ʼತಿರುಗಾಡಿʼಯ ಫೋಟೋಗ್ರಫಿ ಬತ್ತಳಿಕೆಯಿಂದ…

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ.

ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಮಹಿಳಾ ಸ್ವಾವಲಂಬನೆ ವಿಭಾಗದಲ್ಲಿ ಗ್ರಾಮೀಣ ಮಹಿಳೆಯರಿಗೆ ಕಲಾ ತರಬೇತಿ ನೀಡುತ್ತಿರುವುದು ತೃಪ್ತಿಕೊಟ್ಟಿದೆ.

ತಿರುಗಾಟಹುಚ್ಚು. ಸ್ಟ್ರೆಂತೂ, ವೀಕ್ನೆಸ್ಸುಗಳೆರಡೂ ಹಿಮಾಲಯವೇ. ಬದುಕಿನ ಚಿಕ್ಕ ಚಿಕ್ಕ ಸಂಗತಿಗಳು ಕ್ಯಾಮೆರಾ ಫ್ರೇಮಿನೊಳಗೆ ಇಳಿವಾಗ ಅವುಗಳು ರೂಪಾಂತರ ಹೊಂದುವ ಅದ್ಭುತ ಸಾಧ್ಯತೆಗಳ ಬಗ್ಗೆ ಸದಾ ಬೆರಗು.

ಒಮ್ಮೆ ಹೀಗಾಯಿತು. ಗುಜರಾತಿನ ಅದ್ಯಾವುದೋ ರಸ್ತೆಯಲ್ಲಿ ಹೋಗುತ್ತಿದ್ದೆವು. ಇಳಿಜಾರಿನ ರಸ್ತೆ ಮತ್ತೆ ಅಚಾನಕ್ಕಾಗಿ ಮೇಲೇರಿ ಬಹಳ ಮೋಹಕವಾಗಿ ಬಳುಕಿ ದೂರದಲ್ಲಿ ಆಗಸದೊಂದಿಗೆ ಚುಕ್ಕಿಯಾಗಿ ಒಂದಾಗುವಂತೆ ಕಾಣುತ್ತಿತ್ತು. ಎರಡೂ ಬದಿಯಲ್ಲಿ ಹಸಿರೋ ಹಸಿರು. ಮಧ್ಯದಲ್ಲಿ ಹೊಸದಾಗಿ ಹಾಕಿದ ಗುಂಡಿಗಳಿಲ್ಲದ ಡಾಂಬರು.

ಈ ಕರಿ ಡಾಂಬರೇ ನೀಲಿಯಾಗುತ್ತಾ ಸಾಗಿ ಆಗಸಕ್ಕೆಲ್ಲ ನೀಲಿ ಬಣ್ಣ ಕೊಟ್ಟಿತಾ ಅನ್ನಿಸುವ ಹಾಗೆ ದಾರಿಯೂ ಆಗಸವೂ ಒಂದಾಗಿ ಬಿಟ್ಟಿದ್ದವು. ಅಲ್ಲಲ್ಲಿ ಯದ್ವಾತದ್ವ ಚೆಲ್ಲಿದ ಬೆಳ್ಳಿಮೋಡವೂ ಸೇರಿ, ಯಾರೋ ಬೇಕೆಂದೇ ಹೇಳಿ ಮಾಡಿಸಿದಂಥ ಚಿತ್ರದಂತಿತ್ತು. ಇಂಥದ್ದೊಂದು ಚಂದದ ಫ್ರೇಮು ಕಂಡರೆ ಬಿಡೋದು ಹೇಗೆ ಅನ್ನುತ್ತಾ ಕಾರಿಳಿದೇ ತೆಗೆಯೋಣವೆಂದು ಕ್ಯಾಮರಾ ಹಿಡಿದು ನಿಂತೆ. ಅಷ್ಟರಲ್ಲಿ ಈ ಖಾಲಿ ಫ್ರೇಮನ್ನು ಚಿತ್ರಕಾವ್ಯವಾಗಿಸಲೇ ಬಂದವರಂತೆ ಇಬ್ಬರು ಹೆಂಗಸರು ದೂರದಲ್ಲಿ ನಡೆದು ಬರೋದು ಕಾಣಿಸಿತು. ಕಡುಕೆಂಪು ಲಂಗದಾವಣಿ, ಮುಖ ಮುಕ್ಕಾಲು ಮುಚ್ಚಿದ ಸೆರಗು, ಅಪ್ಪಟ ಸಾಂಪ್ರದಾಯಿಕ ಕಚ್‌ ಪ್ರದೇಶದ ಉಡುಗೆ.

ನಾನು ಕಾಯುತ್ತಿದ್ದುದು ಇದಕ್ಕೇನೇ ಎಂಬಂತೆ ಅಚಾನಕ್ಕಾಗಿ ಪ್ರತ್ಯಕ್ಷವಾದಾಗ ಆ ಇಡೀ ಫ್ರೇಮಿಗೊಂದು ಶಕ್ತಿ ಬಂತು ಅಂದುಕೊಂಡು ಅವರು ಇನ್ನೂ ಸ್ವಲ್ಪ ಮುಂದೆ ಬರಲಿ ಎಂದುಕೊಳ್ಳುತ್ತಾ ಅಲ್ಲೇ ನಿಂತೆ. ಇನ್ನೇನು ಕ್ಲಿಕ್‌ ಮಾಡಿಬಿಡಬೇಕು ಎನ್ನುವಷ್ಟರಲ್ಲಿ ಆ ಕಡೆಯಿಂದೊಂದು ದನ ಈ ಕಡೆಯಿಂದೊಂದು ದನ ಅಡ್ಡ ಬಂದವು. ಛೇ, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ವಲ್ಲ ಎಂದು ಅಂದುಕೊಳ್ಳುತ್ತಾ ನಿಂತಿರಬೇಕಾದರೆ, ಇನ್ನೂ ಮುಂದೆ ಬಂದ ಆ ಇಬ್ಬರಿಗೂ ನಾನು ಅವರ ಫೋಟೋಗಾಗಿಯೇ ನಿಂತಿದ್ದು ಅಂತ ಗೊತ್ತಾಗಿಬಿಟ್ಟು ಸೆರಗನ್ನು ಇನ್ನೂ ಹೊದ್ದುಕೊಳ್ಳುತ್ತಾ ಅಲ್ಲೇ ನಿಂತುಬಿಟ್ಟರು.

ಇನ್ನು ಈ ಫೋಟೋ ಸಾಧ್ಯವಿಲ್ಲ, ಅವರು ಹೋಗಿಬಿಡಲಿ, ಆ ಮೇಲೆ, ಖಾಲಿ ಹಾದಿಯದ್ದೇ ತೆಗೆದರಾಯಿತು ಎಂದು ನಾನು ದೃಷ್ಟಿ ಬದಲಾಯಿಸಿ ಈ ಕಡೆಗೆ ತಿರುಗಿ ಕ್ಯಾಮರಾದೊಂದಿಗೆ ಅಲ್ಲೇ ನಿಂತಿದ್ದೆ. ನನ್ನ ಮನಸ್ಸಿನ ಲೆಕ್ಕಾಚಾರ ಅವರಿಗಾದರೂ ಹೇಗೆ ಅರ್ಥವಾಗಬೇಕು. ಆದರೆ ನಾನು ಅಲುಗಾಡದ ಹೊರತು ತಾವೂ ಅಲುಗಾಡಬಾರದು ಅಂದುಕೊಂಡರೇನೋ, ಅವರು ಮಾತ್ರ ಅಲ್ಲಿಂದ ಕದಲಲಿಲ್ಲ. ನನಗೆ ಇನ್ನೂ ಕುತೂಹಲ ಹುಟ್ಟಿ, ನಾನೂ ಅಲ್ಲಿಂದ ಕದಲಲಿಲ್ಲ.

ಸ್ವಲ್ಪ ಹೊತ್ತು ನಿಂತ ಅವರು ನನ್ನ ನೋಡಿ ಮುಖ ಮುಚ್ಚಿಕೊಂಡೇ ನನಗೆ ಶಾಪ ಹಾಕುತ್ತಾ ಏನೇನೋ ಬೈಯುತ್ತಾ ನನ್ನನ್ನು ದಾಟಿಕೊಂಡೇ ಮುಂದೆ ಹೋದರು. ಅವರು ಬೈದರೂ ನಾನು ಮಾತ್ರ ನಗುತ್ತಾ, ನನಗೆ ಗುಜರಾತಿ ಬಾರದೇ ಇರೋದು ಎಷ್ಟು ಒಳ್ಳೇದಾಯಿತು ಎಂದುಕೊಳ್ಳುತ್ತಾ ಕಾರು ಹತ್ತಿದೆ. ನನ್ನ ಜಾಗದಲ್ಲಿ ಯಾರಾದ್ರೂ ಹುಡುಗರಿದ್ರೆ ಖಂಡಿತ ಒದೆ ತಿಂತಿದ್ರೇನೋ!

* * * *

ಈ ಸ್ಟ್ರೀಟ್‌/ಕ್ಯಾಂಡಿಡ್/ಟ್ರಾವೆಲ್ ಫೋಟೋಗ್ರಫಿ ಎಂಬ ವಿಭಾಗವೇ ಹಾಗೆ. ಸುತ್ತಮುತ್ತಲನ್ನು ಸೂಕ್ಷ್ಮವಾಗಿ ಗಮನಿಸುವ ಕಣ್ಣು ಛಾಯಾಗ್ರಾಹಕನಿಗೆ ಇರಬೇಕಾದ್ದು ಮಾತ್ರವಲ್ಲ. ಕಂಡ ಭಾವ-ಕಥೆಗೆ ಕೂಡಲೇ ಚೌಕಟ್ಟನ್ನು ನೀಡುವ ಚಾಕಚಕ್ಯತೆಯೂ ಬೇಕು. ಅಪರಿಚಿತರ ಫೋಟೋಗಳನ್ನು ಅವರ ಅರಿವಿಗೆ ಬಾರದಂತೆ ಸೆರೆಹಿಡಿಯುವ ಕಲೆ ಅಂದುಕೊಂಡಂತೆ ಸುಲಭದ್ದಲ್ಲ. ಕೆಲವೊಮ್ಮೆ ಅಚಾನಕ್ಕಾಗಿ ಅದ್ಭುತ ಫೋಟೋಗಳು ಸಿಕ್ಕಿಬಿಡುತ್ತವೆ. ಕೆಲವೊಮ್ಮೆ ಚಿತ್ರಕ್ಕಾಗಿ ಕಾಯಬೇಕಾಗುತ್ತದೆ. ಇನ್ನೂ ಕೆಲವೊಮ್ಮೆ ಎಷ್ಟು ಕಾದರೂ ದಕ್ಕದೆ ನಿರಾಸೆಯಿಂದಲೇ ಬರಬೇಕಾಗುತ್ತದೆ. ಅದರಲ್ಲೂ ಸಣ್ಣ ವಯಸ್ಸಿನ ಮಹಿಳೆಯರು/ಹುಡುಗಿಯರಿದ್ದ ಕಡೆ ಕ್ಯಾಮರಾ ಹಿಡಿಯುವುದು ಇನ್ನೂ ಕಷ್ಟ. ಇಂತಹ ಸೂಕ್ಷ್ಮಗಳನ್ನು ಗಮನದಲ್ಲಿಟ್ಟುಕೊಂಡೇ ಹುಡುಕಾಟ ಇರಬೇಕಾಗುತ್ತದೆ.

ತಿರುಗಾಟ, ಹೊಸ ಊರು/ನಗರ, ಹೊಸ ಮುಖಗಳು, ಅಲ್ಲಿನ ಜನಜೀವನ, ಆಹಾರ, ಸಂಸ್ಕೃತಿ ಇವೆಲ್ಲವುಗಳು ಚಿತ್ರಗಳ ಮೂಲಕ ಹೇಳುವ ಕಥೆಗಳೇ ಹಾಗೆ. ಇದಕ್ಕೊಂದು ಬೇರೆಯದ್ದೇ ರುಚಿಯೂ ಬೇಕು. ವಿಚಿತ್ರವೆಂದರೆ, ಕೆಲವು ಊರುಗಳು/ನಗರಗಳು ಛಾಯಾಗ್ರಹಣ ಸ್ನೇಹಿಯಾಗಿರುತ್ತವೆ. ಅಲ್ಲಿನ ಜನರಿಗೆ ಜನರು ಹೀಗೆ ಫೋಟೋ ತೆಗೆಯುವುದು ಎಷ್ಟು ಅಭ್ಯಾಸವಾಗಿಬಿಟ್ಟಿರುತ್ತದೆಯೆಂದರೆ, ಅಷ್ಟಾಗಿ ಯಾರೂ ತಲೆ ಕೆಡಿಸುವುದಿಲ್ಲ. ಅವರಾಯಿತು, ಅವರ ಕೆಲಸವಾಯಿತು ಎಂಬಂತೆ ಇದ್ದುಬಿಡುತ್ತಾರೆ.

ಇಂಥ ಊರುಗಳು ದಕ್ಕುವುದು ಛಾಯಾಗ್ರಾಹಕರಿಗೆ ಹಬ್ಬ. ಆದರೆ ಇನ್ನೂ ಕೆಲವು ಜಾಗಗಳಲ್ಲಿ ಬಹಳ ಜಾಗರೂಕತೆ ವಹಿಸಬೇಕಾಗುತ್ತದೆ. ಕ್ಯಾಮರಾ ಎತ್ತಿದ್ದು ಕಂಡರೇ ಜನ ಓಡಿಬಿಡುತ್ತಾರೆ. ಇನ್ನೂ ಕೆಲವು ಊರುಗಳ ಹಿನ್ನೆಲೆಯೇ ಭಯ ಹುಟ್ಟಿಸುವಂತೆಯೇ ಇರುತ್ತದೆ. ಇಲ್ಲಿ, ಜನರು ಓಡುವುದಲ್ಲ, ಛಾಯಾಗ್ರಾಹಕರೇ ಪರಿಸ್ಥಿತಿ ಗಮನಿಸಿ ಕ್ಯಾಮರಾ ಎತ್ತಿಕೊಳ್ಳಬೇಕಾಗುತ್ತದೆ. ಹೀಗಾಗಿ ಎದುರಿಗಿರುವ ಸಂದರ್ಭದ ನಾಡಿಮಿಡಿತ ಅರ್ಥೈಸಿಕೊಳ್ಳುವುದೂ ಛಾಯಾಗ್ರಾಹಕರಿಗೆ ಬಹುಮುಖ್ಯ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಕಷ್ಟ ಛಾಯಾಗ್ರಾಹಕರಿಗೇ.

ಬಹಳಷ್ಟು ಜನರ ವಾದವಿದೆ. ಅನುಮತಿ ಇಲ್ಲದೆ ಹಿಂಗೆಲ್ಲ ರಸ್ತೆ ಮಧ್ಯೆ ಯಾರ್ಯಾರದ್ದೋ ಫೋಟೋ ತೆಗೆಯೋದು ಸರೀನಾ? ಎಂಬುದು. ಈ ಜಿಜ್ಞಾಸೆ ಇಂದು ನಿನ್ನೆಯದಲ್ಲ. ನಾನೂ ಕೆಲವೊಮ್ಮೆ ಯೋಚನೆ ಮಾಡಿದ್ದಿದೆ. ಇಂತಹ ತಪ್ಪು ಒಪ್ಪುಗಳ ಧರ್ಮ ಸಂಕಟ ಬಂದಾಗಲೆಲ್ಲ ನಾನು ನನ್ನನ್ನು ಮೊದಲು ಆ ಜಾಗದಲ್ಲಿಟ್ಟು ನೋಡಿ ಬಿಡುತ್ತೇನೆ. ನಾನು ಅವರ ಜಾಗದಲ್ಲಿದ್ದರೆ ಹೇಗೆ ಪ್ರತಿಕ್ರಿಯಿಸುತ್ತಿದ್ದೆ ಅಂತ.

ಈ ವಿಚಾರದಲ್ಲೂ ಹಾಗೆಯೇ ಯೋಚನೆ ಮಾಡಿ ಸಂದಿಗ್ಧತೆ ಅನುಭವಿಸಿದ್ದೂ ಇದೆ. ಆದರೆ, ನಿಜ ಹೇಳಬೇಕೆಂದರೆ ಅಲ್ಲಿ ಆ ಹೊತ್ತಿನಲ್ಲಿ ಛಾಯಾಗ್ರಾಹಕರಿಗೆ ಅಲ್ಲಿರೋ ಮುಖಕ್ಕಿಂತ ಆ ಭಾವ, ಫ್ರೇಮು, ಹಿನ್ನೆಲೆ, ತಂತಾನೇ ಸಂಯೋಜನೆಗೊಂಡ ಪಾತ್ರಗಳು ಇವೆಲ್ಲ ಮಾತ್ರ ಮುಖ್ಯವಾಗಿ ಕಂಡಿರುತ್ತದೆ. ಬಹಳಷ್ಟು ಸಾರಿ ಅದ್ಯಾರು ಎಂಬ ಗೊಡವೆಯೂ ಇರುವುದಿಲ್ಲ. ಅರ್ಜುನನಿಗೆ ಹಕ್ಕಿಗೆ ಬಾಣ ಬಿಡಬೇಕಾದಾಗ ಹೇಗೆ ಆ ಹಕ್ಕಿ ಮಾತ್ರ ಕಂಡು ಸುತ್ತಲ ಪರಿಸರ ಕಾಣುವುದೇ ಇಲ್ಲವೋ ಹಾಗೆ.

ಎಲ್ಲವೂ ಒಂದಕ್ಕೊಂದು ಚಿತ್ರಕಾವ್ಯವಾಗಿ ಅಚಾನಕ್ಕಾಗಿ ಕೂಡಿ ಬಂದಾಗಲೇ ಕ್ಲಿಕ್ಕಿಸಬೇಕೆಂದು ಅನಿಸಿರುತ್ತದೆ. ಆ ಮುಖವೂ ಒಟ್ಟಾರೆ ಆ ಕಲಾಕೃತಿಯ ಭಾವವಾಗುತ್ತದೆಯೇ ಹೊರತು ಅಲ್ಲಿ ಅವರ್ಯಾರು ಎಂಬುದು ಮುಖ್ಯವಾಗುವುದಿಲ್ಲ. ಆದರೆ ಕ್ಲಿಕ್ಕಿಸುವವನ/ಳ ಭಾವ ಎದುರಿದ್ದವರಿಗೆ ಹೇಗೆ ಅರ್ಥವಾಗಬೇಕು! ಅಪಾರ್ಥವಾಗುವ ಸಂಭವವೇ ಹೆಚ್ಚು. ಇನ್ನೂ ಕೆಲವರು ಉಚಿತವಾಗಿ ಸಲಹೆ ಕೊಡಲು ಬರುವುದುಂಟು. ಇಂಥ, ಒದ್ದಾಟಗಳೆಲ್ಲ ಯಾಕೆ?, ರಗಳೆ ಇಲ್ಲ ಅನುಮತಿ ತೆಗೊಂಡು ಕ್ಲಿಕ್ಕಿಸಿಬಿಡಿ. ಸರಿಯಪ್ಪ! ಅನುಮತಿ ತೆಗೊಂಡು ಕ್ಲಿಕ್ಕಿಸಿದರೆ ಕ್ಯಾಂಡಿಡ್‌ ಸಿಗುವುದು ಕನಸು. ಮೊದಲು ಸೃಷ್ಟಿಯಾದ ಭಾವ/ಸಂಯೋಜನೆ ಮತ್ತೆ ಸೃಷ್ಠಿಯಾಗುವ ಮಾತೇ ಇಲ್ಲ.  ಹಾಗಾಗಿ ಹೀಗೆ ಸಲಹೆ ಕೊಡುವವರಿಗೆ ಉತ್ತರಿಸುವ ಗೋಜಿಗೆ ಹೋಗದಿರುವುದೇ ಒಳ್ಳೆಯದು.

ತಿರುಗಾಟ ಹಾಗೂ ಛಾಯಾಗ್ರಹಣ ಜೊತೆಗೇ ಸಾಗುವ ಬಂಡಿ. ಈ ತಿರುಗಾಟದಲ್ಲಿ ತೆಗೆದ ಒಂದೊಂದು ಚಿತ್ರದ ಹಿಂದೆಯೂ ಒಂದೊಂದು ಕಥೆಯಿರುತ್ತದೆ. ಚಿತ್ರವೇ ಒಂದು ಕಥೆ ಹೇಳಿದರೆ, ಚಿತ್ರದ ಹಿಂದಿನ ಕಥೆ ಬೇರೆಯೇ ಇರುತ್ತದೆ. ಅಂಥದ್ದರಲ್ಲಿ ಕೆಲವು ಇಲ್ಲಿವೆ.

* * * * *

ವಾರಣಾಸಿ ಛಾಯಾಗ್ರಾಹಕರಿಗೆ ಸ್ವರ್ಗ. ಇಲ್ಲಿ ಗ್ರಹಿಸುವ ಕಣ್ಣಿದ್ದರೆ, ಗಲ್ಲಿಗಲ್ಲಿಗೊಂದು ಕಥೆ ಸಿಗುತ್ತದೆ. ನೋಡಿದ್ದೆಲ್ಲಾ ಭಾವ. ನಮ್ಮೊಳಗೆ ಇಳಿದದ್ದೆಲ್ಲಾ ಕಥೆ. ಹೀಗೆ ವಾರಣಾಸಿಯ ಗಲ್ಲಿಗಳಲ್ಲಿ ಕ್ಯಾಮರಾ ಹೊತ್ತು ತಿರುಗಿದರೆ ಸಾಲದು. ಬಹಳ ಜಾಣತನದಿಂದ ತೆಗೆಯೋದಕ್ಕೂ ಗೊತ್ತಿರಬೇಕು. ಇವೆಲ್ಲ ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಮಿಂಚಿ ಮರೆಯಾಗುವ ಭಾವಗಳು, ಕಥೆಗಳು. ಸಂಜೆ ಗಂಗಾರತಿಗೆ ಮೂರ್ನಾಲ್ಕು ಗಂಟೆಗಳಿರುವಾಗಲೇ ಗಲ್ಲಿಗಳಲ್ಲಿ ಬದಲಾಗುವ ಚಿತ್ರಗಳನ್ನು ಗಮನಿಸಬೇಕು. ಜೊತೆಗೆ ಅಲ್ಲಿರುವ ಸಾಧುಗಳನ್ನೂ! ರಸ್ತೆಬದಿಯಲ್ಲೆಲ್ಲೋ ಸಾಧುಗಳು ಕೂತು ಮುಖಕ್ಕೆ ಭಸ್ಮ ಬಳಿಯುವುದರಿಂದ ಹಿಡಿದು, ಭಿಕ್ಷೆ ಬೇಡುವ ಶಿವ ಪಾತ್ರಧಾರಿ ಮಕ್ಕಳವರೆಗೆ ನಾನಾ ಕಥೆಗಳು ಮೂಲೆ ಮೂಲೆಗಳಲ್ಲಿ ಮೌನವಾಗಿ ತೆರೆದುತೊಡಗುತ್ತವೆ.

ಹಾಗಂತ ಇವರ ಫೋಟೋ ಹೊಡೆಯುವುದು ಮಾತ್ರ ಅಷ್ಟು ಸುಲಭವಲ್ಲ. ಒಂದೋ ಸ್ವಲ್ಪ ದೂರದಿಂದಲೇ ಅವರಿಗೆ ಗೊತ್ತಾಗದಂತೆ ಸೆರೆಹಿಡಿಯಬೇಕು. ಗೊತ್ತಾದರೆ, ಉಳಿಗಾಲವಿಲ್ಲ. ಒಂದೋ ಹಣ ಕೊಡಬೇಕು. ಸರಿ, ತಿಳಿಸಿಯೇ ಫೋಟೋ ತೆಗೆಯೋಣ ಎಂದು ನೋಟು ಕೊಟ್ಟರೂ ನಮಗೆ ಬೇಕಾದ ಫೋಟೋ ಸಿಗೋದಿಲ್ಲ. ಸ್ಟುಡಿಯೋಗೆ ಹೋಗಿ ಪಾಸ್‌ಪೋರ್ಟಿಗೆ ಕ್ಲಿಕ್ಕಿಸಿದಂತೆ ಆಗುತ್ತದೆ ಅಷ್ಟೇ.

ಹೀಗೆಯೇ ಇಂಥ ಚಿತ್ರಕಥೆಗಳ ಹುಡುಕಾಟದಲ್ಲಿ ಅಡ್ಡಾಡುತ್ತಿದ್ದಾಗ ಸಾಧುವೊಬ್ಬರು ದಂಡೆಯ ಬಳಿ ಕೂತಿದ್ದು ಕಂಡಿತು. ನನಗೆ ಈ ಸಾಧುಗಳ ಫೋಟೋ ತೆಗೆವ ರಿಸ್ಕಿನ ಬಗ್ಗೆ ಒಂದು ಮಟ್ಟಿನ ಅಂದಾಜಿತ್ತು. ಆದರೂ ಕ್ಯಾಮರಾ ಎತ್ತಿದೆ. ಸ್ವಲ್ಪ ದೂರವೇ ಅಂತರ ಕಾಯ್ದುಕೊಂಡು ಒಂದೆರಡು ಕ್ಲಿಕ್ಕು, ಅಷ್ಟೆ, ಆತ ನನ್ನೆಡೆಗೆ ತಿರುಗಿದ. ಕೆಂಗಣ್ಣು, ಮುಖದಲ್ಲಿ ಕೋಪ ಕಾಣುತ್ತಿತ್ತು. ಹತ್ತಿರ ಕರೆದರು. ಒಳಗಿಂದ ಭಯವಾದರೂ ತೋರಿಸದೆ ಅವರತ್ತ ನಡೆದೆ. ನಮ್ಮ ಫೋಟೋ ತೇಗೀತಿದ್ರಲ್ಲ, ನಮ್ಮ ಕೈಗೆ ಒಂದಿಷ್ಟು ಹಾಕಬೇಕು ಅನಿಸೋದಿಲ್ವಾ ನಿಮ್ಗೆ? ಎಂಬ ಗದರುವ ಧ್ವನಿ. ನಾನು ಮಾತನಾಡದೆ, ವಾದವೂ ಮಾಡದೆ, ಒಂದು ನೋಟನ್ನು ಅವರ ಕೈಗಿತ್ತೆ. ಒಳ್ಳೆಯದಾಗಲಿ, ಜೈ ಭೋಲೇನಾಥ್‌ ಎನ್ನುತ್ತಾ, ಈಗ ತೆಗೀರಿ, ಬೇಕಾದಷ್ಟುʼ ಎಂದು ನಾನಾ ಭಂಗಿಗಳ ಪ್ರದರ್ಶನ ಮಾಡಿದರು. ಆಗ ನನಗವು ಬೇಡವಾಗಿದ್ದರೂ ಅವರ ತೃಪ್ತಿಗಾಗಿ ಒಂದೆರಡು ಕ್ಲಿಕ್ಕಿಸಿ ಮುಂದೆ ನಡೆದೆ.

* * *

ಇನ್ನೂ ಒಂದು ಘಟನೆ ಇಲ್ಲಿ ಹೇಳಲೇಬೇಕು. ಕಾಶ್ಮೀರದ ಶ್ರೀನಗರದ ಗಲ್ಲಿಯೊಂದರಲ್ಲಿ ಯಾವುದೋ ದೇವಾಲಯವೊಂದರ ಅವಶೇಷದ ಹಿಂದೆ ಬಿದ್ದು ಹುಡುಕುತ್ತಾ ಹೋಗಿದ್ದೆವು. ವಾಸ್ತವದಲ್ಲಿ ಕಿರಿದಾಗಿದ್ದ ಆ ಗಲ್ಲಿಯಲ್ಲಿ ಮುಂದೆ ಹೆಜ್ಜೆಯಿಡುತ್ತಾ ಹೋದಂತೆ ಅದರ ʻಆಳ- ಅಗಲʼ ಅರ್ಥವಾಗುತ್ತಾ ಹೋಯಿತು. ಕತ್ತಲೂ ಆಗಿತ್ತು. ಆ ಗಲ್ಲಿಯ ಕಥೆಗಳು ಒಳಗಿಳಿಯುತ್ತಿದ್ದಂತೆಯೇ ಮುಂದುವರಿಯುವುದೋ ಬೇಡವೋ ಎಂಬ ಸಂದಿಗ್ಧತೆಯಲ್ಲಿ ನಾವಿದ್ದಾಗ ಅಲ್ಲೇ ಇದ್ದ ಯಾರೋ ತಡೆದು, ಈ ಸಮಯ ಅಲ್ಲಿ ಹೋಗೋದು ಯೋಗ್ಯವಲ್ಲ ಎಂದೂ ಎಚ್ಚರಿಸಿದರು. ಪುಟ್ಟ ಮಗನೂ ಜೊತೆಗಿದ್ದರಿಂದ ರಿಸ್ಕು ಬೇಡ ಎಂದು ವಾಪಾಸಾದೆವು.

ದಾರಿಯುದ್ದಕ್ಕೂ ಗೋಡೆಗಳಲ್ಲಿ ಮುರ್ದಾಬಾದ್‌ ಘೋಷಣೆಗಳೇ. ಪಾರ್ಕಿಂಗ್‌ ಮಾಡಿದ್ದ ಜಾಗಕ್ಕೆ ತಲುಪಿ ಇನ್ನೇನು ಕಾರು ಹತ್ತಬೇಕು ಅಂದುಕೊಂಡಾಗ ಅಲ್ಲೇ ಸಾಲು ಸಾಲು ಮುಚ್ಚಿದ ಬಾಗಿಲ ಅಂಗಡಿಯ ಬಾಗಿಲ ಮೇಲೆ ಬರೆದಿದ್ದ ಘೋಷಣೆ ನನ್ನ ಗಮನ ಸೆಳೆಯಿತು. ಕೆಳಗೆ ಒಂದಿಷ್ಟು ಗಂಟನ್ನು ಪಕ್ಕದಲ್ಲಿಟ್ಟು ತಲೆಬಗ್ಗಿಸಿ ಕೂತಿದ್ದ ವ್ಯಕ್ತಿ.

ಎಲ್ಲವೂ ಕಾಶ್ಮೀರದ ವಸ್ತು ಸ್ಥಿತಿಯನ್ನು ಹೇಳುತ್ತಿದ್ದಂತೆ ಭಾಸವಾಗಿ ನನ್ನ ಫೋಟೋಗ್ರಾಫರ್‌ ಬುದ್ದಿಯೂ ಹಳೆಯ ಪತ್ರಕರ್ತ ಬುದ್ಧಿಯೂ ಒಮ್ಮಿಂದೊಮ್ಮೆ ಜಾಗೃತವಾಗಿ ಮೆಲ್ಲಗೆ ಸುಮ್ಮನೆ ಮೊಬೈಲು ಎತ್ತಿದೆ. ನಾ ಮೊಬೈಲು ಎತ್ತಿದ್ದೇ ತಡ ಅಲ್ಲಿ ಕೂತಿದ್ದ ವ್ಯಕ್ತಿ ರಪ್ಪನೆ ಎದ್ದ. ಆತ ಎದ್ದ ರಭಸಕ್ಕೆ ನನ್ನ ಕಥೆ ಮುಗೀತು ಅಂತ ನಾನು ಓಡಿದೆ. ಆದರೆ, ಆತನೂ ತನ್ನ ಕಥೆ ಮುಗೀತು ಅಂತ ಅಲ್ಲಿಂದ ಓಡಿ ಬಿಟ್ಟಿದ್ದ! ಕಾರು ಹತ್ತಿದ ಮೇಲೆ ಘಟನೆ ನೆನಪಿಸಿಕೊಂಡು ನಕ್ಕಿದ್ದೇ ನಕ್ಕಿದ್ದು!

* * * * *

ಕಾಶ್ಮೀರದ ಪೆಹೆಲ್ಗಾಂನಲ್ಲಿ ರಸ್ತೆಯಲ್ಲಿ ನಿಂತಿದ್ದೆ. ಕಾಶ್ಮೀರದ ನಯನ ಮನೋಹರ ದೃಶ್ಯಗಳೆಲ್ಲ ಬೇಕಾದಷ್ಟಿದ್ದವು. ಎಲೆಯುದುರುವ ಕಾಲ ಬೇರೆ. ಕಾಶ್ಮೀರ ಹಳದಿಗೆಂಪಿನಲ್ಲಿ ಮಿಂದೆದ್ದಂತೆ ಚಂದ ಕಾಣುತ್ತಿತ್ತು. ಆದರೆ, ಈ ಚಂದದ ಕಾಶ್ಮೀರ ಮಾತ್ರ ನನಗೆ ಬೇಕಿರಲಿಲ್ಲ! ಇನ್ನೊಂದು ಮುಖವೂ ಒಳಗಿಳಿಸಬೇಕಿತ್ತು. ಹಾಗಾಗಿ ಆ ಜನನಿಬಿಡ ರಸ್ತೆಯಲ್ಲಿ ಕಾರಿಳಿದೆ, ಮಗನಿಗೆ ಏನೋ ಖರೀದಿಸುವ ನೆಪವೂ ಇತ್ತು. ಇದೇ ಸಂದರ್ಭ ಮೆಲ್ಲನೆ ಕ್ಯಾಮರಾ ಹೊರತೆಗೆದೆ.

ನಾ ಕ್ಯಾಮರಾ ತೆಗೆದಿದ್ದೇ ತಡ, ನಾವೆಲ್ಲ ಸಣ್ಣವರಿದ್ದಾಗ, ಸರ್ಕಾರಿ ಶಾಲೆ ಎದುರು ಒಂದು ಅಂಬಾಸಿಡರ್ ಕಾರು ನಿಂತರೆ ಸಾಕು, ಪಾಠ ಕೇಳುವುದು ಬಿಟ್ಟು ಕಿಟಕಿಯಿಂದ ಇಣುಕಿ ನೋಡುವಷ್ಟೇ ಕೌತುಕದಿಂದ ನೋಡಲು ಶುರು ಮಾಡಿದರು. ಆ ಮಕ್ಕಳ ಭಾವ ಭಂಗಿ ದಿರಿಸು ಎಲ್ಲ ಕ್ಯಾಮರಾದೊಳಗಿಳಿಸುತ್ತಿದ್ದಂತೆ, ಈ ಬದಿಯಲ್ಲಿ ಯುವಕನೊಬ್ಬ ಇನ್ನೊಬ್ಬನೊಂದಿಗೆ ಮಾತನಾಡುತ್ತಾ ಕಾಶ್ಮೀರಿ ದಿರಿಸಲ್ಲಿ ನಿಂತಿದ್ದು ಕಾಣಿಸಿತು. ಆತ ನಿಂತಿದ್ದ ಭಂಗಿ, ಹಿನ್ನೆಲೆ ಎಲ್ಲ ಸೊಗಸಾಗಿ ಕಂಡು ನನ್ನ ಕ್ಯಾಮರಾ ಸಹಜವಾಗಿಯೇ ಕ್ಲಿಕ್ಕಾಯಿತು. ಈತ ನನ್ನ ಕಡೆ ತಿರುಗಿ ನೋಡಿದ್ದೂ ನಾನು ಕ್ಲಿಕ್ಕಿಸಿದ್ದೂ ಸರಿ ಹೋಯಿತು.

ಅಲ್ಲಿಂದ ಶುರುವಾಯಿತು ಕಥೆ. ನಾನೇನೋ ಆತನ ಸುದ್ದಿ ಬಿಟ್ಟೆ, ಆದರೆ, ಆತ ಬಿಡಬೇಕಲ್ಲ! ನನ್ನನ್ನೇ ಗಮನಿಸುತ್ತಾ, ನನ್ನ ನೋಡಿ ನಗುತ್ತಾ ಅಲ್ಲೇ ಆಚೀಚೆ ತಿರುಗಾಡತೊಡಗಿದ. ನಾನು ಇನ್ನೂ ಪೆಚ್ಚಾಗಿ, ಇದೊಳ್ಳೆ ಹಣೆಬರಹವಾಯ್ತಲ್ಲ, ಇನ್ನು ಈ ಯುವಕರ ಸುದ್ದಿ ಬೇಡಪ್ಪಾ ಎಂದು ಮತ್ತೆ ಮಕ್ಕಳ ಕಡೆ ತಿರುಗಿದೆ. ಹೇಗೋ ತಪ್ಪಿಸಿಕೊಂಡು ಬಂದು ಮತ್ತೆ ಕಾರು ಹತ್ತಿ ಆಗಿತ್ತು. ಮಹೇಶ, ಮೆಲ್ಲನೆ ಪೀಠಿಕೆ ಹಾಕಿದ. ʻನೀ ಅಲ್ಲಿ ಆ ಯುವಕನ ಫೋಟೋ ತೆಗಿದ್ಯಾ?ʼ ʻಹುಂʼ ಅಂದೆ. ಆತ ನನ್ನ ಬಳಿ ಬಂದು, ʻನೋಡಿ, ನಿಮ್ಮ ಹೆಂಡ್ತಿ ನನ್ನ ಫೋಟೋ ತೆಗ್ದಿದಾರೆ. ಅವರತ್ರಾನೇ ಕೇಳೋಣ ಅದ್ಕೊಂಡೆ, ಸಿಕ್ಲೇ ಇಲ್ಲ ಅವ್ರು. ದಯವಿಟ್ಟು ನನ್ನ ಆ ಫೋಟೋ ಕಳಿಸೋದಕ್ಕೆ ಹೇಳ್ತೀರಾ ಅಂತ ನಂಬರ್‌ ಕೊಟ್ಟು ಹೋಗಿದಾನೆ ನೋಡು. ಕಳಿಸ್ಬಿಡು. ಇದು ನಂಬರುʼ ಅಂದ. ʻಹೌದಾ, ನೀನೇ ಕಳಿಸ್ಬಿಡುʼ ಎಂದು ನಕ್ಕೆ.

* * * *

ಕಾಶ್ಮೀರದ ರಸ್ತೆಗಳಲ್ಲಿ ಫೋಟೋ ತೆಗೆಯೋದು ನಿಜಕ್ಕೂ ಒಂದೊಳ್ಳೆ ಅನುಭವ. ಅಲ್ಲಿ ತಮಾಷೆಯಷ್ಟೇ ಭಯದ ಸನ್ನಿವೇಶವೂ ಎದುರಾಗಿದ್ದು ಮಾತ್ರ ಸತ್ಯ. ಇನ್ನೂ ಹಲವೆಡೆ, ಜನ ತಮಾಷೆಯೆಂಬಂತೆ ನನ್ನನ್ನೂ, ನನ್ನ ಕ್ಯಾಮರಾ ದೃಷ್ಠಿಯನ್ನೂ ಗಮನಿಸಿ, ತಮಾಷೆ ನೋಡಿ, ನಾನು ಯಾವುದರ ಫೋಟೋ ತೆಗೆಯುತ್ತಿರುವೆನೆಂಬ ಲೆಕ್ಕಾಚಾರದಲ್ಲಿ ಸೀದಾ ಹೋಗಿ ನನ್ನೆಡೆ ಕೈತೋರಿಸಿ, ʻನೋಡಿ ಅವರು ಪಾಪ ನಿಮ್ಮ ಫೋಟೋ ತೆಗೆಯಲು ಹೆಣಗಾಡುತ್ತಿರುವರು, ನೀವೊಮ್ಮೆ ಅವರಿಗೆ ಸಹಾಯ ಮಾಡಿ ಅಂತ ನನ್ನ ಸಬ್ಜೆಕ್ಟಿಗೇ ಸೀದಾ ಹೋಗಿ ತುಂಬು ಹೃದಯದಿಂದ ಸಹಾಯ ಮಾಡಲೂ ಪ್ರಯತ್ನಿಸಿದವರಿದ್ದಾರೆ. ಮಜಾ ಎಂದರೆ, ಅವರ ಕಾಳಜಿಗೆ, ʻನೀವು ಸಹಾಯ ಮಾಡಿದ್ದಲ್ಲ, ನನ್ನ ಫೋಟೋ ಹಾಳು ಮಾಡಿಬಿಟ್ಟಿರಿʼ ಎಂದು ಹೇಳಲೂ ಆಗದೆ ಚಡಪಡಿಸಿ, ಕೆಲವೊಂದು ಅದ್ಭುತ ಫ್ರೇಮುಗಳನ್ನು ಕಳೆದುಕೊಂಡಿದ್ದೇನೆ ಕೂಡಾ!

ಒಟ್ಟಾರೆ ಈ ಕ್ಯಾಮರಾ ಎಂಬುದೇ ಒಂದು ಮಾಯೆ. ನಮ್ಮ ಕಣ್ಣಿಂದಲೂ, ಕ್ಯಾಮರಾ ಕಣ್ಣಿಂದಲೂ ಜೊತೆಜೊತೆಗೇ ಜಗತ್ತು ನೋಡುವುದು ಅದೃಷ್ಟ. ಒಮ್ಮೆ ಹಿಂತಿರುಗಿ ನೋಡಿದರೆ, ಬೆನ್ನಿಗಾತುಕೊಂಡ ಕ್ಯಾಮರಾ ಸಂಗದ ತಿರುಗಾಟವೆಂಬುದೇ ಬದುಕಿನ ರೋಚಕ ಅಧ್ಯಾಯ.

‍ಲೇಖಕರು ರಾಧಿಕ ವಿಟ್ಲ

April 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. T S SHRAVANA KUMARI

    ಕ್ಯಾಮೆರಾ ಕಣ್ಣಿನ ಕತೆಗಳು ಆಸಕ್ತಿದಾಯಕವಾಗಿವೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: