‘ದಿಲ್ಲಿಯೊಳಗಣ ಪುಟ್ಟ ಟಿಬೆಟ್’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’

ಮಂಗಳೂರಿನವರಿಗೂ, ಅಲ್ಲಿಯ ಪಂಪ್ವೆಲ್ ಸರ್ಕಲ್ಲಿಗೂ ಇರುವ ಜೋಕಿನ ನಂಟು ಹಳೆಯದ್ದು.

ದಿಲ್ಲಿಯ ಸಿಗ್ನೇಚರ್ ಸೇತುವೆಯನ್ನು ತೋರಿಸುತ್ತಾ ಇದಕ್ಕೊಂದು ದೀರ್ಘ ಇತಿಹಾಸವಿದೆ ಎಂದು ವ್ಯಂಗ್ಯದ ಧಾಟಿಯಲ್ಲಿ ಸ್ಥಳೀಯರೊಬ್ಬರು ಹೇಳುತ್ತಿದ್ದರೆ ನನಗೆ ಥಟ್ಟನೆ ನೆನಪಾಗಿದ್ದು ಮಂಗಳೂರಿನ ಪಂಪ್ವೆಲ್ ವೃತ್ತ.

ಸಿಗ್ನೇಚರ್ ಸೇತುವೆಯು ನೋಡಲೇನೋ ಭವ್ಯವಾಗಿದ್ದು ಅಮೆರಿಕಾದ ವಾಷಿಂಗ್ಟನ್ನಿನಲ್ಲಿರುವ ವಿಶ್ವವಿಖ್ಯಾತ ಜಾರ್ಜ್ ವಾಷಿಂಗ್ಟನ್ ಸೇತುವೆಯನ್ನು ಒಂದು ಮಟ್ಟಿಗೆ ನೆನಪಿಸುತ್ತದೆ.

ಹಡ್ಸನ್ ನದಿಗೆ ಅಡ್ಡಲಾಗಿ ಕಟ್ಟಿರುವ ವಾಷಿಂಗ್ಟನ್ ಸೇತುವೆಯ ವಿನ್ಯಾಸದಿಂದ ಪ್ರೇರಿತರಾಗಿ ಇಲ್ಲೇನಾದರೂ ಮಾಡಲು ಹೊರಟಿದ್ದರೇನೋ ಎಂದೆನಿಸುತ್ತದೆ. ೧೯೯೮ ರಲ್ಲಿ ಆರಂಭವಾಗಿದ್ದ ಈ ಸೇತುವೆಯ ನಿರ್ಮಾಣ ಕಾರ್ಯವು ಅಸಂಖ್ಯಾತ ಅಡೆತಡೆಗಳನ್ನು ದಾಟಿ, ಕೊನೆಗೂ ಲೋಕಾರ್ಪಣೆಗೊಂಡಿದ್ದು ೨೦೦೮ ರಲ್ಲಿ. ಇದು ಒಂದಲ್ಲ, ಎರಡಲ್ಲ… ಬರೋಬ್ಬರಿ ಇಪ್ಪತ್ತು ವರ್ಷಗಳ ಮಹಾತ್ವಾಕಾಂಕ್ಷಿ ಸರಕಾರಿ ಯೋಜನೆ! ದಿಲ್ಲಿಯ ಸಿಗ್ನೇಚರ್ ಸೇತುವೆಯನ್ನು ಮಂಗಳೂರಿನ ಪಂಪ್ವೆಲ್ ಸರ್ಕಲ್ಲಿಗೆ ಹೋಲಿಸಿದ್ದು ಈ ಕಾರಣಕ್ಕಾಗಿಯೇ.

ಇಂದು ದಿಲ್ಲಿಯ ಸಿಗ್ನೇಚರ್ ಸೇತುವೆಯು ಉತ್ತರ ಮತ್ತು ಈಶಾನ್ಯ ದಿಲ್ಲಿಯನ್ನು ಬೆಸೆಯುವಲ್ಲಿ ಮುಖ್ಯಪಾತ್ರವನ್ನು ವಹಿಸುತ್ತಿದೆ. ನಡುವೆ ಯಮುನೆಯ ಹರಿವು. ಸಾಮಾನ್ಯವಾಗಿ ದಿಲ್ಲಿ ನಿವಾಸಿಗಳ ಮಾತಿನಲ್ಲಿ ‘ಜಮ್ನಾ ಪಾರ್’ ಎಂಬ ಪದಪ್ರಯೋಗಗಳು ಆಗಾಗ ನುಸುಳುವುದುಂಟು. ಜಮ್ನಾ ಅಂದರೆ ಯಮುನೆ/ಜಮುನೆ. ಪಾರ್ ಅಂದರೆ ದಾಟುವುದು. ಶಹರದ ಭೂಭಾಗಗಳನ್ನು ‘ಯಮುನೆಯ ಆಚೆಗೆ’ ಮತ್ತು ‘ಯಮುನೆಯ ಈಚೆಗೆ’ ಎಂದು ವಿಂಗಡಿಸುವ ಆಡುಭಾಷೆಯ ರೂಢಿಯಿದು.

ದಿಲ್ಲಿಗೆ ಭೇಟಿ ನೀಡುವ ವ್ಯಕ್ತಿಗಳು ಹೊಸಬರಾಗಿದ್ದರೆ ಐತಿಹಾಸಿಕ ಕುತುಬ್ ಮಿನಾರಿನ ಎರಡುಪಟ್ಟಿನಷ್ಟು ಎತ್ತರವಿರುವ (ಸುಮಾರು ೧೬೫ ಮೀಟರಿನಷ್ಟು) ಸಿಗ್ನೇಚರ್ ಸೇತುವೆಯ ಕೋಡನ್ನು ನೋಡುತ್ತಾ, ಆಹಾ ಎಂದು ಕಣ್ಣರಳಿಸುತ್ತಾ ಸುಮ್ಮನೆ ಮುಂದೆ ಸಾಗಿದರೆ ಅಚ್ಚರಿಯೇನಿಲ್ಲ. ಏಕೆಂದರೆ ಸಿಗ್ನೇಚರ್ ಸೇತುವೆಯಿರುವ ಅರುಣಾ ನಗರದಲ್ಲಿರುವ ಇತರ ವೈಶಿಷ್ಟ್ರ್ಯಗಳು, ಸಾಂಪ್ರದಾಯಿಕ ಶೈಲಿಯಲ್ಲಿ ಶಹರವನ್ನು ನೋಡಿ ಹೋಗುವವರ ಗಮನ ಸೆಳೆಯುವ ಸಾಧ್ಯತೆಗಳು ಕೊಂಚ ಕಮ್ಮಿಯೇ.

ಆ ಮಾರ್ಗದಲ್ಲಿ ನಿತ್ಯವೂ ಹಾದುಹೋಗುವ ದಿಲ್ಲಿಯ ಹಲವು ನಿವಾಸಿಗಳು ಸ್ವತಃ ಅರುಣಾ ನಗರ ಕಾಲೋನಿಯ ಬಗ್ಗೆ ಅಷ್ಟಾಗಿ ತಿಳಿದುಕೊಂಡಿಲ್ಲವೆಂಬ ಸತ್ಯವನ್ನು ಅರಿತು ನಾನು ಅಚ್ಚರಿಗೊಳಗಾಗಿದ್ದೂ ಇದೆ. ಅಂದಹಾಗೆ ಕಳೆದ ಕೆಲ ವರ್ಷಗಳಿಂದ ನ್ಯೂ ಅರುಣಾ ನಗರ ಕಾಲೋನಿಯನ್ನು ನೋಡಲು ಪ್ರವಾಸಿಗರು ಬರುತ್ತಿದ್ದಾರೆಂದರೆ ಸದ್ಯ ವರ್ಚುವಲ್ ಭಗವಂತನೇ ಆಗಿಬಿಟ್ಟಿರುವ ಇಂಟರ್ನೆಟ್ ವ್ಯವಸ್ಥೆಗೊಂದು ದೊಡ್ಡ ಥ್ಯಾಂಕ್ಸ್ ಹೇಳಲೇಬೇಕು.

ದಿಲ್ಲಿಯೊಳಗೊಂದು ಪುಟ್ಟ ಟಿಬೆಟ್ ಇದೆ ಎಂಬ ಸಂಗತಿಯ ಬಗ್ಗೆ ಕೆಲ ವರ್ಷಗಳ ಹಿಂದೆ ಹೊಸದಾಗಿ ತಿಳಿದಾಗ ನನಗೆ ಹೇಳಿಕೊಳ್ಳುವಂಥಾ ಉತ್ಸಾಹವೇನೂ ಹುಟ್ಟಿರಲಿಲ್ಲ. ಏಕೆಂದರೆ ದಿಲ್ಲಿ ಶಹರದೊಳಗಿರುವ ಅಸಂಖ್ಯಾತ ಸಾಂಸ್ಕೃತಿಕ ವೈವಿಧ್ಯಗಳನ್ನು ನಾನು ತಕ್ಕಮಟ್ಟಿಗೆ ಕಂಡವನೇ. ಉದಾಹರಣೆಗೆ ʼದಿಲ್ಲಿಯೊಳಗೊಂದು ಉಡುಪಿ ಇದೆʼ ಎಂದರೆ ನನ್ನಂತಹ ಸಾಮಾನ್ಯರಿಗೆ ಮೊದಲು ನೆನಪಾಗುವುದು ಉಡುಪಿ ಹೋಟೇಲುಗಳು. ಕೇರಳವಿದೆ ಎಂದರೆ ನೆನಪಾಗುವುದು ಮಲಬಾರ್ ಪರೋಟ ಮತ್ತು ಚೆಟ್ಟಿನಾಡ್ ಚಿಕನ್. ಇದು ಒಂದು ರೀತಿಯಲ್ಲಿ ಅಲ್ಪಮತಿಯೊಬ್ಬನ ಮೂರ್ಖತನವೂ ಹೌದು, ಕಟ್ಟಾ ಆಹಾರಪ್ರಿಯನಾಗಿ ನನ್ನ ತಪ್ಪೊಪ್ಪಿಗೆಯೂ ಹೌದು.

ಹೀಗಾಗಿ ದಿಲ್ಲಿಯೊಳಗಿರುವ ಟಿಬೆಟ್ ಬಗ್ಗೆ ಪರಿಚಿತರೊಬ್ಬರಿಂದ ಮೊದಲಬಾರಿಗೆ ಕೇಳಿದಾಗ ನನ್ನ ಯೋಚನೆಯು ಸೀಮಿತವಾಗಿದ್ದು ಟಿಬೆಟನ್ ಖಾದ್ಯವನ್ನು ನೀಡಬಲ್ಲ ಒಂದು ರೆಸ್ಟೊರೆಂಟಿಗೆ ಮಾತ್ರ. ಆದರೆ ದಿಲ್ಲಿಯ ಒಡಲಿನಲ್ಲಿರುವ ಟಿಬೆಟ್ ಇವೆಲ್ಲದಕ್ಕಿಂತಲೂ ಮಿಗಿಲಾಗಿದ್ದು ಎಂಬುದು ಅರಿವಾದ ನಂತರ ಆ ಪುಟ್ಟ ಸ್ಥಳವು ನನಗೆ ನೀಡಿದ, ನೀಡುತ್ತಿರುವ ಆಹ್ಲಾದವೇ ಬೇರೆ. ಮಿನಿ ಟಿಬೆಟ್ ಅಷ್ಟು ಸುಲಭಕ್ಕೆ ಬಿಟ್ಟುಹೋಗುವ ಗುಂಗಲ್ಲ.

ಒಂದು ಪುಟ್ಟ ಪ್ರಯೋಗ. ‘ನ್ಯೂ ಅರುಣಾನಗರ ಕಾಲೋನಿ’ ಎಂದು ದಿಲ್ಲಿಯ ನಾಲ್ಕು ತಲೆಗಳನ್ನೊಮ್ಮೆ ನಿಲ್ಲಿಸಿ, ಕೇಳಿ ನೋಡಿ. ಇದ್ಯಾವುದಪ್ಪಾ ನಮಗೆ ಗೊತ್ತಿಲ್ಲದ ಹೆಸರು ಎಂದು ಅಡಿಯಿಂದ ಮುಡಿಯವರೆಗೂ ಬೆರಗಾಗಿ ನೋಡುತ್ತಾರೆ. ಆದರೆ ‘ಟಿಬೆಟನ್ ಮಾರ್ಕೆಟ್’ ಅಥವಾ ‘ಮಿನಿ ಟಿಬೆಟ್ ಎಲ್ಲಿದೆಯಪ್ಪಾ’ ಎಂದು ಕೇಳಿದರೆ ಈ ನಾಲ್ವರಲ್ಲಿ ಇಬ್ಬರಾದರೂ ನೆಟ್ಟಗಾಗುತ್ತಾರೆ. ಹೌದ್ಹೌದು, ನಮಗ್ಗೊತ್ತು ಎಂದು ತಲೆಯಾಡಿಸುತ್ತಾರೆ. ಈ ಪ್ರದೇಶವು ಸ್ಥಳೀಯರಿಗೆ ಆಡುಭಾಷೆಯಲ್ಲಿ ತಿಬ್ಬತ್ ಮಾರ್ಕೆಟ್. ಇನ್ನು ಈ ಹೆಸರನ್ನು ಹೊರತುಪಡಿಸಿ ಹೆಚ್ಚಾಗಿ ಬಳಕೆಯಲ್ಲಿರುವ ಮತ್ತೊಂದು ಹೆಸರೆಂದರೆ ‘ಮಜ್ನೂ ಕಾ ತಿಲ್ಲಾ’.

ಮಜ್ನೂ ಕಾ ತಿಲ್ಲಾ ಎಂಬ ವಿಶಿಷ್ಟ ಹೆಸರಿನ ಹಿಂದೆ ಇಲ್ಲಿಯ ಸ್ಥಳ ಮಹಿಮೆಯನ್ನು ಸಾರುವ ಒಂದು ಸುಂದರ ಕಥೆಯೂ ಇದೆ. ತಿಲ್ಲಾ ಎಂದರೆ ದಿಬ್ಬ. ಹೀಗಾಗಿ ಈ ಪ್ರದೇಶವು ಮಜ್ನೂವಿನ ದಿಬ್ಬ. ಇಕ್ಕಟ್ಟಾಗಿ ಕೊಂಚ ವಿಚಿತ್ರವಾಗಿರುವ ಅರುಣಾನಗರ ಕಾಲೋನಿಯಲ್ಲಿ ಓಡಾಡುವಾಗ ಕಂಡುಬರುವ ದಿಬ್ಬದಂಥಾ ಉಬ್ಬುತಗ್ಗಿನ ಭಾಗಗಳು ಇದುವೇ. ಅದು ಒಂದು ಕಾಲದಲ್ಲಿ ಮಜ್ನೂನಂತಹ ದೈವಿಕ ಪುರುಷರಿದ್ದ ಪುಣ್ಯಭೂಮಿ.

ಅದು ಹದಿನಾರನೇ ಶತಮಾನದ ದಿಲ್ಲಿ. ಸುಲ್ತಾನ ಸಿಕಂದರ್ ಲೋಧಿಯ ಚಕ್ರಾಧಿಪತ್ಯ. ಈ ಕಾಲಮಾನದಲ್ಲಿ ಅಬ್ದುಲ್ಲಾ ಎಂಬ ಸೂಫಿಸಂತನೊಬ್ಬ ಅಲ್ಲಿದ್ದನಂತೆ. ಯುಮುನಾ ನದಿಯ ತಟದಾಚೆಗೂ, ಈಚೆಗೂ ಈತ ಸ್ಥಳೀಯರನ್ನು ತನ್ನ ಪುಟ್ಟ ದೋಣಿಯಲ್ಲಿ ಉಚಿತವಾಗಿ ಕರೆದೊಯ್ಯುತ್ತಿದ್ದ. ಎಲ್ಲರೂ ಈ ಸೂಫಿಸಂತನನ್ನು ಪ್ರೀತಿಯಿಂದ ಮಜ್ನೂ ಎಂದು ಕರೆಯುತ್ತಿದ್ದರು. ಮಜ್ನೂ ಮಹಾಶಯನಿಗೆ ಈ ಸೇವೆಯು ಒಂದು ಬಗೆಯಲ್ಲಿ ನಿಸ್ವಾರ್ಥ ದೈವಸೇವೆಯೇ ಆಗಿತ್ತು. ಸಿಖ್ ಧರ್ಮದ ಸಂಸ್ಥಾಪಕ ಗುರುವಾದ ಗುರುನಾನಕರು ಸ್ವತಃ ಮಜ್ನೂವಿನ ಆತಿಥ್ಯವನ್ನು ಸ್ವೀಕರಿಸಿದ್ದರಲ್ಲದೆ, ಆತನ ಸೇವಾ ಮನೋಭಾವಕ್ಕೆ ಮನಸೋತಿದ್ದರು ಎಂದು ಹೇಳಲಾಗುತ್ತದೆ.

ಮುಂದೆ ಹದಿನೆಂಟನೇ ಶತಮಾನದಲ್ಲಿ ಸಿಖ್ ಮಿಲಿಟರಿ ನಾಯಕನಾಗಿದ್ದ ಬಘೇಲ್ ಸಿಂಗ್ ಇಲ್ಲಿ ಗುರುದ್ವಾರವೊಂದನ್ನು (ಸಿಖ್ ಧರ್ಮೀಯರ ಆರಾಧನಾ ಸ್ಥಳ) ಕಟ್ಟಿಸಿದ್ದ. ದಿಲ್ಲಿಯಲ್ಲಿ ಇಂದಿಗೂ ಸಕ್ರಿಯವಾಗಿರುವ ಕೆಲವೇ ಕೆಲವು ಹಳೆಯ ಗುರುದ್ವಾರಗಳಲ್ಲಿ ಇದೂ ಒಂದು. ಸಿಖ್ಖರ ಆರನೇ ಧರ್ಮಗುರುಗಳಾದ ಗುರು ಹರ್ ಗೋಬಿಂದ್ ಸಿಂಗ್ ಕೂಡ ಇಲ್ಲಿಗೆ ಬಂದಿದ್ದರು ಎಂಬ ಪ್ರತೀತಿಯಿದೆ. 

ಇಂದು ಮಜ್ನೂ ಕಾ ತಿಲ್ಲಾ ಪ್ರದೇಶವನ್ನು ಹೊಕ್ಕರೆ ಏಕಾಏಕಿ ಟಿಬೆಟ್ ಪ್ರವೇಶಿಸಿದ ಅನುಭವವಾಗುತ್ತದೆ. ಆ ಮುಖ್ಯದ್ವಾರದ ಗೇಟಿನಾಚೆಗೂ, ಈಚೆಗೂ ಆಕಾಶ-ಭೂಮಿಯಷ್ಟಿನ ಅಂತರ! ಬಣ್ಣಬಣ್ಣದ ಅಸಂಖ್ಯಾತ ಪುಟ್ಟ ಧ್ವಜಗಳು, ಶಾಂತ ಮುಖಮುದ್ರೆಯನ್ನು ಹೊತ್ತಿರುವ ಬೌದ್ಧ ಸನ್ಯಾಸಿಗಳು, ಮಣಿಸರದ ಮಣಿಗಳನ್ನು ಸ್ಪರ್ಶಿಸುತ್ತಾ ಪ್ರಾರ್ಥನೆಯಲ್ಲಿ ತಲ್ಲೀನರಾಗಿರುವ ವೃದ್ಧ ಹೆಂಗಸರು, ಪುಟ್ಟ ಕಣ್ಣಿನ ಮುದ್ದುಮುದ್ದಾದ ಮಕ್ಕಳು, ಹೆಜ್ಜೆಯಿಟ್ಟಲ್ಲೆಲ್ಲಾ ಕಾಣಿಸುವ ನಗುಮುಖದ ದಲಾಯಿಲಾಮಾರ ಚಿತ್ರಗಳು, ಟಿಬೆಟನ್ ಸಂಸ್ಕೃತಿಯನ್ನು ಸಾರುವ ಏನೇನೋ ವಸ್ತುಗಳು, ತಿಂಡಿತಿನಿಸುಗಳು, ಇವೆಲ್ಲವನ್ನು ಕಣ್ಣರಳಿಸಿ ನೋಡುತ್ತಿರುವ ಪ್ರವಾಸಿಗರ ದಂಡು… ಹೀಗೆ ಅರುಣಾ ನಗರದ ಕಾಲೋನಿಯೊಳಗೆ ಟಿಬೆಟನ್ನರದ್ದೇ ಒಂದು ಪುಟ್ಟ ಲೋಕ. ದಿಲ್ಲಿ ನಿವಾಸಿಗಳಿಗೆ ಇದು ಮಿನಿ ಟಿಬೆಟ್. ಪಕ್ಕದಲ್ಲೇ ಇರುವ ದಿಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ನೆಚ್ಚಿನ ಹ್ಯಾಂಗೌಟ್ ತಾಣ.

ಹೀಗೆ ಟಿಬೇಟಿಯನ್ನರು ದಿಲ್ಲಿಗೆ ಬಂದು ತಮ್ಮದೇ ಆದ ಪುಟ್ಟ ಸಾಮುದಾಯಿಕ ಗೂಡೊಂದನ್ನು ಕಟ್ಟಿರುವ ಹಿಂದೆಯೂ ಇತಿಹಾಸವಿದೆ. ದನಿಯಾಗದ ಅದೆಷ್ಟೋ ನೋವಿನ ಕಥನಗಳಿವೆ. ೧೯೫೯ ರಲ್ಲಿ ಟಿಬೆಟ್ ಧರ್ಮಗುರು ದಲಾಯಿಲಾಮಾ ಭಾರತಕ್ಕೆ ಬಂದು ಹಿಮಾಚಲಪ್ರದೇಶದ ಧರ್ಮಶಾಲಾದಲ್ಲಿ ಆಶ್ರಯವನ್ನು ಪಡೆದಾಗ, ಅವರ ಅದೆಷ್ಟೋ ಅನುಯಾಯಿಗಳು ಕೂಡ ಅವರ ಹಾದಿಯನ್ನೇ ಹಿಡಿದು ಭಾರತದತ್ತ ಹೆಜ್ಜೆಹಾಕಿದ್ದರು. ಈ ಘಟನೆಯ ಬೆನ್ನಿಗೇ ಯಮುನೆಯ ತಟದಲ್ಲಿ ಹೀಗೆ ಆಶ್ರಯದ ನಿರೀಕ್ಷೆ ಹೊತ್ತು ಬಂದಿದ್ದ ಟಿಬೇಟಿಯನ್ನರಿಗಾಗಿ ನಿರಾಶ್ರಿತರ ಕ್ಯಾಂಪು ವ್ಯವಸ್ಥೆಯನ್ನು ಕಲ್ಪಿಸಲಾಯಿತು. ಇವರೆಲ್ಲಾ ನೆಲೆಯೂರುವ ನಿಟ್ಟಿನಲ್ಲಿ ಒಂದಷ್ಟು ಭೂಮಿಯನ್ನು ಕೂಡ ಭಾರತ ಸರಕಾರವು ೧೯೬೦ ರಲ್ಲಿ ಮಂಜೂರು ಮಾಡಿತು.

ಮುಂದೆ ೧೯೬೨ ರ ಇಂಡೋ-ಚೀನಾ ಯುದ್ಧಕಾಲದಲ್ಲೂ ಸಾವಿರಾರು ಟಿಬೆಟನ್ ನಿರಾಶ್ರಿತರು ಯಮುನಾತಟದವರೆಗೆ ಬಂದು ಆಶ್ರಯವನ್ನು ಬೇಡಿದ್ದರು. ಹೀಗೆ ಕೆಲವೇ ಕೆಲವು ಟಿಬೇಟಿಯನ್ನರ ಗುಂಪೊಂದು ದಿಲ್ಲಿಯಲ್ಲಿ ನಿಧಾನವಾಗಿ ನೆಲೆಯೂರುತ್ತಾ, ಇಲ್ಲಿಯ ನೆಲದಲ್ಲಿ ತಮ್ಮ ಸಂಸ್ಕೃತಿಯ ಬೀಜವನ್ನು ಸದ್ದಿಲ್ಲದೆ ಬಿತ್ತುತ್ತಿತ್ತು.

ಹಾಗೆ ನೋಡಿದರೆ ಇಂದು ಮಜ್ನೂ ಕಾ ತಿಲ್ಲಾದಲ್ಲಿ ಕಾಣುವ ಬಹುತೇಕ ಮಂದಿ ಎರಡನೇ ಪೀಳಿಗೆಯ ಟಿಬೇಟಿಯನ್ನರು. ತಮ್ಮ ಮೂಲ ಸಂಸ್ಕೃತಿಯ ಬಗ್ಗೆ ಪ್ರೀತಿ-ಅಭಿಮಾನ-ನಿಷ್ಠೆಯನ್ನಿಟ್ಟುಕೊಂಡವರೂ ಹೌದು. ಈ ಅಂಶಗಳನ್ನು ಅವರ ಉಡುಗೆ-ತೊಡುಗೆ, ಭಾಷೆ, ಸಂಸ್ಕೃತಿ, ಜೀವನಶೈಲಿಗಳಲ್ಲಿ ಇಂದಿಗೂ ನಾವು ಢಾಳಾಗಿ ಕಾಣಬಹುದು. ಇಲ್ಲಿ ಇಂದು ಸುಂದರ ಅಂಗಳವೊಂದನ್ನು ಹೊಂದಿರುವ ಬೌದ್ಧ ಮೊನಾಸ್ಟರಿಯೊಂದಿದೆ (ಮಠ). ಪುಟ್ಟದಾಗಿದ್ದರೂ ಎಲ್ಲರೂ ಇಷ್ಟಪಡುವ ಚಾವಡಿಯಂತಿರುವ ಭಾಗವಿದು.

ಇವುಗಳಲ್ಲದೆ ಆರ್ಥಿಕ ನೆಲೆಯಲ್ಲಿ ವಸತಿಗೃಹಗಳು, ಪುಟ್ಟ ಕ್ಯಾಂಟೀನುಗಳು, ವಿಶೇಷ ರೆಸ್ಟೊರೆಂಟ್ ಗಳು (ಟಿಬೆಟನ್, ಕೊರಿಯನ್, ಸಿಂಗಾಪುರಿಯನ್, ನಾಗಾ, ಚೈನೀಸ್ ಖಾದ್ಯಗಳು), ತರಹೇವಾರಿ ವಸ್ತುಗಳನ್ನು ಮಾರುವ ಮಳಿಗೆಗಳು, ಟ್ರಾವೆಲ್ ಏಜೆನ್ಸಿಗಳು, ಪುಸ್ತಕದಂಗಡಿಗಳು, ದಿನಸಿ ಸ್ಟೋರ್ ಗಳು, ಗ್ಯಾಲರಿಗಳು… ಹೀಗೆ ಎಲ್ಲವನ್ನೂ ನಾವಿಲ್ಲಿ ಕಾಣಬಹುದು. ಅದರಲ್ಲೂ ದಿಲ್ಲಿಯಲ್ಲಿದ್ದುಕೊಂಡೂ ಅಪ್ಪಟ “ಟಿಬೆಟ್”ತನವನ್ನು ತನ್ನಲ್ಲಿ ಉಳಿಸಿಕೊಂಡಿರುವ ಈ ಕೌತುಕದ ಪ್ರದೇಶದಲ್ಲಿ.

ಮುಂಜಾನೆಯ ಮತ್ತು ಇಳಿಸಂಜೆಯ ಹೊತ್ತಿನಲ್ಲಂತೂ ಮೊನಾಸ್ಟರಿ ಬಳಿಯ ಚಾವಡಿಯಂತಿರುವ ಪ್ರದೇಶದಲ್ಲಿ ಜೀವನೋತ್ಸಾಹದ ಸಂಭ್ರಮ. ಇಲ್ಲಿಯ ವಿಶೇಷ ಖಾದ್ಯವಾದ ಲಫಿಂಗ್ ಅನ್ನು ಸವಿಯುತ್ತಾ, ಚಹಾ ಹೀರುತ್ತಿದ್ದರೆ ತನ್ನಿಂತಾನಾಗಿಯೇ ಅಲ್ಲೊಂದು ಮೆಹಫಿಲ್ ಸೃಷ್ಟಿಯಾಗಿರುತ್ತದೆ. ಈ ಪುಟ್ಟ ಚಾವಡಿಯು ಲೌಕಿಕ ಮತ್ತು ಅಲೌಕಿಕದ ವಿಶಿಷ್ಟ ಮಿಲನವೆಂಬಂತೆ ನನಗೆ ಸದಾ ಕಂಡಿದೆ. ಹಾಗೆಯೇ ಇದು ಮಕ್ಕಳು-ವೃದ್ಧರೆಂಬ ಭೇದವಿಲ್ಲದೆ ಮಂದಿಯು ಸೇರಬಯಸುವ ನೆಚ್ಚಿನ ಪ್ರದೇಶವೂ ಹೌದು.

ಏಕೆಂದರೆ ಮೊನಾಸ್ಟರಿಯ ಪದತಲದಲ್ಲಿ ಇಟ್ಟಿರುವ ಬೆಂಚುಗಳಲ್ಲಿ ಮಣಿಸರದೊಂದಿಗೆ ಜಪಿಸುತ್ತಾ ಕೂತಿರುವ ವೃದ್ಧರು, ಬೌಧ್ಧ ಭಿಕ್ಕುಗಳು ಕಂಡರೆ, ಅಲ್ಲಿಂದ ಮೂರೇ ಅಡಿಯ ದೂರದಲ್ಲಿ ಲಫಿಂಗ್ ಮಾರುವವರದ್ದೊಂದು ಪುಟ್ಟ ಸ್ಟಾಲ್. ಅದರಾಚೆಗೆ ಚಹಾ-ಕಾಫಿ ಇತ್ಯಾದಿಗಳನ್ನು ಮಾರುವ ಸಾದಾ ಕ್ಯಾಂಟೀನುಗಳು ಮತ್ತು ಇಲ್ಲಿ ಬರುವ ಗ್ರಾಹಕರಿಗಾಗಿ ಈ ತೆರೆದ ಆವರಣದಲ್ಲೇ ಕುರ್ಚಿ-ಬೆಂಚುಗಳ ವ್ಯವಸ್ಥೆ. ಚಾವಡಿಯೇ ಕೇಂದ್ರಬಿಂದುವಾಗಿರುವ ಇಲ್ಲಿಂದ ನಾಲ್ಕು ದಿಕ್ಕುಗಳಿಗೆ ಇಕ್ಕಟ್ಟಾದ ಓಣಿಯಂತಿನ ರಸ್ತೆಗಳು ಸಿಡಿಯುತ್ತವೆ. ಇನ್ನು ಈ ಚಾವಡಿಯಂತಿರುವ ಪುಟ್ಟ ಜಾಗದಲ್ಲಿ ಕೆಲವೊಮ್ಮೆ ನೃತ್ಯದಂತಹ ಪ್ರದರ್ಶನಗಳಿದ್ದರಂತೂ ಪ್ರವಾಸಿಗರಿಗೆ ಬೋನಸ್ ಮನರಂಜನೆ. ಒಟ್ಟಿನಲ್ಲಿ ಈ ಜಾಗವು ಮಕ್ಕಳ ಆಟಕ್ಕೂ ಸೈ, ಯುವಕರ ಮನರಂಜನೆಗೂ ಸೈ, ವೃದ್ಧರ ಧ್ಯಾನಕ್ಕೂ ಸೈ.

ಈ ಭಾಗದಲ್ಲಿ ಹಾಕಿರುವ ಕುರ್ಚಿಗಳಲ್ಲಿ ಕುಳಿತು ಇಲ್ಲಿಯ ಜನಜೀವನವನ್ನು ಸುಮ್ಮನೆ ನೋಡುವುದೇ ಒಂದು ಸೊಗಸು. ಮಹಾನಗರಿ ದಿಲ್ಲಿಯ ಜನನಿಬಿಡ ಪ್ರದೇಶವೊಂದರಲ್ಲಿದ್ದರೂ ತೀರಾ ಗ್ರಾಮೀಣ ಭಾಗದ ನೇಪಾಳ, ಟಿಬೆಟ್, ಚೀನಾದಲ್ಲಿ ಬಂದು ಕೂತಿದ್ದೇವೇನೋ ಎಂಬಂತಿನ ಟ್ರಾನ್ಸ್ ಭಾವ. ಸೋಯಾದಿಂದ ಮಾಡಿರುವ ಖಾರದ ಲಫಿಂಗ್ ಸವಿಯುತ್ತಾ, ಅದ್ಭುತವೆನ್ನಿಸುವ ಚಹಾ ಹೀರುತ್ತಿದ್ದರೆ ಇಲ್ಲಿ ಸ್ಥಳೀಯ ಟಿಬೇಟಿಯನ್ನರು ಮಾತಿಗೂ ಸಿಗುತ್ತಾರೆ. ವ್ಯಕ್ತಿತ್ವಕ್ಕೆ ಸೌಮ್ಯ ಸ್ವಭಾವ ಮತ್ತು ಮೊಗಕ್ಕೆ ಮುಗುಳ್ನಗೆಯ ಆಭರಣವನ್ನು ಸದಾ ಅಭಿಮಾನದಿಂದ ಧರಿಸಿರುವ ಈ ಮಂದಿಯಿಂದ ಅವರದ್ದೇ ಕಥೆಗಳನ್ನು ಕೇಳುವುದು ಒಂದು ವಿಶಿಷ್ಟ ಅನುಭವ.

ಅವರ ಮಾತುಗಳಲ್ಲಿ ತಮ್ಮೂರಿನ ಸವಿ ನೆನಪುಗಳಿವೆ. ಮರಳಿ ತಮ್ಮೂರಿಗೆ ಹೋಗಲಾರದ ಬಗ್ಗೆ ದಟ್ಟ ವಿಷಾದವಿದೆ. ಜೊತೆಗೇ ಜಾಗತಿಕ ಮಟ್ಟದ ರಾಜಕೀಯ ಆಟಗಳಲ್ಲಿ ತಮ್ಮ ಬದುಕು ಒಂದು ಯಕಃಶ್ಚಿತ್ ಕಾಯಿಯಾಗಿ ವ್ಯರ್ಥವಾದ ಬಗೆಗಿನ ದುಃಖವೂ ಕೂಡ. ಇಲ್ಲಿರುವ ವೃದ್ಧರಲ್ಲಿ ಬಹುತೇಕ ಮಂದಿ ಹಿಮಾಚಲ ಪ್ರದೇಶದಂತಹ ಅಕ್ಕಪಕ್ಕದ ರಾಜ್ಯಗಳಲ್ಲಿ ದಶಕಗಳ ಕಾಲ ಕೂಲಿಕಾರ್ಮಿಕರಾಗಿ ದುಡಿದವರು. ಒಂದೊಂದು ಪೈಸೆ ಒಟ್ಟುಗೂಡಿಸುತ್ತಾ ತಮ್ಮ ಮಕ್ಕಳ ಒಳ್ಳೆಯ ಭವಿಷ್ಯಕ್ಕಾಗಿ ಕನಸಿನ ಕೌದಿಯನ್ನು ನೇಯ್ದವರು. ವೃದ್ಧಾಪ್ಯದ ಈ ದಿನಗಳಲ್ಲಿ ಮಿತವಾದ ಆಹಾರ, ಸಂಜೆಯ ವಿಹಾರಕ್ಕೆ ಗೆಳೆಯರ ಬಳಗ, ಒಂದಿಷ್ಟು ಪ್ರಾರ್ಥನೆ ಮತ್ತು ಸಾಕಷ್ಟು ನಗು… ಅವರೇ ಹೇಳುವಂತೆ ನೆಮ್ಮದಿಯ ಬದುಕಿಗೆ ಇವಿಷ್ಟು ಸಾಕು.  

ಮಹಾನಗರಿಗಿರುವ ಮಹಾಗಡಿಬಿಡಿಯ ಭ್ರಾಂತು ಇನ್ನೂ ಈ ಭಾಗಕ್ಕೆ ಅಷ್ಟಾಗಿ ತಟ್ಟಿಲ್ಲ. ಹೀಗಾಗಿಯೇ ಈಚಿನ ದಿನಗಳಲ್ಲಿ ಅಪರೂಪವೆನಿಸುವ ನಿಧಾನಗತಿಯ ಜೀವನ, ಸರಳತೆಯ ಬದುಕು, ಶ್ರಮಜೀವನವನ್ನು ನಂಬಿಕೊಂಡು ಇದ್ದುದರಲ್ಲೇ ಸಂತೃಪ್ತಿಯನ್ನು ಕಾಣುವ ನೋಟಗಳು ಇಲ್ಲಿ ಸಾಮಾನ್ಯ. ಇನ್ನು ಕುಲುಕುಲು ನಗುತ್ತಾ ಖುಷಿಯನ್ನು ಚೆಲ್ಲುವ ಇಲ್ಲಿಯ ಜನಸಮೂಹ, ಸಂತೆಯೊಳಗಿದ್ದೂ ಸಂತನಂತಿರುವ ಸ್ಥಳೀಯ ಬೌಧ್ಧ ಭಿಕ್ಕುಗಳಲ್ಲಿ ಎದ್ದು ಕಾಣುವ ಶಾಂತಿ, ನೆರಿಗೆಮುಖದ ಅಜ್ಜ-ಅಜ್ಜಿಯಂದಿರ ಮೊಗದಲ್ಲಿ ಸದಾ ಕಾಂತಿಯನ್ನು ತರುವ ಜೀವನ್ಮುಖಿ ಮಂದಹಾಸ… ಇವೆಲ್ಲವನ್ನೂ ನೋಡಿಯೇ ಸವಿಯಬೇಕು.  

ಆ ಕಾಲದ ಮಜ್ನೂ ಹೇಗಿದ್ದರೋ ನೋಡಿಲ್ಲ. ಆದರೆ ದಿಬ್ಬದ ಹವೆಯಲ್ಲಿ ಮಾತ್ರ ಈ ಸೂಫಿಸಂತನ ಪ್ರೀತಿ, ಮಾನವತೆಗಳು ಇಂದಿಗೂ ಆತ್ಮದಂತಿವೆ.

April 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: