ಶಿರಾ ಮಾಡಲ್ಲೆ ಬರ್ತನೆ…?

 

 

 

ಗೀತಾ ಹೆಗ್ಡೆ ಕಲ್ಮನೆ 

 

ಶಿರಾ ಅಂದರೆ ಚಿರೋಟಿ ರವೆಯಿಂದ ಮಾಡುವ ಮಲೆನಾಡಿನ ಸಿಹಿ ಖ್ಯಾಧ್ಯ.  ಇದನ್ನು ಕೇಸರಿ ಬಾತ್ ಅಂತಲೂ ಕರೆಯುತ್ತಾರೆ ಆ ಸೀಮೆಯವರಲ್ಲದ ಉಳಿದ ಮಂದಿ.  ಇದು ಬೆಳೆಯುವ ಮಕ್ಕಳಿಗೆ ಪೌಸ್ಟಿಕ ಆಹಾರವೂ ಹೌದು.   ಗೋಧಿ, ತುಪ್ಪ, ಸಕ್ಕರೆ, ಏಲಕ್ಕಿ, ಲವಂಗ್, ಜಾಪತ್ರೆ, ಕೇಸರಿ, ಡ್ರೈ ಫ್ರೂಟ್ಸ ಜೊತೆಗೆ ಬೇಕಾದರೆ ಅನಾನಸ್ ಹಣ್ಣು ಇಲ್ಲಾ ಬಾಳೆ ಹಣ್ಣು, ಹಾಲು ಹಾಕಿ ಮಾಡಿದರೆ……. ದೊಡ್ಡವರೇನು? ಮಕ್ಕಳೂ ಕೂಡಾ ವಾವ್! ಅಂತ ಚಪ್ಪರಿಸಿಕೊಂಡು ತಿಂದೇ ತಿಂತಾರೆ.  ಮಕ್ಕಳಿಗೆ ಸಿಹಿ ಅಂದರೆ ಇಷ್ಟವಾಗೋ ಸಿಹಿ ತಿಂಡಿ ಕೂಡಾ!

ಆಗಿನ್ನೂ ನನಗೆ ಹನ್ನೆರಡು ವರ್ಷ.  ಶಾಲೆಗೆ ಹೋಗಲು ಅಜ್ಜಿ ಮನೆಯಲ್ಲಿದ್ದೆ.   ಚಿಕ್ಕಂದಿನಿಂದಲೂ ಈ ಅಜ್ಜಿಯನ್ನು “ಚಿಕ್ಕಮ್ಮ” ಎಂದು ಕರೆಯುವ ವಾಡಿಕೆ.  ನನ್ನ ಆಯಿ(ಅಮ್ಮ)ಯ ಅಮ್ಮನ ತಂಗಿ ಅವರು.  ಆಯಿಗೆ ಚಿಕ್ಕಮ್ಮ ಆಗಬೇಕು ಹಾಗೆ ಕರಿತಿದ್ರು ಸರಿ.  ಆದರೆ ನಾವೂ ಹಾಗೆಯೇ ಕರೆಯೋದು ಹೇಗೆ ರೂಢಿಗೆ ಬಂತೋ ನಾ ಕಾಣೆ.

ಒಂದಿನ ಚಿಕ್ಕಮ್ಮ ಇರಲಿಲ್ಲ.  ಅವರು ಆಗಾಗ ತನ್ನ ಅಪ್ಪನ ಮನೆಗೆ ಎರಡು ಮೂರು ದಿನ ಇದ್ದು ಬರಲು ಹೋಗುತ್ತಿದ್ದರು.  ಅವರಮ್ಮ ವಯಸ್ಸಾದವರು ಎದ್ದು ಓಡಾಡದ ಪರಿಸ್ಥಿತಿಯಲ್ಲಿದ್ದರು.  ಅಮ್ಮನ ನೋಡಿಕೊಳ್ಳಬೇಕೆಂಬ ಹಂಬಲ.  ಒಂದಷ್ಟು ತಿಂಡಿ ಅದೂ ಇದೂ ಪೂರ್ವ ತಯಾರಿ ಮನೆಯಲ್ಲಿ ಇದ್ದವರಿಗೆ ಮಾಡಿಟ್ಟು ಎರಡು ದಿನ ಸುಧಾರಿಸಿಕೊಳ್ಳಿ ಅಂತ ಹೇಳುವಾಗೆಲ್ಲ  “ಆತೆ ಮಾರಾಯ್ತಿ ನೀ ಹೋಗ್ಬಾರೆ.  ಅದೆಷ್ಟು ಒದ್ದಾಡ್ತ್ಯೆ?” ಅಂತ ಅಜ್ಜ ತಮಾಷೆ ಮಾಡ್ದಾಗ ಚಿಕ್ಕಮ್ಮನಿಗೆ ಹುರುಪು.

ಒಮ್ಮೆ ಹೀಗೆ ಚಿಕ್ಕಮ್ಮ ಇಲ್ಲದ ಆ ದಿನ ಭಾನುವಾರ ಆಗಿತ್ತು.  ಬೆಳಿಗ್ಗೆ ಸುಮಾರು ಹನ್ನೊಂದು ಗಂಟೆಗೆ ಮದುವೆಗೆ ಕರೆಯಲು ಹತ್ತಿರದ ನೆಂಟರು ಒಬ್ಬರು ಬಂದಿದ್ದರು.  ಬಂದವರೊಟ್ಟಿಗೆ ಚಾ ಸೇವನೆ ಆಯಿತು.
” ನೀವು ಊಟ ಮಾಡಿಕೊಂಡು ಹೋಗಿ” ಅಜ್ಜನ ವರಾತ.  ಇದು ಹಳ್ಳಿ ಕಡೆ ರೂಢಿ ಕೂಡಾ.

ಸರಿ, ಅಡಿಗೆ ತಯಾರಿ ಮಾಡಬೇಕಲ್ಲಾ? ಮನೆಯಲ್ಲಿ ಹೆಣ್ಣು ಅಂದರೆ ನಾನೊಬ್ಬಳೆ. ಇರುವ ಇಬ್ಬರು ಮಾವಂದಿರೊಂದಿಗೆ ನಾನೂ ಸೇರಿ ನಳಪಾಕ ಮಾಡಲು ಅಣಿಯಾದೆ.  “ಸಿಹಿ ಏನಾದರೂ ಮಾಡಲೇ ಬೇಕು” ಮದುವೆಗೆ ಕರೆಯಲು ಬಂದಾಗ‌ ಮಾವ ಹೇಳಿದರು.

ಸರಿ ನಾನು ಶಿರಾ ಮಾಡ್ತೀನಿ ಅಂದೆ ಎಲ್ಲಾ ಗೊತ್ತಿದ್ದವರಂತೆ.  “ನಿಂಗೆ ನಿಜವಾಗಲೂ ಶಿರಾ ಮಾಡಲ್ಲೆ ಬರ್ತನೆ” ಮಾವ ಕೇಳಿದಾಗ ” ಹೌದು ನಂಗೆ ಬರ್ತು ಚಿಕ್ಕಮ್ಮ ಮಾಡಕರೆ ನೋಡಿದ್ದಿ” ಅಂದೆ.  “ಆತು ಹಂಗರೆ ಮೊದಲು ಅಡಿಗೆ ಮುಗಸ್ಕಳನ.  ಕಡಿಗೆ ನೀ ಶಿರಾ ಮಾಡು ಅಕಾ” ಎಂದ.

ಅಂತೂ ಚಿಕ್ಕಮ್ಮನ ಅಡಿಗೆ ಮನೆಯಲ್ಲಿ ಅದೆಲ್ಲಿ ಇದೆಲ್ಲಿ ಅಂತ ತಡಕಾಡಿ ಅನ್ನ, ಸಾಂಬಾರು, ಪಲ್ಯ , ಹಶಿ (ಮೊಸರ್ಬಜ್ಜಿ) ಎಲ್ಲರೂ ಸೇರಿ ಮಾಡಿ ಮುಗಿಸಿದ್ದಾಯಿತು.  ಮುಂದಿನ ಸರದಿ ಶಿರಾ ಮಾಡುವ ಜವಾಬ್ದಾರಿ ನನಗೆ ವಹಿಸಿ ಹೊರಗಡೆ ಜಗುಲಿಯಲ್ಲಿ ಬಂದ ನೆಂಟನೊಂದಿಗೆ ಮಾವಂದಿರಿಬ್ಬರೂ ಹರಟಲು ಕುಳಿತರು.

ಬಾಂಡಲೆಗೆ ಒಂದಷ್ಟು ತುಪ್ಪ ಸುರಿದು ರವೆ ಹಾಕಿ ಕೈಯಾಡಿಸ್ತಾ ಇದ್ದೆ.  ಎಷ್ಟು ಹೊತ್ತಾದರೂ ಗಟ್ಟಿ ಆಗ್ತಿಲ್ಲ.  ರವೆಯೆಲ್ಲಾ ಹುರಿದೂ ಹುರಿದೂ ಕಪ್ಪಾಗಿ ನೀರಾದ ಪಾಯಸದಂತಾಗಿತ್ತು.  ಅಷ್ಟು ತುಪ್ಪ ಸುರಿದಿದ್ದೆ.  ಗಟ್ಟಿನೇ ಆಗ್ತಿಲ್ಲ!

ಹೊರಗಡೆ ಹರಟೆಯಲ್ಲಿ ಮಗ್ನವಾದ ಇಬ್ಬರು ಮಾವಂದಿರು ಬಂದ ನೆಂಟ ಎಲ್ಲರೂ ಇನ್ನೂ ಯಾಕೆ ಊಟಕ್ಕೆ ಕರಿತಿಲ್ವಲ್ಲಾ ಇವಳು ಅಂತಂದುಕೊಂಡು ಅಡಿಗೆ ಮನೆಗೆ ದಿಢೀರ್ ಪ್ರವೇಶ.  “ಸಂಗೀ…..‌ಆತನೆ ಶಿರಾ ಮಾಡಿ?  ಎಂತಕ್ಕೆ ಇಷ್ಟೊತ್ತು?  ನೀ ಕರಿತೆ ಊಟಕ್ಕೆ ಹೇಳಿ ಕಾಯ್ತಾ ಇದ್ಯ.  ಎಂತಾತು?”

ನನ್ನ ಕೈ ಕಾಲು ಆಗಲೇ ನಡುಗಲು ಶುರುವಾಗಿತ್ತು.  ನಾ ಮಾಡಿದ ಶಿರಾ ಅವತಾರ ನೋಡಿ ಜೋರಾಗಿ ನಗಲು ಪ್ರಾರಂಭಿಸಿದರು.  ಅವಮಾನದಿಂದ ಕುಗ್ಗಿ ಹೋದೆ. ಆ ಕೆಲಸ ಅಲ್ಲಿಗೆ ಬಿಟ್ಟು  ಮರೆಯಲ್ಲಿ ಹೋಗಿ ತುಂಬಾ ಅತ್ತಿದ್ದೆ.  ಎಷ್ಟು ಅವಮಾನ ಆಗಿತ್ತು ಗೊತ್ತಾ?  ಈಚೆ ಬಂದು ಮುಖ ತೋರಿಸಲೂ ನಾಚಿಕೆ ಆಗಿತ್ತು.

ರವೆಯೆಲ್ಲ ಹುರಿದೂ ಹುರಿದೂ ಹೊತ್ತಿ ಹೋಗಿತ್ತು.  ಚಿಕ್ಕಮ್ಮ ಶಿರಾ ಮಾಡುವಾಗ ತುಪ್ಪ ಹಾಕಿ ಹುರಿಯೋದು ನೋಡಿದ್ದೆ ಹಂಗೆ ನಾನೂ ಹುರಿದ್ನಪ.  ಅದು ಹೀಂಗೆಲ್ಲಾ ಆಗುತ್ತೆ ಅಂತ ನಂಗೇನು ಗೊತ್ತು.  ನೀರಾಕಿದಾಗ ಭೊಸ್…..ಅಂತ ಸೌಂಡ್ ಬರೋದೂ ನೋಡಿದ್ದೆ.  ನೀರಾಕಲು ತುಪ್ಪ ರವೆ ಗಟ್ಟಿ ಆಗಬೇಕು ಅಂತ ಹುರಿದಿದ್ದೇ ಹುರಿದಿದ್ದು.  ಏನೇನೊ ಆಗೋಯ್ತು.

ಚಿಕ್ಕಮ್ಮ ಬಂದ ಮೇಲೆ ಅವರ ಮುಂದೆ ನನ್ನ ಶಿರಾದ ಅವತಾರ ಹೇಳಿಕೊಂಡು ನಕ್ಕಿದ್ದೇ ನಕ್ಕಿದ್ದು ಈ ಮಾವಂದಿರು.  ಸದಾ ಕೀಟಲಿ ಮಾಡಿ ಗೋಳು ಹೊಯ್ದುಕೊಳ್ಳುವ ಅವರಿಗೆ ನನ್ನ ಕಂಡರೆ ಅಷ್ಟೇ ಮುದ್ದು.  ಏನಾದರೂ ಕೆಲಸ ನೈಸಾಗಿ ಮಾಡಿಸಿಕೊಳ್ಳೋದು ಆಮೇಲೆ ನಿನ್ನ ಮದುವೆಗೆ ನಾವು ಮೂರೂ ಜನ ಮಾವಂದಿರು ಸೀರೆ ಉಡುಗೊರೆ ಮಾಡ್ತೀವಿ ಅಂತ ರೇಗಿಸೋದು.  ನಾನೋ ನಾಚಿಕೆಯಿಂದ ” ಹೋಗೋ ಮಾವಾ…”ಅನ್ನುತ್ತ ಅಲ್ಲಿಂದ ಕಾಲ್ಕೀಳ್ತಿದ್ದೆ.  ಆದರೆ ನನ್ನ ಮದುವೆಲಿ ಒಂದು ಸೀರೆನೂ ಕೊಡಲೇ ಇಲ್ಲ.  ಬರೀ ಓಳ್ ಬಿಟ್ಟು ನನ್ನ ಹ್ಯಾಮಾರಿಸಿದ್ದು ಈಗಲೂ ಸಿಕ್ಕಾಗೆಲ್ಲ ಕೆಂಡ ಕಾಯ್ತೀನಿ.

ಆಮೇಲೆ ಚಿಕ್ಕಮ್ಮನಿಗೆ ನಾನಂದುಕೊಂಡ ಶಿರಾ ಮಾಡುವ ಕ್ರಮ ಹೇಳಿದಾಗ “ಥೋ…..ದಡ್ಡಿ.  ನಾ ಎಂತಾ ಮಾಡಕರೂ ನನ್ನ ಹಿಂದೆ ಬಾಲದಂತೆ ಇರ್ತೆ.  ನೀ ಇನ್ನೂ ಶಣ್ಕಿದ್ದೆ.  ಎಂತಕ್ಕೆ ಮಾಡಲ್ಲೋದೆ.   ಅದು ಅಷ್ಟು ಸುಲಭದಲ್ಲಿಲ್ಯೆ. ಎಲ್ಲಾ ಪದಾರ್ಥ ಸರಿಯಾಗಿ ಹಾಕಿ ಕ್ರಮಬದ್ಧವಾಗಿ ಮಾಡಿದ್ರೆ ಮಾತ್ರ ಚೊಲೋ ಆಗ್ತು.  ನಾ ನಿಂಗೆ ಹೇಳಿ ಕೊಡ್ತಿ” ಅಂತ ನಯವಾಗಿ ಗದರಿಸಿ ತುಪ್ಪ ರವೆ ಹಾಳು ಮಾಡಿದ್ದು ಮನ್ನಿಸಿದರು.

ಮುಂದೆ ಅದೇ ಚಿಕ್ಕಮ್ಮನಿಂದ ಕ್ರಮಬದ್ಧವಾಗಿ ಶಿರಾ ಮಾಡುವುದು ಕಲಿತು ಮಾಡ್ತಾ ಮಾಡ್ತಾ ಈಗ ಎಷ್ಟು ಚೆನ್ನಾಗಿ ಮಾಡ್ತೀನೆಂದರೆ ತಿಂದವರು ನೆನಪಿಸಿಕೊಂಡು ಚಪ್ಪರಿಸುವಷ್ಟು!

ಹಂಗಾರೆ ಶಿರಾ ಮಾಡುವುದು ಅಷ್ಟು ಸುಲಭವಾ ಈಗ?  ಅಲ್ಲ ಬಿಡಿ.  ಸಣ್ಣ ಚಿರೋಟಿ ರವೆ ತಂದರಾಯಿತು, ಒಂದಷ್ಟು ಸಕ್ಕರೆ ತುಪ್ಪ ಇದ್ದರಾಯಿತು ಅಂದುಕೊಂಡ್ರಾ.  ಊಹೂಂ ಅದಲ್ಲ ಪ್ರಶ್ನೆ.  ಈಗ ಬರೊ ಚಿರೋಟಿ ರವಾ ಮೊದಲಿನಂತೆ ಸಾಚಾ ಇರೋಲ್ಲ.  ಅದೇನು ಹಿಟ್ಟು ಬೆರೆಸಿರ್ತಾರೋ ಏನೋ.  ತುಪ್ಪ ಅಳತೆ ಪ್ರಕಾರ ಹಾಕಿದ್ರೂ ಮುದ್ದೆ ಮುದ್ದೆ ಆಗಿ ಮೇಣದಂತಾಗುವ ಅನುಭವ ಸಾಕಷ್ಟು ಸಾರಿ ಆಗಿದೆ.  ಒಂದಾ ತಂದ ರವೆ ಸಣ್ಣ ಜರಡಿಯಲ್ಲಿ ಜರಡಿ ಮಾಡಬೇಕು ಇಲ್ಲಾ ಕಲಬೆರಕೆ ಇಲ್ಲದ ರವೆ ಹುಡುಕಿ ತರಬೇಕು.  ಇನ್ನು ತುಪ್ಪವೋ ಗಮ್ ಅಂತಿರಬೇಕು.  ಇಲ್ಲೂ ಬೆರಕೆ ಕಂಡ್ರೀ.  ಊರಿಗೆ ಹೋದಾಗ ಗಮ ಗಮ ಹರಳು ತುಪ್ಪ ಅದರಲ್ಲೂ ಎಮ್ಮೆ ತುಪ್ಪ ಸಖತ್ತಾಗಿರುತ್ತೆ ಅಂತ ಕೊಂಡು ತಂದ್ರೆ ಅದೂ ಇದೇ ಕತೆ.  ನೆಯಕಲು.  ಸರಿ ಕಾಯಿಸಿಲ್ಲ ಜೊತೆಗೆ ಡಾಲ್ಡಾನೋ ಪೀಲ್ಡಾನೋ ಬೆರೆಸಿದ ತುಪ್ಪ.  ಬೆರಕೆ ಮಾಡೊ ಗಾಳಿ ಹಳ್ಳಿಯಲ್ಲೂ ಪಸರಸಿರೋದು ಗೊತ್ತಾಗಿ ಬುದ್ಧಿ ಚುರುಕಾಯಿತು.

ಆದರೂ ಈ ಶಿರಾ ಮಾಡೋದರಲ್ಲಿ ಎತ್ತಿದ ಕೈ ಆಗಬೇಕು ಎಂಬ ಹಠದಲ್ಲಿ ಪಟ್ಟ ಸಾಹಸ ಅಷ್ಟಿಷ್ಟಲ್ಲ.  ಒಂದೊಂದು ಸಾರಿ ಮಾಡಿದಾಗಲೂ ಏನಾದರೂ ವ್ಯತ್ಯಾಸ.  ಚಿಕ್ಕಮ್ಮನ ಹತ್ತಿರ ಅದೆಷ್ಟು ಸಾರಿ ಬಯ್ಸ್ಕಂಡೆನೊ? ಇಹಲೋಕ ತ್ಯಜಿಸಿದ ನನ್ನ ಪ್ರೀತಿಯ ಚಿಕ್ಕಮ್ಮ ಶಿರಾ ಮಾಡುವಾಗೆಲ್ಲ ಈಗಲೂ ನೆನಪಾಗ್ತಾಳೆ.

ಇದು ತಮಾಷೆಯಲ್ಲ ವಾಸ್ತವ‌.  ಅಂದು ಹಾಗಾಗದಿದ್ದರೆ ಪಟ್ಟು ಹಿಡಿದು ಶಿರಾ ಮಾಡುವುದು ನಾನು ಬಹುಶಃ ಕಲಿಯುತ್ತಿರಲಿಲ್ಲವೇನೊ ಅನಿಸುತ್ತದೆ ಎಲ್ಲರ ಹೊಗಳಿಕೆ ಕೇಳಿದಾಗ.   ಇದು ನಲವತ್ತೇಳು ವರ್ಷದ ಹಿಂದಿನ ನನ್ನ ಮೊದಲ ಅಡಿಗೆಯ ಅದರಲ್ಲೂ ಸಿಹಿ ಪ್ರಿಯಳಾದ ಶಿರಾ ತಿನ್ನುವ ಚಪಲದಲ್ಲಿ  ಮಾಡಿದ ಸವಿ ಸವಿ ನೆನಪು.  ಗೊತ್ತಾಯ್ತಲ್ಲಾ?  ನೆಂಟ ಬಂದಿದ್ದು ಒಂದು ನೆವ ಅಷ್ಟೇ.😊

‍ಲೇಖಕರು Avadhi

August 9, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. Shreedevi keremane

    ನಾನೂ ಚಂದ ಶಿರಾ ಮಾಡ್ತೆ ಗೀತಕ್ಕ

    ಪ್ರತಿಕ್ರಿಯೆ
  2. Sayilakshmi. S

    ಶಿರಾ ಎಂದರೆ ಸಾಮಾನ್ಯವಲ್ಲ. ಅದರ ಹದ‌ ನಿಮ್ಮ‌ಕೈಹಿಡಿದಿದೆ. ನಮ್ಮ‌ಪಾಕ‌ಪ್ರಯೋಗಶೀಲತೆಯಲ್ಲೂ ಎಂತಹ ನಾವೀನ್ಯ ಅಡಗಿದೆ ಎಂಬುದನ್ನು ಸೊಗಸಾಗಿ, ಸರಳವಾಗಿ, ಸರಾಗವಾಗಿ‌ ಚಿತ್ರಿಸಿರುವಿರಿ. ಅಭಿನಂದನೆಗಳು ಗೀತಾ.

    ಪ್ರತಿಕ್ರಿಯೆ
  3. Kusumapatel

    ಪ್ರೀತಿಯ ಸಂಗೀತ ಅವರೆ, ನೀವು ಹೇಳುವ ಶಿರಾಗೆ ನಾವು ಹೇಳುವುದು ಸಜ್ಜಿಗೆ ಅಂದರೆ ಬಣ್ಣ ಹಾಕದ ಕೇಸರಿಭಾತ್. ಸಣ್ಣವರಿದ್ದಾಗ ಅಮ್ಮ ಯಾವಾಗಲೂ ಮಾಡಿ ಕೊಡುತ್ತಿದ್ದ ತಿನಿಸು. ಈಗ ನನ್ನ ಮಗಳಿಗೂ ಇದು ಅಚ್ಚು ಮೆಚ್ಚು. ನಿಮ್ಮ ಲೇಖನ ಓದಿದಾಗ ನನ್ನ ಬಾಲ್ಯದ ಒಂದು ನೆನಪು. ಅಪ್ಪಾಜಿ ಆಗ ಮಲೆಬೆನ್ನೂ ರಿನಲ್ಲಿ ಎಂಜಿನಿಯರ್ ಆಗಿದ್ದರು. ನಾನು 7 ನೆಯ ತರಗತಿಯಲ್ಲಿ ಮೊದಲನೆಯವಳಾಗಿ ತೇರ್ ಗಡೆಯಾಗಿದ್ದೆ. ಅದಕ್ಕಾಗಿ ಆಫೀಸ್ ನವರಿಗೆಲ್ಲಾ ಚಹಾಕೂಟ ಏರ್ಪಡಿಸಲಾಗಿತ್ತು. ಆದರೆ ಕಡೆಗೆ ನನಗೇ ತಿಂಡಿ ಸಿಕ್ಕಿರಲಿಲ್ಲ. ಅಳುತ್ತಾ ಮನೆಗೆ ಬಂದ ನನಗೆ ಅಮ್ಮ ಚಕ್ ಅಂತ ಕೇಸರಿದಳ, ತುಪ್ಪ ಹಾಕಿ ನನ್ನ ಮೆಚ್ಚಿನ ಸಜ್ಜಿಗೆ ಮಾಡಿಕೊಟ್ಟಿದ್ದರು. ನಿಮ್ಮ ಲೇಖನ ಆ ನೆನಪು ಹೊತ್ತು ತಂದಿತು.
    ಧನ್ಯವಾದಗಳು

    ಪ್ರತಿಕ್ರಿಯೆ
    • Sangeeta Kalmane

      ಹೌದು. ಸಜ್ಜಿಗೆ ಅಂತಲೂ ಹೇಳುತ್ತಾರೆ. ಮಕ್ಕಳಿಗೆ ಪಟಕ್ಕನೆ ಮಾಡಿಕೊಡುವ ಆರೋಗ್ಯಭರಿತ ಸಿಹಿ ತಿಂಡಿ ಅಲ್ಲವೆ? ಹ..ಹ.. ನಿಮಗೂ ನೆನಪಾಯ್ತಾ? ಅಂತೂ ನನ್ನ ನೆನಪು ನಿಮ್ಮನ್ನು ಬಾಲ್ಯಕ್ಕೆ ಎಳೆದೊಯ್ಯಿತು. ಬಹಳ ಸಂತೋಷ ಕುಸುಮಾವರೆ. ಧನ್ಯವಾದಗಳು ತಮ್ಮ ಮೆಚ್ಚುಗೆಗೆ ನೆನಪಿನ ಸವಿ ಸವಿ ಸಜ್ಜಿಗೆಯ ನೆನಪಿಗೆ

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: