ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ ಆರಂಭ…

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ ರೂಪಿಸಿಕೊಂಡಿದ್ದಿರಬಹುದು, ನಿವೃತ್ತಿಯ ನಂತರ ಪ್ರವೃತ್ತಿಯ ಬೆನ್ನುಹತ್ತಿ ಮನಸಿನ ನಂದನವನ್ನು ಹಕ್ಕಿಗಳ ತಾಣ ಮಾಡಿಕೊಂಡಿದ್ದಿರಬಹುದು ಇಡೀ ಪಯಣವೇ ಅಚ್ಚರಿಯೊಂದಿಗೆ ಅಬ್ಬಾ ಎನ್ನಿಸುವಂತಿದೆ.

ಏನಿರಲಿ, ಇಲ್ಲದಿರಲಿ ಮನದ ನಿಶ್ಚಯವೊಂದು ಅಚಲವಿರಲಿ ಎಂದು ಅಂದುಕೊಂಡ ಹಾದಿಯಲಿ ಛಲಬಿಡದೆ ನಡೆದವರು.

ನಿವೃತ್ತಿಯ ನಂತರ ಏನು ಮಾಡಬೇಕೆಂದು ಹುಡುಕಾಡುತ್ತಿದ್ದ ಮನಸ್ಸು ಒಂದು ದಿನ ಫೋಟೋಗ್ರಫಿ ಎಂದು ನಿರ್ಧರಿಸಿದ್ದೇ ಕ್ಷಣವೂ ತಡಮಾಡದೆ ಆ ಫೀಲ್ಡಿಗೆ ಇಳಿದು ಟ್ರಯಲ್‌ ಅಂಡ್‌ ಎರರ್‌ ಮಾಡುತ್ತಲೇ ಕಲಿತೇಬಿಟ್ಟರು. ಗಾಂಧಿ ಮತ್ತು ಕುವೆಂಪುವನ್ನು ತಮ್ಮ ಆದರ್ಶವೆಂದು ಹೇಳುವ ಲೀಲಾ ಮೇಡಂ ಬರವಣಿಗೆಯೂ ಅವರ ಮಾತಿನಷ್ಟೇ ಮುದನೀಡುವಂತಹದ್ದು.

ತಮ್ಮ ಹಕ್ಕಿಗಳೊಡನಾಟದ ನೆನಪುಗಳನ್ನು ಈ ಅಂಕಣದ ಮೂಲಕ ‘ಅವಧಿ’ಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.

1

ನಿವೃತ್ತಿ ಹೊರೆಯಲ್ಲ

ಬನ್ನಿ ಬನ್ನಿ ಬಾನಾಡಿಗಳೆ
ಒಂದರೆ ಚಣ ತಂಗಿ ಹೋಗಿ
ಈ ಎದೆಯಲ್ಲಿ
ಉಳಿದು ಬಿಡಲಿ ಬದುಕು
ಈ ನೆನಪ ಯಾನದಲ್ಲಿ

ಮೂವತ್ತೈದು ವರ್ಷಗಳ ವೃತ್ತಿ ಅದು. ಇಷ್ಟಪಟ್ಟು ಪ್ರೀತಿಯಿಂದ ಅನುಭವಿಸಿದ ವೃತ್ತಿ ನನ್ನ ಪ್ರವೃತ್ತಿಯೂ ಆಗಿತ್ತು. ಕಲಿತದ್ದನ್ನು ಕಲಿಸುತ್ತಾ, ಕಲಿಸುವ ಸಲುವಾಗಿ ಮತ್ತೆ ಮತ್ತೆ ಕಲಿಯುತ್ತಾ update ಆಗುತ್ತಾ ಹಳತರ ಒಳಗಿನ ಹೊನ್ನನ್ನು, ಹೊಸತರ ಆಳದ ತಿರುಳನ್ನು, ಶಾಸ್ತ್ರದ ಶಸ್ತ್ರಕ್ಕೆ ಒಂದಿಷ್ಟು ರಸ ತುಂಬಿ ಹೀಗೆ ತಲುಪಿಸುವ ಉಪನ್ಯಾಸಕಿ ವೃತ್ತಿ. ಗುರಿ ಮುಟ್ಟಲು ವೇಗವರ್ಧಕವಾಗುವ ಈ ವೃತ್ತಿ ಕ್ರಿಯಾಚೈತನ್ಯ ಜೀವೋತ್ಕರ್ಷ ಪರವೂ ಹೌದು. ಕಲಿಸಿದುದು ಎಷ್ಟೋ ಕಲಿತದ್ದು ಅದಕ್ಕಿಂತ ಮಿಗಿಲು. ಪಠ್ಯದಾಚೆಗೆ, ಪಠ್ಯಪೂರಕ ಚಟುವಟಿಕೆಗಳ ಆಕರ್ಷಣೆಯೂ ಸದಾ ಜೊತೆಗೇ ಇರುತ್ತಿದ್ದ ಕಾರಣ ಮತ್ತಷ್ಟು ಸೆಳೆತ. ಕೊನೆಯ ಏಳೆಂಟು ವರ್ಷ ಆಡಳಿತದ ಚುಕ್ಕಾಣಿ. ಒಳಗೊಳಗೆ ಉಳಿದಿದ್ದ ಆಲೋಚನೆಗಳನ್ನು ಎಂತಹ ಅನುಕೂಲ ಪ್ರತಿಕೂಲ ಸನ್ನಿವೇಶಗಳಲ್ಲಿಯೂ ಕಾರ್ಯರೂಪಕ್ಕೆ ತರುವ ಅವಕಾಶ. ಬಳಸಿಕೊಂಡೆ, ಬೆಳೆಸಿಕೊಂಡೆ ಪ್ರೀತಿ ದ್ವೇಷವನ್ನೂ. ಆದರೆಂದೂ ಪಶ್ಚಾತ್ತಾಪವೂ ಇಲ್ಲ, ಪ್ರಾಯಶ್ಚಿತ್ತದ ಅಗತ್ಯವೂ ಇಲ್ಲ. ಏಕೆಂದರೆ ಅರ್ಧ ರಾತ್ರಿಯಲ್ಲಿ ಎಬ್ಬಿಸಿ ಕೇಳಿದರೂ ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ನನ್ನ ಗುರು ಗಾಂಧಿ ಹಾಕಿಕೊಟ್ಟ ಪ್ರಾಮಾಣಿಕತೆಯ ನಿಷ್ಠೆಯ ಹಾದಿಯಲ್ಲಿ ವೃತ್ತಿ ಸಾಗಿಸಿದ್ದೆ ಎನ್ನುವುದು ಅಹಂಕಾರವಲ್ಲದ ವಿನಯದ ನಿವೇದನೆ.

ಇನ್ನು ಎಲ್ಲಾ ಮುಗಿಯಿತು ಎನ್ನುವಾಗಲೇ ಹೊಸ ತಿರುವು. ಯಾವ ಮಣ್ಣಿನ ಕಣ್ಣು ಹೀಗೆ ಸೆಳೆದದ್ದು. ಆಚೆಯದ್ದಲ್ಲ, ಲೋಕಾತೀತವಾದದ್ದಂತೂ ಅಲ್ಲವೇ ಅಲ್ಲ. ಪಾಠ ಮಾಡುವುದೇ ನನ್ನ ಉಸಿರು, ಅದು ಮುಗಿದ ಬಳಿಕ ಬದುಕಿಗೇನು ಅರ್ಥ. ಹೀಗೆಯೇ ಭಾವಿಸಿದ್ದವಳು ನಾನು. ಇಂತಹ ಯಾವುದಕ್ಕೂ ಮಿತಿಯಿಲ್ಲ ಎನ್ನುವ ಸರಳ ಸತ್ಯ ನಿವೃತ್ತಿಯ ನಂತರವೇ ನನಗೆ ಅರಿವಾದದ್ದು. ನಿವೃತ್ತಿ ಒಂದು ಹಂತ. ಆ ಉತ್ತುಂಗದಲ್ಲಿ ನಿಂತು ಹೊಸದಾಗಿ ಉಸಿರೆಳೆದುಕೊಂಡು ಫ್ರೆಶ್ ಆಗಿ sixty plus ನಂತರ ನಿಜವಾದ ಬದುಕು ಅಂದರೆ ಒತ್ತಡಗಳಿಲ್ಲದ ಎಕ್ಸ್ಕ್ಲೂಸಿವ್ ಆದ ನನ್ನದೇ ಸಮಯ ಇರುತ್ತದೆ ಜೀವಿಸಲಿಕ್ಕಾಗಿ. ಏನು ಮಾಡುವುದು, ಏನೇನು ಮಾಡಬಹುದು… ಪ್ರಶ್ನೆಗಳ ಪೆಡಂಭೂತ ಎದುರಾಗುತ್ತದೆ, ನಿಜ. ಆದರೆ ಅಪರಿಮಿತ ಅವಕಾಶಗಳ ಅನಂತ ಆಕಾಶ. ಬಾಲ್ ಬ್ಯಾಟ್ ಕೋರ್ಟ್ ಎಲ್ಲ ನನ್ನದೇ. ರೈಟ್… ಆಗೇ ಚಲೋ ಧೀರೆಸೆ ಚಲೋ. ಜ಼ರಾ ದೇಖ್‌ಕೋ ಚಲೋ… ಲೀಲಾ ಚಲೋ…

ಕ್ಯಾಮೆರಾದ ನಂಟು

ನನ್ನ ಬದುಕಿನ ಅರ್ಧ ಶತಮಾನದ ಆಚೀಚೆ ಉತ್ಸಾಹ ಪುಟಿಯುತ್ತಿದ್ದಂತೆ ಆಡುವ ಆಟಗಳಿಗೆ ಮತ್ತಷ್ಟು ಖದರ್ ಸಿಗತೊಡಗಿತು. ನಲವತ್ತೈದನೆಯ ವಯಸ್ಸಿಗೆ ಇನ್ನೂ ಮುಂದೆ ಓದಲೇಬೇಕು ಎನ್ನುವ ಬಹುದಿನದ ಒತ್ತಡದ ಹುಚ್ಚಿಗೆ ಯು.ಜಿ.ಸಿ.ಯ ಎಫ್.ಐ.ಪಿ ಕೂಡಾ ಕೈ ಜೋಡಿಸಿತು. ಪಿಎಚ್.ಡಿಗೆ ಅದಾಗಲೇ ನೋಂದಣಿ ಮಾಡಿಸಿ ಆಗಿತ್ತು – `ಬಿಳಿಗಿರಿರಂಗನಬೆಟ್ಟ: ಒಂದು ಸಾಂಸ್ಕೃತಿಕ ಅಧ್ಯಯನ’ ಎಂದು ಊರು ಸುತ್ತುವ ಕೆಲಸದ ಸಂಶೋಧನೆ ಮಾಡುವುದು ಎಂದು. ಎರಡು ವರ್ಷದ ಅಧ್ಯಯನ ರಜೆ ಸಿಕ್ಕ ಬಳಿಕ ಮಂಡ್ಯ ಬಿಟ್ಟೆ, ಮೈಸೂರು ಸೇರಿಬಿಟ್ಟೆ. ಬೆಟ್ಟದ ಯಾತ್ರೆ ಆರಂಭವಾಯಿತು. ಜೋಳಿಗೆ ಹೊತ್ತು ಬೆಟ್ಟದ ಕಾಡುಮೇಡು ಅಲೆಯುವುದು ಅಭ್ಯಾಸ, ಹವ್ಯಾಸ ಆಯಿತು. ಪೆನ್ನು ಪೇಪರ್‌ಗಳ ಜೊತೆಗೆ ಸಣ್ಣ ಟೇಪ್‌ರಿಕಾರ್ಡರ್, ಸಣ್ಣ ಕ್ಯಾಮ್‌ಕಾರ್ಡರ್‌ಗಳೂ ನನ್ನ ಹತ್ಯಾರಗಳಾದವು. ಇಷ್ಟೆಲ್ಲ ಬಂದ ಮೇಲೆ ಕ್ಯಾಮೆರಾ ಬೇಡವೆ…

ದಂತವೈದ್ಯನಾದ ನನ್ನ ಗಂಡನಿಗೆ ಫೋಟೋಗ್ರಾಫರ್ ಫ್ರೆಂಡ್ ಒಬ್ಬರಿದ್ದರು. ಅವರು ವೃತ್ತಿಯಲ್ಲಿ ಇಂಗ್ಲೀಷ್ ಪ್ರೊಫೆಸರ್ ಆದರೂ ಪ್ರವೃತ್ತಿಯಲ್ಲಿ ವೈಲ್ಡ್ ಲೈಫ್ ಫೋಟೋಗ್ರಫಿ ಮಾಡುತ್ತಿದ್ದರು. ಇವನಿಗೆ ಯಾವುದೋ ದಿವ್ಯ ಘಳಿಗೆಯಲ್ಲಿ ತಾನೂ ಆ ದಾರಿಯಲ್ಲಿ ಹೋಗಿಯೇ ಬಿಡಬೇಕೆಂಬ ಹುಕಿ ಹುಟ್ಟಿತು. ಕ್ಯಾನನ್, ಯಾಷಿಕಾ ಕ್ಯಾಮೆರಾಗಳು ಬಂದಿಳಿದವು, ಜೊತೆಗೆ ಬಗೆಬಗೆಯ ಲೆನ್ಸುಗಳು. ನಾನು ಬರಿಯ ದರ್ಶನಕ್ಕೆ ಅರ್ಹಳಾಗಿದ್ದೆನೆ ಹೊರತು ಸ್ಪರ್ಶದ ಸೌಭಾಗ್ಯ ಪಡೆದಿರಲಿಲ್ಲ. ಅವ ಒಂದು ವರ್ಷ ನಾಗರಹೊಳೆ, ಬಂಡೀಪುರ ರಂಗನತಿಟ್ಟಿಗೆ ಕ್ಯಾಮೆರಾ ಹೊತ್ತು ಅಲೆದ… ಅಲೆದ. ಸಿಕ್ಕಿದ ಮಕ್ಕಳು ಮುದುಕರೂ ಎಲ್ಲರ ಮೂತಿಗೂ ಕ್ಯಾಮೆರಾ ಹಿಡಿದ, ನನ್ ಕಡೆ ಒಂದು ಬಿಟ್ಟು. ನನ್ನನ್ನು ಎಲ್ಲಿಗೂ ಕರೆದುಕೊಂಡೂ ಹೋಗಲಿಲ್ಲ, ಕರೆಯಲೂ ಇಲ್ಲ. ನನಗೂ ತೀರಾ ಅಂತಹ ಕಡೆಗೆಲ್ಲ ಹೋಗಲೇಬೇಕೆಂಬ ತುರ್ತೂ ಇರಲಿಲ್ಲ, ತೆಪ್ಪಗಿದ್ದೆ. ಅನಿರೀಕ್ಷಿತವಾಗಿ ಅವನ ತಮ್ಮ ತೀರಿಕೊಂಡ ಬಳಿಕ ಕ್ಯಾಮೆರಾ ಹಿಡಿಯೋದು ಬಿಟ್ಟು ಬೀರುವಿನಲ್ಲಿ ಭದ್ರತೆಯಲ್ಲಿ ಮಲಗಿಸಿದ. ತೀರಾ ಅಪರೂಪಕ್ಕೆ ಚಿತ್ರ ತೆಗೆದರೂ ಊರಾಚೆ ಹೋಗಲೇ ಇಲ್ಲ. ಯಾವ ಹಕ್ಕಿ ಪ್ರಾಣಿಗಳೂ ಅವನ ಕ್ಯಾಮೆರಾದೊಳಕ್ಕೆ ಅನಂತರ ಬರಲೇ ಇಲ್ಲ. 

ನಾನು ಬಿಳಿಗಿರಿರಂಗನಬೆಟ್ಟಕ್ಕೆ ಹೋಗುವಾಗ ನನಗೆ ಕ್ಯಾಮೆರಾ ಬೇಕು ಎಂದೆ 2000ದಲ್ಲಿ. ಅವ ತನ್ನ ಬಳಿ ಇದ್ದ ಕ್ಯಾಮೆರಾ ಕೊಡಲೇ ಇಲ್ಲ. ಡೌಟಿತ್ತು ಅವನಿಗೆ, ಇವಳು ಇದನ್ನೆಲ್ಲಾ ಹ್ಯಾಂಡಲ್ ಮಾಡೋಕೆ ಬರದವಳು ಎಂದು. ಡಬ್ಬ ಆಗ್ಫಾ ಮಾಡೆಲ್ ತಂದುಕೊಟ್ಟ. ಕ್ಯಾಮೆರಾದ ಬಗ್ಗೆ ಎಬಿಸಿಡಿ ಗೊತ್ತಿಲ್ಲದಿದ್ದ ನಾನು ಪರಮಭಿಕ್ಷೆ ಎಂದು ಅದನ್ನೇ ಸ್ವೀಕರಿಸಿದೆ. ಅದಕ್ಕೆ ರೋಲ್ ತುರುಕಿ ತೆಗೆದದ್ದೇ ತೆಗೆದದ್ದು, ಬರದೇ ಇರುವ ಅರ್ಧ ರಾತ್ರಿಯಲ್ಲಿ ಕೂಡಾ. ಯಾಕೆಂದರೆ ಸೋಲಿಗರ ಕೆಲವು ಹಬ್ಬಗಳು ಇರುತ್ತಿದ್ದುದ್ದೇ ಇರುಳಿನಲ್ಲಿ. ಫ್ಲ್ಯಾಷು ಇಲ್ಲದ ಆ ಪಡಪೋಶಿ ಕ್ಯಾಮೆರಾ ಏನು ತೆಗೆದೀತು. ಆ ಇರುಳು ಬಯಲಿನಲ್ಲಿ ಕತ್ತಲಲ್ಲಿ ಚುಕ್ಕಿ ನೋಡಿದ್ದು, ಸೋಲಿಗರ ಹಾಡು ಕೇಳಿದ್ದು, ಅವರ ಕುಣಿತ ನೋಡಿದ್ದು ಮನದಲ್ಲಿ ನೆನಪಾಗಿ ಉಳಿಯುತ್ತಿತ್ತು ರೀಲಿನಾಚೆಗೆ. ಕ್ಯಾಮೆರಾದಲ್ಲಿ ತೆಗೆದದ್ದರಲ್ಲಿ ಅರ್ಧದಷ್ಟೂ ಬರುತ್ತಲೇ ಇರಲಿಲ್ಲ. ಬಂದವುಗಳಲ್ಲಿ ಬ್ಲರ್ ಕ್ಯಾಟಗರಿಗೆ ಸೇರಿಕೊಂಡವೇ ಹೆಚ್ಚು. ನಾನೂ ಬೆಟ್ಟದಲ್ಲೆಲ್ಲಾ ಅಲೆದಲೆದು ಭಾರಿ ಸ್ಟೈಲಾಗಿ ಕ್ಯಾಮೆರಾ ಹಿಡಿದು ಕ್ಲಿಕ್ಕಿಸುತ್ತಿದ್ದೆ. ಕೊನೆಗೆ ಸಂಶೋಧನೆ ಇನ್ನಾರು ತಿಂಗಳು ಬಾಕಿ ಇದೆ ಎನ್ನುವಾಗ ಒಂದು ಒಲಂಪಸ್ ಕ್ಯಾಮೆರಾ ತಂದುಕೊಟ್ಟ ನನ್ನ ಗಂಡ, ಅಯ್ಯೋ ಪಾಪ ಎಂದು ಕನಿಕರಿಸಿ. ಅದರಲ್ಲೂ ಒಂದಿಷ್ಟು ಚಿತ್ರ ತೆಗೆದೆ. ಬೆಟ್ಟದ ನನ್ನ ಆಶ್ರಯದಾತರಲ್ಲಿ ಒಬರು ಎಲ್ಲಾದರೂ ಹೋಗುವಾಗ ನನ್ನಿಂದ ಕ್ಯಾಮೆರ ಪಡೆಯುತ್ತಿದ್ದರು. ರೀಸರ್ಚ್ ಮುಗಿಸಿ ಥೀಸಿಸ್ ಒಪ್ಪಿಸಿದ ಬಳಿಕವೂ ಅವರು ಕ್ಯಾಮೆರಾಗೆ ಕೋರಿಕೆ ಇಡುತ್ತಿದ್ದರು. ಕೊನೆಗೆ ನೀವೇ ಇಟ್ಟುಕೊಳ್ಳಿ ಮಹಾರಾಯರೆ ಎಂದು ಅವರ ಕೈಗೊಪ್ಪಿಸಿ ಕ್ಯಾಮೆರಾ ಸಹವಾಸದಿಂದ ಮುಕ್ತಳಾದೆ. ಕ್ಯಾಮೆರಾ ಸಹವಾಸ ಆಗಿಗ್ಗೆ ಬಿಟ್ಟುಹೋಯಿತು. ಆದರೆ ಅಲ್ಲಿ ತೆಗೆದಿದ್ದ ಸಾವಿರಾರು ಫೋಟೊಗಳಲ್ಲಿ ಇನ್ನೂರೈವತ್ತಕ್ಕೂ ಹೆಚ್ಚು ಪಟಗಳನ್ನು ಥೀಸಿಸಿನಲ್ಲಿ ಹಾಕಿ ಅದೊಂದು ಚಿತ್ರ ಮಹಾಪ್ರಬಂಧ ಮಾಡಿಟ್ಟಿದ್ದೆ. ಅದರ ಮುಖಪುಟ-ಹಿಂಪುಟಕ್ಕೂ ನಾನೇ ತೆಗೆದ ಚಿತ್ರ ಹಾಕಿ ಮೆರುಗು ಕೊಟ್ಟಿದ್ದೆ. ನಮ್ಮ ಗೈಡ್ ಡಾ.ರಾಮಕೃಷ್ಣ “ಮೇಡಂ ಕನ್ನಡದ ಮಹಾಪ್ರಬಂಧಗಳಲ್ಲಿ ಇಷ್ಟೊಂದು ಚಿತ್ರ ಹಾಕಿರುವವರಲ್ಲಿ ನೀವೆ ಮೊದಲಿಗರು” ಅಂದರು. ಕಾಲರ್ ಇಲ್ಲದಿದ್ದರೂ ಎಳೆದುಕೊಂಡೆ.

ಸಂಶೋಧನೆ ಶುರುವಾದಾಗ ಮಂಡ್ಯದ ಕಾಲೇಜಿನಿಂದ ಮೈಸೂರಿಗೆ ಹೊರಟವಳು ಮುಗಿಸುವಾಗ ಮೈಸೂರಿನ ಕಾಲೇಜಿನಲ್ಲಿದ್ದೆ. ಅದಕ್ಕೊಂದು ಸಕಾರಣ ನೆಪವೂ ಇದೆ. ನಾನು ಸಂಶೋಧನೆಯ ಕಾರ್ಯಕ್ಕೆಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಗೆ ಸೇರಿದರೆ, ಕಿರಿಯ ಮಗಳು ಮೆಡಿಕಲ್ ಮಾಡಲು ಮೈಸೂರು ಮೆಡಿಕಲ್ ಕಾಲೇಜಿಗೆ ಸೇರಿದ್ದಳು. ಅಮ್ಮ ಮಗಳಿಬ್ಬರೂ ಏಕಕಾಲಕ್ಕೆ ಅಧ್ಯಯನಶೀಲ ವಿದ್ಯಾರ್ಥಿಗಳಾಗಿದ್ದೆವು. ಎಫ್.ಐ.ಪಿ ರಜೆ ಮುಗಿದಾಗ ಮಹಾರಾಣಿಯ ಸನ್ನಿಧಾನಕ್ಕೆ ಅಂದರೆ ಮೈಸೂರಿನ ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜಿಗೆ ಬಂದೆ. ಇವಳು ಮಂಡ್ಯದ ಕಾಲೇಜಿನಲ್ಲೇ ಸರ್ವೀಸ್ ಮಾಡಿ ಮುಗಿಸುತ್ತಾಳೆ ಎನ್ನುವವರ ಕೊಂಕು ಮಾತು ಮೀರಿ ಮೈಸೂರಿನ ಮಹಾರಾಣಿಗೂ ನನ್ನ ನಜರು ಸಲ್ಲಿಸಿದೆ.

ಮಹಾರಾಣಿ ಕಾಲೇಜಿನಲ್ಲಿ 2004ರಲ್ಲಿ ಕುವೆಂಪು ಶತಮಾನೋತ್ಸವ ಕಾರ್ಯಕ್ರಮ ನಡೆಸುವ ಜವಾಬ್ದಾರಿ ಅಭಿವ್ಯಕ್ತಿ ವೇದಿಕೆಯ ಸಂಚಾಲಕಿಯಾಗಿದ್ದ ನನ್ನ ಪಾಲಿಗೆ ಬಂದಿತು. ನಾನೊಂದು ತರಹ ವಿಚಿತ್ರ. ನಾನಾಗಿ ಕೆಲಸ ಮೈಮೇಲೆ ಎಳೆದುಕೊಳ್ಳಲು ಹೋಗುವುದಿಲ್ಲ. ಆದರೆ ಯಾರೋ ನೀನು ಈ ಕೆಲಸ ಖಂಡಿತಾ ಮಾಡಬಲ್ಲೆ ಅಂತಾ ಹನುಮನನ್ನು ಉಬ್ಬಿಸಿದಂತೆ ಉಬ್ಬಿಸಿ ಜವಾಬ್ದಾರಿ ಕೊಟ್ಟರೆ ಅದನ್ನು ನನ್ನದೇ ಸ್ಟೈಲಲ್ಲಿ ಮಾಡದೆ ಬಿಡುವವಳಲ್ಲ, ಆಗಿಗ್ಗೂ ಈಗಿಗ್ಗೂ. ನಾನು ಬಹಳ ಇಷ್ಟ ಪಡುವ ಕವಿ ಕುವೆಂಪು. ಅಂತಹುದರಲ್ಲಿ ಸುಮ್ಮನೆ ಸ್ಟೇಜ್ ಪ್ರೋಗ್ರಾಂ ಮಾಡಿದರೆ ಏನ್ ಚಂದ, ಅಷ್ಟು ಮಾತ್ರ ಸಾಕೆನ್ನಿಸಲಿಲ್ಲ. ಇತರ ವೈವಿಧ್ಯಮಯ ಕಾರ್ಯಕ್ರಮಗಳ ಬಗ್ಗೆ ಆಲೋಚಿಸಿದೆ, ಅದರಲ್ಲಿ ಕುವೆಂಪು ಚಿತ್ರಪ್ರದರ್ಶನವೂ ಒಂದಾಗಿತ್ತು. ಚಿತ್ರಗಳ ಹುಡುಕಾಟ ಅಂದು ಶುರುವಾಯ್ತು. ಮನೆಮನೆ ತಿರುಗಿದೆ, ಸ್ಟುಡಿಯೋಗಳ ಒಳಹೊಕ್ಕು ಬಂದೆ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಠಳಾಯಿಸಿದೆ. ಚಿತ್ರಗಳನ್ನು ಸೇರಿಸುತ್ತಾ ಪೇರಿಸುತ್ತಾ ಹೋದೆ. ಕುವೆಂಪು ಬದುಕಿದ್ದಾಗ ಕೆಲವು ಸಲ ಸ್ವಲ್ಪ ಹತ್ತಿರದಿಂದ ನೋಡಿದ್ದೆ ಅನ್ನೋದೆ ಈಗಲೂ ಉತ್ಸಾಹ ಹುರುಪು ಹುಟ್ಟಿಸುತ್ತಿದೆ ಅನ್ನೋದಾದರೆ ನಾನೇ ಅವರ ಚಿತ್ರ ತೆಗೆದಿದ್ದರೆ… ಈ `ರೆ’ ಕನಸೆ ಸುಂದರ… ಅಯ್ಯೋ ಅದು ಆಗಲಿಲ್ಲವೆ. ಆದರೆ ನಾನು ಸಂಗ್ರಹಿಸಿದ ಕುವೆಂಪು ಭಾವಚಿತ್ರಗಳನ್ನು ಕುವೆಂಪು ಟ್ರಸ್ಟ್ ಕುವೆಂಪು ಚಿತ್ರದರ್ಶನ ಪುಸ್ತಕ ಮಾಡುವಾಗ ಆ ಸಮಿತಿಗೆ ಕೊಟ್ಟಿದ್ದಲ್ಲದೆ, ಆ ಸಮಿತಿಯ ಸದಸ್ಯೆಯೂ ಆಗಿದ್ದೇ ಎನ್ನುವುದೇ ಒಂದು ರೋಮಾಂಚಕ ಪ್ರಯಾಣವಾಗಿ ಸಂಗ್ರಹಿಸುವಾಗ ಆಗಿದ್ದ ಶ್ರಮ ಸಾರ್ಥಕ ಆಯಿತು. ಆದರೆ 2004ರಲ್ಲಿ ಕುವೆಂಪು ಕಾವ್ಯಚಿತ್ರ ಮಾಡುವಾಗ ಕವಿತೆಗೆ ಸೂಕ್ತವಾಗಿ ಹೊಂದಿಕೆ ಆಗುವ ಚಿತ್ರಗಳು ಅಗತ್ಯವಿದ್ದವು. ಕ್ಯಾಮೆರಾ ಬೇಕೆನಿಸಿದರೂ ಕೈಯಲ್ಲಿರಲಿಲ್ಲ, ಕೊಂಡು ಚಿತ್ರ ತೆಗೆಯಲು ಅಲೆಯಲೂ ಸಮಯವೂ ಆಗುತ್ತಿರಲಿಲ್ಲ. ಇವತ್ತು ಫೇಸ್‌ಬುಕ್ಕಿನಲ್ಲಿ ನಾನೇ ತೆಗೆದ ಸಾವಿರಾರು ಫೋಟೊ ಹಾಕಿದ್ದೇನೆ… ಬಹುಪಾಲು ಹಕ್ಕಿಗಳದ್ದೆ. ಆದರೆ ಆಗ ಒಂದೇ ಒಂದು ಹಕ್ಕಿಯ ಫೋಟೋ ತೆಗೆದಿರಲಿಲ್ಲ, ಹಕ್ಕಿ ಬಿಡಿ, ಹೂವಿನದ್ದೂ ಇಲ್ಲ. ಮುಂದೊಂದು ದಿನ ಹೀಗೆ ಹಕ್ಕಿ ಹಿಂದೆ ಬೀಳುತ್ತೇನೆ ಅನ್ನೋ ಸೂಚನೆಯೂ ಇರಲಿಲ್ಲ, ಕನಸೂ ಇರಲಿಲ್ಲ. ಓ ಕಾಲವೇ ಏನು ನಿನ್ನ ಲೀಲೆ….

ಕುವೆಂಪು ಚಿತ್ರಕಾವ್ಯಕ್ಕೆ ಬೇಕೆನಿಸಿದ ಹಕ್ಕಿ, ಹೂ, ಮೋಡ, ಇಬ್ಬನಿ, ಮುಂತಾದವುಗಳ ಚಿತ್ರಗಳನ್ನು ಅಂತರ್ಜಾಲದಿಂದ ಕೆಳಗಿಳಿಸಿಕೊಂಡೆ, ಕವಿತೆ ಸೇರಿಸಿದೆ. ಎಪ್ಪತ್ತಕ್ಕೂ ಹೆಚ್ಚು ಕುವೆಂಪು ಕವಿತೆಗಳ ಚಿತ್ರಕಾವ್ಯ ರೆಡಿಯಾಯಿತು. ಯಾರದ್ದೋ ಚಿತ್ರ, ಯಾರದ್ದೋ ಕವಿತೆ, ಜೊತೆಗೂಡಿಸಿದವಳು ಮಾತ್ರ ನಾನು. ಇವತ್ತು ಯಾರಾದರೂ ನಾ ತೆಗೆದ ಚಿತ್ರಗಳನ್ನು ಹೀಗೆ ಆರಿಸಿಕೊಂಡರೆ ಖುಷಿಯಾಗುತ್ತದೆ, ಆ ದಿನಗಳ ನೆನಪು ಒತ್ತರಿಸಿಕೊಂಡು ನುಗ್ಗುತ್ತದೆ. ಹೀಗೊಂದು ದಿನ ಈ ಲೀಲಾ ತೆಗೆದ ಚಿತ್ರಗಳನ್ನೇ ಇನ್ನೊಬ್ಬರು ಶೇರ್ ಮಾಡುವ ತಮಗೆ ಬೇಕಾದ್ದಕ್ಕೆ ಬಳಸಿಕೊಳ್ಳುವ ಕಾಲವೂ ಅವಳಿಗೆ ಕಾದಿದೆ ಎಂಬ ಕನಸೂ ಇರಲಿಲ್ಲ. 

ಈ ಅತ್ಯದ್ಭುತವಾದ ದಾರಿಗೆ ಹೋಗುವ ಹಾಗೆ ನನ್ನ ಬದುಕಿಗೆ ಹೊಸದಾದ ತಿರುವು ಕೊಟ್ಟ ಆ ಮಾನ್ಸ್ಟರ್ ಅಲ್ಲಲ್ಲ ಮಾಸ್ಟರ್‌ಗಳಿಗೆ ಒಂದು ದೊಡ್ಡ ನಮಸ್ಕಾರ. ಮುವತ್ತೈದು ವರ್ಷ ಪ್ರಾಣದಂತೆ ಪ್ರೀತಿಸಿದ್ದ ವೃತ್ತಿಯಿಂದ ನಿವೃತ್ತಿಯಾಗಿ ಹೊರ ಬರುವ ಕ್ಷಣದಲ್ಲಿ ಅಸಹನೆಯ ಅತೃಪ್ತ ಮನಸುಗಳು ಒಗ್ಗೂಡಿ ಮನಸ್ಸು ಕದಡಿದ ನಂತರದಲ್ಲಿಯೇ ಹೊಸ ಹಾದಿಗೆ ಹೊರಳುವ ದಾರಿಯ ಹುಡುಕಾಟಕ್ಕೆ ತೊಡಗಿದ್ದು. ಇವತ್ತು ಈ ಲೀಲಾ ಒಬ್ಬ ಕನ್ನಡ ಪ್ರಾಧ್ಯಾಪಕಿ ಆಗಿದ್ದಳು, ಪ್ರಾಂಶುಪಾಲೆ ಆಗಿದ್ದಳು ಎನ್ನುವುದು ಹೆಚ್ಚು ಕಡಿಮೆ ಹಿನ್ನೆಲೆಗೆ ಸರಿದೇ ಹೋಗಿ ಲೀಲಾಅಪ್ಪಾಜಿ ಒಬ್ಬ bird photographer ಎಂದೇ ಗುರುತಿಸಲ್ಪಟ್ಟಿದ್ದೇನೆ.

ಮತ್ತೆ ಕ್ಯಾಮೆರಾ ಕೈಗೆ ಬಂತು

ಮೈಸೂರಿನಲ್ಲಿ ಇನ್ನೂ ಇದ್ದಾಗಲೇ ಒಂದು ಸೋನಿ ಕ್ಯಾಮೆರಾ ಬಂತು. ಆದರೆ ಅದರಲ್ಲಿ ಚಿತ್ರ ತೆಗೆದದ್ದು ಕಡಿಮೆ. ಚೆಲುವಾಂಬ ಪಾರ್ಕ್ ಎದುರಿಗಿನ ಬೃಂದಾವನ ಅಪಾರ್ಟಮೆಂಟಿನ ಮೂರನೇ ಮಹಡಿಯಲ್ಲಿದ್ದ ನನಗೆ ಕಣ್ಣು ತುಂಬುತ್ತಿದ್ದುದು ಚಾಮುಂಡಿ ಬೆಟ್ಟ. ಮಿಸ್ ಲೀಲಾವತಿ ಸಿನಿಮಾದಲ್ಲಿ` ನೋಡು ಬಾ ನೋಡು ಬಾ ಮೈಸೂರಾ ನಮ್ಮೂರಾʼ ಎಂಬ ಒಂದು ಹಾಡಿದೆ. ಈ ಲೀಲಾ ಮೈಸೂರಲ್ಲೇ ಇದ್ದರೂ ಮೈಸೂರು ನೋಡಲೇ ಇಲ್ಲ, ಸುತ್ತಲೇ ಇಲ್ಲ. ದಿನಾ ಕುಕ್ಕರಹಳ್ಳಿ ಕೆರೆಯ ಪಕ್ಕ ಹೋದರೂ ಕೆರೆ ಬಳಿಗೆ ಹೋಗಿ ನೋಡಲೇ ಇಲ್ಲ. ಎಲ್ಲಾ ಇರಲಿ ಮನೆ ಎದುರಿಗಿದ್ದ ಪಾರ್ಕ್, ಆಚೆಗೆ ಚಳಿಗಾಲದಲ್ಲಿ ಮಂಜು ಮುಸುಕಿ ಕಾಣೆಯಾಗುತ್ತಿದ್ದ ಚಾಮುಂಡಿಬೆಟ್ಟದ ಪಟ ಕೂಡಾ ತೆಗೆಯಲೇ ಇಲ್ಲ. ಪಾರ್ಕಿಗೆ ಕಾಲಿಟ್ಟಿದ್ದರೆ ನೂರಾರು ಬಗೆಯ ಹೂಗಳು, ಚಿಟ್ಟೆಗಳು, ಬರುತ್ತಿದ್ದ ಹತ್ತಾರು ಬಗೆಯ ಹಕ್ಕಿಗಳು, ಬೆಳಿಗ್ಗೆ ಸಂಜೆಯ ನಭೋವಿಲಾಸ ಯಾವುದೂ ಚಿತ್ರವಾಗದೆ ಕಣ್ಣೊಳಗೆ ಮಾತ್ರ ತುಂಬಿಕೊಂಡು ಖುಷಿ ಪಡುತ್ತಿದ್ದೆ.

ಮೈಸೂರಿನಿಂದ ಮರಳಿ ಮಂಡ್ಯಕ್ಕೆ ಬಂದೆ, ಆದರೆ ಐದಾರು ತಿಂಗಳಲ್ಲೇ ಪ್ರಿನ್ಸಿಪಾಲ್ ಆಗಿ ವಿರಾಜಪೇಟೆಗೆ ಹೊರಟೆ. ಆಹಾ ಎಂತಹ ಬೆಡಗಿನ ಕೊಡಗು. ಮೋಹಕ, ಮನಮೋಹಕ. ಆದರೂ ಕ್ಯಾಮೆರಾ ಒಯ್ಯಲಿಲ್ಲ. ಅಲ್ಲಿದ್ದ ನಾಲ್ಕು ತಿಂಗಳ ಎಲ್ಲ ಹಗಲೂ ಕಾಲೇಜಿನ ಒಳಗೇ ಸ್ವಯಂಬಂಧಿಯಾಗಿದ್ದೆ ಸಂತೋಷದಿಂದಲೆ. ಈಗಲೂ ಒಂದು ಸೀರಿಯಲ್ ತರಹಕ್ಕೆ ನೆನೆನೆನೆದು ಸಣ್ಣ ಸಂಭ್ರಮ ಪಡುವ ಅವಧಿ ವಿರಾಜಪೇಟೆಯದ್ದು. ಆದರೆ ನಾಲ್ಕು ತಿಂಗಳ ಬಳಿಕ ಮಂಡ್ಯದ ಮದ್ದೂರು ಮಹಿಳಾ ಕಾಲೇಜಿಗೆ ಬಂದು ಇಳಿದೆ, ಹೊರೆ ಹೆಗಲೇರಿತು. ಕಾಲೇಜಿನ ಕಾಲೆಳೆಯುವವರ ನಡುವೆಯೇ ನಡೆದೆ, ನಡೆಯುತ್ತಲೇ ಇದ್ದೆ. ಕಾಲೇಜಿಗೆ ಕ್ಯಾಮೆರಾ ಜೊತೆಗೆ ಬರುತ್ತಿತ್ತು. ಎಲ್ಲ ಬಗೆಯ ಕಾರ್ಯಕ್ರಮಗಳ ಪಟಗಳು ಆ ಡಿಜಿಟಲ್ ಕ್ಯಾಮೆರಾದಲ್ಲಿ ಸೆರೆಯಾದವು. ಪ್ರಿನ್ಸಿಪಾಲಳಾಗಿ ಪ್ರಗತಿಯ ವರದಿಗೆಲ್ಲ ಚಿತ್ರದಾಖಲೆ ಸಿದ್ಧಪಡಿಸುತ್ತಿದ್ದೆ. ಇದೇ ಕೆಲಸ ಮುಂದಿನ ಮಂಡ್ಯದ ಮಹಿಳಾ ಕಾಲೇಜಿನಲ್ಲೂ ಮುಂದುವರೆಸಿದೆ. 2009ರಲ್ಲೇ facebook ಲೋಕಕ್ಕೆ ಪ್ರವೇಶಿಸಿದ್ದೆ. ಕಾಲೇಜಿನ ಕಾರ್ಯಕ್ರಮಗಳ ಪಟ ಅಲ್ಲಿ ದಾಖಲಾಗುತ್ತಿದ್ದವು. ಮಂಡ್ಯಕ್ಕೆ ಬಂದ ಬಳಿಕ ಒಳಗಿನ ಆಲೋಚನೆಗಳೆಲ್ಲಾ ಕ್ರಿಯಾರೂಪಕ್ಕೆ ಬರತೊಡಗಿದವು. ಸರಿ, ಬೇರೆ ಪಾಯಿಂಟ್ ಅಂಡ್ ಶೂಟ್ ಸೋನಿ ಕ್ಯಾಮೆರಾ ಕೈಗೆ ಬಂತು. ಇವತ್ತಿಗೂ 2012-2015ರ ಅವಧಿಯ ನನ್ನ ಫೇಸ್‌ಬುಕ್ ಪುಟಗಳನ್ನು ತೆರೆದರೆ ಹೆಚ್ಚು ಪಾಲು ಮಂಡ್ಯ ಕಾಲೇಜಿನ ವೈವಿಧ್ಯಮಯ ಕಾರ್ಯಕ್ರಮಗಳ ದಾಖಲೆಗಳೆ ತುಂಬಿವೆ. ನಾನು ಹಾಕುತ್ತಿದ್ದ ಫೋಟೋ ವಿವರಗಳು ಆಸಕ್ತರಿಗೆ ಕಾಲೇಜಿನ ವಿದ್ಯಮಾನಗಳ ಮಾಹಿತಿ ನೀಡುತ್ತಿದ್ದವು. ಕೆಲವರಂತೂ ಕಾಲೇಜಿಗೆ ಅತಿಥಿಯಾಗಿ ಬಂದಾಗ ಆ ವಿಚಾರವನ್ನು ವಿದ್ಯಾರ್ಥಿನಿಯರೊಡನೆ ಹೇಳಿ ಹರ್ಷಿಸಿದ್ದರು. ನನ್ನ ಕಂಪ್ಯೂಟರಿನಲ್ಲಿ, ಹಾರ್ಡ್ ಡಿಸ್ಕಿನಲ್ಲಿ ಮೂರು ವರ್ಷದ ಸಾವಿರಾರು ಪಟಗಳು ನೂರಾರು ಫೋಲ್ಡರುಗಳಲ್ಲಿ ಭರ್ತಿಯಾಗಿ ಕುಳಿತಿವೆ. ಆ ದಿನಗಳ ಯಾನದ ಹೆಗ್ಗುರುತಾಗಿ… ಮರೆತೇನೆಂದರೂ ಮರೆಯಾಗದಂತೆ… ಮರೆಯುವುದಾದರೂ ಹ್ಯಾಂಗೆ…!!

ವೃತ್ತಿಯಾಚೆ ಬಂದ ಬಳಿಕ….

2015ರ ಮೇ ತಿಂಗಳು ಮೂವತ್ತೈದು ವರ್ಷದ ಪ್ರಯಾಣಕ್ಕೆ ತೆರೆ ಎಳೆದು ಹೊರೆ ಕಳಚಿದ ಕ್ಷಣ. ಹೊರಬಂದೆ, ಆದರೆ ಹಗುರಾಗಿರಲಿಲ್ಲ. ಕಣ್ಣೀರು ಎದೆಯೊಳಗೆ ತಟ್ಟಾಡುತ್ತಿತ್ತು. ಅದೇ ಕಾಲೇಜಿನ ಮೊದಲ ಬ್ಯಾಚಿನ ವಿದ್ಯಾರ್ಥಿನಿಯಾಗಿ ಕಲಿತು ಪದವಿ ಪಡೆದಿದ್ದ ನಾನೆಂಬೊ ನಾನು ಅಲ್ಲೆ ಉಪನ್ಯಾಸಕಿಯಾಗಿ, ವಿಭಾಗದ ಮುಖ್ಯಸ್ಥೆಯಾಗಿ, ಅದೇ ಕಾಲೇಜಿನ ಪ್ರಿನ್ಸಿಪಾಲಳಾಗಿ ನಿವೃತ್ತಳಾಗಿದ್ದೆ. ನೆನೆದರೆ ಸಂಭ್ರಮದ ಪಯಣ. ಆದರೂ ಕೊನೆಯ ದಿನಗಳು ಮಾಡಿದ ಪರಿವರ್ತನೆಯ ಪರಿಣಾಮ ಹಕ್ಕಿಯ ದಾರಿ. 

ನಿವೃತ್ತಿ ಆದ ನಂತರವೂ ಕಾಡಿಸಿದ ಹಳೆಯ ನಂಜು ಉಳಿದಿತ್ತು. ಅದರಿಂದ ಹೊರಬಂದು ಬದುಕಿನ ಅರ್ಥವನ್ನು ಹೊಸದಾಗಿ, ಬೇರೆಯಾಗಿ ಕಂಡುಕೊಳ್ಳಬೇಕಿತ್ತು. ಮುಂಜಾನೆ ಮನೆಯ ಮುಂದಿನ ಲಾನಿನಲ್ಲಿ ಕುಳಿತಿರುತ್ತಿದ್ದೆ, ತಲೆಯ ಮೇಲೆ ಬೆಟ್ಟ ಬಿದ್ದವಳಂತೆ. ನಿಟ್ಟುಸಿರೂ ಮನೆಯ ನನ್ನ ರೂಮಿನಲ್ಲಿಯೂ ಜೋರಾಗಿ ಬಿಡಲಾಗದ ಸ್ಥಿತಿಯಲ್ಲಿದ್ದೆ. ತನ್ನ ಜೀವನದ ಕೊನೆಯ ದಿನಗಳನ್ನು ಅಮ್ಮ ನನ್ನೊಡನೆ ಕಳೆಯುತ್ತಿದ್ದರು, ತನ್ನ ಪತಿ ಗತಿಸಿದ ಬಳಿಕ. ಅಪ್ಪ ಪ್ರಿನ್ಸಿಪಾಲ್, ಇಬ್ಬರು ತಮ್ಮಂದಿರಲ್ಲಿ ಒಬ್ಬ ಇಂಜಿನಿಯರಿಂಗ್ ಮತ್ತೊಬ್ಬ ಡೆಂಟಲ್ ಕಾಲೇಜುಗಳ ಪ್ರಿನ್ಸಿಪಾಲ್, ತಂಗಿಯೂ ಕಾಲೇಜಿನ ಪ್ರಿನ್ಸಿಪಾಲ್ ಆಗಿದ್ದವಳು. ಹೀಗೆ ಪ್ರಿನ್ಸಿಪಾಲ ಹುದ್ದೆಗಳ ಆಚೀಚೆಯೆ ಜೀವನ ನೋಡಿದ್ದ ಅಮ್ಮನೆದುರು ಪ್ರಿನ್ಸಿಪಾಲಳಾಗಿ ನಿವೃತ್ತಿ ಪಡೆದಿದ್ದ ನಾನು ಒತ್ತರಿಸಿ ಬರುತ್ತಿದ್ದ ಅಳುವನ್ನು ನುಂಗಿ ಲಾನಿನಲ್ಲಿ ಮೂರ್ನಾಲ್ಕು ಗಂಟೆ ಕಾಲ ಕುಳಿತಿರುತ್ತಿದ್ದೆ. ಅಲ್ಲಿದ್ದ ಹೂ, ಚಿಟ್ಟೆಗಳೆಲ್ಲವೂ ಕೈಬೀಸಿ ಕನ್ನ ಕೊರೆದವು. ಮೊಬೈಲಿನಲ್ಲಿ ಚಿತ್ರ ತೆಗೆಯುತ್ತಿದ್ದವಳು ಒಳಗೆ ಹೋಗಿ ಕ್ಯಾಮೆರಾ ಸಮೇತ ಹೊರಬಂದೆ. ಆದರೆ ಹೂವಿನ ಚಿತ್ರ ತೆಗೆಯುವ ಮನಃಸ್ಥಿತಿ ಬದಲಾಯಿತು. ಇವುಗಳಲ್ಲಿ ಹೆಚ್ಚು ಸವಾಲೇ ಇಲ್ಲವೆಂದು ಕಾಡತೊಡಗಿತು. ಸವಾಲುಗಳು ಎದುರಾದಾಗೆಲ್ಲಾ ಲೀಲಾ ಗರಿಗೆದರಿ ಫೀಲ್ಡಿಗೆ ಇಳಿಯುವವಳು.

ಹೂಗಳು ಚಂದ ಇಲ್ಲಾಂತ ಅಲ್ಲ, ಆದರೆ ಚಂದಕಿಂತ ಹೆಚ್ಚಿನ ಚೈತನ್ಯ ಇಲ್ಲ. ನನಗೇನೊ ಕೊರತೆ ಕಂಡಾಗ ಅಂಗಳಕ್ಕೆ ಹಾರಿಬಂದ ಹಕ್ಕಿಯತ್ತ ಕ್ಯಾಮೆರಾ ತಿರುಗಿತು. ಅಯ್ಯಬ್ಬಾ ತಿರುಗಿದ್ದು ಕ್ಯಾಮೆರಾವೆ… ತಿರುತಿರುಗಿದ್ದು ನಾನು. ಲಾನ್ ಮಿತಿಯನ್ನು ದಾಟಿ ಗೇಟಾಚೆಗೂ ಬಂದೆ, ವಾಕಿಂಗ್ ನೆಪದಲ್ಲಿ ಕ್ಯಾಮೆರಾವನ್ನು ಬಚ್ಚಿಟ್ಟುಕೊಂಡು. ಏನು ಮಾಡೋದು, ರಸ್ತೆಯ ನಟ್ಟನಡುವೆ ಆ ಬದಿ ಈ ಬದಿ ಕ್ಯಾಮೆರಾ ಹಿಡಿದು ನಿಲ್ಲಲಾಗದ ಸಾಮಾಜಿಕ ಆವರಣದಲ್ಲಿದ್ದೆ. ಏನು ಮೇಡಂ ಇದು ಹೀಗೆ ಎನ್ನುವವರ ನಡುವೆ ಇರುವ ಹಾಗೆ ವೃತ್ತಿಯ ಆವರಣ ಇತ್ತು. ವಾಕಿಂಗ್ ಬಿಟ್ಟುಬಿಟ್ಟೆ. ಆಗಲೂ ಈಗಲೂ ಬಿಡಲು ಗೊತ್ತಿರುವ ಒಂದೇ ಒಂದು ವಾಹನವಾದ ಸ್ಕೂಟರ್ ಏರಿ ಮಂಡ್ಯ ಸಿಟಿಯ ಮಿತಿ ದಾಟಿ ಅಕ್ಕಪಕ್ಕದ ಹಳ್ಳಿಗಳ ಗದ್ದೆ ಹೊಲಗಳ ದಾರಿಯಲ್ಲಿ ಠಳಾಯಿಸತೊಡಗಿದೆ. ಈ ಮಧ್ಯದಲ್ಲಿ ಅಮ್ಮ ಹಿಂದಿನ ವರ್ಷ ವಿದಾಯ ಹೇಳಿದ್ದ ಅಪ್ಪನ ಜೊತೆಗೂಡಲು ಹೋಗಿಯೇ ಬಿಟ್ಟರು. 

ಸೋನಿ ಕ್ಯಾಮೆರಾ ಪಕ್ಕಕಿಟ್ಟೆ. ಹೊಸ ಕ್ಯಾಮೆರಾ ಕೊಳ್ಳಲು ನೆಟ್ಟಿನಲ್ಲೆ ಹುಡುಕಾಟ ಮಾಡಿದ್ದೆ, ಆದರೆ ಖಚಿತವಿರಲಿಲ್ಲ ಯಾವುದನ್ನು ಕೊಳ್ಳಬೇಕು ಎಂದು ಕೇಳಿ ತಿಳಿಯಲು ಫೀಲ್ಡಿನಲ್ಲಿ ಪರಿಚಿತರೂ ಇರಲಿಲ್ಲ. ನನ್ನ ಚಿಕ್ಕಪ್ಪನ ಮಗ ಒಂದಿಷ್ಟಿಷ್ಟು ಹಕ್ಕಿ ಚಿತ್ರ ಆಗಾಗ ತೆಗೆಯುತ್ತಿದ್ದ. ಅವನನ್ನೇ ಕೇಳಿದೆ, ಅದೂ ಕ್ಯಾನನಿನಲ್ಲಿ ಮಾತ್ರ ಎಂದು ಸ್ಪಷ್ಟಪಡಿಸಿ. ಅವನು ಹೇಳಿದ `ಕಲಿಯಲು ಇದು ತಗೊಳಿ ಆಮೇಲೆ ಬೇರೆ’ ಎಂದು. ಅರೆ ಕಲಿಯೋಕೆ ಒಂದು ಕ್ಯಾಮೆರಾನೆ, ತಗೊಂಡಿದ್ದರಲ್ಲೆ ಕಲಿಯೋದಲ್ವಾ! ನಾನು, ನನ್ ಲೈಫ್ ಬರಿ ಟ್ರಯಲ್ ಅಂಡ್ ಎರರ್‌ಗಳೆ ತುಂಬಿದ್ದವು. ತಪ್ಪಾದರೆ ಒಂದು ಅನುಭವ, ಇಲ್ಲದಿದ್ದರೆ ಮುಂದೆ… ಇದೇ ದಾರಿ ಸವೆಸಿದ್ದೆ. ರೀಸರ್ಚ್ ಟೈಮಲ್ಲಿ ಕಂಪ್ಯೂಟರ್ ಕೊಂಡುಕೊಂಡಾಗಲೂ `ಏನೇನೂ ಗೊತ್ತಿಲ್ಲ, ಕಲಿಯೋದು ಹೇಗೆ’ ಎಂದು ತಂದುಕೊಟ್ಟವನಿಗೆ ಕೇಳಿದ್ದೆ. ಅವನು ಹೇಳಿದ `ಆನ್ ಅಂಡ್ ಆಫ್ ಕಲೀರಿ ಎಲ್ಲಾ ಬರುತ್ತೆ’. ಓಹೋ ಸ್ವಿಚ್ ಆನ್ ಮಾಡಿ ಆಫ್ ಮಾಡಿದರೆ ಕಂಪ್ಯೂಟರ್ ಕಲಿಯಬಹುದಾ ಬೆರಗಿನಿಂದ ನೋಡಿದ್ದೆ. ಅವನ ಮಾತು ನಿಜ, ಅವತ್ತು ಆನ್ ಮಾಡಿದ್ದು…. ಮುಂದೆ ನನಗೆ ಅವಶ್ಯ ಅನ್ನಿಸಿದ್ದನ್ನೆಲ್ಲಾ ಕೀಲಿ ಹೊಡೆದು ಹೊಡೆದು ಕಲಿತು ಫೋಟೊಶಾಪ್, ಇನ್ ಡಿಜೈನ್, ಲೈಟ್‌ರೂಂ ಎಂದು ಸ್ವಯಂ ಕಲಿಕೆಯ ಹಾದಿಯಲ್ಲಿ ಸಾಗಿದ ಓಟದಿಂದ ಇನ್ನೂ ತನಕ ಆಫ್ ಮಾಡಿಲ್ಲ. 2016ರ ಜನವರಿಯಲ್ಲಿ ಆನ್‌ಲೈನಿನಲ್ಲಿ canon 700D ಕೊಂಡೆ, ಜೊತೆಗೆ ಎರಡು ಕಿಟ್‌ ಲೆನ್ಸ್. ಒಂದೆರಡು ವಾರ ಬಿಟ್ಟು 70-300 ಲೆನ್ಸ್ ಸೇರಿಕೊಂಡಿತು. ಟ್ರಯಲ್ ಎಂದೆ Canon 700D ಹಿಡಿದದ್ದು. ಪಕ್ಕಾ ಹಕ್ಕಿ ಫೋಟೊ ಹೊಡೆಯುವವಳಾಗಿ ಬ್ಯಾಗೇರಿಸಿ ಸೀರೆಧಾರಿಯಾಗಿಯೇ ಫೀಲ್ಡಿಗಿಳಿದೆ. ಎರಡು ತಿಂಗಳು ಕಳೆಯುವ ವೇಳೆಗೆ ಕ್ಯಾಮೆರಾ, ಡ್ರೆಸ್ ಎರಡೂ ಕಿರಿಕ್ ಎನಿಸಿತು. ಕ್ಯಾಮೆರಾ ನನ್ನ ಕನಸು ಗುರಿಗಳಿಗೆ ಎಟುಕುತ್ತಿಲ್ಲ ಎಂದೆನಿಸತೊಡಗಿತು. ಕಿರಿಕಿರಿ ತಾಳಲಾಗಲಿಲ್ಲ. ಬೆಂಗಳೂರಿಗೆ ಹೊರಟೇಬಿಟ್ಟೆ ಬೇಕೆನಿಸಿದ ಕ್ಯಾಮೆರಾ ಕೊಳ್ಳಲು. 

ಹೊಸದಾರಿ ಹುಡುಕುವ ಹಂಬಲಕ್ಕೆ ಇಂಬು ಕೊಡಲೆಂದೆ ನಾನು ಬೆಂಗಳೂರಿಗೆ ಹೊರಟಿದ್ದು. ತಮ್ಮನಿಗೆ “ಆನಂದರಾವ್ ಸರ್ಕಲ್ ಹತ್ತಿರ ಇದೀನಿ ಬಾ” ಎಂದೆ. ಅವನು “ನನಗೆ ಮೀಟಿಂಗಿದೆ, ಅಲ್ಲೇ ಫೋಟೊ ಸರ್ಕಲ್ ಅಂತಾ ಶಾಪ್ ಇದೆ, ಹೋಗಿ” ಅಂದ. ಇನ್ನೇನು ಮಾಡೋದು ಹೊರಟ ಮೇಲೆ ಬಿಡಲು ಸಾಧ್ಯವೇ, ಹೋದೆ. ಲೇಟೆಸ್ಟ್ ಯಾವುದು, ಅದ್ಯಾವುದು ಹತ್ತು ಹಲವು ಪ್ರಶ್ನೆ ಹಾಕಿದೆ, ಅಂಗಡಿಯವ ಕೇಳಿದ, ಏನು ಉದ್ದೇಶ? ಹೇಳಿದೆ ಹಕ್ಕಿ ಚಿತ್ರ ತೆಗೆಯೋಕೆ. ಅವನ ಮುಂದಿನ ಪ್ರಶ್ನೆ `ಯಾರಿಗೆ ಮೇಡಂ ಗಿಫ್ಟಾ ನಿಂ ಮಗನಿಗಾ..’ 

ಅರೆರೆ… ಮಗನಿಗಾ! ಆದರೆ ಮಗನೇ ಇಲ್ಲವಲ್ಲ, ಎಲ್ಲಿಂದ ತರೋದು. ಇರೋರು ಇಬ್ಬರೂ ಹುಡುಗಿಯರು, ವೈದ್ಯೆಯರು… ಈ ಲೀಲಾ ಆಡೋ ಆಟಗಳ ಕಡೆ ಗಮನ ಕೊಡದೋರು ಅಥವಾ ಕೊಡುವಷ್ಟು ಪುರಸೊತ್ತು ಇಲ್ಲದವರು, ಆದರೆ ಏನೋ ಮಾಡುತ್ತಲೇ ಇರುತ್ತಾಳೆ, ಅದವಳಿಗೆ ನೆಮ್ಮದಿಯ ಕೆಲಸ ಎಂದು ಸಹಕಾರ ಕೊಡುವವರು. ಇರುವ ಇಬ್ಬರು ಮೊಮ್ಮಕ್ಕಳಲ್ಲಿ ಒಬ್ಬಳು ಕ್ಯಾಮೆರಾಕ್ಕೆ ಪೋಸ್ ಕೊಡುವವಳೆ ವಿನಾ ಹಿಡಿಯಲು ಮುಂದೆ ಬರುವವಳಲ್ಲ. ಈಗೀಗ ಮೂಡ್ ಇದ್ದರೆ ಕ್ಲಿಕ್ ಮಾಡ್ತಾಳೆ. ಹಕ್ಕಿಗಿಂತ ನನ್ ಪಟ ಹಿಡಿದದ್ದೇ ಹೆಚ್ಚು. ಇನ್ನು ಚಿಕ್ಕವ ಮೊಮ್ಮಗ, ಅವನಿಗೆ ಟೆಕ್ನಿಕಲ್ ವಿಷಯಗಳು ಗೊತ್ತು, ಆದರೆ ಅವನ ಲೋಕದಿಂದ ಅವನಿಗೆ ಕ್ಯಾಮೆರಾ ತನಕ ಬರಲು ಪುರಸೊತ್ತಿರಲಿಲ್ಲ, ಮನಸ್ಸಿರಲಿಲ್ಲ. 

ಕ್ಯಾಮೆರಾ ಅಂಗಡಿಯವನಿಗೆ ಹೇಳಿದೆ “ಇಲ್ಲಪ್ಪ ಕ್ಯಾಮೆರಾ ನನ್ ನನಗೆ”. ಅವನು ಗಾಬರಿ ಬಿದ್ದ… ಏನಿವಮ್ಮನಿಗೆ ಹುಚ್ಚಾ. ಅರವತ್ತು ದಾಟಿದ ಮುದುಕಿ ಮೂಲೆಯಲ್ಲಿ ಕೂತು ಮಣಮಣ ಮಂತ್ರ ಹೇಳೊ ಬದಲು ಕ್ಯಾಮೆರಾ ಹಿಡಿದು ಹಕ್ಕಿ ಹಿಂದೆ ಅಲೆಯುತ್ತಾಳಾ… ಮತ್ತೊಮ್ಮೆ ಕೇಳಿ ಖಚಿತ ಪಡಿಸಿಕೊಂಡ ಮೇಲೆ ವಿಶೇಷ ಗೌರವ ಕೊಡುತ್ತಾ ಈ ಮಾಡೆಲ್ ನೋಡಿ ಫುಲ್‌ಪ್ರೇಮ್ ಕ್ಯಾಮೆರಾ ಇದೇ ರೀಸೆಂಟು ಎಂದು canon 5D mark iii ಮುಂದಿಟ್ಟ. ಅಸಲಿ ವಿಚಾರ ಏನೂಂದರೆ ಫುಲ್‌ಫ್ರೇಂ, ಕ್ರಾಪ್‌ಫ್ರೇಮು… ಹಾಗೆಂದರೆ ಏನೆಂಬ ಅಆಇಈ ಗೊತ್ತೇ ಇರಲಿಲ್ಲ. ಜ್ಞಾನದೆಡೆಗಿನ ಪಯಣ ಕುತೂಹಲದಿಂದಲೇ ತಾನೆ ಶುರು. ಹುಟ್ಟಿದ ಕುತೂಹಲ ಬೆಟ್ಟವಾಗಬಲ್ಲದು, ಹಿಮಾಲಯವೂ ಆಗಬಲ್ಲದು. ಮುಂದೆ ಮುಂದಕ್ಕೆ ಮುನ್ನಡೆಸಬಲ್ಲುದು.

canon 5D mark iii ಜೊತೆಗೆ 24-105 mm ಲೆನ್ಸ್ ಬರುತ್ತೆ ಎಂದು ಅದನ್ನು ತೋರಿಸಿದ. ಲೆನ್ಸ್ ಬೇಡಾಂದ್ರೆ ಇಷ್ಟಾಗುತ್ತೆ, ಒಟ್ಟಿಗೆ ಸೇರಿದರೆ ಇಷ್ಟು ಎಂದ. ನಾನು ಹಕ್ಕಿ ಮಾತ್ರ ಹಿಡಿಯುವವಳು, ಉಳಿದದ್ದರಿಂದ ದೂರ ಅಂತಾ ಆ ಕಾಲಕ್ಕೆ ಡಿಸೈಡ್ ಮಾಡಿ ಆಗಿತ್ತಲ್ಲ. 24-105mm lens ಯಾಕೆ ಬೇಕು ಅನ್ನಿಸಿ ಬರಿ ಕ್ಯಾಮೆರಾ ಸಾಕು ಎಂದೆ. ಒಂದು ಲಕ್ಷದ ಎಂಬತ್ತು ಸಾವಿರ ಅಂದ, ಕ್ಯಾಮೆರಾ ಬೇಕೇ ಬೇಕಿತ್ತಲ್ಲ ಕಾಸು ಕೊಟ್ಟೆ, ಮುದ್ದಾದ ಕರಿಪೆಟ್ಟಿಗೆ ಖುಷಿಯಿಂದ ಕೈಗೆತ್ತಿಕೊಂಡೆ. ತೆಗೆದುಕೊಂಡು ಹೋಗಿದ್ದ ಕಾಸೂ ಮುಗಿದಿತ್ತು. ಅಂಗಡಿ ಹುಡುಗ ಸಣ್ಣಪುಟ್ಟದು ತೆಗೆಯೋಕೆ ಈ 50 mm ನೋಡಿ ಎಂದು ಲೆನ್ಸ್ ತೆಗೆದು ಒಂದೆರಡು ಕ್ಲಿಕ್ ಮಾಡಿ ತೋರಿಸಿದ. ಮಕ್ಕಳ ತರಹ ಆಸೆಯಾಯ್ತು. ಆದರೆ ಕೈಲಿ ಕಾಸಿರಲಿಲ್ಲ. ಮಾಲೀಕ ಹೇಳಿದ ಪರವಾಗಿಲ್ಲ ತಗೊಂಡೋಗಿ, ದುಡ್ಡು ಬ್ಯಾಂಕಿಗೆ ಹಾಕಿ ಎಂದು ಅಕೌಂಟ್ ನಂಬರ್ ಕೊಟ್ಟ. ನನ್ನ ಹತ್ತಿರ ಕಾರ್ಡ್ ಇರಲಿಲ್ಲ, ಕಾರ್ಡ್ ಇದ್ದರೆ ಉಜ್ಜುವ ಅಭ್ಯಾಸ, ಬೇಡದ್ದೆಲ್ಲ ಕೊಳ್ಳುವ ಸೆಳೆತ ಎಂದು ಕಾರ್ಡ್ ರಿನ್ಯೂ ಮಾಡಿಸುವ ಕೆಲಸ ಕೈಬಿಟ್ಟಿದ್ದೆ. ಡಿಜಿಟಲ್ ವ್ಯವಹಾರಕ್ಕೆ ಇನ್ನೂ ತನಕ ಕುದುರಿಲ್ಲದವಳು. ಆದರೆ ಒಂದೇ ದಿನದಲ್ಲಿ ನನ್ನ ಮೇಲೆ ನಂಬಿಕೆ ಇರಿಸಿ ಲೆನ್ಸ್ ಕೊಟ್ಟನಲ್ಲ ಥ್ಯಾಂಕ್ಸ್ ಅಂದೆ. ನಾಲ್ಕೈದು ದಿನಗಳಲ್ಲಿ ಅಲ್ಲಿಂದಲೇ Canon 100-400 is ii ಕೂಡಾ ಮನೆಗೆ ಬಂತು. ಅತ್ಯದ್ಭುತ ಲೆನ್ಸ್ ಅದು. ಇದುವರೆಗಿನ ನನ್ನ ಎಲ್ಲ ಹಕ್ಕಿ ಪಯಣಗಳಲ್ಲೂ ನಿಷ್ಠೆಯಿಂದ ತನ್ನಳತೆಯ ಕೆಲಸ ಮಾಡುತ್ತಿದೆ.

ಆದರೆ ಈ ಕೋವಿಡ್ ಅವಧಿಯಲ್ಲಿ ಮನೆಯಂಗಳದ ಗಿಡದಲ್ಲಿ ಗೂಡು ಮಾಡಿದ್ದ ಸಿಂಪಿಗನನ್ನು ಹಿಡಿಯಲು canon 7 d mark iiಗೆ ಈ 100-400 ಹಾಕಿ ಇಟ್ಟಿದ್ದೆ. ನನ್ನ ಗಂಡ ಹಿಂದೆ ನೋಡದೆ ನನಗೆ ಸಹಾಯ ಮಾಡಲು ಬಂದವ ನೆಲಕ್ಕುರುಳಿಸಿದ. ಲೆನ್ಸ್ ಕೆಲಸ ಮಾಡಲು ಮರೆತಿತು. ನಾನು ಅವನಿಗೂ ಬೈಯಲಿಲ್ಲ. ಯಾಕೆಂದರೆ ಕೊರೊನಾ ಅಂತಾ ಹೆದರಿಸಿ ಕ್ಲಿನಿಕ್ ಮುಚ್ಚಿಸಿ ಮನೇಲಿ ಕೂರಿಸಿದ್ದೆವು, ಅವ ಮೊದಲೇ ಕೊಯ್ಯ ಕೊಯ್ಯಾ ಕೊರ್ ಅಂತ ಯಾರಿಗೇ ಫೋನ್ ಮಾಡಿದರೂ ನನ್ನನ್ನು ಪರಪ್ಪನ ಅಗ್ರಹಾರದಲ್ಲಿ ಕೂರಿಸಿದ್ದಾರೆಂದು ದೂರಿಕೊಂಡೆ ಕೂತಿದ್ದ. ಇನ್ನು ಬೈದು ಯಾಕೆ ಬೇಜಾರು ಮಾಡಿಕೊಳ್ಳೋದು ಎಂದು ಸುಮ್ಮನಾದೆ. ನಾಲ್ಕು ವರ್ಷದ ನಿಯತ್ತಿನ ಸೇವೆ ಸಲ್ಲಿಸಿದ ಲೆನ್ಸ್ ಮಲಗಿತ್ತು. ರಿಪೇರಿಗೆ ಬೆಂಗಳೂರಿಗೆ ಹೋಗಬೇಕು. ಹೋಗುವುದಾದರೂ ಹೇಗೆ? ಕೊರೊನಾ… ಕೊರೊನಾ… ಎಂದು ಮೂಲೇಲಿ ಕೂರಿಸಿದ್ದೆ. ಅದನ್ನು ಮತ್ತು ನನ್ನನ್ನು. ಕೊರೊನಾ ಕಡಿಮೆಯಾದ ಕೂಡಲೆ ನನ್ನ ಪರಿಚಿತರ ಮೂಲಕ ಬೆಂಗಳೂರಿನ ಕ್ಯಾನನ್ ರಿಪೇರಿ ಶಾಪಿಗೆ ಕಳಿಸಿ ಮತ್ತೆ ಮಗುವನ್ನು ಮನೆಗೆ ಬರಮಾಡಿಕೊಂಡೆ ಸಂತೋಷದಿಂದ.

2016ರ ಮಾರ್ಚ್ ವೇಳೆಗೆ ಈ 100-400 mm ಬಂತಲ್ಲಾ ಆಗಲೇ ಬಹಳ ದೂರದ ದುರಾಸೆಯಿಂದಲೇ 100-600 tamaron ಲೆನ್ಸ್ ಕೊಂಡೆ… ಓಹೋಹೋ ಆಸೆಗೇನು ಆಕಾಶವೂ ಸಾಟಿಯಲ್ಲವಲ್ಲ. ನನ್ನ ಅತಿಯಾಸೆ ಏನಾಗಿತ್ತೆಂದರೆ ಟಿ.ಸಿ ಅಂದರೆ Tele converter ಹಾಕಿದರೆ 600-1200 ಆಗುತ್ತದೆ ಎಂಬ ಕನಸು. ಗೊತ್ತೇ ಇರಲಿಲ್ಲ Tamaronಗೆ ಟಿ.ಸಿ ಹಾಕಿ ಕ್ಯಾನೆನ್ ಕ್ಯಾಮೆರಾಗೆ ಸೇರಿಸಲು ಆಗುವುದೇ ಇಲ್ಲವೆಂದು. ಇರಲಿ ಎಡವದೆ ಮಗು ನಡೆಯುತ್ತದೆಯೇ. ನನಗೆ ಅರವತ್ತು ಆಗಿರಬಹುದು, ನನ್ನ ಹಕ್ಕಿ ಚಿತ್ರದ ಪ್ರಯಾಣಕ್ಕೆ ಇನ್ನೂ ಆರು ತಿಂಗಳ ಕೂಸಿನ ವಯಸ್ಸು. ನನ್ನದೂ rebirth ಹಾಗೂ ಪಯಣ. ಚಿತ್ರ ತೆಗೆಯುತ್ತೇನೊ ಬಿಡುತ್ತೇನೊ ಆದರೆ gearwise full fledged photographer ಆಗಿ ರೆಡಿಯಾದೆ… ಟ್ರೈಪಾಡ್ ಒಂದನ್ನು ಬಿಟ್ಟು. ನಾನು ಸ್ಟ್ರಾಂಗ್ ಅಲ್ವಾ, ಕೈಲಿ ಹಿಡಿದೇ ತೆಗೆಯುತ್ತೇನೆ ಎಂಬ ಒಣಜಂಭಕ್ಕೇನೂ ಕಡಿಮೆ ಇರಲಿಲ್ಲ. ಆದರೆ ಅಳಿಯನ ಕುರುಡು ಗೊತ್ತಾಗುವುದು ಬೆಳಗಾದ ಬಳಿಕ ತಾನೇ. ಈ ಕೈ ಹಿಡಿತ ಅಂದುಕೊಂಡಷ್ಟು ಗಟ್ಟಿಯಾಗಿಲ್ಲ, ಹೆಚ್ಚು ಹೊತ್ತು ಕ್ಯಾಮೆರಾ ಹಿಡಿದಿರಲೂ ಸಮರ್ಥವಲ್ಲ ಎಂಬುದು ದಿನಗಳು ಕಳೆದ ಬಳಿಕವೇ ನಿಧಾನವಾಗಿ ಮನವರಿಕೆ ಆಗತೊಡಗಿತು… ಫೋಟೋಗಳು ಬ್ಲರ್ ಆಗಿದ್ದು ಅರ್ಥ ಆದ ನಂತರ. ಇಷ್ಟೆಲ್ಲ ಪಾಡು ಪಟ್ಟಮೇಲೆ ಟ್ರೈಪಾಡೂ ಸನಿಹಕ್ಕೆ ಬಂದು ಅನಿವಾರ್ಯ ಸಂಗಾತಿಯಾಯಿತು. ಚಂಚಲತೆಯನ್ನೆ ಮೈವೆತ್ತ ಹಕ್ಕಿಗಳ ಚಿತ್ರ ತೆಗೆಯಲು ಟ್ರೈಪಾಡ್ ಅನಿವಾರ್ಯ ಸಂಗಾತಿಯೆಂಬ ಸರಳ ಸತ್ಯ ತಿಳಿದು ಮನಸ್ಸು ತಿಳಿಯಾಯಿತು. 600 mm ಪ್ರೈಮ್ ಲೆನ್ಸ್ ಬಂದಂತೆ ಟ್ರೈಪಾಡೂ ಅದನ್ನು ಹೊರಲು ಸಮರ್ಥವಾಗುವಂತೆ ಬದಲಾಯಿತು, ಜೊತೆಗೆ ಬರತೊಡಗಿತು. ಹಾಗೆಂದರೆ ಟ್ರೈಪಾಡ್ ಇದ್ದ ಮಾತ್ರಕ್ಕೆ ಚಿತ್ರ ಬ್ಲರ್ ಆಗುವುದು ಸಂಪೂರ್ಣವಾಗಿ ತಪ್ಪಿಯೇ ಹೋಯಿತು ಎಂದಲ್ಲ. ಅದಾದರೂ ಹೇಗೆ ಸಾಧ್ಯ. ಚಿತ್ರ ತೆಗೆಯುತ್ತಿದ್ದುದ್ದು ಹಕ್ಕಿಗಳದ್ದು. ಅವುಗಳ ಊಹೆಗೆ ಅಸಾಧ್ಯವಾದ ಚಲನೆಗಳಲ್ಲಿ ಚಿತ್ರ ಬ್ಲರ್ ಆಗದೇ ಇರಬಹುದು. ಆದರೆ ಕ್ಯಾಮೆರಾ ಕೈಯಲ್ಲಿ ಹಿಡಿದು ನಡುಗಿಸುವ ಬದಲು ಅದನ್ನು ಹೊತ್ತು ನಿಲ್ಲಲಿಕ್ಕೆ ಗಟ್ಟಿಯಾಗಿ ಟ್ರೈಪಾಡ್ ಆಲಂಬನೆಯಾಯಿತು. ಕೆಲವೊಮ್ಮೆ ನಡೆಯುವಾಗ ಈ ಟ್ರೈಪಾಡು ನನ್ನ ಪಾಡು ನೋಡಲಾರದೆ ಊರುಗೋಲೂ ಆಗಿಬಿಡುತ್ತದೆ.

ಅರೆರೆ ಅರೆರೆ ನನ್ನೀ ಬಟ್ಟೆ 

ಇನ್ನೊಂದು ಮಹತ್ವದ ವಿಷಯ, ನನ್ನ ಸೀರೆಯದ್ದು. ಹದಿನೈದರ ವಯಸ್ಸಿಗೆ ಮದುವೆಯಾಗಿ ಸೀರೆ ಸುತ್ತಿಕೊಳ್ಳಲಾರಂಭಿಸಿ(ಸೀರೆ ಉಟ್ಟುಕೊಳ್ಳುವುದನ್ನು ಸರಿಯಾಗಿ ಕಲಿಯದೇ ಇದ್ದ ಕಾರಣದಿಂದ ಅಕ್ಷರಶಃ ಸೀರೆ ಸುತ್ತಿಕೊಳ್ಳುತ್ತಿದ್ದೆ) ನಂತರದ ಓದುವಾಟ ಓದಿಸುವಾಟದ ಉದ್ದಕ್ಕೂ ಏಕಮೇವಾದ್ವಿತೀಯವಾಗಿ ಸೀರೆಯೆಂಬ ವಸನಧಾರಿಯಾಗಿ ಅರವತ್ತರ ತನಕ ಪಯಣಿಸಿದ್ದು ನಿರಾತಂಕವಾಗಿ. ಆದರೆ ಅದೇ ಸೀರೆ ಈ ಹಕ್ಕಿ ದಾರಿಯ ಪಯಣದಲ್ಲಿ ಆತಂಕ ತಂದೊಡ್ಡತೊಡಗಿತು. ಸೀರೆಯ ಸೆರಗು-ನಿರಿಗೆ ಎರಡೂ ಭಾರಿ ಕಾಟವನ್ನೇ ನನಗೆ ಕೊಡಲಾರಂಭಿಸಿತು. For the first time ವಿವಾಹೋತ್ತರ ಲೈಫಿನಲ್ಲಿ ಸೀರೆ ಬಿಟ್ಟು ಬೇರೆ ಒಂದು ಡ್ರೆಸ್ಸಿಗೆ ಶಿಫ್ಟ್ ಆದೆ. ಇದೂ ಒಂದು ವಿಷಯವೇ ಒದ್ದಾಟವೇ ಎಂದರೆ ಹೌದೆಂದೆ ಹೇಳುವೆ. ಅಷ್ಟು ಸುಲಭವಲ್ಲ ದಾರಿ ಬದಲಿಸುವುದು. ಆದರೆ ನಾನು ಹೊರಟುಬಿಟ್ಟಿದ್ದೆ right about turn ದಾರಿಯಲ್ಲಿ, ಪ್ರವಾಹದಲ್ಲಿ. ಕಡಲು ಸೇರುವ ವಯಸಿನಲ್ಲಿ ನದಿಮೂಲ ಸೇರುವ ಹಾದಿಯಲಿ, ಸುಮ್ಮನೆ ಕಡಲೊಳಗೆ ಅಡಗುವ ಬದಲು. ನಾನು ಯಾಕೆ ಹೀಗೆ ಹೊರಡಬಾರದೆಂದು ಹೊರಟವಳು. ಬಂಧನಗಳ ಬೇಲಿಯನ್ನು ದಾಟಿದವಳು. ಹೊಸ ದಾರಿಯ ಬಗ್ಗೆ ಮಾತುಗಳ ಬಾಣ ಬರದೆ ಇರುತ್ತವೆಯೇ. ಮನೆಯವರಿಗೆ ಗೊತ್ತಿತ್ತು, ಈ ಗಾಂಧಿಪ್ರೇಮಿ ಅವನ ಹಾಗೆ. ಒಳ್ಳೆಯದ್ದೇ ಆಗಲಿ ಕೆಟ್ಟದ್ದೇ ಆಗಲಿ ಅವನ ಹಾಗೆ ಹಟಮಾರಿ, ಹೇಳಿದ ಹಾಗೆ ಮಾಡಿಯೇ ಮಾಡಿ ತೀರುವವಳು ಎಂದು. ಇಷ್ಟಕ್ಕೂ ಮೀರಿ ಇದು ಒಳ್ಳೆಯದ್ದು, ಇದು ಕೆಟ್ಟದ್ದು ಎಂದು ನಮ್ಮ ಜೀವನದ ಬಗ್ಗೆ ಯಾರ್ಯಾರೋ ಹೇಗೆ ನಿರ್ಧರಿಸುತ್ತಾರೆ, ಇಷ್ಟಕ್ಕೂ ಅವರ್ಯಾರು ಹೀಗೆ ನಿರ್ಧರಿಸೋಕೆ. ಮಾತುಗಳ ಈಟಿ ಮೀಟಲು ಬಲ್ಲವರು ಮ್ಯಾಕ್ಸಿಮಮ್ ಏನು ಹೇಳ್ತಾರೆ ಇವಳಿಗೆ ಹುಚ್ಚು ಅಂತಾ ತಾನೆ. ಇಂತಹ ಹುಚ್ಚುಗಳಿಲ್ಲದೆ ಹೊಸದಾರಿ ಹೇಗೆ ತೆರೆಯೋದು. ಇಂತಹ ಹುಚ್ಚುಗಳ ಬೆಂಬತ್ತಿ ವೃತ್ತಿ ಪ್ರವೃತ್ತಿಗಳಲ್ಲಿ ಪ್ರಯೋಗಗಳನ್ನು ಮಾಡಿದ್ದು. ಗಾಂಧಿ, ಕುವೆಂಪು, ಟ್ಯಾಗೂರ್ ಅಲ್ಲದೆ ಇನ್ನೂ ಹಲವು ಚಿತ್ರಸಂಗ್ರಹದ ಪ್ರದರ್ಶನದ ಬೆಂಬತ್ತಿದ್ದು. ಸಾವಿರಾರು ನೋಟಕರ ಕಣ್ಣಿಗೆ ನಿಲುಕಿಸಿದ್ದು. ನನ್ನೊಳಗಿನ ನನ್ನನ್ನು ನಾನೇ ಕಂಡುಕೊಳ್ಳಲು ಸಾಧ್ಯವಾಗಿದ್ದು. ಬಹುಶಃ ಗಾಂಧಿ ಹಿಂದೆ ಚಿತ್ರಕ್ಕಾಗಿ ಹೋಗದೆ ಇದ್ದಿದ್ದರೆ, ನನ್ನ ಮುಂದಿನ ಎಲ್ಲ ವೃತ್ತಿ ಸಂಬಂಧಿತ ಪ್ರಯೋಗಗಳಿಗೂ ಮುನ್ನುಗ್ಗುತ್ತಿರಲಿಲ್ಲ. My life, my experiments ಹುರ್ರೆ ಹಿಪ್ಪಿಪ್ ಹುರ್ರೆ… ಆಗ ವೃತ್ತಿಯಲ್ಲಿ ಇದ್ದ ಮೇಲಿನ ನಿರ್ಬಂಧಗಳಾಗಲೀ ಕೆಳಗಿನ ಕಾಲೆಳೆತಗಳಾಗಲೀ ಇಲ್ಲಿ ಇರಲಿಲ್ಲ. ನೀನೆ ಆನೆ, ನೀನು ನಡೆದದ್ದೇ ಹೆದ್ದಾರಿ ಎನ್ನುವ ದಾರಿ ನನ್ನ ಮಟ್ಟಿಗೆ ನನಗೆ… ನಡೆ ಮುಂದೆ ನಡೆ ಮುಂದೆ ಲೀಲಾ… ನಡೆದಳು ನಡೆದೇ ನಡೆದಳು ನಡಿಗೆಯಿಲ್ಲದ ಲೀಲಾ.

| ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

October 16, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. km vasundhara

    ಮೇಡಂ, ಎಷ್ಟು ಜೀವನೋತ್ಸಾಹದ ಸಾಲುಗಳು! ಮುಂದಿನ ಅಂಕಣಕ್ಕಾಗಿ ಕಾಯುವಂತೆ ಮಾಡಿವೆ. ನಿಮ್ಮ ಹಕ್ಕಿ ಯಾನದಲ್ಲಿ ನಾನೂ ಓದುಗಳಾಗಿ ನೋಡುಗಳಾಗಿ ಜೊತೆಯಾಗುವೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: