ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಡುಗೆಮನೆ ಮತ್ತು ಅವಳು

ಡಾ. ಪ್ರೀತಿ ಕೆ ಎ

ಮನೆಯಲ್ಲಿ ಎಂದಿಗೂ

ಅಡುಗೆಮನೆಯೊಂದು

ಸ್ತಬ್ಧವಾಗಿದ್ದೇ ಇಲ್ಲ

ಸದಾ ಇದ್ದೇ ಇರುತ್ತದೆ

ಒಂದಿಲ್ಲೊಂದು ಚಟುವಟಿಕೆ

ಥೇಟ್ ಅವಳಂತೆಯೇ !

ಮೊದಲೆಲ್ಲ ಗ್ರೈಂಡರ್ ನಂತೆ

ತನಗಿನ್ನೂ ಬೇಕಾದಷ್ಟು ಸಮಯವಿದೆ

ಎಂಬಂತೆ ನಿಧಾನವಾಗಿ ಸುತ್ತುತ್ತಿದ್ದವಳು

ಈಗೀಗ ಮಿಕ್ಸಿಯಂತೆ

ಗಿರಗಿರನೆ ತಿರುಗುತ್ತಾಳೆ

ಕೆಲವೊಮ್ಮೆ ತಾಜಾ ತರಕಾರಿ

ಇನ್ನು ಕೆಲವೊಮ್ಮೆ ಅಳಿದುಳಿದ

ನಿನ್ನೆ ಮೊನ್ನೆಯ ಪಲ್ಯ, ಸಾರುಗಳನ್ನು

ಒಡಲಲ್ಲೆ ಇಟ್ಟುಕೊಂಡ

ತಂಗಳು ಪೆಟ್ಟಿಗೆಯಾಗುತ್ತಾಳೆ

ಮನೆಯವರಿಗೆಲ್ಲ ಘಮಘಮಿಸುವ

ಏಲಕ್ಕಿ ಚಹಾವನ್ನು ಕೊಟ್ಟು

ತಾನು ಅದಾಗಲೇ ಆರಿಹೋದ

ಚಹಾವನ್ನು ಒಬ್ಬಳೇ ಹೀರುತ್ತಾ

ಚಹಾ ಸೋಸುವ ಜಾಲರಿಯಂತಾಗುತ್ತಾಳೆ

ಆಗಾಗ್ಗೆ ಸೀಟಿ ಊದುವ

ಬೆಂಕಿ ಆರಿಸಿದ ಕೂಡಲೇ

ಇದುವರೆಗೂ ಕೂಗಿದ್ದು

ತಾನಲ್ಲವೆಂಬಂತೆ ನಿಂತು ಬಿಡುವ

ಕುಕ್ಕರಿನಂತಾಡುತ್ತಾಳೆ

ಥರಹೇವಾರಿ ಅಡುಗೆಗಳೆಲ್ಲ ಮುಗಿದು

ಮನೆಯವರೆಲ್ಲ ಹೊಟ್ಟೆ ತುಂಬ ತಿಂದೆದ್ದು

ಪಾತ್ರೆಗಳೆಲ್ಲ ನಾ ಮುಂದು

ತಾ ಮುಂದು ಎಂಬಂತೆ

ದಬದಬನೆ ರಾಶಿ ಬಿದ್ದಾಗ

ಬಳಲಿ ಬೆಂಡಾದರೂ ಬೇಸರಿಸಿಕೊಳ್ಳದ 

ಸಿಂಕಿನಂತಾಗುತ್ತಾಳೆ

ಮನೆಯಲ್ಲಿ ಎಂದಿಗೂ

ಅಡುಗೆಮನೆಯೊಂದು

ಸ್ತಬ್ಧವಾದದ್ದೇ ಇಲ್ಲ

ಕಾಯುವ, ಬೇಯುವ

ಕುದಿಯುವ, ಹರಳುಗಟ್ಟುವ

ಆವಿಯಾಗುವ ಪ್ರಕ್ರಿಯೆಗಳು

ಜರುಗುತ್ತಲೇ ಇರುತ್ತವೆ

ಹೊರಗೂ ಒಳಗೂ !

‍ಲೇಖಕರು Avadhi

19 October, 2020

2 Comments

  1. ವಿಜಯ ಅಮೃತರಾಜ್ ವಕೀಲರು ಕೊಪ್ಪಳ

    ಪ್ರೀತಿಜಿ ಕವನ ಅದರ ಭಾವ ಎಲ್ಲವೂ ಸರಳವಾಗಿದ್ದು ನಮ್ಮದೇ ಎನ್ನುವ ಭಾವನೆ ಕಟ್ಟಿಕೊಡುವ ಪರಿಗೆ ನಿಜಕ್ಕೂ ಸಲಾಮ್

  2. T S SHRAVANA KUMARI

    ಚಂದದ ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading