ಅದರ ಬದಿಗೆ ಒಂದೇ ಒಂದು ಬಾಂಬು ಇಡಿ. ನಿಮ್ಮ ಅಂಕಗಣಿತವೆಲ್ಲಾ ತಲೆಕೆಳಗಾಗುತ್ತದೆ..

ಜೀವರಾಶಿಗೆ ಕಾದಿದೆ ಗಂಡಾಂತರ

ಜಿ ಎನ್ ಮೋಹನ್ 

 

ಕೇರಳದ ಯಾವುದೋ ಕೇಳದ ಹೆಸರಿನ ಹಳ್ಳಿಯಿಂದ ಚುಕುಬುಕು ಸದ್ದು ಮಾಡುತ್ತಾ ನಿಮಿಷಕ್ಕೊಮ್ಮೆ ‘ದಡಲ್ ದಡಿಲ್’ ಎನ್ನುತ್ತಾ ಒಂದು ಶಟಲ್ ಉಗಿಬಂಡಿ ನಿಧಾನಕ್ಕೆ ಹಳಿಗಳ ಮೇಲೆ ತೆವಳುತ್ತಿತ್ತು. ಉಗಿಬಂಡಿಯಿಂದ ಹೊರತೆಗೆದ ದೊಡ್ಡ ಚೀಲವೊಂದನ್ನು ದೆಹಲಿಯ ವಿಮಾನಕ್ಕೆ ರವಾನಿಸಲಾಯಿತು. ದೆಹಲಿ ಮುಟ್ಟಿದ ಕೆಲವೇ ಕ್ಷಣಗಳ ನಂತರ ದೊಡ್ಡ ಚೀಲದ ಬಾಯಿ ಬಿಡಿಸಿ ಅಲ್ಲಿದ್ದ ಪತ್ರಗಳನ್ನೆಲ್ಲಾ ಹೊರತೆಗೆದು ಸೀಲು ಗುದ್ದಲಾರಂಬಿಸಿದರು. ಅಲ್ಲಿಂದ ಒಂದು ಪುಟ್ಟ ಕಾಗದ ಅಮೆರಿಕಾದ ಅಧ್ಯಕ್ಷರ ಕೊಠಡಿ ಸೇರಿತು.

ಅಂಕಲ್ ರೇಗನ್,

ನಿಮ್ಮ ಪದಕೋಶದಲ್ಲಿ ‘ಶಾಂತಿ’ ಎಂಬುದಕ್ಕೆ ‘ಯುದ್ಧ’ ಎಂಬ ಅರ್ಥವಿದೆಯೆ?

ನಮಗೆಲ್ಲಾ ತುಂಬಾ ಹೆದರಿಕೆಯಾಗಿದೆ. ನಾವು ಉಳಿಯಲು ಒಂದು ಸ್ವಲ್ಪವಾದರೂ ಪ್ರಯತ್ನಪಡಲು ಆಗುವುದಿಲ್ಲವೆ?

ನಿಮ್ಮ ಪ್ರೀತಿಯ,

ರೀನಾ ಪಿ. ಜೋಸೆಫ್

ಕೊಟ್ಟಾಯಂ, ಕೇರಳ (ಇಂಡಿಯಾ )

 

ಆಗಸ್ಟ್ 6, 1945

ಹಿರೋಷಿಮಾ

8 ಗಂಟೆ 15 ನಿಮಿಷ

ಬಾನಂಗಳದಲ್ಲಿ ಮೂರು ಚಿಕ್ಕೆಗಳು ಅತ್ತಿಂದಿತ್ತ ಸರಿದಾಡತೊಡಗಿದವು. ಸ್ವಲ್ಪ ಹೊತ್ತಿಗೆ ಆ ಚಿಕ್ಕೆಗಳ ಜೊತೆಗೆ ಶಬ್ದವೂ ಸೇರಿಕೊಂಡಿತು. ಚಿಕ್ಕೆಗಳು ಬರಬರುತ್ತಾ ದೊಡ್ಡದಾಗುತ್ತಾ ಹೋಯಿತು. ಅವು ಚಿಕ್ಕೆಗಳಲ್ಲ, ಮೂರು ಬೃಹತ್ ವಿಮಾನಗಳು. ಆಕಾಶದಲ್ಲಿ ನೋಡುವವರ ಕಣ್ಣುಗಳು ಪುನಃ ಮುಚ್ಚದಂತೆ ಮನೋಹರ ನೃತ್ಯ. ಅತ್ತಿಂದಿತ್ತ ಇತ್ತಿಂದತ್ತ ಹಾರಾಡುತ್ತಿದ್ದ ವಿಮಾನಗಳಿಂದ ಒಂದೊಂದೇ ಕೆಳಗಿಳಿದ ಪ್ಯಾರಾಚೂಟ್ ಗಳು.

ದಿಬ್ಬಗಳ ಮೇಲೆಲ್ಲಾ ಮಕ್ಕಳ ದಂಡೋ ದಂಡು. ಗಗನದಲ್ಲಿ ನಡೆಯುತ್ತಿದ್ದ ಕುಣಿತಕ್ಕೆ ಕಣ್ಣು ನೆಟ್ಟು ಕೂತರು.

ಕೆಲವು ಸೆಕೆಂಡುಗಳು ಅಷ್ಟೆ….

ನಂತರ ಹಿರೋಷಿಮಾದ ಮೇಲೆ ಆಕಾಶವೇ ಇಲ್ಲವಾಯಿತು. ಕೆಲವು ಕ್ಷಣಗಳ ನಂತರ ವಿಮಾನಗಳು ಪುನಃ ಹಾರಾಡಲಾರಂಭಿಸಿದವು. ವಿಮಾನಗಳಿಂದ ಕರಪತ್ರಗಳ ಸುರಿಮಳೆ ಆಕಾಶದಿಂದ ಕೆಳಗೆ ಜೀಕುತ್ತಾ ದಾರ ಕತ್ತರಿಸಿದ ಗಾಳಿಪಟದಂತೆ ಕೆಳಗಿಳಿದು ಬರುತ್ತಿದ್ದ ಕರಪತ್ರಗಳನ್ನು ಹಿಡಿಯಲು ಹಲವರಿಗೆ ಕೈಗಳೇ ಇರಲಿಲ್ಲ. ಓಡಲು ಜೀವಂತ ಕಾಲುಗಳಿರಲಿಲ್ಲ. ಜೀವವಿದ್ದವರಿಗೆ ಓದಲು ಕಣ್ಣುಗಳಿರಲಿಲ್ಲ. ಕಣ್ಣು ಮಿಟುಕಿಸುವುರೊಳಗೆ ಹಿರೋಷಿಮಾದ ಒಡಲಲ್ಲಿ ಜೀವವೇ ಇರಲಿಲ್ಲ.

ಎಲ್ಲಿ ನೋಡಿದರೂ ಅಷ್ಟೆ.

ಜನ, ಜನ, ಜನ ಸೋತು ಸುಸ್ತಾಗುವಷ್ಟು. ಹೌದು! ಅದೊಂದು ‘ಶಾಂತಿ’ ಸಾಗರ. ಎಲ್ಲರದೂ ಒಂದೇ ಧ್ವನಿ ‘ಯುದ್ಧ ಬೇಡ ಶಾಂತಿ ಬೇಕು’

ಅಮೆರಿಕಾದ ಸೆಂಟ್ರಲ್ ಪಾರ್ಕ್ ನಲ್ಲಿ ಅಂದು ಒಂದು ಹುಲ್ಲುಗರಿಕೆಯೂ ಕಾಣಿಸದಂತೆ ಬರೀ ತಲೆಗಳು.

‘ಯುದ್ಧ ಬೇಡ, ಶಾಂತಿ ಬೇಕು, ಬಾಂಬು ಬೇಡ, ಬ್ರೆಡ್ಡು ಬೇಕು’ ಒಂದೇ ಏಕನಾದ.

ಜನ ಸಾಗುತ್ತಲೇ ಇದ್ದರು. ಸೆಂಟ್ರಲ್ ಪಾರ್ಕ್ ಖಾಲಿಯಾಗಲೇ ಇಲ್ಲ.

ಹಾಲಿವುಡ್ ನ ಸಿನಿಮಾ ನಟ ರೇಗನ್ ಸಿನಿಕ ಕನಸುಗಳ ವಿರುದ್ಧ ಜನ ಶಾಂತಿಯಾತ್ರೆ ನಡೆಸಿದ್ದರು. ಕೊಟ್ಟಾಯಂನ ರೀನಾಳ ಮಾತುಗಳಿಗೆ, ಲೆಬನಾನ್ ನ ತಾಯಿಯ ಪ್ರೀತಿಯ ಕರುಳಿಗೆ, ನಿಖರವಾದ ದುಡಿಯುವ ಜೋಡಿ ಕೈಗಳಿಗೆ. ಗ್ರೆನೆಡಾದ ಹುಡುಗಿಯ ಪ್ರೀತಿ ಸುರಿಸುವ ಕಣ್ಣುಗಳಿಗೆ, ಲಿಬ್ಯಾದ ನವವಿವಾಹಿತ ಜೋಡಿಯ ಮುಗ್ಧ ಕನಸುಗಳನ್ನೆಲ್ಲಾ ಅಮೆರಿಕಾದ ಅಧ್ಯಕ್ಷ ರೇಗನ್ ನ ಒಂದೇ ಒಂದು ಕನಸು ಭಸ್ಮ ಮಾಡಲು ಸಿದ್ಧವಾಗಿ ನಿಂತಿತ್ತು.

ರೇಗನ್ ಉಸಿರಾಡಿದರೆ ಜಗತ್ತಿನ ಉಸಿರು ನಿಲ್ಲುತ್ತದೆ ಎಂದು ಅರಿವಿಗೆ ಬಂದ ಲಕ್ಷ ಲಕ್ಷ ಜನರು ಜಾತ್ರೆ ಸೇರುತ್ತಲೇ ಇದ್ದರು. ಪಶ್ಚಿಮ ಜರ್ಮನಿಯ ಸ್ಟುಟ್ ಗರ್ಟ್ ನಲ್ಲಿ ಜನರು ಸಂಯುಕ್ತ ಸಂಸ್ಥಾನಗಳ ಅಣುಶಕ್ತಿಗಳ ಕಮ್ಯಾಂಡ್ ನೆಲೆಯಿಂದ ಕ್ಷಿಪಣಿಯನ್ನು ಸ್ಥಾಪಿಸುತ್ತಿರುವ ಕೇಂದ್ರದವರೆಗಿನ 108 ಕಿ.ಮೀ. ಉದ್ದಕ್ಕೂ ಕೈ ಕೈ ಸರಪಳಿ ಮಾಡಿ ‘ಯುದ್ಧವನ್ನು ಒಳಗೆ ಬಿಡುವುದಿಲ್ಲ’ ಎಂದು ಘೋಷಣೆ ಕೂಗುತ್ತಿದ್ದರು. ಗ್ರೀಸಿನ ರಾಜಧಾನಿ ಅಥೆನ್ಸ್ ನ ಹಳ್ಳಿಯಲ್ಲಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಪಂಚದ ಮುಂದಿನ ಜನಾಂಗವಾದ ನಮ್ಮನ್ನು ಬದುಕಲು ಬಿಡಿ’ ಎಂದು ರೇಗನ್ನರಿಗೆ ಮನವಿ ಸಲ್ಲಿಸುತ್ತಿದ್ದರು. 1982 ಅಕ್ಟೋಬರ್ 4 ರಂದು ನವದೆಹಲಿಯಲ್ಲಿ ‘ರೇಗನ್ ಭೂತ’ ಸುಟ್ಟು ಬೂದಿಯಾಗುತ್ತಿತ್ತು.

ನಾವು ಇಂದು ಇಪ್ಪತ್ತನೇ ಶತಮಾನದ ಅಂಚಿನಲ್ಲಿ ಬದುಕುತ್ತಿದ್ದೇವೆ. ಇಪ್ಪತ್ತನೆ ಶತಮಾನದ ಈ ಕ್ಷಣಗಳಲ್ಲಿ ಮಿಲಿಯ ಕೋಟಿ ಜನರೊಡನೆ ಅಷ್ಟೇ ವೇಗದಲ್ಲಿ ಅಣುಬಾಂಬುಗಳು ರಾಸಾಯನಿಕಗಳು ಉಸಿರಾಡುತ್ತಿದೆ. ದಿನನಿತ್ಯದ ನಮ್ಮ ಲಯಶೀಲ ಬದುಕಿಗೆ ಚಾಲನೆ ನೀಡುವ ಗಾಳಿಯನ್ನೇ ವಿಷಮಯ ಮಾಡಿ ಉಸಿರನ್ನು ಕಿತ್ತುಕೊಳ್ಳಬಲ್ಲ ಶಕ್ತಿಯನ್ನು ಇಂದಿನ ಸಂಶೋಧನನೆಗಳು ಉಂಟು ಮಾಡಿವೆ. ‘ಈ ಅಣುಯುದ್ಧದಲ್ಲಿ ಗೆಲ್ಲುವ ಮಾತೇ ಇಲ್ಲ’ ಐನ್ ಸ್ಟೀನ್, ಬರ್ಟೆಂಡ್ ರಸೆಲ್ ಮಾತುಗಳು ಧೂಳೀಪಟವಾಗುತ್ತಿತ್ತು. ‘ಉದ್ದುದ್ದನೆಯ ಕಟ್ಟಡಗಳನ್ನು ಹಾಳುಮಾಡುವುದಿಲ್ಲ, ನ್ಯೂಟ್ರಾನ್ ಕೇವಲ ನಮ್ಮ ಚಿಲ್ಲರೆ ಜೀವವನ್ನುಳಿದು’ ಎಂಬ ಕವಿವಾಣಿಯಂತೆ ನ್ಯೂಟ್ರಾನ್ ಒಮ್ಮೆ ಆಸ್ಫೋಟಿಸಿದರೆ ಸಾಕು ಅಲ್ಲಿ ಬಂಡೆ, ಬೆಟ್ಟ, ಕಟ್ಟಡಗಳನ್ನು ಬಿಟ್ಟು ಇಡೀ ಜೀವರಾಶಿಯೇ ಖಾಲಿ. ನ್ಯೂಟ್ರಾನ್ ಬಾಂಬ್ ಸ್ಫೋಟಿಸಿದಾಗ ಆಕಾಶದಲ್ಲಿ ತನ್ನದೇ ಆದ ದೊಡ್ಡ ಮೋಡಗಳ ಹಿಂಡುಗಳು ತೇಲುತ್ತವೆ. ಆಕಾಶದಿಂದ ತೂರಿಬರುವ ಸೂರ್ಯನ ಕಿರಣಗಳು ಒಳಗೆ ಬರಲಾಗದೆ ಅಲ್ಲೇ ಉಳಿಯುತ್ತದೆ. ಭೂಮಿಯ ಮೇಲೆ ತಿಂಗಳುಗಟ್ಟಲೆ ಕತ್ತಲೆ. ಬಿಸಿಲೇ ಇಲ್ಲದೆ ಎಲ್ಲೆಡೆಯೂ ಚಳಿಗಾಲ.

ಈ ನ್ಯೂಕ್ಲಿಯರ್ ಚಳಿಗಾಲ ಬಂದರೆ ಸಾಕು ಉಷ್ಣಾಂಶ -40 ಡಿಗ್ರಿ ಸೆಲ್ಷಿಯಸ್ ಗಳಷ್ಟು ಇಳಿಯುತ್ತದೆ. ಭೂಮಿಯ ಸುತ್ತ ಇರುವ ಓಜೋನ್ ರಕ್ಷಾಕವಚವನ್ನು ಅಣ್ವಸ್ತ್ರಗಳ ಸ್ಫೋಟದಿಂದ ಉತ್ಪತ್ತಿಯಾಗುವ ಬಿಸಿ ನಾಶ ಮಾಡುತ್ತದೆ. ಇದರಿಂದ ಸೂರ್ಯನಿಂದ ಬರುವ ಅಲ್ಟ್ರಾ ವಯಲೆಟ್ ಕಿರಣಗಳು ಭೂಮಿಯನ್ನು ತಲುಪುತ್ತದೆ. ಸೂರ್ಯನ ಕಿರಣಗಳು ಬೀಳದೆ ಮರಗಿಡಗಳು ಆಹಾರ ತಯಾರಿಸದೆ ಆಮ್ಲಜನಕವನ್ನು ಹೊರಗೆ ಬಿಡುವುದಿಲ್ಲ. ಮನುಷ್ಯನಿಗೆ ಉಸಿರಾಡಲು ಆಮ್ಲಜನಕವಿಲ್ಲದೆ ಹಾಹಾಕಾರ. ಆಕಾಶದಲ್ಲಿ ಮೂಡುವ ಕಾಮನ ಬಿಲ್ಲುಗಳನ್ನು ನೋಡಲು ನ್ಯೂಕ್ಲಿಯರ್ ಮೋಡಗಳ ಅಡ್ಡಿ. ಉಸಿರಾಡಲೂ ಕೇವಲ ಇಂಗಾಲದ ಡೈ ಆಕ್ಸೈಡ್, ನೋಡುವ ಕಣ್ಣುಗಳಿಗೆ ಆಕಾಶದಲ್ಲಿ ಯುದ್ಧ ವಿಮಾನಗಳು, ಪ್ರಿಯತಮೆಯ ಪ್ರೀತಿ ಗುನುಗುಗಳನ್ನು ಕೇಳ ಬಯಸುವ ಕಿವಿಗೆ ಬಾಂಬಿನ ಕರ್ಕಶ ಶಬ್ದ.

ಇಂದು ಪ್ರಪಂಚದಲ್ಲಿ ಮಿಲಿಟರಿಗಾಗಿ ಖರ್ಚು ಮಾಡುತ್ತಿರುವ ಹಣದಲ್ಲಿ ಒಂದು ದಿವಸದ ಖರ್ಚಿನಿಂದ ಇಡೀ ಪ್ರಪಂಚದಲ್ಲಿ ಹರಡಿರುವ ಮಲೇರಿಯಾವನ್ನು ಸಂಪೂರ್ಣವಾಗಿ ನಾಶ ಮಾಡಬಹುದು. ಅಮೆರಿಕ ತನ್ನ 1981-86ರ ಪಂಚವಾರ್ಷಿಕ ಯೋಜನೆಯಲ್ಲಿ ಶಸ್ತ್ರಾಸ್ತ್ರಗಳಿಗಾಗಿ 14,45,500 ಕೋಟಿ ರೂ.ಗಳನ್ನು ವೆಚ್ಚ ಮಾಡುತ್ತಿದ್ದು, ಒಂದೊಂದು ರೂ.ಗಳ ನೋಟುಗಳನ್ನು ಒಂದರ ಪಕ್ಕದಲ್ಲಿ ಒಂದು ಜೋಡಿಸುತ್ತಾ ಹೋದರೆ ಅದರ ಉದ್ದ, ಈ ಮಿಲಿಟರಿ ವೆಚ್ಚ, ಭೂಮಿಯಿಂದ ಸೂರ್ಯನನ್ನು ತಲುಪಿ ಪುನಃ ಭೂಮಿಗೇ ವಾಪಸಾಗುವಷ್ಟು. ಮಾರಕಾಸ್ತ್ರಗಳಿಗಾಗಿ ವಿಶ್ವದಲ್ಲಿ ಪ್ರತಿ ನಿಮಿಷಕ್ಕೆ 1 ಕೋಟಿ ರೂ.ಗಳಷ್ಟು ಖರ್ಚು ಮಾಡಲಾಗುತ್ತಿದೆ. ಹೀಗಾಗಿ ಭೂಮಿಯ ಪ್ರತಿಯೊಬ್ಬರ ಮೇಲೂ ಸರಾಸರಿ 3 ಟನ್ನುಗಳಷ್ಟು ಟ್ರೈನೈಟ್ರೋಟಾಲಿನ್ (ಟಿ.ಎನ್.ಟಿ.) ಸಿಡಿಮದ್ದು ಯಾವುದೇ ಕ್ಷಣದಲ್ಲೂ ಸಿಡಿಯಲು ಸಿದ್ಧವಾಗಿ ತೂಗುತ್ತಿದೆ.

ಕೇವಲ 5 ಗಂಟೆಯ ಮಿಲಿಟರಿ ಖರ್ಚು ಯೂನಿಯಸೆಫ್ ಸಂಸ್ಥೆ ಮಕ್ಕಳ ರಕ್ಷಣೆಗಾಗಿ 1 ವರ್ಷಕ್ಕೆ ಮಾಡುವ ಖರ್ಚಿಗೆ ಸಮ. ಒಂದು ಬಾಂಬರ್ ನ ಬೆಲೆ 100 ಕೋಟಿ ರೂ. ವಿಶ್ವ ಆರೋಗ್ಯ ಸಂಸ್ಥೆ ಸಿಡುಬು ನಿರ್ಮೂಲನಕ್ಕಾಗಿ 10 ವರ್ಷಗಳಲ್ಲಿ ಇಡೀ ಪ್ರಪಂಚದಲ್ಲಿ ಖರ್ಚು ಮಾಡಿದ್ದ ಹಣಕ್ಕಿಂತಲೂ ಅಧಿಕ. ಒಂದು ಆಧುನಿಕ ಬಾಂಬರ್ ನ ಖರ್ಚಿನಿಂದ 2 ಲಕ್ಷ 20 ಸಾವಿರ ಉಪಾಧ್ಯಾಯರ ಸಂಬಳ, 100 ಹಾಸಿಗೆಗಳುಳ್ಳ 75 ಆಸ್ಪತ್ರೆಗಳನ್ನು ಕಟ್ಟಬಹುದು. ಆಧುನಿಕ ಟ್ಯಾಂಕ್ ಒಂದಕ್ಕೆ ಖರ್ಚಾಗುವ ಹಣದಿಂದ 3 ನೇ ಜಗತ್ತಿನ ದೇಶಗಳಲ್ಲಿ 30,000 ಮಕ್ಕಳ 1 ಸಾವಿರ ಕೊಠಡಿಗಳನ್ನು ಕಟ್ಟಬಹುದು. ಇಂದು ಅಭಿವೃದ್ಧಿಶೀಲ ದೇಶಗಳಲ್ಲಿ 3700 ಜನರಿಗೆ ಒಬ್ಬ ವೈದ್ಯನಿದ್ದರೆ 15 ಜನ ಸೈನಿಕರಿದ್ದಾರೆ.

ಈ ಎಲ್ಲಾ ಹಿನ್ನೆಲೆಯಿಂದಲೇ ಜಿನೇವಾದಲ್ಲಿ ಅಮೆರಿಕಾದ ಅಧ್ಯಕ್ಷ ರೇಗನ್, ಸೋವಿಯತ್ ಒಕ್ಕೂಟದ ಗೋರ್ಬಚೆವ್ ಮಾತುಕತೆಗಾಗಿ ಕೈ ಗೂಡಿಸಿದಾಗ ಇಡೀ ಜಗತ್ತು ಕಣ್ಣಾಗಿ ಕುಳಿತಿತ್ತು. ಜಿನೇವಾದಲ್ಲಿ ಯಾವಾಗಲೂ ಮುಖ ತಿರುಗಿಸಿ ನಿಂತಿದ್ದ ಎರಡು ಬಲಿಷ್ಠ ರಾಷ್ಟ್ರಗಳು ಕೈ ಕುಲುಕಿದ್ದವು. ಇಬ್ಬರು ವ್ಯಕ್ತಿಗಳ ಹಿಂದೆ ಎರಡು ತೀರಾ ಭಿನ್ನವಾದ ವ್ಯವಸ್ಥೆಗಳು ಮಾತುಕತೆಗೆ ಸಜ್ಜಾಗಿದ್ದವು. ನ್ಯೂಕ್ಲಿಯರ್ ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸುವ ಚಟುವಟಿಕೆ ನಿಲ್ಲಬೇಕು. ಮೊದಲ ಪ್ರಯತ್ನವಾಗಿ ಪಾಶ್ಚಿಮಾತ್ಯ ದೇಶಗಳಲ್ಲಿನ ಕ್ಷಿಪಣಿಗಳನ್ನು ಹಿಂತೆಗೆದುಕೊಳ್ಳಬೇಕು. ಕ್ಷಿಪಣಿ ಮತ್ತು ನ್ಯೂಕ್ಲಿಯರ್ ಅಸ್ತ್ರಗಳು ಶೇ.50ಕ್ಕೆ ಇಳಿಸಬೇಕು ಎಂಬ ವಿಚಾರಗಳು ಚರ್ಚೆಗೆ ಬಂದಾಗ ರಷ್ಯ ಸಂಪೂರ್ಣವಾಗಿ ಒಪ್ಪಿಕೊಂಡಿತಲ್ಲದೆ ನ್ಯೂಕ್ಲಿಯರ್ ಅಸ್ತ್ರಗಳನ್ನು ಮೊದಲು ತಾನು ಉಪಯೋಗಿಸುವುದಿಲ್ಲವೆಂದು ಮತ್ತೊಮ್ಮೆ ಸಾರಿತು. ಈ ಮಾತುಕತೆಗಳು ಜಿನೇವಾದಿಂದ ಹೊರಬಿದ್ದು ಕೆಲ ದಿನಗಳಾಗುತ್ತಿದ್ದಂತೆ ಅಮೆರಿಕ ಲಿಬ್ಯಾದ ಮೇಲೆ ನಾಯಕ ಗಡಾಫಿಯನ್ನು ಬಲಿತೆಗೆದುಕೊಳ್ಳಲು ಬಾಂಬುಗಳನ್ನು ಹಾರಿಸಿ ತನ್ನ ಶಾಂತಿ ವಾಗ್ದಾನವನ್ನು ಮುರಿಯಿತು.

ಕ್ರೂರ ವಾಸ್ತವ

3+1=0

ಎಂದು ಬರೆದರೆ ಬಹುಶಃ ನಿಮಗೆ ಸಿಗುವ ಅಂಕಿ ಕೂಡ ಸೊನ್ನೆಯೇ ಆಗಬಹುದು. ಆದರೆ ಯುದ್ಧ ದೇಶಗಳಲ್ಲಿ ಅಪಾರ ಸಹಾನುಭೂತಿ ಸಿಗುತ್ತದೆ. ನಿಮ್ಮ ದೇಶದಲ್ಲಿ ಮೂರಕ್ಕೆ ಒಂದು ಕೂಡಿದರೆ ನಾಲ್ಕಾಗುತ್ತದೆ. ಆದರೆ ಯುದ್ಧ ದೇಶಗಳಲ್ಲಿ ಹಾಗಲ್ಲ. ಮೂರಕ್ಕೆ ಒಂದು ಕೂಡಿದರೆ ಸೊನ್ನೆಯಾಗುತ್ತದೆ. ಗಣಿತ ಜಾಗತಿಕ ಸತ್ಯ. ಯಾವಾಗಲೂ ಸುಳ್ಳು ಹೇಳುವುದಿಲ್ಲ. ಎಂದು ಸಾಬೀತಾಗಿರುವಾಗ  ನೀವು ಒಂದು ಕ್ಷಣ ಬೆರಗಾಗಬಹುದು. ಆದರೆ ಇದು ವಿಚಿತ್ರ ಆದರೂ ಸತ್ಯ, ಕ್ರೂರವಾಸ್ತವ.

ತನ್ನ ತಂದೆ, ತಾಯಿ, ತಮ್ಮ ಮೂವರನ್ನೂ ಕೇವಲ ಒಂದು ಯುದ್ಧ ಬಾಂಬಿನಿಂದ ಕಳೆದುಕೊಂಡ ಈ ಏಕಾಂಗಿ ಬಾಲಕ ತಾನೇ ಕಂಡು ಹಿಡಿದ ಹೊಸ ಅಂಕಗಣಿತ ಇದು. 3+1=0 ಹೌದು! ಯುದ್ಧ ಒಮ್ಮೆ ನಿಮ್ಮ ಮನೆ ಬಾಗಿಲಿಗೆ ಬಂದರೆ ಸಾಕು ಅದು ಜಗತ್ತಿನ ಅನೇಕ ಸತ್ಯಗಳನ್ನು ಬದಲು ಮಾಡುತ್ತದೆ.

3+1=0 ಈ 3 ರ ಸ್ಥಾನದಲ್ಲಿ ನೀವು ನೂರು ಇಟ್ಟರೂ ಅಷ್ಟೆ. ಲಕ್ಷ ಇಟ್ಟರೂ ಅಷ್ಟೆ. ಅದರ ಬದಿಗೆ ಒಂದೇ ಒಂದು ಬಾಂಬು ಇಡಿ. ನಿಮ್ಮ ಅಂಕಗಣಿತವೆಲ್ಲಾ ತಲೆಕೆಳಗಾಗುತ್ತದೆ. ಹಾಗೇ ನಿಮ್ಮ ಜೀವಗಳು ಕೂಡಾ…

 

೨೭-೦೭-೧೯೮೬

ಅಭಿಮಾನಿ ವಿಶೇಷಾಂಕ

‍ಲೇಖಕರು avadhi

August 9, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಭಾರತಿ ಬಿ ವಿ

    ಚರಿತ್ರೆಯಿಂದ ಎಲ್ಲರೂ ಪಾಠ ಕಲಿಯಬೇಕು … ತುರ್ತಾಗಿ …

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: