ಅಕ್ಕಿಮಂಗಲ ಮಂಜುನಾಥ ಅವರ `ಬುಡಬುಡಿಕೆ’

ವಿಶಾಲಾ ಆರಾಧ್ಯ

`ಬುಡಬುಡಿಕೆ’ ಮಕ್ಕಳ ಕವನ ಸಂಕಲನ. ಈ ಕೃತಿಯ ಲೇಖಕರು ಅಕ್ಕಿಮಂಗಲ ಮಂಜುನಾಥ. ನುಡಿ ಪುಸ್ತಕ ಪ್ರಕಾಶನ

ಶ್ರೀ ಅಕ್ಕಿಮಂಗಲ ಮಂಜುನಾಥ ಅವರು ಕೃಷಿಕರಾಗಿದ್ದು ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲ್ಲೂಕಿನ ಅಕ್ಕಿಮಂಗಲ ಎನ್ನುವ ಚಿಕ್ಕ ಹಳ್ಳಿಯವರು. ಕೃಷಿ ಸೇವೆಯನ್ನು ಮಾಡುತ್ತಲೇ ಸಾಹಿತ್ಯದ ಒಲವನ್ನು ಬಿಡದೆ ಹಲವಾರು ಕವನ ಸಂಕಲನಗಳನ್ನು ಹೊರ ತಂದಿದ್ದಾರೆ. ರವಿಕಾಣದ್ದನ್ನು ಕವಿಕಂಡ ಎಂಬಂತೆ ಲೇಖಕರು ತಮ್ಮ ವೃತ್ತಿವಲಯದಲ್ಲಿ ಸುತ್ತಮುತ್ತಲೂ ಕಂಡ ಪರಿಸರದಲ್ಲಿ ಸಿಕ್ಕ ಕಾವ್ಯವಸ್ತುಗಳನ್ನು ಕಾಪಿಟ್ಟುಕೊಂಡು ಅವುಗಳಿಗೆ ಅಕ್ಷರ ರೂಪವನ್ನು ಕೊಟ್ಟು ಸಾಹಿತ್ಯ ಲೋಕಕ್ಕೆ ತಮ್ಮ ಅಳಿಲು ಸೇವೆ ಸಲ್ಲಿಸುವ ಅವರ ಈ ಕಾಯಕ ನಿಜಕ್ಕೂ ಶ್ಲಾಘನೀಯ. ಅವರ ಇನ್ನಿತರ ಕೃತಿಗಳೆಂದರೆ ಗುಮ್ಮ',ತುಂಟತಿಮ್ಮ’, `ಹೂವು ಮಾರುವವಳು’.

ಮಂಜುನಾಥ ಅವರ `ಬುಡಬುಡಿಕೆ’. ಸಂಕಲನದಲ್ಲಿ ನಲವತ್ತಕ್ಕೂ ಹೆಚ್ಚು ಮಕ್ಕಳ ಕವಿತೆಗಳಿವೆ. ಇವುಗಳಲ್ಲಿ ಮುಖ್ಯವಾದ ಕವಿತೆಗಳನ್ನು ನಾನು ಉಲ್ಲೇಖಿಸುವೆನು. ಇದರಲ್ಲಿನ ಮೊದಲ ಕವಿತೆ `ರೈತನ ಬದುಕು’. ಹೆಸರೇ ಹೇಳುವಂತೆ ಈ ಕವಿತೆ ನಾವೆಲ್ಲಾ ಅನ್ನದಾತ’ನೆಂದು ಕರೆಯುವ ರೈತನ ಬದುಕಿನ ಕಷ್ಟಗಳನ್ನು ತಿಳಿಸಿಕೊಡುವ ಪದ್ಯವಾಗಿದೆ. ತಾಯಿ-ಮಗುವಿನ ನಡುವಿನ ಸಂಭಾಷಣೆಯ ಮೂಲಕ ಜಗತ್ತಿಗೂ ರೈತನ ಹಿರಿಮೆ ತ್ಯಾಗವನ್ನು ತಿಳಿಸುವ ಪದ್ಯ ಇದಾಗಿದೆ.

ಇದನ್ನು ಓದುವಾಗ ನಮ್ಮ ಹೆಮ್ಮೆಯ ಕವಿ ಕುವೆಂಪುರವರ `ನೇಗಿಲಯೋಗಿ’ ಪದ್ಯ ನೆನಪಾಗದೆ ಇರದು. ಎರಡನೇ ಮತ್ತು ಪುಸ್ತಕದ ಶೀರ್ಷಿಕೆಯ ಕವಿತೆಯಾದ `ಬುಡಬುಡಿಕೆ’. ಇದು ಒಂದು ಜನಾಂಗದ ಕುಲಕಸುಬು ಅಥವಾ ವೃತ್ತಿಧರ್ಮವಾಗಿ ಬೆಳೆದು ಬಂದ ಒಂದು ಬಿಕ್ಷೆ ಬೇಡುವ ಪ್ರಾಕಾರ. ಕವಿ ಹೇಳಿರುವಂತೆ ಪದ್ಯದಲ್ಲಿ.. ಬೆಳದಿಂಗಳಿನಿಂದ ಬೆಳಗುವ ಇರುಳು, ನೋಯಿಸಿಕೊಂಡು ಬಡಿಯುತ ಬೆರಳು, ಮನಸಿಗೆ ನೆಮ್ಮದಿ ನೀಡುತ ಕೊರಳು, ಬಿಚ್ಚಿಟ್ಟಿರುವನು ತನ್ನಯ ಕರಳು, ಇಲ್ಲದಿದ್ದರೂ ಏನೇ ತಿರುಳು, ಹೇಳುವನಿವ ಬುಡಮಟ್ಟದ ಸುಳ್ಳು…..’ ಎಂದಿದ್ದಾರೆ.

ಕಲಿಗಾಲ ಹುಟ್ಟಿದಾಗಲೇ ಸುಳ್ಳು ಹುಟ್ಟಿಯಾಗಿದೆ. ಹೊಟ್ಟೆಗಾಗಿ ನಾನಾ ವೇಷ. ಉದರನಿಮಿತ್ತಮ್ ಬಹುಕೃತವೇಷಮ್ ಎಂಬಂತಾಗಿದೆ. ನಮ್ಮ ನಾಡಿನ ದಾಸರಾದ ಕನಕದಾಸರೂ ಸಹ ಹೇಳಿಲ್ಲವೇ ` ಎಲ್ಲಾರೂ ಮಾಡುವುದು ಹೊಟ್ಟೆಗಾಗಿ’ ಎಂದು?

ಹಾವು ಮತ್ತು ನಾವು ೧-೨ ಭಾಗವಿರುವ ದೀರ್ಘ ಕವಿತೆಯಾಗಿದೆ. ಸೃಷ್ಠಿಯ ಸುಂದರ ಜೀವಿಗಳಲ್ಲೊಂದಾದ ಹಾವಿನ ಬಗೆಗೆ ಇಲ್ಲಸಲ್ಲದ ಊಹೆಗಳು ಮೂಢನಂಬಿಕೆಗಳು ನಮ್ಮ ಜನರಲ್ಲಿವೆ. ಕೆಲವು ಭಯ ಹುಟ್ಟಿಸುವ ನಂಬಿಕೆಗಳಿವೆ ಅವನ್ನು ಈ ಪದ್ಯದಲ್ಲಿ ಕವಿ ಸಾರಾಸಗಾಟಾಗಿ ತಳ್ಳಿಹಾಕಿ ಮಕ್ಕಳಲ್ಲಿ ವೈಜ್ಞಾನಿಕತೆಯನ್ನು ಬಿತ್ತುವ ಸಾಲುಗಳಿವೆ.

ಈ ಪದ್ಯವು ವಚನಕಾರರಾದ ಬಸವಣ್ಣನವರ ವಚನ `ಕಲ್ಲನಾಗರ ಕಂಡರೆ ಹಾಲನೆರೆ ಎಂಬರು, ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ’ ಎಂದು ೧೨ನೆ ಶತಮಾನದಲ್ಲೇ ಹೇಳಿದ ವಿಷಯವನ್ನು ನೆನೆಯಬಹುದು.

ನಮ್ಮ ಯುವ ಜನತೆಯನ್ನು ಹಾಳುಮಾಡುತ್ತಿರುವ ಮಾರಕಚಟಗಳಾದ ತಂಬಾಕು, ಬೀಡಿ, ಸಿಗರೇಟು, ಗುಟ್ಕಾ, ಸೆರೆ, ಸಾರಾಯಿ, ನಶ್ಯದ ಚಟಗಳಿಗೆ ಚಟ್ಟವನ್ನು ಕಟ್ಟುವ ಹಠ ತೊಡಬೇಕು ಎಂದು ಗೀತೆಯ ಮೂಲಕ ಸಮಾಜಕ್ಕೆ ಜಾಗೃತಿ ಮೂಡಿಸಿದ್ದಾರೆ. `ಅನ್ನ’ ಎಂಬ ಕವಿತೆ ಅನ್ನದ ರುಚಿರುಚಿ ಭಕ್ಷ್ಯಗಳು ಮತ್ತು ಅದನ್ನು ತಿಂದು ಹೆಸರುಗಳಿಸಿದ ಬಕಾಸುರ, ಭೀಮರನ್ನು ಪರಿಚಯ ಒಳಗೊಂಡ ಹಾಸ್ಯಗೀತೆಯಾಗಿದೆ.

ಮುಂದೆ `ಆಕಾಶ’, `ಹುಂಜ’, `ಅಂದಿನ ಮಗು-ಇಂದಿನ ಮಗು’ `ವೃಕ್ಷ ಮಾತೆ’, `ತಾಯಿ ಮತ್ತು ಮಗು’, ಪೊರಕೆಯ ಹರಕೆ, `ಜಿಪುಣರು’, ಬೆಳದಿಂಗಳ ಹಾಲು’, `ದಾರೀಲು ಹೋಗೋ ಮಾರಿ’, `ಕೂಗು ಮಾರಿ’, ರಾತ್ರಿ’ ಮುಂತಾದವು. ಇವುಗಳಲ್ಲಿ ಹುಂಜ ಹಿಂದೆ ಜಗತ್ತಿನ ಅಲಾರಮ್ ಅದೇ ಆಗಿತ್ತು. ಆದರೆ ಈಗ ನಾಟಿ ಕೋಳಿಗಳು ಮಾಯವಾಗಿ ಫಾರಂ ಕೋಳಿಗಳು ಕೂಗದ ವಿಷಯ ಮತ್ತು ಗಡಿಯಾರದ ಅಲಾರಮ್ ಗೆ ಮನುಷ್ಯ ಹೊಂದಿಕೊಂಡ ಬವಣೆ ವಿವರಿಸಿದ್ದಾರೆ.

ಇವುಗಳಲ್ಲಿ ವಿಶೇಷವಾದದ್ದೆಂದರೆ `ಕೂಗು ಮಾರಿ’ ಮತ್ತು `ದಾರೀಲಿ ಹೋಗೋ ಮಾರಿ’ ಎಂಬ ಕವಿತೆಗಳು ಕೂಗು ಮಾರಿಯಲ್ಲಿ `ನಾಳೇ ಬಾ’ ಎಂದು ಹಳ್ಳಿಗಳಲ್ಲಿ ಬಾಗಿಲ ಮೇಲೆ ಬರೆದು ರೋಗ ಅಥವಾ ಸಾವನ್ನು ತಡೆಯಲು ಈ ಮೂಢನಂಬಿಕೆಯನ್ನು ಹಳ್ಳಿಗರು ಕಂಡುಕೊಂಡ ಉಪಾಯವಾಗಿತ್ತು.

ಅದರ ಬಗ್ಗೆ ಯೋಚಿಸಿರುವ ಕವಿ ಇದಕ್ಕೆ ಯಾವುದೇ ಸಾಕ್ಷö್ಯಪುರಾವೆಗಳಿಲ್ಲ ಇದೊಂದು ಅವೈಜ್ಞಾನಿಕ ನಂಬಿಕೆ ಎಂದು ತಿಳಿಸಿದ್ದಾರೆ. ಮತ್ತು ಅದರ ಸವಾಲಿಗೆ ತಿರುಗೇಟಿನಂತೆ ಸ್ವಚ್ಛತೆಯನ್ನು ಕಾಪಾಡಿಕೊಂಡು ನಾವು ಆರೋಗ್ಯ ಕಾಪಾಡುವ ಜಾಗೃತಿಯನ್ನು `ದಾರೀಲಿ ಹೋಗೋ ಮಾರಿ’ ಎಂಬ ಕವಿತೆಯಲ್ಲಿ ಆರೋಗ್ಯಕ್ಕೆ ಹಾನಿಯುಂಟುಮಾಡುವ ಸೂಕ್ಷ್ಮ ಜೀವಿಗಳಾದ ಕೀಟಗಳಾದ ಸೊಳ್ಳೆ, ನೊಣ, ಇರುವೆ, ಗೊದ್ದಗಳಿಗೆ `ನಾಳೆ ಬಾ’ ಎಂಬ ಫಲಕ ಹಾಕೋಣ ಎಂದು ಮಕ್ಕಳ ಎಳೆ ಮನಸ್ಸಿಗೆ ನಾಟುವಂತೆ ಬರೆದಿದ್ದಾರೆ.

`ಮಂಗಳ ಗ್ರಹ’, ಗಾಳಿ ಆಲಿಕೆ’ ಇವು ಪ್ರಕೃತಿಯ ಬಗ್ಗೆ ಮೂಡುವ ಕುತೂಹಲ ಮತ್ತು ಪ್ರಕೃತಿಯ ವೈಶಿಷ್ಟ್ಯಗಳನ್ನು ತಿಳಿಸುವ ಕವಿತೆಗಳಾಗಿವೆ. ಮುಂದೆ ಉಪವಾಸ ಪದ್ಯವು ಹಾಸ್ಯಗವನವಾಗಿದೆ. ಈ ಕವಿತೆ ಬಿಆರ್ ಲಕ್ಷ್ಮಣರಾವ್ ಅವರು ಬರೆದ `ಆಚೆ ಮನೆಯ ಸುಬ್ಬಮ್ಮನಿಗೆ ಏಕಾದಶಿ ಉಪವಾಸ’ದಂತೆ ಓದುಗರನ್ನು ನಗೆಗಡಲಲಿ ತೇಲಿಸುತ್ತದೆ. ‌

ದುಡಿಮೆಯ ಸಂಪತ್ತು' ಇದು ಎಲ್ಲಾ ಜೀವಿಗಳೂ ದುಡಿಯುವುದನ್ನು ನಿರೂಪಣೆಯ ಮೂಲಕ ಹೇಳುತ್ತಾ ತಾನು ಏನೂ ಮಾಡದೆ ಕಾಲ ಕಳೆದೆ.. ಕಾಲವೆಂಬುದು ಅಮೂಲ್ಯವಾದದ್ದು ಎಂದು ತಿಳಿಸುತ್ತದೆ. ಶುಚಿತ್ವದ ಪಾಠ', ನಮ್ಮ ಮನೆಯ ಬೆಕ್ಕು, ತುಂಟ ಪುಟ್ಟ ಮಕ್ಕಳಿಗೆ ಹಿತವಾಗಿವೆ ಓದಲು. ಆಸೆಯೇ ದುಃಖಕ್ಕೆ ಮೂಲ ಎಂಬ ನಾಣ್ಣುಡಿಯನ್ನುಆಸೆ’ಎಂಬ ಕಥನಕಾವ್ಯ ತಿಳಿಸುತ್ತದೆ.

ಲೇಖಕರು ಇಲ್ಲಿನ ಕವಿತೆಗಳಲ್ಲಿ ಮಾವು, ಹಲಸು, ಬೆಕ್ಕು, ನಾಯಿ, ಇಲಿ,ದಿನಕರ, ಬಿಂಬ,ಕೋಳಿ,ಹುಲಿ, ಇರುವೆ, ಮರ , ಹಾವು ಇಂತಹವನ್ನೆಲ್ಲಾ ಆರಿಸಿಕೊಂಡು ಮಕ್ಕಳಿಗೆ ಇಷ್ಟವಾಗುವ ವಿಷಯಗಳ ಬಗ್ಗೆಯೇ ಬರೆದಿದ್ದಾರೆ. ಇಂದು ಇಂಗ್ಲೀಷ್ ವಿದ್ಯಾಭ್ಯಾಸ ಪದ್ಧತಿಯಿಂದ ಮಕ್ಕಳಿಗೆ ಸಮಯದ ಅಭಾವವಿದೆ. ಮಕ್ಕಳು ನಿಜವಾಗಲೂ ಕನ್ನಡ ಪದ್ಯಗಳಿಂದ ಸಂಸ್ಕೃತಿಗಳಿಂದ ದೂರವಾಗುತ್ತಿದ್ದಾರೆ. ಹಿಂದೆ ತಾಯಂದಿರು ಲಾಲಿ ಹಾಡುತ್ತಿದ್ದರು, ಅಜ್ಜ ಅಜ್ಜಿಯರು ಜಾನಪದ ಕಥೆ, ಕಥನಗೀತೆಗಳನ್ನು ಸಂಪ್ರದಾಯ ಹಾಡುಗಳನ್ನು ಹೇಳುತ್ತಿದ್ದರು.

ಆದರೆ ಆಧುನಿಕತೆಯ ಹೊಡೆತಕ್ಕೆ ಸಿಲುಕಿ ಇವುಗಳ ಜಾಗದಲ್ಲಿ ಇಂಗ್ಲೀಷ್ ರೈಮ್ಸ್, ಪದ್ಯಗಳ ಪುಸ್ತಕ, ಸಿ.ಡಿ.ಗಳು ಅರ್ಥವಾಗದ ಭಾಷೆಯು ಮಗು ಮಾತು ಕಲಿಯುವ ಮುನ್ನವೇ ಕೇಳಿಸಿಕೊಳ್ಳುವ ದುರ್ಗತಿಯಲ್ಲಿ ನಾವಿದ್ದೇವೆ. ಇಂತಹ ಸಂದರ್ಭದಲ್ಲಿ ಮಕ್ಕಳ ಸಾಹಿತ್ಯವನ್ನು ಬರೆಯುವ ಹೆಜ್ಜೆಯನ್ನಿಟ್ಟಿರುವ ಯುವ ಲೇಖಕರು ಲೇಖಕಿಯರಿಗೆ ಗೆಲುವು ಸಿಗಬೇಕೆಂದರೆ ಸಾಹಿತ್ಯ ಲೋಕದಲ್ಲಿನ ಮಕ್ಕಳ ಸಾಹಿತ್ಯವು ಸಿ.ಡಿ. ರೂಪದಲ್ಲಿ ಸಂಗೀತದೊಡನೆ ಮನೆ ಮನೆಗೆ, ಮಕ್ಕಳಿಗೆ ತಲುಪಿಸುವ ಕೆಲಸವಾಗಬೇಕಿದೆ.

`ಬುಡಬುಡಕೆ’ ಸಂಕಲನದ ಕವಿತೆಗಳು ಹಾಡಲು ಸುಲಭವಾಗಿವೆ. ಮಕ್ಕಳ ಸಾಹಿತ್ಯದ ಬಹು ಮುಖ್ಯ ಲಕ್ಷಣವೆಂದರೆ ಸರಳತೆ ಮತ್ತು ಪ್ರಾಸಬದ್ಧವಾಗಿರಬೇಕು. ಲೇಖಕರು ಬಹುಮಟ್ಟಿಗೆ ಆ ತತ್ವಕ್ಕೆ ಬದ್ಧರಾಗಿದ್ದಾರೆ ಎಂದು ನನ್ನ ಅನಿಸಿಕೆ.

‍ಲೇಖಕರು Avadhi

November 1, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: