ಅಜ್ಜನಿಗಾಗಿ ಟ್ರೇನ್ ನಿಲ್ಲಿಸಿಯೇ ಬಿಟ್ವಿ…

ಸಂಗಮೇಶ್ ಮೆನಸಿನಕಾಯಿ

ಸ್ಟಾಪ್ ಇಲ್ಲದ ಟ್ರೇನ್ ನಿಲ್ಲಿಸಿ, ಅಜ್ಜನ್ನ ಇಳಿಸಿದೆವು!ಪತ್ರಕರ್ತರ ಸಮ್ಮೇಳನ ಮುಗಿಸಿ ವಿಜಯಪುರ ರೈಲ್ವೆ ನಿಲ್ದಾಣಕ್ಕೆ ಬಂದು ಸೊಲಾಪುರ-ಗದಗ ಡೆಮು ಎಕ್ಸಪ್ರೆಸ್ ಹತ್ತಿದೆ. ಅದೇ ಟ್ರೇನ್‌ಗೆ ಬಾಗಲಕೋಟೆಯಲ್ಲಿ ನನ್ನ ಬಾಲ್ಯದ ಸಹಪಾಠಿ ಡಾ ರವಿಕುಮಾರ ಕರಿಯಪ್ಪನವರ ಹತ್ತುವವನಿದ್ದ. ಟ್ರೇನ್ ಕಡ್ಲಿಮಟ್ಟಿ ದಾಟಿದ ನಂತರ ಸುಮ್ಮನೆ ಬಾಗಿಲ ಕಡೆ ಬಂದೆ. ಒಬ್ಬ ಅಜ್ಜ ನನ್ನ ಹಿಂದೆ ಬಂದು, “ಸಾಹೇಬರ ಈ ಗಾಡಿ ಗುಳೇದಗುಡ್ಡಕ್ಕ ನಿಲ್ಲತ್ತೇನ್ರಿ?” ಅಂದ. ನಾನು ಕೂಡಲೇ ಮೊಬೈಲ್ ತೆಗೆದು NTES ಆ್ಯಪ್‌ನಲ್ಲಿ ಚೆಕ್ ಮಾಡಿ, “ನಿಲ್ಲುತ್ತಾಳ್ರಿ ಅಜ್ಜಾರ…” ಅಂದೆ. ಅದಕ್ಕ ಅಜ್ಜ ಹೇಳಿದ, “ಇಲ್ರಿ ಸಾಹೇಬರ ಗುಳೇದಗುಡ್ಡ ಸ್ಟೇಶನ್ಯಾಗ ಅದೇನೋ ಕೆಲಸ ನಡದೈತಿ, ಟ್ರೇನ್‌ ಅಲ್ಲಿ ನಿಲ್ಲಂಗಿಲ್ಲ ಅಂತ ಹೇಳಿ, ಬದಾಮಿಗೆ ಟಿಕೆಟ್ ಕೊಟ್ಟಾರ್ರಿ…” ಅಜ್ಜ ಆತಂಕದಿಂದ ಹೇಳಿದ. ಅತನ ಟಿಕೆಟ್ ನೋಡಿದೆ- ‘ಲಚ್ಯಾಣ ಟು ಬದಾಮಿ’ ಇತ್ತು. ಅಷ್ಟರಲ್ಲಿ ಟ್ರೇನ್ ಮುಗಳಳ್ಳಿ ದಾಟಿ, ಬಾಗಲಕೋಟೆಗೆ ಬಂತು.

ಕೆಲವು ಪ್ರಯಾಣಿಕರು ಇಳಿಯಲು ಬಾಗಿಲ ಕಡೆ ಬಂದರು. ಅವರು ನೋಡಲು ನಿತ್ಯ ಅದೇ ರೈಲಿಗೆ ಓಡಾಡುವ ಮತ್ತು ಅದೇ ಭಾಗದ ಪ್ರಯಾಣಿಕರಂತೆ ಕಂಡರು. ಅವರಿಗೆ ಕೇಳಿದರೆ, “ಗುಳೇದಗುಡ್ಡಕ್ಕ ಎಲ್ಲ ಟ್ರೇನ್ ನಿಲ್ತಾವ್ರಿ. ದೊಡ್ಡ ಸ್ಟೇಶನ್ ಅದು‌. ನಮಗ ಪಕ್ಕಾ ಗೊತ್ತೈತಿ. ಈ ಟ್ರೇನೂ ಅಲ್ಲಿ ನಿಲ್ಲತೈತಿ” ಅಂದರು. ಆದರೆ ಒಬ್ಬ ಪ್ರಯಾಣಿಕ ಮಾತ್ರ, “ನಾವು ಬೆಳಿಗ್ಗೆ ಅತ್ತಾಗಿಂದ ಟ್ರೇನ್‌ನ್ಯಾಗ ಬಂದಿವ್ರಿ. ಅದು ಗುಳೇದಗುಡ್ಡದಾಗ ನಿಂದರಲಿಲ್ಲ ನೋಡ್ರಿ” ಅಂದರು. “ಅದು ಪ್ಯಾಸೆಂಜರ್ರೋ ಎಕ್ಸಪ್ರೆಸ್ಸೋ?” ಅಂತ ಕೇಳಿದಾಗ ಅವರು, “ಅದೇನೂ ಗೊತ್ತಿಲ್ರಿ. ನಾವು ಬದಾಮಿಯಿಂದ ಹತ್ತಿದಿವಿ. ಅದು ಸ್ಟಾಪ್ ಮಾಡಲಿಲ್ರಿ” ಅಂದರು.

ಎಷ್ಟೋ ಸಲ ರೈಲ್ವೆ ಇಲಾಖೆ ಇಂಥ ಬದಲಾವಣೆಗಳ ಬಗ್ಗೆ ಪತ್ರಿಕಾಪ್ರಕಟಣೆ ಜಾರಿ ಮಾಡಿ ಸುಮ್ಮನೆ ಕುಳಿತುಬಿಡತ್ತೆ. ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿ, ರೈಲಿನ ಎಲ್ಲ ಪ್ರಯಾಣಿಕರಿಗೆ ತಲುಪುವುದೇ ಇಲ್ಲ. ಅಜ್ಜನ ದುಗುಡ ಮುಂದುವರಿಯಿತು. ಅದು ಗುಳೇದಗುಡ್ಡಕ್ಕೆ ನಿಲ್ಲುವುದಿಲ್ಲ ಅಂತಾದರೆ ಬಾಗಲಕೋಟೆಗೇ ಇಳಿದು ಬಸ್ಸಿಗೆ ಹೋಗಬೇಕು ಅಂತ ಆತನ ಯೋಚನೆ. ಆದರೆ ಬಾಗಲಕೋಟೆಯ ಬದಲು ಬದಾಮಿಗೇ ಇಳಿದು ವಾಪಸ್ ಬರೋದು ಒಳ್ಳೆಯದು ಅಂತ ಅಲ್ಲಿನ ಕೆಲವು ಪ್ರಯಾಣಿಕರ ಸಲಹೆ.”ಅಜ್ಜಾರ, ಅಲ್ಲಿ ಬಾಗಲಕೋಟ್ಯಾಗ ಯಾರಾದರೂ ರೈಲ್ವೆ ಸ್ಟಾಫ್ ಸಿಕ್ಕರ ಕೇಳೂಣು ತಡೀರಿ…” ಅಂತ ಹೇಳಿದೆ. ಅಜ್ಜನ ವಯಸ್ಸು ೭೦ ದಾಟಿರಬೇಕು. ಮಧ್ಯಾಹ್ನ ಒಂದು ಗಂಟೆಗೇ ಲಚ್ಯಾಣದಲ್ಲಿ ಈ ಟ್ರೇನ್ ಹತ್ತಿದ್ದ. ಬದಾಮಿಯಿಂದ ಗುಳೇದಗುಡ್ಡಕ್ಕೆ ಬಂದರೆ ಅಲ್ಲಿಂದ ಮುಂದೆ ತಾನು ಹೋಗಬೇಕಾಗಿರುವ ಕಾಜಿ ಬೂದಿಹಾಳ ಗ್ರಾಮಕ್ಕೆ ಕತ್ತಲಾದ ನಂತರ ಯಾವುದೇ ವಾಹನ ಸಿಗಲ್ಲ ಅನ್ನೋದು ಆತನ ಚಿಂತೆಯಾಗಿತ್ತು.

ಬಾಗಲಕೋಟೆಯಲ್ಲಿ ವಾಕಿಟಾಕಿ ಹಿಡಿದು ತಿರುಗುತ್ತಿದ್ದ ಸ್ಟೇಶನ್ ಮಾಸ್ಟರ್‌ಗೆ ಈ ಬಗ್ಗೆ ಕೇಳಿದಾಗ ಅವರು ಗುಳೇದಗುಡ್ಡದಲ್ಲಿ ಈಗಾಗಲೇ ೧೫ ದಿನಗಳಿಂದ ಯಾವುದೇ ಟ್ರೇನ್ ನಿಲ್ಲುತ್ತಿಲ್ಲ; ಆದರೆ ಅಲ್ಲಿ ಕೆಲವು ಸಿಬ್ಬಂದಿ ಹತ್ತುವವರಿರುತ್ತಾರೆ, ಅವರ ಸಲುವಾಗಿ ಈ ಟ್ರೇನ್ ಅಲ್ಲಿ ನಿಧಾನವಾಗಿ ಚಲಿಸುತ್ತದೆ; ಅಲ್ಲಿನ ಕಾರ್ಮಿಕರು ಹತ್ತಿದ ತಕ್ಷಣ ಟ್ರೇನಿನ ವೇಗ ಹೆಚ್ಚುತ್ತದೆ ಅಂತ ಮಾಹಿತಿ ಕೊಟ್ಟರು.

“ಹಾಗಾದರೆ ಈ ಅಜ್ಜನ ಸಲುವಾಗಿ ಒಂದು ಕ್ಷಣ ಪೂರ್ತಿ ನಿಲ್ಲಿಸಲು ಗುಳೇದಗುಡ್ಡ ಸ್ಟೇಶನ್ ಮಾಸ್ಟರ್‌ಗೆ ಒಂಚೂರು ಹೇಳ್ರಿ ಪ್ಲೀಸ್” ಅಂದೆ. “ಅಲ್ಲಿ ಟ್ರೇನು ನಿಂತರೂ ನಿಮಗೆ ಇಳಿಯೋಕೆ ಪ್ಲ್ಯಾಟ್‌ಫಾರ್ಮ್ ಇಲ್ಲ. ಟ್ರೇನ್ ಮಧ್ಯದ ಹಳಿ ಮೇಲೆ ಹೋಗುವುದರಿಂದ ವಯಸ್ಸಿನವರಿಗೇ ಇಳಿಯೋದು ಕಷ್ಟ; ಇನ್ನು ಈ ಮುತ್ಯಾಗ ಸಾಧ್ಯನ ಆಗೂದಿಲ್ಲ, ಸುಮ್ಮನೆ ಬದಾಮಿಗೆ ಹೋಗಿ ವಾಪಸ್ ಬಸ್ ಅಥವಾ ಟಂಟಂನಲ್ಲಿ ಬರೋದು ಒಳ್ಳೆಯದು” ಅಂದರು ಮಾಸ್ಟರ್.

ಅಜ್ಜ ದೈನೇಸಿ ಬಿಟ್ಟ. “ಇಲ್ರಿ ಸಾಹೇಬರ ನನಗ ಮತ್ತ ಕಾಜಿ ಬೂದಿಹಾಳಕ್ಕ ಯಾವೂ ಗಾಡಿ ಸಿಗೂದಿಲ್ರಿ…” ಅಂದ. ಆತನ ಮನೆಯವರ ಮೊಬಲ್ ನಂಬರ್ ಇದ್ದರೆ ಈ ಅಜ್ಜನನ್ನು ಬಾಗಲಕೋಟೆ ಅಥವಾ ಬದಾಮಿ ಎರಡರಲ್ಲಿ ಯಾವ ಊರಿಗೆ ಇಳಿಸಿದರೆ ಒಳ್ಳೆಯದು ಎಂಬುದನ್ನು ಕೇಳೋಣ ಅಂದುಕೊಂಡೆ. ಅಜ್ಜನ ಬಳಿ ಮೊಬೈಲ್ ಇಲ್ಲ, ಅಷ್ಟೇ ಅಲ್ಲ, ಯಾವುದೇ ಬಂಧುಗಳ ಸಂಪರ್ಕ ವಿವರಗಳೂ ಆತನ ಬಳಿ ಇಲ್ಲ. ಈ ಎಲ್ಲ ಚರ್ಚೆಯನ್ನು ಗಮನಿಸುತ್ತಿದ್ದ ಅಲ್ಲಿನ ಮೂವರು ಯುವಕರು, “ಸರ ಟ್ರೇನ್ ಒಂಚೂರು ನಿಂತರ ಸಾಕು, ನಾವು ಮುತ್ಯಾನ್ನ ಸುರಕ್ಷಿತವಾಗಿ ಇಳಿಸ್ತೀವಿ ತೊಗೊರಿ..” ಅಂತ ಧೈರ್ಯ ಕೊಟ್ಟರು. ಈ ಡೆಮು ಎಕ್ಸ್‌ಪ್ರೆಸ್‌ನ ಬಾಗಿಲು ಬೇರೆ ಊರಗಲ. ಟ್ರೇನ್ ಪ್ಲ್ಯಾಟ್ಫಾರ್ಮ್ ಬಳಿ ಇದ್ದಾಗಲೂ ಹತ್ತೋದು ಇಳಿಯೋದು ಒಂಚೂರು ಕಷ್ಟವೇ. ಗುಳೇದಗುಡ್ಡ ಸ್ಟೇಶನ್ ಮಾಸ್ಟರ್‌ಗೆ ಟ್ರೇನ್ ಪೂರ್ತಿ ಹಾಲ್ಟ್ ಮಾಡಿಸುವಂತೆ ಈ ಬಾಗಲಕೋಟೆ ಸ್ಟೇಶನ್ ಮಾಸ್ಟರ್‌ಗೆ ಮತ್ತೊಮ್ಮೆ ವಿನಂತಿಸಿದೆ. ಅವರು, “ಟ್ರೈ ಮಾಡ್ತೀನಿ, ಗ್ಯಾರಂಟಿ ಹೇಳಲ್ಲ” ಅಂದರು.

ಟ್ರೇನ್ ಗುಳೇದಗುಡ್ಡದಲ್ಲಿ ನಿಂತರೆ ಅಜ್ಜನನ್ನು ಇಳಿಸೋದು, ಇಲ್ಲದಿದ್ದರೆ ಬದಾಮಿಗೆ ಇಳಿಸೋದು ಎಂಬ ನಿರ್ಧಾರ ಮಾಡಿದೆವು.ಈ ಗುಳೇದಗುಡ್ಡ ರೋಡ್ ರೈಲ್ವೆ ಸ್ಟೇಶನ್ ಬಗ್ಗೆ ಗೊತ್ತಿಲ್ಲದವರಿಗೆ ಹೇಳಲೇಬೇಕು. ಯಾವುದೇ ಊರಿನ ರೈಲ್ವೆ ಸ್ಟೇಶನ್ ಜೊತೆ ‘ರೋಡ್’ ಎಂಬ ಶಬ್ದ ಇದ್ದರೆ ಆ ಊರು ಅಲ್ಲಿಲ್ಲ; ಆ ಊರಿಗೆ ಹೋಗುವ ರಸ್ತೆ ಮಾತ್ರ ಅಲ್ಲಿದೆ ಅಂತ ಅರ್ಥ. ಗುಳೇದಗುಡ್ಡ ರೋಡ್ ನಿಲ್ದಾಣದ ಬಳಿ ಇರುವ ಊರಿನ ಹೆಸರು ಕಟಗೇರಿ. ಹಾಗಾದರೆ ರೈಲು ನಿಲ್ದಾಣದ ಹೆಸರು ಕಟಗೇರಿ ಎಂದಿರಬೇಕಿತ್ತಲ್ಲ? ಕೆಲವೊಮ್ಮೆ ಎರಡು-ಊರಿನ ಹದ್ದಿನಲ್ಲಿ ಬರುವ ಜಮೀನಿನಲ್ಲಿ ರೈಲು ನಿಲ್ದಾಣ ನಿರ್ಮಾಣವಾದಾಗ, ತಮ್ಮೂರಿನ ಹೆಸರು ಇಡಬೇಕೆಂದು ಆ ೨-೩ ಗ್ರಾಮಗಳ ಜನ ತಗಾದೆ ತೆಗೆದರೆ, ಆ ಎಲ್ಲ ಊರುಗಳ ಹೆಸರುಗಳನ್ನು ಬಿಟ್ಟು, ಹತ್ತಿರದ ಪ್ರವಾಸಿ ಸ್ಥಳ ಅಥವಾ ದೊಡ್ಡ ಊರಿನ ಹೆಸರು ಇಟ್ಟು ‘ರೋಡ್’ ಹಚ್ಚಿ ಬಿಡುತ್ತದೆ ರೈಲ್ವೆ ಇಲಾಖೆ. ಅಂತೆಯೇ ‘ಬಸವನ ಬಾಗೇವಾಡಿ ರೋಡ್’ ಎಂಬ ರೈಲು ನಿಲ್ದಾಣ ತೆಲಗಿ ಗ್ರಾಮದಲ್ಲಿದೆ; ‘ಕೂಡಲ ಸಂಗಮ ರೋಡ್’ ರೈಲು ನಿಲ್ದಾಣ ರಾಂಪೂರ ಬಳಿ ಇದೆ! ‘ಗೋಕಾಕ್ ರೋಡ್’ದೂ ಇದೇ ಕತೆ. ಟ್ರೇನ್ ಗುಳೇದಗುಡ್ಡ ರೋಡ್ ರೈಲು ನಿಲ್ದಾಣ ಪ್ರವೇಶಿಸುತ್ತಿದ್ದಂತೆ ವೇಗ ತಗ್ಗಿಸಿತು. ಅಲ್ಲಿ ಕೆಲಸ ಮಾಡುವ ಕಾರ್ಮಿಕರು ಹತ್ತಿಕೊಳ್ಳುತ್ತಿದ್ದಂತೆ ವೇಗ ಹೆಚ್ಚಿಸಿತು! ನಾನು ದೂರದಿಂದಲೇ ಪ್ಲ್ಯಾಟ್‌ಫಾರ್ಮ್ ಮೇಲೆ ನಿಂತಿದ್ದ ಸ್ಟೇಶನ್ ಮಾಸ್ಟರ್‌ಗೆ ‘ಒಂದ್ ನಿಮಿಷ ನಿಲ್ಲಿಸಿ’ ಎಂಬಂತೆ ಕೈ ಮಾಡಿದೆ. ಅವನು ‘ಇಲ್ಲ’ ಎಂಬಂತೆ ಸಂಜ್ಞೆ ಮಾಡಿದ. ಕೂಡಲೇ ಅಜ್ಹನನ್ನು ತೋರಿಸಿ, “ಇವರ ಸಲುವಾಗಿ ಪ್ಲೀಸ್…” ಎಂಬಂತೆ ಗೋಗರೆದೆ‌. ಅವನು ವಾಕಿಟಾಕಿಯಲ್ಲಿ ಚಾಲಕನಿಗೆ ಮಾತನಾಡಿ, “ಓಕೆ ಓಕೆ ವೇಟ್ ವೇಟ್…” ಎಂಬಂತೆ ನಮ್ಮ ಕಡೆ ಕೈ ಮಾಡಿದ.

ನಮ್ಮ ಹುಡುಗರಿಗೆ ಹೇಳಿದೆ-“ಟ್ರೇನ್ ನಿಲ್ಲುತ್ತೆ; ಅಜ್ಜನನ್ನು ಹುಷಾರಾಗಿ ಇಳಿಸುವ ಜವಾಬ್ದಾರಿ ನಿಮ್ಮದು” ಅಂದೆ. ಅವರು, “ಅದರ ಚಿಂತಿ ಬಿಡ್ರಿ ಸರ…” ಅಂತ ರೆಡಿ ಆದರು. ನಿಲ್ಲುತ್ತಿದ್ದಂತೆ ತಾವು ಮೊದಲು ಕೆಳಗಿಳಿದು ನಿಂತರು. ನಾನು ಮತ್ತು ರವಿ ಮೇಲಿನಿಂದ ಅಜ್ಜನನ್ನು ಮಗುವಿನಂತೆ ಇಳಿಸಿದೆವು. ಕೆಳಗಿನ ಹುಡುಗರು, ಅಜ್ಜನನ್ನು ಇಳಿಸಿಕೊಂಡು, ಒಂದು ಸುರಕ್ಷಿತ ಜಾಗದಲ್ಲಿ ನಿಲ್ಲಿಸಿ, ಮತ್ತೆ ಟ್ರೇನ್ ಹತ್ತಿದರು. ಇಷ್ಟು ನಿಂತದ್ದೇ ತಡ. ಸುಮಾರಿ ೨೦-೩೦ ಇತರ ಪ್ರಯಾಣಿಕರು ಬೇರೆ ಬೇರೆ ಬೋಗಿಗಳಿಂದ ಇಳಿದರು! ಅಂದರೆ ಅವರೆಲ್ಲ ಬದಾಮಿಗೆ ಹೋಗಿ ವಾಪಸ್ ಬೇರೆ ವಾಹನಗಳಲ್ಲಿ ಬರುವವರಿದ್ದರು!ಆದರೆ ಅಜ್ಜನಿಗೆ ಅಲ್ಲಿಂದ ಸ್ಟೇಶನ್ ಹೊರಕ್ಕೆ ಹೋಗಲು ದಾರಿಯೇ ಇರಲಿಲ್ಲ. ನಾವು “ಆ ಕಡೆಯಿಂದ ಹೋಗಜ್ಜ, ಈ ಕಡೆಯಿಂದ ಹೋಗಜ್ಜ..‌” ಎಂದು ಹೇಳುತ್ತಿರುವಾಗಲೇ, “ಅಜ್ಜನ ಚಿಂತಿ ಇನ್ನ ನಮಗ ಬಿಡ್ರಿ…” ಅಂದರು ಅಲ್ಲಿನ ಸ್ಟೇಶನ್ ಮಾಸ್ಟರ್ ಮತ್ತು ಪಾಯಿಂಟ್ಸ್‌ಮನ್. ಅಜ್ಜ ತಲೆ ಎತ್ತರದಲ್ಲಿ ರೈಲಿನ ಬಾಗಿಲಲ್ಲಿ ನಿಂತಿದ್ದ ನಮ್ಮ ಕಡೆ ಕೈ ಜೋಡಿಸಿ, “ನಿಮಗ ಪುಣ್ಯ ಬರಲಿರಿ ಯಪ್ಪಾ….” ಅಂತ ಕೈ ಮುಗಿದಾಗ, “ನಿಮ್ಮ ಮೊಮ್ಮಕ್ಕಳ ವಯಸ್ಸಿನವರು ನಾವು, ನಮಗ ಕೈ ಮುಗಿಬಾರದರಿ ಅಜ್ಜಾರ…” ಎನ್ನುತ್ತ ನಾವೂ ಕೈಮುಗಿದು, “ಹೋಗಿ ಬರ್ರಿ…” ಎನ್ನುತ್ತಿದ್ದಂತೆ ನಮ್ಮ ಟ್ರೇನ್ ವೇಗ ಹೆಚ್ಚಿಸಿಕೊಂಡಿತು!ಏನೊ ಒಂಥರಾ ನಿರಾಳತೆ.

ಯುದ್ಧದಂಥ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಸಾರ್ಥಕ ಭಾವ. ಇದನ್ನೆಲ್ಲ ಗಮನಿಸಿದ ಒಬ್ಬ ಬುರ್ಖಾಧಾರಿ ಮಹಿಳಾ ಪ್ಯಾಸೆಂಜರ್, ಬಹುಶಃ ತುಮಕೂರು ಕಡೆಯವರು ಇರಬೇಕು-ದೊಡ್ಡ ದನಿಯಲ್ಲಿ ಹೇಳಿದರು-“ಸರ್ ನಮ್ಮ ಮನಸ್ಸು ಪೊಸಿಟಿವ್ ಆಗಿದ್ದರೆ ಎಷ್ಟೇ ಕಷ್ಟದ ಕೆಲಸವೂ ಸುಲಭವಾಗುತ್ತೆ ಅನ್ನೋದನ್ನ ಪ್ರೂವ್ ಮಾಡಿಬಿಟ್ಟಿರಿ ನೀವೆಲ್ಲ ಸೇರಿಕೊಂಡು! ಆ ತಾತನ ಬಗ್ಗೆ ಆವಾಗಿನಿಂದಲೂ ನೀವು ಚಡಪಡಿಸುತ್ತಿರೋದನ್ನ ನೋಡಿದ್ದೆ. ಈ ರೈಲ್ವೆಯವರು ಮಾಡೋ ಎಡವಟ್ಟಿಗೆ ಪ್ರಯಾಣಿಕರು ತೊಂದರೆ ಅನುಭವಿಸಬೇಕು. ಪಾಪ, ಆ ತಾತಯ್ಯ ಇವತ್ತು ಯಾವ ಬೀದಿಯಲ್ಲಿ ರಾತ್ರಿ ಕಳೆಯಬೇಕಾಗುತ್ತಿತ್ತೋ ಏನೊ! ನೀವೆಲ್ಲರೂ ಅವನು ಸುಲಭವಾಗಿ ಮನೆ ಸೇರುವಂತೆ ಮಾಡಿದಿರಿ” ಅಂತ ಘಂಟಾಘೋಷವಾಗಿ ಹೊಗಳಿದರು. ಅಷ್ಟರಲ್ಲಿ ಅಲ್ಲಿದ್ದ ಮತ್ತೊಬ್ಬ ಪ್ರಯಾಣಿಕ, “ಹೇ ಇವೆಲ್ಲ ರಿಸ್ಕಿ ಕೆಲಸರಿ ಮೇಡಂ. ಹಂಗ ಇಳಿಯುವಾಗ ಆ ಮುದುಕಗ ಏನಾದರೂ ಆಗಿದ್ದರ ಇವರೆಲ್ಲರೂ ಪೊಲೀಸ್ ಸ್ಟೇಶನ್‌ಗೆ ಹೋಗಬೇಕಾಗತಿತ್ತರಿ..” ಅಂದ. ಆ ಮೇಡಂ ತಿರುಗೇಟು ಕೊಟ್ಟೇ ಬಿಟ್ಟರು-“ಸರ್ ನೀವು ಫುಲ್ ನೆಗೆಟಿವ್ ಇದ್ದೀರಿ. ನೀವು ಸುಮ್ಮನಿದ್ದು ಬಿಡಿ. ಮಾತಾಡಲೇ ಬೇಡಿ. ಆ ತಾತನ್ನ ಸುರಕ್ಷಿತವಾಗಿ ಇಳಿಸೋಕೆ ಇವರೆಲ್ಲ ಬಾಗಲಕೊಟೆಯಲ್ಲಿಯೇ ಪ್ಲ್ಯಾನ್ ಮಾಡಿದ್ದು ನಿಮಗೆ ಕಾಣಲಿಲ್ಲ. ಆ ಪ್ಲ್ಯಾನನ್ನ ಕರೆಕ್ಟಾಗಿ ಎಕ್ಸಿಕ್ಯೂಟ್ ಮಾಡಿದ್ದೂ ನಿಮಗೆ ಕಾಣಲಿಲ್ಲ. ಯಾರಾದರೂ ಒಳ್ಳೆಯ ಕೆಲಸ ಮಾಡಿದಾಗ ನಾವು ಎಟ್‌ಲೀಸ್ಟ್ ಎರಡು ಒಳ್ಳೆಯ ಮಾತು ಹೇಳೊಣ…”. ಆ ಪ್ರಯಾಣಿಕ ಸೈಲೆಂಟ್ ಆಗಿಬಿಟ್ಟ!ಆ ಅಜ್ಜನ ಧನ್ಯತಾಭಾವದ ಮುಖ ನನ್ನ ಮನದಲ್ಲಿ ಇನ್ನೂ ಅಚ್ಚೊತ್ತಿದೆ. ನಮ್ಮ ಕಾರ್ಯಾಚರಣೆಯ ಕೆಲವು ಭಾಗದ ವಿಡಿಯೊ-ಫೋಟೊಗಳು ಮತ್ರ ಇಲ್ಲಿವೆ.

‍ಲೇಖಕರು avadhi

February 9, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: