ಜೆ ವಿ ಕಾರ್ಲೊ ಕಥೆ – ಕೊನೆ ಇಲ್ಲದ ರಾತ್ರಿ…

ಮೂಲ: ಎಲಿ ವೀಸೆಲ್‌
ಕನ್ನಡಕ್ಕೆ : ಜೆ ವಿ ಕಾರ್ಲೊ

(ನೋಬೆಲ್‌ ಶಾಂತಿ ಪುರಸ್ಕೃತ ಪ್ರೊಫೆಸರ್‌ ಎಲಿ ವೀಸೆಲ್‌ (Elie Wiesel) ಒಬ್ಬ ಪ್ರಾಧ್ಯಾಪಕರಷ್ಟೇ ಅಲ್ಲ ಒಬ್ಬ ಹೆಸರಾಂತ ಲೇಖಕರೂ (೫೭ ಗ್ರಂಥಗಳು) ಮತ್ತು ಸಕ್ರಿಯ ರಾಜಕೀಯ ಕಾರ್ಯಕರ್ತರೂ ಆಗಿದ್ದರು. ರೊಮೇನಿಯಾದ ಒಂದು ಯೆಹೂದಿ ಕುಟುಂಬದಲ್ಲಿ ಹುಟ್ಟಿದ ಅವರಿಗೆ ಇತರ ಯೆಹೂದಿಗಳೊಂದಿಗೆ ಹಿಟ್ಲರನ ನಾಜೀ ಪಡೆಯು ಕುಖ್ಯಾತ ಅಶ್ವಿಟ್ಝ್‌ ಯಾತನಾ ಶಿಬಿರಕ್ಕೆ (Auschwitz) ಅಟ್ಟುತ್ತಾರೆ. ಎಲಿಗೆ ಆಗ ಕೇವಲ ಹದಿನೈದು ವರ್ಷ ವಯಸ್ಸು. ಅಶ್ವಿಟ್ಝ್‌ನಲ್ಲಿ ಎಲಿ ಮತ್ತು ಅವನ ತಂದೆ ಶ್ಲೊಮೊರವರಿಗೆ ತಾಯಿ ಮತ್ತು ಹದಿಮೂರು ವರ್ಷದ ತಂಗಿಯರಿಂದ ಬೇರ್ಪಡಿಸುತ್ತಾರೆ. ಅವರು ಮತ್ತೆ ಎಂದೂ ಎಲಿಗೆ ಕಾಣಸಿಗುವುದಿಲ್ಲ. ಅವರಿಗೆ ನಾಜೀಗಳು ಏನು ಮಾಡುತ್ತಾರೆಂದು ಎಲಿ ಓದುಗರ ಊಹೆಗೇ ಬಿಡುತ್ತಾರೆ.

ಹಿಟ್ಲರನ ಚಿತ್ರಹಿಂಸಾ ಶಿಬಿರಗಳ ಬಗ್ಗೆ ಕೇಳದವರು ಬಹುಶಃ ಯಾರೂ ಇರಲಾರರು. ಅಲ್ಲಿಯ ಆಗ್ನಿ ಮತ್ತು ಗ್ಯಾಸ್‌ ಕುಂಡಗಳಲ್ಲಿ ದಿನಕ್ಕೆ ಸುಮಾರು ನಾಲ್ಕು ಸಾವಿರ ಜನರಿಗೆ, ವೃದ್ಧರು ಮಕ್ಕಳು ಎಂಬ ಬೇಧವಿಲ್ಲದೆ ಸುಡಲಾಗುತ್ತಿತ್ತು ಎಂದು ಹೇಳುತ್ತಾರಾದರೂ ನಿಖರವಾಗಿ ಯಾರಿಗೂ ಗೊತ್ತಿಲ್ಲ. ಇತಿಹಾಸಕಾರರ ಅಂದಾಜಿನ ಮೇರೆಗೆ ಅಂದಾಜು ಅರವತ್ತು ಲಕ್ಷ ಯೆಹೂದಿಗಳು ಹಿಟ್ಲರನ ಯಾತನಾ ಶಿಬಿರಗಳಲ್ಲಿ ಜೀವತೆತ್ತಿದ್ದಾರೆ.

ಹಿಟ್ಲರನ ಹಲವು ಯಾತನಾಶಿಬಿರಗಳಲ್ಲಿ ಪೋಲೆಂಡಿನ ಆಶ್ವಿಟ್ಝ್‌ ಹೆಚ್ಚು ಕುಖ್ಯಾತವಾಗಿದೆ. ಇಲ್ಲಿ ಸುಮಾರು ಹದಿನಾರು ಸಾವಿರ ಜನರನ್ನು ಕೂಡಿ ಹಾಕಲಾಗಿತ್ತು ಎನ್ನುತ್ತಾರೆ. ಈ ಶಿಬಿರಕ್ಕೆ ಕೆಲವು ಉಪ ಶಿಬಿರಗಳೂ ಇದ್ದವು. ಇವುಗಳಲ್ಲಿ ʼಬೂನಾʼ ಶಿಬಿರವೂ ಒಂದು. ಕೆಲಸ ಮಾಡಲಾಗದ ಯೆಹೂದಿಗಳನ್ನು ಮುಲಾಜಿಲ್ಲದೆ ಆಗ್ನಿ ಕುಂಡಗಳಿಗೆ ಎಸೆಯಲಾಗುತ್ತಿತ್ತು. ನಾಜೀಗಳ ದೈಹಿಕ ಸಾಮರ್ಥ್ಯದ ಪರೀಕ್ಷೆಯಲ್ಲಿ ಹೇಗೋ ಪಾಸಾದ ಎಲಿ ಮತ್ತು ಅವನ ತಂದೆಗೆ ಬೂನಾ ಶಿಬಿರಕ್ಕೆ ರವಾನಿಸುತ್ತಾರೆ. ಇಲ್ಲಿಯ ಅನುಭವಗಳನ್ನು ಬದುಕುಳಿದ ಎಲಿ, ತಮ್ಮ (NIGHT) ಕಾದಂಬರಿಯಲ್ಲಿ ವಿವರಿಸುತ್ತಾರೆ.

ಯುದ್ಧದಲ್ಲಿ ಮಿತ್ರಪಕ್ಷಗಳ ಕೈ ಮೇಲಾಗಿ, ಬೂನಾ ಶಿಬಿರದ ಮೇಲೆ ರಶ್ಯನರು ಆಕ್ರಮಣ ನಡೆಸಲು ಸಜ್ಜಾಗಿದ್ದಾರೆ ಎಂಬ ಸುದ್ಧಿ ತಲುಪುತ್ತಿದ್ದಂತೆ ನಾಜೀಗಳು ಕೈದಿಗಳನ್ನು ಜರ್ಮನಿಯ ಬುಕೆನ್‌ವಾಲ್ಡ್‌ಗೆ ( Buchenwald ) ದನಗಳನ್ನು ಸಾಗಿಸುವ ತೆರೆದ ಗೂಡ್ಸ್‌ ರೈಲಿನಲ್ಲಿ ಸ್ಥಳಾಂತರಿಸಲು ಮುಂದಾಗುತ್ತಾರೆ. ಈ ಪಯಣದ ಒಂದು ಅನುಭವವೇ ಕೊನೆ ಇಲ್ಲದ ರಾತ್ರಿ..)

**

ರಶ್ಯನ್‌ ಸೇನೆ ಯಾವ ಗಳಿಗೆಯಲ್ಲೂ ಶಿಬಿರದ ಮೇಲೆ ಆಕ್ರಮಣ ನಡೆಸಬಹುದೆಂಬ ಗಾಳಿ ಸುದ್ಧಿಯು ಹರಡಿದ ಮೂರು ದಿನಗಳ ನಂತರ ನಮ್ಮನ್ನು ಅವಸವರವಾಗಿ ಬ್ಯಾರಕುಗಳಿಂದ ಹೊರಗೆ ಕಳಿಸಿದರು. ಹೆಗಲ ಮೇಲೆ ಪ್ರಾರ್ಥನಾ ಶಾಲಿನಂತೆ ಕಂಬಳಿಯನ್ನು ಹೊದ್ದು ನಾವೆಲ್ಲಾ ಹೊರಗೆ ಬಂದೆವು. ನಮ್ಮನ್ನೆಲ್ಲಾ ಮಧ್ಯ ಜರ್ಮನಿಗೆ ಕೊಂಡೊಯ್ಯುತ್ತಾರೆಂದೂ ಸುದ್ಧಿ ಹರಡತೊಡಗಿತು. ನಮಗೆ ಗೇಟಿನ ಬಳಿ ಹೋಗಲು ತಿಳಿಸಲಾಯಿತು. ಅಲ್ಲಿ ನಮಗಾಗಿ ಎಸ್‌ ಎಸ್‌ ಆಫೀಸರುಗಳು (ನಾಜೀ ಗುಪ್ತ ಪೋಲಿಸ್)‌ಕಾದು ನಿಂತಿದ್ದರು.

ಅವರು ನಮ್ಮನ್ನು ವಿಂಗಡಿಸಿ ಆಯ್ದು ಕೊಳ್ಳಲು ಬಂದಿದ್ದರು. ನಡೆಯಲು ಶಕ್ತರಾದವರಿಗೆ ಬಲಕ್ಕೂ ಅಶಕ್ತರಿಗೆ ಎಡಕ್ಕೂ ತಳ್ಳಲು ಆರಂಭಿಸಿದರು. ಅವರು ಅಪ್ಪನನ್ನು ಎಡಗಡೆಗೆ ತಳ್ಳಿದರು. ನಾನು ಗುಂಪಿನಿಂದ ಹೊರಬಿದ್ದು ಅಪ್ಪನ ಕಡೆಗೆ ಧಾವಿಸಿದೆ. 

ನನ್ನ ಹಿಂದೆ ಕೆಲವು ಆಫಿಸರ್‌ಗಳು ಬೆನ್ನಟ್ಟಿ ಬಂದರು. ನಂತರ ಅಲ್ಲಿ ಉಂಟಾದ ಗಲಿಬಿಲಿ ಗೊಂದಲದಲ್ಲಿ ಯಾರು ಯಾವ ಗುಂಪಿಗೆ ಸೇರಿಕೊಂಡರೆಂಬುದು ಗೊತ್ತಾಗಲೇ ಇಲ್ಲ. ನಾನು ಅಪ್ಪನ ಕೈಯನ್ನು ಗಟ್ಟಿಯಾಗಿ ಹಿಡಿದು ಕೊಂಡು ಬಲಗಡೆಯ ಗುಂಪಿನೊಳಗೆ ಸೇರಿಕೊಂಡೆ. ಗುಂಪನ್ನು ಚದುರಿಸಲು ಗುಂಡುಗಳನ್ನು ಹಾರಿಸಲಾಯಿತು. ಬಹಳ ಜನರು ಸತ್ತು ಬಿದ್ದರು.

ನಮ್ಮನ್ನು ಶಿಬಿರದಿಂದ ಹೊರಗೆ ಕರೆದುಕೊಂಡು ಹೋದರು. ಸುಮಾರು ಅರ್ಧ ಗಂಟೆ ನಡೆದ ನಂತರ ನಾವು ರೈಲು ಹಳಿಗಳು ಹಾದುಹೋದ ಒಂದು ವಿಶಾಲವಾದ ಮಯ್ದಾನವನ್ನು ತಲುಪಿದೆವು. ಇಲ್ಲಿ ನಮಗೆ ಕಾದು ನಿಲ್ಲಲು ತಿಳಿಸಿದರು. ಎಡೆಬಿಡದೆ ಮೇಲಿಂದ ಹಿಮ ಬೀಳುತ್ತಿತ್ತು. ನಮ್ಮ ಕಂಬಳಿಗಳ ಮೇಲೆ ಬೀಳುತ್ತಿದ್ದ ಹಿಮ ದಪ್ಪಗಾಗುತ್ತಿತ್ತು. ಎಂದಿನಂತೆ ನಮಗೆ ಒಣಗಿದ ಬ್ರೆಡ್‌ ತುಣುಕುಗಳನ್ನು ಎಸೆಯಲಾರಂಭಿಸಿದರು. ನಾವು ಕಾಡು ಮೃಗಗಳಂತೆ ಅವುಗಳ ಮೇಲೆ ಎರಗಿ ಬೀಳುತ್ತಿದ್ದೆವು. ಯಾರೋ ಕಂಬಳಿಗಳ ಮೇಲೆ ಬಿದ್ದ ಹಿಮವನ್ನು ತಿಂದು ಬಾಯಾರಿಕೆ ತಣಿಸುವುದನ್ನು ಕಂಡುಕೊಂಡರು. ನಮಗೆ ಬಗ್ಗುವುದಕ್ಕೂ ನಿಷೇದಿಸಲಾಗಿದ್ದರಿಂದ ನಮ್ಮ ಮುಂದಿದ್ದವನ ಕಂಬಳಿಯ ಮೇಲಿನ ಹಿಮವನ್ನು ಕೆರೆದು ತಿನ್ನಲಾರಂಭಿಸಿದೆವು. ಬಾಯಿಗೆ ಒಂದು ಚೂರು ಬ್ರೆಡ್ಡು ಮತ್ತು ಒಂದು ಸ್ಪೂನಿನಷ್ಟು ಹಿಮದ ಚೂರು. ಇದನ್ನು ಕಂಡ ಎಸ್. ಎಸ್.‌ ಆಫೀಸರ್‌ಗಳು ಏನೋ ವಿಚಿತ್ರ ನೋಡಿದಂತೆ ತಮ್ಮ ತಮ್ಮಲ್ಲೇ ಕೇಕೆ ಹಾಕುತ್ತಾ ನಗತೊಡಗಿದರು. ‌

ಹೀಗೇ ಬಹಳ ಹೊತ್ತು ಕಳೆಯಿತು. ರೈಲಿಗೆ ಕಾಯುತ್ತಾ ಆಗಾಗ ದಿಗಂತವನ್ನು ನಿಟ್ಟಿಸುತ್ತಿದ್ದ ನಮ್ಮ ಕಣ್ಣುಗಳು ಆಯಾಸದಿಂದ ನಿದ್ರೆಗೆ ಕಾತರಿಸುತ್ತಾ ಮುಚ್ಚಿಕೊಳ್ಳುತ್ತಿದ್ದವು. ಕೊನೆಗೂ ರೈಲು ಬಂದಿತು. ಕೊನೆಯೇ ಇಲ್ಲದ ಬಾಲದ ರೈಲು. ಬಾನಿಗೆ ತೆರೆದುಕೊಂಡ ಅಸಂಖ್ಯಾತ ಜಾನುವಾರುಗಳನ್ನು ಸಾಗಿಸುವ ಡಬ್ಬಿಗಳು. ಒಂದು ಡಬ್ಬಿಗೆ ನೂರು ಜನರಂತೆ ನಮ್ಮನ್ನು ದಬ್ಬಲಾಯಿತು. ಎಲ್ಲರನ್ನೂ ತುಂಬಿಸಿಕೊಂಡು ರೈಲು ಹೊರಟಿತು.

****

ಮೈ ಕೊರೆಯುತ್ತಿರುವ ಚಳಿಯಿಂದಾಗಿ ಎಲ್ಲರೂ ಡಬ್ಬಿಯೊಳಗೆ ಇಬ್ಬರ ಮಧ್ಯೆ ಕಿಂಚಿತ್ತೂ ಜಾಗವಿಲ್ಲದಂತೆ ಒತ್ತೊತ್ತಿಕೊಂಡು ಕುಳಿತುಕೊಂಡೆವು. ನಮ್ಮ ತಲೆಯೊಳಗೆ ಅವೇ ಕೊಳೆತು ನಾರುತ್ತಿರುವ ಹಳೇ ನೆನಪುಗಳು ಮಂಥಿಸುತ್ತಿದ್ದವು. ವರ್ತಮಾನದ ಬಗ್ಗೆ ನಮಗೆ ಕಿಂಚಿತ್ತೂ ಚಿಂತೆ ಇರಲಿಲ್ಲ. ಇಲ್ಲೋ, ಮತ್ತೆಲ್ಲೋ? ಸಾಯುವವರಿಗೆ ಇಂದೋ, ನಾಳೆನೋ, ನಾಡದ್ದೋ? ಏನು ವ್ಯತ್ಯಾಸ?! ರಾತ್ರಿ ಉದ್ದವಾಗುತ್ತಲೇ ಇತ್ತು. ಕೊನೆ ಇಲ್ಲದ ರಾತ್ರಿ. 

ಕೊನೆಗೂ, ಒಂದು ಶತಮಾನವೇ ಕಳೆದು ಹೋದಂತಾದ ಮೇಲೆ ಅಗಸದಲ್ಲಿ ಮಸುಕು ಮಸಕಾಗಿ ಬೆಳಕು ಮೂಡಲಾರಂಭಿಸಿತು. ಆ ಅಸ್ಪಷ್ಟ ಬೆಳಕಿನಲ್ಲಿ ನಮ್ಮ ಸುತ್ತ ಹುಗಿದು ಹೋಗಿದ್ದ ಅಸ್ಪಷ್ಟ ಮನುಷ್ಯಾಕೃತಿಗಳೂ ಒಂದೊಂದಾಗಿ ಕಾಣತೊಡಗಿದವು. ಒಬ್ಬರ ಮೇಲೊಬ್ಬರು, ಇಳಿ ಬಿದ್ದ ಬಾಹುಗಳ ಮಧ್ಯೆ ಜೋತು ಬಿದ್ದಿದ್ದ ತಲೆಗಳು ನನಗೆ ಹಿಮಚ್ಛಾದಿತ ಸ್ಮಶಾನದಂತೆ ಕಾಣಿಸಿದವು. ನಸುಕು ಹರಿದಂತೆ ನನ್ನ ಕಣ್ಣುಗಳು ಈ ಜೀವರಾಶಿಯ ಮಧ್ಯೆ ಸತ್ತು ಹೋಗಿರುವ, ಉಸಿರಾಡುತ್ತಿರುವ, ಅದರಲ್ಲೂ ಶೂನ್ಯವನ್ನು ದಿಟ್ಟಿಸುತ್ತಾ ಹಿಮ ಸವರಿಕೊಂಡಿರುವ ತೆರೆದ ಕಣ್ಣುಗಳನ್ನು ಹುಡುಕಲಾರಂಭಿಸಿತು.  

ಅಪ್ಪ ನನ್ನ ಬಗಲಲ್ಲೇ ಮುದುರಿಕೊಂಡು ಕುಳಿತ್ತಿದ್ದರು. ಅವರ ಕಂಬಳಿಯ ಮೇಲೆ ಹಿಮ ರಾಶಿ ಬಿದ್ದಿತ್ತು. ಅಪ್ಪ ಸತ್ತಿಲ್ಲ ತಾನೆ?! ನಾನು ಗಾಬರಿಗೊಂಡೆ. ಅಪ್ಪನನ್ನು ಜೋರಾಗಿ ಕರೆದೆ. ಯಾವುದೇ ಪ್ರತಿಕ್ರಿಯೆಗಳಿಲ್ಲ! ನಾನು ಜೋರಾಗಿ ಕೂಗಲು ಬಾಯ್ದೆರೆದೆ. ಸ್ವರವೇ ಹೊರಡಲಿಲ್ಲ. ಅಪ್ಪನನ್ನು ಜೋರಾಗಿ ತಡವಿದೆ. ಆದರೂ ಅಪ್ಪ ಎಚ್ಚೆತ್ತುಕೊಳ್ಳಲಿಲ್ಲ.

ನಾನು ಹೌಹಾರಿದೆ. ಇನ್ನು ಬದುಕಲು ನಡೆಸುವ ಸಂಘರ್ಶಕ್ಕೆ ಯಾವುದೇ ಅರ್ಥವಿಲ್ಲ ಅನಿಸಿತು…

ರೈಲು, ಒಂದು ವಿಶಾಲವಾದ ಮೈದಾನದ ಮಧ್ಯದಲ್ಲಿ ಒಮ್ಮೆಲೇ ನಿಂತಿತು. ನಿದ್ದೆಯಲ್ಲಿದ್ದ ಕೆಲವರು ಗಡಬಡಿಸಿ ಕಣ್ಣುಜ್ಜುತ್ತಾ ಎದ್ದು ನಿಂತರು.

ಹೊರಗೆ ಎಸ್. ಎಸ್.‌ ಆಫೀಸರ್‌ಗಳು ಉಚ್ಚ ಸ್ವರದಲ್ಲಿ ಕೂಗಿ ಹೇಳುತ್ತಿದ್ದರು:

“ಸತ್ತವರನ್ನೆಲ್ಲಾ ಹೊರಗೆಸೆಯಿರಿ… ಬೇಗ!..ಬೇಗ!..ಹೆಣಗಳೆಲ್ಲಾ ಹೊರಕ್ಕೆ..”

ಜೀವಂತ ಉಳಿದಿದ್ದವರಿಗೆ ಖುಷಿಯಾಯಿತು. “ದೇವರೇ ನಿನಗೆ ವಂದನೆಗಳು.” ಈಗ ಡಬ್ಬಿಯೊಳಗೆ ನೆಮ್ಮದಿಯಿಂದ ಕಿಂಚಿತ್‌ ಉಸಿರಾಡಬಹುದು.

ಸ್ವಯಂ ಸೇವಕರು ಸತ್ತವರನ್ನೆಲ್ಲಾ ಹೊರಗೆಸೆದರು.

“ಇಲ್ಲೊಬ್ಬನಿದ್ದಾನೆ..” ಸ್ವಯಂ ಸೇವಕರು ಅವನು ಹುಟ್ಟಿದ್ದ ವಸ್ತ್ರಗಳನ್ನು ಬಿಚ್ಚಿ ತಮ್ಮಲ್ಲೇ ಹಂಚಿಕೊಂಡರು. ಒಬ್ಬ ಅವನ ಕಾಲುಗಳನ್ನು ಬಾಚಿ ಕೊಂಡು ಹಿಡಿದ. ಮತ್ತೊಬ್ಬ ಅವನ ತಲೆಯನ್ನು. ಹಿಂದಕ್ಕೆ ಮುಂದಕ್ಕೆ ತೂಗಾಡಿಸುತ್ತಾ ಅವನನ್ನು ರೊಯ್ಯನೆ ಹೊರಗೆಸೆದರು.

ಯಾರೋ ರೋಧಿಸಲಾರಂಭಿಸಿದ.

“ಇಲ್ಲಿ ಬನ್ನಿ, ಇಲ್ಲಿ ಬನ್ನಿ. ನನ್ನ ಪಕ್ಕದವನೂ ಸತ್ತಿರುವವನಂತೆ ಕಾಣಿಸುತ್ತಿದ್ದಾನೆ!”

ಇಬ್ಬರು ನನ್ನ ಪಕ್ಕದಲ್ಲೇ ಬಂದು ನಿಂತರು. ನಾನು ಜಾಗೃತನಾದೆ. ಅವರು ಅಪ್ಪನನ್ನು ಹೊರಗೆಸೆಯಲು ಬಂದಿದ್ದರು! ನಾನು ಅಪ್ಪನನ್ನು ಕವುಚಿ ಹಿಡಿದುಕೊಂಡೆ. ಅಪ್ಪ ಹಿಮದ ತುಂಡಿನಂತೆ ತಣ್ಣಗಾಗಿದ್ದರು. ಅವರನ್ನು ಹಿಗ್ಗಾ ಮುಗ್ಗಾ ತಳ್ಳಾಡಿ ಎಬ್ಬಿಸಿದೆ.. ಕೆನ್ನೆಗೆರಡು ಬಾರಿಸಿದೆ…ಅವರ ಪಾದಗಳನ್ನು ಮತ್ತು ಅಂಗೈಗಳನ್ನು ಉಜ್ಜುತ್ತಾ, “ಅಪ್ಪಾ, ಅಪ್ಪಾ.. ಪ್ಲೀಜ್‌, ಎದ್ದೇಳಪ್ಪಾ! ನಿನಗವರು ಹೊರಗೆಸೆಯುತ್ತಾರಪ್ಪಾ..!!!”

ಅಪ್ಪಾ ಕಿಂಚಿತ್ತೂ ಪ್ರತಿಕ್ರಿಯಿಸಲಿಲ್ಲ. ಅವರ ದೇಹ ನಿಶ್ಚಲವಾಗಿತ್ತು.

ಆ ಇಬ್ಬರು ಯಮದೂತರು ನನ್ನ ಶರಟಿನ ಕಾಲರನ್ನಿಡಿದು ಅಪ್ಪನ ಮೇಲಿಂದ ಎಬ್ಬಿಸಲು ಪ್ರಯತ್ನಿಸಿದರು.

“ಹುಡುಗಾ, ನಿನ್ನ ಮುದುಕ ಸತ್ತು ಎಷ್ಟೋ ಹೊತ್ತಾಗಿದೆ ಕಣಪ್ಪ.” ಅವರು ನನಗೆ ಸಮಜಾಯಿಷಿ ಹೇಳತೊಡಗಿದರು.

“ಇಲ್ಲ. ನನ್ನಪ್ಪ ಸತ್ತಿಲ್ಲ!” ನಾನು ಅರಚಿದೆ.

ನಾನು ಅಪ್ಪನನ್ನು ಆಚೆ ಈಚೆ ತಳ್ಳುತ್ತಾ ಮಧ್ಯೆ ಮಧ್ಯೆ ಕೆನ್ನೆಗಳಿಗೆ ರಪರಪನೆ ಬಾರಿಸತೊಡಗಿದೆ. ಅಪ್ಪ ಮೆಲ್ಲನೆ ಅರ್ಧ ಕಣ್ಣು ತೆರೆದು ದಿಗ್ಭ್ರಮೆಗೊಂಡಂತೆ ಸುತ್ತ ಕಣ್ಣು ಹಾಯಿಸಿದರು. ಆ ಕಣ್ಣುಗಳಲ್ಲಿ ಜೀವದ ಪಸೆಯೇ ಇರಲಿಲ್ಲ! ಅವರು ಉಸಿರಾಡುತ್ತಿರುವುದೂ ಗೊತ್ತಾಗುತ್ತಿರಲಿಲ್ಲ.

“ನೋಡಿ, ನೋಡಿ ನನ್ನಪ್ಪ ಬದುಕಿದ್ದಾರೆ!!..ಅವರು ಬದುಕಿದ್ದಾರೆ!!” ನಾನು ಕೂಗಿ ಹೇಳಿದೆ.

ಆ ಯಮದೂತರು ಅಲ್ಲಿಂದ ಮುಂದಕ್ಕೆ ಹೋದರು.

ನಮ್ಮ ಡಬ್ಬಿಯಿಂದ ಇಪ್ಪತ್ತು ಹೆಣಗಳನ್ನು ಎತ್ತಿ ಹೊರಗೆಸೆದ ನಂತರ ರೈಲು ಮತ್ತೆ ಹೊರಟಿತು. ದಪ್ಪನೆಯ ಹಿಮ ಹೊದ್ದ ಪೋಲೆಂಡಿನ ಆ ವಿಶಾಲ ಮೈದಾನದ ಮೇಲೆ ಶವಸಂಸ್ಕಾರಕ್ಕೂ ಗತಿ ಇಲ್ಲದ ನೂರಾರು ಅನಾಥ ಶವಗಳು ಚದುರಿ ಬಿದ್ದಿದ್ದವು. 

ಆ ನಂತರ ನಮಗೆ ಹೊಟ್ಟೆಗೆ ಏನೂ ಕೊಡಲಿಲ್ಲ.

ಮೇಲಿಂದ ಬೀಳುತ್ತಿದ್ದ ಹಿಮವಷ್ಟೇ ನಮ್ಮ ಆಹಾರವಾಯಿತು. ಹಗಲು..ರಾತ್ರಿಯ ಮ‍ಧ್ಯೆ ನಮಗೆ ಯಾವುದೇ ವ್ಯತ್ಯಾಸಗಳು ಕಾಣುತ್ತಿರಲಿಲ್ಲ. ರೈಲು ಮಧ್ಯೆ ಮಧ್ಯೆ ತಾಸುಗಟ್ಟಲೆ ನಿಂತು ಏನೂ ಅವಸರವಿಲ್ಲದಂತೆ ಮೆಲ್ಲಗೆ ಓಡುತ್ತಿತ್ತು. ಹಿಮವಂತೂ ಬೀಳುತ್ತಲೇ ಇತ್ತು. ನಾವು ಒಬ್ಬರ ಮೇಲೊಬ್ಬರು ಬಿದ್ದು ಹಿಮ ಮುಚ್ಚಿದ್ದ ಶವಗಳಂತಾಗಿದ್ದೆವು. ಓಡುತ್ತಿರುವ ರೈಲಿನ ನಿರಂತರ ಸದ್ದು ಬಿಟ್ಟರೆ ಎಲ್ಲೆಡೆಯೂ ಗಾಢ ಮೌನ.

**** 

ಹಗಲು ರಾತ್ರಿಗಳು ಸರಿದು ಹೋಗುತ್ತಿದ್ದೆವು.

ಮಧ್ಯೆ ಮಧ್ಯೆ ನಸುಕಿನಲ್ಲಿಯೇ ಜರ್ಮನಿಯ ನಗರಗಳನ್ನು ದಾಟಿ ಹೋಗುತ್ತಿದ್ದೆವು. ಕೆಲವೊಮ್ಮೆ ಬೆಳಿಗ್ಗೆ ಕೆಲಸಕ್ಕೆ ಹೋಗುತ್ತಿರುವ ಕೂಲಿಕಾರರು ನೋಡಲು ಸಿಗುತ್ತಿದ್ದರು. ಅವರೆಲ್ಲ ಬಿಟ್ಟ ಕಂಗಳಿನಿಂದ ನಮ್ಮನ್ನೇ ನೋಡುತ್ತಾ ನಿಲ್ಲುತ್ತಿದ್ದರು. ಅವರ ಕಣ್ಣುಗಳಲ್ಲಿ ಯಾವುದೇ ಕುತೂಹಲ ಕಾಣಿಸುತ್ತಿರಲಿಲ್ಲ.

ಒಮ್ಮೆ ಈ ಜರ್ಮನ್‌ ಕೆಲಸಗಾರರು ನಡೆದುಕೊಂಡು ಹೋಗುತ್ತಿದ್ದ ಕಾಲು ಹಾದಿಯ ಬಳಿ ನಮ್ಮ ರೈಲು ನಿಂತಿತು. ಒಬ್ಬ ಜರ್ಮನ್‌ ಕೂಲಿಕಾರ ತನ್ನ ಬ್ಯಾಗಿನಿಂದ ಒಂದು ಬ್ರೆಡ್ಡಿನ ತುಣುಕನ್ನು ನಮ್ಮ ಡಬ್ಬಿಯೊಳಗೆ ಎಸೆದ. ಡಬ್ಬಿಯೊಳಗೆ ಒಮ್ಮೆಲೆ ದೊಡ್ಡ ಕೋಲಾಹಲ ಉಂಟಾಯಿತು. ಹಸಿದ ನಿಶ್ಶಕ್ತ ಮನುಷ್ಯರು ಒಂದು ತುಣುಕು ಬ್ರೆಡ್ಡಿಗಾಗಿ ಒಬ್ಬರ ಮೇಲೊಬ್ಬರು ಎಗರಿ ಬಡಿದಾಡತೊಡಗಿದರು. ಬ್ರೆಡ್‌ ತುಣುಕು ಎಸೆದಿದ್ದ ಕೂಲಿಕಾರ ಕೂತೂಹಲದಿಂದ ಈ ತಮಾಶೆಯನ್ನು ನೋಡುತ್ತಾ ನಿಂತುಕೊಂಡ.

*** 

ಬಹಳ ವರ್ಷಗಳ ನಂತರ ಇಂತಾದ್ದೆ ಒಂದು ದೃಶ್ಯ ನನಗೆ ಏಡನ್‌ ಪಟ್ಟಣದಲ್ಲಿ ಕಾಣ ಸಿಕ್ಕಿತು. ನಾನು ಪ್ರಯಾಣಿಸುತ್ತಿದ್ದ ಹಡಗಿನ ಪ್ರಯಾಣಿಕರು ನೀರಿಗೆ ನಾಣ್ಯಗಳನ್ನು ಎಸೆಯುತ್ತಿದ್ದರು. ಇವುಗಳನ್ನು ನೀರಿನಲ್ಲಿ ಮುಳುಗಿ ಹೆಕ್ಕಲು ಸ್ಥಳೀಯ ಜನರು ಮುಗಿಬೀಳುತ್ತಿದ್ದರು. ಇದು ಹಡಗಿನ ಪ್ರಯಾಣಿಕರಿಗೆ ಮನೋರಂಜನೆಯ ಆಟವಾಗಿತ್ತು. ಇವರೊಂದಿಗೆ ಒಬ್ಬಳು ಫ್ರೆಂಚ್‌ ಸ್ತ್ರೀ ಈ ಆಟದಿಂದ ವಿಶೇಷವಾಗಿ ಆನಂದ ಪಡೆಯುತ್ತಿದ್ದಳು. ಅವಳು ಎಸೆಯುತ್ತಿದ್ದ ನಾಣ್ಯಗಳನ್ನು ನೀರಲ್ಲಿ ಮುಳುಗಿ ಹೆಕ್ಕುವ ಪೈಪೋಟಿಯಲ್ಲಿ ಇಬ್ಬರು ಹುಡುಗರು ಜೀವದ ಹಂಗು ತೊರೆದು ಕಿತ್ತಾಡುತ್ತಿರುವುದನ್ನು ನೋಡಿ ನಾನು ಹೌಹಾರಿದೆ. 

“ಮೇಡಮ್‌, ದಯವಿಟ್ಟು ನಿಮ್ಮ ಆಟವನ್ನು ನಿಲ್ಲಿಸಿ!” ನಾನು ಅವಳ ಬಳಿ ಕೇಳಿಕೊಂಡೆ.

ನಮ್ಮನ್ನು ಸಾಗಿಸುತ್ತಿದ್ದ ರೈಲಿನ ಉದ್ದಕ್ಕೂ ಜನ ನಿಂತು ನಮ್ಮನ್ನು ಬೇರೆ ಯಾವುದೋ ಗ್ರಹದ ಜೀವಿಗಳಂತೆ ಕುತೂಹಲದಿಂದ ನೋಡುತ್ತಿದ್ದರು. ಬಹುಶಃ ಗುಜರಿ ಮನುಷ್ಯರನ್ನು ಹೊತ್ತೊಯ್ಯುವ ರೈಲು ಅವರು ನೋಡಿರಲಿಲ್ಲವೆಂದು ಕಾಣಿಸುತ್ತದೆ! ಕೆಲವು ಕ್ಷಣಗಳ ನಂತರ ಎಲ್ಲಾ ಕಡೆಯಿಂದ ಡಬ್ಬಿಗಳೊಳಗೆ ಬ್ರೆಡ್‌ ತುಣುಕುಗಳು ಬಂದು ಬೀಳತೊಡಗಿದವು.

ಡಬ್ಬಿಯೊಳಗಿನ ಜೀವಂತ ಅಸ್ಥಿಪಂಜರುಗಳು ಬ್ರೆಡ್‌ ತುಣುಕುಗಳಿಗೆ ಕಿತ್ತಾಡುತ್ತಿರುವ ದೃಶ್ಯ ಅವರಿಗೆ ಹಾಸ್ಯಾಸ್ಪದವಾಗಿ ಕಂಡಿರಬೇಕು!

ಒಂದು ಬ್ರೆಡ್ಡಿನ ತುಣುಕು ನನ್ನ ಬಳಿಯೇ ಬಂದು ಬಿದ್ದಿತು. ನಾನು ಆ ಕಡೆಗೆ ಕಿಂಚಿತ್ತೂ ಗಮನ ಕೊಡಲಿಲ್ಲ. ಅದನ್ನು ಹತ್ತು ಹದಿನೈದು ಜನರ ಬಳಿ ಕಿತ್ತಾಡಿ ದಕ್ಕಿಸಿ ಕೊಳ್ಳುವಷ್ಟು ಶಕ್ತಿ ನನ್ನಲಿಲ್ಲವೆಂದು ನನಗೆ ಗೊತ್ತಿತ್ತು. ನನ್ನ ಸನಿಹದಲ್ಲೇ ಒಬ್ಬ ಮುದುಕ ಆ ಗೊಂದಲದಿಂದ ಮೆಲ್ಲಗೆ ಅಂಬೆಗಾಲಿಡುತ್ತಾ ಹೊರಬರುತ್ತಿರುವುದನ್ನು ನಾನು ಕುತೂಹಲದಿಂದ ಗಮನಿಸತೊಡಗಿದೆ. ಅವನು ಎದೆಯ ಮೇಲೆ ತನ್ನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದ. ಬಹುಶಃ ಅವನಿಗೆ ಯಾರೋ ಒದ್ದಿರಬೇಕೆಂದು ನಾನೆಣಿಸಿದೆ. ನಂತರ ತಿಳಿಯಿತು ಅವನು ತನ್ನ ಅಂಗಿಯ ಜೇಬಿನಲ್ಲಿ ಬ್ರೆಡ್‌ ತುಣುಕುಗಳನ್ನು ಮುಚ್ಚಿಟ್ಟುಕೊಂಡಿದ್ದ! ಸ್ವಲ್ಪ ಮುಂದೆ ಸರಿದ ಮೇಲೆ ಮುದುಕನ ಕೈಮಿಂಚಿನ ವೇಗದಲ್ಲಿ ಜೇಬಿನಿಂದ ಬ್ರೆಡ್‌ ತುಣುಕನ್ನು ಹೊರತೆಗೆದು ಬಾಯಿಗೆ ಸೇರಿಸಿತು! ಅವನ ಬಿಳುಚಿಕೊಂಡ ಮುಖದ ಮೇಲೆ ಒಂದು ಬಗೆಯ ಸ್ವರ್ಗೀಯ ಆನಂದ ಮಿಂಚಿ ಮಾಯವಾಯಿತು. ಅಷ್ಟರಲ್ಲಿ, ಅವನ ಪಕ್ಕದಲ್ಲಿ ಒಂದು ದಟ್ಟ ನೆರಳು ಬಿದ್ದಿತು! ಆ ನೆರಳು ಒಂದೇ ಸಮನೆ ಮುದುಕನ ಮೇಲೆ ಹಲ್ಲೆ ಮಾಡತೊಡಗಿತು. ಮುದುಕ ಕಿರಿಚಾಡುತ್ತಿದ್ದ:

“ಮೇಯ್ರ್!..ಮಗಾ ಮೇಯ್ರ್!!‌ನಾನು ಕಣಪ್ಪ…ನಿನ್ನ ಅಪ್ಪ! ನನ್ನನ್ನು ಸಾಯಿಸಬೇಡ ಕಣಪ್ಪ. ನಿನಗೂ ಒಂದು ತುಂಡು ಬ್ರೆಡ್‌ ತಂದಿದ್ದೇನೆ ನೋಡು!..ಹೌದು, ಹೌದು. ನಿನಗೂ..” ಎನ್ನುತ್ತಾ ಮುದುಕ ಕುಸಿದು ಬಿದ್ದ. ಅವನ ಮುಷ್ಠಿಯೊಳಗಿಂದ ಒಂದು ಬ್ರೆಡ್ಡಿನ ತುಂಡು ಹೊರ ಕಾಣುತ್ತಿತ್ತು. ಅದು ಅವನು ಬಾಯಿಗೆ ತುರುಕುವಷ್ಟರಲ್ಲಿ ಅವನ ಮಗ ಅದನ್ನು ಕಸಿದುಕೊಂಡ. ಮುದುಕ ಅಸ್ಪಷ್ಟವಾಗಿ ಏನನ್ನೋ ಹೇಳುತ್ತಾ ನಿಸ್ತೇಜನಾದ. ಅವನ ಮಗ ಮುದುಕನ ಅಂಗಿಯನ್ನು ಸಂಪೂರ್ಣವಾಗಿ ಶೋಧಿಸಿ ಮತ್ತೊಂದು ಬ್ರೆಡ್‌ ತುಣುಕನ್ನು ಹೊರತೆಗೆದು ಬಾಯಿಗೆ ಹಾಕಿಕೊಳ್ಳುವಷ್ಟರಲ್ಲಿ ಮತ್ತಿಬ್ಬರು ಇವನ ಮೇಲೆರಗಿದರು. ಇವರ ಮೇಲೆ ಮತ್ತಷ್ಟು ಜನರು ಬಿದ್ದರು.

ಕೊನೆಯಲ್ಲಿ ತಂದೆ ಮಗ ಇಬ್ಬರೂ ಶವವಾಗಿ ಬಿದ್ದಿದ್ದರು.

***** 

ನಮ್ಮ ಡಬ್ಬಿಯಲ್ಲಿ ಮೇಯ್ರ್‌ ಕ್ಯಾಟ್ಝ್‌ ಎಂಬುವ ನನ್ನ ತಂದೆಯ ಸ್ನೇಹಿತನಿದ್ದ. ಅವನು ಬೂನಾ ಶಿಬಿರದಲ್ಲಿ ತರಕಾರಿ ತೋಟವನ್ನು ನೋಡಿಕೊಳ್ಳುತ್ತಿದ್ದ. ಆಗಾಗ ನಮಗೆ ತಾಜಾ ತರಕಾರಿಗಳನ್ನು ಕದ್ದು ತಂದು ಕೊಡುತ್ತಿದ್ದ. ಅವನು ನಮಗಿಂತ ಆರೋಗ್ಯದವಂತನಾಗಿ ಕಾಣಿಸುತ್ತಿದ್ದ. ಮಾಲಿಯ ಕೆಲಸ ಮಾಡುತ್ತಿದ್ದನಾದ್ದರಿಂದ ಅವನಿಗೆ ನಮ್ಮಷ್ಟು ಶ್ರಮದ ಕೆಲಸ ಬೀಳುತ್ತಿರಲಿಲ್ಲ. ಇಲ್ಲೂ ಕೂಡ ಅವನಿಗೆ ನಮ್ಮ ಡಬ್ಬಿಯ ಮೇಲ್ವಿಚಾರಕನನ್ನಾಗಿ ನೇಮಿಸಿದ್ದರು.

ನಮ್ಮ ಪಯಣದ ಒಂದು ರಾತ್ರಿ ನಿದ್ದೆಯಲ್ಲಿರುವಾಗ ಯಾರೋ ನನ್ನ ಕತ್ತನ್ನು ಹಿಸುಕುತ್ತಿರುವ ಅನುಭವ ಉಂಟಾಗಿ ನಾನು ಗಾಬರಿಯಿಂದ ಕೊಸರಾಡುತ್ತಾ, “ಅಪ್ಪಾ!..” ಎಂದೆ ಗೊಗ್ಗರು ದನಿಯಲ್ಲಿ. 

ಅಪ್ಪನಿಗೆ ತಕ್ಷಣ ಎಚ್ಚರವಾಯಿತು. ಅಪ್ಪ ನನ್ನ ಮೇಲೆ ಬಿದ್ದಿದ್ದವನ ಜೊತೆ ಹೋರಾಡತೊಡಗಿದರು. ಅವರೂ ನಿಶ್ಶಕ್ತರಾಗಿದ್ದರಿಂದ ತಮ್ಮ ಗೆಳೆಯ ಮೆಯೆರಾನಿಗೆ ಕೂಗಿದರು.

“ಮೇಯೆರ್‌, ಮೇಯೆರ್‌ ಬೇಗ ಬಾ. ಯಾರೋ ನನ್ನ ಮಗನನ್ನು ಸಾಯಿಸುತ್ತಿದ್ದಾನೆ.”

ಕೆಲವೆ ಕ್ಷಣಗಳಲ್ಲಿ ನಾನು ನನ್ನ ಮೇಲೆ ಬಿದ್ದವನಿಂದ ಮುಕ್ತನಾದೆ. ಯಾತಕ್ಕಾಗಿ ಅವನು ನನ್ನನ್ನು ಕೊಲ್ಲಲು ಬಂದಿದ್ದ ಎಂದು ಕೊನೆಗೂ ಗೊತ್ತಾಗಲಿಲ್ಲ.

ಕೆಲವು ದಿನಗಳ ನಂತರ ಮೆಯೆರ್‌ ತಂದೆಯ ಬಳಿ, “ಶ್ಲೊಮೊ, ನನಗೆ ಇತ್ತೀಚೆಗೆ ಯಾಕೋ ಆರೋಗ್ಯ ಸರಿ ಇಲ್ಲ. ನಾನು ಹೆಚ್ಚು ಕಾಲ ಬದುಕುವುದಿಲ್ಲ ಎಂದು ಭಾಸವಾಗುತ್ತಿದೆ.” ಎಂದರು.

“ಮೇಯೆರ್‌, ನೀನೆ ಹೀಗೆ ಹೇಳಿದರೆ ಹೇಗಪ್ಪಾ? ನೀನು ಖಂಡಿತವಾಗಿಯೂ ನಿರಾಶನಾಗಬಾರದು. ನೀನು ನಿನ್ನ ಮೇಲಿನ ಭರವಸೆಯನ್ನು ಎಂದಿಗೂ ಕಳೆದುಕೊಳ್ಳಬಾರದು.” ಅಪ್ಪ ಅವನನ್ನು ಉತ್ತೇಜಿಸಲು ಪ್ರಯತ್ನ ಪಟ್ಟರು.

“ಇಲ್ಲ ಶ್ಲೊಮೊ. ನಿಜವಾಗಿಯೂ ನನ್ನ ಆರೋಗ್ಯ ಕೆಟ್ಟಿದೆ..ನಿಜವಾಗಿಯೂ..”

ಅಪ್ಪ ಅವನ ಭುಜವನ್ನು ಗಟ್ಟಿಯಾಗಿ ಹಿಡಿದುಕೊಂಡರು. ಮೆಯೆರ್‌, ನಮ್ಮೆಲ್ಲರಿಗಿಂತಲೂ ಘಟ್ಟಿಮುಟ್ಟಾದ ಮೆಯೆರ್‌.. ಬಿಕ್ಕಿ ಬಿಕ್ಕಿ ಅಳತೊಡಗಿದರು. ಅವರ ಮಗನನ್ನು, ಈ ಪ್ರಯಾಣಕ್ಕೆ ಅಸಮರ್ಥನೆಂದು ಮೊದಲೇ ನಾಜೀಗಳು ವಿಂಗಡಿಸಿ ತಂದೆಯಿಂದ ಬೇರ್ಪಡಿಸಿದ್ದರು. ಅವರಿಗೀಗ ಹೆಚ್ಚುಹೆಚ್ಚು ಮಗನ ಅನುಪಸ್ಥಿತಿ ಕಾಡತೊಡಗಿ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ತಾವು ಈ ಪ್ರಯಾಣದ ಕೊನೆಯ ಹಂತವನ್ನು ಮುಟ್ಟಿರುವಂತೆ ಅವರಿಗೆ ಅನಿಸತೊಡಗಿತ್ತು.

**** 

ನಮ್ಮ ಪ್ರಯಾಣದ ಕೊನೆಯ ದಿನ, ಹಿಮಪಾತದೊಂದಿಗೆ ಭಯಾನಕ ಗಾಳಿಯೂ ಬೀಸತೊಡಗಿತು. ಯಾರೋ ಎದ್ದು ನಿಂತು ಜೋರಾಗಿ, “ನಾವು ಹೀಗೆಯೇ ಕುಳಿತಿದ್ದರೆ ಖಂಡಿತವಾಗಿಯೂ ಇಲ್ಲಿಯೇ ಮರಗಟ್ಟಿ ಸಾಯುತ್ತೇವೆ. ಎಲ್ಲರೂ ಎದ್ದು ನಿಂತು ಕೈಕಾಲುಗಳನ್ನು ಅಲ್ಲಾಡಿಸುತ್ತಾ  ಹೆಜ್ಜೆ ಹಾಕುತ್ತಿರಿ.”

ಎಲ್ಲರೂ, ಇದೊಂದು ಆದೇಶವೆಂಬಂತೆ ಎದ್ದು ನಿಂತು ತಮ್ಮ ಒದ್ದೆ ಕಂಬಳಿಗಳನ್ನು ಮತ್ತೂ ಬಿಗಿದು ಆಚೇಚೆ ಹೆಜ್ಜೆಗಳನ್ನಾಕಲಾರಂಭಿಸಿದರು.

….ಅಷ್ಟರಲ್ಲಿ, ಡಬ್ಬಿಯೊಳಗೊಂದು ಗಾಯಗೊಂಡ ಪ್ರಾಣಿಯಂತೆ ಭಯಾನಕ ಚೀರಾಟ ಕೇಳಿಸಿತು. ನಾವೆಲ್ಲಾ ಗಮನವಿಟ್ಟು ಆಲಿಸಿದೆವು. ಯಾರೋ ಪ್ರಾಣ ತೊರೆಯುವ ತಯಾರಿಯಲ್ಲಿದ್ದರು.

ಅವರೊಂದಿಗೆ ಮತ್ತೂ ಕೆಲವರು ಸಜ್ಜಾದವರಂತೆ ಮತ್ತಷ್ಟು ಚೀರಾಟಗಳು ಆ ನೀರವ ರಾತ್ರಿಯನ್ನು ಬೇಧಿಸತೊಡಗಿದವು. ಭಯದಿಂದ ನನ್ನ ಮೈ ಮೇಲಿನ ರೋಮ ರೋಮಗಳು ಸರಿಗೆಗಳಂತೆ ನೆಟ್ಟಗಾದವು. ಆ ಹೃದಯ ವಿದ್ರಾವಕ ಕೂಗುಗಳು ನನಗೆ ನೇರವಾಗಿ ಸ್ಮಶಾಣದಿಂದ ಹೊರ ಬಂದಂತೆ ಕೇಳಿಸಿದವು. ನಾನು ಥರಥರನೆ ಕಂಪಿಸತೊಡಗಿದೆ.

ಸಾಯುವ ಹಿಂದಿನ ವಿಳಾಪ ಸರಪಳಿಯಂತೆ ಡಬ್ಬಿಯಿಂದ ಡಬ್ಬಿಗೆ ಹರಡತೊಡಗಿತು. ಬಹಳಷ್ಟ ಜನರ ಪ್ರಾಣ ತೊರೆಯುವ ಆರ್ತಧ್ವನಿಗಳು ಆ ಕರಾಳರಾತ್ರಿಯನ್ನು ಛೇದಿಸತೊಡಗಿದವು. ಎಲ್ಲಾ ಸೀಮೆಗಳನ್ನು ದಾಟಿ ಬಂದಿದ್ದ ನಮ್ಮಲ್ಲಿ ಇನ್ನು ಏನೂ ಉಳಿದಿರಲಿಲ್ಲ. ಎಲ್ಲರೂ ಹತಾಶರಾಗಿದ್ದರು. ರಾತ್ರಿಗೆ ಕೊನೆಯೇ ಇಲ್ಲದಂತೆ ಕಾಣುತ್ತಿತ್ತು.

ಮೆಯೆರ್‌ ಕ್ಯಾಟ್ಝ್‌ ನರಳುತ್ತಿದ್ದ.

“ನಮ್ಮನ್ನು ಅವರು ಗುಂಡಿಟ್ಟು ಏಕೆ ಸಾಯಿಸುತ್ತಿಲ್ಲ?” ಅವನು ಕೇಳುತ್ತಿದ್ದ. ಯಾರೂ ಉತ್ತರಿಸಲಿಲ್ಲ.

ಆ ರಾತ್ರಿ ನಮ್ಮ ಪ್ರಯಾಣ ಕೊನೆಯಾಯಿತು. ತುಂಬಾ ಹೊತ್ತಾಗಿತ್ತು. ನಮ್ಮ ಡಬ್ಬಿಗಳ ಸುತ್ತಾ ಗಾರ್ಡುಗಳು ಬಂದು ನೆರೆದರು. ನಮ್ಮ ಬಹಳಷ್ಟು ಸಂಗಾತಿಗಳು ಸತ್ತು ಬಿದ್ದಿದ್ದರು. ಸತ್ತವರನ್ನು ಮತ್ತು ಏಳಲಾರದವರನ್ನು ಅಲ್ಲಿಯೇ ಬಿಟ್ಟು ನಮ್ಮನ್ನೆಲ್ಲಾ ಹೊರಗೆಳೆದರು.

ಮೆಯೆರ್‌ ಡಬ್ಬಿಯಲ್ಲಿಯೇ ಉಳಿದುಕೊಂಡ. ನಮ್ಮ ಪಯಣದ ಕೊನೆಯ ರಾತ್ರಿ ಭಯಾನಕವಾಯಿತು.

ಬುನಾ ಶಿಬಿರದಿಂದ ಹೊರಡುವಾಗ ನಮ್ಮ ಡಬ್ಬಿಯಲ್ಲಿ ನೂರು ಚಿಲ್ಲರೆ ಜನರಿದ್ದೆವು. ಈಗ ಕೇವಲ ಹನ್ನೆರಡು ಜನ ಮಾತ್ರ ಬದುಕುಳಿದಿದ್ದವು. ಅದರಲ್ಲಿ ನಾನು ಮತ್ತು ಅಪ್ಪನೂ ಸೇರಿದ್ದೆವು!

ಅಂತೂ ನಾವು ಜರ್ಮನಿಯ ಬುಕೆನ್‌ವಾಲ್ಡ್‌ ತಲುಪಿದ್ದೆವು.

(NIGHT ಕಾದಂಬರಿಯಿಂದ)

‍ಲೇಖಕರು Admin

October 16, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: