ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಣ್ಣನ ನೆನಪು – 2

ಎಚ್ಎಸ್ ವೆಂಕಟೇಶ ಮೂರ್ತಿ ಅವರ ಎರಡನೇ ಮಗ ಸುಧೀರ ಹೊದಿಗೆರೆ. ಇವರು ಪ್ರತಿಷ್ಠಿತ ಐಟಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

ಸುಧೀರ ಹೊದಿಗೆರೆ ತಮ್ಮ ತಂದೆಯ ಕೆಲವು ನೆನಪುಗಳನ್ನು ಇಲ್ಲಿ ಮೆಲುಕು ಹಾಕಿದ್ದಾರೆ.

ಮುಂದುವರೆದ ಭಾಗ

-ಸುಧೀರ ಹೊದಿಗೆರೆ

ಅಣ್ಣನವರ ಜೊತೆ ಹೊರಗೆ ಹೋಗುವುದು ಎಂದರೆ ಕಾರು ಚಲಾಯಿಸುವುದಕ್ಕಿಂತ ಹೆಚ್ಚು ಒಂದು ಸಾಹಸ ಯಾತ್ರೆಯೇ ಆಗಿರುತ್ತಿತ್ತು. ಸ್ಟೀರಿಂಗ್ ನನ್ನ ಕೈಯಲ್ಲಿದ್ದರೂ, ನಿಜವಾದ ಡ್ರೈವರ್ ಅವರ ಕಣ್ಣುಗಳೇ!

“ಏ ಸುಧೀ… ಸ್ವಲ್ಪ ಕಾರು ನಿಲ್ಲಿಸು!” ಎಂದು ಅವರ ಧ್ವನಿ ಬರುತಿದ್ದಂತೆಯೇ, ಮುಂದಿನ ಕ್ಷಣವೇ ಇನ್ನೊಂದು ದೃಶ್ಯ ಅವರ ಕಣ್ಣಿಗೆ ಬೀಳುತ್ತಿತ್ತು, “ಅಲ್ಲಿ ನೋಡು, ಹಲಸಿನ ಹಣ್ಣು ಎಷ್ಟು ಚೆನ್ನಾಗಿದೆ!” ಮತ್ತೆ ತಕ್ಷಣವೇ, “ನಿಲ್ಲಿಸು… ನಿಲ್ಲಿಸು… ಅಲ್ಲಿ ಫ್ರೆಶ್ ಹಸಿರು ಸೊಪ್ಪು!”

ಹೀಗೆ ಹಣ್ಣು-ತರಕಾರಿ, ಸೊಪ್ಪು-ಸದೆ, ಕಡಲೆ ಗಿಡ, ಚೀಪೆಕಾಯಿ ….ಅವರ ಕಣ್ಣುಗಳಿಗೆ ರಸ್ತೆ ಒಂದು ಮಾರುಕಟ್ಟೆಯಂತಾಗಿಬಿಡುತ್ತಿತ್ತು. ಕಾರು ಮುಂದೆ ಸಾಗುವುದಕ್ಕಿಂತ ಹೆಚ್ಚು ನಿಲ್ಲುವ ಅಭ್ಯಾಸವೇ ಬೆಳೆದುಕೊಂಡಿತ್ತು.

ನಾನು ಅಸಹನೆಯಿಂದ ಗೊಣಗುತ್ತಿದ್ದೆ:

“ನೀವು ತಕ್ಷಣ ನಿಲ್ಲಿಸು ಅಂದ್ರೆ ಹೇಗೆ? ಇಲ್ಲಿ ಪಾರ್ಕಿಂಗ್ ಜಾಗವೇ ಇಲ್ಲ. ಹಿಂದೆ ಬರುವವರು ಕೂಗಾಡ್ತಾರೆ!”

ಆದರೆ ಆ ಮಾತುಗಳು ಅವರ ಲೋಕಕ್ಕೆ ತಲುಪಲೇ ಇಲ್ಲ. ಅವರು ತಮ್ಮದೇ ಲೋಕದಲ್ಲಿ, ತಮ್ಮದೇ ಲಯದಲ್ಲಿ:

“ಬರುವುದೆಲ್ಲ ಬರಲಿ… ಹೋಗುವುದೆಲ್ಲ ಹೋಗಲಿ… ನಾನು ಇರುವಂತೆ ಇದ್ದರೆ ಸಾಕು,” ಎಂದು ನಗುತ್ತಿದ್ದರು.

ಅವರ ಸ್ನೇಹಿತರಿಗೆ ಇದು ಚೆನ್ನಾಗಿ ಗೊತ್ತಾಗಿತ್ತು. ಅವರು ಹಾಸ್ಯ ಮಾಡುತ್ತಿದ್ದರು:

“ಮೂರ್ತಿ ಜೊತೆ ಹೋಗೋಣ ಅಂದ್ರೆ ಕಾರಿನ ಕಿಟಕಿಗಳಿಗೆ ಕಪ್ಪು ಬಟ್ಟೆ ಹಾಕಿಕೊಂಡೇ ಹೋಗಬೇಕು. ಇಲ್ಲ ಅಂದ್ರೆ ಯಾವ ಕಾರ್ಯಕ್ರಮಕ್ಕೂ ಸರಿಯಾದ ಸಮಯಕ್ಕೆ ತಲುಪೋದೇ ಇಲ್ಲ!”

ಆದರೆ ಆ ನಗುಮಾತುಗಳ ಹಿಂದೆ ಒಂದು ಸತ್ಯ ಇತ್ತು . ಅಣ್ಣನವರು ಜೀವನವನ್ನು ಅವಸರದಲ್ಲಿ ಅಲ್ಲ , ಆಸಕ್ತಿಯಿಂದ ನೋಡುತ್ತಿದ್ದರು. ಪ್ರತಿಯೊಂದು ನೋಟವು ಅವರಿಗೆ “ಕ್ಷಣವನ್ನು ನಿಲ್ಲಿಸು” ಎಂದು ಹೇಳುತ್ತಿದ್ದಂತಿತ್ತು. ಅವರಿಂದ ಕಲಿಯಬೇಕಾದದ್ದು ವೇಗವಲ್ಲ, ಗಮನ. ಅವರ ಪ್ರಕಾರ ಜೀವನದಲ್ಲಿ ಎಲ್ಲವೂ ಗುರಿಯತ್ತ ಓಡುವುದಲ್ಲ; ಕೆಲವೊಮ್ಮೆ ದಾರಿಯಲ್ಲೇ ನಿಂತು ನೋಡುವುದೂ ಬದುಕಿನ ಸೌಂದರ್ಯ!

**********

ಮನೆಯಲ್ಲಿ ಒಂದಾದರೂ ಹೆಣ್ಣುಮಗು ಇರಬೇಕೆಂಬುದು ಅವರ ಹೃದಯದ ನಿಶ್ಶಬ್ದ ಆಸೆಯಾಗಿತ್ತು. ಆದರೆ ಜೀವನ ತನ್ನದೇ ರೀತಿಯಲ್ಲಿ ಉತ್ತರ ನೀಡಿತು—ಒಂದರ ಹಿಂದೆ ಒಂದು ನಾಲ್ಕು ಗಂಡು ಮಕ್ಕಳು. ಆ ಕನಸು ಸಾದ್ಯವಾಗದೇ ಉಳಿದಂತೆ ಕಂಡರೂ, ಅವರ ಪ್ರೀತಿಯ ದಾರಿ ಮಾತ್ರ ಬದಲಾಗಲಿಲ್ಲ. ಮನೆಯಲ್ಲಿ ಬಂದ ನಾಲ್ಕು ಸೊಸೆಯರನ್ನೇ ಅವರು ತಮ್ಮ ಹೆಣ್ಣು ಮಕ್ಕಳಂತೆ ಸ್ವೀಕರಿಸಿದರು. ಆ ಸಂಬಂಧವು ಕೇವಲ ಹೆಸರುಮಾತ್ರದಲ್ಲಲ್ಲ, ಒಂದು ತಂದೆಯ ಮಮತೆಯಂತೆ ಆಳವಾಗಿ ಬೆಳೆಯಿತು. ಸೊಸೆಯರೂ ಕೂಡ ಅವರನ್ನು ತಮ್ಮ ತಂದೆಯಂತೆ ನೋಡಿಕೊಂಡು, ಆ ಬಂಧವನ್ನು ಜೀವನಪೂರ್ತಿ ಉಳಿಸಿಕೊಂಡರು.

ಆಗ ಬಂದ ಒಂದು ಬೆಳಕು, ನನ್ನ ಮಗಳು ಸೌಖ್ಯ. ಅವರ ಜೀವನದಲ್ಲೇ ಮೊದಲ ಮೊಮ್ಮಗಳು… ಅದಕ್ಕಿಂತಲೂ ಹೆಚ್ಚು, ಅವರ ಕನಸಿನ ಹೆಣ್ಣುಮಗು. ಆ ಕ್ಷಣದಿಂದ ಅವರ ಸಂತೋಷಕ್ಕೆ ಅಳತೆ ಇರಲಿಲ್ಲ. ಪ್ರತಿದಿನವೂ ಅವರ ಪಯಣವೇ ಬೀಗರ ಮನೆಯತ್ತ, ಮೊಮ್ಮಗಳನ್ನೊಮ್ಮೆ ನೋಡದೆ ದಿನವೇ ಪೂರ್ಣವಾಗದಂತೆ.

ಅವಳ ಬಳಿ ಕುಳಿತುಕೊಳ್ಳುವುದು, ಅವಳ ನಗು ನೋಡುತ್ತಲೇ ಕಾಲ ಕಳೆಯುವುದು ; ಅದು ಅವರ ದಿನಚರಿ, ಅವರ ಧ್ಯಾನ. “ತಡ ಆಯಿತು, ಇನ್ನು ಮನೆಗೆ ಹೋಗೋಣ” ಎಂದು ಅಮ್ಮ ಎಬ್ಬಿಸುವವರೆಗೂ ಅವರು ಅಲ್ಲೇ ಮೌನವಾಗಿ ನೆಲಸುತ್ತಿದ್ದರು. ಆ ಮೌನದಲ್ಲೇ ಅನೇಕ ಪದ್ಯಗಳು ಹುಟ್ಟಿದವು “ಸೋನಿ ಪದ್ಯಗಳು”

ಡಾ. ಜಿ.ಎಸ್.ಎಸ್. ಅವರು ಅವುಗಳನ್ನು “ಮಗು ಪದ್ಯಗಳು” ಎಂದು ಪ್ರೀತಿಯಿಂದ ನಾಮಕರಣ ಮಾಡಿದರು. ಆ ಪದ್ಯಗಳಲ್ಲಿ ಆತಂಕವಿತ್ತು, ಆದರೆ ಅದಕ್ಕಿಂತ ಹೆಚ್ಚಾಗಿ ಒಂದು ತಾತನ ಹೃದಯದ ಪ್ರಾರ್ಥನೆ ಇತ್ತು. ಮೊಮ್ಮಗು ಹುಟ್ಟಿದ ಕ್ಷಣದಲ್ಲಿ ಅವರು ಬರೆದ ಸಾಲುಗಳು ಇಂದಿಗೂ ಹೃದಯವನ್ನು ತಟ್ಟುತ್ತವೆ:

“ಎಲ್ಲರಿಗಿಂತ ನೀನು ಚೆಲುವೆಯಾಗಿರಬೇಕಿಲ್ಲ;

ಎಲ್ಲರಿಗಿಂತ ನೀನು ಜಾಣೆಯಾಗಿರಬೇಕಿಲ್ಲ;

ಎಲ್ಲರಿಗಿಂತ ನೀನು ಬಲಶಾಲಿಯಾಗಿರಬೇಕಿಲ್ಲ;

ಎಲ್ಲರಂತೆ ನೀನಿದ್ದರೆ ಸಾಕು—ಗುಲಗಂಜಿ ಹೆಚ್ಚಲ್ಲ, ಗುಲಗಂಜಿ ಕಡಿಮೆ ಅಲ್ಲ;

ಹತ್ತು ಮಕ್ಕಳಂತೆ ನೀನಿದ್ದರೆ ಸಾಕು…”

ಆ ಮಾತುಗಳಲ್ಲಿ ಕೇವಲ ಒಬ್ಬ ಅಜ್ಜನ ಪ್ರೀತಿ ಮಾತ್ರ ಇರಲಿಲ್ಲ! ಒಂದು ಪೀಳಿಗೆಯ ಮೃದು ಕನಸು, ನಿಸ್ವಾರ್ಥ ಮಮತೆ, ಮತ್ತು “ಸಂಪೂರ್ಣತೆಯಲ್ಲ, ಸ್ವೀಕಾರವೇ ಸಾಕು” ಎನ್ನುವ ಜೀವನದ ತತ್ವ !

**********

“ಬುದ್ಧ ಚರಣ” ಅಣ್ಣನವರ ಮಹಾಕಾವ್ಯ.  ಅದರ ರಚನೆ ಪ್ರಾರಂಭವಾಗಿ  ಸುಮಾರು 20 ವರ್ಷಗಳ ಕಳೆದು ಹೋಗಿದ್ದವು. ಅಣ್ಣ ಬುದ್ಧ ಕಾವ್ಯವನ್ನು  ಪೂರ್ಣಗೊಳಿಸುತ್ತಾರೆ ಎಂಬ ನಂಬಿಕೆ ನಮ್ಮಲ್ಲಿ ಕಡಿಮೆಯಾಗಿತ್ತಾ ಬಂದಿತ್ತು. ಹಾಗೆಂದು ಅವರೇನು ಬುದ್ಧನ ಅಧ್ಯಯನ ಮತ್ತು ಬರವಣಿಗೆ ನಿಲ್ಲಿಸಿರಲಿಲ್ಲ ಬರೆಯುತ್ತಲೇ ಇದ್ದರು ಬರೆದದ್ದನ್ನು ಅತೃಪ್ತಿಯಿಂದ ಹರಿಯುತ್ತಲೂ ಇದ್ದರು.  ಕೆಲವೊಮ್ಮೆ ನೂರಾರು ಪುಟಗಳನ್ನು ಬರೆದು , ಅದನ್ನು ಅಲ್ಲಿಗೆ ನಿಲ್ಲಿಸಿ ಮತ್ತೆ ಹೊಸದಾಗಿ ಪ್ರಾರಂಭಿಸುತ್ತಿದ್ದರು. ನಾನಾಗ ಕೇಳುತ್ತಿದ್ದೆ”ಯಾವಾಗ ನಿಮ್ಮ ಬುದ್ಧ ಚರಣ ಮುಗಿಯುವುದು?”,  ಉತ್ತರ ” ಸದ್ಯದಲ್ಲೇ ಬರುತ್ತಾನೆ ! ಯಾಕೋ ಏನೋ ಅವನ ನಡೆಯ ಲಯವೇ ನನಗೆ ಸಿಗುತ್ತಿಲ್ಲ”.  ನಡುವೆ ಅಮ್ಮ ಕೇಳುತ್ತಿದ್ದಳು ” ನಾನಿರುವಾಗಲೇ ಮುಗಿಸಿತ್ತಿರಿ ತಾನೇ?”

ಅಮ್ಮನ ಆಸೆ ತೀರಲಿಲ್ಲ. ಬುದ್ಧ ಚರಣ ರಚನೆಯಲ್ಲಿ ಇರುವಾಗಲೇ ಆಕೆ ನಮ್ಮನ್ನಗಲಿದಳು. ಆ ನವಿನಲ್ಲಿ ಅಣ್ಣ ಪೂರ್ತಿಯಾಗಿ ಕಳೆದು ಹೋಗಿದ್ದರು;

“ಬೆರೆತು ಬದುಕಿಸಿದ ನನ್ನೊಲವಿನ ಸಖಿ ತೊರೆದು ಹೋದಳು,  ದೂರ ತೀರದ ಕಾಣದೂರಿಗೆ ದುಃಖ ಸಾಗರಕ್ಕೆ ನನಗೆ ನನ್ನನ್ನು ದೂಡಿ”

ನನ್ನ ಅಮ್ಮನ ಅಗಲಿಕೆಯ ನೋವಿಂದ ಅಣ್ಣ ಆದಷ್ಟು ಬೇಗ ಹೊರ ಬರಬೇಕಾಗಿತ್ತು. ಆ ಸಮಯಕ್ಕೆ ಅವರ ಬೆಂಬಲಕ್ಕೆ ಸಿಕ್ಕಿದ್ದು “ಉತ್ತರಾಯಣ”.  ಆ ಕವಿತೆ ಬರೆದ ಮೇಲೆ ಅವರು ದುಃಖದಿಂದ ಹೊರಬಂದು ಬುದ್ಧ ಕಾವ್ಯದ ಕಡೆ  ಮತ್ತೆ ಮನಸ್ಸು ಚಲಿಸಲು ಸಹಕರಿಸಿತು.

“ಇದ್ದಕ್ಕಿದ್ದಂತೆ ಆದನೇ  ಬುದ್ಧ?”. ಇಲ್ಲ ಅವನಿಗೆ ಅವನದೇ ಹುಟ್ಟು ಸಾವಿನ ಚಕ್ರದಲ್ಲಿ ತಿರುಗಬೇಕಿತ್ತು.

ಬರೆದದ್ದನ್ನು ತಿದ್ದಲು ಸುಲಭ ಎಂದು ಕಾವ್ಯ ಕಟ್ಟುವ ಕ್ರಿಯೆಯನ್ನು ಕಂಪ್ಯೂಟರ್ ನಲ್ಲಿ ಆರಂಭಿಸಿದರು. ಅವರಿಗೆ ಟೈಪ್ ಮಾಡುವುದು ಗೊತ್ತಿತ್ತು, ಆದರೆ ಕಂಪ್ಯೂಟರ್ ಬಳಸುವ ಪೂರ್ಣ ತಾಂತ್ರಿಕತೆ ಅವರಿಗೆ ಗೊತ್ತಿರಲಿಲ್ಲ, ಬರೆದದ್ದು ಎಲ್ಲಿ ಹೇಗೆ ಸೇವ್ ಆಗುತ್ತದೆ ? ನಾನು ಹೇಗೆ ಮಾಡುತ್ತಿದ್ದೇನೆ  ? ಅವರಿಗೆ ತಿಳಿದಿರಲಿಲ್ಲ.

ಬೆಳಿಗ್ಗೆ ಎದ್ದಾಗ ನನ್ನನ್ನು ಕೂಗುತ್ತಿದ್ದರು, “ಸುಧೀ ನೆನ್ನೆ ರಾತ್ರಿ ಕೆಲವು ಪದ್ಯಗಳನ್ನು ಬರೆದಿದ್ದೆ.  ಈಗ ಅವು ಕಾಣುತ್ತಿಲ್ಲ ನೋಡು”

ಸರಿ ನಮ್ಮ ಪ್ರಶ್ನೋತ್ತರ ಶುರು.

ನಾನು: “ಎಲ್ಲಿ ಸೇವ್ ಮಾಡಿದ್ದೀರಿ ?”

ಅಣ್ಣ: “ಬರಹದಲ್ಲಿ”

ನಾನು : “ಬರಹದಲ್ಲಿ ಸರಿ, ಯಾವ ಡ್ರೈವ್ ಯಾವ ಫೋಲ್ಡರ್?”

ಅಣ್ಣ:” ಗೊತ್ತಿಲ್ಲ”

ನಾನು: “ಫೈಲ್ ಹೆಸರಿನಾದರೂ ನೆನಪಿದೆಯಾ?”

ಅಣ್ಣ: “ಹಾಗೆಂದರೇ?”

ಮುಂದೆ ಪ್ರಶ್ನೆ ಕೇಳಿ ಪ್ರಯೋಜನವಿಲ್ಲ. ನನಗೆ ಗೊತ್ತಿದ್ದ ಗಣಕೆ ಯಂತ್ರದ ಜ್ಞಾನವನೆಲ್ಲ ಬಳಸಿ,  ಏನೋ ಮಾಡಿ ಕಳೆದು ಹೋದ ಬರಹಗಳನ್ನು ಹುಡುಕಿ ಕೊಡುತ್ತಿದ್ದೆ ಕೆಲವೊಮ್ಮೆ ಸಿಗುತ್ತಿರಲಿಲ್ಲ. ಅದು ಅವರ ಮನಸ್ಸಿಗೆ ಬಹಳ ನೋವುಂಟು ಮಾಡುತ್ತಿತ್ತು. ಅವರದೇ ಪದ್ಯದ ಸಾಲು, “ಬೇಡವೆಂದರು ಬಿಡದೆ ಕಾಡುವುದು ಕಳೆದದ್ದು”. ಈ ಮಾತು ಅವರ ಫೈಲ್ ಮತ್ತು ಲೈಫ್ ಎರಡಕ್ಕೂ ಸಂಬಂಧ ಪಟ್ಟಿದ್ದೇ ಇರಬೇಕು.

ಅವರು ಬಳಸುತ್ತಿದ್ದ ಕಂಪ್ಯೂಟರ್ ಈಗಲೂ ಅವರ ಕೋಣೆಯ ಒಂದು ಮೂಲೆದಲ್ಲಿ ಮೌನವಾಗಿ ಕುಳಿತುಕೊಂಡಿದೆ, ಒಂದು ಬಿಟ್ಟುಹೋಗದ ಉಸಿರಿನಂತೆ. ಅದನ್ನು ನೋಡಿದಾಗಲೆಲ್ಲಾ ಮನಸ್ಸು ಅಲುಗಾಡುತ್ತದೆ. ಅದರೊಳಗೆ ಅವರು ಬರೆದಿದ್ದ ಇನ್ನೆಷ್ಟು ಕವಿತೆಗಳು, ಎಷ್ಟು ಹಾಡುಗಳು ಮೌನವಾಗಿ ಕಳೆದುಹೋಗಿದವೋ… ಯಾರಿಗೂ ಗೊತ್ತಿಲ್ಲ. ಅವುಗಳನ್ನು ಹುಡುಕಬೇಕು !

ಕೆಲವೊಮ್ಮೆ ಕಣ್ಣು ಆ ಕಡೆ ಬೀಳುತ್ತಲೇ, ಅವರು ಅಲ್ಲೇ ಕುಳಿತಂತೆ ಭಾಸವಾಗುತ್ತದೆ. ಮೃದುವಾದ ಧ್ವನಿಯಲ್ಲಿ ಹೇಳುವಂತೆ, “ಬಾ… ಇಲ್ಲಿ ನನ್ನ ಹೊಸ ಕವಿತೆ ಕಾಣೆಯಾಗಿದೆ… ನೋಡೋಣ, ನಿನಗೆ ಸಿಗುತ್ತಾ?”

ಆ ಕ್ಷಣದಲ್ಲಿ ಹೃದಯ ಒಮ್ಮೆ ನಿಂತಂತೆ ಆಗುತ್ತದೆ. ಮಾತು ಬಾಯಿಗೆ ಬರೋದಿಲ್ಲ. ಕಣ್ಣಿನಲ್ಲಿ ತುಂಬಿಕೊಂಡ ನೋವನ್ನು ಹಿಡಿದುಕೊಳ್ಳಲಾಗದೆ, ನಾನು ತಕ್ಷಣ ಅವರ ಕೋಣೆಯಿಂದ ಹೊರಗೆ ಓಡುತ್ತೇನೆ.

ಆದರೆ ಅವರ ಮಾತುಗಳು ಅಲ್ಲೇ ನಿಂತುಹೋಗುವುದಿಲ್ಲ… ಅವು ಹಿಂಬಾಲಿಸುತ್ತವೆ, ಮೃದುವಾಗಿ ಕಿವಿಯಲ್ಲಿ ಮರುಮರು ಕೇಳಿಸುತ್ತವೆ…“ಮುಟ್ಟಿದ್ದೆಲ್ಲ ಜೀವ ತಳೆಯುವುದಿಲ್ಲ… ಜೀವ ಇರಬೇಕು ಕೈಯಲ್ಲಿ… ಮುಟ್ಟುವ ಹಿಂದೆ ಪ್ರೀತಿ ಮಡುಗಟ್ಟಿರಬೇಕು…”

ಆ ಒಂದು ಸಾಲು ಮಾತ್ರ ಅಲ್ಲ… ಅದು ಅವರು ಬಿಟ್ಟುಹೋದ ಸಂಪೂರ್ಣ ಜೀವನದ ಉಸಿರು.

**********

೨೦೨೧ ನವಂಬರ್,  ನನಗೆ ಲಿವರ್ ಕಸಿ ಆದದ್ದು,  ಚೆನ್ನೈಯಲ್ಲಿ. ಆಗ ನನ್ನನ್ನು ನೋಡಲು ಅಣ್ಣನವರನ್ನು ಸೂರ್ಯ ಕರೆದುಕೊಂಡು ಬಂದಿದ್ದ. ಬಂದವನೇ ಅವನು ಶಾಲಿನಿಗೆ  ಹೇಳಿದ್ದು ” ಯಾಕೋ ತಾತನಿಗೆ ಆರೋಗ್ಯ ಸರಿ ಇಲ್ಲವೆಂದು ಕಾಣುತ್ತದೆ. ಪ್ರಯಾಣದುದ್ದಕ್ಕೂ ಅವರು ಏನೋ ಪ್ರಯಾಸ ಪಡುತ್ತಿದ್ದರು” .ಕಳೆದೆರಡು ವರ್ಷಗಳಿಂದ ಪೂರ್ತಿ ನನ್ನ ಆರೈಕೆಯಲ್ಲಿ ತೊಡಗಿದ್ದ ಶಾಲಿನಿಗೆ ಅದರ ಬಗ್ಗೆ ಗಮನ ಹೋಗಿಲ್ಲ!  ಅಣ್ಣ ಬೆಂಗಳೂರಿಗೆ ಹಿಂತಿರುಗಿದ ತಕ್ಷಣ ಮನೆಯವರು ಮಾಡಿದ ಮೊದಲ ಕೆಲಸ , ಅಣ್ಣನವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು. ಅಣ್ಣನನ್ನು ಪರೀಕ್ಷಿಸಿದ ಡಾಕ್ಟರ್ ಪಾಟೀಲ್ ನಮಗೆ ಕೊಟ್ಟಿದ್ದು ಒಂದು ಆಘಾತದ ಸುದ್ದಿ “ಅಣ್ಣನವರಿಗೆ ಪ್ರೊಸ್ಟೇಟ್ ಕ್ಯಾನ್ಸರ್ !  ಅದು ಸ್ಟೇಜ್ ಫೋರ್”

ನಂತರ ನಾಲ್ಕು ವರ್ಷ ಬಹಳ ಕಷ್ಟ ಮತ್ತು ನೋವಿನ ದಿನಗಳು.  ಅವರ ಆರೋಗ್ಯ ಪ್ರತಿದಿನ ಏರುಪೇರು ಆಗುತ್ತಿತ್ತು. ಇಷ್ಟಾದರೂ ಅವರ ಜೀವನ ಪ್ರೀತಿ ಮಾತ್ರ ಕಡಿಮೆ ಆಗಿರಲಿಲ್ಲ . ತಿಂಗಳು ಎರಡು ತಿಂಗಳಿಗೊಮ್ಮೆ ಆಸ್ಪತ್ರೆಗೆ ಅಡ್ಮಿಟ್ ಆಗುವುದು ಸಾಮಾನ್ಯವಾಗಿಬಿಟ್ಟಿತ್ತು. ಪ್ರತಿದಿನ ಅವರನ್ನು ನೋಡಲು ಅವರ ಮಿತ್ರರು, ವಿದ್ಯಾರ್ಥಿಗಳು, ಬಂಧುಗಳು ಯಾರಾದರೂ ಬರುತ್ತಿದ್ದರು. ಆಗೆಲ್ಲ ಅವರು ಹೇಳುತ್ತಿದ್ದರು , “ಇಷ್ಟು ದಿನ ನಾನು ನನ್ನ ಕೈಲಾದಷ್ಟು, ಬರೆದೆ ಇನ್ನೂ ಬರೆಯುವ ಆಸೆ ಇದೆ, ಆದರೆ ದೇಹ ಸಹಕರಿಸುತ್ತಿಲ್ಲ”

ಪು ತಿ ನ  ಬಗ್ಗೆ ಅವರು ಒಂದು ನಾಟಕ ಬರೆಯುವುದಿತ್ತು ಆದರೆ ಅವರಿಗೆ ಐದು ನಿಮಿಷ ಕುಳಿತುಕೊಳ್ಳಲು ಆಗದಂತ ಪರಿಸ್ಥಿತಿ.  ಆದರೆ ಬರೆಯುವ ಹಂಬಲ ನಿಂತಿಲ್ಲ. ಅವರು ಮಲಗಿಕೊಂಡೇ,  ತಮ್ಮ ಮೊಬೈಲ್ ವಾಟ್ಸಪ್ ಮೂಲಕ ಒಂದೊಂದೇ ಅಂಕಣ ಬರೆದು ನನಗೆ ಕಳುಹಿಸುತ್ತಿದ್ದರು. ನಂತರ ಗೆಳೆಯರಾದ ಸತೀಶ್ ಹುಳಿಯಾರ್ ಅದನ್ನು ಬಹಳ ಆಸ್ತೆವಹಿಸಿ ಎಡಿಟ್ ಮಾಡಿ ಒಂದು ರೂಪಕ್ಕೆ ತಂದರು.  ಅದರ ಪ್ರಕಟಣೆ ಆಗುವುದು ತಾನು ನೋಡಬೇಕೆಂಬ ಅವರ ದೊಡ್ಡ ಆಸೆ ಆಗಿತ್ತು . ಆದರೆ ಅದು ಪಲಿಸಲಿಲ್ಲ.

ಅಣ್ಣ ಅವರು ಕೇಳಿಸಿಕೊಂಡ ಅವರ ಕೊನೆ ಗೀತೆ. ” ಜಗದಲಿ ಸುಂದರ್ ಎರಡೇ ನಾಮ”.  ಅದನ್ನು ಪಂಚಮ್ ,  ಹಾಸಿಗೆಯಲ್ಲಿ ಮಲಗಿದ್ದ ಅಣ್ಣನವರ ಪಕ್ಕ ಕೂತು ಹಾಡಿ ತೋರಿಸಿದಾಗ , ಅವರ   ಕಣ್ಣುಗಳಲ್ಲಿ ಆನಂದ ಭಾಷ್ಪ.

**********

೨೦೨೫ರ ಮೇ ತಿಂಗಳು… ಸಮಯವೇ ನಿಧಾನವಾಗಿ ಹೆಜ್ಜೆ ಇಡುತ್ತಿರುವಂತೆ, ನಮ್ಮ ಬದುಕಿಗೂ ಒಂದು ಭಾರವಾದ ನೆರಳು ಇಳಿದಿತ್ತು. ಅಣ್ಣ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು.

ಮೇ ೨೯ರ ಸಂಜೆ ನಾವು ಡಾ. ರವೀಂದ್ರ ರೆಡ್ಡಿಯವರನ್ನು ಭೇಟಿಯಾದ ಕ್ಷಣ, ಜೀವನವೇ ಒಮ್ಮೆ ನಿಂತಂತೆ ಆಯಿತು. ಅವರ ಮಾತುಗಳು ಭಾರವಗಿ,  ತುಂಬಾ ನಿಧಾನವಾಗಿ “ಇನ್ನೂ ಹೆಚ್ಚು ಸಮಯ ಇಲ್ಲ… ಇವತ್ತು ರಾತ್ರಿ… ಅಥವಾ ಹೆಚ್ಚೆಂದರೆ ನಾಳೆ.” ಆ ವಾಕ್ಯ ನಮ್ಮೊಳಗೆ ಮೌನವಾಗಿ ಕುಸಿದುಬಿದ್ದು, ಮತ್ತೆ ಏಳಲೇ ಇಲ್ಲ.

ಆ ರಾತ್ರಿ ಆಸ್ಪತ್ರೆಯ ಕೊಠಡಿ ಒಂದು ಪ್ರಾರ್ಥನೆಯ ಮಂದಿರ. ಅವರ ನಾಲ್ಕು ಮಕ್ಕಳು, ಸೊಸೆಯಂದಿರು—ಎಲ್ಲರೂ ಅಲ್ಲೇ ಕುಳಿತು, ಸಮಯದ ಹರಿವನ್ನೇ ಹಿಡಿದು ನಿಲ್ಲಿಸಲು ಪ್ರಯತ್ನಿಸುತ್ತಿದ್ದಂತೆ. ಕಳೆದ ಎರಡು ದಿನಗಳಿಂದ ನರಳುತ್ತಿದ್ದ ಅವರ ದೇಹದಲ್ಲಿ ಉಳಿದಿದ್ದು ಕೇವಲ ಒಂದು ಸಣ್ಣ ಉಸಿರು ಮಾತ್ರ. ಪಕ್ಕದ ಮಾನಿಟರ್‌ನಲ್ಲಿ ಹಸಿರು ರೇಖೆ ನಿಧಾನವಾಗಿ ಸಾಗುತ್ತಿತ್ತು…..ಕೆಲವೊಮ್ಮೆ ದಾರಿ ತಪ್ಪಿದಂತೆ ಕಂಪಿಸಿ, ಮತ್ತೆ ಮೌನಕ್ಕೆ ಮರಳುತ್ತಿತ್ತು. ಆ ಚಿಕ್ಕ ಚಲನೆಯನ್ನೇ ನಾವು ಜೀವನದ ಕೊನೆಯ ಆಸೆಯಂತೆ ನೋಡುತ್ತಿದ್ದೆವು.

ಮಾತುಗಳಿಲ್ಲ… ಕೇವಲ ಮೌನ.

ಪ್ರತಿಯೊಬ್ಬರ ಕಣ್ಣುಗಳು ಆ ಯಂತ್ರದ ಮೇಲೆ…

ಆಗಬಾರದ ಆ ಕೆಡಕು ಘಳಿಗೆಗೆ ಕಾಯುತ್ತಾ…

ಆಸ್ಪತ್ರೆಯ ನಿಯಮದಂತೆ ಎಲ್ಲರೂ ಅಲ್ಲಿರಲು ಸಾಧ್ಯವಿರಲಿಲ್ಲ. ಗಂಡು ಮಕ್ಕಳು ಹೊರಡುವೆವು ಎಂದಾಗ, ಅವರು ನಿಧಾನವಾಗಿ ಕೈ ಎತ್ತಿ “ಹೋಗಿ ಬನ್ನಿ” ಎನ್ನುವಂತೆ ಅನುಮತಿ ನೀಡಿದರು. ಆದರೆ ಸೊಸೆಯರು ಹೊರಡುತ್ತೇವೆ ಎಂದಾಗ… ಅವರ ಕೈ ಮೌನವಾಗಿ ನಿಂತಿತು. “ಇಲ್ಲೇ ಇರಿ…” ಎನ್ನುವಂತೆ ಸಣ್ಣ ಸನ್ನೆ.

ಆ ಕ್ಷಣದ ಮೌನವೇ ನಮ್ಮ ಬದುಕಿನ ಅತ್ಯಂತ ಆಳವಾದ ಸಂಭಾಷಣೆ ಆಗಿತ್ತು—ಅದು ನಮ್ಮಿಗೆ ಗೊತ್ತಿರಲಿಲ್ಲ, ಅದು ಅವರ ಜೊತೆಗಿನ ನಮ್ಮ ಕೊನೆಯ ಮಾತು ಎಂದು.

ಮೇ ೩೦ರ ಬೆಳಗ್ಗೆ ೬:೩೦ಕ್ಕೆ ನಾವು ಮತ್ತೆ ಆಸ್ಪತ್ರೆಗೆ ಹೋದೆವು. ಅವರು ಎಚ್ಚರವಿಲ್ಲ. ಪ್ರತಿಮಾ ಅತ್ತಿಗೆಯ “ಬೇಗ ಬನ್ನಿ” ಎಂಬ ಸಂದೇಶದ ಭಾರ ಇನ್ನೂ ಮನಸ್ಸಿನಲ್ಲಿ ನಿಂತಿತ್ತು. ನಾವು ಅವರನ್ನು ಎಬ್ಬಿಸಲು ಮಾಡಿದ ಪ್ರತಿಯೊಂದು ಪ್ರಯತ್ನವೂ ಮೌನಕ್ಕೆ ತಿರುಗಿಬಿಟ್ಟಿತು. ಅವರ ಉಸಿರಾಟ ನಿಧಾನವಾಗಿ ಕ್ಷೀಣಿಸುತ್ತಿತ್ತು. ಮಾನಿಟರ್‌ನ ಹಸಿರು ರೇಖೆ ಅತಿ ಸಣ್ಣದಾಗಿ ಕಂಪಿಸುತ್ತಿತ್ತು… ಜೀವದ ಕೊನೆಯ ಉಸಿರಿನಂತೆ.

೭ ಗಂಟೆ ೪ ನಿಮಿಷ…ಆ ಹಸಿರು ರೇಖೆಯ ಕೊನೆಯ ಲಯ ತಪ್ಪಿದ ನೆಡಿಗೆ.. “ಎಚ್‌ಎಸ್‌ವಿ ಇನ್ನಿಲ್ಲ” ಎಂಬ ಸುದ್ದಿ ಜಾಲತಾಣಗಳಲ್ಲಿ ಹರಿದಾಡಲು ಶುರುಮಾ್ಡಿತ್ತು.

“ಇರಬೇಕು ಇರುವಂತೆ, ತೊರೆದು ಸಾವಿರ ಚಿಂತೆ” ಬರದಂತೆ ಬದುಕಿದ ಕವಿ ಅವರು. ಕಹಿ ಬೆವ ತಿಂದು ಸಿಹಿ ಗಾನದ ಹಕ್ಕಿ ಹಾಡಿ ಹಾಡಿ ಮುಕ್ತವಾಗಿತ್ತು.

ದೀಪ ನಂದಿತು ದೀಪದಲ್ಲಿ…

ಮುಳುಗಿತು ನೀರು ನೀರಲ್ಲಿ…

ಸೊನ್ನೆ ತೆರೆಯಿತು ಕಣ್ಣ ಅಂತಾರಾಲೋಕಕ್ಕೆ…

ಭೂಮಿ ನಡುಗಿತು… ಶೂನ್ಯ ಆಡಿಸಿದ ಡಿಂಡಿಮದ ಹಾಗೆ…

ಶಾಂತಿ… ಶಾಂತಿ… ಶಾಂತಿ.

**********

। ಮುಕ್ತಾಯ ।

‍ಲೇಖಕರು Admin

13 May, 2026

ನಿಮಗೆ ಇವೂ ಇಷ್ಟವಾಗಬಹುದು…

1 Comment

  1. Lakshmi H

    Chennagide.Khushiyayithu,munduvaresi.
    – Lakshmi H Davanagere.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading