ಹರೀಶ್ ಕೇರ ಕಂಡಂತೆ ಜೋಗಿ ಅವರ ‘ಹಸ್ತಿನಾವತಿ’

ಹರೀಶ್ ಕೇರ

ಹಸ್ತಿನಾವತಿ ಮತ್ತು ಇಂದ್ರಪ್ರಸ್ಥಗಳು ಮಹಾಭಾರತದ ಎರಡು ದೊಡ್ಡ ನಗರಗಳು. ದ್ಯೂತ ಸಭೆಯಲ್ಲಿ ಮನೆ ಸೊಸೆಯ ಸೀರೆ ಸೆಳೆದರೂ ಸುಮ್ಮನಿದ್ದ ಅಪವಿತ್ರ ನಗರಿ ಒಂದು. ಮಯಸಭೆಯಂಥ ಸ್ವಪ್ನಸದೃಶ ಭವನವಿದ್ದ ನೂತನ ನಗರಿ ಇನ್ನೊಂದು. ಇಂದ್ರಪ್ರಸ್ಥದಲ್ಲಿ ನೆಲೆಸಬೇಕು ಎನ್ನುವುದು ಕನಸು; ಹಸ್ತಿನಾವತಿಯ ಸುಡು ನಿತ್ಯಕೇಡಿನ ನಗರಿ ವಾಸ್ತವ. ಜೋಗಿಯವರ ‘ಹಸ್ತಿನಾವತಿʼ ಇಂಥ ಕನಸು ವಾಸ್ತವಗಳ ನಡುವೆ ತೂಗುಬಿದ್ದ ಉಯ್ಯಾಲೆ.

ಕನ್ನಡದ ದೊಡ್ಡ ಕಾದಂಬರಿಗಳೆಲ್ಲ ಚರಿತ್ರೆ- ವರ್ತಮಾನ- ಭವಿಷ್ಯ ಮೂರನ್ನೂ ಬೆಸೆಯುವ ತ್ರಿಕೂಟಗಳಾಗಿ ಕಾಣಿಸಿಕೊಂಡಿವೆ. ಉದಾಹರಣೆಗೆ ಮಲೆಗಳಲ್ಲಿ ಮದುಮಗಳು ಮಲೆನಾಡಿಗೆ ಆಧುನಿಕತೆ ಕಾಲಿಡುವ ಮೊದಲಿನ ಕ್ಷುದ್ರತನ, ಸ್ವಾತಂತ್ರ್ಯೋದಯ ಕಾಲದ ವರ್ತಮಾನ ಹಾಗೂ ಪ್ರೇಮದ ಆಧುನಿಕ ಪ್ರವಾಹವನ್ನು ಬೆಸೆಯುತ್ತದೆ. ಗ್ರಾಮಾಯಣ ಗ್ರಾಮೀಣ ಕ್ರೌರ್ಯದ ಚರಿತ್ರೆ, ಹಿಂಸೆಯ ವರ್ತಮಾನ ಮತ್ತು ಮುಂದುವರಿಯುವ ವಿಲಾಪವನ್ನು ಹಿಡಿಯುತ್ತದೆ. ಕುಸುಮಬಾಲೆ ಪಾಳೇಗಾರಿಕೆಯ ಗತ, ದಲಿತ ಕಥನದ ಇಂದು ಮತ್ತು ಕನಸಿನ ನಾಳೆಗಳನ್ನು ಹಿಡಿಯಲ್ಲಿಡಲು ಯತ್ನಿಸುತ್ತದೆ.

ಇಂಥದೊಂದು ಸಾಲಿಗೆ ಸೇರುವ ಕಾದಂಬರಿ ʼಹಸ್ತಿನಾವತಿ.ʼ ಇದು ಏಕಕಾಲಕ್ಕೆ ಮಹಾಭಾರತದ ಹಗೆತನದ ಗತ, ಇಂದಿನ ದಿಲ್ಲಿಯ ವರ್ತಮಾನ ಮತ್ತು ಭವಿಷ್ಯದ ಸುಡುಬಯಲಿನ ಸುಳಿವು- ಮೂರನ್ನೂ ಹೊತ್ತಿದೆ. ಪೊಲಿಟಿಕಲ್‌ ಸ್ಟ್ರಾಟಜಿಸ್ಟ್‌ ಎನಿಸಿಕೊಂಡ ಸಹದೇವ ಉಪಾಧ್ಯಾಯ ತನ್ನ ಹಿಡಿತದಲ್ಲಿಟ್ಟುಕೊಂಡಿರುವ ಸಂಗತಿಗಳು ಅವನನ್ನು ಕದಲಿಸುವಂಥವಲ್ಲ. ಯಾವುದು ಅವನ ಕೈಯಳತೆಯನ್ನು ಮೀರಿ ಬೆಳೆಯುತ್ತಿದೆಯೋ ಅದು ಅವನ ಕಣ್ಣನ್ನೂ ತೆರೆಸುತ್ತದೆ. ನಿಜ ಕಾದಂಬರಿಯ ಹಾಗೆ. ಅದು ಕಥೆಗಾರನ ಕೈಮೀರಿ ಬೆಳೆದಾಗಲೇ ಬೆಳಕು. ಆವರಿಸಿಕೊಂಡಿರುವುದು ವೇಷ, ಆವರಣ ಮೀರಿ ಬೆಳೆಯುವುದು ಅವತರಣ. ʼಉರಿಯ ಪೇಟೆಗಳಲಿ ಪತಂಗದ ಸರಕು ಮಾರದೆ ಮರಳುವುದೆ?ʼ ಎಂಬುದು ಕುಮಾರವ್ಯಾಸನ ಒಂದು ಪ್ರಸಿದ್ಧ ರೂಪಕ. ಬೆಂಕಿ ಪೇಟೆಗೆ ಪತಂಗ ಬಂದರೆ ಸುಡದೇ ಮರಳುವುದಿಲ್ಲ. ಸುಟ್ಟರೆ ಮರಳುವ ಪ್ರಶ್ನೆಯೇ ಇಲ್ಲ. ಹೀಗೆ ಈ ವರ್ತಮಾನದ ರಾಜಕಾರಣದ ಸುಡುಬಯಲಿನಲ್ಲಿ ಬಂದು ನಿಂತಿರುವ ಜೀವಗಳ ಮೂಕವಿಹ್ವಲ ದನಿಯೊಂದು ಕೃತಿಯುದ್ದಕ್ಕೂ ಪ್ರತಿಧ್ವನಿಸುತ್ತದೆ.

ನನಗೆ ಈ ಕಾದಂಬರಿಯಲ್ಲಿ ಒಬ್ಬ ಹಳೆಯ ಜೋಗಿ, ಒಬ್ಬ ಹೊಸ ಜೋಗಿ ಸಿಕ್ಕಿದರು. ಎರಡಕ್ಕೂ ವಿವರಣೆ ಕೊಡುವೆ. ಜೋಗಿಯ ಕೃತಿಗಳಲ್ಲೆಲ್ಲ ʼನದಿಯ ನೆನಪಿನ ಹಂಗುʼ ಮತ್ತು ʼಗುರುವಾಯನಕೆರೆʼ ಭಿನ್ನವಾದುವು. ಕಾನೂರು ಹೆಗ್ಗಡತಿಯಂತೆ, ಮರಳಿ ಮಣ್ಣಿಗೆಯಂತೆ, ಹಲವು ಜೀವನ ಪ್ರವಾಹಗಳು ಸಮಾನಾಂತರವಾಗಿ ಹರಿದುಬಂದು, ಕೊನೆಯಲ್ಲಿ ಭೋರ್ಗರೆಯುವ ಪ್ರವಾಹವಾಗುವ, ಹಲವು ದರ್ಶನ ನೀಡುವ ರೀತಿಯದು. ಅವರ ನಂತರದ ಕಾದಂಬರಿಗಳು ಸ್ವರೂಪ, ಸಂಸ್ಕಾರ ಕಾದಂಬರಿಗಳಂತೆ, ಅಂಥ ಹೆಚ್ಚಿನ ಕವಲುಗಳಿಲ್ಲದ, ಹಿಗ್ಗಿಸಿದ ಸಣ್ಣಕಥೆಗಳಂತಿದ್ದವು. ʼಹಸ್ತಿನಾವತಿʼಯಲ್ಲಿ ಅವರು ದೊಡ್ಡ ಭಿತ್ತಿಯನ್ನು ತೋರಿಸುವ, ಅನೇಕ ಧಾರೆಗಳನ್ನು ಹಿಡಿಯುವ ಯತ್ನ ಮಾಡಿದ್ದಾರೆ. ಇಲ್ಲಿ ಪೊಲಿಟಿಕಲ್‌ ಸ್ಟ್ರಾಟಜಿಸ್ಟ್‌ ಆಗಿರುವ ಸಹದೇವನಿದ್ದಂತೆ ಊರುಮನೆಯ ಯಶೋದೆ, ಸಾಹಿತಿ ಸದಾಶಿವ ದೇಸಾಯಿ ಇದ್ದಂತೆ ಹೋರಾಟಗಾರ್ತಿ ದೇವಯಾನಿ, ಇದ್ದೂ ಇಲ್ಲದಂತಿರುವ ಸಂಸರಂತೆ ಇಲ್ಲದೆಯೂ ಇರುವ ವ್ಯಾಸ, ಬದುಕಿಗೆ ಕಚ್ಚಿಕೊಂಡ ಚಾರುಲತಾಳಂತೆ ವೈರಾಗ್ಯವನ್ನು ನೆಚ್ಚಿಕೊಂಡ ಸಂಯುಕ್ತಾ ಪರಾಂಜಪೆ- ಎಲ್ಲ ಇದ್ದಾರೆ.

ಆದರೆ ಇದು ಹಳೆಯ ಕ್ರಮದಂತಿಲ್ಲವೇ ಇಲ್ಲ. ಕಾದಂಬರಿಯ ಪೂರ್ವಾರ್ಧ ಬಹಳ ವೇಗವಾಗಿ ಸಾಗುತ್ತದೆ. ಅದರ ಪ್ರಕಾರ ಉತ್ತರಾರ್ಧ ಇನ್ನೂ ವೇಗವಾಗಿ ಸಾಗಬೇಕು. ಹಾಗಾಗುವುದಿಲ್ಲ. ತಂತ್ರದ ಕುದುರೆಯ ಮೇಲೆ ಕುಳಿತು ಧಾವಿಸಿ ಬಂದ ಕತೆಗಾರ ಥಟ್ಟನೆ ಕುದುರೆ ಇಳಿದು ನಡೆಯಲು ಶುರುಮಾಡುತ್ತಾನೆ. ನಾನಿನ್ನು ಓಡುವುದಿಲ್ಲ, ನಡೆಯುತ್ತೇನೆ, ನೀನೂ ನನ್ನ ಜತೆ ನಡೆ ಎಂದು ಓದುಗನಿಗೆ ಆಹ್ವಾನ ಕೊಡುತ್ತಾನೆ. ಇದು ಬಹಳ ರಿಸ್ಕೀ ನಡೆ. ಇಲ್ಲಿ ಹೊಸ ಜೋಗಿ ಕಾಣಿಸುತ್ತಾರೆ. ಸ್ವತಃ ಮಹಾಭಾರತದ ವ್ಯಾಸ ಕೂಡ ಇಂಥ ರಿಸ್ಕ್‌ ತೆಗೆದುಕೊಳ್ಳುವುದಿಲ್ಲ. ಅವರಲ್ಲಿ ಉದ್ಯೋಗ ಪರ್ವದ ಬಳಿಕ ಆಯುಧಗಳ ಝಣತ್ಕಾರವೇ ಝಣತ್ಕಾರ. ಆದರಿಲ್ಲಿ ವ್ಯಾಸರೇ ಬಂದು ನಿರಾಳವಾಗಿ ಕತೆ ಹೇಳುತ್ತಾ, ಕೇಳುತ್ತಾ ಕೂತುಬಿಡುತ್ತಾರೆ. ಮಹಾಭಾರತ ಬರೆದ ವೇದವ್ಯಾಸರು ಇಲ್ಲಿ ʼಭಗವತಿ ಆರಾಧನೆʼ ಮಾಡುತ್ತ ಅಪ್ರಯತ್ನವಾಗಿ ಕತೆಗೆ ತಿರುವು ತಂದುಕೊಡುವುದನ್ನು ಓದುವುದೇ ಒಂದು ಸೊಗಸು.

ಹಾಗೆ, ಈ ಕಾದಂಬರಿ, ಕತೆಗಾರಿಕೆಯ ಬಗ್ಗೆ ಮೂಡಿರುವ ಒಂದು ರೂಪಕ ಕೂಡ. ಕತೆಗಾರ ತನ್ನ ಕತೆಯನ್ನು ಎಷ್ಟು ತಾನೇ ನಿಯಂತ್ರಿಸಬಲ್ಲ? ಎಷ್ಟು ಅದರೊಳಗೆ ಪ್ರವೇಶಿಸಬಲ್ಲ? ಇದಕ್ಕೆ ಉತ್ತರವಾಗಿ ವೇದವ್ಯಾಸರು ಮಹಾಭಾರತದಲ್ಲಿ ಇಲ್ಲದ, ತಾನು ಬರೆದಿಲ್ಲ ಎಂದು ಹೇಳುವ ಕತೆಯೊಂದನ್ನು ಹೇಳುತ್ತಾರೆ. ಅದೂ ಕುತೂಹಲಕರವಾಗಿದೆ. ಯುದ್ಧ ಬೇಡವೆಂಬ ಮಾತಿಗೆ ದುರ್ಯೋಧನ ಒಪ್ಪಿದ ಎಂದಿಟ್ಟುಕೊಳ್ಳಿ, ಆಗ ಏನಾಗುತ್ತದೆ ಎಂಬ ಪ್ರಶ್ನೆಯ ಎಳೆಯನ್ನು ಹಿಡಿದು ಹೋಗುವ ಕತೆಯದು. ಆಗಲೂ ನಡೆಯಲಿದ್ದುದನ್ನು ತಪ್ಪಿಸಲು ಸಾಧ್ಯವೇ? ತಾನು ಸೃಷ್ಟಿಸಿದ ಪಾತ್ರಗಳು ತನ್ನ ನಿಯಂತ್ರಣ ಮೀರಿ ಬೆಳೆಯುತ್ತ ಹೋಗುವುದನ್ನು ನೋಡುತ್ತ ಸುಮ್ಮನಿರುವುದು ಹೇಗೆ ಸಾಧ್ಯ? ಅಥವಾ ತಾನು ನಿಯಂತ್ರಿಸಬಲ್ಲೆ ಎಂಬುದೇ ಪೊಳ್ಳು ಅಹಂಕಾರವೇ? ಈ ಅಹಂಕಾರದ ನಿರಸನ ಕತೆ ಬರೆಯುವುದರಿಂದ ಹಿಡಿದು ದೇಶದ ಚುಕ್ಕಾಣಿ ಹಿಡಿದಿರುವವರೆಗೂ ಹಬ್ಬಿಲ್ಲವೇ? ಇಂಥ ರೂಪಕಾತ್ಮಕ ಪ್ರಶ್ನೆಗಳನ್ನು ಈ ಕಾದಂಬರಿ ಕೂರಂಬಿನಂತೆ ನಮ್ಮ ಕಡೆಗೆ ಎಸೆಯುತ್ತದೆ.

ಜೋಗಿಯವರು ಇದನ್ನು ಪೊಲಿಟಿಕಲ್‌ ಥ್ರಿಲ್ಲರ್‌ ಎಂದು ಕರೆದಿದ್ದಾರೆ. ಇದು ಪೊಲಿಟಿಕಲ್‌ ಥ್ರಿಲ್ಲರ್‌ ಆಗಿರುವಂತೆಯೇ ಸೋಶಿಯಲ್‌ ಥ್ರಿಲ್ಲರ್‌ ಕೂಡ ಹೌದು. ಈ ವ್ಯವಸ್ಥೆಯ ನಡುವೆ ಸಿಕ್ಕಿಬಿದ್ದಿರುವ ಸಜ್ಜನನ ದುಗುಡದ ಕತೆಯಿದು. ಈ ದುಗುಡವನ್ನು ನಾವು ಕಲ್ಪಿಸಿಕೊಳ್ಳಬಹುದು. ಯಾಕೆಂದರೆ ಒಂದಲ್ಲ ಒಂದು ಹಂತದಲ್ಲಿ ನಾವೆಲ್ಲರೂ ಅಂಥ ಸಜ್ಜನ, ಸಭ್ಯರೇ ಆಗಿದ್ದೆವು. ಜಾತಿ, ದುಡ್ಡು, ಆಮಿಷ, ವೈಷಮ್ಯ ಇತ್ಯಾದಿ ಸುಳಿಗಳಲ್ಲಿ ಸಿಲುಕಿಕೊಂಡೆವು. ಈ ಸುಳಿಗಳನ್ನು ಅರ್ಥಮಾಡಿಕೊಂಡರೆ ಬಿಡುಗಡೆ ಸುಲಭ. ಆದರೆ ಅಷ್ಟು ಸುಲಭವಾಗಿ ವ್ಯವಸ್ಥೆ ನಮ್ಮ ಆವರಣ ಕಳಚಿಕೊಳ್ಳಲು ಬಿಡುವುದಿಲ್ಲ. ಸ್ವಪ್ನವಾಸ್ತವದಂಥ ಸ್ಥಿತಿಯೊಂದನ್ನು ಹೊಕ್ಕು ದಾಟಿ ಬಂದ ಮೇಲೂ ಮನುಷ್ಯ ಅಪ್ಪಟ ಮನುಷ್ಯನೇ ಆಗಿರುತ್ತಾನೆ. ಬದಲಾವಣೆಯ ಆಸೆ ನಿಷ್ಠುರ ವಾಸ್ತವದ ಅರಿವು ಅವನನ್ನು ಮುನ್ನಡೆಸುತ್ತವೆ ಎಂಬುದನ್ನು ಕಾದಂಬರಿ ಸಾರುತ್ತದೆ.

‍ಲೇಖಕರು avadhi

February 28, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: