ಮಾಲತಿ ಮೊಯ್ಲಿಯವರಿಂದ ಕಲಿತ ಪಾಠ

ಕನ್ನಡ ಮುದ್ರಣ ಲೋಕದಲ್ಲಿ ಸ್ವ್ಯಾನ್ ಕೃಷ್ಣಮೂರ್ತಿ ಅವರದ್ದು ಮಹತ್ವದ ಹೆಸರು.

‘ಸ್ವ್ಯಾನ್ ಪ್ರಿಂಟರ್ಸ್’ ಮೂಲಕ ಮುದ್ರಣ ವಿನ್ಯಾಸದಲ್ಲಿ ಬದಲಾವಣೆ ತಂದ ಕೃಷ್ಣಮೂರ್ತಿ ಅವರ ಹೆಜ್ಜೆ ಗುರುತುಗಳು ಇಲ್ಲಿವೆ.

ಪುಸ್ತಕದಲ್ಲಿ ತಿದ್ದುಪಡಿಯಾಗದಿದ್ದರೆ, ಮುಖಪುಟದ ಬಣ್ಣದಲ್ಲಿ ವ್ಯತ್ಯಾಸವಾದರೆ ಆಭಾಸವಾಗುತ್ತದೆ ಎಂಬುದನ್ನು ತಿಳಿಸಿದ ಸರಸ್ವತಿ ಸಮ್ಮಾನ್ ಪುರಸ್ಕೃತ ಡಾ. ಎಂ ವೀರಪ್ಪ ಮೊಯ್ಲಿ. ಅವರ ‘ಸಿರಿಮುಡಿ ಪರಿಕ್ರಮಣ’ ಮಹಾಕಾವ್ಯ ಮುದ್ರಣ ಸಂದರ್ಭದ ಒಂದು ಘಟನೆ.

‘ಸಿರಿಮುಡಿ ಪರಿಕ್ರಮಣ’ ಪುಸ್ತಕ ಮುದ್ರಣ ಸಮಯದಲ್ಲಿ ಅದನ್ನು ಪ್ರಕಟಣೆಗೆ ಸಿದ್ಧಪಡಿಸುವ ಬಗ್ಗೆ ವೀರಪ್ಪ ಮೊಯ್ಲಿ ಅವರ ಮನೆಯಲ್ಲಿ ನಡೆಯುತ್ತಿದ್ದ ಸಭೆಗಳಿಗೆ ಕೆ ಆರ್ ಕಮಲೇಶ್ ಅವರು ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು.  ಸಭೆಗಳಲ್ಲಿ ವೀರಪ್ಪ ಮೊಯ್ಲಿ ಅವರ ಜೊತೆ ಅವರ ಪತ್ನಿ ಶ್ರೀಮತಿ ಮಾಲತಿ ಮೊಯ್ಲಿ ಅವರು ಬಹಳ ಆಸಕ್ತಿಯಿಂದ ಭಾಗವಹಿಸುತ್ತಿದ್ದರು.

ಪುಸ್ತಕದ ಪರಿಷ್ಕರಣೆ, ಕರಡು ತಿದ್ದುವುದು,  ಮುಖಪುಟ ವಿನ್ಯಾಸ ಹೀಗೆ ಮುದ್ರಣಪೂರ್ವ ಕೆಲಸಗಳಲ್ಲಿ ವೀರಪ್ಪ ಮೊಯ್ಲಿ ಅವರಿಗಿಂತ ಅವರ ಶ್ರೀಮತಿಯವರಿಗೆ ಆಸಕ್ತಿ ಜಾಸ್ತಿ. ಅವರು ಕೆಲಸದ ವಿಷಯದಲ್ಲಿ ತುಂಬಾ ಖಡಕ್. ಗುಣಮಟ್ಟ, ವಿನ್ಯಾಸದ ಬಗ್ಗೆ ರಾಜಿಯ ಮಾತೇ ಇಲ್ಲ.

‘ಸಿರಿಮುಡಿ ಪರಿಕ್ರಮಣ’ದ ಮುಖಪುಟ, ಒಳಪುಟಗಳ ವಿನ್ಯಾಸ, ಕರಡು ತಿದ್ದುವ ಕೆಲಸ ಎಲ್ಲಾ ಮುಗಿದು ಅಂತಿಮವಾಗಿ ಮುದ್ರಣಕ್ಕೆ ಒಪ್ಪಿಗೆ ಸೂಚಿಸಿದ ಮೇಲೆ ಮುದ್ರಿಸಬೇಕು, ಲೋಕಾರ್ಪಣೆಗೆ ಮುಂಚೆ ಹತ್ತು ಪುಸ್ತಕಗಳನ್ನು ಸಿದ್ಧಮಾಡಿ ಮಾಲತಿ ಮೇಡಂಗೆ ತೋರಿಸಬೇಕು, ಅವರು ಇನ್ನೊಮ್ಮೆ ಅಂತಿಮವಾಗಿ ಕೂಲಂಕಷವಾಗಿ ನೋಡಿ ಒಪ್ಪಿದ ಮೇಲಷ್ಟೇ ಪುಸ್ತಕ ಲೋಕಾರ್ಪಣೆಗೆ ಸಿದ್ಧಮಾಡಬೇಕು. 

ಅದರಂತೆ ‘ಸಿರಿಮುಡಿ ಪರಿಕ್ರಮಣ’ದ 10 ಪ್ರತಿಗಳನ್ನು ಅವರ ಮುಂದೆ ಇಟ್ಟೆವು. ಪುಸ್ತಕಗಳನ್ನು ನೋಡುತ್ತಲೇ ಗಾಬರಿಯಿಂದ ಅವರು ನಮ್ಮನ್ನು ಕರೆದು “ಮುಖಪುಟ ಬದಲಾವಣೆ ಮಾಡಲೇಬೇಕು ಹಾಗೂ ಒಳಗಿನ ಪುಟದಲ್ಲಿ ಒಂದು ತಿದ್ದುಪಡಿ ಆಗಿಲ್ಲ ಅದು ಸರಿ ಮಾಡಬೇಕು” ಎಂದರು.

“ಮೇಡಂ ಮುಖಪುಟ ಎಲ್ಲ ಮುದ್ರಣವಾಗಿಬಿಟ್ಟಿದೆ” ಎಂದು ಅವರ ಮನಸ್ಸು ಒಲಿಸಲು ಪ್ರಯತ್ನಪಟ್ಟರೂ ಅವರು ಒಪ್ಪಲಿಲ್ಲ, ಬದಲಾವಣೆ ಆಗಲೇಬೇಕು ಎಂದುಬಿಟ್ಟರು. 

ಮುಖಪುಟ ಮುದ್ರಣ ಸಮಯದಲ್ಲಿ ಸಯಾನ್, ಮೆಜಂತಾ, ಯೆಲ್ಲೋ, ಬ್ಲಾಕ್ ಈ ನಾಲ್ಕು ಬಣ್ಣಗಳು ಸರಿಯಾಗಿ ಮಿಶ್ರಣವಾಗಿ ಮುದ್ರಣವಾಗಬೇಕು. ಸ್ವಲ್ಪ ವ್ಯತ್ಯಾಸವಾದರೂ ಮುಖಪುಟದ ಬಣ್ಣವೇ ವ್ಯತ್ಯಾಸವಾಗಿ ಬಿಡುತ್ತದೆ. ‘ಸಿರಿಮುಡಿ ಪರಿಕ್ರಮಣ’ದ ಮುದ್ರಣ ಸಮಯದಲ್ಲಿ ಬಣ್ಣಗಳ ವ್ಯತ್ಯಾಸವಾಗಿ ಮಾಲತಿ ಮೇಡಂ ಅಂತಿಮಗೊಳಿಸಿದ ಮುಖಪುಟಕ್ಕಿಂತ ಭಿನ್ನವಾಗಿ ಆಗಿಬಿಟ್ಟಿತ್ತು.

ನಾವು ಮೇಡಂಗೆ “ಬಣ್ಣ ವ್ಯತ್ಯಾಸವಾಗಿದ್ದರೂ ಮುಖಪುಟ ನೋಡಲು ಚೆನ್ನಾಗಿದೆ” ಎಂದು ಅವರಿಗೆ ಮನವರಿಕೆ ಮಾಡಲು ಎಷ್ಟೇ ಪ್ರಯತ್ನಿಸಿದರೂ, “ಇಲ್ಲ ಇಲ್ಲ, ನಾವು ಅಂತಿಮವಾಗಿ ನೋಡಿ ಒಪ್ಪಿಗೆ ಕೊಟ್ಟ ಬಣ್ಣವೇ ಬೇರೆ, ಈಗ ಮುದ್ರಣವಾಗಿರುವ ಮುಖಪುಟದ ಬಣ್ಣವೇ ಬೇರೆಯಾಗಿದೆ. ಯಾವ ಕಾರಣಕ್ಕೂ ಮುಖಪುಟ ಬಳಸಬೇಡಿ. ಹೊಸದಾಗಿ ನಾವು ಒಪ್ಪಿರುವ ಬಣ್ಣದ ಮುಖಪುಟ ಮರುಮುದ್ರಣ ಮಾಡಿ, ಬೈಂಡಿಂಗ್ ಮಾಡಿ” ಎಂದು ಖಡಕ್ಕಾಗಿ ಹೇಳಿಬಿಟ್ಟರು.

ನಂತರ ಅವರು ಒಪ್ಪುವಂತೆಯೇ ಮುಖಪುಟ ಮುದ್ರಿಸಿ, ಪುಸ್ತಕವನ್ನು ಬೈಂಡಿಂಗ್ ಮಾಡಿದೆವು. ಪುಸ್ತಕವು ಲೋಕಾರ್ಪಣೆಯಾದ ಬಳಿಕ ಕಾರ್ಯಕ್ರಮದ ಕೊನೆಯಲ್ಲಿ ಮಾಲತಿ ಮೇಡಂ ಅವರು ನನ್ನನ್ನು ಕರೆದು, ಬಣ್ಣಗಳು ಸ್ವಲ್ಪ ಬದಲಾವಣೆಯಾದರೂ ಮುಂದೆ ಏನೆಲ್ಲಾ ಅವಾಂತರಗಳು ಆಗುತ್ತವೆ ಎಂಬುದನ್ನು ಬಿಡಿಸಿ ಬಿಡಿಸಿ ಹೇಳಿದರು. ಆಗ ನನಗೆ ಜ್ಞಾನೋದಯವಾಯಿತು. ದೊಡ್ಡವರ ಹಿಂದೆ ಇರುವವರು ಮಾಡುವ ಸಣ್ಣ ತಪ್ಪುಗಳಿಂದ ದೊಡ್ಡವರು ಹೇಗೆ ಸಂಕಷ್ಟದಲ್ಲಿ ಸಿಲುಕಿಕೊಳ್ಳುತ್ತಾರೆ ಎಂದು ಮನವರಿಕೆಯಾಯಿತು.

ವೀರಪ್ಪ ಮೊಯ್ಲಿಯವರು ಬರೆದಿರುವ ಮೂರು ಮಹಾಕಾವ್ಯಗಳು, ಶ್ರೀ ರಾಮಾಯಣ ಮಹಾನ್ವೇಷಣೆ, ಸಿರಿಮುಡಿ ಪರಿಕ್ರಮಣ, ಬಾಹುಬಲಿ ಮತ್ತಿತರ ಪುಸ್ತಕಗಳ ಮುದ್ರಣಪೂರ್ವ ಸಭೆಗಳಲ್ಲಿ ಶ್ರೀಮತಿ ಮಾಲತಿ ಮೊಯ್ಲಿ ಮತ್ತು ಶ್ರೀ ವೀರಪ್ಪ ಮೊಯ್ಲಿ ಅವರಿಂದ ಸಣ್ಣ ತಪ್ಪುಗಳು ಮುಂದೆ ಏನೆಲ್ಲ ಅವಾಂತರಗಳನ್ನು ಸೃಷ್ಟಿಸುತ್ತವೆ ಎಂಬುದನ್ನು ಅರಿತುಕೊಂಡೆ.

ಸಿರಿಮುಡಿ ಪರಿಕ್ರಮಣ ಪುಸ್ತಕದ ಮುಖಪುಟ ಮುದ್ರಣದ ಸಮಯದಲ್ಲಿ ಬಣ್ಣ ವ್ಯತ್ಯಾಸವಾಗಿ ಮಾಲತಿ ಮೊಯ್ಲಿಯವರು ಒಪ್ಪದೆ ತಿರಸ್ಕೃತಗೊಳಿಸಿದುದ್ದರಿಂದ ಮತ್ತೆ ಅವರು ಒಪ್ಪುವಂತೆ ಮುಖಪುಟವನ್ನು ಕಡಿಮೆ ಸಮಯದಲ್ಲಿ ಹೆಚ್ಚಿನ ಶ್ರದ್ಧೆಯಿಂದ ಸಿದ್ಧಪಡಿಸಬೇಕಾಯಿತು. ಇದರಿಂದ ನಮ್ಮ ಮುದ್ರಣಾಲಯಕ್ಕೆ ನಷ್ಟವಾಯಿತು ಎನ್ನುವುದು ನಿಜವಾದರೂ ಮುದ್ರಕರು ಅಳವಡಿಸಿಕೊಳ್ಳಬೇಕಾದ ಒಂದು ನೀತಿಪಾಠವನ್ನಂತೂ ಇದರಿಂದ ಕಲಿತಂತಾಯಿತು.

October 19, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Mallikarjuna Hosapalya

    ಮೊದಲು ಮಾಡಿದ್ದ ಮುಖಪುಟಕ್ಕೂ ಮತ್ತೆ ಮಾಡಿದ್ದಕ್ಕೂ ಏನು ವ್ಯತ್ಯಾಸ ಎಂಬುದು ತಿಳಿಯಲಿಲ್ಲ. ಹೋಗಲಿ ಎರಡೂ ಮುಖಪುಟಗಳ ಚಿತ್ರಗಳನ್ನಾದರೂ ಹಾಕಿದ್ದರೆ ತಿಳಿದುಕೊಳ್ಳಬಹುದಿತ್ತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: