ಅತಿ ಸಣ್ಣ ಕಥೆಗಳು: ಸಾಹಿತ್ಯದ ಹೊಸ ಪ್ರಕಾರ

ಇಲ್ಲಿ ಅಶೋಕರ ಕಿರುಪುಸ್ತಕದ ಬಗ್ಗೆ ಹೇಳುವುದಕ್ಕಿಂತ ಮುಂಚೆ ಕೆಲವು ವಾಕ್ಯಗಳನ್ನು ನೀಡುತ್ತೇನೆ. ಈ ವಾಕ್ಯಗಳನ್ನು ಓದಿ ನಿಮಗೆ ಯಾವ ಭಾವನೆ ಮೂಡಬಹುದು ಯೋಚಿಸಿ ನೋಡಿ.

“ಹಾಗಾದರೆ, ನೀವು ದೆವ್ವಗಳನ್ನು ನಂಬುವುದಿಲ್ಲ ಅನ್ನಿ ಎಂದು ಉದ್ಗರಿಸಿದ ಸಹಪ್ರಯಾಣಿಕ ಮಾಯಾವಾದ.”
“ನನಗೆ ಎಚ್ಚರವಾದಾಗ, ಡೈನೊಸಾರ್ ಇನ್ನೂ ಅಲ್ಲಿಯೇ ಇತ್ತು.”
“ಫಾರ್ ಸೇಲ್; ಬೇಬಿ ಶೂಸ್, ನೆವರ್ ಯೂಸ್ಡ್.”

ಸಾಮಾನ್ಯ ಓದುಗರಿಗೆ ಇಲ್ಲಿ ಮೂರು ವಾಕ್ಯಗಳು ಕಾಣಬಹುದು. ಸ್ವಲ್ಪ ಯೋಚಿಸಿ ಈ ವಾಕ್ಯಗಳನ್ನು ಓದಿದಾಗ ಬೇರೊಂದು ಹೊಳಹು ಹೊಳೆಯಬಹುದು. ಅಥವಾ ಬೇರೊಂದು ದೃಶ್ಯವೇ ಮೂಡಬಹುದು. ಮೇಲೆ ಕೊಟ್ಟಿರುವ ಒಂದೊಂದು ವಾಕ್ಯವು ಒಂದೊಂದು ಕತೆ ಎಂದರೆ ಸಾಮಾನ್ಯ ಓದುಗರಿಗೆ ನಂಬಲು ಕಷ್ಟವಾಗಬಹುದು.

ಇದನ್ನೇ ಇಲ್ಲಿ ನಾನು ಹೇಳಹೊರಟಿರುವ ಸಾಹಿತ್ಯದ ಅತಿ ಸಣ್ಣಕತೆಯ ಪ್ರಕಾರ. ಮೇಲಿನ ಕತೆಗಳನ್ನು ಹೆಸರಾಂತ ಕತೆಗಾರರು ಬರೆದಿದ್ದು ಎಂದು ಹೇಳಿದರೆ ಯಾರು ನಂಬುತ್ತಾರೆ?

 “ಡೈನೊಸಾರ್” ಕತೆ ಬರೆದದ್ದು ಗ್ವಾಟಿಮಾಲಾದ ಸ್ಪ್ಯಾನಿಷ್ ಲೇಖಕ ಅಗೂಸ್ತೋ ಮೊಂತೆರೋಸೋ ಮತ್ತು ಬೇಬಿ ಶೂಸ್ ಕತೆ ಬರೆದವನು ಜಗದ್ವಿಖ್ಯಾತ ಲೇಖಕ ಅರ್ನೆಸ್ಟ್ ಹೆಮಿಂಗ್ವೇ.

ಈಗ ನಿಮಗೆ ಆಶ್ಚರ್ಯವಾಗಬಹುದು. ಕೇವಲ ಒಂದು ವಾಕ್ಯದಲ್ಲಿರುವ ಈ ಸಾಲುಗಳನ್ನು ಒಂದು ಕತೆಯೆಂದು ಹೇಳುವುದಾದರೆ ನಾವು ಈ ರೀತಿ ಕತೆಗಳನ್ನು ಬರೆಯಬಹುದು ಎಂದು ನಿಮಗೂ ಅನಿಸಬಹುದು.  

ಟಿ ಪಿ ಅಶೋಕರವರ ಅತಿ ಸಣ್ಣಕತೆ  ಸ್ವರೂಪ, ಸಿದ್ಧಿ ಮತ್ತು ಸಾಧ್ಯತೆ. ಈ ಪುಸ್ತಕ ಮಣಿಪಾಲ್ ಯೂನಿವರ್ಸಲ್ ಪ್ರೆಸ್ಸಿಂದ ಇತ್ತೀಚೆಗೆ ಬಿಡುಗಡೆಯಾಗಿದೆ. ನಾವೆಲ್ಲ ಸಣ್ಣ ಕತೆಗಳನ್ನು ಓದಿರುತ್ತೇವೆ. ಅತಿ ಸಣ್ಣಕತೆಗಳನ್ನು ಓದಿರಬಹುದು. ನೀಳ್ಗತೆ, ಕಿರುಕಾದಂಬರಿ, ಕಾದಂಬರಿ ಮತ್ತು ಮಹಾ ಕಾದಂಬರಿಗಳನ್ನೆಲ್ಲ ಓದಿರಬಹುದು. ಕನ್ನಡದಲ್ಲಿ ಬಹಳ ಹಿಂದೆಯೇ ಕೆಲವು ಸಾಹಿತಿಗಳು ಅತಿ ಸಣ್ಣ ಕತೆಗಳನ್ನು ಬರೆದಿದ್ದರೂ ಅದರ ಬಗ್ಗೆ ಹೆಚ್ಚು ಪ್ರೌಢಿಮೆಯಿಂದ ಬರೆದವರು ಎಸ್ ದಿವಾಕರ್ ಅವರು ಎಂದು ಖಂಡಿತ ಹೇಳಬಹುದು.

ಕನ್ನಡದಲ್ಲಿ ಪ್ರಾಚೀನ ಕಾಲದಿಂದ ಸಣ್ಣ ಕತೆಗಳಿದ್ದರೂ ಆಧುನಿಕ ಸಣ್ಣ ಕತೆಗಳ ಸ್ವರೂಪ ಬೇರೆಯೇ ಆಗಿದೆ. ಪಂಚತಂತ್ರದ ಕತೆಗಳು, ದೃಷ್ಟಾಂತ ಕತೆಗಳನ್ನೆಲ್ಲ ನಾವೆಲ್ಲ ಓದಿರುತ್ತೇವೆ. ನಮಗೆ ಪಠ್ಯದಲ್ಲಿಯೇ ರಾಮಕೃಷ್ಣ ಪರಮಹಂಸರ “ಈಜುಬಾರದ ಪಂಡಿತ” ಎಂಬ ದೃಷ್ಟಾಂತ ಕತೆಯೊಂದಿತ್ತು. ಪಂಚತಂತ್ರದ ಕತೆಗಳು ಮತ್ತು ದೃಷ್ಟಾಂತ ಕತೆಗಳು ಓದಿದ ಮೇಲೆ ನಮಗೆ ಆ ಕತೆಯ ಉದ್ದೇಶ ಮತ್ತು ಸಂದೇಶ ಎರಡು ತಿಳಿದು ಬಿಡುತ್ತದೆ.

ಆದರೆ ಆಧುನಿಕ ಅತಿ ಸಣ್ಣ ಕತೆಗಳ ಉದ್ದೇಶ ಮತ್ತು ಸಂದೇಶ ನಮಗೆ ತಿಳಿಯದಿದ್ದರೂ ಓದುಗನಿಗೆ ತನ್ನದೇ ಆಗಿರುವ ದೃಶ್ಯವನ್ನು ಮತ್ತು ಸಂದೇಶವನ್ನು ಸೃಷ್ಟಿಸಿಕೊಳ್ಳಲು ವಿಪುಲ ಅವಕಾಶ ಸೃಷ್ಟಿಸುತ್ತವೆ. ಆ ಕಾರಣದಿಂದ ಅತಿ ಸಣ್ಣಕತೆಗಳು ಓದುಗನ ಮುಂದೆ ಹೊಸದೇ ಆಗಿರುವ ಜಗತ್ತನ್ನು ತೆರೆದಿಡುತ್ತವೆ.

ಅತಿ ಸಣ್ಣಕತೆಗಳನ್ನು ಇತ್ತೀಚೆಗೆ ಕನ್ನಡದಲ್ಲಿ ಹಲವರು ಹನಿಗತೆ, ಕಿರುಗತೆ, ನ್ಯಾನೋ ಕತೆ, ಅತಿ ಸಣ್ಣಕತೆ ಎಂದು ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಿದ್ದಾರೆ. ಇಂಗ್ಲಿಷ್ ಭಾಷೆಯಲ್ಲೂ ಈ ಕತೆಗಳನ್ನು ಹಲವು ಹೆಸರುಗಳಿಂದ ಕರೆಯುತ್ತಿದ್ದಾರೆ. ಇಲ್ಲಿ ಅಶೋಕರು ಅತಿ ಸಣ್ಣ ಕತೆ ಎಂಬ ಕಥನ ಪ್ರಭೇದದ ಬಗ್ಗೆ ಮೊದಲು ನನ್ನ ಗಮನ ಸೆಳೆದವರು ಹಿರಿಯ ಮಿತ್ರರಾದ ಶ್ರೀ ಎಸ್ ದಿವಾಕರ್ ಅವರು. ನನಗೆ ‘ಕಲಿಸದೆ ಕಲಿಸಿದ’ ಗುರುಗಳಲ್ಲಿ ಅವರೂ ಒಬ್ಬರು ಎಂದು ಹೇಳುತ್ತಾರೆ.

ವಿಶ್ವವಿದ್ಯಾಲಯದ ಹೊರಗೇ ಇದ್ದು ಅವರು ನಡೆಸಿಕೊಂಡು ಬಂದಿರುವ ವ್ಯಾಸಂಗ, ಸಂಶೋಧನೆ, ಬರವಣಿಗೆಗಳು ತುಂಬಾ ಮೌಲಿಕವಾದವುಗಳು. ಜಗತ್ತಿನ ಶ್ರೇಷ್ಠ ಸಣ್ಣಕತೆಗಳು, ಅತಿ ಸಣ್ಣಕತೆಗಳನ್ನು ಅನುವಾದಿಸಿ, ವಿಶ್ಲೇಷಿಸಿ, ಅವುಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿರುವ ದಿವಾಕರ್ ಕಥೆಗಾರರಾಗಿ, ಸಂಪಾದಕರಾಗಿ ಕೂಡಾ ಬೆಲೆಯುಳ್ಳ ಸಾಧನೆ ಮಾಡಿದ್ದಾರೆ. ಅತಿ ಸಣ್ಣಕತೆ ಕುರಿತು ನಾನು ಒಂದು ಕಿರುಹೊತ್ತಿಗೆಯನ್ನು ಹೊರತರಲು ಅವರೇ ಪರೋಕ್ಷ ಕಾರಣ ಮತ್ತು ಪ್ರೇರಣೆ ಎಂದು ಹೇಳುತ್ತಾರೆ. ಡಾ. ಶ್ರೀನಿವಾಸ ಹಾವನೂರ, ಕೆ ವಿ ಸುಬ್ಬಣ್ಣ, ಎಂ ಎಸ್ ಶ್ರೀ ರಾಮ್ ಮತ್ತು ಕೆ ವಿ ಅಕ್ಷರ ಅವರ ಲೇಖನಗಳಿಂದಲೂ ನಾನು ಸಾಕಷ್ಟು ಕಲಿತಿದ್ದೇನೆ ಎಂದು ಹೇಳಿದ್ದಾರೆ.

ಜಿ ಪಿ ರಾಜರತ್ನಂ ಅವರು ಬಹಳ ಹಿಂದೆಯೇ ಹನಿಗಳು ಎಂಬ ಹನಿಗತೆಗಳನ್ನು ಬರೆದಿದ್ದರು ಎಂದು ನಮಗೆ ಈ ಪುಸ್ತಕದಿಂದ ಗೊತ್ತಾಗುತ್ತದೆ. ಇಲ್ಲಿ ಝೆನ್ ಕತೆಗಳ ಪ್ರಸ್ತಾಪವೂ ಬರುತ್ತದೆ.

ಇಲ್ಲಿ ಎಸ್ ದಿವಾಕರ್ ಅವರು ಸಂಪಾದಿಸಿರುವ

೧) ಕನ್ನಡ ಅತಿ ಸಣ್ಣ ಕತೆಗಳು
೨) ಜಗತ್ತಿನ ಅತಿ ಸಣ್ಣ ಕತೆಗಳು
೩) ಹಾರಿಕೊಂಡು ಹೋದವನು,
೪) ಕ್ರಿಯಾಪದಗಳಿವೆ ಕೊಲ್ಲುವುದಕ್ಕೆ( ಹಲವು ದೇಶಗಳ ಅತಿಸಣ್ಣ ಕತೆಗಳು) ಎಂಬ ನಾಲ್ಕು ಅತಿಮುಖ್ಯವಾದ ಪುಸ್ತಕಗಳ ಬಗ್ಗೆ ಪ್ರಸ್ತಾಪ ಬರುತ್ತದೆ.

ಇಲ್ಲಿ ನಾವು ಜಗತ್ತಿನ ಅತಿಶ್ರೇಷ್ಠ ಸಣ್ಣಕತೆಗಳನ್ನು ಓದಬಹುದು ಜೊತೆಗೆ ಕನ್ನಡದ ಅತಿಶ್ರೇಷ್ಠ ಅತಿ ಸಣ್ಣ ಕತೆಗಳ ಬಗ್ಗೆಯೂ ಉತ್ತಮ ಮಾಹಿತಿಯ ಜೊತೆಗೆ ಆ ಕತೆಗಳನ್ನು ಓದಬಹುದು.

ಇಲ್ಲಿ ಮಾಸ್ತಿಯವರ ಕಾಲದ ದೇವುಡು, ಬೇಂದ್ರೆ, ಅನಕೃ ಅವರಿಂದಿಡಿದು ಇತ್ತೀಚಿನ ವಸುಧೇಂದ್ರ, ನಾಗರಾಜ ವಸ್ತಾರೆ, ರಘುನಾಥ ಚ ಹ, ಬಿ ಎಂ ಬಶೀರರವರೆಗೆ ಕನ್ನಡದ ಮಹತ್ವದ ಅತಿ ಸಣ್ಣ ಕತೆಗೆಳನ್ನು ನೋಡಬಹುದು.

ಇಲ್ಲಿ ನಮಗೆಲ್ಲರಿಗೂ ಗೊತ್ತಿರುವ ಹಾಗೆ ಬೇಂದ್ರೆಯವರು ಕವಿ ಎಂದು. ಅವರ ‘ಮಗುವಿನ ಕರೆ’ ಕನ್ನಡದ ಅತಿಶ್ರೇಷ್ಠ ಸಣ್ಣ ಕತೆಗಳಲ್ಲಿ ಒಂದು ಎಂದು ಬಹಳಷ್ಟು ಜನರಿಗೆ ತಿಳಿದಿಲ್ಲ. ಚಿತ್ತಾಲರ ‘ಬೊಮ್ಮಿಯ ಹುಲ್ಲು ಹೊರೆ’, ಕೆ ಸದಾಶಿವರ ‘ಮಗು ಮಲಗಿತ್ತು’ ಮತ್ತು ‘ನಲ್ಲಿಯಲ್ಲಿ ನೀರು ಬಂತು’ ಕತೆಗಳು. ಜಿ ಎಸ್ ಸದಾಶಿವರ ‘ಚಪ್ಪಲಿಗಳು’, ಶ್ರೀಕಾಂತರ ‘ಅಯ್ಯರ್ ಕೆಫೆ’, ದಿವಾಕರರ ‘ಟೊಮ್ಯಾಟೊ’, ಅಶೋಕ್ ಹೆಗಡೆ ಅವರ ‘ಜಿದ್ದು’ ನಾಗರಾಜ ವಸ್ತಾರೆ ಅವರ ‘ಫೆಟಿಷ್’ ಮುಂತಾದ ಕತೆಗಳ ಪ್ರಸ್ತಾಪವೂ ಬರುತ್ತದೆ.  

ಇಲ್ಲಿ ನಾಗರಾಜ ವಸ್ತಾರೆಯವರ ‘ಫೆಟಿಷ್’ ಎಂಬ ಎರಡು ಪುಟದ ಕತೆಯ ಬಗ್ಗೆ ಹೇಳಲೇಬೇಕು. ಈ ಕತೆ ಆಧುನಿಕ ಜಗತ್ತಿನ ದಾಂಪತ್ಯ ಜೀವನದ ಇನ್ನೊಂದು ಮಗ್ಗಲನ್ನು ನಮ್ಮ ಮುಂದೆ ತೆರೆದಿಡುತ್ತದೆ. ಈ ಕತೆ ಮಕ್ಕಳಿಲ್ಲದ ಆಧುನಿಕ ದಂಪತಿಗಳ ಜೀವನ ಹೇಗಿರಬಹುದು ಎಂದು ತೋರಿಸುತ್ತದೆ. ಇಲ್ಲಿ ಗಂಡ ಹೆಂಡತಿಯ ಜೊತೆ ನಿರಾಸಕ್ತನಾಗಿರುವಂತೆ ಕಾಣುತ್ತದೆ. ಕಾರಣ ಅವಳ ಕಪಾಟಿನಲ್ಲಿ ಚಿತ್ರನಟನೊಬ್ಬನ ಫೋಟೋಗಳನ್ನಿಟ್ಟುಕೊಂಡಿದ್ದಾಳೆ. ಅವಳು ತನ್ನ ಬಟ್ಟೆ ಬದಲಿಸುವಾಗ ಆ ಫೋಟೋವನ್ನು ಮುದ್ದಿಸುತ್ತಾಳೆ. ಆ ದೃಶ್ಯ ಗಂಡನ ಮನಸಿನಲ್ಲಿ ಅಲ್ಲೊಲ್ಲ ಕಲ್ಲೊಲ್ಲವೆಬ್ಬಿಸಿದೆ. ಅದೇ ಕಾರಣದಿಂದ ಅವಳ ಮೇಲೆ ಇವನು ನಿರಾಸಕ್ತನಾಗಿರುವಂತೆ ಕಾಣುತ್ತದೆ.

ಅವನ ಹೆಂಡತಿ ಮಕ್ಕಳಿಲ್ಲದ ಕಾರಣವೊಡ್ಡಿ ಕೃತಕ ಗರ್ಭಧಾರಣ ಕೇಂದ್ರಕ್ಕೆ ಹೋಗಿ ಮಗುವನ್ನು ಪಡೆಯಲು ನಿರ್ಧರಿಸುತ್ತಾಳೆ. ಕತೆಯ ಕೊನೆಗೆ ಆ ಹೆಂಡತಿ ತನಗೆ ಆ ಚಿತ್ರನಟನ ವೀರ್ಯಾಣುಗಳನ್ನು ಕೊಟ್ಟು ಗರ್ಭವತಿಯಾಗುವಂತೆ ಮಾಡಲು ಸಾಧ್ಯವೇ ಎಂದು ಕೇಳಿ ಗಂಡನಿಗೆ ಬೆಚ್ಚಿ ಬೀಳಿಸುತ್ತಾಳೆ. ಇಲ್ಲಿ ಮದುವೆಯಾಗಿ ದಾಂಪತ್ಯ ಜೀವನ ನಡೆಸುತ್ತಿದ್ದರೂ ಆ ಮಹಿಳೆಯ ಮನಸಿನಲ್ಲಿ ಆ ಚಿತ್ರನಟನೆ ತುಂಬಿಕೊಂಡು ಮಲಗಿದಾಗಲೂ ಅವಳು ಅವನ ಪಕ್ಕ ಮಲಗಿರುವ ಹಾಗೆ ಕಲ್ಪನೆ ಮಾಡಿಕೊಳ್ಳುವ ಹಾಗೆ ಕತೆ ಇದೆ. ಇಲ್ಲಿ ಈ ಕತೆಯ ಬಗ್ಗೆ ಅಶೋಕರವರು ಹೆಚ್ಚು ಹೇಳಿಲ್ಲ. ಈ ಕತೆ ಅತಿ ಸಣ್ಣಕತೆಯ ಪ್ರಕಾರದಲ್ಲಿ ಏನೆಲ್ಲ ಸಾಧ್ಯ ಎಂದು ತೋರಿಸಲು ಉದಾಹರಣೆಯಾಗಿ ಇಲ್ಲಿ ನೀಡಿದ್ದೇನೆ. ಈ ಎರಡು ಪುಟದಲ್ಲಿ ಒಂದು ದೊಡ್ಡ ಕಾದಂಬರಿಯಾಗುವ ಸರಕಿದೆ.  

ಚಿತ್ತಾಲರ ‘ಬೊಮ್ಮಿಯ ಹುಲ್ಲು ಹೊರೆ’ ಕತೆಯಲ್ಲಿ ಮೇಲ್ಜಾತಿಯ ಮಹಿಳೆಯೊಬ್ಬಳು ಬೊಮ್ಮಿಯನ್ನು ಹೇಗೆಲ್ಲ ಶೋಷಣೆ ಮಾಡುತ್ತಾಳೆ ಎಂದು ಚಿತ್ರಿಸುತ್ತದೆ. ನಾಯಿ ಬಾಯಿ ಹಾಕಿಬಿಟ್ಟಿರುವ ಅನ್ನವನ್ನು ಬೊಮ್ಮಿಗೆ ತಿನ್ನಲು ನೀಡುತ್ತಾಳೆ. ಇನ್ನು ಜಿ ಎಸ್ ಸದಾಶಿವರ ‘ಚಪ್ಪಲಿಗಳು’ ಕತೆ ಕೂಡ ಕನ್ನಡದ ಶ್ರೇಷ್ಠ ಅತಿ ಸಣ್ಣಕತೆಗಳ ಸಾಲಿಗೆ ಸೇರುತ್ತದೆ ಎಂದು ಹೇಳಬಹುದು. ರಸ್ತೆಯಲ್ಲಿ ಆಕಸ್ಮಿಕವಾಗಿ ಸಿಕ್ಕ ಎರಡು ಬೇರೆ ಬೇರೆ ಚಪ್ಪಲಿಗಳು ಹೇಗೆ ಒಂದು ಕತೆಯನ್ನು ಹೇಳಲು ಸಹಾಯ ಮಾಡಿವೆ ಎಂದು ತಿಳಿದರೆ ಆಶ್ಚರ್ಯವಾಗುತ್ತದೆ.

ಇನ್ನು ಅಶೋಕರವರು ಪ್ರಖ್ಯಾತ ಉರ್ದು ಕತೆಗಾರ ಸಾದತ್ ಹಸನ್ ಮಾಂಟೊ ಕತೆಯೊಂದನ್ನು ಪ್ರಸ್ತಾಪಿಸಿತ್ತಾರೆ.  ಸಾದತ್ ಹಸನ್ ಮಾಂಟೊ ಭಾರತ ಪಾಕಿಸ್ತಾನ ವಿಭಜನೆಯಾದಾಗ ಮುಂಬೈಯಿಂದ ಲಾಹೋರಿಗೆ ಹೋಗುತ್ತಾನೆ. ಆದರೆ ಅವನು ದೇಶವಿಭಜನೆಯ ಘೋರಚಿತ್ರಣಗಳನ್ನು ಹಸಿಹಸಿಯಾಗಿಯೇ ಚಿತ್ರಿಸಿ ಹಿಂದೂ ಮುಸ್ಲಿಂ ಕೋಮು ಗಲಭೆಗಳು ಹೇಗೆಲ್ಲ ಮಾನವೀಯತೆಯನ್ನೇ ಕಳೆದುಕೊಂಡು ಕ್ರೌರ್ಯವನ್ನು ಪ್ರದರ್ಶಸಿಸುತ್ತಿದ್ದವು ಎಂದು ತೋರಿಸಿದ್ದಾನೆ. ಅವನ ಪ್ರಖ್ಯಾತ ಕತೆಗಳಲ್ಲಿ ಒಂದು ‘ತೋಬಾ ಟೇಕ್ ಸಿಂಗ್’ ಮತ್ತೊಂದು ‘ಮಿಸ್ಟೇಕ್’ ಎಂದು ಹೆಸರಿಸಬಹುದು.

ದೇಶವಿಭಜನೆಯ ವೇಳೆ ನಡೆದ ಪ್ರಮಾದವೊಂದನ್ನಿಟ್ಟುಕೊಂಡು ಈ  ‘ಮಿಸ್ಟೇಕ್’ ಕತೆ ಬರೆದ. ಆದರೆ, ಅವನೆಂತ ಅದ್ಭುತ ಕತೆಗಾರ ಎಂದು ತಿಳಿಸಲು ಆ ಕತೆಯ ಪಾತ್ರಗಳಿಗೆ ಅವನು ಹೆಸರನ್ನು ಕೊಡುವುದಿಲ್ಲ. ಅಲ್ಲಿನ ಒಂದು ಪಾತ್ರ ತನ್ನದಲ್ಲದ ಇನ್ನೊಂದು ಧರ್ಮದ ಪಾತ್ರವೊಂದಕ್ಕೆ ಚೂರಿ ಚುಚ್ಚಿ ಹೊಟ್ಟೆ ಬಗೆದು ಸ್ವಲ್ಪ ಕೆಳಕ್ಕೆ ಚಾಕು ಎಳೆದಾಗ ಆ ಪಾತ್ರದ ಚಡ್ಡಿಯ ಲಾಡಿ ಕಳಚಿ ಗುಪ್ತಾಂಗ ಕಂಡುಬಿಡುತ್ತದೆ.

ಆಗ ಚೂರಿ ಚುಚ್ಚಿದ ಪಾತ್ರ ಅಯ್ಯೋ ಎಂತ ಕೆಲಸವಾಯ್ತು ಎಂದು ಮರಗುತ್ತದೆ. ಅದರ ಪಶ್ಚಾತಾಪವಿರುವುದು ಕೊಲೆ ಮಾಡಿದ ಕಾರಣಕ್ಕೆ ಅಲ್ಲ. ನನ್ನದೇ ಧರ್ಮದ ವ್ಯಕ್ತಿಯನ್ನು ಕೊಂದುಬಿಟ್ಟೆನಲ್ಲ ಎಂಬ ಭಾವದಿಂದ. ಇದು ಕೋಮುಗಲಭೆಯ ಕ್ರೌರ್ಯದ ಪರಮಾವಧಿಯನ್ನು ತೋರುತ್ತದೆ. ಇಲ್ಲಿ ಕೊಂದವನು ಮುಸ್ಲಿಂ ವ್ಯಕ್ತಿಯೇ ಅಥವಾ ಹಿಂದೂವೇ ಎಂದು ಎಷ್ಟು ಸಲ ಓದಿದರೂ ತಿಳಿಯುವುದಿಲ್ಲ.

ತೋಬಾ ಟೇಕ್ ಸಿಂಗ್ ಕತೆಯ ಮುಖ್ಯ ಪಾತ್ರವೆಂದರೆ ಬಿಶನ್ ಸಿಂಗ್ ಎಂಬ ಸಿಖ್ ವ್ಯಕ್ತಿಯದು. ಆತನಿಗೆ ದೇಶವಿಭಜನೆಯ ನಂತರ ಪಾಕಿಸ್ತಾನದಲ್ಲಿರುವುದೂ ಬೇಕಿರಲಿಲ್ಲ, ಭಾರತದಲ್ಲಿರುವುದೂ ಬೇಕಿರಲಿಲ್ಲ. ಇದ್ದರೆ ತೋಬಾ ಟೇಕ್ ಸಿಂಗ್‌ ಎಂಬ ತನ್ನ ಹಳ್ಳಿಯಲ್ಲಿಯೇ ಇರಬೇಕೆನ್ನುವುದು ಅವನ ಉದ್ದೇಶ. ಆ ಹಳ್ಳಿ ಈಗ ಪಾಕಿಸ್ತಾನದ ಪಂಜಾಬಿನಲ್ಲಿದ್ದರೂ ಕಥಾನಾಯಕ ಅದು ಎರಡು ದೇಶಗಳಿಗೆ ಸೇರಿಲ್ಲ ಎಂಬ ಭಾವನೆ ಇಟ್ಟುಕೊಂಡಿದ್ದ. ಒಂದು ದೇಶ ಎರಡಾಗಿ ವಿಭಜನೆಯಾದ ಮೇಲೆ ಭಾರತಕ್ಕೆ ಹೋಗಬೇಕೇ, ಇಲ್ಲವೇ ಪಾಕಿಸ್ತಾನದಲ್ಲಿಯೇ ಉಳಿಯಬೇಕೆ  ಎಂಬ ಗೊಂದಲದಲ್ಲಿ ಸೂಕ್ತ ಆಯ್ಕೆ ಮಾಡಲಾರದೆ ತೊಳಲುವ ಲಾಹೋರ್ ನಗರದಲ್ಲಿನ ದುರ್ದೈವಿ ಹುಚ್ಚರ ತಂಡದ ಚಿತ್ರಣವೇ ಈ ಕತೆಯ ಮುಖ್ಯ ವಸ್ತು.

ಇದು ದೇಶ ವಿಭಜನೆಯಿಂದ ಹುಟ್ಟಿಕೊಂಡ ಸಮಸ್ಯೆಗಳಿಂದ ಹಲವರು ಹುಚ್ಚರಾಗಿ ಒದ್ದಾಡುತ್ತಿದ್ದಾಗ ನಡೆದ ಅಸಂಗತತೆಗಳ ವಿಡಂಬನಾತ್ಮಕ ಚಿತ್ರಣ ಎಂದು ಹೇಳಬಹುದು. ದೇಶವನ್ನು ಇಬ್ಭಾಗ ಮಾಡಿದವರು ಬ್ರಿಟಿಷರು. ಆದರೆ ಹಿಂದೂ, ಮುಸ್ಲಿಂ ಮತ್ತು ಸಿಖ್ಖರಿಗೆ ಇದರಿಂದ ಹುಟ್ಟಿಕೊಂಡ ಸಮಸ್ಯೆ ಅಷ್ಟಿಷ್ಟಲ್ಲ. ವ್ಯಕ್ತಿಯೊಬ್ಬ ತನ್ನ ನಿಷ್ಠೆಯನ್ನು ಒಂದು ಸೀಮಿತ ಭೌಗೋಳಿಕ ಪ್ರದೇಶಕ್ಕೆ ಮೊಟಕುಗೊಳಿಸುವುದು ಎಷ್ಟು ಅವಿವೇಕದ ಕೆಲಸ ಎಂದು ಓದುಗರಿಗೆ ಯೋಚಿಸುವಂತೆ ಮಾಡುತ್ತದೆ ಈ ಅದ್ಭುತ ಕತೆ.  

ಎರಡು ದೇಶಗಳ ಸೃಷ್ಟಿಯ ಜೊತೆಗೆ ಹುಟ್ಟಿಕೊಂಡ ಕೋಮುಗಲಭೆ, ಲೂಟಿ, ಹತ್ಯಾಕಾಂಡಗಳ ಹಸಿ ಹಸಿ ಚಿತ್ರಣವನ್ನು ಸಾಹಿತ್ಯದ ಅದ್ಭುತ ಮತ್ತು ಶಾಶ್ವತ ಕತೆಗಳನ್ನಾಗಿ ಬಿಟ್ಟು ಹೋದವನು ಸಾದತ್ ಹಸನ್ ಮಾಂಟೊ. ಒಂದು ಅತಿ ಸಣ್ಣ ಕತೆ ದೊಡ್ಡ ಕಾದಂಬರಿಯ ಚಿತ್ರಣವನ್ನು ನಮ್ಮ ಮುಂದೆ ನೀಡಬಹುದು ಎಂಬುದಕ್ಕೆ ಮಾಂಟೋನ ಈ ಎರಡು ಕತೆಗಳನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಬಹುದು.  

ಈ ಪುಸ್ತಕ ಹೊಸದಾಗಿ ಬರೆಯಬೇಕೆಂದಿರುವ ಹೊಸ ಲೇಖಕರಿಗೆ ಸಾಹಿತ್ಯದ ವಿದ್ಯಾರ್ಥಿಗಳಿಗೆ ತುಂಬಾ ಸಹಾಯ ಮಾಡುತ್ತದೆ. ಸಾಮಾನ್ಯ ಓದುಗರಿಗೆ ಕತೆಗಳನ್ನ ಹೇಗೆ ಓದಬೇಕು ಎಂಬ ವಿಶ್ಲೇಷಣೆಯನ್ನು ನೀಡುತ್ತದೆ. ಈ ಪುಸ್ತಕದ ಓದಿದ ಮೇಲೆ ಹೊಸದೇ ಆಗಿರುವ ಸಾಹಿತ್ಯ ಪ್ರಕಾರದ ಬಗ್ಗೆ ನಾವು ಯೋಚಿಸಿಯೇ ಇರಲಿಲ್ಲವಲ್ಲ ಎಂಬ ಭಾವನೆ ಮೂಡಿದರೂ ಆಶ್ಚರ್ಯವಿಲ್ಲ. ನಮ್ಮ ಕಣ್ಣ ಮುಂದೆ ನಡೆಯುವ ಅಥವಾ ಕಾಣುವ ಘಟನೆಗಳನ್ನು ಬೇರೊಂದು ಆಯಾಮದಲ್ಲಿ ನೋಡುವಂತಾಗುತ್ತದೆ.

ಇಂತಹ ಒಂದು ಅದ್ಭುತ ಕೃತಿಯನ್ನು ಬರೆದು ಸಾಹಿತ್ಯ ಪ್ರೇಮಿಗಳಿಗೆ ಹೊಸ ಆಯಾಮವನ್ನು ತೋರಿಸಿರುವ ಟಿ ಪಿ ಅಶೋಕ ಅವರಿಗೆ ಅಭಿನಂದನೆಗಳು.

January 19, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: