ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೌಮ್ಯ ದಯಾನಂದ ಕವಿತೆ- ಸೀದು ಹೋದ ಬಯಕೆಗಳು!..

ಸೌಮ್ಯ ದಯಾನಂದ

ಸೀದು ಹೋದ
ಸುಟ್ಟ ವಾಸನೆ..!
ಅದೆಲ್ಲಿಂದ ಬರುತ್ತಿದೆ?
ಜಾಡು ಬಿಟ್ಟುಕೊಡದಂತೆ!
ಕ್ಷಣ ಕ್ಷಣಕ್ಕೂ
ವಿಕಾರವಾಗುತ್ತಾ,
ದಾರಿ ತಪ್ಪಿಸುತ್ತಾ,
ನೆಮ್ಮದಿ ಕಸಿಯುತ್ತಾ…

ಬಹುಶಃ
ಪಕ್ಕದ ಮನೆಯವರು
ತಮ್ಮ ಮಗನ
ಮುರಿದ ಮದುವೆಯ
ಕೊರಗಿನಲ್ಲಿ
ಕಾದ ಹೆಂಚಿನ ಮೇಲೆ
ನೆನಪಿನ ರೊಟ್ಟಿ ಹಾಕಿ
ಮರೆತು
ಮುದುಡಿ ಕುಳಿತಿದ್ದಾರೇನೋ!

ಇಲ್ಲ..ಇಲ್ಲ..
ಕುದಿಯಲು ಇಟ್ಟ
ತರಹೇವಾರಿ ಸಂಬಂಧಗಳ
ಸಾರಿನ ಪಾತ್ರೆಯನ್ನು
ಮರೆತು
ಸೀರಿಯಲ್ಲಿನಲ್ಲಿ
ಅವಳ ಸೀರೆಗೆ
ಮರುಳಾಗಿರಬಹುದು ಇವಳು..!

ಇಲ್ಲ..ಇಲ್ಲ..
ನೀರೊಲೆಯ ಬೂದಿಯಲಿ
ಹದವಾದ ಬಿಸಿನೀರ
ತಯಾರಿಯಲಿ,
ಚಿಪ್ಪಿನೊಳಗೆ ಸೇರಿಕೊಂಡ
ಕೆಟ್ಟ ಕೊಬ್ಬರಿಯ ಕಮಟು
ಕೈಕೊಟ್ಟ ಪ್ರೇಮಿಯ
ನೆನಪಿಸುತ್ತಿರಬಹುದು..!

ಇಲ್ಲ..ಇಲ್ಲ..
ರಸ್ತೆಯಲ್ಲಿ ಓಡಾಡುವ
ಜನರ ಯೋಚನೆಗಳಿಗೆ
ಹಣ್ಣಾಗಿ
ತಲೆತಿರುಗಿ ಬಿದ್ದ
ಎಲೆಗಳಿಂದ ಹೊರಟ
ಸುಟ್ಟ ಭಾವನೆಗಳ ಹೊಗೆ..!

ಇಲ್ಲ..ಇಲ್ಲ..
ಹುಳುಕು ಯೋಚನೆ ತುಂಬಿ
ಹಳ್ಳ ಗುಂಡಿಗಳಾದ
ರಸ್ತೆಯನ್ನು
ಸಪಾಟು ಮಾಡಲೆಂದು
ಅವನು
ಭರವಸೆಯ ಡಾಂಬರು
ಕಾಯಿಸುತ್ತಿರಬಹುದು..!

ಇಲ್ಲ..ಇಲ್ಲ..
ಸೊಂಪಾಗಿ ಬೆಳೆದ
ಸ್ನೇಹ, ಪ್ರೀತಿ, ವಿಶ್ವಾಸದ
ಪೊದೆಗೆ
ಅನುಮಾನದ ಬೆಂಕಿ
ಹೊತ್ತಿಕೊಂಡು
ಹೊಗೆಯಾಡುತ್ತಿರಬಹುದು..!

ಇಲ್ಲ..ಇಲ್ಲ..
ಸುಡಲೇಬೇಕೆಂದು
ಒಟ್ಟಿಕೊಂಡು ಕೂತ
ಹಳೆಯ
ಕಾಗದಗಳೋ, ಪತ್ರಗಳೋ,
ಮನಸುಗಳೋ
ಸುಡುವ ಮುನ್ನವೇ
ಕಿಡಿತಾಕಿ ಉರಿಯುತ್ತಿರಬಹುದು!

ಇಲ್ಲ..ಇಲ್ಲ..
ಮುಷ್ಕರ ಹೂಡಿದ್ದಾರಂತೆ
ಯಾರೋ!
ಕೈಗೆಟುಕದ ಕನಸಿಗೆ,
ಸಿಗದ ಪ್ರೀತಿಗೆ,
ಆರದ ಹಸಿವಿಗೆ
ಕಿಚ್ಚು ಹಚ್ಚಿದ್ದಾರಂತೆ!
ಹೊಟ್ಟೆಯ ಉರಿಯೇ
ಕರಿಯ ದಟ್ಟ ಹೊಗೆಯಾಗಿರಬೇಕು!

ಇಲ್ಲ..ಇಲ್ಲ..
ಎಲ್ಲೆಂದು ಹುಡುಕುವುದು
ಯಾರನ್ನು ದೂರುವುದು
ಇರುವ
ಬದುಕ ಧಿಕ್ಕರಿಸಿ
ಸಿಗದ
ಸುಖಕ್ಕೆ ಹಂಬಲಿಸಿ
ಸುಟ್ಟುಹೋದ ಹೃದಯದ
ಸೀದು ಹೋದ ಬಯಕೆಗಳು
ತನ್ನೊಳಗೇ ಇರುವಾಗ..!

‍ಲೇಖಕರು avadhi

26 March, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading