ಇದು ಕಾಡುವ ಪ್ರವಾಸ ಕಥನ…

ಬಿ ವಿ ಭಾರತಿ ಅವರ ಕಾಡುವ ಪ್ರವಾಸ ಕಥನ ‘ನಕ್ಷತ್ರಗಳ ಸುಟ್ಟ ನಾಡಿನಲ್ಲಿ..’ ಈಗ ಮಾರುಕಟ್ಟೆಯಲ್ಲಿದೆ.

ಪೋಲೆಂಡ್ ದೇಶದಲ್ಲಿ ನಾಜಿಗಳು ನಡೆಸಿದ ಕ್ರೌರ್ಯದ ಕಥನ ಇದು.

ಈ ಕೃತಿಯ ನೆಪದಲ್ಲಿ ಜಿ ಎನ್ ಮೋಹನ್ ಅವರು ಬರೆದ ಮಾತುಗಳು ಇಲ್ಲಿವೆ-

ಈ ಕೃತಿಯನ್ನು ಬಹುರೂಪಿ ಪ್ರಕಟಿಸಿದೆ.

ಕೃತಿಯನ್ನು ಕೊಳ್ಳಲು ಈ ಲಿಂಕ್ ಒತ್ತಿ-

ಜಿ ಎನ್ ಮೋಹನ್

ಒಂದು ಚಿಟ್ಟೆ ಬಂದು ಕೂತಿತು..

ನಾನು ಕಡಲ ಬದಿ ಇದ್ದ ಮನೆಯಲ್ಲಿ, ವಿಶಾಲವಾದ ತೋಟದ ಮಧ್ಯೆ, ಹಕ್ಕಿಗಳ ಕುಕಿಲು, ಸಂಭ್ರಮದ ಹಸಿರಿನ ಮಧ್ಯೆ ಆ ಸಿನೆಮಾವನ್ನು ನೋಡುತ್ತಾ ಕುಳಿತಿದ್ದೆ. ಅದು – ಲೈಫ್ ಈಸ್ ಬ್ಯೂಟಿಫುಲ್. ಒಂದು ಪುಟ್ಟ ಸಂಸಾರದ ಸುಂದರ ಕಥೆ ಎಂದುಕೊಂಡು ವೀಕ್ ಎಂಡ್ ನ ರಿಲ್ಯಾಕ್ಸೇಷನ್ ಗಾಗಿ ಹಚ್ಚಿದ ಸಿನೆಮಾ ಅದು.

ಸಿನೆಮಾ ಒಂದಷ್ಟು ಮುಂದೆ ಹೋಗಿತ್ತು ಅಷ್ಟೇ.. ನನ್ನ ಉಸಿರು ಬಿಗಿ ಹಿಡಿಯಿತು. ನಾಜಿಗಳು ಪರದೆಯ ತುಂಬೆಲ್ಲಾ ಟಕ ಟಕ ಬೂಟಿನ ಸದ್ದು ಮೊಳಗಿಸತೊಡಗಿದರು. ಅವರ ಲಾಠಿಗಳಿಗೆ ಸಿಕ್ಕಿ ಹಾಕಿಕೊಳ್ಳದವರಿಲ್ಲ. ಬೀದಿ ಬೀದಿಯಲ್ಲಿ ಗುಳೆ ಹೊರಟವರ ಆರ್ತನಾದ, ಮಕ್ಕಳ ಕಣ್ಣಲ್ಲಿ ಬರೀ ಪ್ರಶ್ನೆಗಳು, ದೊಡ್ಡವರ ಕಣ್ಣಲ್ಲಿ ಆತಂಕ..

ತಮ್ಮ ಮನೆಯಲ್ಲಿದ್ದ ಅಮೂಲ್ಯವಾದ ನೆನಪನ್ನೆಲ್ಲ ಒಂದು ಪುಟ್ಟ ಸೂಟ್ ಕೇಸ್ ನೊಳಗೆ ಪೇರಿಸಿಟ್ಟುಕೊಂಡ ಅಸಂಖ್ಯಾತ ಕುಟುಂಬಗಳು ಮುಂದೆ ಎಲ್ಲಿಗೆ ಎನ್ನುವುದೇ ಗೊತ್ತಿಲ್ಲದಂತೆ ನಾಜಿಗಳ ಸರ್ಪಕಾವಲಿನಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.

ನನ್ನ ಉದ್ವೇಗ ಹೆಚ್ಚಾಗಲಾರಂಭಿಸಿತು. 

ಈಗ ಎಲ್ಲರೂ ಶಿಬಿರ ಹೊಕ್ಕಿದ್ದಾರೆ. ದೊಡ್ಡವರನ್ನು, ಮಕ್ಕಳನ್ನು ಬೇರೆ ಮಾಡಿದ್ದಾರೆ. ಮಕ್ಕಳ ಕೈಗಳಲ್ಲಿದ್ದ ಗೊಂಬೆಗಳನ್ನು ಕಿತ್ತುಕೊಂಡಿದ್ದಾರೆ. ದೊಡ್ಡವರ ಜೊತೆ ಇದ್ದ ಅಮೂಲ್ಯ ನೆನಪುಗಳ ಸೂಟ್ ಕೇಸುಗಳನ್ನೂ.. ಎಲ್ಲರನ್ನೂ ಒಂದೆಡೆ ದಬ್ಬಿ ವಿಷದ ವಾಯುವನ್ನು ಹರಡುತ್ತಿದ್ದಾರೆ. ಅಯ್ಯೋ ಆಕ್ರಂದನ, ಚೀರಾಟ, ಅಳು.. ಮತ್ತೊಂದು ಗಂಟೆಯಲ್ಲಿ ಎಲ್ಲವೂ ಸ್ತಬ್ಧ. ಇರಿಯುವ ಮೌನ. ಸಾಸಿವೆ ಬಿದ್ದರೂ ಈಗ ಸದ್ದಾಗುತ್ತದೆ.

ಆಗಲೇ, ಆಗಲೇ ಈ ಚಿಟ್ಟೆ ನನ್ನ ಮನೆಯ ಅಂಗಳದಿಂದ ಕಿಟಕಿ ಹೊಕ್ಕು ನೋಡನೋಡುತ್ತಿರುವಂತೆಯೇ ಅದೇ ಟಿವಿಯ ಪರದೆಯ ಮೇಲೇ ಕುಳಿತುಬಿಡಬೇಕೆ..?

ಟಿವಿ ಪೆಟ್ಟಿಗೆಯೊಳಗೆ ಅಸಂಖ್ಯಾತ ದೇಹಗಳು ಬೋರಲು ಬಿದ್ದಿವೆ. ಮಕ್ಕಳು ಆವರೆಗೂ ಎದೆಗಪ್ಪಿ ಆಟವಾಡುತ್ತಿದ್ದ ಗೊಂಬೆಗಳೆಲ್ಲವೂ ಅನಾಥವಾಗಿ ಹೋಗಿವೆ. ಊಟದ ಬಟ್ಟಲುಗಳ ರಾಶಿಯೇ ಎಲ್ಲರನ್ನೂ ನಿಟ್ಟುಸಿರಿಗೆ ತಳ್ಳಿದೆ. ಇಂತ ಸಮಯದಲ್ಲಿ ಈ ಚಿಟ್ಟೆ ಹೀಗೆ ಅದೇ ಟಿವಿಯ ಪರದೆಯ ಮೇಲೆ ಕುಳಿತು ಬಿಡಬೇಕೇ 

ಯಾವುದನ್ನು ನಂಬುವುದು ಆ ಕ್ರೌರ್ಯದ ಕಥೆಯನ್ನೇ.. ಅಥವಾ ಆ ಚಿಟ್ಟೆಯ ಲೋಕವನ್ನೇ.. 

…ಯಾತನಾ ಶಿಬಿರದಲ್ಲಿ
ಈತನಿಗೆ ಐದು ಬೇಕಿಲ್ಲ, ನಾಲ್ಕು
ಉಹುಂ ಒಂದೇ ಸಾಕು
ಎಂದು ಗುಂಡು ಹಾರಿಸಲು
ಸಜ್ಜಾಗಿ ನಿಂತಿದ್ದಾಗ
ಎಲ್ಲಿತ್ತೊ ಆ ಒಂದು ಚಿಟ್ಟೆ
ಹಾರುತ್ತಾ ಹಾರುತ್ತಾ ಬಂದು
ಟಿವಿ ಪರದೆಯ ಮೇಲೆ
ಕುಳಿತೇಬಿಟ್ಟಿತು.

ಕೈಯಲ್ಲಿ ಬಂದೂಕು ಹಿಡಿದವರು
ಗುಂಡುಹಾರಿಸಿದರೋ ಬಿಟ್ಟರೋ
ಯಾತನಾಶಿಬಿರದ ನಿಟ್ಟುಸಿರು
ಹೊರಬಿತ್ತೋ ಇಲ್ಲವೋ
ಆ ಪುಟ್ಟ ಕಂಗಳ ಹುಡುಗನ
ಎದೆಯಲ್ಲಿ ಹೂ ಅರಳಿತೋ ಇಲ್ಲವೋ
ಯಾರಿಗೆ ಗೊತ್ತು
ಚಿಟ್ಟೆ ಬಂದು ಕುಳಿತದಷ್ಟೇ ಗೊತ್ತು…

ಒಳಗಿದ್ದ ಕ್ರೌರ್ಯದ ಬದುಕು, ಹೊರಗಿದ್ದ ಚಿಟ್ಟೆಯ ನವಿರು ಈ ಎರಡರ ತಾಕಲಾಟದಲ್ಲಿ ನಾನು ಸಿಕ್ಕಿಹೋದೆ. ಅದು ಅಂದಿನ ಕಥೆಯಲ್ಲ. ಈ ತಾಕಲಾಟ ಪ್ರತೀ ಪ್ರಭುತ್ವವೂ ತನ್ನ ಕೋರೆ ಹಲ್ಲುಗಳನ್ನು ಪ್ರದರ್ಶಿಸುತ್ತಿರುವ ಎಲ್ಲ ಸಮಯದಲ್ಲೂ ನನ್ನನ್ನು ಕಾಡುತ್ತಲೇ ಇದೆ. 

ಧರ್ಮ, ಜನಾಂಗದ ಶ್ರೇಷ್ಠತೆಯ ವ್ಯಸನಕ್ಕೆ ಸಿಕ್ಕು ಜಗತ್ತನ್ನು ಹೊಸಕಿ ಹಾಕಿದವರ ಕ್ರೌರ್ಯ ನಮ್ಮ ಕಣ್ಣಂಚು ಒದ್ದೆಯಾಗುವಂತೆ ಮಾಡುತ್ತದೆ. ಎದೆ ಭಾರವಾಗುವಂತೆ ಮಾಡಿವೆ.

ಇದು ಅಲ್ಲೆಲ್ಲೋ ನಡೆದ ಕಥೆ ಎಂದು ನಾವು ಸಮಾಧಾನಪಟ್ಟುಕೊಳ್ಳುತ್ತಿರುವಾಗಲೇ ಇವಿವೇ ಸಂಗತಿಗಳು ನಮ್ಮ ಮನೆ ಬಾಗಿಲುಗಳಿಗೂ ಬಂದು ನಿಂತಿವೆ. 

ಫಾದರ್ ನೆಮ್ಯೂಲರ್ ಬರೆದದ್ದು ಇದನ್ನೇ  ತಾನೇ-  

…ಅವರು ಮೊದಲು ಯಹೂದಿಗಳನ್ನು ಹುಡುಕಿಕೊಂಡು ಬಂದರು ನಾನು ಬಾಯಿಬಿಡಲಿಲ್ಲ ಯಾಕೆಂದರೆ ನಾನು ಯಹೂದಿಯಾಗಿರಲಿಲ್ಲ,

ನಂತರ ಅವರು ಕೆಥೊಲಿಕ್ಕರನ್ನು ಹುಡುಕಿಕೊಂಡು ಬಂದರು
ನಾನು ಮಾತನಾಡಲಿಲ್ಲ
ಯಾಕೆಂದರೆ ನಾನು ಕೆಥೊಲಿಕ್ಕನಾಗಿರಲಿಲ್ಲ

ಕೊನೆಗೆ ಅವರು ನನ್ನನ್ನೇ ಹುಡುಕಿಕೊಂಡು ಬಂದರು 
ಆಗ ನನಗಾಗಿ ಮಾತನಾಡುವವರು 
ಯಾರೂ ಇರಲಿಲ್ಲ…

–ಭಾರತಿ ಬಿ ವಿ ಅವರ ‘ನಕ್ಷತ್ರಗಳನ್ನು ಸುಟ್ಟ ನಾಡಿನಲ್ಲಿ’ ಓದಿ ನಾನು ಅಂದು ಬೆಚ್ಚಿಬಿದ್ದಂತೆಯೇ ಬೆಚ್ಚಿಬಿದ್ದಿದ್ದೇನೆ. ಮಾನವೀಯತೆಯನ್ನು ಹೊಸಕಿ ಹಾಕಿಬಿಡುವ ಕ್ರೌರ್ಯ ನನ್ನೆದೆಯೊಳಗೆ ನಿಟ್ಟುಸಿರನ್ನು ಮತ್ತೆ ಮತ್ತೆ ಉಕ್ಕಿಸುತ್ತಲೇ ಇದೆ.

ಭಾರತಿ ‘ಬಹುರೂಪಿ’ಗೆ ‘ಕಿಚನ್ ಕವಿತೆಗಳು’ ಬರೆದಾಗ, ಅದು ಮತ್ತೆ ಮತ್ತೆ ಮುದ್ರಿತವಾಗಿ ಯಶಸ್ಸು ಕಂಡಾಗ ಸಂಭ್ರಮಪಟ್ಟೆವು. ಅದೇ ಭಾರತಿ ಈ ಬಾರಿ ತಮ್ಮ ಪೋಲೆಂಡ್ ಪ್ರವಾಸ ಕಥನವನ್ನು ನಮ್ಮ ಕೈಗಿಟ್ಟಾಗ ತಲ್ಲಣಿಸಿಹೋಗಿದ್ದೆವು. ಭಾರತಿಗೆ ತಮ್ಮದೇ ಆದ ವಿಶಿಷ್ಟ ಶೈಲಿಯಿದೆ. ಬ್ರೆಕ್ಟ್ ನ ಥಿಯರಿಯಂತೆ ಯಾರನ್ನೂ ಕಡು ದುಃಖದಲ್ಲಿ ದೂಡದೆ ಅದರಿಂದ ಆಗೀಗ ಹೊರ ಬರುವಂತೆ ಮಾಡುತ್ತಾರೆ. ಆ ಮೂಲಕ ಆ ನೋವನ್ನು ಸರಿಯಾಗಿ ವಿಶ್ಲೇಷಿಸುವ, ಅದಕ್ಕೆ ಎದುರಾಗಿ ಒಂದು ಮಾನವೀಯತೆಯ ದಾರಿ ತುಳಿಯುವಂತೆ ಮಾಡುತ್ತಾರೆ. 

ಭಾರತಿ ನಾಜಿಗಳ ಕ್ರೌರ್ಯವನ್ನು ಅರಿಯಲೆಂದೇ ಪೋಲೆಂಡ್ ಪ್ರವಾಸವನ್ನು ಆಯ್ಕೆ ಮಾಡಿಕೊಂಡರಲ್ಲ ಅದು ನನಗೆ ಅತಿ ಮುಖ್ಯ ಅನಿಸುತ್ತದೆ. ಒಂದು ಕ್ರೌರ್ಯದ ಕಥೆ ಹೇಳುತ್ತಲೇ ಬದುಕು ಸಾಗಬೇಕಾದ ದಾರಿ ತೋರಿಸುತ್ತಾರಲ್ಲ ಅದು ಮುಖ್ಯ. ಥೇಟ್ ಚಿಟ್ಟೆಯೊಂದು ಟಿ ವಿ ಪರದೆಯ ಮೇಲೆ ಕೂತ ಹಾಗೆ. 

..ಯಾತನಾ ಶಿಬಿರದಲ್ಲಿ ಹೇಳದೆ ಕೇಳದೆ 
ಬಂದ ಒಂದು ಚಿಟ್ಟೆ ಏನೆಲ್ಲಾ ಮಾಡಿತು 
ಎಂದು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದ
ನನಗೆ ಅವಳಿಗೆ ಅನಿಸಿದ್ದು ಇಷ್ಟೇ:

ಚಿಟ್ಟೆ ಪರದೆಯ ಮೇಲೆ ಕುಳಿತಿದೆಯೋ 
ಅಥವಾ ಪರದೆಯ ಒಳಗೆ ಕುಳಿತು 
ಯಾತನಾ ಶಿಬಿರದಲ್ಲಿರುವ ನಮ್ಮನ್ನು 
ನೋಡುತ್ತಿದೆಯೋ?..  

‍ಲೇಖಕರು Avadhi

January 19, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: