ವೇಣು ಎಂಬ ‘ಏಂಜಲ್’

ಕನ್ನಡ ರಂಗಭೂಮಿಯ ಮಹತ್ವದ ಹೆಸರು ಚಂಪಾ ಶೆಟ್ಟಿ.

ಕಾಲೇಜು ರಂಗ ಶಿಬಿರದ ಮೂಲಕ ರಂಗಭೂಮಿ ಪ್ರವೇಶಿಸಿದ ಈಕೆ ನಂತರ ಚಿತ್ರರಂಗದಲ್ಲಿ ಕಂಠದಾನ ಕಲಾವಿದೆಯಾಗಿ ಹೆಸರು ಮಾಡಿದರು.

‘ರಂಗ ಮಂಟಪ’ ತಂಡದ ಸ್ಥಾಪಕಿಯೂ ಹೌದು. ಈ ತಂಡಕ್ಕೆ ‘ಗಾಂಧಿ ಬಂದ’ ನಿರ್ದೇಶಿಸಿ ಸೈ ಅನಿಸಿಕೊಂಡರು. ನಂತರ ವೈದೇಹಿಯವರ ‘ಅಕ್ಕು’ ಅಮ್ಮಚ್ಚಿ ಎಂಬ ನೆನಪು ಆಗಿ ಚಿತ್ರ ನಿರ್ದೇಶಕಿಯೂ ಆದರು.ಒಂದು ಸುಂದರ ಕಾವ್ಯದಂತಿರುವ ‘ಅಮ್ಮಚ್ಚಿ ಎಂಬ ನೆನಪು’ ತೆರೆಯ ಮೇಲೆ ಅರಳಿದ ಕಥೆ ನಿಮ್ಮ ಮುಂದೆ..

। ಕಳೆದ ವಾರದಿಂದ ।

ಜನವರಿ 1, 2018, ಹೊಸ ವರುಷದಲ್ಲಿ ತಂಡದವರೆಲ್ಲಾ ಸೇರಿ, ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ, ಕಟೀಲಮ್ಮ ಮತ್ತು ಕುಟುಂಬದ ದೈವ ದೇವರ ಆಶೀರ್ವಾದವನ್ನೂ ಪಡೆದು, ಮರುದಿನ ಅತ್ಯಂತ ಉತ್ಸಾಹದಿಂದ‌ ಮೊದಲ ದಿನದ ಶೂಟಿಂಗ್ ಗೆ ತಯಾರಾದೆವು. ಮೊದಲ ಶಾಟ್, ಅಮ್ಮಚ್ಚಿ ಮನೆಯ ಒಳಾಂಗಣ…

ಕನ್ನಡಿಯಲ್ಲಿ ನೋಡುತ್ತಾ ಅಮ್ಮಚ್ಚಿ ಎರಡು ಜಡೆ ಹಾಕಿಕೊಳ್ಳುತ್ತಿರುವಾಗ. ಸೀತಾ ಬಂದು ‘ಅಮ್ಮಚ್ಚೀ’ ಎನ್ನುವುದು, ಅಮ್ಮಚ್ವಿ ಕನ್ನಡಿ ನೋಡುತ್ತಲೇ “ಬಾ ಸೀತಾ’ ಅನ್ನುವುದು … ಆ ದಿನಕ್ಕಾಗಿ ಆ ಘಳಿಗೆಗಾಗಿ, ಎಷ್ಟು ದಿನದಿಂದ ಕಾದಿದ್ದೆ.

ಅಂದಿನ ದಿನವನ್ನು ನೆನಪು ಮಾಡಿಕೊಂಡೇ ಭಯಪಟ್ಟ ದಿನಗಳೆಷ್ಟೋ… ಆದರೆ ಆಶ್ಚರ್ಯವೆಂಬಂತೆ ಅಂದು ಒಂದಿಷ್ಟೂ ಅಳುಕಿಲ್ಲ, ಎಷ್ಟೋ ವರ್ಷಗಳಿಂದ ನಿರ್ದೇಶನ ಮಾಡುತ್ತಿರುವಂತಹ ಕಾನ್ಫಿಡೆನ್ಸ್ ನನ್ನಲ್ಲಿ. ಅದು ಹೇಗೋ ಇಂದಿಗೂ ಅರ್ಥವಾಗಿಲ್ಲ. ವೈದೇಹಿ ಮೇಡಂ ಕ್ಲಾಪ್ ಹಿಡಿದು ಕಾದಿದ್ದಾರೆ. ನಮ್ಮ ಉಡುಪಿಯ ಸ್ನೇಹಿತರು ಮತ್ತು ಖ್ಯಾತ ಛಾಯಗ್ರಾಹಕರಾದ ಗುರುದತ್ ಅವರು ಸ್ಟಿಲ್ ಕ್ಯಾಮೆರಾ ಹಿಡಿದು ಆ ಘಳಿಗೆಯನ್ನು ಸೆರೆ ಹಿಡಿಯಲು ಕಾದಿದ್ದಾರೆ.

ನಾನು ನವೀನ್‌ ಅವರಿಗೆ shot ವಿವರಿಸಿ ಅಮ್ಮಚ್ಚಿಯನ್ನು ಕನ್ನಡಿಯ ಮುಂದೆ ನಿಲ್ಲಿಸಿ, ಮಾನೀಟರ್ ಮುಂದೆ ಕೂತೆ. ಶುಭ ಗಳಿಗೆಯಲ್ಲಿ ವೈದೇಹಿ ಮೇಡಂ ಪ್ರೀತಿಯಿಂದ ಕ್ಲಾಪ್ ಕೂಡಾ ಮಾಡಿದರು ನಾನೂ ಆಕ್ಷನ್ ಹೇಳಿದೆ. ಎಲ್ಲವೂ ಸರಿ, ಆದರೆ ಏನೋ ಮಿಸ್ ಆಗುತ್ತಿದೆಯಲ್ಲಾ ಅನಿಸುತ್ತಿತ್ತು. ಅಮ್ಮಚ್ಚಿ ಪಾತ್ರದ ವೈಜಯಂತಿ, ಮಾನೀಟರ್ ನಲ್ಲಿ ಬೇರೆಯೇ ಕಾಣುತ್ತಿದ್ದಾಳೆ.. ಮುಖವೆಲ್ಲಾ ಕೆಂಪಗಾಗಿ, ಊದಿಕೊಂಡ ಹಾಗೆ ಕಾಣುತ್ತಿದೆ. ಅರೆ ಇದೇನಿದೂ ಹಿಂದೆ ಅವಳ ಎಷ್ಟೋ ಫೋಟೋ ಗಳನ್ನು ನೋಡಿದ್ದೆ ಅದರಲ್ಲಿ ಹೀಗಿರಲಿಲ್ಲವಲ್ಲ !

ಏನು ವ್ಯತ್ಯಾಸ? ಹೆದರಿಕೆಯಿಂದ ಹೀಗಾಗಿರಬಹುದೇ? ಹೀಗೇ ಯೋಚಿಸುವಾಗ ತಟ್ಟನೆ ಹೊಳೆಯಿತು. ಅಮ್ಮಚ್ಚಿಯ ಕಾಸ್ಟ್ಯೂಮ್ಸ್ ಎಲ್ಲಾ ಮೊದಲೇ ಟ್ರಯಲ್ ಮಾಡಿ ನೋಡಿ ಇಟ್ಟಿದ್ದೆವು. ಓಲೆ ,ಜುಮುಕಿ, ಮಾತ್ರ ಟ್ರಯಲ್ ಮಾಡಿರಲಿಲ್ಲ. ಓಲೆಯ ಕಡ್ಡಿ ದೊಡ್ಡದು ವೈಜಯಂತಿ ಕಿವಿಯ ತೂತು ಚಿಕ್ಕದು. ಅದರಲ್ಲಿಯೂ ಎಷ್ಟೋ ದಿನ ಓಲೆಯೇ ಹಾಕದ ತೂತೇ ಮುಚ್ಚಿ ಹೋದಂತಾಗಿತ್ತು. ಏನು ಮಾಡಿದರೂ ಓಲೆ ಕಿವಿಯಲ್ಲಿ ತೂರುತ್ತಿಲ್ಲ.

ಎಲ್ಲರೂ ಪ್ರಯತ್ನ ಪಡುತ್ತಲೇ ಕಿವಿ ಕೆಂಪಗಾಗಿ ಹೋಗಿತ್ತು ಕೊನೆಗೆ ಆಚಾರಿ ಬಳಿಗೆ ಹೋಗಿ ಹೊಸದಾಗಿ ಕಿವಿ ಚುಚ್ಚುವ ಕಾರ್ಯಕ್ರಮವೂ ಆಗಿಹೋಯಿತು. ನೋವಿಗೆ ವೈಜಯಂತಿಯ ಮುಖ ಊದಿಕೊಂಡು ತಲೆನೋವು ಶುರುವಾಗಿ ಖುಷಿಯಾಗಿ ತೊಟ್ಟಿಲು ಶಾಸ್ತ್ರಕ್ಕೆ ಹೊರಡಬೇಕಾದ ದೃಶ್ಯದಲ್ಲಿ ಅಮ್ಮಚ್ಚಿ, ನೋವಿನಿಂದ ಬಾಡಿ ಹೋಗಿದ್ದಳು. ನಂತರ ಅವಳಿಗೆ ಸಂತೈಸಿ, ಬೇಕಾದ ಉಪಚಾರಗಳನ್ನೆಲ್ಲಾ ಮಾಡಿ ತೊಟ್ಟಿಲ ಶಾಸ್ತ್ರಕ್ಕೆ ಅವಳನ್ನು ಹೊರಡಿಸುವಷ್ಟರಲ್ಲಿ. ಮೊದಲ ದಿನದ ಲಂಚ್ ಬ್ರೇಕ್ ನ ಹೊತ್ತಾಗಿ ಹೋಗಿತ್ತು..

ಎಷ್ಟೆಲ್ಲಾ ತಯಾರಾದರೂ, ಯಾವುದೋ ಯೋಚಿಸಿಯೇ ಇರದ ಸಮಸ್ಯೆಗಳು ಎದುರಾಗಬಹುದು ಎಂಬುದಕ್ಕೆ ಮೊದಲ ದಿನದ ಮೊದಲ ದೃಶ್ಯವೇ ಉದಾಹರಣೆಯಾಗಿ ಬಿಟ್ಟಿತ್ತು. ಆದರೆ, ನಮ್ಮ ಊಹೆಯನ್ನು ಸುಳ್ಳಾಗಿಸಿ, ಮತ್ಯಾವ ತೊಂದರೆಗಳೂ ಇಲ್ಲದಂತೆ ಶೂಟಿಂಗ್ ಸರಾಗವಾಗಿಯೇ ಮುಂದುವರಿಯಿತು…

ತೊಟ್ಟಿಲ ಶಾಸ್ತ್ರಕ್ಕೆ ಹೊರಟಿದ್ದು ಮೊದಲ ದಿನವಾದರೂ, ತಲುಪಿದ್ದು ಒಂಭತ್ತನೆಯ ದಿನ ಅಂದರೆ, ತೊಟ್ಟಿಲ ಶಾಸ್ತ್ರದ ಶೂಟಿಂಗ್ ಆದದ್ದು ಶೂಟಿಂಗ್ ಶುರುವಾದ ಒಂಭತ್ತನೆಯ ದಿನ. ಕಾರಣಾಂತರದಿಂದ. ಮೊದಲು ಪ್ಲಾನ್ ಆದ ದಿನಕ್ಕಿಂತ ಎರಡು ದಿನ ಹಿಂದಕ್ಕೆ ಶೂಟಿಂಗ್ ಪ್ರೀಪೋನ್ ಆಗಿತ್ತು ಹಾಗಾಗಿ ಹಿಂದಿನ ದಿನ ಎಲ್ಲ ತಯಾರಿಗಳು ಗಡಿಬಿಡಿಯಿಂದ ಸಾಗುತ್ತಿದ್ದವು. ಶಾಸ್ತ್ರಕ್ಕೆ ಬೇಕಾದ ಹೂವು ಹಣ್ಣುಗಳು, ಹಳೆಯದಾದ ಮರದ ತೊಟ್ಟಿಲು, ಅದರ ಅಲಂಕಾರಕ್ಕೆ ಬೇಕಾದ ಪರಿಕರಗಳು, ಮಗುವನ್ನು ತೊಟ್ಟಿಲಿಗೆ ಹಾಕಲು ಬೇಕಾದ ಟಿಪಿಕಲ್ ಊರ ಹೆಂಗಸರು… ಎಲ್ಲವೂ ಸಿದ್ಧವಾಯಿತು.‌

ಮಗುವಿನ ತಾಯಿಯ ಪಾತ್ರಕ್ಕೆ ತಲೆಗೆ ಬಟ್ಟೆ ಕಟ್ಟಿಕೊಂಡು ಶೆಟ್ರ ತಂಗಿ ಜಯಶ್ರಿಯೂ ಸಿದ್ಧಳಾದಳು. ಎಲ್ಲಾ ಸಿದ್ಧವಾದರೂ… ಮುಖ್ಯವಾಗಿ ತೊಟ್ಟಿಲಿಗೆ ಹಾಕಲು ಮಗು ಬೇಕಲ್ಲ. ಮಗುವೇ ಸಿಕ್ಕಿಲ್ಲ. ಪುಟ್ಟ ಗ್ರಾಮ ಕರ್ನಿರೆ. ಮನೆಗಳಿರುವುದೇ ಕಡಿಮೆ. ಇರುವ ಕೆಲವೇ ಮನೆಯಲ್ಲಿ ಸಣ್ಣ ಮಗುವಿರಬೇಕು. ಮಗುವಿದ್ದರೂ ಅದನ್ನು ಶೂಟಿಂಗ್ ಗೆ ಕೊಡಲು ಒಪ್ಪಬೇಕು. ಈ ಎಲ್ಲಾ ಕಾರಣಗಳಿಂದ ಎರಡು ದಿನವಾದರೂ ಮಗು ಸಿಕ್ಕಿರಲಿಲ್ಲ ಶೂಟಿಂಗ್ ನ ಹಿಂದಿನ ರಾತ್ರಿ ಎಲ್ಲರಿಗೂ ಆತಂಕ.

ಇಂತಹ ವ್ಯವಸ್ಥೆಗಳಿಗೆಲ್ಲಾ ನಾವು ಡಿಪೆಂಡ್ ಆಗಿದ್ದು ನಮ್ಮ ಇಪಿ (ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್) ವೇಣು ಅವರ ಮೇಲೆ. ಕರ್ನಿರೆಯ ಬೀದಿ ಬೀದಿಗಳು, ಅಂಗಡಿಗಳು ಎಲ್ಲವೂ ವೇಣುಗೆ ತೀರಾ ಪರಿಚಯವಾಗಿ ಬಿಟ್ಟಿತ್ತು. ಊರಿನಲ್ಲಿ ಎಲ್ಲರನ್ನೂ ಮಾತನಾಡಿಸುತ್ತಾ… ಎಲ್ಲರ ಮನೆಯಲ್ಲೂ ಚಾ ಕುಡಿಯುತ್ತಾ ಊರವರೆಲ್ಲಾ ಅಮ್ಮಚ್ಚಿ ಶೂಟಿಂಗ್ ಅಂದರೆ ವೇಣು ಅನ್ಬುವ ಹಾಗೆ ಆಗಿ ಬಿಟ್ಟಿತ್ತು. ಆದ್ದರಿಂದಲೇ ಶೂಟಿಂಗ್ ಗೆ ಬೇಕಾದ, ಹಳೆಯ ಸೈಕಲ್, ಹಿಂದಿನ ಕಾಲದ ಟೈಲರಿಂಗ್ ಮಷಿನ್, ಜಾಗಟೆ, ದೋಣಿ, ಅಂಬಿಗ, ಏನು ಬೇಕೋ ಎಲ್ಲವನ್ನೂ ಎಲ್ಲಿಂದಲೋ ಹೊಂದಿಸಿಕೊಂಡು ಬರುವ ತಾಕತ್ತು ವೇಣುಗೆ ಸಿಕ್ಕಿತ್ತು. ಹಾಗಾಗಿ ಅಂದು ನಮ್ಮೆಲ್ಲರ ಕಣ್ಣೂ ವೇಣು ಕಡೆಗೆ. ಆದರೆ ಈಗ ಬೇಕಿದ್ದುದು ಎಲ್ಲ ಪರಿಕರಗಳಂತಲ್ಲ . ಪುಟ್ಟ ಮಗು!

ನಾವೆಲ್ಲಾ ಅಷ್ಟು ಆತಂಕದಿಂದಿದ್ದರೆ ವೇಣು ಮಾತ್ರ ‘ನೋಡೋಣ ಚಂಪಾ, ಎಲ್ಲಾ ತಯಾರಾಗಲಿ, ನಾಳೆ ಬೆಳಗ್ಗೆ ಒಳಗೆ ಅರೇಂಜ್ ಮಾಡೋಣ’ ಅಂದಾಗ, ಅದೇ ಧೈರ್ಯದಿಂದಲೇ ಬೆಳಗ್ಗೆ ಎಂದಿನಂತೆ ಶೂಟಿಂಗ್ ಶುರುವಾಯಿತು. ಮಗುವಿಲ್ಲದೆಯೇ ತೊಟ್ಟಿಲ ಶಾಸ್ತ್ರಕ್ಕೆ ಸಂಬಂಧಪಟ್ಟ ಉಳಿದ ಎಲ್ಲಾ ಶಾಟ್ ಗಳನ್ನೂ ತೆಗೆಯುತ್ತಿದ್ದೆವು. ಗಂಟೆ ಹತ್ತಾದರೂ ಮಗು ಸಿಕ್ಕಿಲ್ಲ, ವೇಣೂನೂ ಪತ್ತೆಯಿಲ್ಲ.

ದೃಶ್ಯಕ್ಕೆ ಬೇಕಾದ ಶಾಟ್ ಕಂಪೋಸ್ ಮಾಡುತ್ತಿದ್ದರೂ ನನ್ನ ಗಮನವೆಲ್ಲಾ ಹೊರಗೆ, ವೇಣು ಬಂದ್ರಾ ಅಂತಲೇ, ವೇಣು ನನ್ನ ಕಾಲ್ ಕೂಡಾ ರಿಸೀವ್ ಮಾಡ್ತಿಲ್ಲಾ, ಶೆಟ್ರಿಗಂತೂ ಕಂಡಾಗಲೆಲ್ಲಾ ವೇಣು ಬಂದ್ರಾ ಮಗು ಬಂತಾ ಅಂತ ತಲೆ ತಿಂದು, ಕೊನೆಗೆ ಶೆಟ್ರೂ ನನ್ನ ಕಣ್ತಪ್ಪಿಸಿ ಓಡಾಡುತ್ತಿದ್ದರು.

ಆದರೂ ಏನೋ ನಂಬಿಕೆ , ಕಾರಣ ಏನಾದರೂ ಬೇಕು ಅಂದಾಗ ವೇಣು ಬರಿಗೈಯ್ಯಲ್ಲಿ ಬಂದ ಇತಿಹಾಸವೇ ಇಲ್ಲ. ನನ್ನ ಬಲವಾದ ನಂಬಿಕೆ ಸುಳ್ಳಾಗದಂತೆ, ಮಧ್ಯಾಹ್ನದ ಹೊತ್ತಿಗೆ ತಂದೆ ತಾಯಿಯೊಡನೆ ಮುದ್ದಾದ ಮಗುವೊಂದನ್ನು ಕರೆತಂದ ವೇಣು ಅವರ ಮುಖದಲ್ಲಿದ್ದ ಸಮಾಧಾನದ ನಗು ಇನ್ನೂ ನೆನಪಿದೆ.

ತಂಡದಲ್ಲಿ ಕೆಲಸ ಮಾಡಲು ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಕಾರಣವಿರುತ್ತದೆ, ಕಲಾವಿದರಿಗೆ ಪರದೆಯ ಮೇಲೆ ಕಾಣುವ ಕಾರಣ, ಕೆಲವು ತಂತ್ರಜ್ಞರಿಗೆ ಅನುಭವ ಪಡೆಯುವ ಕಾರಣ ಇನ್ನೂ ಕೆಲವು ತಂತ್ರಜ್ಞರಿಗೆ ಆರ್ಥಿಕ ಕಾರಣ ಕೆಲವರಿಗೆ ಹೆಸರು ಪಡೆಯುವ ಕಾರಣ, ಆದರೆ, ಕಾರಣವಿಲ್ಲದೆ ತಂಡದ ಗೆಲುವನ್ನು ಸಂಭ್ರಮಿಸುವ ವೇಣು ಅಂತವರೂ ಕೆಲವರಿರುತ್ತಾರೆ.

ನಮ್ಮ ಡಿಓಪಿ ನವೀನ್, ವೇಣು ಅವರನ್ನು ನೋಡಿ “ಇಂತವರೊಬ್ಬರು ಪ್ರತಿ ತಂಡದಲ್ಲಿರುತ್ತಾರೆ ಮೇಡಂ ಅವರನ್ನು ನಾವು ಏಂಜೆಲ್ ಅಂತಾ ಕರೆಯುತ್ತೇವೆ” ಅನ್ನುತ್ತಿದ್ದರು. ಹಾಗೆಯೇ ಎರಡು ಸಿನೆಮಾದಲ್ಲಿ ಹೀರೋ ಆದರೂ ನಮ್ಮ ಜೊತೆಗಿದ್ದು, ಎಲ್ಲಾ ಕೆಲಸ ಮಾಡಿಕೊಂಡಿದ್ದ ಪವನ್ ಡಿ ಪೈ ಆಗಿರಬಹುದು, ಸುರತ್ಕಲ್ ಮತ್ತು ಮುಲ್ಕಿ ಕುಟುಂಬ, ಗೀತಾ ಸುರತ್ಕಲ್ ಅವರ ಶಾಂತಿನಿವಾಸದ ಕುಟುಂಬ, ರಾಜೇಶ್ ರಶ್ಮಿ, ಮುಂಬೈನ ವಿಶ್ವನಾಥ ಶೆಟ್ರು, ರವೀಂದ್ರ ಪೂಜಾರಿಯವರು, ಹರೀಶ್ ಪೇಜಾವರ್, ಹರೀಶ್ ಅಗರಗುತ್ತು ಸುಹಾಸ್ ಕಿಣಿ ಮತ್ತು ಗರುದತ್, ಒಬ್ಬರಾ ಇಬ್ಬರಾ, ಒಂದಷ್ಟೂ ತೊಂದರೆ ಕೊಡದೆ ನಮಗೆ ಬೇಕಾದ ಸಹಾಯ ಮಾಡುತ್ತಾ ಜೊತೆಯಾದ ಕರ್ನಿರೆ ಗ್ರಾಮಸ್ಥರು. ಇಂತಹ ನೂರಾರು ಏಂಜೆಲ್ ಗಳು ನಮ್ಮ ಜೊತೆಗಿದ್ದುದು ನಮ್ಮ ಪುಣ್ಯ.

ಅಮ್ಮಚ್ಚಿ ಮಾತ್ರವಲ್ಲ ಯಾವುದೇ ಒಂದು ಯಶಸ್ವಿ ಸಿನೆಮಾದ ಹಿಂದೆ ಪ್ರತಿಫಲಾಪೇಕ್ಷೆ ಇಲ್ಲದೆ ಕೆಲಸ ಮಾಡುವ ಇಂತಹ ಹಲವಾರು ಕಾಣದ ಕೈಗಳಿರುತ್ತವೆ ಎಂಬುದಂತೂ ಸತ್ಯ..

ಮೇಲೆ ಒಮ್ಮೆ ನಾನು ಹಳೆಯ ಸೈಕಲ್ ಅಂತ ಹೇಳಿದೆ… ಬಹುಶಃ ಸಿನೆಮಾ ನೋಡಿದವರಿಗೆ ಆಶ್ಚರ್ಯವಾಗಬಹುದು. ಹಾಡಿನಲ್ಲಿ ಒಂದು ಸಣ್ಣ ಶಾಟ್ ಬಿಟ್ಟರೆ, ಸೈಕಲ್ ಎಲ್ಲೂ ಕಾಣುವುದಿಲ್ಲವಲ್ಲ, ಮತ್ಯಾಕೆ ಸೈಕಲ್? ಅಂತ. ಅದಕ್ಕೊಂದು ಕತೆಯಿದೆ. ನಾನು ಚಿತ್ರಕತೆ ಬರೆಯುವಾಗ, ಅಮ್ಮಚ್ಚಿ ತೊಟ್ಟಿಲ ಶಾಸ್ತ್ರ ಮುಗಿಸಿ ಬರುವಾಗ, ಕತ್ತಲಾದರೂ, ಶಂಭಟ್ರ ಮಗನ‌ ಮನೆಯ ಬಳಿಯಿಂದಲೇ ಹಾದು ಬರುವುದು ಮನೆಯ ಬಳಿ ಇಣುಕಿ ನೋಡುವುದು ಅವನು ಕಾಣದೆ ನಿರಾಸೆಯಿಂದ ಹಿಂದಿರುಗಿ ಬರುವಾಗ, ಶಂಭಟ್ರ ಮಗ ಸೈಕಲ್ ಮೇಲೆ ಬಂದು ಅಮ್ಮಚ್ಚಿಯನ್ನು ಭೇಟಿಯಾಗುವುದು, ಹೀಗೆಲ್ಲಾ ಒಂದು ಸನ್ನಿವೇಶ ಬರೆದಿದ್ದೆ.

ಅದರ ಶೂಟಿಂಗ್ ಕೂಡಾ ಆಗಿತ್ತು ಅದೂ ಎರಡು ಬಾರಿ… ಒಮ್ಮೆ ಸರಿಯಾಗಿಲ್ಲವೆಂದು ಎರಡು ಬಾರಿ ಅದೇ ದೃಶ್ಯವನ್ನು ಶೂಟ್ ಮಾಡಿದ್ದೆವು ಆದರೂ ಸಮಾಧಾನವಿಲ್ಲ. ಎಡಿಟಿಂಗ್ ಟೇಬಲ್ನಲ್ಲಿ ಕೂತು ನೋಡಿದಾಗಲೂ ಏಕೋ ಆ ದೃಶ್ಯದ ಬಗ್ಗೆ ಒಂದಿಷ್ಟೂ ಸಮಾಧಾನವಾಗುತ್ತಿಲ್ಲ. ವೈದೇಹಿ ಮೇಡಂ ಒಪ್ಪಿಗೆ ಪಡೆದೇ ಆ ದೃಶ್ಯವನ್ನು ಶೂಟ್ ಮಾಡಿದ್ದು. ಆದರೂ ಯಾಕೋ ನನ್ಬ ಮನಸ್ಸೇ ಒಪ್ಪುತ್ತಿಲ್ಲ.

ಅಮ್ಮಚ್ಚಿ ಕತೆಯಲ್ಲಿ ಎಲ್ಲೂ ಆ ಹುಡುಗ ಕಾಣಿಸುವುದಿಲ್ಲ, ಸಿನೆಮಾದಲ್ಲೂ ಹಾಗಿದ್ದರೇ ಚೆಂದ, ಕತೆಯಲ್ಲಿ ಹುಡುಗ ಅಮ್ಮಚ್ಚಿಯ ಮನಸ್ಸಿನಲ್ಲಿಯೇ ಇದ್ದ ಹಾಗೇ ನೋಡುಗರ ಕಲ್ಪನೆಯಲ್ಲಿದ್ದರೇ ಚೆಂದ ಅನಿಸಿ, ಆ ದೃಶ್ಯವನ್ಬು ಬಳಸದೇ ಅಮ್ಮಚ್ಚಿಗೆ ಅವನನ್ನು ಭೇಟಿ‌ ಮಾಡಿಸದೇ ಬಿಟ್ಟುಬಿಟ್ಟೆ. ಸಿನೆಮಾ ಸಂವಾದದಲ್ಲಿ ಅನೇಕ ಪ್ರೇಕ್ಷಕರು ಏಕೆ ಶಂಭಟ್ರ ಮಗನನ್ನು ತೋರಿಸಿಲ್ಲ ಎಂದಾಗಲೆಲ್ಲ ಈ ಘಟನೆ ನೆನಪಾಗುತ್ತದೆ.

ಇಡೀ ಸಿನೆಮಾದಲ್ಲಿಯೇ ಹೀಗೇ. ಕತೆಯಿಂದ ಒಂದಿಷ್ಟು ಹೊರ ಹೋಗಲೂ ನನಗೆ ಮನಸ್ಸೇ ಬರುವುದಿಲ್ಲ. ಇದು ಕೆಲ ವಿಮರ್ಶಕರ ತಕರಾರು ಕೂಡ. ನೀನು ಲೇಖಕರಿಗೆ ತುಂಬಾ ಬದ್ಧಳಾಗಿರುತ್ತೀಯ ಅಂತಾ. ಸರಿಯೋ ತಪ್ಪೋ ಗೊತ್ತಿಲ್ಲ, ನಾನು ಕತೆಯನ್ನು ಒಂದು (ಬರಹ) ಮಾಧ್ಯಮದಿಂದ ಇನ್ನೊಂದು (ಸಿನೆಮಾ) ಮಾಧ್ಯಮಕ್ಕೆ ತರುತ್ತಿದ್ದೇನೆಯೇ ಹೊರತು ಹೊಸ ಕತೆ ಸೃಷ್ಟಿಸಿಲ್ಲ. ಹಾಗಾಗಿ ಅನಿವಾರ್ಯವಾದ ಸಣ್ಣಪುಟ್ಟ ಬದಲಾವಣೆ ಹೊರತು ಪಡಿಸಿ ಸಾಧ್ಯವಾದಷ್ಟೂ ಕತೆಗೆ ಬದ್ಧಳಾಗಿರಬೇಕೆಂಬುದೇ ನನ್ನ ಆಶಯ.

ಹಾಗಂತ. ಅದೇ ಸರಿಯೂ ಅಲ್ಲ ಅದು ಲೇಖಕರು ಮತ್ತು ನಿರ್ದೇಶಕರ ನಡುವಿನ ಹೊಂದಾಣಿಕೆ ಅಷ್ಟೇ ಇದರಲ್ಲಿ ಸರಿ ತಪ್ಪುಗಳ ಮಾತೇ ಇಲ್ಲ. ಕೊನೆಗೂ ಕೃತಿಗೆ ನ್ಯಾಯ ಒದಗಿಸುವುದಷ್ಟೇ ಮುಖ್ಯವಲ್ಲವೇ. ಕತೆ ಕಾದಂಬರಿಗಳನ್ನು ಸಿನೆಮಾ ಮಾಡುವಾಗ ಬರುವ ಸಾಮಾನ್ಯ ಸಮಸ್ಯೆ ಇದು. ‌ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಅನ್ನುವ ಹಾಗೆ ಆಗದೆ, ಲೇಖಕರ ಮತ್ತು ನಿರ್ದೇಶಕರ ಒಮ್ಮನಿಸ್ಸಿನಿಂದ ರೂಪುಗೊಂಡ ಕೃತಿಗಳು ಖಂಡಿತವಾಗಿಯೂ ಗೆಲ್ಲುತ್ತವೆ. ಅದಕ್ಕೆ ಅನೇಕ ಉದಾಹರಣೆಗಳೂ ಇವೆ. ಅಂತಹ ಚಿತ್ರಗಳ ಸಾಲಿಗೆ ಅಮ್ಮಚ್ಚಿ ಸೇರಿದ್ದು ನಮ್ಮ ತಂಡದ ಹೆಮ್ಮೆಯಲ್ಲವೇ..?

। ಮುಂದಿನ ವಾರಕ್ಕೆ ।

‍ಲೇಖಕರು ಚಂಪಾ ಶೆಟ್ಟಿ

October 18, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: