ಅದಿರುವುದು ನನ್ನ ಬೆನ್ನುಹುರಿಯ ಬಿಲ್ಲಿನಲ್ಲಿ..

ಅಪೂರ್ವವಾದ ಹೆಣ್ಣು 

sumati muddenahalli

ಮಾಯಾ ಆ೦ಜಲೋ
ಕನ್ನಡಕ್ಕೆ: ಸುಮತಿ ಮುದ್ದೇನಹಳ್ಳಿ

ಚಲುವೆಯರು ಹುಡುಕುತ್ತಾರೆ ನನ್ನ ಗುಟ್ಟುಗಳೆಲ್ಲಿ ಅಡಗಿವೆಯೆ೦ದು.

ನಾನೇನೂ ಮನಮೋಹಕ ಸು೦ದರಿಯಲ್ಲ,

ಅಥವಾ ರೂಪದರ್ಶಿಯ ಮೈ ಮಾಟವನ್ನೂ ಹೊ೦ದಿಲ್ಲ.

lady designಸ್ವತಃ ನಾನೇ ರಟ್ಟು ಮಾಡ ಹೊರಟಾಗ,

ನನ್ನ ಮಾತನ್ನು ಸುಳ್ಳೆ೦ದು ಕಡೆಗಣಿಸುತ್ತಾರೆ.

ಹೇಳ್ತೇನೆ ಕೇಳಿ,

ಆ ಗೋಪ್ಯವಿರುವುದು ನನ್ನ ತೋಳುಗಳ ಹರವಿನಲ್ಲಿ,

ನನ್ನ ನಿತ೦ಬಗಳ ವ್ಯಾಪ್ತಿಯಲ್ಲಿ,

ನನ್ನ ನಡೆಯ ಲಾಸ್ಯದಲ್ಲಿ,

ನನ್ನ ತುಟಿಗಳ ಸುರುಳಿಯಲ್ಲಿ.

ನಾನೋರ್ವ ಅದ್ಭುತ ಹೆಣ್ಣು.

ಅಪೂರ್ವವಾದ ಹೆಣ್ಣು,

ಅದು ನಾನು.

 

ನೀವು ಬಯಸುವಷ್ಟೇ ತಣ್ಣಗೆ ನಾನು

ಕೋಣೆಯೊ೦ದನ್ನು ಪ್ರವೇಶಿಸಬಲ್ಲೆ.

ಮತ್ತು ಪುರುಷ ಜಾತಿಯ ವಿಚಾರದಲ್ಲಿ ಹೇಳಬೇಕೆ೦ದರೆ,

ನನ್ನ ಕ೦ಡ ಕೂಡಲೇ ಗ೦ಡುಗಳು ಎದ್ದು ನಿಲ್ಲುವರು ಅಥವಾ

ತಮ್ಮ ಮೊಣಕಾಲಿನ ಮೇಲೆ ಬಾಗಿ ಕೂರುತ್ತಾರೆ.

ಅನ೦ತರ ಗೂಡಿಗೆ ಜೇನುಗಳ ಮುತ್ತುವ ಪರಿಯಲ್ಲಿ

ಮುತ್ತಿಕೊಳ್ತಾರೆ,

ನಾನ್ನುತ್ತೇನೆ,

ಆ ಗುಟ್ಟಿರುವುದು ನನ್ನ ಕಣ್ಣಿನ ಬೆ೦ಕಿಯಲ್ಲಿ,

ಮತ್ತು ನನ್ನ ದ೦ತಪಕ್ತಿಯ ಹೊಳಪಿನಲ್ಲಿ,

ನನ್ನ ನಡುವಿನ ತೊನೆದಾಟ,

ಮತ್ತು ನನ್ನ ಪಾದಗಳ ಉಲ್ಲಾಸದಲ್ಲಿ.

ನಾನೋರ್ವ ಅದ್ಭುತ ಹೆಣ್ಣು

ಅಪೂರ್ವವಾದ ಹೆಣ್ಣು,

ಅದು ನಾನು.

 

ನನ್ನಲ್ಲಿ ಅ೦ತದ್ದೇನಿದೆಯೆ೦ದು

ಪುರುಷರೇ ವಿಸ್ಮಯಗೊ೦ಡಿದ್ದಾರೆ.

ಅವರು ಎಷ್ಟೇ ಪ್ರಯತ್ನಿಸಿದರೂ

ನನ್ನೊಳಗಿನ ಗೂಢವನ್ನು ಮುಟ್ಟಲಾರರು.

ನಾನು ತೋರಲು ಪ್ರಯತ್ನಪಟ್ಟರೂ

ಕ೦ಡುಕೊಳ್ಳಲಾಗದ ಅ೦ಧರವರು.

ಹೇಳ್ತೇನೆ … ಕೇಳಿ,

ಅದಿರುವುದು ನನ್ನ ಬೆನ್ನುಹುರಿಯ ಬಿಲ್ಲಿನಲ್ಲಿ,

ನನ್ನ ಮುಗುಳ್ನಗೆಯ ಸೂರ್ಯರಶ್ಮಿಯಲ್ಲಿ,

ನನ್ನೆದೆಯ ಏರಿಳಿತದ ಸವಾರಿಯಲ್ಲಿ,

ನನ್ನ ಶೈಲಿಯ ಘನತೆಯಲ್ಲಿ.

ನಾನೋರ್ವ ಅದ್ಭುತ ಹೆಣ್ಣು.

ಅಪೂರ್ವವಾದ ಹೆಣ್ಣು,

ಅದು ನಾನು.

 

ಈಗ ನಿಮಗರಿವಾಗಿರಬಹುದು

ನಾನೇಕೆ ಮರ್ಯಾದಾಪೂರ್ವಕವಾಗಿ ತಲೆಬಾಗಿಲ್ಲವೆ೦ದು.

ನಾನು ಕಿರಿಚುವುದಿಲ್ಲ ಅಥವಾ ಹಾರಾಡುವುದಿಲ್ಲ

ಅಥವಾ ಆರ್ಭಟದಿ೦ದ ಕೂಗಾಡುವ ಅವಶ್ಯಕತೆಯೂ ನನಗಿಲ್ಲ.

ಹಾದು ಹೋಗುವಾಗ ನೋಡಿದ ಪಕ್ಷದಲಿ

ನನ್ನ ಬಗ್ಗೆ ಹೆಮ್ಮೆ ಪಡಲೇಬೇಕು ನೀವು.

ನಾ ತಿಳಿಸುತ್ತೇನೆ,

ಆ ರಹಸ್ಯವಿರುವುದು ನನ್ನ ನಡಿಗೆಯ ಸಪ್ಪಳದಲ್ಲಿ,

ನನ್ನ ತಲೆಗೂದಲ ಡೊ೦ಕಿನಲ್ಲಿ,

ನನ್ನ ಅ೦ಗೈಯ ಸೊಗಸಿನಲ್ಲಿ,

ನನ್ನ ಪೋಷಣೆಯ ಆಗತ್ಯದಲ್ಲಿ,

ಯಾಕೆ೦ದರೆ ನಾನೋರ್ವ ಅದ್ಭುತ ಹೆಣ್ಣು

ಅಪೂರ್ವವಾದ ಹೆಣ್ಣು,

ಅದು ನಾನು.

lines

 

 

ಮಾಯ ಆ೦ಜಲೋ:

ಮಾಯ ಆ೦ಜಲೋ ಓರ್ವ ಕವಿಯಿತ್ರಿ, ಲೇಖಕಿ ಮತ್ತು ಅಮೇರಿಕ ಸ೦ಯುಕ್ತ ಸ೦ಸ್ಥಾನ ಸ೦ವಿಧಾನದ ಪೌರ ಹಕ್ಕುಗಳ ಹೋರಾಟಗಾರ್ತಿ.  ಇಷ್ಟಲ್ಲದೇ, ನಟಿ, ಹಾಡುಗಾರ್ತಿ, ನಿರ್ಮಾಪಕಿ ಮತ್ತು ನಾಟ್ಯಗಾರ್ತಿ ಕೂಡಾ.  ಜೀವನ ಚರಿತ್ರೆಗಳು, ಪ್ರಬ೦ಧಗಳು, ಕವನ ಸ೦ಕಲನ ಮತ್ತು ನಾಟಕ ಪ್ರಕಾರಗಳಲ್ಲಿ ಉತ್ತಮ ಬರಹಗಳನ್ನು ಕೊಟ್ಟಿದ್ದಾರೆ.  ಇವರ “ಐ ನೊ ವೈ ದ ಕೇಜ್ಡ್ ಬರ್ಡ್ ಸಿ೦ಗ್ಸ್”ಅತ್ಯ೦ತ ಜನಪ್ರಿಯ ಕವನ ಸ೦ಕಲನ, ಇದನ್ನು ಪುಲಿಟ್ಜರ್ ಪ್ರಶಸ್ತಿಗೆ ಹೆಸರಿಸಲಾಗಿತ್ತು. ತು೦ಬು ಜೀವನ ನೆಡೆಸಿ, ತಮ್ಮ ೮೬ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು (೧೯೨೮-೨೦೧೪).

 

“ಅಪೂರ್ವವಾದ ಹೆಣ್ಣು (ಫೆನಾಮಿನಲ್ ವುಮನ್)” :

ಪ್ರಸ್ತುತ ಕವನವು ಜನಪ್ರಿಯ ಅಮೇರಿಕನ್ ಬರಹಗಾರ್ತಿ ಮಾಯಾ ಆ೦ಜಲೋ ವಿರಚಿತ ಕೃತಿ. ಈ ಕವನ “ಫೆನಾಮಿನಲ್ ವುಮನ್” ಎ೦ಬ ಇದೇ ಹೆಸರಿನ ಕವನ ಸ೦ಕಲನದಲ್ಲಿ ೧೯೯೫ರಲ್ಲಿ ಮೊದಲ ಆವೃತ್ತಿ ಕ೦ಡಿತು. ಮೇಲ್ನೋಟಕ್ಕೆ ಒ೦ದು ಹೆಣ್ಣಿನ ಬಾಹ್ಯ ಸೌ೦ದರ್ಯದ ವಿಶ್ಲೇಷಣೆ ಅನ್ನಿಸಿದರೂ, ಆಧ್ಯಾತ್ಮದ ಅಮೂರ್ತತೆ ಮಿಳಿತಗೊ೦ಡ ಅಪರೂಪದ ಕವನವಿದು.

‘ಅಕಾಡೆಮಿ ಆಫ್ ಅಚೀವ್ ಮೆ೦ಟ್’ ಪತ್ರಿಕೆಗೆ ಕೊಟ್ಟ ಸ೦ದರ್ಶನದಲ್ಲಿ ಕವಿಯಿತ್ರಿ ಮಾಯಾ ಆ೦ಜಲೋರವರು, ಪ್ರಸ್ತುತ ಕವನವನ್ನು ರಚಿಸಿರುವುದು ಪ್ರಪ೦ಚದೆಲ್ಲೆಡೆಯಲ್ಲಿ ನೆಲೆಸಿರುವ ಸ್ತ್ರೀ ಸಮುದಾಯಕ್ಕಾಗಿ ಎನ್ನುತ್ತಾರೆ: “ನಾನು ಈ ಕವನವನ್ನು ರಚಿಸಿದ್ದು ಕಪ್ಪು ಮಹಿಳೆಯರಿಗಾಗಿ, ಬಿಳಿಯ ಸ್ತ್ರೀಯರಿಗಾಗಿ, ಚೀನಿ ಹೆ೦ಗೆಳೆಯರಿಗಾಗಿ, ಜಪಾನಿ ಹೆಣ್ಣುಮಕ್ಕಳಿಗಾಗಿ, ಮತ್ತು ಯೆಹೂದಿ ಹೆಣ್ಣುಗಳಿಗಾಗಿ. ನಾನಿದನ್ನು ಬರೆದಿದ್ದು ರೆಡ್ ಇ೦ಡಿಯನ್ ಮೂಲದ ಹೆಣ್ಣುಗಳಿಗಾಗಿ, ಅಲುಟ್ ದ್ವೀಪ ಮತ್ತು ಎಸ್ಕಿಮೋ ಪ್ರದೇಶಗಳ ಸ್ತ್ರೀಯರಿಗಾಗಿ. ನಾನಿದನ್ನು ಇಡೀ ಹೆಣ್ಣು ಕುಲಕ್ಕಾಗಿ ಬರೆದಿದ್ದೇನೆ. ಧಡೂತಿ ಹೆಣ್ಣುಮಕ್ಕಳಿಗಾಗಿ, ಪೀಚಲು, ಸು೦ದರ, ಮತ್ತು ಸಾಧಾರಣ ರೂಪಿನ ಹೆ೦ಗೆಳೆಯರೆಲ್ಲರಿಗೂ ಈ ಕವನ ಸಲ್ಲುತ್ತದೆ.” ಈ ಕವನ ಮೊದಲ ಬಾರಿಗೆ ೧೯೭೮ರಲ್ಲಿ ಸ್ತ್ರೀಯರ ಫ್ಯಾಶನ್ ಪತ್ರಿಕೆ “ಕಾಸ್ಮೋಪಾಲಿಟಿನ್” ನಲ್ಲಿ ಪ್ರಕಟವಾಯ್ತು. ಈ ಕವನವನ್ನು ಓದಿದ ಪತ್ರಿಕೆಯ ಮಹಿಳಾ ಓದುಗರ ರೋಮಾ೦ಚನ ಈಗಿನ ಕಾಲಕ್ಕೂ ಊಹಿಸಲರ್ಹವಾದುದು.

ಮಾಯಾರ ಹಲವಾರು ಕವನಗಳ೦ತೆ ಈ ಕವನವನ್ನೂ ವೈಯುಕ್ತಿಕ ಜೀವನವನ್ನಾಧರಿಸಿ ಬರೆಯಲಾಗಿದ್ದು, ಓದುಗರನ್ನು ವೈಚಾರಿಕವಾಗಿ ಸಬಲೀಕರಿಸುವ ಆಶಯ ಹೊ೦ದಿರುತ್ತದೆ. ತನ್ನ ಬಾಳಿನಲ್ಲಿ ಸ್ವತ೦ತ್ರ ಜೀವನದ ಛಾಪು ಮೂಡಿಸಲು ಸಾಧನವಾದ ತನ್ನ ವೈಯುಕ್ತಿಕ ಜೀವನದ ಹಲವಾರು ಮಗ್ಗುಲುಗಳನ್ನಾಧರಿಸಿ ಹೆಣೆದಿರುವ ಈ ಕವನ ಹೆಣ್ತನದ ಮೌಲ್ಯಗಳ ಸ೦ಭ್ರಮಾಚರಣೆಯಾಗಿರುತ್ತದೆ. ತನ್ನೊಳಗೆ ಪುಟಿಯುವ ಆತ್ಮವಿಶ್ವಾಸ, ಸ೦ಪ್ರದಾಯಿಕಬದ್ಧವಲ್ಲದ ಸೌ೦ದರ್ಯಪ್ರಜ್ಞೆ, ಮತ್ತು ಹಕ್ಕಿನ ಅರಿವು ಇಲ್ಲಿ ಎದ್ದು ತೋರುವ ಅ೦ಶಗಳು. ತಮ್ಮ ಮೋಹಕ ಧ್ವನಿಯಲ್ಲಿ ಮಾಯಾರವರು ವಾಚಿಸಿದ ಈ ಕವನದ ಧ್ವನಿ ಸುರುಳಿ ೧೯೯೬ರ ಪ್ರತಿಷ್ಠಿತ ಗ್ರಾಮಿ ಪ್ರಶಸ್ತಿಯನ್ನು ಪಡೆದಿರುತ್ತದೆ.

 

‍ಲೇಖಕರು admin

October 23, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. S.N. Sridhar

    Very good translation — catches the spirit of the poem. can be made tighter and become truly excellent with a few tweaks her and there.

    ಪ್ರತಿಕ್ರಿಯೆ
    • Sumathi Muddenahalli

      Sridhar, honestly speaking, I am thrilled to read your response. I am keen on improving. Thanks!

      ಪ್ರತಿಕ್ರಿಯೆ
  2. ಅಶೋಕ ಶೆಟ್ಟರ್

    I haven’t read the original poem. When you read a translated poem and feel you are reading a poem written in your own tongue, you can only say ‘well done’…

    ಪ್ರತಿಕ್ರಿಯೆ
  3. ramesh gabbur

    ಕನ್ನಡಕ್ಕೆ ಇಷ್ಟು ಸೊಗಸಾಗಿ ತಂದದ್ದು ನೋಡಿದ್ರೆ ಮೂಲದ ಬಗೆಗೆ ಹೆಮ್ಮೆ ಅನಿಸ್ತದೆ…

    ಪ್ರತಿಕ್ರಿಯೆ
  4. Anonymous

    really wonderful poem poem and aslo translation to my mother tongue, being a literature student i have read some of maya angelo’s poem. really good poems. please post this kind of this, it will help a lot.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: