ಅಗ್ರಹಾರ ಕೃಷ್ಣಮೂರ್ತಿ ಓದಿದ ‘ಪದಗಳಿವೆ ಎದೆಯೊಳಗೆ’

ದಿವ್ಯಸ್ತ್ರೀಯರ ದುರಂತ

ಅಗ್ರಹಾರ ಕೃಷ್ಣಮೂರ್ತಿ

ನಮ್ಮ ಪುಣ್ಯಭೂಮಿಯನ್ನೂ ಒಳಗೊಂಡ೦ತೆ ಪ್ರಾಚೀನ ಕಾಲದಿಂದಲೂ ವಿಶ್ವದ ಹಲವಾರು ಸಂಸ್ಕೃತಿ ಮತ್ತು ನಾಗರಿಕತೆಗಳಲ್ಲಿ ‘ದೇವದಾಸಿ’ ಪದ್ಧತಿ ಅಧಿಕೃತವಾಗಿಯೇ ರೂಢಿಯಲ್ಲಿತ್ತೆಂಬ ಅನೇಕ ವಿವರಗಳೊಂದಿಗೆ ಡಾ. ಜಗದೀಶ್ ಕೊಪ್ಪ ಅವರು ಈ ಕೃತಿಯನ್ನು ಪ್ರಾರಂಭಿಸುತ್ತಾರೆ. ಒಟ್ಟು ಹದಿನೈದು ಅಧ್ಯಾಯಗಳಲ್ಲಿ ಈ ಪದ್ಧತಿಯ ಉಗಮ ಮತ್ತು ಬೆಳವಣ ಗೆಯ ಚಾರಿತ್ರಿಕ ಘಟ್ಟಗಳನ್ನು, ಸಾಂಸ್ಕೃತಿಕ ಪಲ್ಲಟಗಳನ್ನು ನಿರೂಪಿಸಿದ್ದಾರೆ.

ಇಪ್ಪತ್ತೊಂದನೆಯ ಶತಮಾನದ ಈ ಗಳಿಗೆಯವರೆಗೂ ಅನಧಿಕೃತವಾಗಿ, ಗುಪ್ತವಾಗಿ ಈ ಅನಿಷ್ಟ ಪದ್ಧತಿ ನಮ್ಮಲ್ಲಿ ಆಚರಣೆಯಲ್ಲಿರುವುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ದೇವರು, ದೇವಾಲಯ, ಅರ್ಚಕ, ಸೇವೆ, ಸಮರ್ಪಣೆ, ಅರಮನೆ, ರಾಜ, ನೃತ್ಯ, ಸಂಗೀತ, ವಾಸ್ತುಶಿಲ್ಪ, ಶಿಲ್ಪ – ಈ ಬೀಜ ಶಬ್ದಗಳ ಜೊತೆ ಸಂಲಗ್ನಗೊ೦ಡ ಮತ್ತೊಂದು ಶಬ್ದ ದೇವದಾಸಿ – ದೇವರ ದಾಸಿ! ಈ ಮೂರ್ತ ಮತ್ತು ಅಮೂರ್ತ ಪರಿಕಲ್ಪನೆಗಳೇ ಈ ಪದ್ಧತಿಯ ಕೇಂದ್ರ ಬಿಂದುಗಳು. ಈ ಶಬ್ದ-ಸಮೂಹದಿಂದ ದೇವದಾಸಿಯೆಂಬ ಶಬ್ದವನ್ನು ತೊಡೆದು ಹಾಕಿದರೆ ಇದು ಜಾಗತಿಕ ವಿವರಗಳನ್ನೂ ಒಳಗೊಂಡ೦ತೆ ನಮ್ಮ ಪುಣ್ಯಭೂಮಿಯ ಭವ್ಯ ಸಂಸ್ಕೃತಿ ಮತ್ತು ಕಲೆಯ ಅಮೋಘ ಇತಿಹಾಸವಾಗಿಬಿಡುತ್ತದೆ. ಆದರೆ ಪರಿಶುದ್ಧ ಉದ್ದೇಶಗಳಿಗಾಗಿಯೇ ಜನಿಸಿದ ಈ ‘ದೇವದಾಸಿ’ ಪದ್ಧತಿಯನ್ನು ನಮ್ಮ ಮಹಾನ್ ಸಂಸ್ಕೃತಿ ನಿರಂತರವಾಗಿ ಅನಿಷ್ಟದ ಕೊಳಚೆಯಲ್ಲಿ ಅದ್ದಿ ಅದ್ದಿ ತೆಗೆಯುತ್ತಾ ಇತಿಹಾಸದ ಕಪ್ಪು ಚುಕ್ಕೆಯನ್ನಾಗಿಸಿದೆ. ಇದು ನಮ್ಮ ಸಂಸ್ಕೃತಿಯ ಧಾರ್ಮಿಕ ಮತ್ತು ಸಾಮಾಜಿಕ ದುರಂತ.

ದೇವರಿಗೆ ಹಣ್ಣುಕಾಯಿ, ದೀಪಧೂಪ, ತೀರ್ಥಪ್ರಸಾದಗಳನ್ನು ನೈವೇದ್ಯ ಮಾಡಿದ ಅರ್ಚಕ ಮತ್ತು ಭಕ್ತರು ನಂತರ ತಾವೇ ಸೇವನೆ ಮಾಡುವ ರೀತಿಯಲ್ಲಿ ಬ್ರಾಹ್ಮಣರನ್ನೂ ಒಳಗೊಂಡ೦ತೆ ಎಲ್ಲ ಜಾತಿಯ ಎಳೆಯ ವಯಸ್ಸಿನ ಹೆಣ್ಣು ಮಕ್ಕಳನ್ನು ದೇವದೇವಿಯರಿಗೆ ಅರ್ಪಿಸಿ ಅಂಥ ಎಳೆಬಾಲೆಯರನ್ನು ದೇವಾಲಯಗಳ ಪೋಷಕರು ಮತ್ತು ಉನ್ನತ ಕುಲದ ವ್ಯಕ್ತಿಗಳು ಭೋಗಿಸುವುದನ್ನು ಏನೆಂದು ಕರೆಯಬೇಕು? ಅದು ಅನಾಗರಿಕತೆ, ಅಮಾನವೀಯತೆಯ ತುತ್ತತುದಿಯಲ್ಲದೇ ಮತ್ತೇನೂ ಅಲ್ಲ. ‘ದೇವಾಂಗನೆ’ (ಒಡಿಯಾ ಭಾಷೆಯನ್ನಾಡುವವರು ಇವರನ್ನು ಮಹರಿ-ಮಹಾನ್ ನಾರಿ, ದಿವ್ಯಸ್ತ್ರೀ ಎಂದು ಕರೆಯುವರೆಂದು ಈ ಪುಸ್ತಕದಲ್ಲಿ ಕೊಪ್ಪ ತಿಳಿಸಿದ್ದಾರೆ)ಯರ ಪ್ರತಿಭೆ ಮತ್ತು ವ್ಯಕ್ತಿತ್ವವನ್ನು ಶತಮಾನಗಳ ಕಾಲ ಶೋಷಿಸುತ್ತಲೇ ಬಂದಿರುವ ಪುರೋಹಿತಶಾಹಿ, ಸಾಮ್ರಾಜ್ಯಶಾಹಿ, ಜಮೀನ್ದಾರಿ ಮತ್ತು ಅಧಿಕಾರಶಾಹಿಗಳ ಚರಿತ್ರೆಗಳಿಗೆ ನಮ್ಮಲ್ಲಿ ಬರವಿಲ್ಲ. ಅಂಥವುಗಳಿಗೆ ಸಾವಿರಾರು ದಾರುಣ ದಾಖಲೆಗಳು ಸಿಗುತ್ತವೆ. ಈ ನಿರಂತರ ಶೋಷಣೆಯಿಂದಾಗಿ ಪ್ರತಿಭಾವಂತ ಕಲಾವಿದ ಸಮುದಾಯ ಕ್ರಮೇಣ ಜಾರುದಾರಿ ತುಳಿದು ಪರ್ಯವಸಾನವೂ, ವೇಶ್ಯಾಗೃಹಾಂತರ್ಗತವೂ ಆಗಿಹೋಯಿತು. ಜಗದೀಶ್ ಕೊಪ್ಪ ಈ ಬೆಳವಣ ಗೆಗಳನ್ನು ನಮ್ಮ ಮುಂದೆ ತೆರೆದಿಡುತ್ತಾರೆ.

ಬೌದ್ಧಧರ್ಮವನ್ನೂ ಒಳಗೊಂಡ೦ತೆ ಜಗತ್ತಿನ ಎಲ್ಲ ಧರ್ಮಗಳೂ ಈ ಪಾಪಕೃತ್ಯದಲ್ಲಿ ಭಾಗಿಯಾಗಿವೆ. ಇಸ್ಲಾಂ ಧರ್ಮಾನುಯಾಯಿಗಳಾಗಿದ್ದ ಮೊಘಲರು ಧಾರ್ಮಿಕ ಸಂದರ್ಭಗಳಲ್ಲಿ ಈ ಪಾಪಕೃತ್ಯಗಳಲ್ಲಿ ತೊಡಗದಿದ್ದರೂ ರಾಜಕೀಯ, ಸಾಮಾಜಿಕ ಬದುಕಿನಲ್ಲಿ ಮತ್ತು ಆಡಳಿತದ ಪರಿಧಿಯಲ್ಲಿ ಈ ಪದ್ಧತಿಯ ಲಾಭವನ್ನು ಚೆನ್ನಾಗಿಯೇ ಪಡೆದಿದ್ದಾರೆ. ಇಂಥ ಕಲಾವಿದರುಗಳ ಮೇಲೆ ಹಲವು ರೀತಿಯ ತೆರಿಗೆಗಳನ್ನು ಹೇರಿದ್ದಾರೆ. ಇಸ್ಲಾಂ ಧರ್ಮದಲ್ಲಿ ಸಂಗೀತ, ನೃತ್ಯ ಮುಂತಾದ ಕಲೆಗಳಿಗೆ ಇರುವ ಗೌಣ ಸ್ಥಾನಮಾನಗಳು (ಸೂಫಿ ಧಾರೆ ನನ್ನ ಗಮನದಲ್ಲಿದೆ) ಇನ್ನಿತರ ಧರ್ಮಗಳ ಧಾರ್ಮಿಕ ಆಚರಣೆಗಳಲ್ಲಿ ಪ್ರಧಾನ ಪಾತ್ರ ವಹಿಸುತ್ತಾ ದೇವದಾಸಿ ಪದ್ಧತಿಗೆ ರಾಜಮಾರ್ಗವಾಗಿರುವುದನ್ನು ನಾವು ಗಮನಿಸಬಹುದು. ಮೊಘಲರು ಸಂಪತ್ತಿನ ಲೂಟಿ ಹಾಗೂ ಧರ್ಮಕಾರಣಕ್ಕಾಗಿ ದೇವಾಲಯಗಳನ್ನೇ ನಾಶ ಮಾಡಿದಾಗ ಈ ಪದ್ಧತಿ ಅತಂತ್ರಗೊAಡು ಭಕ್ತಿವಲಯದಿಂದ ಮೋಜು ಮನರಂಜನೆ ಮತ್ತು ವೇಶ್ಯಾವಲಯಗಳಿಗೆ ಜಾರಿತು.

ಕಂಪನಿ ಮತ್ತು ಬ್ರಿಟಿಷ್ ಸರ್ಕಾರಗಳು ನಮ್ಮನ್ನು ಸುಮಾರು ಇನ್ನೂರು ವರ್ಷಗಳು ಆಳಿದವು. ಮುಖ್ಯವಾಗಿ ಬ್ರಿಟಿಷ್ ಆಡಳಿತಗಾರರು ಹಿಂದೂ ಧಾರ್ಮಿಕರ ಕೆಲವೊಂದು ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಕೆಲವು ಕಾಯ್ದೆಗಳನ್ನು ಜಾರಿಗೊಳಿಸಿದರು. ಸತಿ ಪದ್ಧತಿ, ಬಾಲ್ಯ ವಿವಾಹದ ವಿರುದ್ಧ ಕಾನೂನುಗಳನ್ನು ರಚಿಸಿದರು. ವಿಧವಾ ವಿವಾಹವನ್ನು ಸಿಂಧುಗೊಳಿಸಿದರು. ಹೀಗೆ ಮಾಡುವಾಗ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಸಹಾಯ ಪಡೆದು ಕಾನೂನುಗಳನ್ನು ತಂದರು. ದೇವದಾಸಿ ಪದ್ಧತಿಗೂ ಆಯಾಯ ಸ್ಥಳೀಯ ಸಾಮಾಜಿಕರ ವಿರೋಧವಿತ್ತು. ಆದರೂ ವಸಾಹತುಶಾಹಿ ಈ ಪದ್ಧತಿಯನ್ನು ತೊಡೆದುಹಾಕಲು ಗಂಭೀರ ಪ್ರಯತ್ನಗಳನ್ನು ಮಾಡಿದಂತೆ ಕಾಣುವುದಿಲ್ಲ. ಇತರ ಸಾಮಾಜಿಕ ಸುಧಾರಣಾ ಕಾನೂನುಗಳನ್ನು ಮಾಡುವಾಗ ಯಾವ ನೆಪಗಳನ್ನೂ ಒಡ್ಡದ ಬ್ರಿಟಿಷರು ದೇವದಾಸಿ ಪದ್ಧತಿಯ ಸಂದರ್ಭದಲ್ಲಿ ಸ್ಥಳೀಯರ ಧಾರ್ಮಿಕ ನಂಬಿಕೆ ಆಚರಣೆಗಳಲ್ಲಿ ನಾವು ತಲೆಹಾಕುವುದಿಲ್ಲ ಎಂಬ ನಿಲುವನ್ನು ಪ್ರಕಟಿಸಿದರೆಂಬ ಮಾಹಿತಿಯನ್ನು ಜಗದೀಶ್ ಕೊಪ್ಪ ತಿಳಿಸಿದ್ದಾರೆ. ಇದೊಂದು ವಿಪರ್ಯಾಸ ಹಾಗೂ ವ್ಯಂಗ್ಯ. ಹುಲು ಮನುಜರೇ ಆಗಿದ್ದ ಬ್ರಿಟಿಷರಿಗೂ ತಮ್ಮ ಐಂದ್ರಿಕ ವಾಂಛೆಗಳ ವಾಸನೆ ಬಲವಾಗಿಯೇ ಇತ್ತು! ವಸಾಹತು ಅಧಿಕಾರಿಶಾಹಿಯ ಬಹುತೇಕ ಅಧಿಕಾರಿಗಳು ಮತ್ತು ಸೈನಿಕರು ತಮ್ಮ ಹೆಂಡತಿಯರನ್ನು, ಕುಟುಂಬವನ್ನು ಇಂಗ್ಲೆ೦ಡಿನಲ್ಲೇ ಬಿಟ್ಟುಬಂದವರಾಗಿದ್ದರು.

ಬ್ರಿಟಿಷ್ ಇಂಡಿಯಾದಲ್ಲಿ ನೌಕರಿ ಬಯಸುವವರಿಗೆ ಅಂಥ ನಿಬಂಧನೆಯೂ ಇತ್ತು. ಅಲ್ಲದೆ ಆಡಳಿತವೇ ಅವರ ಕೈಗಳಲ್ಲಿದ್ದುದರಿಂದ ಅಗತ್ಯಕ್ಕಿಂತಲೂ ಹೆಚ್ಚಾಗಿಯೇ ದರ್ಪ, ಮೋಜುಮಸ್ತಿಗಳನ್ನು ಬೆಳೆಸಿಕೊಂಡಿದ್ದರು. ಅವರ ರಾತ್ರಿಯ ಸಂತೋಷಕೂಟಗಳಿಗೆ ಆ ವೇಳೆಗೆ ಅವನತಿಗೊಳ್ಳುತ್ತಿದ್ದ ದೇವದಾಸಿ ಪದ್ಧತಿ ಅನುಕೂಲಕರವಾಗಿ ಒದಗಿ ಬಂದಿತ್ತು. ಬಹುಶಃ ಅದೂ ಒಂದು ಬಲವಾದ ಕಾರಣವಾಗಿದ್ದು ಬ್ರಿಟಿಷರು ಈ ಪದ್ಧತಿಯ ವಿರುದ್ಧ ಯಾವ ಸುಧಾರಣೆಯ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲವೆಂದು ಭಾವಿಸಲು ಅವಕಾಶವಿದೆ. ಹಾಗೆ ನೋಡಿದರೆ ಜಗದೀಶ್ ಕೊಪ್ಪ ಅವರು ದಾಖಲಿಸಿರುವಂತೆ ಸ್ವಾತಂತ್ರ್ಯಪೂರ್ವದಲ್ಲಿಯೇ ಮೈಸೂರು, ತಿರುವಾಂಕೂರು ರಾಜರು ಮತ್ತು ತಮಿಳುನಾಡಿನ ಡಾ. ಮುತ್ತುಲಕ್ಷ್ಮಿ ರೆಡ್ಡಿ ಇವರುಗಳ ಸುಧಾರಣಾ ಪ್ರಯತ್ನಗಳು ಗಮನಾರ್ಹವಾಗಿವೆ. ಈ ಪದ್ಧತಿ ಅಧಿಕೃತವಾಗಿ ನಿಷೇಧವಾಗಲು ಭಾರತ ೧೯೪೭ರ ಸ್ವಾತಂತ್ರö್ಯದವರೆವಿಗೂ ಕಾಯಬೇಕಾಯ್ತು. ಆನಂತರವೂ ಪಳೆಯುಳಿಕೆಯಂತೆ ಬದುಕಿದ್ದ ಕೆಲವು ದೇವದಾಸಿಯರ ಸಾಕ್ಷ್ಯ ವಿವರಗಳ ಬಗ್ಗೆ ಲೇಖಕರು ಪ್ರಸ್ತಾಪಿಸುತ್ತಾರೆ.

ದೇವದಾಸಿ ಪದ್ಧತಿಯೆಂದ ಕೂಡಲೆ ಸಂಪ್ರದಾಯಶೀಲರ ಮತ್ತು ವಿಚಾರವಂತರ ಮನಸ್ಸಿನಲ್ಲಿ ಕೆಲವು ಸಂದಿಗ್ಧಗಳು, ವಿಪರ್ಯಾಸಗಳು ಮೂಡುತ್ತವೆ. ವೇದಾಗಮ ಪಾರಂಗತರು, ಪುರೋಹಿತಶಾಹಿ, ಆಳುವ ಪ್ರಭುಗಳೇ ಮುಂತಾದ ಸಂಪ್ರದಾಯಕರೇ ಈ ಪದ್ಧತಿಯ ಪೋಷಕರುಗಳಾಗಿ ನಮಗೆ ಕಾಣ ಸುವುದು; ದೇವಾಲಯಗಳಲ್ಲಿನ ನೃತ್ಯ, ಸಂಗೀತ ಸೇವೆಯಂತೆಯೇ ಕ್ರಮೇಣ ಅರಮನೆ ಗುರುಮನೆಗಳಲ್ಲೂ ಅದು ನಡೆಯುವುದು (ಎಷ್ಟಾದರೂ ರಾಜರುಗಳು ಪ್ರತ್ಯಕ್ಷ ದೇವತೆಗಳೇ ತಾನೆ!); ದೇವದಾಸಿಯರು ನೃತ್ಯ ಸಂಗೀತವನ್ನು ರಕ್ಷಿಸಿದವರು ನಿಜ, ಆದರೆ ಮನುಷ್ಯ ಕಲ್ಪಿಸಿದ ದೇವರು ಎಷ್ಟರಮಟ್ಟಿಗೆ ಈ ಕಲೆಯನ್ನು ಆಸ್ವಾದಿಸುತ್ತಾನೋ ತಿಳಿಯುವುದಿಲ್ಲ. ಆದರೆ ಅದು ಅವನತಿಗೊಳ್ಳುತ್ತಾ ವೃತ್ತಿಯಾದ ದುರಂತ ಕಾಣುತ್ತದೆ. ದೇವನಡಿಗಳಿಂದ ಪಾಪಕೂಪದ ತಳ ಮುಟ್ಟಿಬಿಡುತ್ತದೆ. ಇವೆಲ್ಲ ಗೊಂದಲಗಳ ನಡುವೆ ನಾವು ಕಲೆಯ ಪಾವಿತ್ರ್ಯ, ಕಲಾಸ್ವಾದನೆ, ಕಲಾ ರಸಿಕತೆ, ಮನರಂಜನೆ ಮುಂತಾದ ಸಿದ್ಧಾಂತಗಳನ್ನೂ ಕಟ್ಟುತ್ತೇವೆ! ಇದು ಸಾಮಾಜಿಕ ರಿವಾಜು, ಬಡತನ ಮತ್ತು ಧರ್ಮದ ನಡುವಿನ ಒಂದು ಕ್ಲಿಷ್ಟ ಪ್ರಶ್ನೆ. ಈ ಸಮಸ್ಯೆಯನ್ನು ನೋಡುವವರ ದೃಷ್ಟಿಕೋನಗಳೂ ಭಿನ್ನ ಸ್ವರೂಪದಲ್ಲಿರುತ್ತವೆ. ನನಗೆ ಅರ್ಥವಾದಂತೆ ಜಗದೀಶ್ ಕೊಪ್ಪ ಅವರ ದೃಷ್ಟಿಕೋನ ಶ್ರೇಷ್ಠಕಲೆಯನ್ನು ಉಳಿಸಿ ಬೆಳೆಸಿದ ಕಲಾವಿದೆ (ದೇವದಾಸಿ)ಯರ ಬಗ್ಗೆ ಅವರ ಬದಲಾದ ಜೀವನ ವಿಧಾನದ ಬಗ್ಗೆ ಕಾಳಜಿ ಮತ್ತು ಸಹಾನುಭೂತಿಪರ ನಿಲುವುಳ್ಳದ್ದು. ಅಂಥವರಲ್ಲಿದ್ದ ಸಂಗೀತ ನೃತ್ಯ ಪರಂಪರೆ ಕಾಲಕ್ರಮದಲ್ಲಿ ಮೇಲ್ಜಾತಿ, ಮೇಲ್ವರ್ಗದವರ ವಶವಾಗುವುದರ ಬಗೆಗೆ ಒಂದು ರೀತಿಯ ನಷ್ಟಭಾವನೆ ಇವರಲ್ಲಿದೆ.

ಜಗದೀಶ್ ಕೊಪ್ಪ ಕೃತಿಯ ಮೊದಲ ಅಧ್ಯಾಯದಲ್ಲಿಯೇ ಮರಾಠಿಯ ಸುಪ್ರಸಿದ್ಧ ಚರಿತ್ರಕಾರ, ಪ್ರಾಕ್ತನಶಾಸ್ತ್ರಜ್ಞ ಅನಂತ ಸದಾಶಿವ ಆಲ್ಟೇಕರ್ (೧೮೯೮-೧೯೬೦) ಅವರ ಕೃತಿಯೊಂದರ ಅಭಿಪ್ರಾಯವನ್ನು ಉದ್ಧರಿಸಿದ್ದಾರೆ. ಅದು ಹೀಗಿದೆ, ‘ಹಿಂದೂ ಧರ್ಮದಲ್ಲಿ ದೇವರುಗಳಿಗಾಗಿ ನಿರ್ಮಿಸಿದ ದೇವಾಲಯಗಳಲ್ಲಿ ಪೂಜೆಯ ಸಮಯದಲ್ಲಿ ಹೆಣ್ಣು ಮಕ್ಕಳ ನೃತ್ಯ ಮತ್ತು ಸಂಗೀತ ಇರಬೇಕು ಎಂದು ನಿರ್ಧರಿಸಿದ ಪುರುಷ ಸಮುದಾಯದ ಚಿಂತನೆಗಳಲ್ಲಿ ವೈಯಕ್ತಿಕ ಸ್ವಾರ್ಥ ಅಡಗಿದೆ. ಇವರುಗಳು ದೇವಾಲಯಕ್ಕೆ ಆಗಮಿಸುತ್ತಿದ್ದುದು ದೇವರ ಪೂಜೆಗಾಗಿ ಅಲ್ಲ. ಚೆಂದದ ಹೆಣ್ಣುಮಕ್ಕಳ ಮೈಮಾಟ ಮತ್ತು ನೃತ್ಯ, ಸಂಗೀತದ ಮನರಂಜನೆಯನ್ನು ಪೂಜೆಯ ನೆಪದಲ್ಲಿ ಸವಿಯುವ ಉದ್ದೇಶದಿಂದ.’ ಆಲ್ಟೇಕರರ ಈ ಮಾತುಗಳು ನಮಗೆ ಶತಶತಮಾನಗಳ ದೇವದಾಸಿ ಪದ್ಧತಿಯ ಬಗ್ಗೆ ಕ್ಷಕಿರಣಗಳನ್ನು ಬೀರುತ್ತವೆ. ಅದರ ಗೂಢಾರ್ಥವನ್ನೂ, ಮಥಿತಾರ್ಥವನ್ನೂ ತಿಳಿಸುತ್ತವೆ. ಹನ್ನೆರಡನೆಯ ಶತಮಾನದ ನಮ್ಮ ಅಲ್ಲಮಪ್ರಭುವಿನ ವಚನವೊಂದರ ಸಾಲು ನೆನಪಾಗುತ್ತಿದೆ. ಅವನು ಇನ್ನೂ ಕ್ಲುಪ್ತವಾಗಿ, ‘…ಭಕ್ತಿ ಎಂಬುದು ತೋರಿ ಉಂಬುವ ಲಾಭ,’ ಎನ್ನುತ್ತಾನೆ. ನೃತ್ಯ ಕಲಿಸುವ ಆಚಾರ್ಯನೊಬ್ಬನ ಮಗನಾಗಿದ್ದ ಅಲ್ಲಮಪ್ರಭು ದೇವಾಲಯವೊಂದರ ಮದ್ದಲೆಗಾರನಾಗಿದ್ದ. ಅವನು ಈ ಆಚರಣೆಗಳನ್ನು ಹತ್ತಿರದಿಂದಲೇ ಕಂಡಿದ್ದಿರಬೇಕು.

ಡಾ. ಜಗದೀಶ್ ಕೊಪ್ಪ ತಮ್ಮ ಈ ಕೃತಿಗೆ ಅನೇಕ ಮೂಲಗಳಿಂದ ವಿಷಯ ಸಂಗ್ರಹ ಮಾಡಿದ್ದಾರೆ. ಡಾ. ಸೀತಾ ಅವರ ಅಪ್ರಕಟಿತ ಪಿಹೆಚ್.ಡಿ. ಸಂಶೋಧನಾ ಬರಹದಿಂದ ಮೊದಲ್ಗೊಂಡು ಅನೇಕ ಆಕರ ಗ್ರಂಥಗಳ ನೆರವು ಪಡೆದಿದ್ದಾರೆ. ಪ್ರಾಚೀನ ಸಾಹಿತ್ಯ ಮತ್ತು ಶಾಸ್ತ್ರ ಗ್ರಂಥಗಳಾದ ಶಿಲಪ್ಪದಿಗಾರಂ, ತೊಲ್ಕಾಪ್ಪಿಯಂ, ಮಣ ಮೇಖಲೈ, ಕಾಳಿದಾಸ, ಭರತ, ವಾತ್ಸಾಯನ, ಕೌಟಿಲ್ಯ ಮುಂತಾದವರ ಕೃತಿಗಳಲ್ಲಿನ ದೇವದಾಸಿ ಎಳೆಗಳನ್ನು ಕಾಣ ಸುತ್ತಾರೆ. ಸತನಾರ್ ಎಂಬಾತ ರಚಿಸಿದ ಪ್ರಾಚೀನ ತಮಿಳಿನ ಕೂತನೂಲ್' ಎಂಬ ಕೃತಿ ಭರತನನಾಟ್ಯಶಾಸ್ತ್ರ’ವನ್ನೂ ಮೀರಿಸುವಂಥ ಕೃತಿಯೆಂಬ ಸಂಗತಿಯನ್ನು ತಿಳಿಸುತ್ತಾರೆ. ಕಲ್ಹಣನ ರಾಜ ತರಂಗಿಣ', ಸೋಮೇಶ್ವರನ ಮಾನಸೋಲ್ಲಾಸ’, ಇಂಡಿಯಾ ಪ್ರವಾಸಿಗರ ಟಿಪ್ಪಣ ಗಳು, ವಿವಿಧ ಪ್ರಾಂತದ ಶಾಸನಗಳಲ್ಲಿರುವ ದೇವದಾಸಿ ಮಾಹಿತಿಗಳು ಇಲ್ಲಿವೆ. ಸಂಬ೦ಧಿಸಿದ ವ್ಯಕ್ತಿಗಳನ್ನು ಸಂದರ್ಶಿಸಿ, ಸುಮಾರು ಎಂಬತ್ತಕ್ಕೂ ಹೆಚ್ಚು ದೇವಾಲಯಗಳಿಗೆ ಭೇಟಿಕೊಟ್ಟು ಬಂದಿದ್ದಾರೆ. ಅವರು ಈಗಾಗಲೆ ಪ್ರಕಟಿಸಿರುವ ಇನ್ನಿತರ ಪುಸ್ತಕಗಳ ರಚನೆಯ ಸಂದರ್ಭದಲ್ಲೂ ಇಂಥದೇ ಕ್ರಮವನ್ನು ಪಾಲಿಸಿದ್ದಾರೆ.

ಈ ಕಾರಣಗಳಿಂದ ಅವರು ಆಯ್ದುಕೊಂಡ ವಿಷಯದ ಬಗ್ಗೆ ನಮಗೆ ಸ್ವಾರಸ್ಯಕರ ಸಂಗತಿಗಳು, ಮಾಹಿತಿಗಳು ಹಾಗೂ ಒಂದು ಸಮಗ್ರ ನೋಟ ದೊರೆಯುತ್ತದೆ. ಮ್ಯಾಕ್ಸ್ ಮುಲ್ಲರ್, ಅಂಬೇಡ್ಕರ್ ಅವರ ಅಭಿಪ್ರಾಯಗಳನ್ನು ದಾಖಲಿಸುತ್ತಾರೆ. `ನಾಟ್ಯಶಾಸ್ತ್ರ’ವನ್ನು ರಚಿಸಿದ ಭರತ, ‘ಕಾಮಸೂತ್ರ’ವನ್ನು ರಚಿಸಿದ ವಾತ್ಸಾಯನ (ಆಂಧ್ರಪ್ರದೇಶದ ಮೂಲದವನಾದ ಈತನ ಮೊದಲಿನ ಹೆಸರು ಮಲ್ಲನಾಗ ಎಂಬ ಮಾಹಿತಿಯನ್ನು ಲೇಖಕರು ನೀಡಿದ್ದಾರೆ) ಇವರಿಬ್ಬರೂ ತಮ್ಮ ಗ್ರಂಥಗಳನ್ನು ರಚಿಸಲು ಬೇಕಾದ ಮೂಲ ಸಾಮಗ್ರಿಯನ್ನು ದೇವದಾಸಿ ಹಾಗೂ ವೇಶ್ಯೆಯರ ಕಲಾಮೂಲದಿಂದಲೇ ಪಡೆದರೆಂಬ ಸ್ವಾರಸ್ಯಕರ ವಿಷಯ (ಪ್ರಸಿದ್ಧ ಇತಿಹಾಸಕಾರ ಮೋತಿಚಂದ್ರರ ಅಧ್ಯಯನ) ನಮಗೆ ತಿಳಿಯುತ್ತದೆ. ಇವೆರಡೂ ಗ್ರಂಥಗಳು ಭಾರತೀಯ ಸಂಸ್ಕೃತಿಯ ಮಹೋನ್ನತ ಕೃತಿಗಳೆಂದು ಪರಿಗಣ ಸಲ್ಪಟ್ಟಿವೆ.

‘ಆಗಮ ಸಂಸ್ಕೃತಿಯಲ್ಲಿ ದೇವದಾಸಿಯರು’ ಎಂಬ ಅಧ್ಯಾಯ, ವಿವಿಧ ನೃತ್ಯ ಪರಂಪರೆ ಮತ್ತು ದೇವಾಲಯಗಳ ನೃತ್ಯ ಶಿಲ್ಪ ಕುರಿತ ಅಧ್ಯಾಯಗಳನ್ನು ಓದುತ್ತಿದ್ದರೆ ಅಲ್ಲಿನ ಸಮೃದ್ಧ ವಿವರಗಳಿಂದಾಗಿ ಈ ಕೃತಿ ಶುದ್ಧಾಂಗವಾಗಿ ಧರ್ಮ, ಕಲೆ, ಶಿಲ್ಪ ಕುರಿತ ಕೃತಿಯಿದ್ದೀತು ಎಂಬ ಭಾವನೆ ಒಂದು ಕ್ಷಣ ಮೂಡಿಬಿಡುತ್ತದೆ! ಆದರೆ ಅವೆಲ್ಲವುಗಳ ಜೊತೆಗೆ ದೇವದಾಸಿ ಸಂಪ್ರದಾಯದ ಅವಿನಾಭಾವ ಸಂಬ೦ಧಗಳನ್ನು ಕೊಪ್ಪ ಕಟ್ಟಿಕೊಡುತ್ತಾರೆ. ಅರ್ಚಕ ಮತ್ತು ದೇವದಾಸಿ ಇಬ್ಬರ ಪಾತ್ರವೂ ಸಮಾನ ಸ್ತರದ್ದೆಂಬ ಅರಿವು ನಮಗೆ ಮೂಡುತ್ತದೆ. ಸಾಮಾನ್ಯ ಜನರನ್ನು ಧಾರ್ಮಿಕತೆಯತ್ತ ಸೆಳೆಯುವ ತಂತ್ರವನ್ನಾಗಿಯೂ ಈ ‘ರಂಗಭೋಗ’ ಇತ್ತೆಂದೂ, ಕೆಳಜಾತಿಯ ಜನರಿಗೆ ದೇವಾಲಯಗಳ ಪ್ರವೇಶ ನಿಷಿದ್ಧವಾಗಿದ್ದುದರಿಂದ ‘ಉತ್ಸವ ಮೂರ್ತಿ’ಗಳ ಪರಿಪಾಠ ಪ್ರಾರಂಭವಾಗಿರಬಹುದು ಎನ್ನುವ ಕೆಲವು ಒಳನೋಟಗಳನ್ನು ಈ ಕೃತಿಯಲ್ಲಿ ನಾವು ಕಾಣಬಹುದು. ಈ ಸೋ ಕಾಲ್ಡ್ ಸುಸಂಸ್ಕೃತ ಜನ ಸಮುದಾಯದ ಈ ಧಾರ್ಮಿಕ ಕಲಾವಿಲಾಸ ಹೇಗೆ ಮಾದಿಗ ಇತ್ಯಾದಿ ತಳಸಮುದಾಯಗಳಲ್ಲಿ ‘ಬಸವಿ’ ಎಂಬ ಅನಿಷ್ಟ ಪದ್ಧತಿಯಾಗಿ (ಸಮಾಜಶಾಸ್ತ್ರಜ್ಞ ಎಂ. ಎನ್. ಶ್ರೀನಿವಾಸರ ಪರಿಕಲ್ಪನೆಯಾದ ‘ಸಂಸ್ಕೃತೀಕರಣ’ಕ್ಕೆ ಒಳಗಾಗಿ) ಈಗಲೂ ಮುಂದುವರಿಯುತ್ತಿರುವ ವಿವರಗಳನ್ನು ಲೇಖಕರು ಕೊಡುತ್ತಾರೆ.

ಸಂಸ್ಕೃತದ ಪ್ರಕಾಂಡ ವಿದ್ವಾಂಸರಾಗಿದ್ದ ಡಾ. ವಿ. ರಾಘವನ್ ಸಂಪಾದಿಸಿ, ದೀರ್ಘವಾದ ಇಂಗ್ಲಿಷ್ ಪ್ರಸ್ತಾವನೆಯೊಂದಿಗೆ ಪ್ರಕಾಶಗೊಳಿಸಿದ ‘ಸರ್ವದೇವ ವಿಲಾಸ’ ಎಂಬ ಹತ್ತೊಂಬತ್ತನೆಯ ಶತಮಾನದ ಮಹತ್ವಪೂರ್ಣ ಸಂಸ್ಕೃತ ಕೃತಿ ಕುರಿತ ವಿವರಗಳು ಕೊಪ್ಪ ಅವರ ಪ್ರಸ್ತುತ ಕೃತಿಯ ವೈಶಿಷ್ಟ್ಯಗಳಲ್ಲೊಂದು. ಅದು ಆ ಶತಮಾನದ ಮದ್ರಾಸ್ ಪ್ರಾಂತ್ಯದ ವಸಾಹತುಶಾಹಿ ಜೀವನ ಶೈಲಿ, ಸಂಸ್ಕೃತಿ, ನೃತ್ಯ, ಕಲೆ ಕುರಿತಂತೆ ಸಂಭಾಷಣೆಯ ಸ್ವರೂಪದಲ್ಲಿ ರಚಿತವಾಗಿರುವ, ಚಾರಿತ್ರಿಕವಾಗಿ ಮುಖ್ಯವಾದ ಕೃತಿ. ದೇವದಾಸಿಯರು ತಮ್ಮ ಔದಾರ್ಯ ಗುಣಗಳಿಂದ ತುಂಬ ಪ್ರಸಿದ್ಧಿಯನ್ನು ಪಡೆದಿದ್ದರು. ಜನರಿಗೆ ಅಗತ್ಯವಾಗಿದ್ದ ಕೆರೆಕಟ್ಟೆಗಳನ್ನು ಕಟ್ಟಿಸಿ, ಅನ್ನದಾನಾದಿಗಳನ್ನೂ, ದೇವಾಲಯಗಳ ಸೇವಾ ಕಾರ್ಯಗಳಿಗೆ ಬೇಕಾದ ನಗನಾಣ್ಯಗಳನ್ನು, ವಸ್ತ್ರಗಳನ್ನು ಧಾರಾಳವಾಗಿ ನೀಡುತ್ತಿದ್ದರು. ತಮಗೆ ರಾಜಮಹಾರಾಜರು, ಪೋಷಕರು, ರಸಿಕ ಅಭಿಮಾನಿಗಳ ಕೊಡುಗೆಗಳಾಗಿ ಸಿಕ್ಕ ಚಿನ್ನ, ಬೆಳ್ಳಿ, ವಾರ್ಷಿಕ ವೇತನ ಇತ್ಯಾದಿಯನ್ನು ಮತ್ತೆ ದೇವಾಲಯ ವ್ಯವಸ್ಥೆಗೇ ವಿನಿಯೋಗಿಸುತ್ತಿದ್ದರು.

ಜಗದೀಶ್ ಕೊಪ್ಪ ದೇವದಾಸಿಯರ ಈ ಕೊಡುಗೈತನವನ್ನು ಪ್ರಶಂಸಿಸುತ್ತಾರೆ. ಇದು ಒಂದು ರೀತಿಯಲ್ಲಿ ಶೋಷಣೆಗೊಳಗಾದವರನ್ನೇ ಮತ್ತೆ ಮತ್ತೆ ‘ನಾಗರಿಕ ಶೋಷಣೆ’ಗೆ ಸೆಳೆದ ಮಾರ್ಗವಾಗಿದೆ! ಒಟ್ಟಾರೆ ದೇವದಾಸಿ ಪದ್ಧತಿಯೆಂಬುದು ಸುಸಂಸ್ಕೃತರ ಕ್ರೂರ ಸರ್ವಾಂಗೀಣ ಶೋಷಣಾ ಜಗತ್ತು. ಪತ್ರಕರ್ತ ವೃತ್ತಿಯಿಂದ ನಿವೃತ್ತರಾಗಿದ್ದರೂ ಪತ್ರಕರ್ತ ಕಾಯಕದಲ್ಲಿರುವ ಕೊಪ್ಪ ಏಕ ಕಾಲಕ್ಕೆ ಹಲವು ವಿಷಯಗಳನ್ನು ಕಟ್ಟಿಕೊಡುವ ಮತ್ತು ಕಣ್ತೆರೆಸುವಂಥ ಪುಸ್ತಕ ಕೊಟ್ಟಿದ್ದಾರೆ. ತಮ್ಮ ಕೃತಿಯನ್ನು ಓದಿ ಕೆಲವು ಮಾತುಗಳನ್ನು ಬರೆಯಲು ಕೇಳಿ ಪ್ರೀತಿ ತೋರಿದ ಅವರಿಗೆ ವಂದನೆಗಳು.

‍ಲೇಖಕರು Admin

October 16, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: