ಕುಂ ವೀ ವಿಷಾದ: ನನ್ನ ತಪ್ಪನ್ನು ಹೊಟ್ಟೆಯಲ್ಲಿ ಹಾಕಿಕೊಳ್ಳಿರಿ

ವಿಷಾದ ವ್ಯಕ್ತಪಡಿಸಿ ಪತ್ರ
15-kumveerabhadrappa

ಕುಂ ವೀರಭದ್ರಪ್ಪ 

ಮೊನ್ನೆ! ಇದೇ ತಿಂಗಳು ಹತ್ತೊಂಭತ್ತರಂದು ಒಂದು ಅಚಾತುರ್ಯ ಸಂಭವಿಸಿತು. ಅದರ ಹಿಂದಿನ ದಿವಸ ಸವದತ್ತಿ ಸಮೀಪದ ಮುನೊಳ್ಳಿ ಗ್ರಾಮದಲ್ಲಿ ನಾಡಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿದೆ. ಆ ಐವತ್ತು ನಿಮಿಷಗಳ ಮಾತಿನವಧಿಯಲ್ಲಿ ನನ್ನ ಬಾಯಿಯಿಂದ ಒಂದೇ ಒಂದು ಅಹಿತಕರ ಮಾತು ಹೊರ ಜಾರಲಿಲ್ಲ. ಆದರೆ ಜಾರಿದ್ದು ಮಾರನೆಯ ದಿವಸ ಕಮಲಾಪುರದಲ್ಲಿ! ಅದೂ ಡಾ ವೀರೇಶ ಬಡಿಗೇರ್ ಅವರ ಕೃತಿಯನ್ನು ಬಿಡುಗಡೆ ಮಾಡಿ ಮಾತಾಡುವ ಸಂದರ್ಭದಲ್ಲಿ.

ದಾದ್ರಿ ಘಟನೆ ಇನ್ನೂ ಹಸಿಹಸಿ ಇರುವಾಗಲೇ ಇದೇ ದೇಶದ ಫರಿದಾಬಾದಿನಲ್ಲಿ ದಲಿತ ಶಿಶುಗಳ ದಹನ, ಅದೂ ಸವರ್ಣೀಯರಿಂದ. ಇಂಥ ದುರ್ಘಟನೆಗಳು ಅವ್ಯಾಹತವಾಗಿ ಸಂಭವಿಸುತ್ತಿದ್ದರೂ ಈ ದೇಶದ ಒಂದು ವರ್ಗದ ಲೇಖಕರು ವಿದ್ವಾಂಸರು ಮೌನವಹಿಸಿರುವುದು ನನಗೆ ಬೇಸರ ತಂದಿತು, ಪ್ರಜ್ಞಾಪೂರ್ವಕವಾಗಿಯೋ, ಅಪ್ರಜ್ಞಾಪೂರ್ವಕವಾಗಿಯೋ ಘೋರ ಮೌಖಿಕ ಅಪರಾಧ ನನ್ನಿಂದ ಸಂಭವಿಸಿತು. ಏನೋ ಹೇಳಲಿದ್ದವನು ಇದ್ದಕ್ಕಿದ್ದಂತೆಯೇ ‘ನಿರುಪದ್ರವಿ ಲೇಖಕರು ಎಲ್ಲರೊಂದಿಗೆ ಹೊಂದಿಕೊಳ್ಳುವ ದೇವದಾಸಿಯರಿದ್ದಂತೆ’ ಎಂದು ತುಟಿ ಜಾರಿ ಹೇಳಿಬಿಟ್ಟೆ. ತಪ್ಪಿತಸ್ಥ ಭಾವನೆ ಒಡನೆಯೇ ಕಾಡಲಾರಂಭಿಸಿತು. ಅದನ್ನು ಸರಿಪಡಿಸಿಕೊಳ್ಳುವ ಬಗೆ ಕುರಿತು ಯೋಚಿಸುವಷ್ಟರಲ್ಲಿ ಕಾರ್ಯಕ್ರಮ ಮುಗಿದಿತ್ತು. ನನ್ನದೊಂದಿಗಿದ್ದ ಗೆಳೆಯ ಸಹ ನನ್ನನ್ನು ಎಚ್ಚರಿಸಲಿಲ್ಲ.

ಮಾರನೆ ದಿವಸ ದಿನಪತ್ರಿಕೆ ‘ನಿರುಪದ್ರkendra sahitya logoವಿ ಲೇಖಕರು ದೇವದಾಸಿಯರಿದ್ದಂತೆ’ ಎಂಬ ಶೀರ್ಷಿಕೆಯಡಿಯಲ್ಲಿ ಸುದ್ದಿಯನ್ನು ಪ್ರಕಟಿಸಿತು. ಈ ತುಟಿ ಜಾರಿದ ಮಾತನ್ನು ಸರಿಪಡಿಸಿಕೊಳ್ಳುವುದು ಹೇಗೆ ಎಂದು ಯೋಚಿಸುತ್ತಿರುವಾಗ ಎಂಕಮ್ಮ ಹೆಸರಿನ ಅಪರಿಚಿತ ಮಹಿಳೆ ನನ್ನನ್ನು ದೂರವಾಣಿ ಮೂಲಕ ಸಂಪರ್ಕಿಸಿದರು. ನಿಮ್ಮ ಮಾತಿನಿಂದ ದೇವದಾಸಿಯರಿಗೆ ಅವಮಾನವಾಗಿರುವುದೆಂದು ಹೇಳಿದರು. ನನ್ನ ಸಮಜಾಯಿಷಿ ಅವರಿಗೆ ತೃಪ್ತಿ ತರಲಿಲ್ಲ.

ಮಾರನೆ ದಿವಸ ಇನ್ನೊಂದು ದಿನಪತ್ರಿಕೆ ಮಹಿಳಾ ಆಯೋಗ ನನಗೆ ನೀಡಿರುವ ಎಚ್ಚರಿಕೆಯ ಸುದ್ದಿಯನ್ನು ಪ್ರಕಟಿಸಿತು. ನನ್ನ ಸ್ಪಷ್ಟೀಕರಣ, ವಿಷಾದ ಎಲ್ಲಾ ಪತ್ರಿಕೆಗಳಿಗೆ ಕಳಿಸಿದೆ, ಆದರೆ ಅದು ಪ್ರಕಟಗೊಂಡಿದ್ದು ಕೇವಲ ಒಂದೇ ಒಂದು ದಿನ ಪತ್ರಿಕೆಯಲ್ಲಿ ಮಾತ್ರ. ಆದರೆ ನನ್ನ ವಿಷಾದ ರಾಜ್ಯದ ಸುದ್ದಿಯಾಗಲಿಲ್ಲ. ಆದರೆ ಈ ದಿವಸ ಪರಮಾಪ್ತರೂ, ಶ್ರೇಯೋಭಿಲಾಷಿಗಳೂ ಆದ ಪ್ರೊ ಸಿ ಎನ್ ರಾಮಚಂದ್ರನ್ ನೀವು ಹೀಗೆ ಹೇಳಬಾರದಿತ್ತೆಂದೂ, ರಾಜ್ಯ ಬಹುಸಂಖ್ಯಾತ ಲೇಖಕರ ಮನಸ್ಸಿಗೆ ನೋವಾಗಿರುವುದಾಗಿ ಹೇಳಿದರು. ಅಲ್ಲದೆ ನನ್ನ ತಿಳವಳಿಕೆಯನ್ನು ತಿದ್ದಿದರು. ಈ ಕಾರಣಕ್ಕಾಗಿ ಈ ಮೂಲಕ ನನ್ನ ಸ್ಪಷ್ಟೀಕರಣ ಹಾಗೂ ವಿಷಾದ ವ್ಯಕ್ತಪಡಿಸುತ್ತಿರುವೆ.

ನಾಡಿನ ಸಮಸ್ತ ಲೇಖಕರು ಹಾಗೂ ದೇವದಾಸಿಯರ ಬಗ್ಗೆ ಅಗಣಿತ ಗೌರವವಿದೆ. ಅವತ್ತಿನ ಸಂದರ್ಭದಲ್ಲಿ ನಾನು ದುರುದ್ದೇಶಪೂರ್ವಕವಾಗಿ ಆಡಿದ ಮಾತುಗಳಲ್ಲವೇ ಅಲ್ಲ, ಅವು ಅಕಸ್ಮಿಕವಾಗಿ ತುಟಿ ಜಾರಿದ ಮಾತುಗಳು. ಇದೊಂದು ಸಲ ನಾಡಿನ ಸಮಸ್ತ ಹಿರಿಕಿರಿಯ ಲೇಖಕರು ಹಾಗೂ ಸಹೋದರಿ ಸಮಾನರಾದ ದೇವದಾಸಿಯರು ನನ್ನ ಮೌಖಿಕ ತಪ್ಪನ್ನು ಹೊಟ್ಟೆಯಲ್ಲಿ ಹಾಕಿಕೊಳ್ಳಿರಿ. ಇನ್ನೊಮ್ಮೆ ಇಂಥ ಅಹಿತಕರ ಮಾತುಗಳು ನನ್ನ ತುಟಿ ಜಾರದಂತೆ ಎಚ್ಚರ ವಹಿಸುವೆ. ಅಲ್ಲದೆ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಭಾಗವಹಿಸುವುದನ್ನೂ ಕಡಿಮೆ ಮಾಡುವೆ.

‍ಲೇಖಕರು admin

October 23, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

12 ಪ್ರತಿಕ್ರಿಯೆಗಳು

  1. KVTirumalesh

    ಪ್ರಿಯ ಕುಂವೀ,
    ನೀವು `ನಿರುಪದ್ರವಿ’ ಲೇಖಕರು ದೇವದಾಸಿಯರಂತೆ ಎಂಬುದಾಗಿ ಹೇಳಿದ ಮಾತು ನನ್ನನ್ನೂ ಆಘಾತಗೊಳಿಸಿತ್ತು: ಕತ್ತಿಯ ಎರಡೂ ಅಲಗುಗಳಿಂದ ನೀವು ಹೊಡೆದಿದ್ದಿರಿ–`ನಿರುಪದ್ರವಿ’ ಲೇಖಕರಿಗೂ ಬಡ ದೇವದಾಸಿಯರಿಗೂ! ಮಾಡಿದವನ ಪಾಪ ಹೇಳಿದವನ ಬಾಯಲ್ಲಿ ಅಂತ ಸುಮ್ಮನಿದ್ದೆ. ಯಾಕೆಂದರೆ ಇದು ಜಗಳಗಂಟಿಗಳ ಕಾಲ. ಻ಅಲ್ಲದೆ ನೀವು ನನ್ನಂಥವರನ್ನೇ ಬಯ್ದಿದ್ದೀರಿ ಅನಿಸಿತು. ನೀಮಗೀಗ ನಿಮ್ಮ ಬೀಸುಮಾತಿನ ತಪ್ಪು ಅರಿವಾಗಿ ಕ್ಷಮೆ ಕೇಳಿದ್ದೀರಿ. ಇದು ದೊಡ್ಡ ಗುಣ. ಯಾಕೆಂದರೆ ತಪ್ಪು ಎಲ್ಲರೂ ಮಾಡುತ್ತಾರೆ, ಆದರೆ ತಪ್ಪಾಯಿತು, ಕ್ಷಮಿಸಿ ಎನ್ನುವವರು ಕಡಿಮೆ. ಕ್ಷಮಿಸುವವರು ಇನ್ನೂ ಕಡಿಮೆ! ನೀವು ವಿನಮ್ರರಾಗುವ ಮೂಲಕ ದೊಡ್ಡತನ ಮೆರೆದಿದ್ದೀರಿ! ವಿನಮ್ರನಾಗದೆ ಯಾರೂ ದೊಡ್ಡವರಾಗುವುದು ಸಾಧ್ಯವಿಲ್ಲ. (ದೊಡ್ಡತನ ಎಂಬ ಪದ ಬೇಡವಾದರೆ, ಬದಲಾಯಿಸುವ ಗುಣ ಎಂದಿಟ್ಟುಕೊಳ್ಳಿ.)
    ದೇವದಾಸಿಯರ ಸ್ಥಿತಿಗೆ ಏನೇನೋ ಸಾಮಾಜಿಕ ಮತ್ತು ಆರ್ಥಿಕ ಕಾರಣಗಳಿರುವುದು ನಮಗೆಲ್ಲರಿಗೂ ಗೊತ್ತು. ಇನ್ನು ಈ `ನಿರುಪದ್ರವಿ’ ಲೇಖಕರ ಬಗ್ಗೆ: ಎಲ್ಲರಿಗೂ ಸಮಾನ ಅವಕಾಶಗಳು ಸಿಗುವುದಿಲ್ಲ—ಯಾವ ಯಾವುದೋ ಕಾರಣಕ್ಕೆ. ನಾನೂ ಸೇರಿದಂತೆ ಹಲವರು ತಮ್ಮಷ್ಟಕ್ಕೇ ಏನೇನೋ ಬರೆದುಕೊಂಡು ಇರುತ್ತಾರೆ. ಅವರೂ ನಮ್ಮ ಸೋದರ ಸೋದರಿಯರೇ. `ಪಲವುಂ ಪಳ್ಳ ಸಮುದ್ರವೈ’ ಎಂದು ನೀವು ಕೇಳಿಲ್ಲವೇ? ಎಲ್ಲರನ್ನೂ ಗೌರವಿಸೋಣ. ನೀವು `ಉಪದ್ರವಿ’ ಲೇಖಕರಾದ್ದರಿಂದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನಿಮಗೆ ಸಿಕ್ಕಿತು ಎಂಬ ಭಾವನೆ ನಿಮ್ಮ ಮನಸ್ಸಿನಲ್ಲಿ ಇದೆಯೆಂದು ತೋರುತ್ತದೆ; ಅದೇ ರೀತಿ ಪ್ರಶಸ್ತಿರಹಿತರು ನಿರುಪದ್ರವಿಗಳು ಎಂದು ನೀವು ಭಾವಿಸಿರಲೂ ಬಹುದು. ಒಂದೆಡೆ ನೀವು `ಉಪದ್ರವಿ’ ಲೇಖಕರು—ಅಕಾಡೆಮಿ ಪ್ರಶಸ್ತಿ ಸಿಕ್ಕಿದವರೆಲ್ಲ ಉಪದ್ರವಿ ಲೇಖಕರಾದರೆ ಅಂಥವರ ಸಂಖ್ಯೆ ಬಹಳಷ್ಟು ಇದೆ! ಇನ್ನೊಂದೆಡೆ ಉಪದ್ರವಿ ಲೇಖಕರಾದ್ದಕ್ಕೇ ನಿಮ್ಮನ್ನು ಸಾಹಿತ್ಯ ಅಕಾಡೆಮಿ ಗೌರವಿಸಿದೆ ಎಂದೂ ಅರ್ಥವಾಗುತ್ತದೆ. ಆದರೆ ಅಕಾಡೆಮಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡುತ್ತಿಲ್ಲ, ಬದಲು ಹತ್ತಿಕ್ಕುತ್ತಿದೆ ಎನ್ನುತ್ತೀರಿ. ಮೊದಲನೆಯದಾಗಿ, ನಿಮ್ಮನ್ನು ಎಕಾಡೆಮಿ ಗೌರವಿಸಿದ್ದು ಯಾಕೆ? ಇದೊಂದು ವಿರೋಧಾಭಾಸವೇ ಸರಿ.
    ಈ ನಿರುಪದ್ರವಿ ಸಾಹಿತಿಗಳಿಗೆ ಯಾವ ರಾಷ್ಟ್ರೀಯ ಗೌರವವೂ ಸಿಗುವುದಿಲ್ಲ. ಅವರಿಗೆ ನಿಮ್ಮಂಥವರನ್ನು ಕಂಡರೆ ಸ್ವಲ್ಪ ಅಸೂಯೆಯೂ ಇರಬಹುದು—ಇದ್ದರೆ ಅದು ಸ್ವಾಭಾವಿಕವೇ. ಅಲ್ಲದೆ, ನಿಮಗೆ ಪ್ರಶಸ್ತಿ ಬಂದಾಗ ನಿಮಗೆ ಸರಿದೊರೆಯಾದ ಬೇರೆ ಸಾಹಿತಿಗಳು ಯಾರೂ ಇರಲಿಲ್ಲ ಎಂದು ಹೇಳುವುದಕ್ಕೆ ಸಾಧ್ಯವೇ? ಆಯ್ಕೆಯಲ್ಲಿ ಒಬ್ಬರು ಗೆಲ್ಲುತ್ತಾರೆ, ಬೇರೆಯವರು ಸೋಲುತ್ತಾರೆ; ಸೋತವರನ್ನು ಕೆಟ್ಟ ಹೆಸರು ಹಾಕಿ ಹಂಗಿಸುವುದು ಸಂಸ್ಕೃತಿಯಲ್ಲ. ಆದರೆ ಅಂಥದೊಂದು ಸಂಸ್ಕೃತಿ ಇಂದು ಇದೆ! (ಉಪದ್ರವಿ ಸಾಹಿತಿಗಳಲ್ಲಿ ಹಲವರೀಗ ಕೇವಲ ಉಪದ್ರವಿಗಳಾಗಿ ಉಳಿದಿದ್ದಾರೆ ಎನ್ನುವುದೂ ಸತ್ಯ.)
    ಎಲ್ಲಾ ಕಡೆ ಕಾಣಿಸುವ ಇನ್ನೊಂದು ರೀತಿಯ ಸ್ವಾತಂತ್ರ್ಯಹರಣ ಬಹುಶಃ ನಿಮಗೆ ಗೋಚರಿಸದು: ಅದು ಐಡಿಯಲಾಜಿಕಲ್ ಒತ್ತಡ. ಇಂಥಿಂಥಾ ರೀತಿಯ ಐಡಿಯಾಲಜಿಗೆ ಬದ್ಧರಾಗಿ ಬರೆದರೇ ಸ್ವೀಕೃತರಾಗುವುದು ಎಂಬ ಭಯದ ವಾತಾವರಣ. ಇದನ್ನು ಎದುರಿಸುವುದು ಹೇಗೆ? ಯಾಕೆಂದರೆ ಇದು ಸಾಂಸ್ಥಿಕವಲ್ಲ; ಇದಕ್ಕೆ ವಿಳಾಸವಿಲ್ಲ, ಫೋನ್ ನಂಬರವಿಲ್ಲ. ಆದರೂ ಇದೆ! ಆದರೂ ನಾವಿದನ್ನೆಲ್ಲ ಎದುರಿಸುತ್ತ ಬಂದಿದ್ದೇವೆ: ಯಾಕೆಂದರೆ ಲೇಖಕರಿಗೆ ಗೊತ್ತಿದೆ, ಅಭಿವ್ಯಕ್ತಿ ಸ್ವಾತಂತ್ರ್ಯವೆನ್ನುವುದು ಯಾರೋ ಇನ್ನೊಬ್ಬರು ಕೊಟ್ಟು ಬರುವುದಲ್ಲ. ಅದು ಅವರವರು ಅಸರ್ಟ್ ಮಾಡುವುದು. ಯಾವ ಪ್ರಶಸ್ತಿಗೂ ಭಾಜನರಾಗದ, ಅದರ ಗೊಡವೆಗೇ ಹೋಗದ `ನಿರುಪದ್ರವಿ’ ಲೇಖಕರಲ್ಲಿ ಇಂಥ ಧೈರ್ಯವಂತರನ್ನು ನೀವು ಕಾಣಬಹುದು. ಬೊಬ್ಬೆ ಹಾಕಿದವನೇ ಪೊಲಿಟಿಕಲ್ ಅಲ್ಲ; ಮಾತನ್ನು ಸರಿಯಾಗಿ, ಸತ್ಯವಾಗಿ ಉಪಯೋಗಿಸುವ ಎಲ್ಲರೂ ಪೊಲಿಟಿಕಲ್.
    ಕುಂವೀ, ನಾನು ಓದಿದ ನಿಮ್ಮ ಕೆಲವು ಕತೆಕಾದಂಬರಿಗಳಲ್ಲಿ ಕಂಡುಬರುವ ಸಹನೆ, ತನ್ಮಯತೆ, ಸರ್ವವೀಕ್ಷಣತೆ, ಉದಾರತೆ ನಿಮ್ಮ ಸಾರ್ವಜನಿಕ ಮಾತುಗಳಲ್ಲಿ ಕಂಡುಬರುವುದಿಲ್ಲ. ನಮಗೆ ಒಳ್ಳೆಯ ವಿಚಾರಗಳು ಬೇಕೇ ವಿನಾ ಜರೆತ, ನಿಂದನೆ, ಅವಹೇಳನ, ಜಗಳಗಳಲ್ಲ. ಇನ್ನು ಜಗಳ ಬಿಡಿಸಲು ಬಂದವನೇ ಜಗಳಗಂಟಿಯಾದರೆ ಹೇಗೆ?! ಲೇಖಕರು ಮಾತನ್ನು `ಮುತ್ತಿನ ಹಾರ’ದಂತೆ ಬಳಸಬೇಕೇ ವಿನಾ ಖಡ್ಗದಂತೆಯೋ ಸೀಸದ ಗುಂಡಿನಂತೆಯೋ ಅಲ್ಲ. ಅಂಥ ರೂಪಕಗಳೇ ತಪ್ಪು ಸಂದೇಶವನ್ನು ನೀಡುತ್ತವೆ. ಯಾಕೆಂದರೆ ಮಾತನ್ನು ಕಡಿಯಲು, ಕೊಲ್ಲಲು ಬಳಸಿದರೆ, ಕಲ್ಬುರ್ಗಿ ಹಂತಕರಿಗೂ ಈ ಕಟುಕ ಲೇಖಕರಿಗೂ ಏನು ವ್ಯತ್ಯಾಸ? ಅನಂತಮೂರ್ತಿಯವರು, ಮೋದಿಯವರು ಪ್ರಧಾನಿಯಾದರೆ ತಾವು ದೇಶ ಬಿಟ್ಟು ಹೋಗುತ್ತೇನೆ ಎಂದು ಹೇಳಿದಾಗ ನಾನು ಅನಂತಮೂರ್ತಿಯವರಿಗೊಂದು ಪತ್ರ ಬರೆದಿದ್ದೆ: ರೆಟರಿಕ್ನ ಮಟ್ಟ ಎತ್ತರಿಸಬೇಡಿ ಎಂಬುದಾಗಿ, ಯಾಕೆಂದರೆ ಎದುರಾಳಿ ಮತ್ತೆ ಅದಕ್ಕಿಂತಲೂ ದೊಡ್ಡದಾಗಿ ಇನ್ನೊಂದು ರೂಪಕ ಬಳಸುತ್ತಾನೆ. ಇದು ಕೊನೆಗೊಳ್ಳುವುದೆಲ್ಲಿ? ಇದು ಜಗಳವಲ್ಲವೇ? ನೀವು ಯಾರನ್ನಾದರೂ ಬದಲಿಸಬೇಕೆಂದಿದ್ದರೆ ಅವರ ಜತೆ ಮಾತಾಡಬೇಕು—ಮಾತನ್ನೇ ಕಳಕೊಂಡರೆ ಹೇಗೆ? ಲೇಖಕರು ಲೋಕದ ಅಮಾನಿತ ಸಂಸದರೆಂದು ಶೆಲ್ಲಿ ಕರೆದುದುರಲ್ಲಿ ಸತ್ಯವಿದೆ: ಸಂಸದರು ಎಲ್ಲರ ಹಿತವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಸಂವಾದ ನಡೆಸುವವರು ಮತ್ತು ಕಾನೂನು ತರುವವರು. ಇಲ್ಲಿ `ಎಲ್ಲರ ಹಿತ’ ಎನ್ನುವುದು ಅತಿ ಮುಖ್ಯ. ಅಭಿವ್ಯಕ್ತಿ ಸ್ವಾತಂತ್ರ್ಯವೂ ಹಾಗೇ: ಅದು ಎಲ್ಲರದೂ—ನಮ್ಮ ಎದುರಾಳಿಗಳದೂ ಕೂಡ.

    –ಕೆ.ವಿ.ತಿರುಮಲೇಶ್

    ಪ್ರತಿಕ್ರಿಯೆ
    • KVTirumalesh

      ಕುಂವೀ
      ನಿಮಗೆ ಗೊತ್ಫಿರುವಂತೆ ಕನ್ನಡದ ಲೇಖಕರಲ್ಲಿ ಹೆಚ್ಚಿನವರೂ ನಿಮ್ಮ ಆಶಯಕ್ಕೆ ಸಮ್ಮತರು. ಹಾಗೂ ನಮ್ಮ ಜನರ ಹೆಚ್ಚಿನ ಬರವಣಿಗೆಯೂ ನಾವೆಲ್ಲರೂ ಬಯಸುವ ಮೌಲ್ಯಗಳನ್ನು ಪ್ರತಿಪಾದಿಸುವಂಥದು. ಇದರಲ್ಲಿ ಎರಡು ಮಾತಿಲ್ಲ. ಅವರೆ ದನಿ ಅವರ ಬರವಣಿಗೆಯೇ–ಅವರಿಗೆ ಇನ್ನೊಂದು ದನಿಯಿಲ್ಲ. ಮರಳಿಸಲು ಪ್ರಶಸ್ತಿಗಳೂ ಇಲ್ಲ! ಅಷ್ಟಕ್ಕೆ ಅವರು ನಿಷ್ಪ್ರಯೋಜಕರು ಎಂದಲ್ಲ. ಇಷ್ಟು ಹೇಳಬೇಕೆನಿಸಿತು–ನಿಮ್ಮ ಜತೆ ಮಾತಾಡುವ ನೆಪದಲ್ಲಿ. ನೀವು ನನ್ನ ಮಾತುಗಳನ್ನು ಸರಿಯಾಗಿ ತೆಗೆದುಕೊಂಡುದರಿಂದ ನನಗೆ ಗೊತ್ತಿರುವ ಕುಂವೀ ಮತ್ತೆ ದೊರಕಿದಂತಾಗಿದೆ!
      ಕೆ.ವಿ. ತಿರುಮಲೇಶ್

      ಪ್ರತಿಕ್ರಿಯೆ
  2. kumbar Veerabhadrappa

    ಪ್ರೀತಿಯ ಲೇಖಕರಾದ ತಿರುಮಲೇಶ್
    ನನ್ನ ಅಹಂಕಾರಯುತ ಮಾತುಗಳಿಂದಾಗಿ ನೀವು ಇಷ್ಟು ಬೆಲೆಬಾಳುವ ಮಾತುಗಳನ್ನು ಹೇಳುವುದು ಸಾಧ್ಯವಾಯಿತು. ಧನ್ಯವಾದಗಳು
    ಕುಂವೀ

    ಪ್ರತಿಕ್ರಿಯೆ
  3. S.N. Sridhar

    I admire Kum Veeś sincerity and honesty. Such slips of the tongue can happen to any speaker. We must accept his explanation and apology at face value and move on.

    ಪ್ರತಿಕ್ರಿಯೆ
  4. Pradeep

    ‘ತೇಲಲರಿಯರು ಮುಳುಗಲರಿಯರು’ ಕಥೆಯ ಎರಡನೇ ಭಾಗ ಸಿಗುತ್ತಿಲ್ಲ. ದಯವಿಟ್ಟು ಆ ಲಿಂಕ್ ತಿಳಿಸಿ.

    ಪ್ರತಿಕ್ರಿಯೆ
  5. ಅಶೋಕ ಶೆಟ್ಟರ್

    ಹೋಗಲಿ ಬಿಡಿ, ಇದು ತೂಕ ಮಾಡಿ ಮಾತನಾಡಬೇಕಾದ ಕಾಲ. “ನಿರುಪದ್ರವಿ ಲೇಖಕರು ಬೇಲಿಯ ಮೇಲಿನ ನೀಲಿ ಹೂಗಳಂತೆ, ಅತ್ತಲೂ ಇಲ್ಲ, ಇತ್ತಲೂ ಇಲ್ಲ, ಪ್ರಸಂಗ ಬಂದರೆ ಅಲ್ಲೂ ಸೈ, ಇಲ್ಲೂ ಸೈ..”ಥರ ಏನಾದರೂ ಹೇಳುವದು ಬಿಟ್ಟು ಇನ್ನೇನೋ ಹೇಳಿದಿರಿ.
    “To err is human; to forgive, divine..” ಎಂಬುದನ್ನು ಬಲ್ಲವರು ನಿಮ್ಮ ವ್ಯಥೆಯನ್ನು ಅರ್ಥ ಮಾಡಿಕೊಳ್ಳುತ್ತಾರೆ.

    ಪ್ರತಿಕ್ರಿಯೆ
  6. s.b.jogur

    Prastuta sandarbhadalli mounakkintaloo uttama uttara innondiralaaradu. Kum vee yavarlli aatmasaakshi iruva bagge gouravavide.adu sattiddaroo iruvante badukuvavara bagge marukavide.

    ಪ್ರತಿಕ್ರಿಯೆ
  7. ಗೋನವಾರ್ ಕಿಶನ್ ರಾವ್

    ತಿರುಮಲೇಶ ಸರ್ ಹೇಳಿದ ಮಾತುಗಳಿಗೆ ನನ್ನ ಪೂರ್ಣ ಸಮ್ಮತಿ ಇದೆ.ಅವರೇ ದನಿ-ಅವರ ಬರವಣಿಗೆ ಎನ್ನುವ ಸಾಲು ನಾನು ಹೇಳಬೇಕಾದ ಎಲ್ಲವನ್ನೂ ಹೇಳಿಬಿಟ್ಟಿತು.ಕುಂವೀ.ಸರ್ ನಾನು ಯಾವಾಗಲೂ ಗೌರವಿಸುವ ಲೇಖಕ ಸ್ನೇಹಿತರು ನೀವು,ನಮ್ಮಸ್ನೇಹ ಇನ್ನೂ ಗಟ್ಟಿ ಆಯಿತು.

    ಪ್ರತಿಕ್ರಿಯೆ
  8. C. N. Ramachandran

    ಪ್ರಿಯ ಕುಂವೀ ಅವರಿಗೆ: ನಿಮ್ಮ ಪತ್ರ ಹೃದಯಸ್ಪರ್ಶಿಯಾಗಿದೆ. ಒಂದು ಸಂದರ್ಭದಲ್ಲಿ ಅಪ್ರಜ್ಞಾಪೂರ್ವಕವಾಗಿ ಆದ ತಪ್ಪನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳುವುದಕ್ಕೆ ಅಗಾಧ ನೈತಿಕ ಸ್ಥೈರ್ಯ ಬೇಕು; ಅದು ನಿಮ್ಮಲ್ಲಿದೆ ಎಂದು ತೋರಿಸಿದ್ದೀರಿ; ಈಗ ನಿಮ್ಮ ಬಗ್ಗೆ ನನಗಿದ್ದ ಅಭಿಮಾನ ಇಮ್ಮಡಿಯಾಯಿತು.
    ಹಾಗೆಯೇ ನನ್ನನ್ನು ಉಲ್ಲೇಖಿಸಿರುವುದರಿಂದ ಈ ಮಾತು: ನಾನು ಯಾವಾಗಲಾದರೂ ಮಾತಿನಲ್ಲಿ ಅಥವಾ ಅಕ್ಷರೂಪದಲ್ಲಿ ಎಡವಿದಾಗ ನಿರ್ದಾಕ್ಷಿಣ್ಯವಾಗಿ ಎಚ್ಚರಿಸುವುದು ನಿಮ್ಮ ಜವಾಬ್ದಾರಿ.
    ವಂದನೆಗಳೊಂದಿಗೆ,
    ಸಿ. ಎನ್. ರಾಮಚಂದ್ರನ್

    ಪ್ರತಿಕ್ರಿಯೆ
  9. umesh desai

    To ERR IS HUMAN FORGIVING IS DIVINE..ok agreed unfortunately politicians over the years have always maintained Twist of Tongue Unfortunately The Bane is spreading to Literary Circle Too..by claiming writers who dont protest about system And comparing them..is offense. Now KUMVEE sir publicly appologised and so was the Legislative council’s opposition Leader..confused whether to accept his appology first or this…

    ಪ್ರತಿಕ್ರಿಯೆ
  10. ಮುದಗಲ್ ವೆಂಕಟೇಶ

    ಕಂ.ವಿ. ಸರ್,,,,ನಿಮ್ಮ ಮಾತು ತುಟಿಜಾರಿ ಬಂದಿವೆ ಎಂದನಿಸುವುದಿಲ್ಲ. ಆಡಿದ ಮಾತಿಗಳ ಪರಿಣಾಮ ಊಹಿಸಿಕೊಂಡೆ ನಿಮ್ಮಂತಹ ಪ್ರಸಿದ್ಧ ಲೇಖಕರು ಮಾತಿನ ಬಾಣಗಳನ್ನು ಬಿಡುತ್ತಿರುತ್ತಾರೆ. ಎಲ್ಲಿಯಾದರೂ ವಿರೋಧ ಬಂದಾಗ ಮಾತ್ರ, ಕ್ಷಮಿಸಿ ತುಟಿಜಾರಿ ಬಂದ ಮಾತುಗಳು ಇತ್ಯಾದಿ ಪದ ಪುಂಜಗಳ ಪ್ರಯೋಗವಾಗುತ್ತವೆ. ಸದಾ ಸುದ್ದಿಯಲ್ಲಿರ ಬೇಕೆಂಬ ಬಯಕೆಯೆ ಇಂಥಹುದಕ್ಕೆ ಕಾರಣ.

    ಪ್ರತಿಕ್ರಿಯೆ
  11. shashikanth yadahalli

    ‘ನಿರುಪದ್ರವಿ ಲೇಖಕರು ದೇವದಾಸಿಯರಿದ್ದಂತೆ’ ಎಂದು ಕುಂವಿ ಹೇಳಿದ್ದರಿಲ್ಲಿ ನನಗೆ ಅತಿಶಯೋಕ್ತಿಯೇನೂ ಕಾಣುತ್ತಿಲ್ಲ. ಅದ್ಯಾಕೆ ಎಲ್ಲರೂ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಿದ್ದಾರೆಂಬುದೂ ನನಗರ್ಥವಾಗುತ್ತಿಲ್ಲ. ಜೊತೆಗೆ ಸ್ವತಃ ಕುಂವಿರವರೂ ಪಶ್ಚಾತ್ತಾಪದಿಂದ ಕೊರಗುತ್ತಾ ಕ್ಷಮೆ ಕೇಳುತ್ತಿರುವುದು ಸರಿಯೆನಿಸುತ್ತಿಲ್ಲ. ಕುಂವಿ ಹೇಳಿದ್ದರಲ್ಲಿ ಸಂಪೂರ್ಣ ಸತ್ಯ ಇರದೇ ಇರಬಹುದು ಆದರೆ ಸುಳ್ಳಂತೂ ಅಲ್ಲವೇ ಅಲ್ಲ. ಹಲವಾರು ಪ್ರಸಿದ್ಧರೆನಿಸಿಕೊಂಡ ಸಾಹಿತಿ ಬರಹಗಾರರು ಪ್ರಶಸ್ತಿ ಪದವಿಗಳಿಗೆ ಸರಕಾರಿ ಹಾಗೂ ಸರಕಾರೇತರ ಸಂಸ್ಥೆಗಳ ಮುಂದೆ ಮಂಡಿಯೂರಿ ಅವಕಾಶವಾದಿಗಳಾಗಿದ್ದಾರೆ. ಅಂತವರನ್ನು ಏನಂತಾ ಕರೀಬೇಕು? ಕಾವ್ಯವಾಗಲಿ ಖಡ್ಗ ಎಂದ ಬಂಡಾಯ ಸಾಹಿತ್ಯದ ನಾಯಕರುಗಳು ಸರಕಾರಿ ಕೃಪಾ ಪೋಷಿತರಾಗಿದ್ದಾರಲ್ಲಾ ಇಂತವರಿಗೆ ಇನ್ನೇನೆಂದು ಹೇಳಬೇಕು? ಬರಹಗಾರರ ಮುಖವಾಡ ಹಾಕಿಕೊಂಡು ಸಾಹಿತ್ಯವನ್ನು ತಮ್ಮ ಅನುಕೂಲಗಳನ್ನು ಗಿಟ್ಟಿಸುವ ಮೆಟ್ಟಿಲಾಗಿ ಬಳಸಿಕೊಂಡ ಮಹನೀಯರಿದ್ದಾರಲ್ಲಾ ಅವರನ್ನು ಏನೆಂದು ಗುರುತಿಸಬೇಕು. ಇಂತವರಿಗೆ ಕುಂವಿ ಹೇಳಿದ್ದು ಸಮರ್ಥವಾಗಿ ಅನ್ವಯಿಸುತ್ತದೆ. ದೇವದಾಸಿಯರು ಹೊಟ್ಟೆಪಾಡಿಗೆ ದೇಹ ಮಾರಿಕೊಂಡರೆ ಈ ಅನುಕೂಲಸಿಂಧು ರಾಜೀಕೋರ ಸಾಹಿತಿಗಳೇನಕರು ತಮ್ಮ ಪ್ರತಿಭೆ ಹಾಗೂ ಬರವಣಿಗೆಯನ್ನು ಮಾರಿಕೊಂಡು , ತತ್ವ ಸಿದ್ದಾಂತಗಳನ್ನು ಗಾಳಿ ಬಂದತ್ತ ತೂರಿಕೊಂಡು ಅಕ್ಷರ ಹಾದರಕ್ಕಿಳಿದಿದ್ದಾರಲ್ಲಾ ಇವರಿಗೆ ಸಾಹಿತ್ಯ ಲೋಕದ ದೇವದಾಸಿಯರು ಎಂದು ಕರೆದರೆ ತಪ್ಪೇನು. ಕುಂವಿ ಯವರು ನಿರುಪದ್ರವಿ ಎನ್ನುವ ಬದಲಾಗಿ ಅವಕಾಶವಾದಿ ಸಾಹಿತಿಗಳು ದೇವದಾಸಿಯರಿದ್ದಂತೆ ಎಂದಿದ್ದರೆ ಇನ್ನೂ ಸೂಕ್ತವೆನಿಸುತ್ತಿತ್ತು. ಯಾಕೆಂದರೆ ಹಲವಾರು ಜನ ತಮ್ಮ ಪಾಡಿಗೆ ತಾವು ಬರೆದುಕೊಂಡಿರುತ್ತಾರೆ. ಅವರ ಗೊಡವೆ ಅವರಿಗೆ ಬಿಟ್ಟು ಜನದ್ರೋಹಿಗಳಾದ ರಾಜೀಕೋರ ಸಾಹಿತಿಗಳನ್ನು ಸಾಹಿತ್ಯ ಲೋಕದ ಸೂಳೆಯರು ಎಂದು ಕರೆದರೂ ತಪ್ಪೇನು ಇಲ್ಲಾ. ದೇಹ ಮಾರಿಕೊಂಡು ಹಣ ಸಂಪಾದಿಸುವುದಕ್ಕೂ ಅಕ್ಷರ ಮಾರಿಕೊಂಡು ಲಾಭ ಮಾಡಿಕೊಳ್ಳುವುದಕ್ಕೂ ನಡುವೆ ಇರುವ ವ್ಯತ್ಯಾಸವೇನಿದೆ. ಒಂದಂತೂ ನಿಜ ಪಾಪ ಬದುಕಿನ ಅನಿವಾರ್ಯತೆಗಾಗಿ ದೇವದಾಸಿಯರಾದವರಿಗಿಂತಲೂ ಅಕ್ಷರ ಹಾದರ ಮಾಡುವವರು ಪರಮ ನೀಚರು…. ಸ್ವಜನಪಕ್ಷಪಾತ, ಗುಂಪುಗಾರಿಕೆ, ಸ್ವಾರ್ಥಪರತೆ, ರಾಜೀಕೋರತನ, ಅವಕಾಶವಾದಿತನಗಳನ್ನು ಮೈಕೈಗೂಡಿಸಿಕೊಂಡ ಸಾಹಿತಿಗಳು ಉಪದ್ರವಿಗಳಾಗಿರಲಿ ಇಲ್ಲವೇ ನಿರುಪದ್ರವಿಗಳಾಗಿರಲಿ ಜನವಿರೋಧಿಗಳೇ….. ಕುಂವಿ ಹೇಳಿದ್ದರಲ್ಲಿ ಅರ್ಧ ಸತ್ಯವಂತೂ ಖಂಡಿತಾ ಇದೆ. ಒತ್ತಡ ಒತ್ತಾಯದಿಂದ ಅವರನ್ನು ಪಶ್ಚಾತ್ತಾಪದ ಹಂಗಿಗೆ ದೂಡದೇ ಅವರ ಮಾತಿನ ಹಿಂದಿನ ಮರ್ಮವನ್ನು ಅರ್ಥಮಾಡಿಕೊಳ್ಳುವುದುತ್ತಮ. ಕುಂವಿ ಹೇಳಿದಂತೆ ಆ ಮಾತು ಟಂಗ್ ಸ್ಲಿಪನಿಂದ ಬಂದಿದ್ದಲ್ಲ. ಅವರ ಮನದಾಳದಲ್ಲಿ ಈ ಸಾಹಿತ್ಯಲೋಕದ ಗೆದ್ದಲುಗಳ ಬಗ್ಗೆ ಇರುವ ಆಕ್ರೋಶವೇ ಮಾತಾಗಿ ಹೊರಬಂದಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: