ್ಟವರೂ
ತುಂಡು ಬಟ್ಟೆಯೂ ಇಲ್ಲದೆ ಮಣ್ಣಾಗುತಾರೆ
ಮೂರಿಡಿ ಮಣ್ಣಾಕಿ ಕೈಮುಗಿದು ಹೋಗುವವರು
ಇಂದಲ್ಲ ನಾಳೆ ಎಲ್ಲರೂ ತನ್ನೂಡಲಿಗೆ ಬರಲೇಬೇಕು
ವಿಷಾದಿಂದ ಮಸಣ ನಗುತ್ತದೆ
ಕೂಳು ಮಡಿಕೆ ಒಡೆಯುವುದೆ ತಡ
ಕಾಗೆ ಬರುತ್ತವೆ ಬಳಗದೊಂದಿಗೆ
ಸೊಜಿಗವೆಂದರೆ ಕೂಳು ತಿನ್ನುವಾಗ ಅವು ಕಿತ್ತಾಡುವುದಿಲ್ಲ
ಅಮೃತ ಶಿಲೆಯಲ್ಲಿ ಗೋರಿ ಕಟ್ಟುತ್ತಾರೆ
ಬರೀ ಮಣ್ಣ ಗುಡ್ಡೆಗೆ ಅಜ್ಞಾತ ಗಿಡ ನೆಟ್ಟವರಿದ್ದಾರೆ
ಹೆಣ ಹೊದ್ದ ಹೂವುಗಳು ಒಣಗಿ ಹೋಗುವ ಮುಂಚೆ
ಎಲ್ಲವೂ ಎಂದಿನಂತೆ ನಡೆಯುತ್ತದೆ
ಗುಂಡಿ ತೆಗೆಯುವ ಕೂಲಿಕಾರ
ದಿನವೂ ಹೆಣ ಬರಲೆಂದೆ ದೇವರಿಗೆ ಕೈ ಮುಗಿಯಬಹುದೇನೋ.!
ಅವನದೋ.. ಹೊಟ್ಟೆಪಾಡು
ಹೊರೆ ಇಳಿಸಿದ ಬಿದಿರ ಚಟ್ಟ ಯಾರದೋ ಜೋಪಡಿಯ
ಒಲೆಯಲ್ಲಿ ಉರಿದು ಅನ್ನ ಬೇಯುತ್ತದೆ
ಇದು ಹಸಿದವರ ಹಾಡು
ಈಗೀಗ ಜಾಗಕ್ಕೂ ಬರ ಇಲ್ಲಿ
ಹಳೆ ಗುಂಡಿಯ ಮೇಲೆ ಹೊಸಗುಂಡಿ
ಕಿತ್ತೆಸೆದ ಮೂಳೆ ತಲೆಬುರುಡೆಗಳು ಗುಜರಿಗೂ ತೂಗುವುದಿಲ್ಲ
ಅವುಗಳು ಅವಧಿ ತೀರಿದ ಸರಕು
ಅಲ್ಲಿ ತರಾವರಿ ಹೂಗಳು ಬಿಡುತ್ತವೆ
ಏಕಾಂತಕ್ಕೆ ಬರುವ ಪ್ರೇಮಿಗಳು
ಯಾರದೋ ಎದೆಯ ಮೇಲೆ ಕುಳಿತು
ಇಳಿಸಂಜೆವರೆಗೂ ಮಾತಾಡಿಕೊಳ್ಳುತ್ತಾರೆ
ಹೆಸರಿಲ್ಲದ ಹೂವೊಂದ ಕಿತ್ತು
ಪ್ರೇಯಸಿಯ ಮುಡಿಗೆ ಇರಿಸುವ ಪ್ರಿಯಕರ
ಅವಳಿಗೆ ಅಮರ ಪ್ರೇಮದ ಕತೆ ಹೇಳುತ್ತಾನೆ
ಪರಸ್ಪರ ’ನಾಳೆ ’ ಭೇಟಿ ಮಾಡುವ ಪ್ರಮಾಣ ಮಾಡುತ್ತಾರೆ
ಶವದ ಮರೆವಣಿಗೆ ಸದ್ದು ಕಿಟಕಿ ಹಾದು
ಅವ್ವನ ಕಿವಿಗೆ ತಟ್ಟಿದಾಗ
’ಯಾರೋ ಪುಣ್ಯಾತ್ಮರು ಹೋದರು’ ಎನ್ನುತ್ತಾಳೆ
ಬಾಲ್ಕನಿಯಲ್ಲಿ ನಿಂತು ನೋಡುವಾಗಲೆಲ್ಲಾ
ಮಸಣವೂ ನನ್ನ ಕಡೆಗೆ ಕನಿಕರದಿಂದ ನೋಡುತ್ತದೆ
ತಾನಷ್ಟೆ ದಿಟವೆನ್ನುವಂತೆ
ಆ ದಿಕ್ಕಿನಿಂದ ಬೀಸುವ ಗಾಳಿ
ಅಹಂಕಾರ ಹುಟ್ಟದಂತೆ ನೇವರಿಸುತ್ತದೆ.
ಇಷ್ಟರ ಮಟ್ಟಿಗೆ ನನ್ನನ್ನು ಮನುಷ್ಯನನ್ನಾಗಿರಿಸುತ್ತಿರುವ
ಈ ಮಸಣಕ್ಕೆ ಕೃತಜ್ಞತೆಗಳು






0 Comments